ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 8

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ಮೂರನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ನಾಲ್ಕನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಐದನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಆರನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಏಳನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

8

ಹರಿಪ್ರಸಾದ್ ಚೌರಾಸಿಯಾ ಕೊಳಲು ಜೊತೆಯಾಯಿತು..

ಬೆಂಗಳೂರಿನಲ್ಲಿ ಎಲ್ಲಿಗಾದರೂ ಅರ್ಧಗಂಟೆ ಹೋಗಿ ಬಂದರೂ ಸಾಕು, ಇಡೀ ದಿನವೆಲ್ಲ ದುಡಿದು ಬಂದಷ್ಟು ಆಯಾಸವಾಗಿರುತ್ತದೆ. ಬೇರೆ ಯಾವ ಕೆಲಸ ಮಾಡಲೂ ಉತ್ಸಾಹವಿರುವುದಿಲ್ಲ. ಅದೇ ಬೆಂಗಳೂರಿನ ಸರಹದ್ದನ್ನು ಬಿಟ್ಟು ಸ್ವಲ್ಪ ದೂರ ಹೋದರೂ ಸಾಕು ಮೈಮನಸ್ಸುಗಳ ಜಡತ್ವವೆಲ್ಲ ಕಳೆದು ಹಗುರವಾದ ಭಾವ. ನಮ್ಮ ಹಳ್ಳಿಗೆ ಹೋದಾಗಲಂತೂ ಅದೆಷ್ಟು ನಿರಾಳಭಾವ.

ಯಾವುದೇ ಸದ್ದು ಗದ್ದಲವಿಲ್ಲದ, ಯಾವ ಯಾವುದೋ ಅಪರೂಪದ ಹಕ್ಕಿಗಳ ಕೂಗು, ಕಲರವ, ಆಗಾಗ್ಗೆ ತಣ್ಣಗೆ ಸುಳಿದು ಬೀಸುವ ಗಾಳಿ, ಆಕಾಶದಲ್ಲಿ ತಂಪಾಗಿ, ನಿಧಾನವಾಗಿ ಚಲಿಸುವ ಮೋಡಗಳು ಅಲ್ಲಿಗೇ ವಿಶಿಷ್ಟವಾದ ಮೌನ… ಹಳ್ಳಿಯಲ್ಲಿ ಒಂದೆರಡು ದಿನವಿದ್ದರೆ ಸಾಕು ಇಡೀ ತಿಂಗಳಿಗಾಗುವಷ್ಟು ರೀಚಾರ್ಜ್ ಮಾಡಿಕೊಂಡು ಬಂದಂತೆ. ಇಲ್ಲಿ ಯಾವುದನ್ನೂ ಇಷ್ಟಿಷ್ಟೆ ಸಮಯಕ್ಕೇ ಮಾಡಬೇಕೆಂಬ ಒತ್ತಡವಿಲ್ಲ. ಹೊಂ ಸ್ಟೇಗಳಿಗೂ ನಮ್ಮ ಹಳ್ಳಿಯ ನಮ್ಮದೇ ಮನೆಯಲ್ಲಿ ಇರುವುದಕ್ಕೂ ಇರುವ ಮುಖ್ಯ ವ್ಯತ್ಯಾಸ ಇದು.

ನಾವು ಹಿಮಾಚಲ ಪ್ರದೇಶಕ್ಕೆ ಪ್ರವಾಸ ಹೋದಾಗ ಕೊನೆಯ ದಿನದ ನಿಲ್ದಾಣ ಅಮೃತಸರ. ಡಾಲ್‌ಹೌಸಿಯಿಂದ ಬೆಳಿಗ್ಗೆ ಪ್ರಯಾಣಿಸಿ ನಾಲ್ಕು ಗಂಟೆಗೆ ಸರಿಯಾಗಿ ವಾಘ ಬಾರ್ಡರ್ ತಲುಪಬೇಕು. ಅಲ್ಲಿನ ಕಾರ್ಯಕ್ರಮ ಮುಗಿದ ನಂತರ ಸ್ವರ್ಣಮಂದಿರ ನೋಡುವುದು. ನಮಗೆ ಗೊತ್ತುಪಡಿಸಿದ್ದ ಹೋಟೆಲ್ ನಾವು ಈ ಮೊದಲು ತಂಗಿದ್ದ ಎಲ್ಲ ಹೋಟೆಲ್ ಗಳಿಗಿಂತ ಬಹಳ ಅದ್ದೂರಿಯಾಗಿತ್ತು. ಆದರೆ ನಾವು ಈ ಎಲ್ಲ ಕಾರ್ಯಕ್ರಮಗಳನ್ನು ಮುಗಿಸಿ ರಾತ್ರಿ ಮಲಗುವಷ್ಟು ಮಾತ್ರವೇ ಅಲ್ಲಿ ನಮಗಿದ್ದ ಅವಕಾಶ. ಎಲ್ಲಕ್ಕಿಂತ ಮುಖ್ಯವಾಗಿ ರಾತ್ರಿ ಹತ್ತು ಗಂಟೆಯೊಳಗಾಗಿ ಭೋಜನದ ವ್ಯವಸ್ಥೆ ಮುಗಿಯಬೇಕು. ಅಲ್ಲಿದ್ದಂತಹ ಭೋಜನವೂ ಅಷ್ಟೇ ಅಮೋಘ. ಅದನ್ನು ತಪ್ಪಿಸಿಕೊಳ್ಳುವ ಮನಸ್ಸಿಲ್ಲ.

ಆದರೆ ಆ ಸ್ವರ್ಣಮಂದಿರದ ಜನಸಂದಣಿ, ಟ್ರಾಫಿಕ್ ದಟ್ಟಣೆ, ಅಲ್ಲಿಂದ ಮತ್ತೆ ಹೋಟೆಲ್‌ಗೆ ವಾಪಸು ಬರಲೇಬೇಕಾದ ಸಮಯದ ಗಡುವು, ಈ ಒತ್ತಡಗಳು ಎಲ್ಲ ಸಂತೋಷವನ್ನು ನುಂಗಿಹಾಕಿದ್ದವು. ಈ ರೀತಿಯ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸುವವರ ವ್ಯವಹಾರ ಬುದ್ಧಿಯನ್ನು ತಿಳಿದ ನಂತರ ಇಂತಹ ಯಾವುದೇ ಪ್ರಾಯೋಜಿತ ಪ್ರವಾಸಗಳಿಗೂ ಹೋಗಕೂಡದು. ನಮ್ಮನ್ನು ಕುರಿಗಳನ್ನಾಗಿ ಮಾಡುವುದಷ್ಟೇ ಅವರ ಉದ್ದೇಶ ಎಂದು ಮನವರಿಕೆಯಾಗಿತ್ತು. ನಗರಗಳದು ಇನ್ನೊಂದು ಕಥೆ. ನೀವು ನಿಮ್ಮದೇ ಮನೆಯೊಳಗಿದ್ದರೂ ಎಲ್ಲರ ಮನೆಯ ಗದ್ದಲಗಳಿಗೂ ಕಿವಿಗೊಡಬೇಕು.

ಒಂದಕ್ಕೊಂದು ಅಂಟಿಕೊಂಡಂತಹ ಮನೆಗಳು. ಸುಮಾರು ೩೦ ವರ್ಷಗಳ ಹಿಂದೆ ನಾವು ಮನೆ ಕಟ್ಟಿದಾಗ ಸುತ್ತ ಯಾವ ಮನೆಗಳೂ ಇರಲಿಲ್ಲ. ಸೂರ್ಯೋದಯ, ಸೂರ್ಯಾಸ್ತ, ಹುಣ್ಣಿಮೆಯ ಚಂದ್ರ, ಎಲ್ಲದರ ಸೌಂದರ್ಯವನ್ನು ಮನಸಾರೆ ಆನಂದಿಸುತ್ತಿದ್ದೆವು. ಕ್ರಮೇಣ ಇಟ್ಟಿಗೆ ಗೂಡುಗಳಂತೆ ಮನೆಗಳೆದ್ದವು. ೨೦-೩೦ರ ನಿವೇಶನದಲ್ಲಿ ೫ ಮಹಡಿಗಳು. ಬಾಡಿಗೆಗಾಗಿಯೇ ಕಟ್ಟಿದವು.

ವಿವಿಧ ರೀತಿಯ ಸದ್ದುಗಳಿಗೆ, ವಾಸನೆಗಳಿಗೆ ನಮ್ಮ ಮನೆಯೊಳಗೆ ಧಾರಾಳ ಪ್ರವೇಶ. ಮಿಕ್ಸಿ, ಗ್ರೈಂಡರ್ ಸದ್ದು, ಕುಕ್ಕರ್ ಸೀಟಿ ಹಾಕಿದ್ದರಿಂದ ಹಿಡಿದು ಕಮೋಡ್‌ಗೆ ಫ್ಲಷ್ ಮಾಡುವವರೆಗಿನ ವಿವಿಧ ಸದ್ದುಗಳು. ಒಮ್ಮೊಮ್ಮೆ ಸೀಟಿ ಹಾಕಿದ್ದು ನಮ್ಮ ಮನೆಯ ಕುಕ್ಕರೋ ಇನ್ನೊಬ್ಬರ ಮನೆಯದೋ ಎಂದು ಗೊಂದಲವಾಗಿ ಅಡಿಗೆ ಮನೆಗೆ ಹೋಗಿ ನೋಡಿಕೊಂಡು ಬರಬೇಕಾಗುತ್ತದೆ. ಮಕ್ಕಳ ಅಳು, ದೊಡ್ಡವರ ಬೈಗುಳ, ಅದಕ್ಕಿಂತ ಹೆಚ್ಚಾಗಿ ಗಂಡ ಹೆಂಡಿರ ಜಗಳ, ಪಾತ್ರೆಗಳನ್ನು ಕುಕ್ಕಿದ್ದು, ತಟ್ಟೆ ಲೋಟಗಳನ್ನು ಎಸೆದಾಡಿದ್ದು… ತಮಾಷೆ ಎಂದರೆ ಹೆಂಡತಿಯಾದವಳು ಅಷ್ಟೆಲ್ಲಾ ಕೂಗಾಡುತ್ತಾ ಪಾತ್ರೆಗಳನ್ನು ಕುಕ್ಕುತ್ತಿದ್ದಾಗ ಗಂಡನ ಸ್ವರವೇ ಕೇಳಿಸುವುದಿಲ್ಲ. ಹೆಂಡತಿಯ ಅಷ್ಟೆಲ್ಲಾ ಸಿಟ್ಟಿಗೆ ಕಾರಣವಾದಂಥ ಕೃತ್ಯಮಾಡಿದ ಗಂಡ ಮೌನಿಯಾಗಿದ್ದರೆ, ಸಿಟ್ಟಿನಿಂದ ಕೂಗಾಡುತ್ತಾ ಬಾಯಿ ಮಾಡುತ್ತಿರುವ ಹೆಂಡತಿಯರು ಜಗಳಗಂಟಿಯರೆನಿಸಿಕೊಳ್ಳುತ್ತಾರೆ.

ಮೊದಲೆಲ್ಲಾ ಗಾಳಿ ಬೆಳಕು ಬಿಸಿಲುಗಳಿಗೆ ನಮ್ಮ ಮನೆಯಲ್ಲಿ ಎಷ್ಟು ಧಾರಾಳ ಪ್ರವೇಶವಿತ್ತೆಂದರೆ, ನೇರವಾಗಿ ಬಿಸಿಲು ಬಿದ್ದು ಫ್ಲಾಷ್ ಆಗುತ್ತಿದೆ ಎಂಬ ಕಾರಣಕ್ಕಾಗಿ ಟಿ.ವಿ.ಯ ಸ್ಥಳವನ್ನು ಬದಲಿಸಬೇಕಾಯಿತು. ಸಂಜೆಯ ತೀಕ್ಷ್ಣ ಬಿಸಿಲಿಗೆ ಮುಂದಿನ ತೇಗದ ಬಾಗಿಲು ಬಿರುಕು ಬಿಟ್ಟಿತ್ತು. ಈಗ ಸುತ್ತ-ಮುತ್ತ ಮನೆಗಳು ಯಾವ ಮಟ್ಟಿಗೆ ಬೆಳೆದಿದ್ದವೆಂದರೆ ನಮ್ಮ ಮೊಮ್ಮಗು ಹುಟ್ಟಿದಾಗ ಅದಕ್ಕೆ ಸ್ವಲ್ಪ ಎಳೆ ಬಿಸಿಲು ತೋರಿಸೋಣವೆಂದರೆ ಅದು ಸಾಧ್ಯವೇ ಆಗದೆ, ಮನೆಯಿಂದ ಹೊರಗೆ ಎತ್ತಿಕೊಂಡು ಹೋಗಿ ರಸ್ತೆಯಲ್ಲಿ ಎಲ್ಲಿ ಬಿಸಿಲು ಬೀಳುತ್ತದೋ ಅಲ್ಲಿ ಸ್ವಲ್ಪ ಹೊತ್ತು ಎತ್ತಿಕೊಂಡಿದ್ದು ಬರುವಂತಾಗಿತ್ತು.

ಈ ರೀತಿಯ ಸಾಕಷ್ಟು ಒಳ್ಳೆಯ ಗಾಳಿ ಬಿಸಿಲು ಬೆಳಕುಗಳ ಪ್ರವೇಶಕ್ಕೆ ಅವಕಾಶವಿಲ್ಲದ ನಮ್ಮ ನಗರ ಜೀವನ ತಂದೊಡ್ಡುವ ಖಾಯಿಲೆಗಳ ವಿಧವೇ ಭಿನ್ನ. ಬಹುತೇಕ ಮಂದಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ತಲೆಗೂದಲು ಗುಪ್ಪೆ ಗುಪ್ಪೆಯಾಗಿ ಉದುರುತ್ತದೆ… ಕರೋನಾ ವಿಷಯದಲ್ಲಿ ವಿಟಮಿನ್ ಡಿ ಬಹಳ ಮುಖ್ಯ. ಆಗಾಗ್ಗೆ ಬಿಸಿಲಿಗೆ ಮೈ ಒಡ್ಡಬೇಕು. ಒಳ್ಳೆಯ ನಿರ್ಮಲವಾದ ಗಾಳಿಯನ್ನು ಸೇವಿಸಬೇಕು. ಇದರಿಂದ ಬೇಗ ಚೇತರಿಸಿಕೊಳ್ಳಬಹುದು ಎಂದು. ಆದರೆ ಇದು ಎಷ್ಟು ಮಂದಿಗೆ ಸಾಧ್ಯ?

ನನಗೆ ಆ ತೊಂದರೆ ಇರಲಿಲ್ಲ. ಬೇರೆಯವರು ಹೇಗಾದರೂ ಒತ್ತರಿಸಿ ಕಟ್ಟಲಿ. ನಾವು ಮಾತ್ರ ಹಿಂದೆ ಮುಂದೆ ಅಕ್ಕ ಪಕ್ಕ ಸಾಕಷ್ಟು ಜಾಗ ಬಿಟ್ಟು ಮನೆ ಕಟ್ಟಿದ್ದೆವು. ಕೋವಿಡ್ ನಿಂದ ಗುಣಮುಖಳಾಗಿ ಹಿಂದಿರುಗಿದ ನಂತರ ನಮ್ಮ ಮನೆಯ ತಾರಸಿಯ ತೋಟದ ತಂಪಾದ ವಾತಾವರಣದಲ್ಲಿ ನನ್ನ ಕ್ವಾರಂಟೈನ್ ಕ್ಷೇಮವಾಗಿ ಕಳೆಯಿತು. ಆಗೆಲ್ಲ ನನಗೆ ನಮ್ಮ ಮಠಾಧೀಶರುಗಳು ಈ ಸಂದರ್ಭದಲ್ಲಿ ಯಾಕೆ ಇಷ್ಟು ನಿಷ್ಕ್ರಿಯರಾಗಿದ್ದಾರೆ ಎಂದು ನೆನೆದು ಬೇಸರವಾಗುತ್ತಿತ್ತು.

ನಮ್ಮ ಎಲ್ಲ ಮಠ ಸಾಮ್ರಾಜ್ಯಗಳು ಬೆಳೆದಿರುವುದು ತೀರಾ ಜನಸಾಮಾನ್ಯರು ಭಯಭಕ್ತಿಯಿಂದ ಸಲ್ಲಿಸುವ ಕಾಣಿಕೆಗಳಿಂದಲೇ. ಎಷ್ಟೋ ಮಠಗಳು ಸುತ್ತಮುತ್ತಲಿನ ಬಡಜನರ ಬಡರೈತರ ಜಮೀನು ನಿವೇಶನಗಳನ್ನು ಕಬಳಿಸಿ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದಾರೆ. ಎಷ್ಟೊಂದು ವಿಶಾಲವಾದ ಆವರಣಗಳು ಅಲ್ಲವೆ? ಸರ್ಕಾರ ತನ್ನದೇ ಆದ ರೀತಿಯಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡುತ್ತಿರುವಾಗ ಒಬ್ಬ ಮಠಾಧೀಶರಾದರೂ ಮಂದೆ ಬಂದು ತಮ್ಮ ತಮ್ಮ ಮಠದ ಜಾಗದಲ್ಲಿ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳುವ ಕಾಳಜಿಯನ್ನಾಗಲಿ, ಸಮಯ ಪ್ರಜ್ಞೆಯನ್ನಾಗಲೀ ತೋರಿಸಲಿಲ್ಲ. ಅದೇ ಚುನಾವಣೆಯ ಸಂದರ್ಭ ಬಂದರೆ ಅದೆಷ್ಟೊಂದು ಮುತುವರ್ಜಿ ವಹಿಸುತ್ತಾರೆ. ಎಲ್ಲಿಯವರೆಗೆ ಜನರು ಅಂಧಶ್ರದ್ಧೆಯಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೆ ಈ ವ್ಯವಸ್ಥೆ ಇದೇ ರೀತಿ ಅಭಾದಿತವಾಗಿ ಮುಂದುವರೆಯುತ್ತದೆ.

ಬೆಳಗಿನ ಜಾವ ಸುಮಾರು ಮೂರೂವರೆ ಹೊತ್ತಿಗೆ ಇಬ್ಬರು ಸಿಸ್ಟರುಗಳು ಒಂದು ದೊಡ್ಡ ಟ್ರೇ ಹಿಡಿದು ಪ್ರತ್ಯಕ್ಷವಾಗುತ್ತಿದ್ದರು. ಅಲ್ಲಿಂದಲೇ ನನ್ನ ಮಾರನೇ ದಿನ ಪ್ರಾರಂಭವಾಯಿತೆಂದು ಅರ್ಥ. ಮುಂದೋಳಿನ ಅಡಿಯಿಂದ ಸುಮಾರು ಐದು ಮಿಲೀನಷ್ಟು ರಕ್ತ ತೆಗೆದು ಸಿರಿಂಜಿನಲ್ಲಿ ತುಂಬಿದ ರಕ್ತವನ್ನು ಅಂತಹದ್ದೇ ಎರಡು ಮೂರು ಚಿಕ್ಕ ಚಿಕ್ಕ ಟೆಸ್ಟ್ ಟ್ಯೂಬ್‌ನಂಥ ನಳಿಕೆಗಳಲ್ಲಿ ಹಾಕಿ ಅಲುಗಾಡಿಸಿ, ಅವುಗಳ ಮುಚ್ಚಳ ಮುಚ್ಚಿ ಒಂದು ಪ್ಲಾಸ್ಟಿಕ್ ಕಪ್‌ಗೆ ಹಾಕಿಕೊಂಡು ಮುಂದಿನ ಪೇಶಂಟ್ ಬಳಿ ಹೋಗುತ್ತಿದ್ದರು.

ಹೀಗೆ ತೆಗೆದ ರಕ್ತವು ವಿವಿಧ ಪರೀಕ್ಷೆಗಳಿಗೆ ಒಳಪಟ್ಟು ಅದರ ರಿಪೋರ್ಟ್ ವೈದ್ಯರ ತಂಡಕ್ಕೆ ಹೋಗುತ್ತಿತ್ತು. ಅದನ್ನು ಆಧರಿಸಿ ರೋಗಿಗೆ ಕೊಡಬೇಕಾದ ಮಾತ್ರೆ, ಡ್ರಿಪ್ಸ್, ಆಕ್ಸಿಜನ್ ಅವುಗಳ ಪ್ರಮಾಣ ಇತ್ಯಾದಿಗಳ ಬಗ್ಗೆ ವೈದ್ಯರು ನಿರ್ಧಾರ ಮಾಡುತ್ತಿದ್ದರು. ಇಷ್ಟಾದರೆ ಮುಂದಿನ ಕೆಲಸವೆಲ್ಲಾ ಸಿಸ್ಟರ್‌ಗಳದೇ. ಹೊತ್ತು ಹೊತ್ತಿಗೆ ಸರಿಯಾಗಿ ಡ್ರಿಪ್ಸ್, ಆಕ್ಸಿಜನ್ ಮಟ್ಟ, ಮಾತ್ರೆಗಳ ನೀಡಿಕೆ ಇದನ್ನು ಅವರು ಮಾಡುತ್ತಿದ್ದರು. ಈ ದೃಷ್ಟಿಯಿಂದ ಕೋವಿಡ್ ಪೇಶಂಟ್‌ಗಳನ್ನು ವೈದ್ಯರು ನೇರವಾಗಿ ಬಂದು ನೋಡುವ ಅಗತ್ಯವೇ ಇಲ್ಲ. ಆದರೂ ಸುಮಾರು ಬೆಳಿಗ್ಗೆ ೧೧.೩೦ರ ಹೊತ್ತಿಗೆ ಒಂದು ಸುತ್ತು ಬಂದು ಹೇಗಿದ್ದೀರಿ ಎಂದು ವಿಚಾರಿಸಿಕೊಂಡು ಹೋಗುತ್ತಿದ್ದರು.

ಬೆಳಗಿನ ಜಾವ ನಾಲ್ಕು ನಾಲ್ಕುವರೆಗೇ ಡ್ರಿಪ್ಸ್ ಹಾಕಿದರೆ ಅದು ಮುಗಿಯುವವರೆಗೆ ನಾನು ಪುನಃ ನಿದ್ರಿಸುವ ಮಾತೇ ಇಲ್ಲ. ಆಗ ನಾನು ಕೇಳುತ್ತಿದ್ದ ಸಂಗೀತ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲಗಾನ. ಅತ್ಯಂತ ಮೆಲುದನಿಯ, ನಿಧಾನ ಗತಿಯ ಆ ಕೊಳಲು ವಾದನಕ್ಕೂ, ನಿಧಾನವಾಗಿ ಒಂದೊಂದೇ ಹನಿಯಾಗಿ ಬಾಟಲಿಯಿಂದ ಟ್ಯೂಬಿಗೆ ಟ್ಯೂಬಿನಿಂದ ಕ್ಯಾನುಲಾದಲ್ಲಿದ್ದ ಸೂಜಿಯ ಮೂಲಕ ನನ್ನ ರಕ್ತ ನಾಳಕ್ಕೆ ಪ್ರವೇಶಿಸುತ್ತಿದ್ದ ಡ್ರಿಪ್‌ನ ಹರಿವಿಗೂ ಒಂದು ಅಪೂರ್ವವಾದ ಹೊಂದಾಣಿಕೆ.

ಯಾವುದೇ ಸದ್ದುಗದ್ದಲಗಳಿಲ್ಲದ ಬೆಚ್ಚಗಿನ ಮೌನದಲ್ಲಿ ನಾನು, ನನ್ನ ಡ್ರಿಪ್ ಹಾಗೂ ಕೊಳಲಗಾನ… ಇದರಲ್ಲಿ ಮುಳುಗಿ ಆ ಡ್ರಿಪ್ ಮುಗಿಯುವ ಹೊತ್ತಿಗೆ ಸುಮಾರು ಒಂದೂ ಒಂದೂವರೆ ಗಂಟೆ ಹಿಡಿಯುತ್ತಿತ್ತು. ಆನಂತರ ಮಲಗಿದ್ದಲ್ಲಿಂದಲೇ ಸಿಸ್ಟರ್ ಅನ್ನು ಕೂಗಿ, ಅವರು ಬಂದು ಡ್ರಿಪ್ ಸಂಪರ್ಕವನ್ನು ತಪ್ಪಿಸಿದ ನಂತರ ಎದ್ದು ಬಾತ್‌ರೂಮಿಗೆ ಹೋಗಿ ನಿತ್ಯಕರ್ಮಗಳನ್ನು ಮುಗಿಸಿ ಬಂದು ಬಟ್ಟೆ ಬದಲಾಯಿಸಿ ತಲೆಬಾಚಿಕೊಂಡು ಹಣೆಗೆ ಸ್ಟಿಕರ್ ಇಟ್ಟುಕೊಂಡು, ಆಕ್ಸಿಜನ್ ಮಾಸ್ಕ್ ಧರಿಸಿ ಪವಡಿಸುವ ಹೊತ್ತಿಗೆ ಬೆಳಗಿನ ಶಿಪ್ಟ್ ನ ಹೌಸ್ ಕೀಪಿಂಗ್ ನವರ ಓಡಾಟ ಗದ್ದಲಗಳು ಪ್ರಾರಂಭವಾಗಿ ನೀರವ ವಾತಾವರಣಕ್ಕೆ ಜೀವಂತಿಕೆ ತುಂಬುತ್ತಿದ್ದವು.

| ಇನ್ನು ನಾಳೆಗೆ |

‍ಲೇಖಕರು Avadhi

June 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: