ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ: ಭಾಗ-2…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

15.2

ನಾನು ನಿಕೋಬಾರಿನಲ್ಲಿ

ನನಗೆ ನೀರ ಮೇಲಿನ ಪಯಣ ಹೊಸದಲ್ಲ. ದೋಣಿ, ತೆಪ್ಪ, ಬಾರ್ಜ್ ಮೂಲಕ ಓಡಾಡಿದ್ದೆ. ಆದರೆ ಹಡಗಿನಲ್ಲಿ ದಿನಗಟ್ಟಲೆ ಹೋಗುವ ಅವಕಾಶ ಒದಗಿರಲಿಲ್ಲ. ಹದಿನೈದು ದಿನಗಳ ಅಂಡಮಾನ್ ಪ್ರವಾಸದಲ್ಲಿ ನಿಕೋಬಾರಿಗೆ ನೀರಿನ ಹಾದಿಯ ಮೂಲಕ ಪ್ರಯಾಣಿಸುವ ಪ್ಲ್ಯಾನ್ ಇತ್ತು. ಹೋಗಿ ಬರುವ ಪಯಣಕ್ಕೆ ನಾಲ್ಕು ದಿನ, ಅಲ್ಲೆರಡು ದಿನ –ಹೀಗೆ ನಿಗದಿ ಪಡಿಸಿತ್ತು. ನಿಕೋಬಾರಿಗೆ ಹೋಗಲು ಸಮುದ್ರದ ಪರಿಸ್ಥಿತಿ ಗಮನಿಸಿ ಹಡುಗು ಪಯಣ ಬೆಳೆಸುತ್ತದೆ. ನಮ್ಮ ಪೂರ್ವ ನಿಗದಿತ ದಿನಗಳಂದು ಹಡಗು ಹೊರಡದೆ ಮುಂದೆ ಮುಂದೆ ಹೋಗಿ ಪ್ರವಾಸವೇ ಕ್ಯಾನ್ಸಲ್ ಆಗುವಂತಿತ್ತು. ಕೊನೆಗೆ 29ರ ಮಾರ್ಚ್ ಬೆಳಿಗ್ಗೆ ನಿಕೋಬಾರ್ ಕಡೆಗೆ ನಮ್ಮ ಪಯಣ ಐದುನೂರು ಜನರಿಗೆ ಸ್ಥಳಾವಕಾಶವಿರುವ ದೊಡ್ಡ ಕ್ಯಾಂಪಬೆಲ್ ಬೇ ಹಡಗಿನಲ್ಲಿ ಹೊರಟಿತು. ಹಡಗಿನ ತುಂಬಾ ಜನಜಂಗುಳಿ. ಮೆಟ್ಟಿಲು ಹತ್ತುವಷ್ಟರಲ್ಲಿ ಮರುಜನ್ಮ ಪಡೆದಂತೆನಿಸಿತು, ಲಗೇಜನ್ನು ಪೋರ್ಟರ್ ಹೊತ್ತೊಯ್ದರೂ. ಹಡಗಿನೊಳಗೆ ಮತ್ತೆ ಮೆಟ್ಟಿಲೇರಿ ನಮ್ಮ ಕೊಠಡಿ ಸೇರಿಕೊಂಡೆವು. ಊಟ-ತಿಂಡಿಗೆ ಮತ್ತೊಂದು ಮಹಡಿಗೆ ಹೋಗಬೇಕಿತ್ತು. ಟೈಟಾನಿಕ್ ಸಿನಿಮಾದ ದೊಡ್ಡ ಹಡಗು ನೋಡಿದ್ದರೂ ನಮ್ಮ ಹಡಗೂ ನನಗೆ ದೊಡ್ಡದೆನಿಸಿತು.

ಇಬ್ಬರ ವಸತಿಗೆ ಅನುಕೂಲವಿದ್ದ ಡಿಲಕ್ಸ್ ರೂಮಿನಲ್ಲಿ ಬೇಲಾಶರ್ಮ ನನ್ನ ಕೊಠಡಿ ಸಹವಾಸಿಯಾಗಿದ್ದರು. ಅಮ್ಮ ಇದ್ದಾರೆಂದು ಖುಷ್ಬೂ ಆಗಾಗ್ಗ ರೂಮಿಗೆ ಬರುತ್ತಿದ್ದರು. ರೂಮಿನಲ್ಲೊಂದು ಟಿ.ವಿ. ಇದ್ದರೂ ಆನ್ ಆಗಲಿಲ್ಲ. ಟಿ.ವಿ ಪಕ್ಕದಲ್ಲಿದ್ದ ಏಕಮಾತ್ರ ಕಿಟಕಿಯ ಬಾಗಿಲನ್ನು ಹಕ್ಕಿಗಳನ್ನು ಕಾಣುವ ನಿರೀಕ್ಷೆಯಿಂದ ತೆರೆಯುವಲ್ಲಿ ಯಶಸ್ವಿಯಾದೆ. `ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ ಸಕಲ ವಿಸ್ತಾರದ ರೂಹು ನೀನೇ ದೇವಾ’ ಎನ್ನುವಂತೆ  ಕಂಡದ್ದು ಪಾರವಿಲ್ಲದ ನೀರು. ಜೊತೆಗೆ ಆಕಾಶ, ಮೋಡ, ಸೂರ್ಯ, ಚಂದ್ರ. ನಡುನಡುವೆ ನಡುಗಡ್ಡೆಗಳು. ಕಡಲ ಮೇಲಣ ಸೂರ್ಯೋದಯ, ಸೂರ್ಯಾಸ್ತಮಾನ, ಮೋಡಗಳ ಸೊಬಗನ್ನೆಲ್ಲ ಚಿತ್ರವಾಗಿಸುವುದೇ ಕಾಯಕವಾಗಿತ್ತು. ಹಲವು ರೀತಿಯ ಟ್ರಯಲ್ ಮಾಡಲು ಸಿಕ್ಕ ಸದವಕಾಶ. ಒಂದು ದ್ವೀಪ ದಾಟಿದಂತೆ ಇನ್ನೊಂದು ಇನ್ನೆಷ್ಟು ದೂರವೆಂದು ನಿರೀಕ್ಷಿಸುತ್ತಾ ಜನವಸತಿ ಇದ್ದ, ಇಲ್ಲದ ದ್ವೀಪ, ಕಿರುದ್ವೀಪಗಳನ್ನು ದಾಟಿ ಮುಂದೆ ಮುಂದೆ ಹೋಗುತ್ತಿದ್ದೆವು. ಒಮ್ಮೊಮ್ಮೆ ಅದೇ ನೋಟ ಎಂಬ ಬೇಸರದ ಎಳೆ ಇಣುಕಿದರೂ `ಇಂತಹ ನೋಟ ಜೀವಮಾನದಲ್ಲೊಮ್ಮೆ, ಇದಕ್ಕೆ ಬೇಸರವೇಕೆ ಲೀಲಾ’ ಎಂದು ನನ್ನನ್ನು ನಾನೇ ಸಾಂತ್ವನಿಸಿ ಫ್ರೆಶ್ ಆಗುತ್ತಿದ್ದೆ.

ನಿಕೋಬಾರಿನ ನೀರ ಹಾದಿಯಲ್ಲಿ ಹಕ್ಕಿ ಸಿಗದಿದ್ದರೂ ಹಕ್ಕಿಯಂತೆ ಹಾರಿ ನೀರಿಗೆ ಬೀಳುತ್ತಿದ್ದ flying fish ನೀರ ಮೇಲೆ ಗೆರೆಗಳ ಕವಿತೆ ಬರೆದಂತ್ತಿತ್ತು. ತೂಗುಯ್ಯಾಲೆ ಆಡುವ ಹಡಗಿನಲ್ಲಿ, ಪ್ಯಾಸೇಜಿನಲ್ಲಿ ಓಡಾಡುವರ ನಡುವೆ ನಿಂತು ದೊಡ್ಡ ಲೆನ್ಸ್  ಹಾಕಿದ ಕ್ಯಾಮೆರಾ ಹಿಡಿದು ಚಿತ್ರ ತೆಗೆಯುವುದು ಸುಲಭವಲ್ಲ. ಮಿಂಚಿನಂತೆ ನೆಗೆದು ನೀರು ಸೇರುತ್ತಿದ್ದ ಹಾರುವ ಮೀನುಗಳ ಚಿತ್ರ ತೆಗೆಯುವುದೂ ತ್ರಾಸ. ದೊಡ್ಡ ಲೆನ್ಸಿನಿಂದ ತೆಗೆದರೂ ಬಹುಪಾಲು 100-400 ಲೆನ್ಸನ್ನೇ ಬಳಸಿದೆ. ಒಂದೆರಡು ಕಡೆ ಕಂಡ ಡಾಲ್ಫಿನ್ ನಾನು ತೆಗೆದ ಚಿತ್ರದಲ್ಲಿದೆ ಎಂದು ನಾನೇ ಸಾಕ್ಷೀಕರಿಸುವೆ. ನಡುಗಡ್ಡೆ, ದ್ವೀಪಗಳ ಅಂಚಿನಲ್ಲಿ ಕೆಲವು ಪಕ್ಷಿ ಕಂಡರೂ ನಮ್ಮ ದೈತ್ಯ ಹಡಗಿನಿಂದ ಚಿತ್ರ ತೆಗೆದರೆ ಚುಕ್ಕೆಗಳಂತಿದ್ದವು. 

ಕ್ಯಾಂಪ್ಬೆಲ್ ಹಡಗು ಮಾರ್ಗಮಧ್ಯೆ ನಿಲ್ಲಿಸಿ ಜನರನ್ನು ಇಳಿಸಿ ಹತ್ತಿಸಿಕೊಳ್ಳುತ್ತಿತ್ತು. ನಿಲ್ಲಿಸುವಾಗ ಲಂಗರು ಹಾಕಲು ದೈತ್ಯಗಾತ್ರದ ಹಗ್ಗಗಳನ್ನು ಕಟ್ಟಲು ಹಲವು ಹತ್ತು ಜನ ಓಡಾಡುತ್ತಿದ್ದರು. ಒಂದೆಡೆ ಹಡಗಿನ ಪಕ್ಕದಲ್ಲಿದ್ದ ದೋಣಿಗೆ ತೂಗೇಣಿಯ ಮೂಲಕ ಜನ ಇಳಿದು ಹತ್ತುವುದನ್ನು ಕಂಡು ಮೈ ಜುಂ ಎಂದಿತು. kamorta ದ್ವೀಪದಲ್ಲಿ ಹಡಗು ಲಂಗರು ಹಾಕಿದಾಗ ಖುಷ್ಬೂ ಇಳಿದು ಹೋಗಿ ಬಿಳಿಕಾಲರಿನ ಮಿಂಚುಳ್ಳಿಯ ಪ್ರಬೇಧ ಕ್ಲಿಕ್ಕಿಸಿದರು. ಹಡಗಿಗೆ ಹತ್ತುವಾಗಲೇ ಕಂಗಾಲಾಗಿದ್ದ ನಾನು ಕ್ಯಾಮೆರಾ ಸಮೇತ ಇಳಿದು ಹತ್ತುವ ಸಾಹಸಕ್ಕೆ ಕೈಹಾಕದೆ ಖುಷ್ಬೂ ತೆಗೆದ ಚಿತ್ರ ನೋಡಿ ತೃಪ್ತಗೊಂಡೆ. ಸಾಧ್ಯವಾದರೆ Narcondam hornbill ಸೆರೆ ಹಿಡಿಯುವಾಸೆಯಿಂದ ಇಳಿದ ಖುಷ್ಬೂ ಆಸೆಯನ್ನು ಮಂಗಟ್ಟೆ ಮಾನ್ಯ ಮಾಡಲಿಲ್ಲ.

ಆ ರಾತ್ರಿ ನಾನು ಅರ್ಜುನನಂತೆ ನಿದ್ರೆ ಗೆದ್ದೆ. ನಿಶೆಯಲ್ಲಿ ಕಿಟಕಿಯಲ್ಲಿ ಇಣುಕಿದ ಶಶಿ `ನನ್ನನ್ನು ಕಂಡರೆ ನಿನಗಷ್ಟು ಲವ್. ನನ್ನ ಚಿತ್ರ ಕ್ಲಿಕ್ಕಿಸಲ್ವೆ’ ಎಂದ. ಪೂರ್ಣಚಂದ್ರನ ಚಿತ್ರ ನಮ್ಮೂರಿನಲ್ಲೂ ತೆಗೆಯಬಹುದು. ಆದರೆ ನಗರಗಳ ಬೆಳಕಿನಲ್ಲಿ ತೆಗೆದ ಚಿತ್ರ ಚಂದವೆ? ಊರಿಂದಾಚೆ ಕತ್ತಲಿನಲ್ಲಿ ತೆಗೆಯಬಹುದು. ಆದರೆ ಸಮುದ್ರದ ನಡುವೆ ಇರುಳಿನಲ್ಲಿ ತೂಗುವ ಹಡಗಿನಲ್ಲಿ ಚಂದ್ರ ಕಾಣುವ ಬಗೆಯ ಬಗೆಗೆ ಕಾತುರ. ನಭದಲ್ಲಿ ಇರುಳು ಕವಿಯುತ್ತಿದ್ದಂತೆ ಮೂಡಿದ ಚಂದ್ರಾಮ ಮೋಡಗಳ ನಡುವೆ ಒಲೆದಾಡುತ್ತಿದ್ದ. `ಬೆಳದಿಂಗಳ ರಾತ್ರೇಲಿ ಈಚೋರಿ ಬ೦ದ್ರೆ ಈಚ್ಲೆ೦ಡ ಚೆಲ್ದಂಗೆ ನೆಪ್ಪಾಯ್ತದೆ. ಆಕಾಸದ್ ಚಂದ್ರನ್ನ ಪಡಕಾನೆ ದೀಪಕ್ಕೆ ವೋಲೀಸ್ದೆ ವೋಯ್ತಂದ್ರೆ ತಪ್ಪಾಯ್ತದೆ…’ ಜಿ.ಪಿ.ರಾಜರತ್ನಂ ಪದ್ಯ ತಪ್ಪದೆ ನೆಪ್ಪಾಯಿತು. 29-30ರ ಇಡೀ ರಾತ್ರಿ 29 ಕಳೆದದ್ದು 30 ಬಂದದ್ದು ಗೊತ್ತಾಗದಿರುವಂತೆ ಮರುಳು ಮಾಡಿದ ಶಶಿಯನ್ನು ನೋಡುತ್ತಾ ಕೊನೆಗೆ ಮಲಗಿದ್ದು 4.00 ಗಂಟೆಗೆ ರವಿಯನ್ನು ಐದು ಗಂಟೆಗೆ ಕಡಲ ಮೇಲಿನ ಸ್ವಾಗತಿಸುವ ಸಂಭ್ರಮದ ಮಂದಹಾಸದಲ್ಲಿ. ಹಡಗಿನ ಕಿಟಕಿಯಿಂದ ತಾರಾಪತಿಯನ್ನು ತಾರೆಯಂತೆ ಸೆರೆಹಿಡಿವ ಆಸೆಗೆ ಓಲಾಡುವ ಹಡಗಿನಿಂದ ತೂರಾಡುವ ನಿಶಾಪತಿ ಸೆರೆಯಾದ.

ಅಂತೂ ಇಂತೂ ನಮ್ಮ ಒಂದು ಕಡೆಯ ಪಯಣ ನಿಲುಗಡೆಗೆ ಬರುವ ಸಮಯ ಬಂದೇ ಬಂದಿತು. ಗ್ರೇಟ್ ನಿಕೋಬಾರಿನ ಕ್ಯಾಂಪ್‌ಬೆಲ್ಲಿನಲ್ಲಿ ಎಂಟು ಗಂಟೆಗೆ ಇಳಿದು ಗೆಸ್ಟ್ ಹೌಸ್ ಸೇರಿದ ಅರ್ಧ ಗಂಟೆಯಲ್ಲಿ ಖುಷ್ಬೂ ನಮ್ಮನ್ನೆಲ್ಲಾ ಗೂಬೆಗಾಗಿ ಹೊರಡಿಸಿ ಅಲ್ಲಲ್ಲ ಓಡಿಸಿಕೊಂಡು ಹೊರಟರು. ಕತ್ತಲಲ್ಲಿ ಬಿಕ್ಕುತಿಹಳು ಯಾರೋ ನೀರೆ ಎಂದರೆ ಈ ಖುಷ್ಬೂನೆ. ಇರುಳಿನಲ್ಲಿ ಹೋದದ್ದು ಒಬ್ಬರ ಮನೆಯ ತೋಟಕ್ಕೆ. ಗೂಬೆ ಇರುವುದು ಸದ್ದು, ಹಾರಾಟದಿಂದ ಗೊತ್ತಾದರೂ ನಮ್ಮ ನೋಟಕ್ಕೆ ಸರಿಯಾಗಿ ದಕ್ಕಲಿಲ್ಲ. ಐದಾರು ಫೋಟೋ ಹಿಡಿಯುವಷ್ಟರಲ್ಲಿ ಕಾಣೆಯಾಯಿತು. ನಿರಾಶೆಯಿಂದ ಬಿಡಾರಕ್ಕೆ ಮರಳುವ ಹಾದಿಯಲ್ಲಿ ಮಾರು ದೂರದಲ್ಲಿ ಹಾವು ಹಾಯ್ದು ಹೋದದ್ದನ್ನು ನೋಡಿದ್ದಷ್ಟೆ ಲಾಭ.

ಮರುದಿನ ನಿಕೋಬಾರಿನ ಶೇಕಡಾ 80ಕ್ಕಿಂತ ಹೆಚ್ಚು ಆವರಿಸಿದ Great Nicobar Biosphere reserveಗೆ ಹೊರಟೆವು. ಇಡೀ ರಾತ್ರಿ ಸುರಿದು ಹರಿದ ಮಳೆ… ಮಸುಕು ಬೆಳಕು. ನಿಕೋಬಾರಿನಲ್ಲಿ ಬುಡಕಟ್ಟು ಜನ ಇರುವುದರಿಂದ ಎಲ್ಲ ಕಡೆಗೂ ಮುಕ್ತ ಪ್ರವೇಶ ಇಲ್ಲ. ಬಯೋಸ್ಪಿಯರ್ ಮೀಸಲು ಅರಣ್ಯದಲ್ಲಿ ಕೂಡಾ ಸೀಮಿತ ದೂರದವರೆಗೆ ಪ್ರವೇಶ. ನಾವೆಲ್ಲೂ ಅವರನ್ನು ಕಾಣಲಿಲ್ಲ. ಹೊರಡುವಾಗಲೆ Pied imperial pigeon ತೆಂಗಿನಮರದಲ್ಲಿ ಕುಳಿತು ದರ್ಶನ ನೀಡಿ ಲೈಫರ್ ಆಯಿತೆ ಹೊರತು ಕೆಳಗಿಳಿಯುವ ಕೃಪೆ ಮಾಡಲಿಲ್ಲ. Andaman cukoo dove ಗೂಡು ಕಟ್ಟುವ ಕಾಯಕದಲ್ಲಿದ್ದು ದೂರದ ದರ್ಶನ ನೀಡಿತು. Nicobar Parakeet, ನಿಕೋಬಾರ್ ಇಂಪಿರೀಯಲ್ ಪಿಜನ್  ಸಿಕ್ಕಿ ಲೈಫರ್ ಲೆಕ್ಕಕ್ಕೆ ಬಂದಿತು. ಮರಳಿ ಬರುವಾಗ ಇಪ್ಪತ್ತೈದು ಮೆಟ್ಟಿಲು ಹತ್ತಿ ಹೋದರೆ ಮೊನಾರ್ಕ್ ಮರಿ ಕಂಡಿತಾದರೂ ಅದಕ್ಕಿಂತ ಚೆನ್ನಾಗಿ ಗಣೇಶಗುಡಿಯಲ್ಲೇ ಸಿಕ್ಕಿದ್ದು ನೆನಪಾಯ್ತು. ಆದರೆ ಕಡ್ಡಿಯ ಎರಡು ತುಂಡುಗಳು ಕಂಡಾಗ ಕುತೂಹಲ ಕೆರಳಿತು. ವಿಕ್ರಮ್ ‘ಇದು ಬೆಂಕಿ ಬರಿಸಲು ಮಾಡಿಕೊಂಡ ಸಾಧನ’ ಎಂದು ಟ್ರಯಲ್ ಮಾಡಿ ತೋರಿಸಿದರು.

ನಿಕೋಬಾರಿನಲ್ಲಿ ನಮ್ಮ ಮುಖ್ಯ ಗುರಿ Nicobar pigeon. ಚಿತ್ರ ನೋಡಿಯೇ ಚಿತ್ತವನಾವರಿಸಿದ್ದ ಈ ಪಾರಿವಾಳದ ಬೆನ್ನುಹತ್ತಿ ಇದ್ದ ಎರಡೂ ದಿನವೂ ಹುಡುಕಿಯೂ ಸುಳಿವೂ ಸಿಗಲಿಲ್ಲ. ರಾಹುಲ್, ನಿಶಾಂತ್ ವಿಕ್ರಂ ಹತ್ತಿ ಇಳಿದು ಹಲವೆಡೆ ಹುಡುಕಿದರು. ನಾನು ಅಲ್ಲೆಲ್ಲಾ ಹತ್ತಿ ಇಳಿದು ಹೋಗಲಾರೆನೆಂದು ರಸ್ತೆ ಬದಿಯಲ್ಲಿದ್ದು ಎಲೆ, ಬಳ್ಳಿ, ಚಿಟ್ಟೆಗಳ ಪಟ ತೆಗೆಯುತ್ತಿದ್ದಂತೆ ಅವರು ಶೂನ್ಯಹಸಿತರಾಗಿ ಬಂದರು.

ನಿಕೋಬಾರಿನಲ್ಲಿ ಕಾಡಿಸಿದವ ಮಳೆರಾಯ. ಆತ ಬಿಡುವು ಕೊಟ್ಟಾಗ ಹಕ್ಕಿ, ಇಲ್ಲದಿದ್ದರೆ ಬಿಡಾರದಲ್ಲಿ ಬಿದ್ದುಕೊಳ್ಳುವುದು. ಮೊದಲ ದಿನ ಬೆಳಿಗ್ಗೆಯ ಸೆಷನ್ ಮುಗಿಸಿ ವಸತಿ ಸೇರಿದ ಕೂಡಲೇ ಮಳೆ.. ಮಳೆ… ಕೊಠಡಿಯ ಬಾಲ್ಕನಿಯಿಂದ ಮಳೆ, ಗಿಡ, ಹೂ ಫೋಟೋ ತೆಗೆದೆ. ಮಳೆ ಕಡಿಮೆಯಾದ ಬಳಿಕ ಹಕ್ಕಿಗೆ ಹೋಗುವಾಗ ತಂತಿ ಮೇಲಿದ್ದ ಹೆಮ್ಮಿಂಚುಳ್ಳಿಯನ್ನು ಮೂವಿಂಗ್ ಗಾಡಿಯಿಂದ ಕ್ಲಿಕ್ಕಿಸಿದ್ದೆ. ಮಳೆಯಲ್ಲಿ ಮಿಂದ ಮಿಂಚುಳ್ಳಿಯ ಕೆಳಗಿನ ತಂತಿಯಲ್ಲಿನ್ನೂ ಹನಿಗಳಿದ್ದವು. 

ಪಯಣದ ಹಾದಿಯಲ್ಲಿ ಉದ್ದಬಾಲದ ಮಕಾಕ್ಗಳು ಕಾಣಿಸುತ್ತಿದ್ದವು. ಒಂದು ಮಕಾಕ್ ಮಂಗನ ಮರಿ ಭಾರಿ ಕುತೂಹಲದಿಂದ ಏನನ್ನೋ ನೋಡುತ್ತಾ ಕುಳಿತದ್ದು ಕಂಡು ಏನು ನೋಡುತ್ತಿದೆ ಎಂದರೆ ಆಕಾಶ ನೋಡುತ್ತಿತ್ತು. ಬಹುಶಃ ಹನುಮ ಹಾರಿ ಬರುವುದನ್ನು ಕಾಯುತ್ತಿತ್ತೇನೋ. ಸನಿಹದಲ್ಲೇ ಕುಳಿತದ್ದ ಮಕಾಕ್ ಕಂಡಾಗ ರಾವಣನ ಆಸ್ಥಾನದಲ್ಲಿ ಕುಳಿತ ಹನುಮಂತ ನೆನಪಾದ. ಹತ್ತಿರದಿಂದ ಕ್ಲಿಕ್ಕಿಸುವ ಆಸೆಯಿಂದ ಕೆಳಗಿಳಿದರೆ ಮೊಗದಿರುವಿ ಮತ್ತೊಂದೆಡೆಗೆ ಹೋದ. ಮರಳಿ ಬರುವಾಗ ಹಿಂದಿನ ದಿನ ಹಾರಿಹೋಗಿದ್ದ ನಿಕೋಬಾರ್ ಸ್ಕಾಪ್ಸ್ ಗೂಬೆ ಪೋಸ್ ಕೊಟ್ಟು ಹೃನ್ಮನ ಮುದಗೊಳಿಸಿತು. ಒಟ್ಟಾರೆ ಅಂಡಮಾನ್ –ನಿಕೋಬಾರಿನ ಪ್ರವಾಸದಲ್ಲಿ ಐದು ಗೂಬೆ ಲೈಫರಾದವು.

ಮರುದಿನ ಬೆಳಿಗ್ಗೆಯೆ ಹಕ್ಕಿಗಾಗಿ ಹೊರಟರೆ ಹಿಂದಿನ ರಾತ್ರಿಯ ಮಳೆಯಿಂದ ರಿಪೇರಿಯಾಗುತ್ತಿದ್ದ ರಸ್ತೆ ಕೊಚ್ಚೆಮಯವಾಗಿ ಮುಂದೆ ಹೋಗಲಿಲ್ಲ. ವಿಕ್ರಂ ದೂರಕ್ಕೆ ಕೈ ಮಾಡಿ ತೋರಿಸಿ `ಅದೇ ಇಂದಿರಾ ಪಾಯಿಂಟ್, ಇಂಡಿಯಾದ ಕೊನೆ ಪಾಯಿಂಟ್. 2004ರ ಸುನಾಮಿಯಿಂದ ಒಳನುಗ್ಗಿದ ಸಮುದ್ರದ ನೀರು ಅಲ್ಲಲ್ಲೇ ಭೂಸ್ವರೂಪವನ್ನು ಬದಲಾಯಿಸಿದೆ, ಅಲ್ಲಿಗೀಗ ಬೋಟಿನಲ್ಲಿ ಹೋಗಲೂ ಸಾಧ್ಯವಿಲ್ಲ’ ಎಂದರು. ಅಲ್ಲಿಗೆ ಹೋಗುವ ಇರಾದೆಯೂ ಇರದಿದ್ದ ನಾವು ಇದ್ದಲ್ಲಿಂದ ಅದನ್ನೇ ತೆಪ್ಪಗೆ ಕ್ಲಿಕ್ಕಿಸಿದೆವು.  

ಅಲ್ಲಲ್ಲಿ ಗಾಡಿ ನಿಲ್ಲಿಸಿ ಹಕ್ಕಿ ಹುಡುಕುತ್ತಿದ್ದೆವು. Hooded pitta  ಹಕ್ಕಿ ನನಗೆ lifer. Hooded pitta ಬೇರೆ ಕಡೆಯೂ ಇದ್ದರೂ ನನಗೆ ಮೊದಲ ಬಾರಿಗೆ ನಿಕೋಬಾರಿನಲ್ಲಿ ಕಾಣಸಿಕ್ಕಿತು. ಹಸುರಿನಲ್ಲಿ ಗುರುತಿಸಲು ಕಷ್ಟವಾದ ಪಿಟ್ಟಾದ ಚಿತ್ರ ತೆಗೆಯಲು ಸ್ವಲ್ಪ ಕಷ್ಟವೇ ಆಯಿತು. ನನ್ನ ಹಿಂದಿದ್ದವರು ತಾನೇ ಮೊದಲು ತೆಗೆಯುವ ಆತುರದಿಂದ ಅಡ್ಡಬಂದರು, ನಾನು ಕ್ಯಾಮೆರಾ ಸಮೇತ ಕೆಳಗೆ ಬಿದ್ದೆ. ಅವರಂತೂ ಅನೇಕ ಸಲ ತಾನು ಚಿತ್ರ ತೆಗೆಯೋದು ಮುಗಿದರೆ ಹೊರಡಿರೆಂದು ಅವಸರಿಸುತ್ತಿದ್ದರು. ಇಲ್ಲೂ ಅವರ ಅತ್ಯಾತುರದಿಂದ ನಾನು ಬೀಳಬೇಕಾಯಿತು. ಕ್ಯಾಮೆರಾಗೆ ಲೆನ್ಸಿಗೆ ಏನೂ ಆಗಿರಲಿಲ್ಲ ಎನ್ನುವುದೆ ಬಿದ್ದರೂ ಎದ್ದ ಮೇಲೆ ಸಮಾಧಾನ. ಹಕ್ಕಿ ಟೂರಿನಲ್ಲಿ ಕ್ಯಾಮೆರಾ ಹಾಳಾದರೆ ಟೂರೂ ಹಾಳು, ಹಕ್ಕಿ ಚಿತ್ರವೂ ಅಸಾಧ್ಯ. ದೂರದ ನಿಕೋಬಾರಿನಲ್ಲಿ ರಿಪೇರಿಯಾದರೂ ಹೇಗೆ ಸಾಧ್ಯ? 

Hooded Pitta ಚಿತ್ರ ತೆಗೆಯುತ್ತಾ ಇದ್ದಂತೆ ವಿಕ್ರಂ `ಇಲ್ಲಿ ನೋಡಿ crimson sunbird ಇದೆ’ ಎಂದರು. crimson ಸೂರಕ್ಕಿ ಬೇರೆ ಕಡೆ ಇದ್ದರೂ ಮೊದಲ ದರ್ಶನ ಆದದ್ದು ನಿಕೋಬಾರಿನಲ್ಲಿ. ಆ ಪುಟ್ಟ ಸೂರಕ್ಕಿ ಎಲ್ಲಿದೆ ಎಂದು ನೋಡಿ ಕ್ಲಿಕ್ಕಿಸಿದ್ದು ಐದಾರು ಷಾಟ್ ಮಾತ್ರ. ಅಂಡಮಾನಿನ ಎನ್ಡೆಮಿಕ್ ಆದ ಆಲಿವ್ ಬೆನ್ನಿನ ಸೂರಕ್ಕಿ, greater nicobar serpent eagle ಲೈಫರ್ ಆದವು.

ಮಳೆಯ ಮಧ್ಯೆಯೆ ನಿಕೋಬಾರಿನ ಪ್ರವಾಸ ಮುಗಿಸಿ ಏಪ್ರಿಲ್ 2ರ ಬೆಳಿಗ್ಗೆ ಕಾಲಿಘಾಟ್ ಹಡಗನ್ನು ಹತ್ತಿ ನಾನು ಖುಷ್ಬೂ ರಾಹುಲ್ ಬೇಲಾ ಫರ್ಸ್ಟ್ ಕ್ಲಾಸಿನ ಬಂಕರ್ ಬೆಡ್ ಇದ್ದ ಒಂದೇ ಕೊಠಡಿಯಲ್ಲಿ ಸೇರಿದೆವು. ನೀರಿನ ಪಯಣ ಮಾಡಿ ಅಂಡಮಾನಿಗೆ ಅಂದರೆ ಪೋರ್ಟಬ್ಲೇರಿಗೆ ಮೂರನೆ ತಾರೀಖು ಸಂಜೆಗೆ ತಲುಪಿ ನಮ್ಮ ಹಿಂದಿನ ವಸತಿಯಲ್ಲೇ ನೆಲೆಗೊಂಡೆವು. ನಾಲ್ಕರ  ಬೆಳ್ಳಂಬೆಳಿಗ್ಗೆಯೆ ಹಕ್ಕಿಗಳ ಹುಡುಕಾಟಕ್ಕೆ ಬಾರ್ಜ್ ಹತ್ತಿ ಪಯಣಿಸಿ, ಶೋಲ್ ಬೇಯಲ್ಲಿ ಹಾಜರಾದೆವು. ಅಂಡಪಿಂಡ ಬ್ರಹ್ಮಾಂಡ ಹುಡುಕಿದರೂ ಅಂಡಮಾನ್ ಕ್ರೇಕ್ ದರ್ಶನ ಭಾಗ್ಯ ಕರುಣಿಸಲಿಲ್ಲ. `ಇನ್ನೂ ದಯೆ ಬಾರದೆ ಕ್ರೇಕ್ ಈ ದಾಸರ ಮೇಲೆ’ `ನೀ ದಯ ರಾದಾ ಕ್ರೇಕೆ’ ಎಂದು ಹಾಡುತ್ತಾ ಸಿಕ್ಕಿದ ರಡ್ಡಿಯನ್ನೇ ಕ್ಲಿಕ್ಕಿಸಿಕೊಂಡೆವು. ಮರುದಿನ ಚಿಡಿಯಾಟಾಪಿನ ನೆತ್ತಿ ಏರಿದೆವು. ಪೋರ್ಟ್ ಬ್ಲೇರಿನ ಶಾಲೆಯೊಂದರ ಆವರಣದಲ್ಲಿ ಅಂಡಮಾನ್ ಕಣಜ ಗೂಬೆ ಇದೆ ಎಂದು ಅಲ್ಲಿಯೂ ಹುಡುಕಿದೆವು, ಆದರೆ ಏಪ್ರಿಲ್ ತಿಂಗಳಾದ್ದರಿಂದ ಮಕ್ಕಳಿಗೆ ಸ್ಕೂಲಿಗೆ ರಜಾ ಇದೆ, ನನಗೂ ರಜಾ  ಬೇಕೆಂದು ಗೂಬೆ ಕೂಡಾ ಸ್ಕೂಲಿಗೆ ಬಾರದೆ ರಜಾ ಕೊಟ್ಟುಕೊಂಡಿತ್ತು. ಏಪ್ರಿಲ್ ಐದರ ಮಧ್ಯಾಹ್ನಕ್ಕೆ ಹದಿನೈದು ದಿನಗಳ ನೀರವಾಸ ಮುಗಿಸಿ ವಿಮಾನ ಹತ್ತಿ ಊರು ಸೇರಿದೆವು. ಹದಿನೈದು ದಿನಕ್ಕೆಂದು ಹೋಗಿದ್ದರಿಂದ ಹೋಗುವಾಗ, ಬರುವಾಗ ಲಗೇಜ್ ತೂಕ ಹೆಚ್ಚಾಯ್ತೆಂದು ದಂಡ ಶುಲ್ಕ ತೆತ್ತೆ. ಊರು ಸೇರಿದರೂ ಕಣ್ಣ ಒಳಗೆ ಮತ್ತು ಹೊರಗೆ ನೀರು-ಕಡಲೇ ಕಾಣುತ್ತಿತ್ತು, ಚಿಕ್ಕಂದಿನಲ್ಲಿ ಚುಕ್ಕಿ ಆಟ ಆಡಿದ ಮೇಲೂ ಕಣ್ಣು ಮುಚ್ಚಿದರೆ ಚುಕ್ಕಿಗಳೇ ಕಾಣುವಂತೆ.

ಇನ್ನು ಮುಂದಿನ ವಾರಕ್ಕೆ|

‍ಲೇಖಕರು avadhi

April 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: