ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.
ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.
ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ
‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.
ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ
ಎರಡನೆಯ ಕಂತು ಇಲ್ಲಿದೆ–ಕ್ಲಿಕ್ಕಿಸಿ
3
ಆಸ್ಪತ್ರೆಯ ಹುಡುಕಾಟ
ಆಸ್ಪತ್ರೆಯ ಹುಡುಕಾಟ. ಎಲ್ಲಿ ಚೆನ್ನಾಗಿರುತ್ತೆ, ಯಾವುದು ಅನುಕೂಲ, ಹಣ ಎಷ್ಟಾಗಬಹುದು ಇತ್ಯಾದಿ. ಶಂಕರ್ ಪೂರ್ವಿ ಮೇಘ ಮೂವರೂ ತಮ್ಮ ತಮ್ಮ ಫೋನ್‌ಗಳ ಮೂಲಕ ವಿಚಾರಣೆ ನಡೆಸಿದ್ದರು. ಮನೆಗೇ ಬಂದು ಚಿಕಿತ್ಸೆ ನಡೆಸುವ ಪ್ಯಾಕೇಜ್ ಇದೆಯಲ್ಲಾ ಅದಕ್ಕೇ ಟ್ರೈ ಮಾಡಬಹುದು ಎಂದು ನಾನು ಹೇಳುತ್ತಾ ಇದ್ದೆನಾದರೂ ಯಾಕೋ ಆ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಭರವಸೆ ಇರಲಿಲ್ಲ.
ನಮ್ಮ ರಾಜ್ಯದಲ್ಲಂತೂ ಯಾರೊಬ್ಬರೂ ಇದುವರೆಗೆ ಆ ರೀತಿ ಮನೆಗೆ ಬಂದು ಡಾಕ್ಟರ್ ಹಾಗೂ ಸಿಬ್ಬಂದಿಯವರಿಂದ ಚಿಕಿತ್ಸೆ ಪಡೆದುಕೊಂಡಿದ್ದರ ಅನುಭವವನ್ನು ಹಂಚಿಕೊಂಡಿರಲಿಲ್ಲ. ಅದೆಲ್ಲಾ ಇನ್ನೂ ಜಾಹಿರಾತಿನ ಮಟ್ಟದಲ್ಲಿಯೇ ಇತ್ತು. ನಾನು ಆಸ್ಪತ್ರೆ ಸೇರುವುದೇ ಆದರೆ ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಸೇರಲೋ ಬಿಡಲೋ ಕಿಟ್ ಅಂತೂ ರೆಡಿ ಮಾಡಿಕೊಂಡಿರೋಣ ಎಂದು ಶಂಕರ್‌ಗೆ ಹೇಳಿ ಮೇಲಿನಿಂದ ಕಿಟ್ ತರಿಸಿ ಮೂರು ಜೊತೆ ಬಟ್ಟೆಬರೆ, ಟವೆಲ್, ಟಾಯ್ಲೆಟ್ ಕಿಟ್ ಇತ್ಯಾದಿಗಳನ್ನು ತುಂಬಿಸಿದ್ದೆ.
ಎಲ್ಲವನ್ನೂ ಒಂದೇ ಉಸಿರಿನಲ್ಲಿ ಮಾಡುವ ಶಕ್ತಿ ಇರಲಿಲ್ಲ. ಸ್ವಲ್ಪ ಓಡಾಡಿದರೂ ಮೇಲುಸಿರು, ಆಯಾಸ. ಹೋಲ್ಡ್ಆಲ್ ನಂತಿದ್ದ ನನ್ನ ವ್ಯಾನಿಟಿ ಬ್ಯಾಗ್‌ನಲ್ಲಿ ಚಿಕ್ಕ ಚಿಕ್ಕ ಡಬ್ಬಿಗಳಲ್ಲಿ ತಂಬಿಸಿದ ಡ್ರೈಫ್ರುಟ್ಸ್, ಅರಿಷಿಣ, ಪೆಪ್ಪರ್ ಇತ್ಯಾದಿಗಳನ್ನು ಇಟ್ಟುಕೊಂಡ ನಂತರ ಬಿಸ್ಕತ್, ಮೊಬೈಲ್ ಚಾರ್ಜರ್, ಮೊಬೈಲ್, ಪೆನ್ನು, ಹಳೆಯ ನ್ಯೂಸ್ ಪೇಪರ್ ಇತ್ಯಾದಿಗಳನ್ನು ಹೀಗೆ ಕಂತು ಕಂತುಗಳಲ್ಲಿ ಕೆಲಸ ಮಾಡುತ್ತಾ ಒಂದು ಕೈಚೀಲಕ್ಕೆ ಹಾಕಿಟ್ಟೆ. ಏನಾದರೂ ಓದುವುದಕ್ಕೆ ಇರಲಿ ಅಂತ ಪುಸ್ತಕ ಹುಡುಕಾಡಿದೆ. ಓದಿಸಿಕೊಂಡು ಹೋಗುವ ಮತ್ತು ನಾನು ಓದಿಲ್ಲದ ಅಥವಾ ಮತ್ತೆ ಓದಬಹುದಾದ ಪುಸ್ತಕಗಳನ್ನು ಹುಡುಕಿಕೊಳ್ಳುವಷ್ಟು ಶಕ್ತಿಯೂ ಇರಲಿಲ್ಲ. ನನ್ನ ಸರಕನ್ನು ನಾನೇ ಹೊತ್ತು ಸಾಗಿಸಬೇಕಾಗಿರುವುದರಿಂದ ನಾನು ಆಯ್ದುಕೊಳ್ಳುವ ಪುಸ್ತಕಗಳು ಹಗುರವಾಗಿಯೂ ಇರಬೇಕಿತ್ತು. ನಾನು ಹೆಚ್ಚು ಓದಿಲ್ಲದ ಪುಸ್ತಕಗಳೆಂದರೆ ಇಂಗ್ಲಿಷ್ ಪುಸ್ತಕಗಳೇ. ಸರಿ ಅದರಿಂದಲೇ ಒಂದೆರಡು ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡೆ.

ಅಂತೂ ನಾಲ್ಕೈದು ಆಸ್ಪತ್ರೆಗಳ ಬಗ್ಗೆ ವಿಚಾರಿಸಿದ ನಂತರ ಡಾ. ಮಾಧವ ರೆಡ್ಡಿಯವರಿಂದಾಗಿ ನಾನು ಸೇರಬೇಕಾದ ಆಸ್ಪತ್ರೆಯ ನಿರ್ಧಾರವಾಯಿತು. ಅಲ್ಲಿ ಡಿಲಕ್ಸ್ ವಾರ್ಡ್ ಲಭ್ಯವಿದೆ, ಆದರೆ ಇಬ್ಬರು ಇರುವಂಥದ್ದು ಎಂದಾಗ ಮನಸ್ಸು ಸ್ವಲ್ಪ ಖಿನ್ನವಾದರೂ ಮನೆಗೆ ಹತ್ತಿರವಿರುವ ಹಾಗೂ ಗೊತ್ತಿರುವ ಡಾಕ್ಟರ್ ಇರುವ ಆಸ್ಪತ್ರೆ ಎಂದು ಸಮಾಧಾನವಾಯಿತು. ಮಾಧವ ರೆಡ್ಡಿಯವರಿಗೆ ಆಪ್ತರಾದವರು ಅಲ್ಲಿ ಸೀನಿಯರ್ ಡಾಕ್ಟರ್ ಆಗಿರುವುದರಿಂದ ಅವರೊಂದಿಗೂ ಮಾತಾಡಿದ್ದರು. ಆಸ್ಪತ್ರೆ ದಾಖಲಾತಿಗೆ ಬೇಕಾದ ವಿವರಗಳು, ದಾಖಲೆಗಳು, ಇನ್‌ಶ್ಯೂರೆನ್ಸ್ ಇತ್ಯಾದಿಗಳನ್ನೆಲ್ಲಾ ಮೇಘ ಮಾತಾಡಿ ಸಿದ್ಧಪಡಿಸಿದ್ದಳು. ಇನ್ನೇನಿದ್ದರೂ ನಾನು ನನ್ನ ಲಗೇಜ್ ತಗೊಂಡು ಹೋಗುವುದಷ್ಟೇ ಬಾಕಿ ಇತ್ತು.
ನಾನು ಸೋಂಕಿತಳಾಗಿ ಮನೆಯಲ್ಲಿ ಒಂದು ವಾರದಿಂದ ನನ್ನ ಗಂಡ ಹಾಗೂ ಅಕ್ಕನ ಜೊತೆಯಲ್ಲಿ ಯಾವುದೇ ಕ್ವಾರಂಟೈನ್ ನಿಯಮ ಪಾಲಿಸದೇ ಇದ್ದರೂ ಈಗ ಮಾತ್ರ ಪಾಸಿಟಿವ್ ಅಂತ ಸರ್ಟಿಫಿಕೇಟ್ ಸಿಕ್ಕ ಮೇಲೆ ಎಲ್ಲ ರೀತಿಯ ಅಸ್ಪೃಶ್ಯತೆಯನ್ನು ಆಚರಿಸತೊಡಗಿದೆ. ಊಟದ ತಟ್ಟೆ ಹಾಲ್‌ನಲ್ಲಿ ಟೀಪಾಯ್ ಮೇಲೆ ತಂದಿಟ್ಟುಬಿಡು ಅಂತ ಅಕ್ಕನಿಗೆ, ಮಾತ್ರೆ ಅಲ್ಲಿಡಿ ಅಂತ ಶಂಕರ್‌ಗೆ ದೂರದಲ್ಲಿ ನಿಂತೇ ಸೂಚನೆಗಳನ್ನು ನೀಡುತ್ತಾ ನಾನು ನನ್ನ ಕೈಲಾದಷ್ಟು ಓಡಾಡಿಕೊಂಡು ಆಗಾಗ ರೆಸ್ಟ್ ತಗೊಂಡು ನನ್ನ ವಸ್ತುಗಳ ವ್ಯವಸ್ಥೆಯನ್ನು ಮಾಡಿಕೊಂಡೆ.
ಹಿಂದಿನ ದಿನ ಕರೋನ ಟೆಸ್ಟ್ ಮಾಡಿಸಿಕೊಂಡು ಆಟೋದಲ್ಲಿ ಬರುವಾಗಲೂ ಯಾವ ಕ್ವಾರಂಟೈನ್ ಇರಲಿಲ್ಲ, ಮನೆಯಲ್ಲಿಯೂ ಇರಲಿಲ್ಲ. ಆದರೂ ಗೊತ್ತಾದ ನಂತರ ಮೊದಲಿನಂತೆ ಇರಲು ಸಾಧ್ಯವಾಗಲಿಲ್ಲ. ಇನ್ನು ಆಸ್ಪತ್ರೆಗೆ ಆಟೋದಲ್ಲಿ, ಓಲಾದಲ್ಲಿ ಹೋಗುವುದೇ ಬೇಡ ಅಂತ ಶಂಕರ್ ನಿರ್ಧಾರ. ಅ್ಯಂಬುಲೆನ್ಸ್ ನಲ್ಲಿ ಪ್ರಯಾಣ ಮಾಡುವಂಥ ಯಾವ ಅಸ್ವಸ್ಥತೆಯೂ ನನ್ನಲ್ಲಿರಲಿಲ್ಲ. ನನ್ನ ಅಕ್ಕನ ಮಗ ಕಾರು ತಂದಿದ್ದ. ಆದರೆ ಗೊತ್ತಿದ್ದೂ ಗೊತ್ತಿದ್ದೂ ಅವನನ್ನು ಬಳಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಸರಿ ಎಂದು ಅ್ಯಂಬುಲೆನ್ಸಿಗೆ ಒಪ್ಪಿದೆ.
ಸುಮಾರು ಮಧ್ಯಾಹ್ನ ಎರಡೂವರೆಯಿಂದ ಪ್ರಾರಂಭವಾದ ಅ್ಯಂಬುಲೆನ್ಸ್ ತರಿಸುವ ಪ್ರಕ್ರಿಯೆ ಅಂತ್ಯ ಕಂಡಿದ್ದು ಸಂಜೆ ಸುಮಾರು ೪.೩೦ ಹೊತ್ತಿಗೆ. ಅ್ಯಂಬುಲೆನ್ಸ್ ನಮ್ಮ ಮನೆಯ ಬೀದಿಯನ್ನು ತಲುಪಿತ್ತು. ಶಂಕರ್ ಹಾಗೂ ನನ್ನ ಅಕ್ಕನ ಮಗ ಅದರ ಡ್ರೈವರ್‌ಗೆ ಡೈರೆಕ್ಷನ್ ಕೊಡುತ್ತಾ ಆತ ಮುಂದೆ ಹೋಗಿ ರಿವರ್ಸ್ ತಗೊಂಡು ನಮ್ಮ ಮನೆಯ ಹತ್ತಿರ ನಿಲ್ಲಿಸುವಷ್ಟರಲ್ಲಿ ಇಡೀ ಬೀದಿಗೇ ಎಚ್ಚರವಾಗಿತ್ತು. ನಾನು ಮೈಸೂರಿಗೊ, ಶಿವಮೊಗ್ಗಕ್ಕೊ ಹೋಗುವ ಹಾಗೆ ನನ್ನ ಕಿಟ್‌ಬ್ಯಾಗ್ ತೆಗೆದುಕೊಂಡು ಕೈಚೀಲ, ವ್ಯಾನಿಟಿಬ್ಯಾಗ್‌ಗಳನ್ನು ಹೆಗಲಿಗೇರಿಸಿಕೊಂಡು ಅ್ಯಂಬುಲೆನ್ಸ್ ನತ್ತ ನಡೆಯುವಾಗ ನಾನು ನಿಜವಾಗಿಯೂ ಖಾಯಿಲೆಯವಳೇ ಎಂಬ ಸಂದೇಹ ಬರುವಷ್ಟು ನನ್ನ ನಡಿಗೆಯಲ್ಲಿ ಗೆಲುವು ಚುರುಕುತನಗಳಿದ್ದವು.
ಅ್ಯಂಬುಲೆನ್ಸ್ ಹತ್ತುವ ಮೊದಲು ಸುಮ್ಮನೆ ಅತ್ತಿತ್ತ ಕಣ್ಣು ಹಾಯಿಸಿದೆ. ಎದುರಿನ ಮನೆಯವರು, ಪಕ್ಕದ ಬೀದಿಯವರು, ನಮ್ಮ ಬೀದಿಯವರು, ಮೇಲಿನ ಮನೆಗಳವರು ಎಲ್ಲರೂ ತಮ್ಮ ತಮ್ಮ ಮನೆ ಬಾಗಿಲು, ಗೇಟುಗಳ ಮುಂದೆ ಹಾಗೂ ರಸ್ತೆಗಳಲ್ಲಿ ಜಮಾಯಿಸಿದ್ದರು. ಎಲ್ಲರ ಕಣ್ಣುಗಳಲ್ಲಿಯೂ ಭಯ ತುಂಬಿದ ನೋಟ. ನಾನು ಅ್ಯಂಬುಲೆನ್ಸ್ ಮೆಟ್ಟಿಲು ಹತ್ತುವ ಮೊದಲು ಅವರಿಗೆ ಟಾಟಾ ಮಾಡಲಿಲ್ಲ ಅಷ್ಟೆ. ಅ್ಯಂಬುಲೆನ್ಸ್ನ ಪ್ರವೇಶದ್ವಾರ ಅದೆಷ್ಟು ಚಿಕ್ಕದಾಗಿತ್ತೆಂದರೆ ನನಗೆ ಅದನ್ನು ಹೇಗೆ ಪ್ರವೇಶಿಸಬೇಕು ಒಂದು ಕೈಯಲ್ಲಿ ಕಿಟ್ ಹಿಡಿದುಕೊಂಡು ಎಂದು ತಬ್ಬಿಬ್ಬಾಯಿತು. ಸಂಪೂರ್ಣ ಪಿ.ಪಿ.ಇ.ಯಲ್ಲಿದ್ದ ಡ್ರೈವರ್ ಹಿಂದಿನ ಬಾಗಿಲು ತೆಗೆದು ದೂರನಿಂತಿದ್ದ. ಅಲ್ಲಿದ್ದ ಸ್ಟ್ರೆಚರ್ ಸೀದಾ ಬಾಗಿಲಿಗೆ ಅಡ್ಡ ಎನ್ನುವಷ್ಟರವರೆಗೆ ಚಾಚಿಕೊಂಡಿತ್ತು.
ಡ್ರೈವರ್ ನನಗೆ ಯಾವ ಸಹಾಯವನ್ನೂ ಮಾಡುವುದಿಲ್ಲ ಎಂದು ಅವನು ನಿಂತಿರುವ ಭಂಗಿಯಿಂದಲೇ ಅರ್ಥಮಾಡಿಕೊಂಡೆ. ಕೊನೆಗೆ ನನ್ನ ಕಿಟ್‌ನ್ನು ಮೊದಲು ಒಳಗಿಟ್ಟು ನಂತರ ಹೆಗಲಿನಲ್ಲಿದ್ದ ಬ್ಯಾಗುಗಳನ್ನು ಸಾವರಿಸಿಕೊಂಡು ಪಕ್ಕದಲ್ಲಿ ಹಿಡಿಕೆಯೂ ಇರಲಿಲ್ಲ, ಅಲುಗಾಡುತ್ತಿದ್ದ ಬಾಗಿಲನ್ನು ಆಧಾರವಾಗಿಟ್ಟುಕೊಂಡು ಹತ್ತಿ ಕುಳಿತೆ. ಸ್ಟ್ರೆಚರ್ ಎದುರಿಗೆ ಚಾಚಿಕೊಂಡಿತ್ತು. ಕಾಲು ಚಾಚಲು ಸ್ಥಳವೇ ಇರಲಿಲ್ಲ. ಕಿಟಕಿಗಳೆಲ್ಲ ಮುಚ್ಚಿದ್ದವು. ತೆರೆಯಲು ಪ್ರಯತ್ನಿಸಿದೆ, ಆಗಲಿಲ್ಲ. ನನಗೆ ತಾಜಾ ಗಾಳಿಯಿಲ್ಲದೆ ಆಗುವುದೇ ಇಲ್ಲ. ಅನಿವಾರ್ಯವಾಗಿ ಎ.ಸಿ. ಗಳಲ್ಲಿ ಪ್ರಯಾಣಿಸುವಾಗ ನನಗೆ ತಲೆಸುತ್ತುವುದು ಮತ್ತು ವಾಂತಿಯಾಗುವುದು ಕಟ್ಟಿಟ್ಟದ್ದು. ಉಸಿರು ಕಟ್ಟಿದಂತೆ ಅನ್ನಿಸುತ್ತಿತ್ತು. ಆದರೆ ಈ ಪ್ರಯಾಣ ದೀರ್ಘವಲ್ಲ ಸುಮಾರು ೧೦-೧೫ ನಿಮಿಷಗಳಲ್ಲಿ ತಲುಪಬಹುದಾದಷ್ಟೆ ಹತ್ತಿರ.

ಹೀಗಾಗಿ ನನಗೆ ತಲೆಸುತ್ತು, ವಾಂತಿಯಾಗುವ ಭಯ ದೂರವಾಯಿತು. ಈ ಅ್ಯಂಬುಲೆನ್ಸ್ ಅಕ್ಷರಶಃ ಎತ್ತಿನ ಬಂಡಿಯ ಹಾಗೆ ಶಬ್ದ ಮಾಡುತ್ತಿತ್ತು. ಅಸಾಧ್ಯ ಕುಲುಕಾಟ. ಪಕ್ಕದಲ್ಲಿ ಹಿಡಿಯಲು ಯಾವ ಆಧಾರವೂ ಇಲ್ಲ. ಕಿಟಕಿ ಮುಚ್ಚಿದ್ದರಿಂದ ಅದರ ಕಂಬಿಯೂ ಇಲ್ಲ. ಪಕ್ಕದಲ್ಲಿ ಒಂದು ಮೇಜಿನಂತೆ ಚಾಚಿಕೊಂಡ ಹಲಗೆ, ಅದರಲ್ಲಿಯೇ ಅಳವಡಿಸಿದ್ದ ವಾಷ್ ಬೇಸಿನ್, ಸ್ಟ್ರೆಚರ್‌ನ ಒಂದು ಮೂಲೆಯಲ್ಲಿ ಟೆಸ್ಟ್ ಟ್ಯೂಬ್‌ನಂತಹ ಆಕ್ಸಿಜನ್ ಸರಬರಾಜು ಸಲಕರಣೆ. ನಾನು ಬೀಳುವಂತಾದಾಗ ಪಕ್ಕದ ಹಲಗೆಯ ಮೇಲೆ ಕೈ ಆನಿಸಬೇಕಾಗಿತ್ತು.
ಈ ವಾಹನದಲ್ಲಿ ಎಷ್ಟು ಹೆಣಗಳು ಹೋಗಿರಬಹುದು, ಎಷ್ಟು ಕರೋನಾ ರೋಗಿಗಳ ಸಾಗಣೆಯಾಗಿರಬಹುದು? ಸದ್ಯ ಸೈರನ್ ಹಾಕಿರಲಿಲ್ಲ. ಹಾಗೇನಾದರೂ ಹಾಕಿದ್ದರೆ ಇನ್ನೆಷ್ಟು ಭಯದ ಕಣ್ಣುಗಳು ಅ್ಯಂಬುಲೆನ್ಸ್ ನತ್ತ ತಿರುಗುತ್ತಿದ್ದವೋ. ಆದರೂ ಅದು ಸಾಗುವಾಗ ಅಂಗಡಿಗಳವರು, ಹೋಟೆಲ್ ದರ್ಶಿನಿಗಳ ಮುಂದೆ ಹರಟುತ್ತಾ ಕಾಫಿ ಕುಡಿಯುತ್ತಿದ್ದವರು ಏನಿರಬಹುದು ಎಂಬ ಕುತೂಹಲದಿಂದ ನೋಡುತ್ತಿದ್ದರು. ನಾನೂ ಸಹ ಹೊರ ಜಗತ್ತಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಅಷ್ಟೇ ಆಸಕ್ತಿಯಿಂದ ಗಮನಿಸುತ್ತ ಸಾಗಿದೆ.
ಅಂತೂ ಸಧ್ಯ ಆಸ್ಪತ್ರೆಯನ್ನು ತಲುಪಿದ್ದಾಯಿತು. ಅಲ್ಲಿದ್ದ ಸೆಕ್ಯೂರಿಟಿ ಯವನು ಅ್ಯಂಬುಲೆನ್ಸ್ ನವನಿಗೆ ಹಿಂದೆ ಹೋಗುವ ಮುಂದೆ ಬರುವ ಕೆಲವು ಸೂಚನೆಗಳನ್ನು ನೀಡಿದ. ಗಾಡಿ ನಿಂತ ಮೇಲೆ ಡ್ರೈವರ್ ಬಂದು ಬಾಗಿಲು ತೆಗೆದು ದೂರ ನಿಂತ. ನಾನು ಪುನಃ ಕಿಟ್ ಬ್ಯಾಗ್ ಹಿಡಿದು ಇಳಿಯಲು ಸ್ವಲ್ಪ ಕಷ್ಟಪಡಬೇಕಾಯಿತು. ಡ್ರೈವರ್ ಕೈಚಾಚಲಿಲ್ಲ. ಆದರೂ ಹುಷಾರಾಗಿ ಇಳಿಯಿರಿ ನಿಧಾನವಾಗಿ ಎಂಬ ಒಂದು ಕಾರುಣ್ಯ ಪೂರಿತ ಮಾತನ್ನಾದರೂ ಹೇಳಿದಾಗ ಈ ಕರೋನಾ ಹುಟ್ಟಿಸಿರುವ ಭಯದ ಸ್ವರೂಪ ಅರ್ಥವಾಗುವಂಥದ್ದೇ ಆಗಿತ್ತು.
ನಾನು ಗಾಡಿಯಿಂದ ಇಳಿದು ಕೆಳಗೆ ಕಾಲಿಡುತ್ತಿದ್ದಂತೆ ಯಾವುದೋ ವಿಶಾಲವಾದ ಗ್ಯಾರೇಜಿನ ಖಾಲಿ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಅನ್ನಿಸಿತು. (ಹೌದು ಅದು ಗ್ಯಾರೇಜೇ ಆಗಿತ್ತು). ಅಲ್ಲಿ ನಾವು ನಿರೀಕ್ಷಿಸಿದ ಖಾಸಗಿ ಆಸ್ಪತ್ರೆಗಳ ೫ ಸ್ಟಾರ್‌ಹೋಟೆಲ್‌ನ ವಾತಾವರಣವಿರಲಿಲ್ಲ. ದೂರದಲ್ಲಿ ಒಂದು ಮೇಜಿನ ಬಳಿ ಪಿ.ಪಿ.ಇ. ಯಲ್ಲಿದ್ದ ಮೂರು ನಾಲ್ಕು ಮಂದಿ ಮಾತಾಡುತ್ತಾ ನಿಂತಿದ್ದರು. ನನ್ನನ್ನು ನೋಡಿದ ಕೂಡಲೇ ಲಿಫ್ಟ್ ಯಾವ ಕಡೆ ಇದೆ ಎಂದು ತೋರಿಸಿ ನಾನು ಹೋಗಬೇಕಾದ ಮಹಡಿಯ ಹಾಗೂ ವಾರ್ಡ್ ನ ಸಂಖ್ಯೆ ಹೇಳಿದರು. ಲಿಫ್ಟ್ ನ ಒಳಭಾಗವೂ ಸಾಕಷ್ಟು ವಿಶಾಲವಾಗಿದ್ದು ಅರ್ಧಂಬರ್ಧ ಬೆಳಕಿತ್ತು. ನಾನು ಕನ್ನಡಕ ಏರಿಸದೆ, ಸಂಖ್ಯೆಯನ್ನು ಒತ್ತಿದೆ. ಕೆಂಪು ಬೆಳಕಿನಲ್ಲಿ ಅದರ ಸಂಖ್ಯೆ ಪ್ರದರ್ಶನವಾದೊಡನೆ ನಾನು ತಪ್ಪಾಗಿ ಒತ್ತಿರುವುದು ತಿಳಿಯಿತು. ಮತ್ತೆ ಯಾವುದೋ ಊಹೆಯ ಮೇಲೆ ಇನ್ನೊಂದು ಗುಂಡಿ ಒತ್ತಿದೆ. ಅದೂ ತಪ್ಪಾಗಿತ್ತು.
ಕನ್ನಡಕ ಹಾಕದೆ ಇದ್ದರೆ ಹೀಗೇ ಲಿಫ್ಟ್ ನಲ್ಲಿ ಮೇಲೆ ಕೆಳಗೆ ಓಡಾಡಿಕೊಂಡೇ ಇರುತ್ತೇನೆ ಎಂಬ ಅರಿವಾದ ನಂತರ ಕನ್ನಡಕ ಹಾಕಿಕೊಂಡು ಸರಿಯಾದ ನಂಬರ್ ಒತ್ತಿದೆ. ಲಿಫ್ಟ್ ನಿಂದ ಹೊರಬಂದಾಗ ನಿರ್ಜನವಾದ ಕಾರಿಡಾರ್, ಈ ಕಿಟ್ ಅನ್ನು ಹೊತ್ತು ನನ್ನ ವಾರ್ಡ್ ವರೆಗೆ ಎಷ್ಟು ದೂರ ನಡೆಯಬೇಕೋ ಯಾರನ್ನಾದರೂ ಕೇಳೋಣವೆಂದರೆ ಅಲ್ಲಿ ಯಾರೊಬ್ಬರ ಸುಳಿವೂ ಇಲ್ಲ. ಹೀಗೆ ಎಡಭಾಗದ ಕೋಣೆಗಳನ್ನು ನೋಡುತ್ತಾ ಮುಂದೆ ಮುಂದೆ ಹೋದಂತೆ ನಂಬರುಗಳು ಏರುತ್ತಾ ಹೋದವು. ಹಾಗಿದ್ದರೆ ನಾನು ಪುನಃ ಹಿಂದಕ್ಕೆ ಬರಬೇಕು ಎಂದು ಅರ್ಥ ಮಾಡಿಕೊಂಡು ಬಲಗಡೆಯ ಕೋಣೆಗಳ ನಂಬರ್ ಪರೀಕ್ಷಿಸುತ್ತಾ ಬಂದೆ. ಆಗ ನನ್ನ ಕೋಣೆ ಸಿಕ್ಕಿತು. ಅಲ್ಲಿ ನನ್ನನ್ನು ಸ್ವಾಗತಿಸುವವರು ಯಾರೂ ಇರಲಿಲ್ಲ.
ಪ್ರವೇಶದ ಬಾಗಿಲಿನ ಬಳಿಯೇ ಇದ್ದ ಮಂಚದಲ್ಲಿ ಕುಳಿತುಕೊಂಡಿದ್ದ ಪೇಶೆಂಟ್ ಬನ್ನಿ ಎನ್ನುವಂತೆ ಸ್ವಾಗತಿಸಿದರು. ಕರ್ಟನ್ನಿನ ಆ ಕಡೆಯ ಬೆಡ್ ನನ್ನದು ಎಂದು ಅರ್ಥಮಾಡಿಕೊಂಡು ಹೋಗಿ ಅಲ್ಲಿ ಲಗೇಜ್ ಇಳಿಸಿದೆ. ಎಲ್ಲಾ ವಾರ್ಡ್ ಗಳಲ್ಲಿರುವಂತೆ ಇಲ್ಲಿ ಮನೆಯವರೊಬ್ಬರು ನೋಡಿಕೊಳ್ಳಲು ಇದ್ದರೆ ಅವರಿಗಾಗಿ ಎನ್ನುವಂತಹ ಒಂದು ಚಿಕ್ಕ ಹಾಸಿಗೆಯ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಗೊಡೆ ಪಕ್ಕದ ಜಾಗ ಖಾಲಿಯಾಗೆ ಇತ್ತು. ಕಪಾಟುಗಳೂ ಕಾಣಲಿಲ್ಲ. ಒಂದರ ಪಕ್ಕ ಒಂದರಂತೆ ನೆಲದ ಮೇಲೆ ಬ್ಯಾಗುಗಳನ್ನು ಇರಿಸಿದೆ. ಹಾಸಿಗೆಯ ಮೇಲೆ ಕುಳಿತು ನೀರು ಕುಡಿದೆ. ಆಗ ಪಕ್ಕದ ಬೆಡ್‌ನವರು ಕೈಕಾಲು ತೊಳೆದುಕೊಳ್ಳಿ ಎಂದು ಎಚ್ಚರಿಸಿದಾಗಷ್ಟೇ ನನಗೆ ಗೊತ್ತಾಗಿದ್ದು ನಾನು ಮೊದಲು ಮಾಡಬೇಕಾಗಿದ್ದ ಕೆಲಸ ಅದು ಎಂದು. ಆದರೆ ಅ್ಯಂಬುಲೆನ್ಸ್ ನಲ್ಲಿ ಬರುವ ಹೊತ್ತಿಗೆ ನನ್ನ ಮಡಿಮೈಲಿಗೆಯ ಕಲ್ಪನೆಗಳೆಲ್ಲ ಮಾಯವಾಗಿಬಿಟ್ಟಿದ್ದವೇನೋ.

ಯಾವುದಾದರೂ ಸಾವಿಗೆ ಹೋಗಿ ಬಂದಾಗ ಮನೆಗೆ ಬಂದಕೂಡಲೇ ಸೀದಾ ಬಚ್ಚಲಿಗೆ ಹೋಗಿ ಸ್ನಾನ ಮಾಡಿದ ನಂತರವೇ ಮುಂದಿನ ಕೆಲಸಕ್ಕೆ ತೊಡಗುವುದು ನನ್ನ ಪದ್ಧತಿ. ಅದಕ್ಕಾಗಿ ಸಾವಿಗೆ ಹೋಗುವ ಮೊದಲೇ, ಸ್ನಾನದ ನಂತರ ಹಾಕಿಕೊಳ್ಳಬೇಕಾದ ಬಟ್ಟೆ ಬರೆ, ಇತ್ಯಾದಿಗಳನ್ನೆಲ್ಲ ಮೊದಲೇ ಬಚ್ಚಲಲ್ಲಿ ಸಜ್ಜುಮಾಡಿಟ್ಟು, ಬಿಟ್ಟ ಬಟ್ಟೆಗಳನ್ನು ನೆನೆಸಲು ಇನ್ನೊಂದು ಬಕೆಟಿನಲ್ಲಿ ನೀರು ತುಂಬಿಸಿಟ್ಟು ಎಷ್ಟೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೆ. ಆಸ್ಪತ್ರೆಗೆ ಬಂದ ನಂತರ ಈ ಶುಚಿತ್ವದ ಎಲ್ಲವನ್ನೂ ಒಂದೊಂದಾಗಿ ಬಿಡುತ್ತಾ ಅಲ್ಲಿನ ವ್ಯವಸ್ಥೆಗೆ ಹೊಂದಿಕೊಂಡು ಬಿಟ್ಟಿದ್ದೆ. ಅದು ಅನಿವಾರ್ಯವೂ ಆಗಿತ್ತು. ‘ಅಮ್ಮ ಹೇಗಿದ್ದರೂ ಅಲ್ಲಿ ಹಾಸ್ಪಿಟಲ್ ಗೌನ್ ಕೊಡುತ್ತಾರೆ, ಒಂದೆರಡು ಜೊತೆ ಸುಮ್ಮನೆ ತೆಗೆದುಕೊಂಡು ಹೋಗಿರು ಅಂತ ಮಗಳು ಹೇಳಿದ್ದಳು. ಆದರೆ ಗೌನ್ ಕೊಡುವ ಮಾತಿರಲಿ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆಯೂ ಅಲ್ಲಿರಲಿಲ್ಲ.
ನಾನು ಮಾರನೆ ದಿನ ಎಲ್ಲ ಸಜ್ಜುಮಾಡಿಕೊಂಡು ಬಾತ್‌ರೂಮ್‌ಗೆ ಹೋದಾಗ ಬಿಸಿನೀರಿನ ಸುಳಿವೆ ಇಲ್ಲ. ಬಾತ್‌ರೂಂ ತುಂಬಾ ವಿಶಾಲವಾಗಿ ಅತ್ಯಂತ ಸ್ವಚ್ಛವಾಗಿದ್ದರೂ ಅಲ್ಲಿ ಒಂದು ಸ್ಟೂಲ್ ಇರಲಿಲ್ಲ. ಪಕ್ಕದ ಪೇಶೆಂಟ್‌ನ್ನು ವಿಚಾರಿಸಿಕೊಳ್ಳಲು ಬರುತ್ತಿದ್ದ ಅವರ ಮಗನ ಸ್ನೇಹಿತರೊಬ್ಬರು ಮೈಲ್ಡ್ ಕೋವಿಡ್ ನಿಂದಾಗಿ ಅದೇ ಆಸ್ಪತ್ರೆಯಲ್ಲಿದ್ದರು. ಅವರು ಆಗಷ್ಟೇ ಅಲ್ಲಿಗೆ ಬಂದಿದ್ದನ್ನು ನೋಡಿ ಬಿಸಿನೀರಿನ ಬಗ್ಗೆ ಕೇಳಿದಾಗ ಇಲ್ಲಿ ೮ ಗಂಟೆಯ ಮೇಲಷ್ಟೇ ಬಿಸಿ ನೀರು ಸಿಗುವುದು. ಮೇಲೆ ಸ್ಟಿಕರ್ ಹಾಕಿದ್ದಾರೆ ನೋಡಿ ಅಂದರು. ಆದರೆ ಅದರ ಪ್ರಕಾರವೂ ಸಹ ಬಿಸಿ ನೀರಿನ ಸರಬರಾಜು ಅಲ್ಲಿ ನಿಯಮಿತವಾಗಿರಲಿಲ್ಲ.
ಹೀಗಾಗಿ ಸುಮ್ಮನೆ ಬಟ್ಟೆ ಬದಲಾಯಿಸಿದೆ. ಹಾಗೂ ಅಲ್ಲಿದ್ದ ೧೬ ದಿನಗಳಲ್ಲಿ ಸ್ನಾನ ಮಾಡಿದ್ದು ಎರಡೇ ದಿನ. ಬಿಸಿನೀರಿನ ಅವ್ಯವಸ್ಥೆ ಒಂದು ಕಾರಣವಾಗಿದ್ದರೆ ನನಗೆ ನಿಂತುಕೊಂಡು ಸ್ನಾನ ಮಾಡಿಕೊಳ್ಳುವಷ್ಟು ಶಕ್ತಿ ಇಲ್ಲವಾಗಿದ್ದೂ ಇನ್ನೊಂದು ಕಾರಣ. ಒಟ್ಟಿನಲ್ಲಿ ನಾನು ಮೂರು ನಾಲ್ಕು ದಿನಗಳಿಗೆಂದು ತೆಗೆದುಕೊಂಡು ಹೋಗಿದ್ದ ಬಟ್ಟೆ ಬರೆಗಳು ಸಾಲದಾಗಿ ನನ್ನ ಮಕ್ಕಳು ಇನ್ನೊಂದಿಷ್ಟು ಹೌಸ್‌ಕೋಟ್ ಗಳನ್ನೂ ಚೂಡಿದಾರ್ ಸೆಟ್‌ಗಳನ್ನೂ ಖರೀದಿಸಿ ಕಳುಹಿಸಿಕೊಟ್ಟರು.
। ಇನ್ನು ನಾಳೆಗೆ ।
0 ಪ್ರತಿಕ್ರಿಯೆಗಳು