ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ದಕ್ಲಕಥಾ ದೇವಿ ಕಾವ್ಯ… 

ಇವರು ರಂಗ ‘ಕಿರಣ’-

ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.

ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.

ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.

ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.

ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.

ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.

ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.

ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ

-ಜಿ ಎನ್ ಮೋಹನ್

ರಂಗ ಕೈರಳಿ‘ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

7

ದಕ್ಲಕಥಾ ದೇವಿ ಕಾವ್ಯ

ಪ್ರಸ್ತುತಿ: ಜಂಗಮ ಕಲೆಕ್ಟಿವ್

ನಿರ್ದೇಶನ:  ಕೆ.ಪಿ.ಲಕ್ಷ್ಮಣ

‘ದಕ್ಲಕಥಾ ದೇವಿ ಕಾವ’್ಯದ ಕುರಿತಂತೆ ಸಾಕಷ್ಟು ಒಳ್ಳೆಯ ಮಾತುಗಳನ್ನು  ಆಗಲೇ ಕೇಳಿದ್ದೆ. ಇತ್ತೀಚಿನ ಕನ್ನಡದ ನಾಟಕಗಳಲ್ಲಿ ತುಂಬ ಮಹತ್ವದ್ದು ಎನಿಸಿಕೊಂಡ ಈ ನಾಟ್ಕವನ್ನು ನೋಡಲೇ ಬೇಕಿತ್ತು. ಇಟ್ಫಾಕ್ ನಲ್ಲಿ ಈ ನಾಟ್ಕ ಇದೆ ಎನ್ನೋದು ತಿಳಿದಾಗ ತುಂಬ ಸಂತೋಷವಾಯ್ತು. ಇದಕ್ಕೆ ಎರಡು ಕಾರಣಗಳು. ಮೊದಲನೆಯದು ಕನ್ನಡದ ನಾಟ್ಕವೊಂದನ್ನು ಮಲಯಾಳೀ ನೆಲದಲ್ಲಿ ನೋಡುವ ಮಜಾ. ಎರಡನೇದು ಕನ್ನಡ ನಾಟ್ಕವೊಂದು ‘ಇಟ್ಫಾಕ್’ ಗೆ ಆಯ್ಕೆಯಾದ್ದು. ನನಗೆ ತಿಳಿದಂತೆ ಇದುವರೆಗೂ ಇಟ್ಫಾಕ್ ನಲ್ಲಿ ಕನ್ನಡ ನಾಟ್ಕವಾದದ್ದು ಅಂದ್ರೆ ಒಂದೇ. ಶರಣ್ಯ ರಾಂಪ್ರಕಾಶ್ ನಿರ್ದೇಶನದ ‘ ಅಕ್ಷಯಾಂಬರ’. ಇನ್ನುಳಿದಂತೆ ಎಮ್.ಡಿ.ಪಲ್ಲವಿ ಅಭಿನಯಿಸಿದ ‘ಸಿ ಶಾರ್ಪ್ ಸಿ ಬ್ಲಂಟ್’. ಇದು ಇಂಗ್ಲೀಷ್ ನಾಟ್ಕ.ಇದರ ನಿರ್ದೇಶಕಿ ‘ಸೋಫಿಯಾ ಸ್ಟೆಫ್’ ಜರ್ಮನಿಯವ್ರು. ರಂಗಶಂಕರದಲ್ಲಿ ಇವರ ನಿರ್ದೇಶನದಲ್ಲಿ ನಡೆದ ‘ ಪುಟಾಳಿಗಳಿಗಾಗಿ ರಂಗಭೂಮಿ’ ಕಾರ್ಯಾಗಾರದಲ್ಲಿ ನಾನೂ ಭಾಗವಹಿಸಿದ್ದೆ. ಅಂತೆಯೇ ಹುರುಪಿನಿಂದ್ಲೇ ನಾಟ್ಕ ನೋಡಿ, ಪಲ್ಲವಿಯವ್ರನ್ನ ಭೆಟ್ಟಿ ಮಾಡಿ ಮಾತಾಡ್ಸಿಯೂ ಬಂದಿದ್ದೆ. ಹಾಗಾಗಿ ದಕ್ಲಕಥಾ.. ಕುರಿತಂತೆ ಹೆಮ್ಮೆಯೂ ಇತ್ತು.

ಈ ನಾಟ್ಕಕ್ಕಂತ ಗುರುತಾಗಿದ್ದು ರಂಗೋತ್ಸವದ ಅತಿ ದೊಡ್ಡ ಬಯಲು ರಂಗಮಂದಿರ… ‘ಪೆವಿಲಿಯನ್’. ಆದು ಈಗ ನಿರ್ಮಾಣವಾಗಿರೋ ಜಾಗಕ್ಕೆ ಚಿಕ್ಕ ಇತಿಹಾಸವೇ ಇದೆ.

ನಾಟಕ ಅಕಾಡಮಿಯ ಎದುರಿನ ರಸ್ತೆ ದಾಟಿದ್ರೆ ಒಂದು ದೊಡ್ಡ ಬಯಲು. ಅದರ ಒಂದು ಭಾಗದಲ್ಲಿ ಕ್ರೀಡಾ ಸಂಕೀರ್ಣ ಇನ್ನೊಂದು ಭಾಗ ಖಾಲಿ. ಬಹುಷ: 2015 ನಲ್ಲಿರ್ಬೇಕು. ಆ ಜಾಗ್ದಲ್ಲಿ ದೊಡ್ಡ ಟೆಂಟ್ ನಂಥ ಥಿಯೇಟರ್ ಎದ್ದು ನಿಂತ್ಬಿಡ್ತು. ಸರ್ಕಸ್ ಮಾದರಿಯ ಗ್ಯಾಲರಿಗಳನ್ನ ಒಳಗೊಂಡ, ಮಧ್ಯೆ ಎರೆನಾ ಹೊಂದಿದ ಆಕರ್ಷಕ ಥಿಯೇಟರ್ ಅದು. ಅದನ್ನ ಇಲ್ಲಿಗೆ ತಂದಿದ್ದು ಶ್ರೀಲಂಕಾ ದವರು. ಅದ್ರಲ್ಲಿ ಅವರ ‘ ಕಕೇಷಿಯನ್ ಚಾಕ್ ಸರ್ಕಲ್’ ನಾಟ್ಕ ಇತ್ತು. ಆ ಟೆಂಟ್ ನಿಂದ ತುಂಬ ಪ್ರಭಾವಿತರಾದ ಕೇರಳ ಸಂಗೀತ ನಾಟಕ ಅಕಾಡಮಿಯವ್ರು ತಮಗಾಗಿ ಆ ಟೆಂಟ್ ಕೇಳಿದ್ರಂತೆ. ಆಗಲೇ ಅದನ್ನ ಉಪಯೋಗಿಸ್ತಿರೋ ಶ್ರೀಲಂಕನ್ನರು ‘ಸಾರಿ’ ಅಂದ್ರಂತೆ. ‘ಇರ್ಲಿ ಬಿಡಿ. ನಾವೇ ಮಾಡ್ಕೋತೇವೆ’ ಅಂತ ಅಕಾಡಮಿಯವ್ರು ಅವರೇ ಅಂಥದೊಂದು ಟೆಂಟ್ ಮಾಡಿದ್ರು. ಅದನ್ನ ಅತಿ ಕಡಿಮೆ ಬೆಲೆಗೆ ಭಡಿಗೇಗೂ ಕೊಡ್ತಿದ್ರು. ಕೆಲವು ವರ್ಷ ಬಯಲಲ್ಲೂ ಆ ಟೆಂಟ್ ಕಟ್ಟಿದ್ರು. ಈಗ ಅದೇ ಹೆಚ್ಚು ವ್ಯವಸ್ಥಿತವಾದ ‘ ಪೆವಿಲಿಯನ್’ ಆಗಿದೆ.

ಮೊದಲಿಗೆ ತುಂಬ ಖುಷಿಯಾದ್ದು ‘ದಕ್ಲ ಕಥಾ..’ ನಾಟ್ಕ ನೋಡೋಕೆ ಸೇರಿದ ಜನಗಳನ್ನು ಕಂಡು. ಸುಮಾರು ಮೂರು ಸಾವಿರ ಜನ ಕೂರಬಲ್ಲಷ್ಟು ದೊಡ್ಡ ಬಯಲು ರಂಗಮಂದಿರ ಅದು. ಸಾಕಷ್ಟು ಭಾಗ ತುಂಬಿತ್ತು. ಇನ್ನು ನಾಟಕದುದ್ದಕ್ಕೂ ಸಿಕ್ಕ ಪ್ರೇಕ್ಷಕರ ಪ್ರತಿಕ್ರಿಯೆ. ಸಿಳ್ಳೆ, ಚಪ್ಪಾಳೆಗಳು. ನಾಟಕದಲ್ಲಿ, ಅದೂ ಇಂಥ ಬಯಲು ರಂಗಮಂದಿರದಲ್ಲಿ ತಮ್ಮ ಖುಷಿಯನ್ನ ತೋರ್ಪಡಿಸೋದಕ್ಕೆ ಅಲ್ಲಿನ ಜನ ಚೌಕಾಸಿ ಮಾಡೋದಿಲ್ಲ. ಬೇರೆ ಭಾಷೆಯದಾದ್ರೂ, ಅರಿತುಕೊಳ್ಳೋಕೆ ಸಬ್ ಟೈಟಲ್ ಬೇಕಿದ್ರೂ, ಜನ ನಾಟ್ಕವನ್ನ ತುಂಬ ಇಷ್ಟಪಟ್ರು. ಇದಕ್ಕೆ ಕಾರಣ ತುಂಬ ವಿಭಿನ್ನವಾಗಿ ನಾಟಕ ಕಟ್ಟಿದ ರೀತಿ. ಈ ನಾಟ್ಕ ಕೆ.ಬಿ ಸಿದ್ದಯ್ಯನವರ ಬರಹಗಳನ್ನಾಧರಿಸಿದ್ದಾದ್ರೂ ಇದು ಬರಿಯ ಕಥೆ ಹೇಳೋದಿಲ್ಲ. ಮಾಮೂಲಿ ರಂಗ ವ್ಯಾಕರಣಗಳಾಚೆ ನಿಂತು ಹೆಚ್ಚಿನದಾದುದನ್ನ ಹೇಳೋದಕ್ಕೆ ಪ್ರಯತ್ನಿಸ್ತದೆ. ದಲಿತರಲ್ಲಿಯೇ ದಲಿತರಾದ ದಕ್ಲರ ಆಚರಣೆಗಳನ್ನು ಆಧರಿಸುತ್ತಲೇ ಅವರ ಬದುಕಿನ ನೋವು, ಬನಿಗಳನ್ನ ಹೇಳೋದಕ್ಕೆ ಪ್ರಯತ್ನಿಸ್ತದೆ. ಅವರ ಕರುಳಿನೊಳಗಣ ಧ್ವನಿಗಳನ್ನ ಹೊರಡಿಸುವಂಥ ತಮ್ಮಟೆ ಮತು ಅರೆ ಯಂಥ ವಾದ್ಯಗಳು,ಅವುಗಳ ನುಡಿಸುವಿಕೆ, ಇವೇ ನಾಟ್ಕದ ಮುಖ್ಯ ಪಾತ್ರಗಳೇನೋ ಎನ್ನೋ ಹಾಗೆ ಎದೆಯೊಳಗಿಳಿದು ವ್ಯಾಪಿಸಿಬಿಡ್ತವೆ. ನಾಟಕದ ಸಾಹಿತ್ಯವಂತೂ ತುಂಬ ಎತ್ತರದ ಲೆವಲ್ ದು. ಅವುಗಳನ್ನ ಪಾತ್ರಧಾರಿಗಳು ದಾಟಿಸ್ತಿದ್ದ ರೀತಿಯಂತೂ ಅನನ್ಯ. ಎಷ್ಟು ಚಟಪಟ, ಎಷ್ಟು ಆರ್ದ್ರ!. ಆಭಿನಯಕ್ಕಂತೂ ಫುಲ್ ಮಾರ್ಕ್.

ಕನ್ನಡದ ಮಟ್ಟಿಗಂತೂ ಎಲ್ಲ ಬೌಂಡರಿಗಳನ್ನೂ ದಾಟಿ, ಪ್ರೇಕ್ಷಕರ ಎದೆಯನ್ನು ಮೀಟುವ ಈ ಪ್ರಯತ್ನ ತುಂಬ ಶ್ರೇಷ್ಠಮಟ್ಟದ್ದು.

ಇಂಥ ವಿಶಿಷ್ಟ ನಾಟ್ಕದೊಂದಿಗೆ ಕನ್ನಡ ರಂಗಭೂಮಿಯ ಪ್ರತಿನಿಧಿಯಾಗಿ ಹೋಗಿ ಮಲಯಾಳೀ ನೆಲದಲ್ಲಿ ನಮ್ಮ ಕಂಪು ಸೂಸಿದ್ದಕ್ಕೆ –

ಜಂಗಮ ಕಲೆಕ್ಟಿವ್, ಕೆ.ಪಿ.ಲಕ್ಷ್ಮಣ ಮತ್ತು ಇಡಿಯ ಕಲಾವಿದ ವರ್ಗಕ್ಕೆ ಅಭಿನಂದನೆಗಳು.

ಈ ಲೇಖನ ಬರೆಯೋಹೊತ್ತಿಗೆ ‘ದಕ್ಲಕಥಾ…’ ಮೇಟಾ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿದೆ ಎನ್ನೋ ಸುದ್ದಿ ಬಂದಿದೆ.ಅಲ್ಲಿಯೂ ಯಶಸ್ಸು ಸಿಗಲಿ ಎಂಬ ಹಾರೈಕೆಗಳೊಂದಿಗೆ…

। ನಾಳೆಗೆ ಇನ್ನೊಂದು ನಾಟಕ ।

‍ಲೇಖಕರು avadhi

April 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: