ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿರಸೂರ ಗಿರಿಯಪ್ಪ ಕವಿತೆ: ಗೋಣಿಚೀಲದ ಕರುಣೆ

ಕಿರಸೂರ ಗಿರಿಯಪ್ಪ

ಇತಿಹಾಸದ ತೆವಲಿಗೆ ಸಿಲುಕಿ ಆಹುತಿಯಾದ
ಬಿರುಕ ಗೋಡೆಯ ನಡುವೆ
ಈಗೀಗ ಇಲಿ ಹೆಗ್ಗಣಗಳ ಗುದ್ದಾಟ
ಮತ್ತೂ
ಮನೆಯ ಹೊಕ್ಕ ಇಣಚಿ ಬೆಂಬಿಡದೆ ಕಾಡುವ ಇರುವೆಯ
ಬಾಯಿಗೆ ಹರಿದು ಚಿಂದಿಯಾದ ಗೋಣಿಚೀಲ
ಚಳಿಗೆ ನಡಗುವ ಮುದಿ ನಾಯಿಯ ಬೆನ್ನಿಗೆ ಅರವಟ್ಟಿಗೆ ತಾಣ

ಜಿಟಿ ಜಿಟಿ ಮಳೆಯಲಿ ನೆನೆಗುದಿಗೆ ಬಿದ್ದ
ಗುಡಿಸಲ ಕಿಂಡಿಗೆ ಬೆಸುಗೆಯಾದ ಗೋಣಿಚೀಲ
ಮನೆಯಂಗಳ ಹೊಕ್ಕು ಕೆರೆಯಂತಾದ ನೆಲದ ಹಸಿ ಹೀರಿ
ಮೈ ಗಾಯಗಳ ಜಾಡಿಸಲು ಬೇಲಿಯ ಮ್ಯಾಲೆ ಅಂಗಾತ ಮಲಗಿ
ಮೈಯೊಡ್ಡಿಕೊಂಡಿದೆ ಬಿಸಿಲ ತೆಕ್ಕೆಗೆ

ಕೋಳಿ ಹಿಂಡಿನ ಮರಿಗಳಿಗೆ ಬೆಚ್ಚನೆಯ ಕಾವು ನೀಡಿ
ಹುಲ್ಲಿನೆಳೆಗಳ ಹೊಟ್ಟು ತುಂಬಿಕೊಂಡು
ಕತ್ತೆಯ ಬೆನ್ನು ದನದ ಹಸಿವಿನ ಹೊರೆ ತಣಿಸಲು
ನಿತ್ಯ ಕಾಯ್ವದು ಕಾಲಡಿಯಲಿ

ಕುರಿಗಳ ಹಿಂದೆ ಅಲೆವರ  ಹೆಗಲ ಮ್ಯಾಲೆ
ಹಮಾಲರ ಬೆನ್ನ ಮೇಲೆ ಚುಕ್ಕಿಗಳ ಹೊಲಿಗೆಯಾಗಿ
ಚಿಂದಿ ಆಯುವ ಜೊಳಿಗೆಯಲಿ ಭವಿಷ್ಯದ ನಿಧಿಯಾಗಿ
ಗೋಚರಿಸುವ ಅವಳು
ಕಾಳು ತೆನೆಗಳ ಮೈತುಂಬಿಸಿಕೊಂಡು
ಕುಣಿದಾಳೋ
ಕಣದ ರಾಶಿಯ ಅಂಗಳದೊಳಗೆ

ಬರಿ ಮೈಗೆ ತೇಪೆಯಾಗಿ ಗೋಚರಿಸೋ
ಅವಳ ತೇವಬರಿತ ಕಣ್ಣಿನ ಕರುಣೆಯು
ಅಲೆಮಾರಿಯ ಬೆನ್ನ ಬರೆಗಳಡಿ ಹೊಂಗೆ ನೆರಳಿನ ತಾಣ

‍ಲೇಖಕರು nalike

6 August, 2020

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading