ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕು ಸ ಮಧುಸೂದನ್ ಅವರ ಹೊಸ ಕವಿತೆ- ಬರದೊಳಗೂ ಬಾಳು

ಕು.ಸ. ಮಧುಸೂದನ ರಂಗೇನಹಳ್ಳಿ

ಶವಾಗಾರಗಳ ಕಾವಲುಗಾರನ

ದಪ್ಪ ಮೀಸೆಯಡಿಯ ಕಣ್ಣೀರು

ಕಾಣದ ಕುರುಡು ಜಗದ ವಾರಾಂಗನೆಯರ

ಅಂಗಗಳಿಗೆಲ್ಲ

ತೊನ್ನು ವ್ಯಾಪಿಸಿ

ಕತ್ತಲಂತ ಊರಲಿ

ಕೊಚ್ಚಿ ಎಸೆದ ಹೆಣಗಳ

ಮೈಮೇಲಿನ ಹಳೇ ನಗಗಳ

ಬಿಚ್ಚಿ ಒತ್ತೆಯಿಟ್ಟು

ಮಧ್ಯಾಹ್ನದೂಟಕೆ ಸಜ್ಜಾಗುವ

ಅನಂತ ಅನಾಥಜೀವಗಳು.

ಪ್ರಭುಗಳ ಉಗ್ರಾಣಗಳಲ್ಲಿ 

ತಿನ್ನುವವರಿರದೆ ಕೊಳೆತು ಹೋಗುವ

ಅಕ್ಕಿ ಮೂಟೆಗಳ ದಾಸ್ತಾನಿಗೆ

ಹೊಂಚು ಹಾಕಿ ಕೂತ

ಕಾಳಖದೀಮರ ಸಂಚುಗಳಿಗೆ ನಿರುತ್ತರ

ಒರೆಯಿಂದ ಹೊರಬಾರದ ಖಡ್ಗ

ನೆಗೆದು ಘರ್ಜಿಸಿಯೂ ಹೆದರಿಸದ ಮೃಗ

ಉಪ್ಪು ನೀರಿನ ಕಡಲು

ಮೈಸೋಕದ ಅದರ ಮೇಲಿನ ಗಾಳಿ

ಬೆನ್ನಿಗಂಟಿದ ಕಣ್ಣು

ಅಂಡಿನ ಮೇಲಿನ ವಾಸಿಯಾಗದ 

ಪುರಾತನ ವ್ರಣ

ಮುಲಾಮು ತರಲೆಂದು ಸಂತೆಗೋದ ಅವ್ವ

ಮರಳಿ ಬಾರದ ದುಃಖಕ್ಕೆ ಸಾಟಿಯಿರದ

ಮುಗಿಯದೊಂದು ಶೋಕಗೀತೆಗೆ

ತಮಟೆ ಸದ್ದಿನ ಸಾಥ್.

ಹೊತ್ತಿ ಉರಿದ ಹುಲ್ಲುಗಾವಲುಗಳ ನಡುವೆ

ಏಳು ಸುತ್ತಿನ ಮಲ್ಲಿಗೆ ತೂಕದ

ಮತ್ತದೆ ಬಣ್ಣದ ರಾಜಕುಮಾರಿ

ಹತ್ತೂರ ಅಲೆಯುವ

ನೆಲೆ ನಿಲ್ಲದ ಜೋಳಿಗೆಯ

ಬಾಯಿ ತೆರೆದು ಭವತಿ ಎಂದು ಬಂದು ನಿಂತ ಜಟಾಧಾರಿ

ಮುಳುಗಿದ ಸೂರ್ಯ ಮರಳುವನು ಖರೆ

ಮರಳಿದ ಸೂರ್ಯ ಮತ್ತೆ ಮುಳುಗವನು ಖರೆ

ಹೇಳಿದ್ದನ್ನೇ ಹೇಳುವ ಮರುಳೆ

ನೆಲದ ಮಾತು ಕೇಳು

ಬರದೊಳಗೂ ಬಾಳು

‍ಲೇಖಕರು avadhi

8 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading