ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾರ್ಪೊರೇಟ್ ಸಂನ್ಯಾಸಿಗಳು!

ರಾಘವೇಂದ್ರ ರಾವ್ .ಕೆ

ಕಾವ್ಯ-ಕಲೆಗಳಲ್ಲಿ ಸಾಧನೆ ಮಾಡಿದವರನ್ನು ರಸಋಷಿಗಳೆಂದು ಕರೆಯಲಾಗುತ್ತದೆ. ರಾಜರುಗಳಾಗಿದ್ದುಕೊಂಡು ಋಷಿಗಳಂತೆ ಬಾಳುವೆ ನಡೆಸಿದವರನ್ನು ರಾಜರ್ಷಿಗಳೆನ್ನುತ್ತಾರೆ. ದೇವಗಣಗಳಲ್ಲಿ ಇದ್ದುಕೊಂಡು ಋಷಿಗಳಂತೆ ಜೀವಿಸುವವರನ್ನು ದೇವರ್ಷಿಗಳೆಂದು, ತಮ್ಮ ಸಾಧನೆ, ತಪದ ಮೂಲಕ ಪರಬ್ರಹ್ಮನನ್ನು ಅರಿತವರನ್ನು ಬ್ರಹ್ಮರ್ಷಿಗಳೆಂದು ಕರೆಯಲಾಗುತ್ತದೆ. ಈ ಗುಂಪಿಗೆ ಹೊಸದೊಂದು ಸೇರ್ಪಡೆ ಅನ್ನಬಹುದು, ಕಾರ್ಪೊರೇಟ್‍ನಲ್ಲಿ ಇದ್ದುಕೊಂಡು ಋಷಿಗಳಂತೆ ಬಾಳುವವರನ್ನು ಕಾರ್ಪರ್ಷಿಗಳೆನ್ನಬಹುದೇನೋ.

ನಾನು ಇಲ್ಲಿ ಹೇಳೋಕೆ ಹೊರಟಿರೋ ವಿಷಯ ಏನೆಂದರೆ, ಈ ಕಾರ್ಪೊರೇಟ್ ಜಗತ್ತಿನ ಒಂದಿಷ್ಟು ಮಂದಿಯ ಬಗೆಗೆ. ಹೇಗೆ ನಾವು ನಮ್ಮ ಸಮಾಜದಲ್ಲಿ ಭಿನ್ನ ಭಿನ್ನವಾದ ವ್ಯಕ್ತಿಗಳನ್ನು, ವ್ಯಕ್ತಿತ್ವಗಳನ್ನು ಕಾಣುತ್ತೇವೋ, ಅದೇ ಸಮಾಜದಲ್ಲಿರುವ ಕಾರ್ಪೊರೇಟ್‍ನಲ್ಲಿಯೂ ತರಹೇವಾರಿ ವ್ಯಕ್ತಿತ್ವಗಳಿರುತ್ತವೆ.

ಕೆಲಸ ಮಾಡುವವರು, ಕೆಲಸ ಮಾಡದವರು, ಮಾಡದೆಯೇ ಮಾಡಿದಂತೆ ನಟಿಸುವವರು, ಮಾಡಿದರೂ ಮಾಡದಂತಿರುವವರು, ವಾಚಾಳಿಗಳು, ಏನೂ ಮಾತನಾಡದವರೂ, ಕೆಲಸ ಹೇಳುವವರು, ಕೆಲಸವನ್ನು ಡೆಲಿಗೇಟ್ ಮಾಡುವವರು ಹೀಗೆ ಬಗೆಬಗೆಯ ಗುಂಪಿನ ಕಾರ್ಪೋರೇಟ್ ಜನರುಂಟು.

ಅದರಲ್ಲಿ ಒಂದಷ್ಟು ಮಂದಿ ಮಾತ್ರ, ಕಾರ್ಪೊರೇಟ್‍ನ ಸ್ಪರ್ಧಾತ್ಮಕ ಜಗದೊಳಗೆ ಪದ್ಮಪತ್ರದ ಮೇಲಿನ ನೀರಿನಂತೆ ನಿರ್ಲಿಪ್ತ ಭಾವ ತಳೆದು ಜೀವಿಸಿರುತ್ತಾರೆ. ಅವರ ಬಗೆಗೆ ಒಂದಿಷ್ಟು ಯೋಚನೆಗಳು ಈ ಲೇಖನ.

ಹೇಗೆ ಮುನಿಗಳು ಸದಾ ಬ್ರಹ್ಮ ಚಿಂತನದಲ್ಲಿಯೇ ಮಗ್ನರಾಗಿ, ಧ್ಯಾನಿಸುತ್ತಿರುತ್ತಾರೆಯೋ ಹಾಗೆ ನಮ್ಮ ಕಾರ್ಪೊರೇಟಿನ ಸೊ ಕಾಲ್ಡ್ ಸಂನ್ಯಾಸಿಗಳು, ಬರೇ codeನ ಬಗೆಗೆ ಯೋಚಿಸುತ್ತಾ, ಅದರಲ್ಲಿಯೇ ತಮ್ಮ ಗಮನವನ್ನು ನೆಟ್ಟಿರುತ್ತಾರೆ. ಸದಾ codeನ ಬಗೆಗೆ ಯೋಚಿಸುತ್ತಾ, ಬೇರಾವ ಯೋಚನೆಗಳಿಗೂ ಅವಕಾಶ ನೀಡಿರುವುದಿಲ್ಲ.

ಬೆಳಿಗ್ಗೆ ಎದ್ದಾಗಿನಿಂದ ಹಿಡಿದು, ರಾತ್ರಿ ಮಲಗುವವರೆವಿಗೂ ಅಷ್ಟೇ ಏಕೆ, ಮಲಗಿದಾಗಲೂ, ಅವರು ಕನಸನೇನಾದರೂ ಕಂಡರೂ code blockನ ಪರಿಧಿಯೊಳಗೆ ಕನಸ ಕಾಣುವ ನಿಷ್ಠರು. ನಿರಂತರ ಕಲಿಕೆ ಹೇಗೆ ಒಬ್ಬ ಬ್ರಹ್ಮಜ್ಞಾನಿಯ ಸಾಧನವಾಗಿರುತ್ತದೆಯೋ, ಕಾರ್ಪೊರೇಟ್‍ನ ಈ ಮಂದಿಯು ಸಹ, ನಿತ್ಯ ಹೊಸದನೇನಾದರೂ ಕಲಿಯಬೇಕು. ಕಲಿತದ್ದು ಸಾಲದು ಅಂತ ಅದನ್ನು ಆಚರಣೆಗೆ ತಂದು ತಮ್ಮ ಕೆಲಸಗಳಲ್ಲಿ implement ಮಾಡಿಯೇ ತೀರಬೇಕು. ಹೀಗೆ ನಿರಂತರ ಅಭ್ಯಾಸ, ಅದರ ಆಚರಣೆ ಇವರಲ್ಲಿ ಕಾಣಬರುತ್ತದೆ.

ಇವರಿಗೆ ಸಂಸಾರದ ಗಮನ ಅಷ್ಟಕ್ಕಷ್ಟೇ. ದಿನದ 24 ಘಂಟೆಯ ಬಹುತೇಕ ಕಾಲವನ್ನು ಇವರು ಕಳೆಯೋದು ಆಫೀಸ್‍ನಲ್ಲಿಯೇ. ಅದೇನೋ ಕರ್ತವ್ಯ ಶ್ರದ್ದೆ, ಕಾಯಕವೇ ಕೈಲಾಸ ಅಂತ ನಂಬಿ ದುಡಿಯುವವರು. ಅಷ್ಟೇ ಅಲ್ಲದೇ, ತಮಗೆ ವಹಿಸಿರುವ ಕೆಲಸದ ಜೊತೆಗೆ, ಇತರರಿಗೆ ಉಪಕರಿಸುವ ಬುದ್ದಿ. ಪರೋಪಕಾರಾರ್ಥಂ ಇದಂ ಶರೀರಂ ಎಂದು ನಮ್ಮ ಹಿರಿಯರು ಹೇಳಿಲ್ಲವೇ. ಅದನ್ನು ಈಗಲೂ ಪಾಲಿಸುವ ಗುಂಪಿಗೆ ಸೇರಿದವರು ಹಾಗೂ ಕರ್ಮಗಳನ್ನು ಮಾತ್ರ ಮಾಡಿ ಫಲಾಫಲಗಳನ್ನು ಕೃಷ್ಣಾರ್ಪಣವೆಂದು ಭಾವಿಸುವ ನಿಷ್ಕಾಮ ಕರ್ಮಿಗಳು ಇವರು.

ಇವರ ಮತ್ತೊಂದು ಸ್ವಭಾವವೆಂದರೆ ತಮ್ಮ ಸಹಕೆಲಸಗಾರರು, ಮ್ಯಾನೇಜರ್, ಡೈರೆಕ್ಟರ್, CTO, CEO, office boy ಹೀಗೆ ಎಲ್ಲರನ್ನೂ ಸಮಭಾವದಿಂದ ಕಾಣುವುದು. ಪಂಡಿತಾಃ ಸಮದರ್ಶಿನಃ ಅಂತ ಗೀತೆಯಲ್ಲಿ ಹೇಳಲಿಲ್ಲವೇ, ಹಾಗೆಯೇ ಇವರು ಸರ್ವತ್ರ ಸಮಬುದ್ದಿ ಇರುವಂತೆ ಕಾಣಸಿಗುತ್ತಾರೆ.

ಬರೇ ವ್ಯಕ್ತಿಗಳಲ್ಲಿ ಅಲ್ಲ, ನೀವು ಪ್ರಾಡಕ್ಟ್ ಅನ್ನಿ, ಡಿಫೆಕ್ಟ್ ಅನ್ನಿ, feature, release, issue, performance issue, show stoppers, meeting, planning ಎಲ್ಲವನ್ನು ಸಮಾನವಾಗಿ ಕಾಣುವ ಮನೋಧರ್ಮದವರು. ಯಾವ ಕೆಲಸವನ್ನು ವಹಿಸಿದರೂ ಭೇದವೆಣಿಸದವರು.

ಪ್ರಾಡಕ್ಟ್ ರಿಲೀಸ್ ಟೈಮಿನಲ್ಲೂ, ಎಂತಹ ಕ್ರಿಟಿಕಲ್ ರಿಲೀಸ್ ಟೈಮಿನಲ್ಲೂ ಉದ್ವೇಗದ ವಶವಾಗದೇ ಶಾಂತ ಸ್ವಭಾವದವರಾಗಿರುತ್ತಾರೆ. ಇವರ ವೇಷಭೂಷಣದ ಬಗೆಗೆ ಹೆಚ್ಚಾಗಿ ಹೇಳಬೇಕಾಗಿರುವಂತಿಲ್ಲ. ಅವರವರ ಭಾವಕೆ, ಅವರವರ ಭಕುತಿಗೆಂಬಂತೆ ಉಡುಗೆ-ತೊಡುಗೆಗಳು.

ಇನ್ನು ದುಡ್ಡು-ಕಾಸಿನ ಬಗೆಗೆ ಅಷ್ಟಾಗಿ ಯೋಚಿಸದೆಯೇ, ಬರುವುದೆಲ್ಲವನ್ನು ಮನೆಯವರಿಗೆ ನೀಡಿ, ತಮಗೆ ಬೇಕಾದಷ್ಟನ್ನೇ ಮನೆಯವರಿಂದ ಬೇಡುತ್ತಾರೆ. ಹಮ್ಮು ಬಿಮ್ಮುಗಳನ್ನು ತೋರದೆ, ಸುಖ-ದುಃಖಗಳನ್ನು ತೋಡಿಕೊಳ್ಳದೇ, ಸಮಬುದ್ಧಿಯಿಂದ ಜೀವಿಸಿರುತ್ತಾರೆ.  ಎಲ್ಲವೂ ಬೇಕು, ಯಾವುದೂ ಬೇಡವೆಂಬ ಅವಧೂತರ ಗುಂಪಿಗೆ ಸೇರಿದವರಂತೆ ಇವರು.

ಒಟ್ಟಿನಲ್ಲಿ ನಮ್ಮ ಈ ಆಧುನಿಕ ಸ್ಪರ್ಧಾತ್ಮಕ, ಮೋಹಕ ಜಗದೊಳಗೆ, ಜಗದ ಬಿನ್ನಾಣ, ಬೆಡಗಿನೊಳಗೆ ಅಪವಾದವೆಂಬಂತೆ ಬದುಕುತ್ತಿರುತ್ತಾರೆ. ನಮ್ಮ ಸಮಾಜದಲ್ಲಿ ಇಂದಿಗೂ ಇಂತಹ ವ್ಯಕ್ತಿತ್ವಗಳು ಅಲ್ಲಲ್ಲಿ ಕಾಣಸಿಗುತ್ತಾರೆನ್ನುವುದು ಆಶ್ಚರ್ಯದ ಸಂಗತಿ.

‍ಲೇಖಕರು avadhi

3 November, 2019

2 Comments

  1. Lalitha siddabasavayya

    ಕಾರ್ಪರ್ಷಿ !! ಒಂದು ಸುಂದರವಾದ ಹೊಸ ಪದ ಟಂಕಿಸಿದಂತಾಯ್ತು. ಒಂದು ಭಾಷೆಯು ಹೀಗೆಯೇ ತನ್ನ ಅಗತ್ಯಕ್ಕೆ ತಕ್ಕಂತೆ ಅಲ್ಲಿ ದೊರೆತ ಸಂಪನ್ಮೂಲದಲ್ಲೆ , ಪದಗಳನ್ನು ತೀಡಿಕೊಂಡು ತನ್ನ ಮೂಲಧನಕ್ಕೆ ಜಮಾ ಮಾಡಿಕೊಳ್ಳುತ್ತಿರುತ್ತದೆ. ಇದು ಆ ಭಾಷೆಯದು ನಮಗೆ ಬೇಡ, ಇದಾದರೆ ಇರಲಿ ಇತ್ಯಾದಿ ಕೊಂಕು ತೆಗೆದು ಭಾಷೆಯ ಮನೆಯನ್ನು ಗುಡಿಸಿ ಕ್ಲೀನು ಮಾಡುತ್ತೇನೆ ಎನ್ನುವುದು ಹುಂಬತನ.

    • Raghavendra Rao K

      ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading