(ಸ)ರ್ಕಾರಿ (ಹಿ)ರಿಯ (ಪ್ರಾ)ಥಮಿಕ ಶಾಲೆ, ಕಾಸರಗೋಡು ಚಿತ್ರ ಬಂದಿದ್ದು ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಹಳಿಮನಿ ಅವರು ತಮ್ಮ ಕಾಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪರಿಚಯಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ನೆನಪಿನ ಓಣಿಯಲ್ಲಿ ನಡೆದಿದ್ದಾರೆ
ನೆನಪಿನ ಓಣಿಯಲ್ಲಿ ನಡೆಯಲು ನಿಮಗೂ ಆಹ್ವಾನ. ನಿಮ್ಮ ನಿಮ್ಮ ಸರ್ಕಾರಿ ಶಾಲೆಗಳ ಪರಿಚಯ ಮಾಡಿಕೊಡಿ ನಿಮ್ಮಪಿ ಫೋಟೋ ಸಮೇತ avadhimag@gmail.com ಗೆ ಕಳಿಸಿ

ಅ.ದೇ.ಹಳಿಮನಿ (ಅದೇಹ)
ಅದು ೨೦೦೨ನೆಯ ವರುಷ. ಆಗಿನ್ನೂ ನಾವು ಒಂದನೆಯ ತರಗತಿಗೆ ಪ್ರವೇಶ ಪಡೆದು ದಿನಾಲೂ ಶಾಲೆಗೆ ಹೋಗುವ ತವಕದಲ್ಲಿ ಸ್ವಲ್ಪ ಖುಷಿಯ ಜೊತೆಗೆ ಸ್ವಲ್ಪ ದುಃಖವೂ ಆಗಾಗ ಮನಸ್ಸಿಗೆ ಆವರಿಸುತ್ತಿತು.! ಆ ಶಾಲೆಯ ವಾತಾವರಣವೆ ಹಾಗೇನೇ ಸ್ನೇಹಿತರೊಂದಿಗೆ ದಿನಾಲೂ ಆಟದ ಜೊತೆಗೆ ಸ್ವಲ್ಪ ಓದು ಅಷ್ಟೇ ನಮ್ಮ ದಿನಚರಿ!
ಬೆಳಗ್ಗೆ ಬೇಗ ಎದ್ದು ಶಾಲೆಗೆ ಹೋಗುವ ತವಕ. ಅದೇನೋ ಶಾಲೆಗೆ ಹೋಗುವುದು ಅಂದರೆ ಖುಷಿಯೋ ಖುಷಿ ಜೊತೆಗೆ ಸ್ವಲ್ಪ ಭಯ.ಅವು ಶಾಲೆಯ ಆರಂಭದ ದಿನಗಳೋ ಅನ್ನೋ ಸಂತೋಷದಿಂದಲೊ, ಅಪ್ಪ ದಿನಾಲೂ ಶಾಲೆಗೆ ಹೋಗಲು ರೊಕ್ಕ ಕೊಡುತ್ತಿದ್ದನೊ ಅನ್ನುವುದೊ ಒಂದು ತಿಳಿಯದ ನನಗೆ ಶಾಲೆ ಅಂದ್ರೆ ಮಾತ್ರ ಅಚ್ಚುಮೆಚ್ಚು.
ಗೆಳೆಯರ ಜೊತೆಗೆ ಪಾಟಿ ಚೀಲ ಹೆಗಲಿಗೆ ಹಾಕಿ ಕೈ ಕೈ ಹಿಡಿದು ಮನೆಯಿಂದ ಹೊರಟರೆ ಮತ್ತೆ ಮರಳಿ ಮನೆಗೆ ಬರುವುದು ಸಂಜೆಯ ರವಿ ತಾ ಸರಿಯಲು ಶುರುವಿಟ್ಟಾಗಲೆ. ಶಾಲೆಗೆ ಹೋದರೆ ಸಾಕು ಓದುವುದು, ಬರಿಯುವುದು, ಮಗ್ಗಿ ಹೇಳುವುದು, ಜೊತೆಗಿಷ್ಟು ಆಟ. ಅವು ಕುರ್ಚಿಯಾಟ, ನದಿದಡ, ಕಪ್ಪೆಯಾಟ, ಹುಲಿ ಆಕಳು ಇತ್ಯಾದಿ, ಆ ದಿನಗಳಲಿ ಇವುಗಳೇ ನಮ್ಮ ನೆಚ್ಚಿನ ಕ್ರೀಡೆಗಳು.ಇನ್ನೂ ಮಧ್ಯಾಹ್ನ ಊಟದ ಹೊತ್ತು ಬಂದ್ರೆ ಸಾಕು ನಾ ಮುಂದೆ ನೀ ಮುಂದೆ ಅಂತ ಪಾಳಿ. ಅನ್ನ ಸಾಂಬಾರು ಬಡಿಸಿಕೊಂಡು ಶಾಲೆ ಅಂಗಳದಲ್ಲಿ ಕೂತು ಊಟ ಮಾಡುವ ಮುನ್ನ ಗೀತೆಯೊಂದನು ಹೇಳಿ ಊಟ ಮಾಡಲು ಶುರು ಮಾಡ್ತಿದೇವು. ಅಲ್ಲದೇ ಮನೆಯಿಂದ ತಂದ ಪಲ್ಯ, ಮೊಸರು, ಒಬ್ಬರಿಗೊಬ್ಬರು ಹಂಚಿಕೊಂಡು ತಿನ್ನುವುದು ನಮ್ಮ ದಿನನಿತ್ಯದ ವಿಶೇಷತೆ ಅನ್ನಬಹುದು.

ಶಾಲೆಯ ಪ್ರಾರಂಭಿಕ ದಿನಗಳಲ್ಲಿ ಶಾಲೆ ಯಾವಾಗ ಬಿಡುತ್ತೊ ಯಾವಾಗ ಇಲ್ಲೊ ಅನ್ನುವುದೆ ಚಿಂತೆ! ಅಲ್ಲದೇ ಸರ್ ಅವರು ಓದಲು ಹೇಳಿದಾಗ ಓದಲು ಬಾರದೆ ಸುಮ್ನೆ ನಿಂತಿದ್ರೆ ಏಟು ಕೈಗೆ ಬಂದು ಬಿಡುವುದು. ಇಂದು ನಮಗೆ ಓದಲು, ಬರೆಯಲು ಬರುವುದಾದರೆ ಅಂದು ನಮ್ಮ ಕೈಗೆ ಬಿದ್ದ ಏಟುಗಳಿಂದಲೆ. ನಿಜವಾಗಿಯೂ ನಮ್ಮ ಗುರುಗಳು ಇಂದಿಗೂ ನಮಗೆ ಆದರ್ಶರು. ಸದಾ ನಮ್ಮ ಗೆಲುವು ಬಯಸುವ ಹೃದಯವಂತರು.
ಕೆಲವೊಮ್ಮೆ ಪ್ರತಿಭಾ ಕಾರಂಜಿಗೆ ಗುರುಗಳು ನಮಗೆ ವಿಶೇಷವಾಗಿ ಸಿದ್ಧತೆ ಮಾಡುತಿದ್ದರು. ಏಕಪಾತ್ರ ಅಭಿನಯ, ನೃತ್ಯ,ಚಿತ್ರಕಲೆ, ಭಾಷಣ ಇತ್ಯಾದಿ ವಿಷಯಗಳಿಗೆ ನಾವು ಸಿದ್ಧತೆ ಮಾಡಿಕೊಂಡು ಅದನ್ನು ವೇದಿಕೆ ಮೇಲೆ ಪ್ರಸ್ತುತ ಪಡಿಸ ಬೇಕಿತ್ತು. ಚೆನ್ನಾಗಿ ಪ್ರಸ್ತುತ ಪಡಿಸಿದವರಿಗೆ ಬಹುಮಾನವು ಕೂಡ ನೀಡಲಾಗುತಿತ್ತು.ಕೆಲವು ಸಾರಿ ನಾವು ಅ ಬಹುಮಾನಕ್ಕೆ ಪಾತ್ರರಾಗಿದ್ದು ಇದೆ.ಆಗಾ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ.
ನಮಗೆ ವಿದ್ಯೆಯ ಊಟ ಉಣಬಡಿಸಿದ ಗುರುಗಳೆಂದರೆ ಮಾಣಿಕರಾವ್ ಸರ್, ಶಂಕ್ರೇಪ್ಪ ಸರ್, ಮಹಾಲಿಂಗ ಸರ್,ಶೈಲಜಾ ಟೀಚರ್ ಇವರುಗಳಿಗೆ ನಾವು ಯಾವಾಗಲೂ ಚಿರರುಣಿಗಳು!
ನಮ್ಮೂರು ಕಾಚೂರು ಒಂದು ಪುಟ್ಟ ಹಳ್ಳಿ.ಆ ಹಳ್ಳಿಯೇ ನಮ್ಮ ಸ್ವರ್ಗ ಅದು ನಮಗೊಂದು ಪುಟ್ಟ ಸ್ವತಂತ್ರ ಜಗತ್ತಿದಂತೆ. ನಮ್ಮೂರಿನ ಸೊಬಗು ವರ್ಣಿಸಲು ಬಹುಶಃ ಪುಸ್ತಕದ ಪದಗಳು ಸಿಗುತ್ತಿಲ್ಲ ಅಷ್ಟೊಂದು ಸುಂದರವಾದ ಊರು ನಮ್ಮೂರು.
ಕಲಿತಿದ್ದು ಪುಟ್ಟ ಹಳ್ಳಿಯಲ್ಲಿಆದರೂ ಅ ಶಾಲೆಯಲ್ಲಿನ ನೆನಪುಗಳು ಇನ್ನೂ ಹಾಗೇ ಹಚ್ಚಹಸುರಾಗಿವೆ. ಮಾಣಿಕರಾವ್ ಸರ್ ರವರು ಕಲಿಸಿದ ಅ ಆ ಇ ಈ ನಮ್ಮ ಎದೆಗೆ ಬಿದ್ದ ಮೊದಲ ಅಕ್ಷರಗಳು!!
ಶಂಕ್ರೇಪ್ಪ ಸರ್ ರವರ ಗಣಿತದ ಮಗ್ಗಿ ಶೈಲಜಾ ಟೀಚರ್ ರವರ ಡೋಳ್ಳೂ ಹೊಟ್ಟೆಯ ಗಣಪನ ಹಾಡು ಇಂದಿಗೂ ಹಾಗೇ ಹಚ್ಚೆ ಹಾಕಿದಾಗಿದೆ. ಹಾಗೂ ಮಹಾಲಿಂಗ ಸರ್ ರವರು ಮಾತಾಡುವ ಮಾತಿನ ಶೈಲಿ ಮರೆಯಲಾಗದು.

ಈ ಹಳೆಯ ನೆನಪುಗಳೇ ಹಾಗೆಯೇ ಎಷ್ಟು ತೋಡಿದರು ಆಳವಾದ ತೆಗೆತದಿ ಕೊಂಡೊಯ್ಯುವ ಶಕ್ತಿ ಅದಕ್ಕಿದೆ ಅನ್ನುವುದು ಅಕ್ಷರಶಃ ಸತ್ಯವೇ ಸರಿ!
ಕೊನೆಯದಾಗಿ…
ಕಾಣುವೇನ್ ಕಾಚೂರೋಳ್
ಮನಸ್ಸು ಬಿಚ್ಚಿ ಮಾತನಾಡುವ
ಜನರನ್,ಪ್ರೀತಿ ತೋರಿಸುವ ಸ್ನೇಹಿತರನ್,ಕಟ್ಟಕಡೆಯ ಮಾತೊಂದು ಹೇಳುವೆನಯ್ಯ ನೀ ಕೇಳ್ ಮತ್ತೆ ಹುಟ್ಟಿಸು ಈ ಊರೋಳ್ ಕಾಚೂರೆಂಬ ನಾಡೊಳ್..!




(ಸ)ರ್ಕಾರಿ (ಹಿ)ರಿಯ (ಪ್ರಾ)ಥಮಿಕ ಶಾಲೆ, ಕಾಸರಗೋಡು ಚಿತ್ರ ಬಂದಿದ್ದು ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಹಳಿಮನಿ ಅವರು ತಮ್ಮ ಕಾಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪರಿಚಯಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ನೆನಪಿನ ಓಣಿಯಲ್ಲಿ ನಡೆದಿದ್ದಾರೆ 


0 Comments