ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 4

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ಮೂರನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

4

ಪಕ್ಕದ ಬೆಡ್‌ನವರು

ನನಗೆ ಪಾಸಿಟಿವ್ ಬಂದಿದ್ದು ನಮ್ಮ ಮನೆಯವರಿಗೆ ಹೊರತುಪಡಿಸಿ ಯಾರಿಗೂ ತಿಳಿದಿರಲಿಲ್ಲ. ಪಾಸಿಟಿವ್ ಬಂದ ಮಧ್ಯಾಹ್ನವೇ ಹೊರಗೆ ಯಾವುದೋ ಒಂದು ಸ್ಕೂಟರ್ ನಂತಹ ವಾಹನ ನಿಂತ ಶಬ್ದ ಕೇಳಿಸಿತು. ಅಲ್ಲಿಂದ ಯಾರೋ ಇಳಿದು ಸ್ವಲ್ಪ ಅತ್ತಿತ್ತ ನೋಡಿ ಸಂಧ್ಯಾರೆಡ್ಡಿಯವರ ಮನೆ ಯಾವುದು ಎಂದು ನಾಲ್ಕು ಮನೆಗಳಿಗೂ ಕೇಳುವಂತೆ ಕೂಗು ಹಾಕಿದ. ಅಂತೂ ಬಿ.ಬಿ.ಎಂ.ಪಿಯ ಪ್ರವೇಶವಾಯಿತು ಎಂದು ಗೊತ್ತಾಯಿತು.

ಇನ್ನು ಆತ ಬಾಗಿಲು ತಟ್ಟಿ ಏನೇನು ಕೇಳುತ್ತಾನೋ ಏನೇನು ನಿರ್ಬಂಧ ಹಾಕುತ್ತಾನೋ ಅಂತ ನನ್ನ ಎದೆ ಢವಢವ ಅನ್ನತೊಡಗಿತು. ಕಿಟಕಿಯಿಂದ ನೋಡಿದೆ. ಆತ ಏನನ್ನೋ ಪುಸ್ತಕದಲ್ಲಿ ಗೀಚಿಕೊಂಡು ಸ್ವಲ್ಪಹೊತ್ತು ಅತ್ತಿತ್ತ ನೋಡುತ್ತಿದ್ದು ನಂತರ ಗಾಡಿ ಹತ್ತಿ ಹೊರಟೇಬಿಟ್ಟ. ಹಾಗೆಯೇ ಅವನು ಹೋಗಿದ್ದು ಸ್ವಲ್ಪ ಸಮಾಧಾನ ತಂದಿತಾದರೂ ಆತ ಬಹುಶಃ ಸ್ಥಳ ಪರೀಕ್ಷಣೆಗೆ ಬಂದಿರಬೇಕು.

ಇದನ್ನು ನಂತರದ ಇನ್ನೊಂದು ಹಂತದವರಿಗೆ ತಿಳಿಸಬಹುದು. ಅವರು ಬಂದು ಕಿತ್ತುಹೋದ ತಗಡು ಬಿದಿರು, ಮಾಸಿದ ಟೇಪು, ಬ್ಯಾನರ್ ಏನೇನನ್ನೋ ತಂದು ಗೇಟಿಗೆ ಅಡ್ಡಗಟ್ಟಬಹುದು ಎಂದು ನೆನೆದಾಗ ವಾಕರಿಕೆ ಬರುವಂತಾಯಿತು. ಅತ್ತಿತ್ತ ಅಡ್ಡರಸ್ತೆಗಳನ್ನು ಅವರು ಸೀಲ್‌ಡೌನ್ ಮಾಡಿದ ರೀತಿ ನೋಡಿದ್ದೆ. ಹೀಗೆ ಕಿತ್ತು ಹೋದ ಸಾಮಗ್ರಿಗಳನ್ನೆಲ್ಲ ತಂದು ಅಡ್ಡಗಟ್ಟಿ ಸಾವಿರಾರು ರೂಪಾಯಿಗಳ ಬಿಲ್ ಮಾಡುವ ಅವರ ದಂಧೆಯ ಬಗ್ಗೆ ಕೇಳುತ್ತಲೇ ಇದ್ದೆ. ನಾನು ಮೊದಲೆಲ್ಲ ವಾಕ್‌ ಹೋಗುವಾಗ ಆ ಚಿಕ್ಕ ಚಿಕ್ಕ ಮನೆಗಳವರೂ ಬೆಳಿಗ್ಗೆ ಎದ್ದು ಸಾರಿಸಿ ಅಂದವಾದ ರಂಗವಲ್ಲಿ ಇಟ್ಟು ಕಾಂಪೌಂಡ್ ಇಲ್ಲದಿದ್ದರೂ ಅಲ್ಲಿಯೇ ಏನೋ ಅಡ್ಡಗಟ್ಟಿ ಹೂವಿನ ಗಿಡಗಳನ್ನು ಬಳ್ಳಿಗಳನ್ನು ಬೆಳೆಸಿ ಅಂದವಾಗಿಟ್ಟುಕೊಂಡಿರುತ್ತಿದ್ದರು.

ಈಗ ಆ ಯಾವ ಬೀದಿಯೂ ಕಾಣದಂತೆ ಅಲ್ಲಿಗೆ ಯಾರೂ ಪ್ರವೇಶಿಸದಂತೆ ಬಿ.ಬಿ.ಎಂ.ಪಿ. ಯವರು ಮಾಡುತ್ತಿದ್ದ ಈ ದರಿದ್ರ ವ್ಯವಸ್ಥೆ ಅಕ್ಷರಶಃ ಸ್ಲಮ್‌ಗಳ ತೆರೆದ ಬಾಗಿಲಿನಂತೆ ಕಾಣುತ್ತಿತ್ತು. ಅದೇನು ಪುಣ್ಯವೋ ನನಗೆ ಕರೋನಾ ಬರುವ ಹೊತ್ತಿಗೆ ಬಿ.ಬಿ.ಎಂ.ಪಿ.ಯ ನಿಯಮಗಳಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು ಅನ್ನಿಸುತ್ತೆ. ಬರೀ ಸ್ಟಿಕರ್ ಅಂಟಿಸಿ ಹೋಗುತ್ತಾರೆ. ಅದಾದರೂ ನಮ್ಮ ಮನೆಯ ಮುಂದೆ ಹಾದು ಹೋಗುವ ಎಲ್ಲರಿಗೂ ಒಂದು ನಿಗೂಢವಾದ ಭೀತಿಯ ಸಂದೇಶ ಕೊಡುವುದಿಲ್ಲವೇ? ನನಗೆ ನನ್ನ ಖಾಯಿಲೆಗಿಂತ ಈ ರೀತಿಯ ವ್ಯವಸ್ಥೆಯೇ ಭಯ ಹುಟ್ಟಿಸತೊಡಗಿತ್ತು. ಆದರೆ ಅದೇನು ವಿಶೇಷವೋ ಗೊತ್ತಿಲ್ಲ. ನಮ್ಮ ಮನೆಗೆ ಯಾವುದೇ ಸ್ಟಿಕರ್ ಸಹ ಅಂಟಿಸಿರಲಿಲ್ಲ.

ನಾನು ಆಸ್ಪತ್ರೆ ಸೇರಿದ ಮರುದಿನವೇ ಒಂದು ಫೋನ್ ಬಂತು. ನಾನು ಬಿ.ಬಿ.ಎಂ.ಪಿ. ಯಿಂದ ಮಾತಾಡುತ್ತಿದ್ದೇನೆ. ನೀವು ಸಂಧ್ಯಾರೆಡ್ಡಿಯವರಾ, ಎಲ್ಲಿದೀರಾ ಅಂತ. ಬಹುಶಃ ನಾನು ಮನೆಯಲ್ಲೇ ಇದ್ದಿದ್ದರೆ ಇವರ ಯಾವ ಯಾವ ನಿಯಮಾವಳಿಗಳಿಗೆ ಸಿಕ್ಕಿ ಹಾಕಿಕೊಳ್ಳಬೇಕಿತ್ತೋ, ಸಧ್ಯ ನಾನು ಆಸ್ಪತ್ರೆ ಸೇರಿ ಸುರಕ್ಷಿತವಾಗಿದ್ದೆ. ಮತ್ತೆ ಮಾರನೇ ದಿನ ಅದೇ ರೀತಿಯ ಇನ್ನೊಂದು ಫೋನ್. ಸಂಧ್ಯಾರೆಡ್ಡಿಯವರಾ ಸ್ವಲ್ಪ ಹೊರಗೆ ಬರ‍್ತೀರಾ ಮೇಡಂ ಅಂತ. ಇಲ್ಲಪ್ಪ ನಾನು ಬರುವ ಹಾಗಿಲ್ಲ ಆಸ್ಪತ್ರೆಯಲ್ಲಿದ್ದೇನೆ ಅಂದಾಗ ಮನೆಯಲ್ಲಿ ಯಾರಿದ್ದಾರೆ, ಅವರನ್ನು ಸ್ವಲ್ಪ ಹೊರಗೆ ಬರಲು ಹೇಳಿ ಮೇಡಂ ಎಂದಾಗ, ಬಹುಶಃ ಅವರಿಗೆ ಹತ್ತಿರ ಬಂದು ಬಾಗಿಲು ತಟ್ಟಲೂ ಕರೋನಾ ಸೋಂಕಿನ ಹೆದರಿಕೆಯಿರಬಹುದು ಅನ್ನಿಸಿತು.

ನಾನು ಶಂಕರ್‌ಗೆ ಫೋನ್‌ಮಾಡಿ ತಿಳಿಸಿದೆ. ಸಾರ್ ಏನಿಲ್ಲ ಕ್ವಾರಂಟೈನ್‌ನಲ್ಲಿರಿ ಅಷ್ಟೇ ಎಂದು ಹೇಳಿಹೋದರಂತೆ. ಆದರೆ ಸಂಜೆ ಹನುಮಂತನಗರದ ಪೋಲಿಸ್ ಸ್ಟೇಷನ್‌ನಿಂದ ಫೋನ್ ಬಂದಾಗಲಂತೂ ನನ್ನ ಖಾಯಿಲೆ ಹೀಗೆ ಜಾಹೀರಾಗಲು ನನ್ನ ಆಧಾರ್ ಅನ್ನು ನರ್ಸಿಂಗ್ ಹೋಂನವರು ಕಡ್ಡಾಯ ಪಡಿಸಿದ್ದಕ್ಕೆ ಇದೇ ಕಾರಣ ಎಂದು ಖಚಿತವಾಯಿತು. ಹೀಗೆ ನಮ್ಮ ತೀರಾ ಖಾಸಗಿ ಎನ್ನಿಸುವ ಸಂಗತಿಗಳು ಬಹಿರಂಗ ಪಡುವುದಕ್ಕೆ ಆಧಾರ್ ಯಾವ ರೀತಿ ಎಡೆಮಾಡಿಕೊಡುತ್ತದೆ ಎಂದು ಕೇಳಿ ತಿಳಿದಿದ್ದೆ. ಈ ಬಗ್ಗೆ ಸಾಕಷ್ಟು ವಾದವಿವಾದ ಚರ್ಚೆಗಳು ನಡೆಯುತ್ತಿದ್ದವು.

ಈಗ ಮೊದಲ ಬಾರಿಗೆ ಅದು ನನ್ನ ಅನುಭವಕ್ಕೂ ಬಂದಿತು. ಆದರೆ ಅಷ್ಟಕ್ಕೇ ಮುಗಿಯಲಿಲ್ಲ. ಸಿಟಿ ಪೋಲೀಸ್ ಸ್ಟೇಶನ್‌ನಿಂದಲೂ ಫೋನ್. ಅದೇ ಪ್ರಶ್ನೆ. ಅಲ್ಲಿಗೆ ನನ್ನ ವಿಚಾರಣೆ ಮುಗಿದು ಸರ್ಕಾರಕ್ಕೆ ಬೇಕಾದ ಅಂಕಿಅಂಶಗಳಲ್ಲಿ ನನ್ನದೂ ಸೇರ್ಪಡೆಯಾಗಿತ್ತು. ಬಹುಶಃ ನಾನು ಗುಣಮುಖಳಾಗಿ ಬಂದ ನಂತರ ಆಸ್ಪತ್ರೆಯಿಂದಲೂ ಈ ವಿವರ ತರಿಸಿಕೊಂಡು ಗುಣಮುಖರ ಸಂಖ್ಯೆಯಲ್ಲಿ ನನ್ನದು ಸೇರಿಹೋಗಿರುತ್ತೆ. ನನ್ನ ಬಗ್ಗೆ ವಿಚಾರಣೆಯ ನಂತರ ಹನುಮಂತ ನಗರ ಪೋಲೀಸ್ ಸ್ಟೇಶನ್ ನಿನವರು ಮನೆಗೆ ಬಂದು ಶಂಕರ್ ಹತ್ತಿರ ಮಾತಾಡಿ ಆದಷ್ಟು ಕ್ವಾರಂಟೈನ್‌ನಲ್ಲಿಯೇ ಇರಿ ಸಾರ್, ಅದೇನು ಒಂದು ಸ್ಟಿಕರ್ ಕೂಡ ಹಾಕಿಲ್ಲ ಬಿ.ಬಿ.ಎಂ.ಪಿ. ಯವರು ಎಂದು ಅಚ್ಚರಿ ವ್ಯಕ್ತಪಡಿಸಿದರಂತೆ.

ಕರೋನಾ ಸೋಂಕಿತರಲ್ಲಿ ಆಕ್ಸಿಜನ್ ಅಥವಾ ಪ್ರಾಣವಾಯು ಎಷ್ಟಿದೆ ಎಂಬುದು ಅವರ ಸ್ಥಿತಿಯನ್ನು ತಿಳಿದುಕೊಳ್ಳುವ ಮುಖ್ಯಮಾನದಂಡ. ಸಾಮಾನ್ಯ ಆರೋಗ್ಯ ಸ್ಥಿತಿಯಲ್ಲಿ ಆಕ್ಸಿಜನ್ ಮಟ್ಟ ೯೫ ಅಥವಾ ಅದಕ್ಕಿಂತ ಮೇಲ್ಪಟ್ಟು ಇರಬೇಕು. ತುಂಬಾ ಆರೋಗ್ಯವಂತರಲ್ಲಿ ಅದು ೯೯ ರಿಂದ ೧೦೦ರ ವರೆಗೂ ಇರುತ್ತಾದರೂ ೯೬-೯೭ರ ಮಟ್ಟ ಬಹುತೇಕ ಜನರಲ್ಲಿ ಕಂಡು ಬರುತ್ತದೆ. ಈ ಪ್ರಮಾಣ ೯೫ಕ್ಕಿಂತ ಕಡಿಮೆಯಾದರೆ ಅದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಈಗ ಅದು ೯೪, ೯೩, ೯೨ ರಿಂದ ಇನ್ನೂ ಕೆಳಗೆ ಇಳಿದು ಬಿಡಬಹುದು.

ನಮ್ಮ ಶ್ವಾಸಕೋಶಗಳಲ್ಲಿ ಸೋಂಕಿನ ಪ್ರಮಾಣ ಎಷ್ಟೆಷ್ಟು ಹೆಚ್ಚಾಗಿರುತ್ತದೋ ಅಷ್ಟು ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ದೇಹದ ಇತರ ಅಂಗಾಂಗಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆಯಾಗದೆ ಅವು ಹಾನಿಗೊಳಗಾಗುತ್ತವೆ. ಆಮ್ಲಜನಕದ ಸಂಪೂರ್ಣ ಕೊರತೆಯಾದಾಗ ಹೃದಯ, ಮಿದುಳು, ಮೂತ್ರಪಿಂಡದಂತಹ ಅಂಗಗಳು ಸಂಪೂರ್ಣ ನಿಷ್ಕ್ರಿಯವಾಗಬಹುದು.

ರೋಗಿಯ ಸೋಂಕಿನ ಮಟ್ಟ ಹಾಗೂ ಅವರ ಇತರ ಆರೋಗ್ಯ ಸ್ಥಿತಿಗಳು ಅಂದರೆ ಈ ಮೊದಲೇ ಅವರು ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಮುಂತಾದ ತೊಂದರೆಗಳಿರುವವರೇ ಎಂಬುದನ್ನು ಅವಲಂಬಿಸಿ ಅವರಿಗೆ ನೀಡುವ ಚಿಕಿತ್ಸೆ ಹಾಗೂ ಅವರು ಚೇತರಿಸಿಕೊಳ್ಳುವ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಸೋಂಕಿತರೆಲ್ಲರಿಗೂ ಒಂದೇ ರೀತಿಯ ಚಿಕಿತ್ಸೆಯ ಅಗತ್ಯವಿಲ್ಲ. ಕೆಲವರಿಗೆ ಅವರ ಸೋಂಕನ್ನು ಆಧರಿಸಿ ಅದಕ್ಕೆ ತಕ್ಕಷ್ಟು ಆಕ್ಸಿಜನ್ ಪೂರೈಕೆ ಮಾಡಿದರೆ ಸಾಕು. ಆದರೆ ತೀವ್ರ ಪ್ರಮಾಣದ ಸೋಂಕು ಹಾಗೂ ಇತರ ತೊಂದರೆಯಿರುವವರಿಗೆ ವೆಂಟಿಲೇಟರ್ ಮೂಲಕ ಆಕ್ಸಿಜನ್ ಪೂರೈಸಬೇಕಾಗುತ್ತದೆ.

ನನಗೆ ಸುಸ್ತು, ಆಯಾಸ, ಮೇಲುಸಿರುಗಳು ಕಾಡುತ್ತಿದ್ದವು. ಕೊನೆಕೊನೆಗೆ ಒಣಕೆಮ್ಮು, ವಿಪರೀತ ಮೇಲುಸಿರು ಶುರುವಾದಾಗ ಕೋವಿಡ್ ಪಾಸಿಟಿವ್ ಎಂದು ಆಸ್ಪತ್ರೆ ಸೇರಿದಾಗಲೂ ನನಗೇನೂ ಆಕ್ಸಿಜನ್ ಚಿಕಿತ್ಸೆ ಕೊಡಲಿಲ್ಲ. ನಾನು ತುಂಬಾ ಅರಾಮಾಗಿ ಯಾವುದೇ ಇನ್ನಿತರೆ ತೊಂದರೆಗಳಿಲ್ಲದೆ ಇದ್ದೆ. ಮೊದಲ ಮೂರು ನಾಲ್ಕು ದಿನ ಮಾತ್ರೆಗಳನ್ನಷ್ಟೇ ಕೊಡುತ್ತಿದ್ದರು.

ರಕ್ತ ಪರೀಕ್ಷೆಗಾಗಿ ದಿನವೂ ರಕ್ತ ತೆಗೆದುಕೊಳ್ಳುತ್ತಿದ್ದರು. ಆದರೆ ನಾಲ್ಕನೇ ದಿನವೋ ಏನೋ ನಾನು ಬ್ರಷ್ ಮಾಡಲು ಹೋದಾಗ ವಿಪರೀತ ಒಣಕೆಮ್ಮು ಬರಲು ಆರಂಭವಾಯಿತು. ಅದು ಹೇಗಿತ್ತೆಂದರೆ ಯಾವುದೇ ಗಾಳಿಯಿಲ್ಲದ ನಿರ್ವಾತ ಕೋಣೆಯಲ್ಲಿ ೫ ನಿಮಿಷ ವಿದ್ದರೆ ಹೇಗಾಗಬಹುದೋ ಹಾಗೇ. ಒಂದೇ ಸಮನೆ ಒಂದೇ ಗತಿಯಲ್ಲಿ ಉಸಿರನ್ನು ಒಳಗೆ ತೆಗೆದುಕೊಳ್ಳಲು ಅವಕಾಶ ವಿಲ್ಲದಂತೆ, ಹೊರಹಾಕುವ ಉಸಿರೆಲ್ಲವೂ ಕೆಮ್ಮಿನ ರೂಪದಲ್ಲೆ ಬರುತ್ತಿರುವಂತೆ ಆಯಿತು. ಹಾಗೆ ಕೆಮ್ಮುತ್ತಲೇ ನಾನು ಬ್ರಷ್ ಮಾಡಿ, ಟಾಯ್ಲೆಟ್ ಕೆಲಸ ಮುಗಿಸಿ ಮುಖ ತೊಳೆದುಕೊಂಡು ಬಂದು ಮಂಚದ ಮೇಲೆ ಕುಳಿತುಕೊಂಡ ಮೇಲಷ್ಟೇ ಈ ಕೆಮ್ಮಿನಿಂದ ಬಿಡುಗಡೆ ಸಿಕ್ಕಿದ್ದು.

ಆ ದಿನ ಮಧ್ಯಾಹ್ನ ಡಾಕ್ಟರ್ ಬಂದಾಗ ನನ್ನ ತೊಂದರೆ ಹೇಳಿದೆ. ನಾಳೆ ಆಕ್ಸಿಜನ್ ಕೊಡೋಣ ಅಂದರು. ಆದರೆ ನಾಳೆಯವರೆಗೂ ನಾನು ಕಾಯುವಂತಿರಲಿಲ್ಲ. ಆಗಾಗ ಮೇಲುಸಿರು ಒಣ ಕೆಮ್ಮು ಬರುತ್ತಿತ್ತು. ಅವರು ನನ್ನ ಆಕ್ಸಿಜನ್ ಮಟ್ಟವನ್ನು ಅಳೆದು ಹೋದ ಸ್ವಲ್ಪ ಹೊತ್ತಿನ ನಂತರ ನರ್ಸಿಂಗ್ ಸೂಪರ್ ವೈಸರ್ ಸುದೀಪ್ ಬಂದು ಆಕ್ಸಿಜನ್ ಕೊಡಲು ನಿಮ್ಮನ್ನು ಬೇರೆ ವಾರ್ಡಿಗೆ ಶಿಫ್ಟ್ ಮಾಡಬೇಕು ಅಂದರು.

ನನಗೆ ಈಗಿದ್ದ ವಾರ್ಡ್ ಅನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಅದು ಹಾಗೆಯೇ ಅಲ್ಲವೇ. ಒಂದು ಹೋಟೆಲಾಗಲೀ, ಆಫೀಸಾಗಲೀ, ಬಸ್ಸು ಅಥವಾ ರೈಲಿನಲ್ಲಿನ ಸೀಟೇ ಆಗಲಿ, ಒಂದು ಸಲ ನಾವು ಅದರಲ್ಲಿದ್ದು ಬಿಟ್ಟರೆ ಅದು ನಮ್ಮದೇ ಎಂಬಂಥ ಬಾಂಧವ್ಯ ಬೆಳೆದು ಬಿಟ್ಟಿರುತ್ತದೆ. ಅದು ಎಷ್ಟು ಹೊತ್ತಿನದೇ ಆಗಿರಲಿ, ಅಲ್ಲಿಂದ ಕದಲಲು ಮನಸ್ಸೇ ಬರುವುದಿಲ್ಲ. ಈಗಲೂ ಹಾಗೇ ಆಯಿತು. ನಾನು ಈ ಬೆಡ್‌ಗೆ ಹೊಂದಿಕೊಂಡು ಬಿಟ್ಟಿದ್ದೆ. ಪಕ್ಕದಲ್ಲಿ ಸದಾ ಕಾಲ ಕಣ್ಣ ಮುಂದೆ ಕಾಣುತ್ತಿದ್ದ ವಿಶಾಲವಾದ ಆಕಾಶ ನನ್ನಲ್ಲಿ ಇನ್ನಿಲ್ಲದ ಶಾಂತಿ ಸಮಾಧಾನ, ಉಲ್ಲಾಸವನ್ನು ತುಂಬುತ್ತಿತ್ತು.

ಪಕ್ಕದ ಬೆಡ್ ಸೀತಮ್ಮನವರ ಪ್ರೀತಿ ವಾತ್ಸಲ್ಯದ ಮಾತುಗಳು, ಪ್ರತಿನಿತ್ಯ ಪೋನ್ ಮಾಡಿ ಅವರ ಮಕ್ಕಳು ಅವರನ್ನು ವಿಚಾರಿಸಿಕೊಳ್ಳುತ್ತಿದ್ದ ರೀತಿ, ಈ ದಿನಗಳಲ್ಲಿ ತೀರಾ ಅಪರೂಪವಾಗಿರುವ ಇಂತಹ ವಾತ್ಸಲ್ಯ… ಇದೆಲ್ಲ ಬಿಟ್ಟುಹೋಗಲು ಮನಸ್ಸಿರಲಿಲ್ಲ. ಸೀತಮ್ಮನೂ ಸಹ ನನ್ನ ಪರವಾಗಿ ಅವರು ಇಲ್ಲೆ ಇರಲಿ ಇಲ್ಲೆ ಚೆನ್ನಾಗಿದೆ ಎಂದು ದನಿಕೂಡಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಇನ್ನೊಂದು ವಾರ್ಡಿನ ಪಕ್ಕದ ಬೆಡ್‌ನವರು ಹೇಗಿರುತ್ತಾರೋ ಎಂಬುದೇ ದೊಡ್ಡ ಚಿಂತೆಯಾಗಿತ್ತು.

ಇಲ್ಲೇ ಇರ‍್ತೀನಿ ಅಂದಾಗ ಸರಿ ಅಂತ ಹೋದ ಸುದೀಪ್ ಸ್ವಲ್ಪ ಹೊತ್ತಿನ ನಂತರ ಆಕ್ಸಿಜನ್ ಸಿಲಿಂಡರ್ ತಳ್ಳಿಸಿಕೊಂಡು ಬಂದು ಮುಖಕ್ಕೆ ಅದರ ಮಾಸ್ಕ್ ಹಾಕಿಸಿದರು. ಆದರೆ ಇನ್ನೂ ಸ್ವಲ್ಪ ಹೊತ್ತಿನ ನಂತರ ಬಂದು ಮೇಡಂ ಈ ಸಿಲಿಂಡರ್ ಬೇಗ ಮುಗಿದು ಹೋಗುತ್ತೆ. ಆಮೇಲೆ ಬೇರೆ ಸಿಗೋದು ಕಷ್ಟ. ಇಲ್ಲಿ ಪೈಪ್‌ಲೈನ್ ಸಪ್ಲೈ ಇರುವುದು ಇಲ್ಲಿ ಇವರೊಬ್ಬರಿಗೆ ಮಾತ್ರ. ಆಮೇಲೆ ಆ ಬೆಡ್‌ಗೂ ಯಾರಾದ್ರೂ ಬಂದ್ರೆ ಕಷ್ಟ ಆಗುತ್ತೆ ಎಂದಾಗ ನಾನು ಶಿಫ್ಟಿಂಗ್‌ಗೆ ಒಪ್ಪಿಕೊಳ್ಳಲೇ ಬೇಕಾಯಿತು. ಆದರೆ ಆಗಲೇ ನನ್ನ ಸಂಸಾರ ಎಷ್ಟು ಬೆಳೆದು ಬಿಟ್ಟಿತ್ತು.

ಮನೆಯಿಂದ ಇನ್ನಷ್ಟು ಬಟ್ಟೆ ಬರೆ ತರಿಸಿದ್ದೆ. ಒಗೆಯ ಬೇಕಿದ್ದ ಬಟ್ಟೆಗಳೇ ಒಂದು ಕಿಟ್ ತುಂಬಿದ್ದವು. ಟೇಬಲ್ ತುಂಬಾ ಇದ್ದ ಹಣ್ಣು, ಬಿಸ್ಕತ್, ನೀರು, ಇನ್ನಿತರ ಸಣ್ಣಸಣ್ಣ ಡಬ್ಬಿಗಳು, ಕಿಟ್ ಬ್ಯಾಗು ಇವೆಲ್ಲವನ್ನು ನಾನು ಹೇಗೆ ಸಾಗಿಸುವುದು ಅಂದಾಗ, ನಾವೂ ಸಹಾಯ ಮಾಡ್ತೀವಿ ಬನ್ನಿ ಅಂದರು. ಆ ರೂಂ ಹೇಗಿದೆಯೋ ಏನೋ ಎಂದಾಗ, ಸುದೀಪ್ ಅದೂ ಇದೇ ಥರಾ ಇದೆ ಎಂದರು. ನಾನು ಕೈಗೆ ಸಿಕ್ಕಿದ್ದೆಲ್ಲ ಬ್ಯಾಗು ಕಿಟ್ ಬ್ಯಾಗ್‌ಗಳಿಗೆ ತುಂಬಿ ಅವರ ಹಿಂದೆ ಹೊರಟೆ..

। ಇನ್ನು ನಾಳೆಗೆ ।

‍ಲೇಖಕರು Avadhi

June 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: