ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಸಮಾಧಾನದ ಆ ಒಂದು ದಿನ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

8

‘ಇಲ್ಲ ಪಪ್ಪ ನಿಮಗೆ ಅಂತ ಒಂದು ಡಿಗ್ನಿಟಿ ಇದೆ, ಅದನ್ನು ಮರೆತು ಹೀಗೆಲ್ಲಾ ಕುಡಿದು ಬಂದರೆ ಹೇಗೆ? ನೆನ್ನೆ ಅಮ್ಮನನ್ನು ದಾರಿಯಲ್ಲೇ ಬಿಟ್ಟು ಬಂದಿದ್ದೀರಿ. ನನಗೆ ನೀವು ಸರಿನೋ, ಅಮ್ಮ ಸರಿನೋ ಅನ್ನುವುದು ಬೇಕಿಲ್ಲ. ಆದರೆ ಅಮ್ಮ ಕೂಡಾ ನಿಮ್ಮ ರೆಸ್ಪಾನ್ಸಿಬಿಲಿಟಿ ಅನ್ನುವುದನ್ನು ಮರೀತಿದ್ದೀರಿ’ ಎಂದ ಆಶಾಳ ಧ್ವನಿಯಲ್ಲಿ ಖಚಿತತೆ ಇತ್ತು. ಅವಳ ಮಾತುಗಳಿಗೆ ಉತ್ತರಿಸಲಾಗದೆ, ಅದನ್ನು ದಾಟಿಕೊಳ್ಳುವವರಂತೆ. ‘ಪುಟ್ಟ ಅದು ಹಾಗಲ್ಲ ಕಣೋ, ಈಚೆಗೆ ನಿಮ್ಮಮ್ಮ ನಿನಗಿಂತ ಚಿಕ್ಕವರಾಗುತ್ತಿದ್ದಾರೆ. ಅವರಿಗೆ ಹಟ ಜಾಸ್ತಿ ಆಗ್ತಾ ಇದೆ. ನೆನ್ನೆ ಎಷ್ಟು ಕರೆದೆ ಗೊತ್ತಾ? ಬರಲಿಲ್ಲ. ನನಗೆ ತುಂಬಾ ಇಂಪಾರ್ಟೆ೦ಟ್ ಮೀಟಿಂಗ್ ಏನು ಮಾಡುವ ಹಾಗಿದ್ದೆ? ನಿಂಗಿದೆಲ್ಲಾ ಅರ್ಥ ಆಗ್ಬೇಕು ನೌ ಯು ಆರ್ ಎ ಗ್ರೋನ್ ಅಪ್ ಗರ್ಲ್’ ಎಂದು ಸಹಾ ರಮಿಸುತ್ತಿದ್ದುದು ಕೇಳುತ್ತಿತ್ತು. ಆಶಾ ಪಟ್ಟು ಬಿಡಲಿಲ್ಲ.

‘ಯು ಹ್ಯಾವ್ ಟು ಟೇಕ್ ಕೇರ್ ಆಫ್ ಹರ್’ ಅವಳ ಮಾತುಗಳಲ್ಲಿ ಪ್ರಬುದ್ಧತೆ ಕಾಣುತ್ತಿತ್ತು. ಅರೆ ಇಷ್ಟೆಲ್ಲವನ್ನೂ ಮಾತಾಡುವಷ್ಟು ಇವಳು ದೊಡ್ಡವಳಾದಳಾ? ಎಂದಾದರೂ ಅಟ್ಟದ ಮೇಲೆ ಅವಳು ಮಗು ಇದ್ದಾಗ ಹಾಕಿಕೊಳ್ಳುತ್ತಿದ್ದ ಬಟ್ಟೆಗಳನ್ನು ತೆಗೆದುನೋಡುತ್ತಾ ಅರೆ ಇಷ್ಟಿದ್ದವಳು ಇಷ್ಟಾದಳಾ? ಎಂದುಕೊಳ್ಳುತ್ತಿದ್ದೆ. ಈಗ ಇನ್ನೂ ಆಶ್ಚರ್ಯವಾಗುತ್ತಿದೆ ಇಷ್ಟೆಲ್ಲಾ ಮಾತಾಡುವಷ್ಟು ದೊಡ್ಡವಳಾದಳಾ? ಸಹಾರನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಅಂದುಕೊ೦ಡಿದ್ದೆ. ಆದರೆ ನನ್ನ ನಂಬಿಕೆಯನ್ನು ಇವಳೇ ಹುಸಿಮಾಡುವಂತೆ ಆಶಾಳ ವರ್ತನೆ ಇತ್ತು. ನನಗೆ ಆಗುತ್ತಿರುವುದು ಸಂತೋಷವೋ, ಸಮಾಧಾನವೋ, ತಳಮಳವೋ ಗೊತ್ತಾಗದೆ ಹೋದೆ. ಹಾಸಿಗೆಯಿಂದ ಏಳಲು ಪ್ರಯತ್ನಿಸಿದೆ, ತಲೆ ಧಿಂ ಎನ್ನುತ್ತಿತ್ತು. ತಲೆ ಹಿಡಿದು ಕೂತೆ. ಇಬ್ಬರೂ ಏನೇನೋ ಮಾತಾಡುತ್ತಲೇ ಇದ್ದರು. ಸ್ವಲ್ಪ ಹೊತ್ತಿನ ನಂತರ ಮಾತು ಮುಗಿದಂತೆ ನಿಶ್ಯಬ್ದ ಒಮ್ಮೆಲೆ ಆವರಿಸಿ ಕಂಗಾಲಾದೆ.

ಆಶಾ ನನ್ನ ರೂಂಗೆ ಬಂದಳು. ಕಾಲೇಜಿಗೆ ಹೋಗಲು ರೆಡಿಯಾಗಿದ್ದಳು. ನಾನು ತಿಂಡಿ ಮಾಡಿರಲಿಲ್ಲ, ತಲೆ ಹಿಡಿದು ಕುಳಿತಿದ್ದ ನನ್ನ ನೋಡಿ, ‘ಅಮ್ಮಾ ನೇರ ನೇರ ಯುದ್ಧ ಆಗಿಬಿಡಲಿ. ಮಾತಾಡಿ ಎಲ್ಲವನ್ನು ಬಗೆಹರಿಸಿಕೊಳ್ಳಬೇಕು. ಎಷ್ಟು ದಿನ ಅಂತ ಹೀಗೆ ತಲೆ ಹಿಡಿದು ಕುಳಿತುಕೊಳ್ಳೋದು. ಎದ್ದು ತಿಂಡಿ ಮಾಡಿಕೋ ಇಲ್ಲಾ ಪಪ್ಪಾಗೆ ಹೇಳಿ ತರಿಸಿಕೋ. ನಾನು ಕ್ಯಾಂಟೀನ್‌ನಲ್ಲೇ ಏನಾದ್ರೂ ತಿಂದುಕೊಳ್ತೀನಿ. ಟೇಕ್ ಕೇರ್ ಆಫ್ ಯುವರ್ ಸೆಲ್ಫ್’ ಎಂದು ಹಣೆಗೆ ಮುತ್ತಿಟ್ಟು ಹೊರಡಲು ಅನುವಾದಳು. ಈಚೆಗೆ ಆಶಾಳ ಮುಖ ಚಹರೆಗಳು ಇನ್ನಷ್ಟು ಗಾಢವಾಗಿ ಸತೀಶನನ್ನು ಹೋಲುತ್ತಿರುವ ಹಾಗೆ ಅನ್ನಿಸುತ್ತಿದೆ. ನನ್ನ ಜೊತೆ ಅವಳು ನಡೆದು ಬರುತ್ತಿದ್ದರೆ ಅಮ್ಮ ಮಗಳು ಎಂದು ಹೇಳುವ ಯಾವ ಹೋಲಿಕೆಯೂ ಕಾಣುವುದಿಲ್ಲ. ಪುಟ್ಟ ಭುಜಗಳ ನಡುವೆ ಪುಟ್ಟದಾಗೆ ಇರುವ ತಲೆ. ಸ್ವಲ್ಪ ಕಿರಿದೆ ಎನ್ನಿಸುವ ಕಣ್ಣುಗಳು, ಉಬ್ಬಿದ ಕೆನ್ನೆಗಳು ಸ್ವಲ್ಪ ಮೊಂಡು ಮೂಗು ಥೇಟ್ ಸತೀಶನ ಹಾಗೆ ಸ್ವಲ್ಪ ಬಾಗಿ ನಗುವ ಶೈಲಿ.

ಆಶಾಳನ್ನು ಪ್ರತಿಸಲ ನೋಡುವಾಗಲೂ ಸತೀಶನೇ ಕಣ್ಣ ಮುಂದೆ ಬಂದ ಹಾಗೆ ಅನ್ನಿಸುತ್ತದೆ. ಜೊತೆಗೆ ಕಸಿವಿಸಿಯೂ. ಆಶಾ ಇಷ್ಟೆಲ್ಲ ವಾದ ಮಾಡ್ತಾ ಇದ್ದಾಳೆ ಎಂದರೆ ನೆನ್ನೆ ನನ್ನ ಮತ್ತು ಸಹಾರ ಮಧ್ಯೆ ಆದ ಮಾತುಕಥೆಗಳು ಆಶಾ ಕೇಳಿಸಿಕೊಂಡುಬಿಟ್ಟಳೇ? ಸಪ್ಪಗಿದ್ದ ನನ್ನ ಬಳಿಗೆ ಬಂದು, ‘ಅಮ್ಮ ಯಾವುದನ್ನು ಮುಚ್ಚಿಡುತ್ತೀಯಾ? ಎಷ್ಟು ದಿನ ಅಂತ ಮುಚ್ಚಿಡ್ತೀಯಾ? ಏನ್ ನಡೀತಾ ಇದೆ ಅಂತ ಮುಚ್ಚಿಟ್ಟು ಇನ್ನೊಬ್ಬರನ್ನು ಮೋಸ ಮಾಡಬಹುದು ನಿನಗೆ ನೀನು ಮೋಸ ಮಾಡಿಕೊಳ್ಳಬೇಡ’ ಎಂದಳು. ಇನ್ನು ಅಲ್ಲಿಗೆ ನನ್ನ ಸಹಾರ ಸಂಬ೦ಧದ ತಿಕ್ಕಾಟಗಳು ಆಶಾಗೆ ಗೊತ್ತಿಲ್ಲ ಎಂದುಕೊಳ್ಳುವ ಹಾಗೆ ಇಲ್ಲ. ನನಗಾಗುತ್ತಿರುವುದು ಅವಮಾನವಾ? ಅಸಹಾಯಕತೆಯಾ? ಅಯಾಚಿತವಾಗಿ ಹನಿಸಿದ ಕಣ್ಣನೀರನ್ನು ಅವಳಿಗೆ ಗೊತ್ತಿಲ್ಲದ ಹಾಗೆ ಒರೆಸಿಕೊಂಡೆ. ಏನನ್ನೋ ನೆನೆಸಿಕೊಂಡವಳ೦ತೆ ‘ಪುಟ್ಟ’ ಎಂದೆ. ಏನು ಎನ್ನುವಂತೆ ನನ್ನ ಕಡೆ ತಿರುಗಿದ ಅವಳಿಗೆ, ‘ದುಡ್ಡಿದ್ಯ?’ ಎಂದೆ. ‘ಇದೆ, ಪಪ್ಪನ ಹತ್ತಿರ ತೆಗೆದುಕೊಂಡೆ’ ಎಂದಳು. ಅವಳ ಕಣ್ಣುಗಳು ಎಂದಿನ೦ತೆ ತೀಕ್ಷ್ಣವಾಗೇ ಇದ್ದವು. ಆದರೂ ಇವಳಿಗಿರುವ ಸ್ಮಾರ್ಟ್ನೆಸ್ ನನಗೆ ಯಾಕೆ ಬರಲಿಲ್ಲವೋ? ಪರಿಸ್ಥಿತಿಗೆ ಹೊಂದಿಕೊಳ್ಳಲಾಗದ ಒದ್ದಾಟವಿಲ್ಲ, ತಾನು ಜೀವನದಲ್ಲಿ ಏನನ್ನೋ ಕಳಕೊಂಡೆ ಎನ್ನುವ ವಿಷಾದವಿಲ್ಲ. ಸಣ್ಣವಳಿದ್ದಾಗ ಸತೀಶನ ಫೋಟೋ ತೋರಿಸಿದಾಗ ಮಾತ್ರ ಅಪ್ಪಾ ಎನ್ನುತ್ತಿದ್ದಳು. ಸಹಾರ ಎದುರು ಎಂದೂ ಸತೀಶನ ಬಗ್ಗೆ ಅವಳು ಮಾತಾಡಲ್ಲ. ‘ನಾನು ನಿಮ್ಮ ಮೇಲೆ ಭರವಸೆ ಇಟ್ಟಿದ್ದೀನಿ’ ಎಂದು ಸಹಾಗೆ ಹೇಳುವಂತೆ ಅವಳ ಗೆಸ್ಚರ್ಸ್ ಇರುತ್ತದೆ. ಹುಟ್ಟುತ್ತಲೇ ಇವಳಿಗೆ ಈ ಪ್ರಬುದ್ಧತೆ ಸಿಕ್ಕಿದ್ದಾದರೂ ಹೇಗೆ? ಚಿಕ್ಕವಳಿದ್ದಾಗ ನೋವಾದಾಗ ಇವಳನ್ನು ಎದೆಗೆ ಅವಚಿಕೊಂಡು ಅಳುತ್ತಾ ಕಳೆದ ಹೊತ್ತಲ್ಲೂ ತನ್ನ ಪುಟ್ಟ ಕೈಗಳಿಂದ ನನ್ನ ಕಣ್ಣಿರನ್ನು ಒರೆಸುತ್ತಿದ್ದಳೇ ಹೊರತು ತಾನು ಅಳುತ್ತಿರಲಿಲ್ಲ. ಎಷ್ಟೋ ಸಲ ಇವಳಿಗೆ ಎಲ್ಲವೂ ಗೊತ್ತಾಗುತ್ತದಾ? ಎನ್ನುವ ಅನುಮಾನ ಬರುತ್ತಿತ್ತು. ಇವಳ ಅಜ್ಜಿ- ಸತೀಶನ ತಾಯಿ- ಒಂದಿಷ್ಟನ್ನು ಹೇಳಿಕೊಡುತ್ತಿದ್ದರು. ಮಗನಿಲ್ಲದ ಅವರಿಗೆ ಮೊಮ್ಮಗಳಲ್ಲೆ ಎಲ್ಲವನ್ನೂ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ನಾನು ದೂರಾಗುವುದಲ್ಲದೆ ಅವರಿಗೆ ಆಶಾಳನ್ನೂ ದೂರಮಾಡಿದೆ. ಇದು ನಾನವರಿಗೆ ಮಾಡಿದ ದ್ರೋಹವಾ? ಅವರು ಅದಕ್ಕಾಘಿ ಯಾವತ್ತೂ ನನ್ನ ದೂರಲಿಲ್ಲ. ಮನಸ್ಸಿನಲ್ಲಿ ಏನಿತ್ತೋ ಏನೋ. ಜಗತ್ತಿನಲ್ಲಿ ಅವರಿಗಿದ್ದ ಒಂದು ಅವಕಾಶ ಆಶಾ, ಅವಳನ್ನೂ ಕಸಿದುಕೊಂಡು ಬಿಟ್ಟೆನಲ್ಲಾ ಎಂದು ನನ್ನ ಬಗ್ಗೆ ನನಗೆ ಕೆಟ್ಟದೆನಿಸಿತು. ಅವರನ್ನು ನೋಡಿ ಎಷ್ಟು ದಿನಗಳಾದವು? ಈ ಭಾನುವಾರ ಮೀಟಿಂಗ್ ಇದೆ ಎಂದು ಸಹಾ ಹೇಳಿದರಲ್ಲಾ? ಆಶಾನ್ನ ಕರಕೊಂಡು ಹೋಗಿಬರಬೇಕು. ನಿಮ್ಮ ಮೊಮ್ಮಗಳು ಥೇಟ್ ನಿಮ್ಮ ಮಗನ ಹಾಗೆ ಅಂತ ಹೇಳಬೇಕು. ಇದ್ದಕ್ಕಿದ್ದಂತೆ ಯಾರೋ ನನ್ನ ಕೆನ್ನೆಗೆ ರಪ್ಪೆಂದು ಬಾರಿಸಿದ ಹಾಗನ್ನಿಸಿತು. ಹೀಗೆ ಆ ಹಿರಿಯ ಜೀವಗಳ ಬಗ್ಗೆ ಎಂದಾದರೂ ಯೋಚಿಸಿದ್ದೆಯಾ? ನಿನಗೆ ಇಲ್ಲಿ ಎಲ್ಲವೂ ಸರಿಯಿಲ್ಲ ಎಂದ ಮಾತ್ರಕ್ಕೆ ಅವರ ನೆನಪಾಗಿಬಿಟ್ಟೀತಾ? ಮನಸ್ಸಿನ ಆಟ ಬಲ್ಲವರ್ಯಾರು.

‘ನಿಮ್ಮ ಜೊತೆ ಬರಲ್ಲ’ ಅಂತ ಸಹಾರ ನಿಲುವುಗಳ ವಿರುದ್ಧ ಯುದ್ಧ ಸಾರುವ ಹಾಗೆ ಹೇಳಿದ್ದೆ ಅಲ್ಲವೇ? ಈಗ ಮತ್ತೆ ಹೋಗಬೇಕು ಅನ್ನಿಸುತ್ತಿದೆ. ಅಂದರೆ ನನ್ನ ನಿರ್ಧಾರಗಳೆಲ್ಲವೂ ಸುಮ್ಮನೆ ನನಗೆ ನಾನೇ ನನ್ನ ಸಾಂತ್ವಾನಕ್ಕಾಗಿ ಹೇಳಿಕೊಳ್ಳುವ ಮಾತುಗಳಷ್ಟೇನೇ? ಏನಿದು ನನ್ನ ಗೊಂದಲ? ನನಗೆ ಮಾತ್ರ ಯಾಕೆ ಹೀಗೆಲ್ಲಾ ಕಾಡುತ್ತದೆ? ನನ್ನತನವನ್ನು ನಾನು ಸತೀಶನ ಜೊತೆಗೆ ಮಣ್ಣಲ್ಲಿಟ್ಟು ಬಂದೆನೇ? ಅರ್ಥವಾಗದ ಸ್ಥಿತಿಯಲ್ಲಿ ನಾನಿದ್ದೇನೆ ಎನ್ನುವುದು ಗೊತ್ತಾದರೂ ಏನೂ ಮಾಡಲಿಕ್ಕಾಗುತ್ತಿಲ್ಲ. ಇಷ್ಟೆಲ್ಲದರ ನಡುವೆಯೂ ಆಶಾ ಮಾತ್ರ ನನ್ನ ಪಾಲಿನ ದೊಡ್ಡ ಅಚ್ಚರಿಯಾಗುತ್ತಿದ್ದಾಳೆ. ಅವಳು ದೊಡ್ಡವಳಾಗುತ್ತಾ ಬಂದ ಹಾಗೆ ಸಂಬ೦ಧೀಕರು ನೆರೆಯವರು ಕೇಳುವ ಪ್ರಶ್ನೆಗಳಿಂದ ತಲ್ಲಣಕ್ಕೆ ಒಳಗಾಗುತ್ತಾಳೆ ಅಂದುಕೊ೦ಡಿದ್ದೆ. ಇಲ್ಲ ಅವಳು ಹಾಗೆ ಎಂದೂ ನಡೆದುಕೊಳ್ಳಲೇ ಇಲ್ಲ. ನಾನೇ ಬೇಜಾರು ಮಾಡಿಕೊಂಡರೆ ‘ಅಮ್ಮ ಸುಮ್ಮನೆ ಇಲ್ಲದ್ದನ್ನೆಲ್ಲಾ ತಲೆಗೆ ಹಾಕಿಕೊಳ್ಳಬೇಡ. ಅಪ್ಪ ಬದುಕಿದ್ದಿದ್ದರೆ ಈ ಸ್ಥಿತಿ ನಮಗೆ ಬರ್ತಾ ಇರಲಿಲ್ಲ ಸರೀನೇ. ಆದರೆ ಏನು ಮಾಡುವುದು? ಆಗಿಹೋಗಿದೆಯಲ್ಲಾ? ಯಾವುದನ್ನಾದರೂ ಬದಲಿಸಬಹುದು ನಿನ್ನ ಕೊರಗಿನಿಂದ ಎಂದರೆ ಕೊರಗು. ಪ್ರಪಂಚಕ್ಕೆ ನಮ್ಮ ನೋವು ಯಾವತ್ತೂ ಅರ್ಥ ಆಗಲ್ಲ. ಅದಕ್ಕೆ ನಮಗೆ ನೋವಿದೆ ಎಂತಲೇ ತೋರಿಸಿಕೊಳ್ಳ ಬಾರದು. ಬಂದಿದ್ದಕ್ಕೆ ಎದುರಾಗಬೇಕು ಅಷ್ಟೇ’ ಎಂದು ವೇದಾಂತಿಯ ಥರಾ ಮಾತಾಡಿದ್ದಳು. ಅವಳ ಮಟ್ಟಿಗೆ ಅವಳು ಸರಿಯೇ ಇದ್ದಾಳೆ. ಅವಳು ಮಾತ್ರವಲ್ಲ ಎಲ್ಲರೂ. ಯಾಕೋ ನಾನೇ ಸರಿಯಿಲ್ಲ.

ನನ್ನ ಒಳಗಿನ ಗಿಲ್ಟ್ ನನ್ನನ್ನು ಹೀಗೆಲ್ಲಾ ಯೋಚಿಸುವ ಹಾಗೆ ಮಾಡುತ್ತಿದೆಯಾ? ಅವಳು ನನ್ನ ಮತ್ತು ಸಹಾರ ಸಂಬ೦ಧವನ್ನು ಪ್ರತಿಭಟಿಸಬೇಕಿತ್ತು ಅಂತ ಬಯಸುತ್ತಿದ್ದೇನಾ? ಹಾಗೆ ಆಗದೆ ಹೋಗಿದ್ದಕ್ಕೆ ನನಗೆ ನಿರಾಸೆಯಾ? ‘ಅಮ್ಮಾ ನನಗೆ ಎಲ್ಲವೂ ಅರ್ಥ ಆಗುತ್ತೆ. ನನಗೆ ತೋಚಿದ ಸರಿಯ ಜೊತೆ ನಾನಿರ್ತಿನಿ. ನನ್ನ ಬಗ್ಗೆ ನೀನು ಯೋಚಿಸಬೇಡ. ಅಜ್ಜ ಅಜ್ಜಿಯನ್ನು ಬಿಟ್ಟು ಪಪ್ಪನ ಜೊತೆ ಬರಬೇಕು ಎನ್ನುವ ನಿರ್ಧಾರಕ್ಕೆ ನೀನು ಬಂದಾಗ ಅಜ್ಜ ನಿನಗೆ ಯಾವ ಸಜೆಷನ್ಸ್ ಕೊಡಲಿಲ್ಲ ಅಲ್ಲವಾ?’ ಎನ್ನುತ್ತಲೇ ನನ್ನ ಜೀವನ ನಾನು ನೋಡಿಕೊಳ್ಳಲಿಕ್ಕೆ ಆಗಬೇಕು ಎನ್ನುವುದನ್ನು ದಾಟಿಸಿದಳು. ಸಹಾರ ವಿಷಯ ಬಂದಾಗಲು ಅಷ್ಟೇ. ತನ್ನ ಅಪ್ಪನ ಸ್ಥಾನಕ್ಕೆ ಸಹಾ ಬಂದರು ಎಂದು ದ್ವೇಷಿಸಿದ್ದಾಗಲೀ, ನನ್ನ ಪ್ರಶ್ನಿಸಿ ಮುಜುಗರಕ್ಕೆ ಈಡು ಮಾಡಿದ್ದಾಗಲೀ ಇಲ್ಲವೇ ಇಲ್ಲ. ತುಂಬಾ ಪ್ರಬುದ್ಧಳ ಹಾಗೆ ನಡೆದುಕೊಂಡಳು. ಒಮ್ಮೆಯೂ ಅವಳಿಗೆ ಸಹಾರ ಜೊತೆ ಜಗಳ ಇಲ್ಲ. ಆದರೆ ತನಗೆ ಬೇಕಾದ್ದನ್ನ ತುಂಬಾ ಡಿಪ್ಲಮೆಟಿಕ್ ಆಗಿ ಡೀಲ್ ಮಾಡಿ ತೆಗೆದುಕೊಳ್ಳುತ್ತಾಳೆ. ಸಹಾರ ಮೊದಲ ಮಗಳು ಲಾವಣ್ಯ ಜಾತಿ ಬಿಟ್ಟು ಬೇರೆ ಜಾತಿಯ ಹುಡುಗನನ್ನು ಆರಿಸಿಕೊಂಡಾಗ ಯಾರೂ ಊಹಿಸದ ರೀತಿ ನಡೆದುಕೊಂಡಿದ್ದು ಸಹಾ. ಲಾವಣ್ಯಳನ್ನು ಮಾತೂ ಆಡಿಸುತ್ತಿರಲಿಲ್ಲ. ‘ಅರೆ ಪಪ್ಪಾ ಜಗತ್ತಿಗೆಲ್ಲಾ ಜಾತಿ ಇಲ್ಲ ಅಂತ ಉಪದೇಶ ಮಾಡುವವರು ಅಕ್ಕನ ವಿಷಯಕ್ಕೆ ಹೀಗಾ ನಡೆದುಕೊಳ್ಳುವುದು? ಅಮ್ಮಾ ನನಗೆ ಖಂಡಿತಾ ನಿರಾಸೆ ಆಗಿದೆ, ಪಪ್ಪನನ್ನು ನೀನೇ ಒಪ್ಪಿಸು. ಅಕ್ಕ ಮನುಷ್ಯರನ್ನು ತಾನೆ ಪ್ರೀತಿಸಿರುವುದು’ ಎಂದಿದ್ದಳು. ನನ್ನ ಮಾತನ್ನು ಸಹಾ ಕೇಳಲಿಲ್ಲ. ಆಗಲೂ ಆಶಾ ಅವರ ಎದುರು ನಿಂತು ನೇರಾ ನೇರ ಪ್ರಶ್ನಿಸಿದ್ದಳು. ಅವಳಿಗನ್ನಿಸಿದ್ದನ್ನು ಒಬ್ಬರಿರಲಿ ನೂರು ಜನ ಇರಲಿ ಖಾಚಿತ್‌ವಾಘಿ ಹೇಳುತ್ತಿದ್ದಳು. ನಾನು ಮಾತಾಡಿದರೆ ರೇಗುವ ಕೋಪ ಮಾಡಿಕೊಳ್ಳುವ ಸಹಾ ಅವಳ ಮಾತನ್ನು ಸಮಾಧಾನದಿಂದ ಕೇಳಿಸ್ಕೊಂಡಿದ್ದರು.

ಆಶಾ ಹೊರಟ ಎಷ್ಟೋ ಹೊತ್ತಿನ ನಂತರ ರೂಂ ನಿಂದ ಹೊರಬಂದೆ. ಸಹಾ ಸೋಫಾದ ಮೇಲೆ ಕುಳಿತಿದ್ದರು. ನನಗೆ ಗೊತ್ತು ಮಹಾಸ್ಪೋಟಕ್ಕೆ ಜಗತ್ತು ಕಾಯುತ್ತಿದೆ ಎಂದು. ಮನುಷ್ಯನೊಬ್ಬನ ನಿಜರೂಪವನ್ನು ನಾನು ಮಾತ್ರ ಕಾಣಲು ಸಾಧ್ಯವಾಗುವ ಖುಷಿಯೊಂದು ಮೆಲ್ಲಗೆ ಆವರಿಸಿ ನಗೆಯಾಗಿಸಿತು. ಆದರೆ ಸಹ ಮಾತ್ರ ಯಾವಾಗಲೂ ಹೀಗೆ, ನನ್ನ ನಿರೀಕ್ಷೆಗಳನ್ನು ಹುಸಿ ಮಾಡುತ್ತಲೇ ಇರುತ್ತಾರೆ. ಹಾಗೆ ಹುಸಿಗೊಳಿಸಿ ಗೆದ್ದೆ ಎಂದುಕೊಳ್ಳುವುದು ಅವರ ಪಾಲಿನ ಆಟ.

ಸಹಾ ಒಂದರ ಮೇಲೊಂದರ೦ತೆ ಸಿಗರೇಟುಗಳನ್ನು ಸುಟ್ಟು ಎರಡು ಕಪ್ಪು ಟೀ ಹೀರಿದ್ದಕ್ಕೆ ಟೇಬಲ್ ಮೇಲೆ ಸಾಕ್ಷಿಗಳಿದ್ದವು. ತಪ್ಪು ಮಾಡಿ ಪಶ್ಚಾತ್ತಾಪವಿದ್ದ ದಿನ ಮಾತ್ರ ಹೀಗೆ ತಾವೇ ಟೀ ಮಾಡಿಕೊಳ್ಳುತ್ತಿದ್ದರು. ಇವತ್ತು ಯಾತಕ್ಕೆ ಈ ಪಶ್ಚಾತ್ತಾಪ?! ನೆನ್ನೆ ನನ್ನೊಂದಿಗೆ ಸಭ್ಯತೆಯ ಎಲ್ಲೆ ಮೀರಿ ಆ ಮಾತು ಆಡಿದ್ದಕ್ಕಾ? ಅಥವಾ ರಘುವಿನ ಜೊತೆ ನಂಟನ್ನು ಬೆಳೆಸಿದ್ದಕ್ಕಾ?! ಅರೆ ಇದು ಹೇಗೆ ಸಾಧ್ಯ ಒಬ್ಬ ಗಂಡು ತನ್ನ ಅಹಂ ಅನ್ನು ಬಿಟ್ಟುಕೊಟ್ಟು ಹೀಗೆ…? ಅಚ್ಚರಿಯಿಂದ ಸಹಾರ ಕಡೆಗೆ ನೋಡಿದೆ. ಆವರ ಮುಖದಲ್ಲಿನ ಭಾವ ಯಾವುದಿರಬಹುದು ಎಂದು ಅರ್ಥವಾಗದೆ ಹೋಯಿತು. ಅವರಿಗೆ ಮೈಂಡ್‌ರೀಡ್ ಮಾಡಲಿಕ್ಕೆ ಬರುತ್ತೆ. ನನ್ನಲ್ಲಿ ಆಗುವ ಬದಲಾವಣೆ ನಾನು ಮನಸ್ಸಿನಲ್ಲಿ ಏನು ಯೋಚಿಸುತ್ತೇನೆ ಎಲ್ಲವನ್ನೂ ಹೇಳಬಲ್ಲರು. ನಾನು ಈಗ ಅವರ ಮಾತನ್ನು ಕೇಳಲಿಕ್ಕೆ ಸಿದ್ಧ ಇರಲಿಲ್ಲ. ‘ಸಾರಿ ಕುಡಿದಿದ್ದರೂ ನಾನು ಆ ಮಾತನ್ನು ನಿಮಗೆ ಹೇಳಬಾರದಿತ್ತು’ ಎಂದರು. ‘ಎಲ್ಲ ನಾಗರೀಕತೆಯ ಲಕ್ಷಣ. ಮನಸ್ಸಿನಲ್ಲಿ ಏನು ಬೇಕಾದರೂ ಅಂದುಕೊಳ್ಳಬಹುದು ನಾಲಿಗೆಗೆ ಅದನ್ನ ದಾಟಿಸಬಾರದು ಅಲ್ಲವಾ?’ ಎಂದೆ ತೀಕ್ಷ್ಣವಾಗಿ. ‘ಇಲ್ಲ ಚೇತೂ ಕುಡಿದ ಮತ್ತಲ್ಲಿ…’ ಎಂದು ಮಾತನ್ನು ಮುಂದುವರೆಸುವಾಗ ನಾನು ಅವರನ್ನು ತಡೆದೆ.

‘ಸಾಕು ಇದೆಲ್ಲಾ, ನಿಮ್ಮ ಕೊಳಕನ್ನು ನನ್ನ ಮೇಲೆ ತಂದು ಹಾಕಬೇಡಿ. ಕುಡಿದಾಗ ನಿಮ್ಮ ಜೊತೆ ಮಲಗಲ್ಲ ಎನ್ನುವುದಷ್ಟೇ ನನ್ನ ಉದ್ದೇಶ ಆಗಿತ್ತು. ಆದರೆ ನೀವು ಅದನ್ನ ಯಾವ ಎಕ್ಸ್ಟೆ೦ಟ್‌ಗೆ ತೆಗೆದುಕೊಂಡು ಹೋದಿರಿ. ನಿಮ್ಮ ಮನಸ್ಸಿನಲ್ಲಿ ನಂಜಿದ್ದರೆ ಮಾತಾಡಿಬಿಡಿ, ಹೊರಬಂದು ಎಲ್ಲವೂ ಮುಗಿದು ಹೋಗಿಬಿಡಲಿ, ನಮ್ಮ ಸಂಬ೦ಧ ಕೂಡಾ’ ಎಂದೆ ಕಠೋರವಾಗಿ. ದೀನವಾಗಿ ಕಣ್ಣಲ್ಲಿ ನೀರನ್ನು ತಂದುಕೊ೦ಡು, ‘ಆಯ್ತು ಸತೀಶಾ, ನಮ್ಮಿಬ್ಬರ ದೀರ್ಘ ಪಯಣದಲ್ಲಿ ಹೀಗೆ ನಿನ್ನ ನೋಯಿಸಿದ್ದಕ್ಕೆ ನನಗೆ ಪ್ರಾಯಶ್ಚಿತ್ತ ಆಗಲೇಬೇಕು’ ಎನ್ನುತ್ತಾ ಎದ್ದು ನಿಂತರು. ಏನಾಗಬಹುದು ಎನ್ನುವ ಕುತೂಹಲದಲ್ಲಿದ್ದ ನನ್ನ ಕಾಲನ್ನು ಇದ್ದಕ್ಕಿದ್ದ ಹಾಗೆ ಹಿಡಿದುಕೊಂಡರು. ನಾನು ಒಂದು ಕ್ಷಣ ದಂಗಾದೆ. ದಂಗಾಗಿದ್ದು ಅವರು ನನ್ನ ಕಾಲನ್ನು ಹಿಡಿದುಕೊಂಡಿದ್ದಕ್ಕಲ್ಲ. ನನ್ನನ್ನ ಸತೀಶ ಎಂದು ಕೂಗಿದ್ದಕ್ಕೆ. ಅಲ್ಲಿಗೆ ಆಟ ಮುಗಿದಿತ್ತು. ನಾನು ಭಾವುಕವಾಗಿ ಮತ್ತೆ ಅವರ ಕೈವಶವಾಗಿದ್ದೆ. ಇಂಥಾದ್ದೊ೦ದು ಪ್ಲೇಕಾರ್ಡನ್ನು ಎಸೆದು ನನ್ನ ತಣ್ಣಗೆ ಮಾಡಬಹುದು ಎನ್ನುವ ಅಂದಾಜು ಕೂಡಾ ನನಗೆ ಇರಲಿಲ್ಲ. ನಾನು ಸಂಪೂರ್ಣ ಸೋತು ಹೋಗಿದ್ದೆ. ಅವರು ಗೂಢವಾದದ್ದನ್ನ ಹೇಳಲಿಕ್ಕೆ, ಜನರು ತುಂಬಾ ಇದ್ದಾಗ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಲಾಗದೇ ಹೋದಾಗ, ಭಾವುಕವಾದಾಗ ಅವರು ನನ್ನನ್ನು ಸತೀಶ ಎನ್ನುತ್ತಿದ್ದರು. ಆಗೆಲ್ಲ ನನ್ನೊಳಗೆ ತಮ್ಮ ಪ್ರೀತಿಯ ಸತೀಶನನ್ನು ಕಾಣುತ್ತಿದ್ದಾರೆ ಎನ್ನಿಸಿಬಿಡುತ್ತಿತ್ತು. ನನ್ನ ಜೊತೆ ಸಂಬ೦ಧಗಳನ್ನು ಸಹಾ ರಿಜ್ಯುಯನೇಟ್ ಮಾಡಿಕೊಳ್ಳುತ್ತಿದ್ದ ಕ್ರಮವೂ ಇದಾಗಿತ್ತು. ಆದರೆ ಇವತ್ತಿನ ಸಂದರ್ಭ ಯಾವತ್ತು ಬಂದಿರಲಿಲ್ಲ. ಅಂತೂ ಜಗಳವೇ ಇಲ್ಲದ ಸಮಾಧಾನದ ಆ ಒಂದು ದಿನವನ್ನು ಹೀಗೆ ಕಳೆದೆವು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: