ಸ್ವತಃ ನಾವೇ ಕಾವಲುಗಾರರಾಗೋಣ..

ನಾ ದಿವಾಕರ

ಭಾರತ ಮತ್ತೊಂದು ಮಹಾ ಚುನಾವಣೆ ಎದುರಿಸುತ್ತಿದೆ. ದಕ್ಷ ಪ್ರಾಮಾಣಿಕ ನಾಯಕರನ್ನು ಬಯಸುತ್ತಿದ್ದ ಭಾರತದ ಪ್ರಜಾತಂತ್ರ ಕೆಲವೇ ವರ್ಷಗಳ ಹಿಂದೆ ಬಲಿಷ್ಟ ನಾಯಕನಿಗಾಗಿ ಹಂಬಲಿಸಿತ್ತು. ಈ ಬಾರಿ ಕಾವಲುಗಾರನಿಗಾಗಿ ಹಂಬಲಿಸುತ್ತಿದೆ. ವಿಕಾಸ ಪುರುಷ, ಲೋಹಪುರುಷರ ಚೌಕಟ್ಟಿನಿಂದ ಹೊರಬಂದು ಕಾವಲು ಪುರುಷನ ಬಳಿ ನಮ್ಮ ಪ್ರಜಾತಂತ್ರ ವ್ಯವಸ್ಥೆ ಬಂದು ನಿಂತಿದೆ. ಇದು ಕೇವಲ ಬಿಜೆಪಿ ಅಥವಾ ಮೋದಿಯವರ ರಾಜಕೀಯ ತಂತ್ರ ಎಂದು ನಿರ್ಲಕ್ಷಿಲಾಗುವುದಿಲ್ಲ. ಭಾರತಕ್ಕೆ ಆಳುವ ವರ್ಗಗಳಿಂದಲೇ ಉಗಮಿಸುವ ಚೌಕಿದಾರರ ಅವಶ್ಯಕತೆ ಮೊದಲಿನಿಂದಲೂ ಇತ್ತು. ಈಗಲೂ ಇದೆ. ಆದರೆ ಈಗ ಬೇಕೇಬೇಕಿದೆ.

ಏಕೆಂದರೆ  ಕಳೆದ ಮೂವತ್ತು ವರ್ಷಗಳ ನವ ಉದಾರವಾದದ ಆಳ್ವಿಕೆಯಲ್ಲಿ ಭಾರತದ ಸಂಪತ್ತು ಕಳುವಾಗುತ್ತಲೇ ಇದೆ.  ಕಳೆದ ಐದು ವರ್ಷಗಳಲ್ಲಿ ಈ ಲೂಟಿ ಕಣ್ಣೆದುರಿನಲ್ಲೇ ನಡೆಯುತ್ತಿದ್ದರೂ ನಾವು ಬಾಗಿಲುಗಳನ್ನು ತೆರೆದು ವಿಶ್ರಮಿಸುತ್ತಿದ್ದೇವೆ. ಏನೇನು ಕಳುವಾಗಿದೆ ಎಂದು ಒಮ್ಮೆ ಹಿಂದಿರುಗಿ ನೋಡಿ. ಕಾವಲುಗಾರರಿಗೆ ಇದು ತಿಳಿದಿದೆ. ಮುಂದೆ ಮತ್ತೇನು ಕಳುವಾಗುತ್ತದೆ ಎಂದೂ ಅವರಿಗೆ ತಿಳಿದಿದೆ.

ಹಾಗಾಗಿಯೇ ಚೌಕಿದಾರರು ಸುವ್ಯವಸ್ಥಿತವಾಗಿ ಎಲ್ಲವನ್ನೂ ಸಜ್ಜಾಗಿಸುತ್ತಿದ್ದಾರೆ. ಯಾವುದೇ ಪಕ್ಷ ಅಥವಾ ನಾಯಕ ಪ್ರಜಾತಂತ್ರ ವ್ಯವಸ್ಥೆಯ ಸಾರಥ್ಯ ವಹಿಸಿಕೊಳ್ಳುವ ಸಂದರ್ಭದಲ್ಲಿ ತಾನು ಕಾವಲುಗಾರನಾಗಿರುತ್ತೇನೆ ಎಂದು ಘೋಷಿಸಿದರೆ ಅದು ಆ ವ್ಯವಸ್ಥೆಯೊಳಗೆ ಸೃಷ್ಟಿಯಾಗಿರುವ ಆತಂಕ ಮತ್ತು ಹತಾಶೆಯ ಸಂಕೇತ ಎಂದೇ ಹೇಳಬಹುದು.

ನಾವು ಏನನ್ನು ಕಳೆದುಕೊಂಡಿದ್ದೇವೆ. ಬ್ಯಾಂಕುಗಳಿಗೆ ವಂಚಿಸುವ ಕೆಲವು ಉದ್ಯಮಿಗಳು ಜೈಲುವಾಸ ಅನುಭವಿಸಿದರೆ ಬಹುಶಃ ಅದು ನಮಗೆ ದಿಗ್ವಿಜಯದಂತೆ ಕಾಣುತ್ತದೆ. ಈಗ ಲೋಕಪಾಲ್ ಸ್ಥಾಪನೆಯಾಗಿದೆ. ಕೆಲವು ಭ್ರಷ್ಟ ರಾಜಕಾರಣಿಗಳಿಗೆ ಶಿಕ್ಷೆಯಾದರೆ ಸಂಭ್ರಮಿಸುತ್ತೇವೆ. ಆಹಾ ಭ್ರಷ್ಟಾಚಾರ ಇನ್ನಿಲ್ಲವಾಗಿದೆ ಎಂದು ಹುಚ್ಚೆದ್ದು ಕುಣಿಯುತ್ತೇವೆ. ಸಾಂಸ್ಥಿಕ ಭ್ರಷ್ಟಾಚಾರವನ್ನು ಕಂಡುಹಿಡಿಯುವುದೂ ಸುಲಭ, ಭ್ರಷ್ಟರನ್ನು ಶಿಕ್ಷಿಸುವುದೂ ಸುಲಭ. ಇದು ಚೌಕಿದಾರರಿಗೆ ಹೆಚ್ಚು ಕೆಲಸ ಕೊಡುವುದಿಲ್ಲ.

ಆದರೆ ನಾವು ಸತತವಾಗಿ ಕಳೆದುಕೊಳ್ಳುತ್ತಲೇ ಇರುವ ಸಂಪತ್ತು, ನೈಸರ್ಗಿಕ ಸಂಪನ್ಮೂಲ ಮತ್ತು ಭೂಮಿಯ ಒಡಲಿನಲ್ಲಿರುವ ಸಂಪನ್ಮೂಲಗಳನ್ನು ಮರಳಿ ಗಳಿಸಲು ಸಾಧ್ಯವೇ ?  ಒಂದು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಭೌಮ ಪ್ರಜೆಗಳಿಗೆ ಸೇರಬೇಕಾದ ನೈಸರ್ಗಿಕ ಸಂಪತ್ತನ್ನು ಕೆಲವೇ ಕಾರ್ಪೋರೇಟ್ ಉದ್ಯಮಿಗಳಿಗೆ ಪರಭಾರೆ ಮಾಡಿ ಇಡೀ ದೇಶವೇ ಅವರೆದುರು ಕೈಚಾಚಿ ನಿಲ್ಲುವ ಪರಿಸ್ಥಿತಿ ಎದುರಾದಾಗ ಯಾವ ಕಾವಲುಗಾರರು ಜನತೆಯ ರಕ್ಷಣೆಗೆ ಬರುತ್ತಾರೆ.

ಅಂಧ್ರಪ್ರದೇಶ, ಕರ್ನಾಟಕ, ಒಡಿಷಾ, ಮಧ್ಯಪ್ರದೇಶ, ಉತ್ತರಪ್ರದೇಶ, ಜಾರ್ಖಂಡ್, ಛತ್ತಿಸ್ ಘಡ ಹೀಗೆ ಹಲವಾರು ರಾಜ್ಯಗಳಲ್ಲಿನ ಅಮೂಲ್ಯ ಅರಣ್ಯ ಸಂಪತ್ತು, ಜಲಸಂಪನ್ಮೂಲಗಳು ಕಾರ್ಪೋರೇಟ್ ಗಣಿಗಾರಿಕೆಗೆ ಬಲಿಯಾಗುತ್ತಿರುವುದನ್ನು ನೋಡುತ್ತಲೇ ನಾವು ಕಾವಲುಗಾರರನ್ನು ಸ್ವಾಗತಿಸುತ್ತಿದ್ದೇವೆ. ಈ ಸಂಪತ್ತನ್ನು ದೋಚುತ್ತಿರುವವರು ದೇಶದ ವಿಕಾಸ ಪುರುಷರಲ್ಲ, ವಿನಾಶಪುರುಷರು ಎನ್ನುವ ವಾಸ್ತವವೂ ನಮ್ಮ ಗಮನಕ್ಕೆ ಬರುತ್ತಿಲ್ಲ. ಲಕ್ಷಾಂತರ ಜನತೆಗೆ ಅನ್ನ ನೀಡುವ ಸಾರ್ವಜನಿಕ ಸಂಸ್ಥೆಗಳು ಕಾರ್ಪೋರೇಟ್ ಉದ್ಯಮಿಗಳ ಪಾಲಾಗಿವೆ. ಸಾರಿಗೆ ವ್ಯವಸ್ಥೆಯ ಬಹುಪಾಲು ವಿಭಾಗಗಳು ಉದ್ಯಮಿಗಳ ಪಾಲಾಗಿವೆ. ರಫ್ತು ವ್ಯಾಪಾರವನ್ನು ಹೆಚ್ಚಿಸುವ ಮೂಲಕವೇ ಕೃಷಿ ಬಿಕ್ಕಟ್ಟನ್ನು ಪರಿಹರಿಸುವ ಸಂಕುಚಿತ ದೃಷ್ಟಿಕೋನದ ನೀತಿಯಿಂದ ಕೃಷಿ ಭೂಮಿಯನ್ನೂ ಸಹ ಶೀಘ್ರದಲ್ಲೇ ಕಳೆದುಕೊಳ್ಳಲಿದ್ದೇವೆ.  ಬ್ಯಾಂಕಿಂಗ್ ಮತ್ತು ವಿಮೆ ಕ್ಷೇತ್ರ ಕ್ರಮೇಣ ಖಾಸಗಿ ಬಂಡವಾಳಿಗರ ತೆಕ್ಕೆಗೆ ಜಾರಲಿವೆ. ಇವೆಲ್ಲವೂ ಹಣಕಾಸಿಗೆ ಸಂಬಂಧಪಟ್ಟ ಕ್ಷೇತ್ರಗಳು.

ಇನ್ನು ಬೌದ್ಧಿಕವಾಗಿ ನಾವು ಕಳೆದುಕೊಂಡಿರುವುದೇನು ? ಸಹನೆ, ಭ್ರಾತೃತ್ವ, ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳನ್ನು ದೇಶಭಕ್ತಿಯ ಚೌಕಟ್ಟಿನಲ್ಲೋ ಅಥವಾ ಮತಧರ್ಮಗಳ ಚೌಕಟ್ಟಿನಲ್ಲೋ ಕಳೆದುಕೊಂಡುಬಿಟ್ಟಿದ್ದೇವೆ. ನಮ್ಮ ಸಾಂವಿಧಾನಿಕ ಹಕ್ಕುಗಳನ್ನೂ ಕಳೆದುಕೊಳ್ಳುತ್ತಿದ್ದೇವೆ. ಲಕ್ಷಾಂತರ ರೈತರ ಜೀವಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಸುತ್ತಲಿನ ಪರಿಸರದಲ್ಲಿದ್ದ ಅಮೂಲ್ಯ ಜೀವಾವಶ್ಯಕ ವಸ್ತುಗಳನ್ನು ಕಳೆದುಕೊಂಡಿದ್ದೇವೆ. ಅಂತರ್ಜಲವನ್ನು ಕಳೆದುಕೊಂಡಿದ್ದೇವೆ. ಅಭಿವೃದ್ಧಿಯ ಭ್ರಮೆಗೆ ಸಿಲುಕಿ ತಂಪು ನೀಡುವ ಮರಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ಇವುಗಳಿಗೆ ಕಾವಲುಗಾರರು ಯಾರಾಗಬೇಕು ? ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಕಾರಿಡಾರ್ ಯೋಜನೆಗೆ ಕಬ್ಬನ್ ಪಾರ್ಕ್  ಬಲಿಯಾಗಲಿದೆ. ನಾಳೆ ಲಾಲ್ ಬಾಗ್ ಬಲಿಯಾಗಬಹುದು. ಈ ಸಂಪತ್ತನ್ನು ದೋಚುತ್ತಿರುವವರು ನಮ್ಮ ನಡುವೆಯೇ ಇದ್ದಾರೆ. ಆದರೆ ಯಾವುದೋ ಉನ್ಮಾದದಲ್ಲಿ ನಾವು ಗಮನಿಸುತ್ತಿಲ್ಲ. ರಾಜಕೀಯ ವಲಯದಲ್ಲಿ ಕಾವಲುಗಾರರಾಗಲು ಬಯಸುವವರು ಸಾಮಾಜಿಕ ವಲಯದಲ್ಲಿ , ಸಾಂಸ್ಕೃತಿಕ ವಲಯದಲ್ಲಿ ಮೂಕ ಪ್ರೇಕ್ಷಕರಾಗಿರುತ್ತಾರೆ. ಆದರೂ ನಾವು ಅವರ ಬೆಂಗಾವಲಿಗೆ ನಿಲ್ಲುತ್ತೇವೆ.

ಮತದಾನ ಶ್ರೇಷ್ಠ, ಸಾಂವಿಧಾನಿಕ ಕರ್ತವ್ಯ , ನಮ್ಮ ಜನ್ಮ ಸಿದ್ಧ ಹಕ್ಕು ಎಲ್ಲವೂ ಸರಿ. ಹೊಸ ದೇಶಕ್ಕಾಗಿ ಮತದಾನ ಮಾಡಿಯೇ ತೀರುತ್ತೇನೆ ಎಂದು ಪ್ರಮಾಣ ಮಾಡುವುದೂ ಸರಿ. ಆದರೆ ಮತದಾನದಿಂದಾಚೆಗಿನ ನಮ್ಮ ಕರ್ತವ್ಯಗಳೇನು ? ನಾವು ಸಹ ನಮ್ಮ ಸುತ್ತಲಿನ ಜಗತ್ತಿಗೆ ಕಾವಲುಗಾರರೇ ಅಲ್ಲವೇ ? ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರತಿಯೊಬ್ಬ ಶ್ರಮಜೀವಿಯೂ ಕಾವಲುಗಾರರಾಗಿದ್ದರೆ ಅವರದೇ ಆದ ಸಂಪತ್ತನ್ನು ಕಳೆದುಕೊಳ್ಳುತ್ತಿರಲಿಲ್ಲ.

ನಾವು ನಮ್ಮ ಸಂಪತ್ತನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಅನ್ಯರಿಗೆ ಒಪ್ಪಿಸುತ್ತಿದ್ದೇವೆ. ಅವರು ಸಂಪತ್ತನ್ನು ಅನ್ಯರಿಗೆ ಒಪ್ಪಿಸುತ್ತಿದ್ದಾರೆ. ಇಷ್ಟಾದರೂ ನಾವು ಸುರಕ್ಷಿತ ಎನ್ನುವ ಭ್ರಮೆಯಲ್ಲಿದ್ದೇವೆ. ನಾವು ರಕ್ಷಿಸಬೇಕಾದ್ದು ಏನನ್ನು ಎನ್ನುವ ಪ್ರಜ್ಞೆಯನ್ನೇ ಕಳೆದುಕೊಂಡಿದ್ದೇವೆ ಎನಿಸುತ್ತದೆ. ನೆಲ, ಜಲ, ಅರಣ್ಯ ಮತ್ತು ಮಾನವ ಸಂಪತ್ತಿನ ಹರಣವಾಗುತ್ತಿರುವುದನ್ನು ಕಂಡೂ ಕಾಣದಂತೆ ಮತ ಚಲಾಯಿಸುತ್ತಿರುವ ಪ್ರಜ್ಞಾವಂತ ಪ್ರಜಾ ಸಮೂಹ ತಾನೇ ಕಾವಲುಗಾರ ಎನ್ನುವುದನ್ನು ಮರೆತು ಅಧಿಕಾರ ಪೀಠಗಳಲ್ಲಿರುವವರನ್ನು ಕಾವಲುಗಾರರಂತೆ ಪರಿಗಣಿಸುತ್ತಿದೆ. ಪಕ್ಷ ಯಾವುದೇ ಆಗಲಿ ಈ ಕಾವಲುಗಾರರು ಜನಸಾಮಾನ್ಯರಿಗೆ, ಈ ದೇಶದ ಶ್ರಮಜೀವಿಗಳಿಗೆ ಬೇಕಾದ ಸಂಪತ್ತನ್ನು ರಕ್ಷಿಸುವುದಿಲ್ಲ ಬದಲಾಗಿ ಈ ರಕ್ಷಿತ ಸಂಪತ್ತನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ತಾಂಬೂಲದಂತೆ, ಬಾಗಿಣದಂತೆ ನೀಡುತ್ತಾರೆ. ಇಡೀ ದೇಶವೇ ಈ ಉದ್ಯಮಿಗಳೆದುರು ಕೈಚಾಚಿ ನಿಲ್ಲಬೇಕಾಗುತ್ತದೆ.

ನಮ್ಮ ಮತ ಅಮೂಲ್ಯ ಎಂಬ ಪರಿವೆ ಇದ್ದಲ್ಲಿ ಈ ಮತ ಚಲಾಯಿಸುವ ಮುನ್ನ ನಾವೂ ಕಾವಲುಗಾರರೇ ಎಂಬ ಪ್ರಜ್ಞೆ ಹೊಂದಿರುವುದು ಅವಶ್ಯಕ. ಮತದಾನ ಪ್ರಜಾತಂತ್ರ ವ್ಯವಸ್ಥೆಯ ನಿರ್ವಹಣೆಗೆ ಪೂರಕವಾದ ಒಂದು ಪ್ರಕ್ರಿಯೆ ಅಷ್ಟೆ. ನಿಜವಾದ ಪ್ರಜಾತಂತ್ರ ಎಂದರೆ ನಮ್ಮ ಹಕ್ಕುಗಳನ್ನು ನಮ್ಮ ಸಂಪತ್ತನ್ನು ಸಂರಕ್ಷಿಸುವುದು ಅಲ್ಲವೇ ?

‍ಲೇಖಕರು avadhi

March 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sarayu

    Nija, nija, nija Neevu barediruva pratiyondu mathu 100kke 100 nija.ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರತಿಯೊಬ್ಬ ಶ್ರಮಜೀವಿಯೂ ಕಾವಲುಗಾರರಾಗಿದ್ದರೆ ಅವರದೇ ಆದ ಸಂಪತ್ತನ್ನು ಕಳೆದುಕೊಳ್ಳುತ್ತಿರಲಿಲ್ಲ.Namma janagala eegina manosthitige oppuvanta lekhana.Bahala ishtavaythu..ಇನ್ನು ಬೌದ್ಧಿಕವಾಗಿ ನಾವು ಕಳೆದುಕೊಂಡಿರುವುದೇನು ? ಸಹನೆ, ಭ್ರಾತೃತ್ವ, ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳನ್ನು ದೇಶಭಕ್ತಿಯ ಚೌಕಟ್ಟಿನಲ್ಲೋ ಅಥವಾ ಮತಧರ್ಮಗಳ ಚೌಕಟ್ಟಿನಲ್ಲೋ ಕಳೆದುಕೊಂಡುಬಿಟ್ಟಿದ್ದೇವೆ. ನಮ್ಮ ಸಾಂವಿಧಾನಿಕ ಹಕ್ಕುಗಳನ್ನೂ ಕಳೆದುಕೊಳ್ಳುತ್ತಿದ್ದೇವೆ. ಲಕ್ಷಾಂತರ ರೈತರ ಜೀವಗಳನ್ನು ಕಳೆದುಕೊಂಡಿದ್ದೇವೆ.idantu bahala atanka huttisuva vichara:-(

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: