ಕಾವ್ಯಾ ಕಡಮೆ
ನೀವು ಶುರು ಮಾಡುವುದು ಅಲ್ಲಿಂದಲೇ.
ಅಲ್ಲೆಲ್ಲೋ ದೂರದಲ್ಲಿ ಹಾಡುತ್ತಿರುವ
ರತ್ನ ಪಕ್ಷಿಯ ಕತ್ತು ಮುರಿಯಬೇಕು
ಆ ದನಿಯ ಕೇಳುವುದೇ ನಿಷಿದ್ದ
ಎಂದು ಪ್ರಮಾಣಿಸಬೇಕು
ಅಬ್ಬಬ್ಬಾ ಅಂದರೆ ಎಷ್ಟಿದ್ದಾರು
ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು?
ಅವರೆಲ್ಲರ ರೆಕ್ಕೆ ಮುರಿಯೋಣ ಬನ್ನಿ
ನೀವು ಅವರ ಕೆಂಗೂದಲ ದೊಡ್ಡ ಕಣ್ಣುಗಳ
ನಾಜೂಕು ನತ್ತಿನ ನೀಳ ನಾಸಿಕವ
ಬಳುಕುವ ದೇಹವ ಕಂಡು ಸಿಳ್ಳೆ ಹಾಕಿರಿ
ಅವಳ ಅಬೂ ಎಳೆದ ಬರೆಯೂ ಇರಬಹುದು
ಅಲ್ಲಿ ಕತ್ತಿನ ಆಳದಲ್ಲಿ
ಅದನು ಮೊದಲ ಬಾರಿ ಕಂಡುದಕೆ
ಗೆದ್ದೆವೆಂದು ಸಾರಿ ಹೇಳಿರಿ ಸಭೆ ಕರೆದು
ಹೇಗಿರಬೇಕು ಗೊತ್ತಾಯ್ತಲ್ಲ ಕುಡುಕರ ರಾಜ್ಯದಲಿ
ಎಂದು ಕನವರಿಸಿರಿ ಬೆತ್ತಲೆ ಕಿವಿಯ ಬಳಿಗೆ ಬಂದು
ಬಣ್ಣ ದು ಅರ್ಥ ಹಚ್ಚಿರಿ

ದೇವಿಗೆ ರವಿಕೆ ತೊಡಿಸುವ ಪೂಜಾರಿಯ ವ್ಯಾಪಾರವಿದು
ಇಂದು ಪಚ್ಚೆ ನಾಳೆ ನೀಲಿ
ಬಾಗಿಲಿಕ್ಕಿದಾಗ ನಗ್ನ
ಮುಚ್ಚು ಎಂದಾಗ ಬಚ್ಚಿಟ್ಟು
ತೆರೆ ಎಂದಾಗ ಬಿಚ್ಚಿ ನಿಲ್ಲಬೇಕಾದ
ಉಠ್ ಬೈಟ್ ಉಠ್ ಬೈಟ್…
ಇದು ಒಂದು ಹಿಜಾಬಿನ ಪ್ರಶ್ನೆಯಲ್ಲ
ಎಂದು ಗೊತ್ತಿದೆ ನಮಗೆ
ಮುಂದೆ ಕಟ್ಟಲಿರುವ ಸಭಾಗೃಹದ
ಮೊದಮೊದಲ ಇಟ್ಟಿಗೆಗಳು ಇವು
ನಾವೂ ಕಳಿಸೋಣಲ್ಲ ದೇಣಿಗೆ ಕಟ್ಟೋಣಲ್ಲ
ಅಮಲು ಹಂಚೋಣಲ್ಲ
ನಾಳೆಯ ದಿನ ನೆರೆ ಬಾಗಿಲಿಗೇ ಬಂದಾಗ
ಅಚ್ಚರಿ ಪಡೋಣಲ್ಲ, ಅರೇ ಹೇಗಾಯ್ತಿದು ಹ್ಹೆ ಹ್ಹೆ
ಎನ್ನುತ್ತಲೇ ಮುಳುಗೋಣಲ್ಲ
ಎಷ್ಟೆಂದರೂ ನಮ್ಮದೇ ಅಜ್ಜ ಮುತ್ತಜ್ಜಂದಿರು
ಕಟ್ಟಿದ ದೇಶ ಅವರ ಅಜ್ಜ ಮುತ್ತಜ್ಜಂದಿರು
ನಮ್ಮ ದೋಚಿದರು
ನಮ್ಮವರು ಅವರ ಹೆಂಗಸರ ಸೆರಗೆಳೆದರು
ಅವರು ನಮ್ಮವರ ಸೊಂಟ ಚಿವುಟಿದರು
ನಿಮ್ಮ ಯುದ್ಧದಲ್ಲಿ ಒಂದು ಹತಿಯಾರವಷ್ಟೇ ಆದುದಕ್ಕೆ
ಕಟ್ಟಬೇಕಾದ ತೆರಿಗೆಯಿದು
ಕಟ್ಟುತ್ತೇವೆ ಬಿಡಿ

ನಮ್ಮ ಪಾಟೀಚೀಲ ಗಂಟು ಹಾಕಿಕೊಂಡಿದೆ
ಶಿರವಸ್ತ್ರದ ಜೊತೆಗೆ
ಹೊಸ್ತಿಲಲ್ಲಿ ನಿಂತವರ ಒಳಕೋಣೆಗೆ ನೂಕಲಾಗುತ್ತಿದೆ
ಅಷ್ಟೇ ತಾನೇ? ನಿಮ್ಮ ದಾಹ ಇಂಗಿಸಲು
ಬಿಡಿ ಮನೆಯಲ್ಲೇ ಉಳಿದು ಬಿಡುತ್ತೇವೆ
ನಮ್ಮ ದೇಹದ ಸುತ್ತ ವೃಣದಂತೆ ಹರಡಿದ
ನಿಮ್ಮ ಧರ್ಮ ನಿಮ್ಮ ಕೋರ್ಟು
ಗಡಿ ಕಾಲೇಜಿನ ಗೇಟು ನಿಮ್ಮ ಸಾಮ್ರಾಜ್ಯ
ನಿಯಮಗಳು ಸಮವಸ್ತç ಕೇಕೆ ಅಟ್ಟಹಾಸ
ಇದರಲ್ಲಿ ನಮಗೆ ಪಾಲಿಲ್ಲ ಎಂಬುದ
ಎಂದೋ ಅರಿತಿದ್ದೇವೆ.






0 Comments