ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ಮಾಯಾ ಬಜಾರ್..

ಇವರು ರಂಗ ‘ಕಿರಣ’-

ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.

ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.

ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.

ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.

ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.

ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.

ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.

ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ

-ಜಿ ಎನ್ ಮೋಹನ್

‘ರಂಗ ಕೈರಳಿ’ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

2

ಮಾಯಾ ಬಜಾರ್

ನಿರ್ದೇಶಕರು: ಸುರಭಿ ಜಯಚಂದ್ರ ವರ್ಮ

ಈ ಬಾರಿ ತುಂಬ ಅಪರೂಪಕ್ಕೆ ಬಹುಷ: ಮೊದಲ ಬಾರಿ ಬೆಳಿಗ್ಗೆ ಹನ್ನೊಂದು ಗಂಟೆಗೆ ನಾಟ್ಕದ ಶೋ. ಕೇರಳದ ಪುಟ್ಟು ತಿಂದ್ಬಿಟ್ಟು ನಾಟ್ಕ ನೋಡೋಕೆ ಹೋದ್ರೆ ಬಾಗಿಲಲ್ಲೇ ಸ್ವಾಗತಿಸಿದ್ದು ಎರಡು ಮುಖ ಹೊತ್ತ ಕೆಂಪನೆಯ ದೊಡ್ಡ ಆಕೃತಿ. ನಾಲ್ಕು ಕಾಲುಗಳ ಈ ಕಾಲ್ಪನಿಕ ಆಕೃತಿಯ ಮುಂದೆ, ಹಿಂದೆ ಎರಡೂ ಕಡೆ ಮುಖ. ‘ ನಿನ್ನ ಮುಖ ನಾನು…ನನ್ನ ಮುಖ ನೀನು’ ಸಾಲುಗಳನ್ನ ನೆನಪಿಸುವಂತೆ.

ಅದನ್ನ ದಾಟಿ ಆಚೆ ಹೋದ್ರೆ ‘ ಕೆ.ಟಿ. ಮುಹಮ್ಮದ್ ಥಿಯೇಟರ್’ ಇವತ್ತಿನ ನಾಟ್ಕದ ವೆನ್ಯೂ.

ಕೆ.ಟಿ ಮುಹಮ್ಮದ್ ಮಲಯಾಳಮ್ ನ ಹೆಸರಾಂತ ನಾಟಕಕಾರ, ಸಿನಿಮಾ ಸಾಹಿತಿೆ. ತುಂಬ ಪ್ರಸಿದ್ಧವಾದ ‘ಇದು ಭೂಮಿ’ಯೂ ಸೇರಿದಂತೆ ನಲವತ್ತಕ್ಕೂ ಹೆಚ್ಚು ನಾಟ್ಕಗಳನ್ನೂ ಇಪ್ಪತ್ತು ಸಿನಿಮಾಗಳಿಗೂ ಸಾಹಿತ್ಯ ರಚಿಸಿದ ಕೇ.ಟಿ. ಮುಹಮ್ಮದ್, ಮಲಯಾಳಿಗಳ ಫೇವರಿಟ್. ಕೇರಳ ಸಂಗೀತ ನಾಟಕ ಅಕಾಡಮಿಯ ಕ್ಯಾಂಪಸ್ ನಲ್ಲರೋ ಸುಸಜ್ಜಿತ ಥಿಯೇಟರ್ ಗೆ ಅವರ ಹೆಸರನ್ನೇ ಇಟ್ಟಿದ್ದಾರೆ.

‘ಮಾಯಾ ಬಜಾರ್’ ಎಲ್ಲರಿಗೂ ಚಿರಪರಿಚಿತವಾದ ಕಥೆಯೇ. ಬಲರಾಮನ ಮಗಳು ಶಶಿರೇಖೆ, ಅಭಿಮನ್ಯುವಿನ ಲವ್ ಸ್ಟೋರಿ. ನಾರದನ ಮರುಳು ಮಾತುಗಳಲ್ಲಿ ಸಿಕ್ಕೊಳ್ಳುವ ಬಲರಾಮನ ಹೆಂಡತಿ, ಮಗಳು ಶಶಿರೇಖೆಯನ್ನ ದುರ್ಯೋಧನನ ಮಗ ಲಕ್ಷಮಣ ಕುಮಾರ ನಿಗೆ ಮದುವೆ ಮಾಡಿಕೊಡುವ ಪ್ಲಾನ್ ಮಾಡ್ತಾಳೆ. ಈ ಮಧ್ಯೆ ಪ್ರವೇಶ ಮಾಡೋ ಘಟೋದ್ಗಜ ಮಾಯಾ ಮಂತ್ರ ದಿಂದ ಎಲ್ಲದಕ್ಕೂ ಸುಖಾಂತ ಹಾಡ್ತಾನೆ.

ತೆಲಂಗಾಣದ ‘ಸುರಭಿ’ ತಂಡದ ಹೆಸರು ಕೇಳದ ರಂಗಾಸಕ್ತರಿಲ್ಲ. ಸುಮಾರು ಆರು ತಲೆಮಾರಿನ ನಟ ನಟಿಯರನ್ನೆಲ್ಲ ಕಂಡು ಬಂದಿರುವ ತಂಡ ಇದು. ಅದೂ ಒಂದೇ ಕುಟುಂಬದವ್ರು. ‘ಸುರಭಿ’ ಘರಾನಾ ವನ್ನೇ ರಂಗಭೂಮಿಗೆ ನೇಡಿದ್ದು ಈ ‘ ವೆಂಕಟೇಶ್ವರ ಸುರಭಿ ಥಿಯೇಟರ್’. ಆ ಘರಾನಾ ದ ಎಲ್ಲ ವೈಶಿಷ್ಟ್ಯಗಳನ್ನೂ ಒಳಗೊಂಡು, ಹೊಸ ತಾತ್ರಿಕತೆಯನ್ನ ಉಪಯೋಗಿಸ್ಕೊಂಡು ಈಗ್ಲೂ ,ಮಾಯಾ ಬಜಾರ್’ ಪ್ರಯೋಗಿಸ್ತಿದೆ. ನಮ್ಮ ಗುಬ್ಬಿ ವೀರಣ್ಣನವರ ನಾಟ್ಕಗಳ ‘ಕೇಳಿದ’  ವೈಭವವನ್ನು ಒಂಚೂರಾದ್ರೂ ‘ನೋಡುವ’ ಆಸೆಯಿಂದ ಕಾಯ್ತಿದ್ದವನಿಗೆ ಈಗ ಅವಕಾಶ ಒದಗಿ ಬಂದಿತ್ತು.

ಹೆಸರೇ ಹೇಳೋ ಹಾಗೆ ಎಲ್ಲಾ ಮಾಯ..ಮಾಯ. ಬೆಂಕಿಯುಗುಳೋ ಡ್ರಾಗನ್ ಥಟ್ಟಂತ ರಂಗದಲ್ಲಿ ಪ್ರತ್ಯಕ್ಷವಾಗೋದು, ನೆಲದ ತುಂಬ ಬೆಂಕಿ ಹತ್ಕೊಳ್ಳೋದು, ಅಭಿಮನ್ಯು ಬಾಣ ಬಿಟ್ಟು ಮಳೆ ತರಿಸಿ ಬೆಂಕಿ ನಂದಿಸೋದು, ಸುರಿವ ಮಂಜಿನಲ್ಲಿ ಅಭಿಮನ್ಯು, ಶಶಿರೇಖೆಯರ ಡ್ಯೂಯಟ್..ಹೀಗೆ ನಾಟ್ಕದುದ್ದಕ್ಕೂ ಅಚ್ಚರಿಗಳೇ. ಬೋನಸ್ ಅನ್ನೋ ಹಾಗೆ ಮಿರಿ ಮಿರಿ ಮಿಂಚುವ ಕಾಸ್ಟ್ಯೂಮ್ ಗಳು.

ಎಪ್ಪತ್ತರ ಹಿರಿಯ ನಟರಿಂದ ಮೊದಲಾಗಿ ಹೊಳೆಯುವ ಕತ್ತಿ ಹಿಡಿದು ಬರುವ ನಾಲ್ಕು ವರ್ಷದ ಮಗುವಿನ ವರೆಗೂ ಎಲ್ಲರೂ ನಟರೇ. ಮಗು ರಂಗಕ್ಕೆ ಬಂದಾಗಲಂತೂ ಜೋರು ಚಪ್ಪಾಳೆ.

ಇಟ್ಫಾಕ್ ನಲ್ಲಿ ‘ಮಾಯಾ ಬಜಾರ್’ ನ ಕಮಾಲ್ ಭಲೇ ಜೋರು.

। ನಾಳೆಗೆ ಇನ್ನೊಂದು ನಾಟಕ ।

‍ಲೇಖಕರು avadhi

March 28, 2023

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This