ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲ ಚಾಟಿ ಬೀಸಿದ್ದು..

 

 

 

 

 

 

ಮಡಿಲು

ಕೃಷ್ಣ ಶ್ರೀಕಾಂತ ದೇವಾಂಗಮಠ

 

ನಿದ್ದೆ ಹೋಗಿದ್ದೇನೆ ಜೋಗುಳ ಕೇಳಿದ್ದೇನೆ
ಅಂಗಾತ ಬಿದ್ದು ಹೊರಳಾಡಿ
ಕೆನ್ನೆ ಕೆಂಪಾಗುವಂತೆ ಅತ್ತು ಮುದ್ದಿಸಿಕೊಂಡಿದ್ದೇನೆ
ನಿನ್ನ ಬೆಚ್ಚನೆಯ ಮಡಿಲಲ್ಲಿ ಕನಸುಗಳ
ರಾಶಿ ಹರವಿಕೊಂಡು ಚೆಂದದೊಂದು
ಗೂಡು ಹೆಣೆದಿದ್ದೇನೆ
ಸೋಲು ನಿರಾಸೆಗಳ ತೋಡಿಕೊಂಡು
ನಿರಾಳವಾಗಿದ್ದೇನೆ

ಒಡೆದ ನಿನ್ನ ಬಳೆಚೂರುಗಳ
ಹೂತಿಟ್ಟು ಹುಡುಕಿ ಹುಡುಕಿಯೂ ಸಿಗದೆ ರೋಸಿ ಆಡಿದ್ದಿದೆ
ಆಕಾಶದಂಥ ನಿನ್ನ ಸೀರೆಯ ಮೇಲ್ಮೈ
ತಾರೆ ಚಿತ್ತಾರಗಳ ಎಣಿಸಿ
ಚಂದ್ರಮನ ಬಿಡಿಸಿ
ಥಂಡಿಗೆ ಅದೇ ಹೊದ್ದು ಮಲಗಿದ್ದಿದೆ
ಚಂದ್ರ ಲೋಕದಿ ನಾ
ಕಿಲಕಿಲ ನಗುವ ಪುಟಾಣಿ ರಾಜ
ಕಥೆ ಮತ್ತೆ ಕಣ್ ಕಟ್ಟುತ್ತದೆ

ಅಲ್ಲಿ ನೀನಿಲ್ಲದೆ ಅದೆಂಥ ರಾಜ್ಯಭಾರ
ಸಿಂಹಾಸನದಲ್ಲಿ ಹಗ್ಗದಿಂದ ಬಿಗಿದಂತೆ
ಕಿರೀಟದ ತಲೆಭಾರ ಸಾಕಾಗಿದೆ

ನೀನೊಬ್ಬಳೇ ಸ್ವರ್ಗಕ್ಕೆ ಹೋದಾಗ
ನಾನಿನ್ನು ಚಿಕ್ಕ ಪೋರ
ಬುಗುರಿ ಆಡುತ್ತಿದ್ದವನಿಗೆ ಕಾಲ
ಚಾಟಿ ಬೀಸಿದ್ದು ತಿಳಿಯಲೇ ಇಲ್ಲ
ಅಂದು ಮೋಡಗಟ್ಟಿದ ಕಣ್ಣೀರು
ಇಂದಿಗೂ ಹನಿ ಒಡೆಯುತ್ತದೆ

ನಿನ್ನ ಮಡಿಲು ಸೇರಲು
ಇಷ್ಟು ವರ್ಷಗಳ ನಂತರವೂ ಕಾಯುತ್ತಿದ್ದೇನೆ
ಕಾಠಿಣ್ಯ ವ್ರತದಂತೆ ಧೀರ್ಘ ತಪಸ್ಸಿನಂತೆ
ಮಣ್ಣಾಗಿಯೋ ಭ್ರೂಣವಾಗಿಯೋ
ಏನಾದರೂ ಸರಿಯೇ
ಮಗುವಾಗಬೇಕು ಮತ್ತೆ ಮಡಿಲಲ್ಲಿ
ಎಲ್ಲ ಬೇಗುದಿಗಳ ಮೀರಿ

 

‍ಲೇಖಕರು admin

4 January, 2017

1 Comment

  1. Anonymous

    Fantastic video & news

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading