ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 10

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ- ಕ್ಲಿಕ್ಕಿಸಿ

10

ಕರೋನಾ ಮತ್ತು ವಯಸ್ಸು ಎತ್ತಣಿಂದೆತ್ತ ಸಂಬಂಧ?

ಯೌವನದಲ್ಲಿ ತಮ್ಮ ಸಹೋದ್ಯೋಗಿಯನ್ನು ಪ್ರೇಮಿಸಿದರೂ, ಜಾತಿಯ ಕಾರಣದಿಂದಾಗಿ ಆತನೊಂದಿಗೆ ಮದುವೆಯಾಗದೆ ಹಿರಿಯರು ನೋಡಿದ ವ್ಯಕ್ತಿಯೊಂದಿಗೆ ಮದುವೆಯಾಗಿ ಸುಖಸಂಸಾರ ನಡೆಸಿದ ಲೇಖಕಿಯೊಬ್ಬರು ಹೀಗೆ ಹೇಳಿದರು: ವಯಸ್ಸಿನ ಪ್ರಭಾವ, ಮಧುರ ಭಾವನೆಗಳನ್ನು ತುಂಬಿಕೊಂಡ ಹೃದಯ, ಕನಸು ಕಾಣುವ ಮನೋಭಾವ, ದೇವರು ೧೮ ರಿಂದ ೩೦ನೆಯ ವರೆಗಿನ ವರ್ಷಗಳನ್ನು ಹೆಣ್ಣಿನ ಜೀವನದಲ್ಲಿ ಏಕೆ ತರುತ್ತಾನೋ ಗೊತ್ತಿಲ್ಲ. ಮುಗ್ಧ ಮನಸ್ಸುಗಳ ಮೇಲೆ ಚಲನ ಚಿತ್ರಗಳ ಪ್ರಭಾವವೋ, ಹಾರ್ಮೋನುಗಳ ಹೇರಳ ಉತ್ಪತ್ತಿಯೋ, ಮನ್ಮಥನ ಬಾಣಗಳ ಹಾವಳಿಯೋ ತಿಳಿಯದು… ಪ್ರಿಯಕರನು ಸಿನಿಮಾಗಳ ಹೀರೋವಿನಂತೆ ಭಾಸವಾಗಿ ಆತನೇ ಎಲ್ಲರಿಗಿಂತ ಬೇಕಾದವನಾಗುತ್ತಾನೆ.

೮೦ರ ಅಂಚಿನಲ್ಲಿದ್ದ ಮತ್ತೊಬ್ಬ ಲೇಖಕಿ ಹೇಳಿದ್ದು: ನನಗೆ ಯಾವತ್ತೂ ವಯಸ್ಸಾಗುವ ವಿಷಯವಾಗಿ ಆತಂಕವಾಗಲೀ, ಬೇಸರವಾಗಲೀ ಆಗೇ ಇಲ್ಲ. ಬದಲಾಗಿ ವಯಸ್ಸು ಹೆಚ್ಚಾದಂತೆ ಹುಡುಗತನದತ್ತ ನನ್ನ ಮನಸ್ಸು ವಾಲುತ್ತಿದೆ. ಇಂದಿಗೂ ನಾನು ಚಿಕ್ಕ ಮಕ್ಕಳ ಜೊತೆ ಕುಂಟಾಬಿಲ್ಲೆ, ರನ್ನಿಂಗ್ ರೇಸ್‌ಗಳನ್ನು ಹುರುಪಿನಿಂದ ಆಡುತ್ತೇನೆ, ಸ್ವಲ್ಪವೂ ಸಂಕೋಚವಿಲ್ಲದೆ.

ಇನ್ನೊಬ್ಬ ಲೇಖಕಿ: ಅರವತ್ತಾದರೆ ವಯಸ್ಸಾಯ್ತು ಎಂದುಕೊಳ್ಳುವುದುಂಟು. ಅರವತ್ತಕ್ಕೆ ಅರಳು ಮರಳು ಎಂಬ ಒಗ್ಗರಣೆ ಮಾತು ಬೇರೆ. ನಿಜ, ಕಪ್ಪುಕೂದಲ ನಡುವೆ ಬೆಳ್ಳಿ ಕೂದಲು, ಲತಾಂಗಿಯಾಗಿದ್ದವಳು ಸ್ಥೂಲಾಂಗಿ… ಆದರೆ ನನ್ನ ಮಟ್ಟಿಗೆ ವಯಸ್ಸಾಗಿಲ್ಲ. ಹರೆಯದ ಚಿಂತನೆಗಳು, ಆದರ್ಶಗಳು, ಮೌಲ್ಯಗಳು ಇಂದಿಗೂ ಹಾಗೆಯೇ ಉಳಿದಿವೆ. ಅಂದಿನ ಚೈತನ್ಯ, ಉತ್ಸಾಹ, ಸೋಂಬೇರಿತನ ಎಲ್ಲ ಅದೇ ಪ್ರಮಾಣದಲ್ಲಿವೆ. ಎಲ್ಲಾ ವಯಸ್ಸಿನವರೊಡನೆ ಖುಷಿಯಾಗಿ ಬೆರೆಯುತ್ತೇನೆ. ನಮ್ಮ ಕಾಲ ಹಾಗಿತ್ತು ಹೀಗಿತ್ತು ಎಂದು ಯಾರೊಡನೆಯೂ ಈವರೆಗೆ ಮಾತಾಡಿಲ್ಲ. ಕಂಡಕಂಡವರಿಗೆ ಬೇಡದ ಬುದ್ಧಿವಾದ ಹೇಳಿ ಕಿರಿಕಿರಿಗೊಳಿಸಿಲ್ಲ.

ವಯಸ್ಸು ಏನೇ ಇರಲಿ ಈ ಲೇಖಕಿಯರಲ್ಲಿದ್ದ ಜೀವನೋತ್ಸಾಹ, ಹಾಸ್ಯಪ್ರಜ್ಞೆ, ಸಾಮಾಜಿಕ ಕಳಕಳಿ, ಸ್ತ್ರೀ ಸಂವೇದನೆ, ದಿಟ್ಟ ನಿಲುವುಗಳು, ನಮ್ಮ ಸಾಂಪ್ರದಾಯಿಕ ಆಲೋಚನೆಗಳನ್ನು ತಲೆಕೆಳಗು ಮಾಡುವುದಂತೂ ನಿಜ.

ನಾವು ಅಂದರೆ ಒಬ್ಬಿಬ್ಬರನ್ನು ಬಿಟ್ಟು ಅರವತ್ತು ದಾಟಿದ ಗೆಳತಿಯರೆಲ್ಲ ಇತ್ತೀಚಿಗೆ ಅಂದರೆ ಕರೋನಾ ಲಾಕ್ ಡೌನ್ ಪ್ರಾರಂಭಕ್ಕೆ ಹಿಂದಿನ ವರ್ಷದ ಜನವರಿಯಲ್ಲಿ ಮೇಕೆದಾಟುಗೆ ಹೋಗಿದ್ದೆವು. ಅಲ್ಲಿಯ ಬಂಡೆಗಲ್ಲುಗಳನ್ನು ಹತ್ತಿ ಇಳಿಯಲು ಕೈಕಾಲುಗಟ್ಟಿ ಇರುವುದು ಅಗತ್ಯ. ಹಾಗಿಲ್ಲದಿದ್ದರೆ ಆ ಸೌಂದರ್ಯವನ್ನು ಸವಿಯಲು ಅನುಭವಿಸಲು ಸಾಧ್ಯವಿಲ್ಲ.

ನಮಗೆ ನಮ್ಮ ವಯಸ್ಸು ಯಾವ ರೀತಿಯಲ್ಲೂ ಅಡ್ಡಿಯಾಗಲಿಲ್ಲ. ಅಲ್ಲಿ ಬಂದಿದ್ದವರಲ್ಲಿ ಹೆಚ್ಚಿನವರು ಕಾಲೇಜ್ ಓದುವ ವಯಸ್ಸಿನವರು. ಬೆರಳೆಣಿಕೆಯಷ್ಟು ಮಧ್ಯವಯಸ್ಕರು. ನಾವು ಒಬ್ಬ ಹುಡುಗನಿಗೆ ನಮ್ಮ ಫೋಟೋ ತೆಗೆಯಲು ಮೊಬೈಲ್ ಕೊಟ್ಟು ನಿಂತೆವು. ಅವನು ‘ಆಂಟಿ ಸ್ವಲ್ಪ ಸ್ಮೈಲ್‌ ಮಾಡಿ ಅಂಕಲ್‌ನ ನೆನೆಸ್ಕೊಳಿ’ ಅಂದ. ‘ಲೋ ಮಗು ನಾವು ಇಲ್ಲಿ ಬಂದಿರುವುದು ಅಂಕಲ್‌ನ ಮರೆಯೋಕೆ ಕಣೊ’ ಅಂದಾಗ ಅವನು ಕಕ್ಕಾಬಿಕ್ಕಿ.

ಹೀಗಿರುವಾಗ, ಇನ್ನು ಇಪ್ಪತ್ತು ವರ್ಷ ಮಾಡಿದರೂ ಮುಗಿಯದಷ್ಟು ಯೋಜನೆಗಳು ನನ್ನ ಮುಂದಿರುವಾಗ, ಒಂದು ವೇಳೆ ನಮ್ಮ ಭಾರತದಲ್ಲಿ ಅರವತ್ತು ದಾಟಿದ ವೃದ್ಧರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರ ಮಾಡಿಬಿಟ್ಟರೆ ಏನು ಗತಿ? ಮೊದಲೇ ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು ಎಂಬಂಥ ಆಡಳಿತ ವ್ಯವಸ್ಥೆ ನಮ್ಮದು. ಕರೋನಾ ಲಾಕ್ ಡೌನ್ ಹೆಸರಿನಲ್ಲಿ ಪೋಲಿಸರು ಯಾವುದೇ ವಿವೇಚನೆಯಿಲ್ಲದೆ ಅಮಾಯಕರ ಮೇಲೆ ಯದ್ವಾತದ್ವಾ ಲಾಠಿ ಬೀಸಿದ ಉದಾಹರಣೆಗಳು, ಉಸಿರಾಟ ಕಷ್ಟವಾಗಿ ಆಸ್ಪತ್ರೆಯ ಬಾಗಿಲಲ್ಲೆ ರೋಗಿ ಏದುಸಿರು ಬಿಡುತ್ತಿದ್ದರೂ ಕೋವಿಡ್ ಟೆಸ್ಟ್ ಮಾಡಿಸಿಲ್ಲ ಎಂದು ಚಿಕಿತ್ಸೆ ನೀಡದ ವ್ಯವಸ್ಥೆಗಳು, ಲಕ್ಷಾಂತರ ರೂಪಾಯಿ ಬಿಲ್ ಮಾಡಿ ಪ್ರಾಣವೂ ಇಲ್ಲ ಶವವನ್ನೂ ಕೊಡುವುದಿಲ್ಲ ಎಂಬಂಥ ವ್ಯವಸ್ಥೆ ಇರುವ ನಮ್ಮಲ್ಲಿ ಹೀಗಾದರೆ ಏನೂ ಅಚ್ಚರಿಯಿಲ್ಲ.

* * * *

ಈಗ ನಮ್ಮ ದೇಶದಲ್ಲಷ್ಟೇ ಏಕೆ ಎಲ್ಲ ದೇಶಗಳಲ್ಲೂ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗಸ್ಥರಾಗಿ ದುಡಿಯುವ ಮಹಿಳೆಯರ ಸಂಖ್ಯೆ ಪುರುಷರದಕ್ಕಿಂತಲೂ ಹೆಚ್ಚಾಗಿದೆ ಎಂಬುದು ವಾಸ್ತವ ಸಂಗತಿ. ಅದರಲ್ಲಿಯೂ ಅಭಿವೃದ್ಧಿಶೀಲ ದೇಶಗಳಲ್ಲಿ ಇದು ಇನ್ನಷ್ಟು ಹೆಚ್ಚು. ಚೀನಾದೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿರುವ ನನ್ನ ಸ್ನೇಹಿತೆಯೊಬ್ಬರು ಹೇಳುತ್ತಿದ್ದರು. ಅಲ್ಲಿನ ಗಂಡಸರು ತುಂಬಾ ಸೋಮಾರಿಗಳು. ಪ್ರತಿಯೊಂದು ಕೆಲಸವನ್ನೂ ಹೆಂಗಸರೇ ಮಾಡಬೇಕು ಮತ್ತು ಮಾಡುತ್ತಾರೆ. ಹಾಗೆ ನೋಡಿದರೆ ನಮ್ಮ ಭಾರತವೇ ಮೇಲು ಎಂದು.

ಒಂದಂತೂ ನಿಜ, ಈಗ ಹೆಣ್ಣು ಮಕ್ಕಳ ಬದುಕು ನಾಲ್ಕು ಗೋಡೆಗಳ ನಡುವೆ ಬಂಧಿತವಾಗಿಲ್ಲ. ಪುರುಷರಿಗೆ ಸಮಾನವಾಗಿ ಅಥವಾ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೊಸಿಲು ದಾಟಿ ಬಂದಿರುವ ಹೆಣ್ಣು ಮಕ್ಕಳು ಬದುಕಿನ ಎಲ್ಲಾ ರಂಗಗಳಲ್ಲಿಯೂ ಎದ್ದು ಕಾಣತೊಡಗಿದ್ದಾರೆ. ರಂಗೋಲಿ ಹಿಟ್ಟಿನಿಂದ ಹಿಡಿದು ವಜ್ರಾಭರಣಗಳ ವ್ಯಾಪಾರದವರೆಗೆ, ಸಣ್ಣಪುಟ್ಟ ಅಂಗಡಿಗಳಿಂದ ದೊಡ್ಡ ದೊಡ್ಡ ಮಾಲ್‌ಗಳವರೆಗೆ, ಕ್ಲಿನಿಕ್, ನರ್ಸಿಂಗ್ ಹೋಂಗಳಿಂದ ದೊಡ್ಡ ದೊಡ್ಡ ಮಲ್ಟಿ ಸ್ಪೆಶಾಲಿಟಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳವರೆಗೆ, ಬೇಬಿ ನರ್ಸರಿ, ಬೇಬಿ ಸಿಟಿಂಗ್‌ಗಳಿಂದ ವಿಶ್ವವಿದ್ಯಾಲಯಗಳವರೆಗೆ ಎಲ್ಲೆಡೆಯೂ ಹೆಣ್ಣು ಮಕ್ಕಳು ಪುರುಷರಷ್ಟೇ ಸಮಾನ ಸಂಖ್ಯೆಯಲ್ಲಿ ಕಂಡುಬರುತ್ತಾರೆ.

ಬೆಳಗಾದರೆ ಮಕ್ಕಳ ಸ್ಕೂಲ್ ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು ಇಲ್ಲವೇ ಸ್ಕೂಟರ್‌ಗಳಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವ ತಾಯಂದಿರ ಪಡೆ, ವಿವಿಧ ಉದ್ಯೋಗ ಕ್ಷೇತ್ರಗಳಿಗೆ ತೆರಳಿ ಸಂಜೆ ದಿನಸಿ, ತರಕಾರಿ ಚೀಲಗಳನ್ನು ಹೊತ್ತು ಮನೆಗೆ ಧಾವಿಸುವ ಉದ್ಯೋಗಸ್ಥ ಮಹಿಳೆಯರ ಪಡೆ ಎಲ್ಲೆಡೆಯೂ ಕಂಡುಬರುವುದು ಸರ್ವೇಸಾಮಾನ್ಯ. ಸಿದ್ಧ ಉಡುಪುಗಳ ಕೈಗಾರಿಕೆ ಎಂಬ ಕ್ಷೇತ್ರದಲ್ಲಿ ದುಡಿಯುವ ಹೆಣ್ಣು ಮಕ್ಕಳ ಸಂಖ್ಯೆ ಲಕ್ಷಾಂತರ.

ಬೀದಿಬದಿಯಲ್ಲಿ ಹೂವು ಹಣ್ಣು ಸೊಪ್ಪು ತರಕಾರಿ ಮಾರುತ್ತಾ, ಹೊಲಿಗೆ ಹೆಣಿಗೆ ಅಡಿಗೆ ಹಾಗೂ ಚಿಕ್ಕಪುಟ್ಟ ಉಪಹಾರಗೃಹ ನಡೆಸುತ್ತಾ ಜೀವನ ನಡೆಸುವ ಮಹಿಳೆಯರ ಸಂಖ್ಯೆಗೆ ಲೆಕ್ಕವೇ ಇಲ್ಲ. ಬರಗಾಲದ ಬವಣೆಯಿಂದ ಊರು ಹಳ್ಳಿ ಹೊಲ ಮನೆಗಳನ್ನು ಬಿಟ್ಟುಬಂದು ಕಟ್ಟಡ ಕಾಮಗಾರಿಗಳಲ್ಲಿ ತೊಡಗಿರುವವರು, ಮಧ್ಯಮ ವರ್ಗದಿಂದ ಹಿಡಿದು ಮಂತ್ರಿ ಮಹೋದಯರ ಮನೆಗಳವರೆಗೆ ಮನೆಗೆಲಸ ಮಾಡುವ ಹೆಣ್ಣುಮಕ್ಕಳು ಇಲ್ಲದ ನಗರ ಪಟ್ಟಣಗಳನ್ನು ಊಹಿಸಿಕೊಳ್ಳುವಂತೆಯೇ ಇಲ್ಲ. ಪೆಟ್ರೋಲ್‌ಬಂಕ್, ಪೋಲಿಸ್, ಬಸ್ ಕಂಡಕ್ಟರ್, ಡ್ರೈವರ್ ಮುಂತಾದ ಅಸಂಪ್ರದಾಯಿಕ ಕ್ಷೇತ್ರಗಳಲ್ಲಿ ದುಡಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ತಿಂಗಳುಗಟ್ಟಲೆ ಸಂಬಳವಿಲ್ಲದೆ ದುಡಿಯುವ ಪೌರಕಾರ್ಮಿಕರು, ಅಸಂಘಟಿತ ಕಾರ್ಖಾನೆಗಳವರು ಮುಂತಾಗಿ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಶ್ರದ್ಧೆ ನಿಷ್ಠೆ ಪ್ರಾಮಾಣಿಕತೆಗಳಿಂದ ದುಡಿಯುವ ಈ ಹೆಣ್ಣುಮಕ್ಕಳು ತಮ್ಮ ಕುಟುಂಬಗಳನ್ನು ಸಾಕಿ ಸಲಹುವುದು ಮಾತ್ರವೇ ಅಲ್ಲ ಇಡೀ ನಗರದ ಜನರ ಬದುಕಿನ ಸೌಖ್ಯವನ್ನು ಹೆಚ್ಚಿಸಿದ್ದಾರೆ.

ಪರೋಕ್ಷವಾಗಿ ದೇಶದ ಕ್ಷೇಮಾಭಿವೃದ್ಧಿಗೆ, ಆರ್ಥಿಕ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ತಮ್ಮ ಬೆವರು ಹರಿಸಿ ಈ ನೆಲದ ಬದುಕನ್ನು ತಂಪು ಮಾಡಿದ್ದಾರೆ. ಹಸನು ಮಾಡಿದ್ದಾರೆ. ಹೆಣ್ಣು ಮಕ್ಕಳ ಈ ಎಲ್ಲ ಕೊಡುಗೆಗಳನ್ನು ಸ್ಮರಿಸದೆ, ಯಾರೋ ಅಡ್ಡ ಹಾದಿ ಹಿಡಿದವರ ಬಗ್ಗೆಯೇ ಹೇಳುತ್ತಾ ಇಡೀ ಹೆಣ್ಣುಮಕ್ಕಳ ಕೊಡುಗೆಯನ್ನು ಮರೆಸುತ್ತಿರುವ ಮಾಧ್ಯಮಗಳು, ಸಿನಿಮಾಗಳು, ಧಾರಾವಾಹಿಗಳ ಪ್ರಪಂಚವನ್ನು ಎಷ್ಟು ಥೂ ಎಂದರೂ ಕಡಿಮೆಯೇ.

ಸ್ತ್ರೀಯರ ಅಂತಃಶಕ್ತಿ ಸಾಮರ್ಥ್ಯಗಳನ್ನು ಸರಿಯಾಗಿ ಗುರುತಿಸಿದ ಏಕೈಕ ರಾಜಕೀಯ ನಾಯಕರೆಂದರೆ ಗಾಂಧೀಜಿ ಮಾತ್ರ. ತಮ್ಮ ಅಹಿಂಸಾತ್ಮಕ ಹೋರಾಟಕ್ಕೆ ಮಹಿಳೆಯರೇ ಪ್ರೇರಣೆ ಎಂದಿರುವುದು ಅವರಿಗೆ ಸ್ತ್ರೀಯರ ಸಾಮರ್ಥ್ಯ ಕುರಿತಂತೆ ಇದ್ದ ಅಪಾರ ವಿಶ್ವಾಸ ಭರವಸೆಗಳಿಗೆ ಸಾಕ್ಷಿ. ಅನೇಕ ವಿಷಯಗಳಲ್ಲಿ ಪುರುಷರಿಗಿಂತ ಸ್ತ್ರೀಯರೇ ಉತ್ತಮ ಎಂದು ಕಂಡುಕೊಂಡಿದ್ದ ಗಾಂಧಿಯವರ ಆಪ್ತ ಪರಿವಾರದಲ್ಲಿ ಇದ್ದವರೆಲ್ಲರೂ ಸ್ತ್ರೀಯರೇ ಎಂಬುದು ಗಮನಾರ್ಹ.

| ಇನ್ನು ನಾಳೆಗೆ |

‍ಲೇಖಕರು Avadhi

June 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: