ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ: ಮಣಮಣ ಮಣಿಪುರ 2

19.2  ಮಣಮಣ ಮಣಿಪುರ

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

19.2

ಮೊದಲ ಮೂರು ದಿನ ಹೀಗಾದ ಬಳಿಕ ಉಳಿದ ದಿನಗಳ ಬಗ್ಗೆ ಭರವಸೆ ಇಟ್ಟುಕೊಳ್ಳುವುದೋ ಬೇಡವೋ ಎಂದು ಮನ ಹೊಯ್ದಾಡುತ್ತಿತ್ತು, ಭರವಸೆಯೇ ಬಾಳಿನ ಬೆಳಕಾದರೂ. ಮರುದಿನ ಬೆಳಿಗ್ಗೆ ನಮ್ಮ ಪ್ರಯಾಣ ಉಕ್ರುಲ್ ಕಡೆಗೆ ನಿಶ್ಚಯವಾಗಿತ್ತು. ಅಷ್ಟೇನೂ ದೂರವಲ್ಲದ ದಾರಿ, 80-90 ಕಿ.ಮೀ. ಒಳಗೆ. ಲೆಕ್ಕ ಹಾಕಿದರೆ ಮೂರು ಗಂಟೆಯೊಳಗೆ ಕ್ರಮಿಸಬಹುದಾದ ದಾರಿ. ರಸ್ತೆ ರಿಪೇರಿಯಲ್ಲಿದ್ದ ಕಾರಣ ಹಾಗೂ ಮಾರ್ಗಮಧ್ಯೆ ಹಕ್ಕಿ ಕಂಡಾಗ ನಿಲ್ಲಿಸುತ್ತಿದ್ದುದರಿಂದ ಮಧ್ಯಾಹ್ನದ ಹೊತ್ತಿಗೆ ಉಕ್ರುಲ್ ತಲುಪಿದೆವು. ಉಕ್ರುಲ್ ದಾರಿಯಲ್ಲಿ ಒಂದೆರಡು ಲೈಫರಾಗಿ Fire Breasted Flower Pecker male-female, Black Crested Bulbul ಸಿಕ್ಕಿದವು, ಅಂದರೆ ಸಿಕ್ಕಿದವು ಅಷ್ಟೆ, ಸರಿಯಾಗಿ ಕ್ಲಿಕ್ಕಾಗಲಿಲ್ಲ.

ಉಕ್ರುಲ್‌ನಲ್ಲಿ ನಾವು ಕಾಲಿಟ್ಟ ಕಾಲಕ್ಕೆ ಅಥವಾ ನಮ್ಮ ಕಾಲ್ಗುಣಕ್ಕೆ ಪುಂಖಾನುಪುಂಖವಾಗಿ ಸಮಸ್ಯೆಗಳು ಶುರುವಾದವು. ಉಕ್ರುಲ್ಗೆ ಉಕ್ರುಲ್ಲೇ ಸಂಪೂರ್ಣವಾಗಿ ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿತ್ತು. ಅಲ್ಲಿಗೆ ತಲುಪಿದ ದಿನ ದೊಡ್ಡ ಜಾತ್ರೆಯಂತೆ ಚರ್ಚಿಗೆ ಹೋಗಿ ಬರುವವರ ಸಂಭ್ರಮವೋ ಸಂಭ್ರಮ. ನಮ್ಮ ನೋಟಕ್ಕೆ ಪರಮಾಕರ್ಷಣೆ ಅವರ ದಿರುಸುಗಳ ಸೊಗಸು. ಮಣಿಪುರಕ್ಕೆ ಬಂದಿಳಿದಾಗಲೇ ಅವರ ವೇಷಭೂಷಣಗಳನ್ನು ಕಣ್ತುಂಬಿಕೊಳ್ಳಲಾರಂಭಿಸಿದ್ದೆ. ಉಕ್ರುಲ್ಲಿನಲ್ಲಿ ಹೆಚ್ಚು ಹೊತ್ತು ಊರಿನಲ್ಲಿ ಅಡ್ಡಾಡಿದ ಕಾರಣ ಮತ್ತಷ್ಟು ಅವಕಾಶ ಸಿಕ್ಕಿತು. ಹಬ್ಬಕ್ಕಾಗಿ ಚರ್ಚಿಗೆ ಹೋಗುವ, ಹಬ್ಬಕ್ಕೆಂದೇ ಏರ್ಪಡಿಸಿದ್ದ ಫುಟ್‌ಬಾಲ್ ಪಂದ್ಯ ನೋಡಲು ಉತ್ಸಾಹದಿಂದ ಕೂಡಿದ್ದ ಜನಜಂಗುಳಿ. ಆದರೆ ಅಲ್ಲಿಗೆ ಅಂದು ಹೋಗಿದ್ದ ನಮ್ಮಂತ ಬಡಪಾಯಿಗಳಿಗೆ ಊಟೋಪಚಾರಕ್ಕೆ ಬೇಕಾದ ಜಾಗ ಇರಲಿಲ್ಲ. ಎಲ್ಲರೂ ಕ್ರಿಸ್ಮಸ್ ಆಚರಣೆಗೆ ರಜಾ ಮಾಡಿಕೊಂಡಿದ್ದರು. ಮೊದಲನೆಯ ದಿನವೇ ಊಟಕ್ಕೆ ಹುಡಕಾಟ. ಕೊನೆಗೆ ಒಂದೆಡೆ ಊಟ ಇದೆ, ಆದರೆ ಎರಡನೆಯ ಮಹಡಿಯಲ್ಲಿ ಎಂದರು. ನನಗೆ ಗಾಡಿಗೆ ತಂದುಕೊಟ್ಟರು. ವಸತಿಯ ಬಗ್ಗೆ ತಕರಾರಿರಲಿಲ್ಲ, ಅನುಕೂಲವೂ ಇತ್ತು. ಸಮಸ್ಯೆ ಎಂದರೆ ವಸತಿ ಜಾಗದಲ್ಲಿ ಊಟ-ತಿಂಡಿ ಇರಲಿಲ್ಲ. ಒಂದು ಕಿ.ಮೀ. ದೂರ ಹೋಗಿ ಅಲ್ಲಿದ್ದ ಹೊಟೇಲಿನಲ್ಲಿ ಎರಡು ಮಹಡಿ ಹತ್ತಿ ತಿಂದು ಬರಬೇಕಿತ್ತು. ಡಿಸೆಂಬರ್ ತಿಂಗಳ ಚಳಿ, ಸ್ವೆಟರ್ ಮೇಲೆ ಸ್ವೆಟರ್ ಹಾಕಿದ್ದರೂ ಚಳಿ ಆವರಿಸಿ ಆಚೆ ಅಲೆಯಲಿಲ್ಲ. ಅವರು ಉಂಡು ನನಗೂ ತಂದುಕೊಡುತ್ತಿದ್ದರು.

ಉಕ್ರುಲ್‌ನಲ್ಲಿ ಉಳಿದುಕೊಂಡರೂ ಅಲ್ಲಿ ಹಕ್ಕಿ ಶೂಟಿಂಗ್ ಸೆಷನ್ ನಡೆಯಲೇ ಇಲ್ಲ. ನಾವಲ್ಲಿದ್ದಷ್ಟೂ ದಿನ ನಮ್ಮ ಹಕ್ಕಿ ಓಡಾಟ ಇಂಫಾಲ-ಕೊಹಿಮಾದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಉಕ್ರುಲಿನಿಂದ ಹದಿನೈದು ಕಿ.ಮೀ ದೂರವಿದ್ದ ಶಿರೋಯ್ ಕಡೆಗೆ ಮಾತ್ರ ಆಗಿತ್ತು. ಶಿರೋಯ್ ಪುಟ್ಟ ಹಳ್ಳಿಯಾಗಿದ್ದರೂ ಅದರ ಸನಿಹದಲ್ಲಿದ್ದ ಈ ಶಿರೋಯಿಯ ಗುಡ್ಡಗಳ ಇಳಿಜಾರಿನಲ್ಲಿ ಮೇ ತಿಂಗಳಲ್ಲಿ ಮಣಿಪುರದ State flower ಆದ ಶಿರೋಯ್ ಲಿಲಿ ಅರಳುವುದೇ ವಿಶೇಷ ಆಕರ್ಷಣೆ. ಮೇ ಮಾಸದಲ್ಲಿ ಒಂದು ವಾರ ರಾಜ್ಯಮಟ್ಟದ ಶಿರೋಯ್ ಲಿಲಿ ಉತ್ಸವವನ್ನೂ ಮಾಡುತ್ತಾರೆ. ಆದರೆ ನಾವು ಬಂದದ್ದೇ ಡಿಸೆಂಬರಿನಲ್ಲಿ, ಲಿಲಿಯನ್ನೂ ಕಾಣಲಿಲ್ಲ, ಉತ್ಸವವನ್ನೂ ನೋಡಲಿಲ್ಲ.

ನಾವು ಉಕ್ರುಲ್‌ಗೆ ಬಂದ ದಿನ ಮಧ್ಯಾಹ್ನ ಒಂದೇ ಸೆಷನ್ನಿನಲ್ಲಿ Spot Breasted Parrotbill ಸಿಕ್ಕಿಯೇ ಬಿಟ್ಟಿತು. ಒಂದು ಚಂದದ ಹಕ್ಕಿ ಶಿರೋಯಿಯಲ್ಲಿ ಮೊದಲ ದಿನವೇ ಸಿಕ್ಕಿತೆಂಬ ಸಮಾಧಾನ ಮನಸಿಗೆ. ಮರುದಿನ ಬೆಳಿಗ್ಗೆ ಐದು ಗಂಟೆಯ ಚಳಿಯ ಮಬ್ಬಿನಲ್ಲಿ ಶಿರೋಯ್‌ಗೆ ಹೊರಟೆವು. ದಿನದ ಬಹುತೇಕ ಸಮಯ ಅಲ್ಲೇ. ಊಟತಿಂಡಿ ಅಲ್ಲಿಗೆ ಬರುತ್ತಿತ್ತು. ಎಷ್ಟೊಂದು ಹಕ್ಕಿಗಳನ್ನು ಸೆರೆ ಹಿಡಿಯಬಹುದಿತ್ತು. ಆದರೆ ಹಾಗಾಗಲಿಲ್ಲ.

ಶಿರೋಯ್ ಗುಡ್ಡದಲ್ಲಿ ಲೋಕೋಪಯೋಗಿ ಇಲಾಖೆಯ ಐ.ಬಿ. ಇತ್ತು. ಅದರ ಪಕ್ಕದಲ್ಲಿ ಸುಟ್ಟು ಹೋಗಿದ್ದ ಕಟ್ಟಡದಲ್ಲಿ ನಿಸರ್ಗದ ಕರೆ ತೀರಿಸಿಕೊಳ್ಳಲು ಒಂದು ನೆಲೆ ಅಲ್ಲಿದ್ದರಿಂದ ಅಷ್ಟರಮಟ್ಟಿಗೆ ಆ ಸಮಸ್ಯೆ ಪರಿಹಾರವಾಗಿತ್ತು. ಈ ತಾಣದಲ್ಲಿ ಹಕ್ಕಿಗಳು ಬರುತ್ತವೆ, ಹೆಚ್ಚು ನಡೆಯಲಾಗದ ನೀವಿಲ್ಲಿ ಕಾಯುತ್ತಿದ್ದರೆ ಸೂಕ್ತವೆಂದು ಹೇಳಿದ ಗೈಡ್ ನನ್ನನ್ನು ಅಲ್ಲಿ ಪ್ರತಿಷ್ಠಾಪಿಸಿದ್ದರಿಂದ ನಾನು ಅಲ್ಲಿಯೆ ಕುಳಿತೋ, ಅಡ್ಡಾಡಿಯೋ ಆ ಅಡ್ಡಾದಲ್ಲಿಯೇ ಹಕ್ಕಿಗಳಿಗೆ ಕಾಯತ್ತಿದ್ದೆ. ಗುಡ್ಡಕ್ಕೆ ಏರುವ ಮುನ್ನ ಇದ್ದ ತಿರುವಿನ ರಸ್ತೆಯಲ್ಲಿ ಮೂರ್ನಾಲ್ಕು ಕಿಮೀ ಒಳಗೆ ನಡೆದರೆ ಹಕ್ಕಿಗಳು ಸಿಗುತ್ತವೆಂಬ ಗೈಡ್ ಮಾತನ್ನು ನಂಬಿ ಎರಡು ದಿನ ಉಳಿದವರು ಅಷ್ಟು ದೂರ ನಡೆದು ಹೋಗಿಯೂ ಸರಿಯಾಗಿ ಹಕ್ಕಿಗಳು ಸಿಗಲಿಲ್ಲ ಎಂದು ಶಾಪ ಹಾಕುತ್ತಿದ್ದರು, ಶಾಪಕ್ಕೇನೂ ಶಕ್ತಿ ಇಲ್ಲದಿದ್ದರೂ.

ಅಭಿಷೇಕ್ ಜಾಗ ತೋರಿಸಿ ಹೊರಟುಹೋಗಿದ್ದ. ನಾನು ಏಕಾಂಗಿಯಾಗಿ ಗುಡ್ಡದ ಭೂತದ ತರಹಕ್ಕೆ ಗುಡ್ಡದಲ್ಲಿ ನೂರಿನ್ನೂರು ಮೀಟರಿನೊಳಗೆ ಅಡ್ಡಾಡಿ ಹಕ್ಕಿಗಾಗಿ ಕಾಯುತ್ತಿದ್ದೆ. Canon mark 5D 3 full frame body ಹಾಕುವ ಬದಲಿಗೆ mark 7D 2 ಕ್ರಾಪ್‌ಬಾಡಿ ಹಾಕಿ ಹಕ್ಕಿಯನ್ನು ಹಿಡಿದೇ ಹಿಡಿಯುವ ತಯಾರಿಯಲ್ಲಿದ್ದೆ. ಹತ್ತಿರಕ್ಕೆ 100-400, ದೂರಕ್ಕೆ 600 ಪ್ರೈಮ್ಗೆ 1.4 ಟಿ.ಸಿ ಹಾಕಿ ಸಜ್ಜಾಗಿದ್ದೆ. ಜೊತೆಗೊಂದು ನೀರಿನ ಬಾಟಲ್. ಬೆಳಿಗ್ಗೆ ಭಯಂಕರ ಚಳಿ. ಆದರೆ ಈ ಚಳಿ ಮನೆಮಾರು ಹತ್ತೋಗ ಎಂದು ಬೈದುಕೊಳ್ಳುವಷ್ಟರಲ್ಲಿ ಏಳೂವರೆಗೆ ಭಯಂಕರ ಬಿಸಿಲು ಆವರಿಸಿಕೊಂಡು, ಬಂದ ಹಕ್ಕಿಗಳನ್ನು ಕ್ಲಿಕ್ ಹೊಡೆದರೆ ಈ ಹಾರ್ಷ್ ಬೆಳಕಿನಲ್ಲಿ ಸುಟ್ಟು ಕೆಟ್ಟದಾಗಿ ಕಾಣುತ್ತಿದ್ದವು.

I.Bಯ ಹಿಂದೆ ಕಾಯುತ್ತಿದ್ದಾಗ Fire tailed sun bird ಗಂಡು-ಹೆಣ್ಣು ಎರಡೂ ಕಾಣಸಿಕ್ಕಿದವು. ಒಂದು ಪೊದೆಗೆ ಬರುತ್ತಲೇ ಇತ್ತು. ನಾನೂ ಸಮಾರು ಇನ್ನೂರಕ್ಕೂ ಹೆಚ್ಚು ಶಾಟ್ ಹೊಡೆದೆ. ಆದರೆ ಅದು breeding season ಆಗಿಲ್ಲದೆ ಇದ್ದುದ್ದರಿಂದ ಗಂಡಿಗೆ ಯಾವ ಸೊಬಗೂ ಕಾಣುತ್ತಿರಲಿಲ್ಲ. ಮತ್ತೆ ಮತ್ತೆ ಅದನ್ನೇ ಹೊಡೆದು ಮತ್ತೇನು ಮಾಡುವುದೆಂದು ಕಣ್ಣಾಡಿಸುತ್ತಿದ್ದಾಗ LittleBunting ಸಣ್ಣಕಡ್ಡಿಯ ಮೇಲೆ ಕಾಣಿಸಿತು. ಆದರೆ ಅದು ಕುಳಿತಿದ್ದ ಸಣ್ಣಕಡ್ಡಿಯ ಸುತ್ತಾ ಇನ್ನಷ್ಟು ದೊಡ್ಡ ಕಡ್ಡಿಗಳ ಬಂಟಿಂಗ್ ಇದ್ದ ಕಾರಣ ಕಡ್ಡಿಗಳ ನಡುವೆ ಲಿಟಲ್ ಬಂಟಿಂಗ್ ಕಂಡೂ ಕಾಣದಂತೆ ಬಂದಿತ್ತು. ಸ್ವಲ್ಪ ಮೇಲೆ ಬರಲಿ, ಸ್ವಲ್ಪ ಈ ಕಡೆ ಬರಲೆಂದು ಕಾದ್ದದ್ದೇ ಕಾದದ್ದು, ಆದರದು ನನ್ನ ಕೋರಿಕೆಯನ್ನು ಅಣು ಮಾತ್ರವೂ ಮನ್ನಿಸದೆ ಸಂಧಿಯಿಂದ ಹಾಗೆ ಪುರ್ರೆಂದು ಹಾರಿಹೋಯಿತು.  

ದೂರದ ಚರ್ಚುಗಳಿಂದ ಸತತವಾಗಿ ಪ್ರಾರ್ಥನೆಗಳು ಮೈಕಾಸುರನ ಮುಖಾಂತರ ಕಿವಿದೆರೆಗೆ ಬಿದ್ದು ನೀವು ಕಾಡಿನಲ್ಲಿಲ್ಲ, ನಾಡಂಚಿನಲ್ಲೇ ಇದ್ದೀರೆಂದು ಸಾರುತ್ತಿದ್ದವು. ಕಟ್ಟಡದ ಮುಂಭಾಗಕ್ಕೆ ಬಂದೆ, ಮುಂದಾದರೂ ಏನಾದರೂ ಕಾಣಸಿಕ್ಕೀತೆಂದು. ಹಣ್ಣು ಬಿಡುವ ಮರವೊಂದಿತ್ತು ಸ್ವಲ್ಪ ದೂರದಲ್ಲಿ. ಅದಕ್ಕೆ ಆಗಾಗ ಹಕ್ಕಿ ಬರುತ್ತಿದ್ದವು. ಸರಿ, ಅತ್ತ ಕ್ಯಾಮೆರಾ ಮೂತಿ ಮತ್ತು ನನ್ನ ಮೂತಿ ಎರಡನ್ನೂ ತಿರುಗಿಸಿದೆ. ಒಂದೆರಡು ಫೋಟೊ ತೆಗೆದು ನೋಡ್ತಿನಿ ನಾ ತೆಗೆದ ಹಕ್ಕಿಗಳು ಚುಕ್ಕಿಗಳಾಗಿ ಕಾಣುತ್ತಿದ್ದವು, ಇಳಿದು ಹತ್ತಿರಕ್ಕೆ ಹೋಗೋಣ ಎಂದರೆ ಪೂರಾ ಇಳಿಜಾರು-ಜಾರುವಂತೆಯೇ ಇತ್ತು. ʻನೀ ಹತ್ತಿರ ಸಿಕ್ಕಿದ್ದರೆ, ಹಕ್ಕಿ ನೀ ನನ್ನ ಕ್ಯಾಮೆರಾಗೆ ಸಿಕ್ಕಿದ್ದರೆ ಎಂತ ಚಂದವೋ, ಏನು ಅಂದವೋ…ʼ ಎಂದು ಮಾತ್ರ ಹಾಡಿಕೊಳ್ಳುತ್ತಿದ್ದೆ. ಏನಾದರೂ ಸರಿಯೆ ಹೇಗೆ ಬಂದರೂ ಸರಿಯೆ ಲೀಲಾ ತೆಗೆ ನೀ ಚಿತ್ರ ತೆಗೆ ಎಂದು ಸಮಾಧಾನಿಸಿಕೊಂಡು ಆ ಮರ, ಅಕ್ಕಪಕ್ಕದ ಗಿಡ ಪೊದೆಗಳೆಡೆಗೆ ನೋಟ ಬೀರುತ್ತಾ ಬಂದದ್ದನ್ನು ಬಂದಂತೆ ಕ್ಲಿಕ್ ಮಾಡಿದೆ.

ಮೂರು ದಿನ ಮಸುಕು ನಸುಕಿನ ಬೆಳಗಿನ ಐದು-ಐದೂವರೆಯ ಹೊತ್ತಿಗೆ ಶಿರೊಯಿಯಲ್ಲಿ ನಮ್ಮ ಝಾಂಡಾ ಊರಿದರೆ ಸಂಜೆಗೆ ಮರಳಿ ಹೋಗುತ್ತಿದ್ದೆವು. ಅಲ್ಲೆ, ಅಲ್ಲಲ್ಲೆ ಹಕ್ಕಿ ಹುಡುಕಾಡುತ್ತಿದ್ದೆವು. Streak Breasted Scimitar Babbler, Assam laughing thrush, Blue Fronted redstart Female, Flavescent Bulbul, Crested Finch Bill, Grey Sibia ಇವಿಷ್ಟೂ ಹಕ್ಕಿಗಳು ಅಲ್ಲಿ ಸಿಕ್ಕವು. ಈ ಇಷ್ಟೂ ಹಕ್ಕಿಗಳೂ ನನಗೆ ಲೈಫರ್ ಆಗಿದ್ದವು.

ನಾವು ಫೋಟೋಗಾಗಿ ಹಕ್ಕಿ ಹುಡುಕುತ್ತಿದ್ದರೆ, ನಮ್ಮಂತೆಯೇ ಹಕ್ಕಿ ಹುಡುಕುತ್ತಿದ್ದ ಇನ್ನೂ ಕೆಲವರೂ ಅಲ್ಲಿ ಸಿಕ್ಕರು. ಬಿದಿರಿನ ಕೂಣಿಯನ್ನು ಬೆನ್ನಿಗೆ ಕಟ್ಟಿಕೊಂಡು, ಹಿಂದೆ ಗನ್ನನ್ನೂ ಸಿಕ್ಕಿಸಿಕೊಂಡ ಇಬ್ಬರು ನಾವಿದ್ದ ತಾಣಕ್ಕೆ ಅಡ್ಡಾಡಿಕೊಂಡು ಬಂದರು. ಅವರು ಶಿರೋಯಿ ಗುಡ್ಡದ ಮೇಲ್ಬಾಗಕ್ಕೆ ಹೋಗಿದ್ದವರು. ಕುತೂಹಲದಿಂದ ವಿಚಾರಿಸಿದಾಗ ಹಕ್ಕಿಗಳ ಬೇಟೆಗೆ ಹೋಗಿದ್ದೆವೆಂದು ತಿಳಿಸಿದರು. ನಾವು ಕಣ್ಣಲ್ಲಿ ಕಣ್ಣಿಟ್ಟು ಚಿತ್ರ ತೆಗೆಯಲು ಹಕ್ಕಿ ಹುಡುಕಿದರೆ ಅವರು ಗನ್ನಲ್ಲಿ ಕಣ್ಣಿಟ್ಟು ಹಕ್ಕಿ ಹೊಡೆದು ತರುತ್ತಿದ್ದರು. ಮಣಿಪುರದಲ್ಲಿ ಹಕ್ಕಿಬೇಟೆಗೆ ನಿಷೇಧವಿಲ್ಲ ಎಂದೂ ಕೇಳಿದ ನೆನಪು. ಹಬ್ಬದ ಸಂದರ್ಭವಾದ್ದರಿಂದ ಹಕ್ಕಿಬೇಟೆ ಮತ್ತೂ ತುರುಸಿನಲ್ಲಿತ್ತು. ನಾವು ಸನ್‌ಬರ್ಡ್ ಹಿಂದೆ ಬಿದ್ದಿದ್ದರೆ ಮಣಿಪುರದಲ್ಲಿ ಸನ್‌ಬರ್ಡ್ ಚಟ್ನಿ ಮಾಡುತ್ತಾರೆಂದೂ ತಿಳಿಸಿದರು. ಮಣಿಪುರದ ಹೊಟೇಲುಗಳೆಂದರೆ ಪೂರಾ ನಾನ್‌ವೆಜ್ಜುಗಳೇ, ಅದರಲ್ಲೂ ಇಂತಹ ಹಕ್ಕಿಗಳ ಖಾದ್ಯವೂ ಕೆಲವು ಸೇರಿರುತ್ತಿತ್ತು. ಆಹಾರ ಅವರವರ ಸಂಪ್ರದಾಯ, ಅಭ್ಯಾಸ, ಖಾಯಿಷ್ ಅಲ್ವಾ. ಏನು ಮಾಡೋದು, ಯಾರದ್ದು ತಪ್ಪು, ಯಾರದ್ದು ಸರಿ ಅಂತಾ ಹೇಗೆ ಹೇಳೋದು ಹೇಳಿ!

ಒಂದು ಬೆಳಿಗ್ಗೆ ಮಾತ್ರ ಅವರೆಲ್ಲ ಇಳಿದ ಬಳಿಕ ನಾನು ಗುಡ್ಡದ ಮೇಲೆ ಹೋಗುವ ಬದಲು ಇದೇ ರಸ್ತೆಯಲ್ಲಿ ಒಂದಷ್ಟು ದೂರ ಹೋಗಿ ಬರುತ್ತೇನೆಂದು ಹೇಳಿ ಜೆಸ್ಸಾಮಿ ರಸ್ತೆಯಲ್ಲಿ ಹತ್ತು-ಹದಿನೈದು ಕಿ.ಮೀ. ಮುಂದೆ ಮುಂದೆ ಹೋದೆ. ನಮ್ಮ ವ್ಯಾನಿನ ಡ್ರೈವರ್ ಗಾಡಿ ಬಿಡುವಾಗಲೂ ಸೇರಿದಂತೆ ಮೂರೂ ಹೊತ್ತೂ ಫೋನಿನಲ್ಲೇ ಮುಳುಮುಳುಗಿ ಹೋಗಿದ್ದ. ಹಬ್ಬದ ಹೊತ್ತಿನಲ್ಲಿ ಮನೆ ಬಿಟ್ಟಿರಬೇಕಾದ ಅವಸ್ಥೆಯ ಬಗ್ಗೆ ಸಂಕಟದಿಂದ ನನಗರ್ಥವಾಗದ ಭಾಷೆಯಲ್ಲಿ ಹೆಂಡತಿ ಬಳಿ ತೋಡಿಕೊಳ್ಳುತ್ತಿದ್ದ. ಮಾತೇ ಬಾರದ ತನ್ನ ಏಕಮಾತ್ರ ಪುತ್ರನ ಬಳಿ ಮಾತಾಡಿದ್ದೂ ಮಾತಾಡಿದ್ದೆ. ನನಗೆ ಭಾಷೆ ಅರ್ಥವಾಗದೇ ಇದ್ದರೂ ಅವನ ಮುಖಭಾವಗಳಿಂದ ವಿಷಯ ಹಿಡಿತಕ್ಕೆ ಸಿಕ್ಕುತ್ತಿತ್ತು. ಜೆಸ್ಸಾಮಿ ರಸ್ತೆಯಲ್ಲಿ ಹೋದ ದಿನವೂ ಡ್ರೈವರ್ ಫೋನಿನಲ್ಲಿಯೇ ಮಗ್ನನಾಗಿದ್ದರಿಂದ ಹೇಳಿದ ಕಡೆ ನಿಲ್ಲಿಸುವ ಬದಲು ಇನ್ನಿಷ್ಟು ಮುಂದೆ ನಿಲ್ಲಿಸುತ್ತಿದ್ದ, ಅಲ್ಲಲ್ಲಿ ಹಕ್ಕಿಗಳಿದ್ದರೂ ವಿಂಗರ್ ಗಾಡಿ ನಿಲ್ಲಿಸಿ, ಸ್ಟೂಲ್ ಹಾಕಿಸಿಕೊಂಡು ಇಳಿದು ಕ್ಯಾಮೆರಾ ಕೈಗೆತ್ತಿಕೊಳ್ಳುವ ವೇಳೆಗೆ ಕಂಡ ಹಕ್ಕಿಗಳು ಹಾರಿಹೋಗುತ್ತಿದ್ದವು. ಜೆಸ್ಸಾಮಿ ರಸ್ತೆಯ ಓಡಾಟದಲ್ಲಿ ಕಂಡವೆಲ್ಲಾ ಕಂಡಿದ್ದ ಹಕ್ಕಿಗಳು. ಅದರಲ್ಲೂ ಬಿಸಿಲಿನಲ್ಲಿ ಹಿಡಿದ ಹಕ್ಕಿ ಚಿತ್ರಗಳನ್ನು ಆ ಹಕ್ಕಿಗಳೇನಾದರೂ ನೋಡಿದ್ದರೆ ಕೊಕ್ಕಿನಿಂದ ಕುಕ್ಕಿಕುಕ್ಕಿ ನನ್ನನ್ನೂ ನನ್ನ ಕ್ಯಾಮರಾವನ್ನು ಚಿಂದಿ ಉಡಾಯಿಸುತ್ತಿದ್ದವು. ಕೊನೆಗೆ ವಿಧಿ ಇಲ್ಲದೆ ಜೆಸ್ಸಾಮಿ ರಸ್ತೆಯ ಜೈತ್ರಯಾತ್ರೆ ಮುಗಿಸಿ ಯಥಾಪ್ರಕಾರ ಶಿರೋಯ್ ಗುಡ್ಡವನ್ನೇ ಏರಿದ್ದೆ, ಗಾಡಿಯಲ್ಲಿ. ಬೆಟ್ಟದಲ್ಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ ಎಂದು ಅಕ್ಕಮಹಾದೇವಿ ಕೇಳಿದ್ದರೂ ನಾನು ಬೆಟ್ಟದ ಮೇಲಿದ್ದ ಪರಿವೀಕ್ಷಣಾ ಮನೆಯ ಸುತ್ತಮುತ್ತ ಠಳಾಯಿಸಿದ್ದೆ ಮೃಗಗಳಿಗಂಜದೆ. ಮೃಗಗಳೂ ನನಗಂಜಿ ಅಲ್ಲಿಗೆ ಬರಲಿಲ್ಲ, ಕೊನೆಗೆ ಹಕ್ಕಿಗಳೂ ಸಹ.

ಮೂರು ದಿನಗಳ ಬಳಿಕ ಮತ್ತೆ ಉಕ್ರುಲ್‌ನಿಂದ ಇಂಫಾಲ ಕಡೆಗೆ ಮರುಪಯಣ. ಉಕ್ರುಲ್‌ಗೆ ಉಕ್ರುಲ್ ರಜಾದಲ್ಲಿತ್ತು. ವಾಹನಗಳಿಗೆ ಇಂಧನ ಸಿಗುವುದೂ ಕಷ್ಟವಿತ್ತು. ನಮ್ಮ ಉದರಗಳ ಇಂಧನಕ್ಕೆ ಇನ್ನೂ ಅಧ್ವಾನವೇ. ಎಲ್ಲರಿಗೂ ಅಭೀಷೇಕ್ ಚಿಪ್ಸ್ ಪ್ಯಾಕ್ ಕೊಡಿಸಿದ, ಅದೇ ಒಂದು ತಿಂಡಿ ಎಂಬಂತೆ. ದಾರಿಯಲ್ಲಿ ಒಂದು ಕಡೆ ಕಡಲೆಕಾಳಿನ ಉಸಲಿ ಸಿಕ್ಕಿತು. ಸಿಕ್ಕಿದ್ದನ್ನೇ ಮುಕ್ಕಿ ಇಂಫಾಲ ಸೇರಿ ರೆಸಾರ್ಟ್ ತಲುಪಿ ತಿಂದು ಮುದುರಿಕೊಂಡೆವು. ಮತ್ತೆ ಮರುದಿನ ಬೆಳಿಗ್ಗೆ ಇಂಫಾಲದ ಹೊರವಲಯದ ಅದೇ ಜೌಗು ಪ್ರದೇಶ ಸೇರಿ, ಮತ್ತದೇ ಸುತ್ತಾಟ ಮಾಡಿದೆವು ಅಷ್ಟೆ. ಆ ದಿನ ನಮ್ಮ ರೆಸಾರ್ಟಿನ ಮಾಲೀಕರ ಮನೆಯಲ್ಲಿ ಪಿತೃಶ್ರಾದ್ಧದ ಕಾರ್ಯಕ್ರಮ. ನಂಟರಿಷ್ಟರೆಲ್ಲ ಸೇರಿ ಆಚರಿಸುತ್ತಿದ್ದ ಕಾರ್ಯವಾಗಿದ್ದ ಕಾರಣ ಮಧ್ಯಾಹ್ನ ಊಟವಿಲ್ಲ ಎಂದು ಮೊದಲೇ ಸೂಚನೆ ಕೊಟ್ಟಿದ್ದರು. ವಿಮಾನನಿಲ್ದಾಣದ ದಾರಿಯಲ್ಲಿ ಇಕ್ಕಟ್ಟಿನ ರಶ್ ಇದ್ದ ಹೊಟೇಲಲ್ಲಿ ನಾನ್‌ವೆಜ್ಜಿನ ನಡುವೆ ವೆಜ್ ತಿಂದು ಮಣಿಪುರದಿಂದ ಪಾರಾಗಲು ನಿಲ್ದಾಣ ಸೇರಿ ಹಾರಿ ಬೆಂಗಳೂರಿಗೆ ಬಂದಿಳಿದೆ.

ಮಣಿಪುರದಲ್ಲಿ ಹಕ್ಕಿಗಳು ಸಿಗಲಿಲ್ಲ ಎಂದಲ್ಲ. ನನಗೆ ಹತ್ತೊಂಬತ್ತು ಲೈಫರ್ ಸಿಕ್ಕವು. ಇದೇನು ಕಡಿಮೆ ಸಂಖ್ಯೆಯಲ್ಲ. ಇದಕ್ಕಿಂತ ಹೆಚ್ಚು ದಿನ ಹೋಗಿ ಇದಕ್ಕಿಂತ ಕಡಿಮೆ ಲೈಫರ್ ಸಿಕ್ಕ ಸಂದರ್ಭವೂ ಇವೆ. ಆದರೆ ಒಂದಾದರೂ ಹಕ್ಕಿಯ ಪರಿಪೂರ್ಣ ಚಿತ್ರ ಸಿಗಬೇಕು ಎನ್ನೋದೆ ಛಾಯಾಚಿತ್ರಗ್ರಾಹಕರ ನಿರೀಕ್ಷೆ. ಮಣಿಪುರದಲ್ಲಿ ಅದಾಗಲಿಲ್ಲ ಎಂಬ ಬೇಸರ ಅಷ್ಟೆ. ಸಿಕ್ಕ ಹಕ್ಕಿಗಳದ್ದೇ ಕೆಲವು ಕ್ಲಿಕ್ ಚೆನ್ನಾಗಿರುವಂತಹವು ಸಿಕ್ಕಿದ್ದರೆ ಸಮಾಧಾನ ಆಗಿರುತ್ತಿತ್ತು ಅಷ್ಟೆ.

ಅಭಿಷೇಕ್ ನಮಗೆ ವಾಹನ ವಸತಿ ಸುವ್ಯವಸ್ಥೆಗೆ ಇನ್ನಷ್ಟು ಗಮನ ಕೊಡಬೇಕಿತ್ತೆಂಬ ಅಸಮಾಧಾನದ ಹೊಗೆಗೆ ಜೊತೆಯಾಗಿ ಸರಿಯಾಗಿ ಹಕ್ಕಿಗಳು ಸಿಗುವ ಜಾಗದ ಬಗ್ಗೆ ಮಾಹಿತಿ ಕೊಡಬೇಕಿತ್ತು ಎಂಬ ಸಿಟ್ಟಂತೂ ಕೊನೆಯವರೆಗೂ ಉಳಿಯಿತು. ಊರಿಗೆ ಬಂದರೂ ಮಣಿಪುರದ ಬೇಸರ ಹೋಗಲೇ ಇಲ್ಲ, ಹೋಗಿಯೂ ಇಲ್ಲ. ಯಾಕೆಂದರೆ ಕನಸಿನಲ್ಲೂ ಹಕ್ಕಿ ಕನಸನ್ನು ಮಾತ್ರ ಕಾಣುವ ನಮಗೆ ದುಡಿದ ದುಡ್ಡು, ಹಾಕಿದ ಶ್ರಮ ಹೋಗಲಿ ನಾವು ಹೋದದ್ದಕ್ಕಾದರೂ ಹಕ್ಕಿ ಸಿಕ್ಕದಿದ್ದರೆ ಸಿಟ್ಟಿನ ಸಿಡಿಗುಂಡು ಸಿಡಿಯದೇ ಇದ್ದೀತೆ. ಹೋದಾಗ ಹಕ್ಕಿ ಸಿಗದಿದ್ದಾಗ ಮತ್ತೊಮ್ಮೆ ಬರುವ ಆಸೆಯನ್ನು ಬೆನ್ನಿಗೆ ಕಟ್ಟಿಕೊಂಡೇ ಹಿಂದಿರುಗುತ್ತೇವೆ. ಮತ್ತೊಮ್ಮೆ ಹೋಗಲು ಪ್ರಯತ್ನಿಸುತ್ತೇವೆ. ಆದರೆ ಮಣಿಪುರ ಅಂತಹ ಆಸೆ ಹುಟ್ಟಲು ಅವಕಾಶ ಕೊಡಲಿಲ್ಲ ಎನ್ನುವುದೇ ಬೇಸರದ ಸಂಗತಿ.

‍ಲೇಖಕರು avadhi

August 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: