ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಂಟ್ರ್ಯಾಕ್ಟ್ ಪ್ರಕಾರ ನಮ್ಮ ಮಾತುಕತೆ ದ್ವಿಭಾಷೆಯಲ್ಲಿದ್ದರೆ ಒಳ್ಳೆಯದು.

ಅದಾ ಲಿಮೋನ್‌

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ನೀನು ಬಂದಾಗ ನಿನ್ನ ಕಪ್ಪು ಬಣ್ಣವನ್ನೂ
ಜೊತೆಗೇ ತೆಗೆದುಕೊಂಡು ಬಾ, ಹಣ
ಹೂಡುವವರಿಗೆ ಖುಷಿಯಾಗುತ್ತದೆ. ಈ ಬಾಕ್ಸ್ ನೋಡಿದೆಯಾ,
ನಾವು ಒಂದು ಗ್ರ್ಯಾಂಟಿಗೆ ಅರ್ಜಿ ಹಾಕುತ್ತಿದ್ದೇವೆ.

ನೀನು ಕಷ್ಟದಲ್ಲಿರುವ ಹರೆಯದವರ ಬಗ್ಗೆ
ಏನಾದರೂ ಪದ್ಯ ಬರೆದಿದ್ದೀಯಾ? ದ್ವಿಭಾಷೆಯಲ್ಲಿದ್ದರೆ ಬೆಸ್ಟ್.

ಡಿನ್ನರಿಗೆ ನಿನ್ನ ಪೇಟ್ರನ್ ಜೊತೆ ಬರಲು
ಇಷ್ಟಪಡುವೆಯಾ? ಪೇಟ್ರನ್ ಕುಡಿಯಲು?*

ನಮಗೆ ಮುಜುಗರ ತರುವ ಆದರೆ ನಮ್ಮನ್ನೂ ಒಳಗೊಳ್ಳದ
ಕಥೆಗಳನ್ನು ಹೇಳುವೆಯಾ?

ನೀನು ನಮ್ಮಂತೆಯೇ ಇರುವ ಕಥೆಗಳನ್ನು ಓದಬೇಡ
ಹಸಿರು ತೋಟದ ಮನೆಯಲ್ಲಿ ಹುಟ್ಟಿ ಹೇಗೆ ನೀನು

ಟೊಮ್ಯಾಟೊ ಕೊಯ್ಲು ಮಾಡುತ್ತಿದ್ದೆ ಕೊಚ್ಚೆ
ರಾಡಿಯಲ್ಲೇ ಕೂತು ಹೇಗೆ ತಿನ್ನುತ್ತಿದ್ದೆ ರಸ್ತೆಯಲ್ಲಿ

ಒಂದು ರಣಹದ್ದು ಮತ್ತೊಂದು ಹಕ್ಕಿಯನ್ನು ಹೇಗೆ ಕುಕ್ಕಿ
ತಿನ್ನುತ್ತಿತ್ತು ಎನ್ನುವುದನ್ನು ನೋಡುತ್ತಾ ಎಂದೆಲ್ಲಾ ಹೇಳಬೇಡ

ಯಾರೋ ಸಹೋದ್ಯೋಗಿ ನಿಮ್ಮಂಥವರು ಕಾರಿನ
ಹಬ್ ಕ್ಯಾಪ್ ಕದಿಯಲು ಮಾತ್ರ ಲಾಯಕ್ಕು ಅಂದಿದ್ದಕ್ಕೆ

ನಿನ್ನ ಅಪ್ಪ ಅದನ್ನೇ ಮಾಡಿದ ಕಥೆ ಹೇಳು. ಮತ್ತು ಅವನು
ಪಾಂಚೊ ತೊಟ್ಟುಕೊಂಡು ಮೀಟಿಂಗಿಗೆ ಬಂದು ಅದೇ

ಹಬ್ ಕ್ಯಾಪ್‌ನ ಅವನಿಗೇ ಮಾರಲು ಬಂದ ಕಥೆ ಹೇಳು.
ನಿನ್ನ ಅಪ್ಪ ಟೀಚರ್ ಆಗಿದ್ದ, ಇಂಗ್ಲಿಷ್ ಮಾತಾಡುತ್ತಿದ್ದ, ಬಿಯರ್

ಮಾಡುವುದು ಅವನಿಗಿಷ್ಟ, ಬೇಸ್‌ಬಾಲ್ ಎಂದರೆ ಇಷ್ಟ ಅಂತೆಲ್ಲಾ
ಹೇಳಬೇಡ, ಹೇಳು ಅವನ ಪಾಂಚೋ ಬಗ್ಗೆ, ಹಬ್ ಕ್ಯಾಪ್ ಬಗ್ಗೆ

ಹೇಗೆ ಅದನ್ನು ಅವನು ಕದ್ದ ಎನ್ನುವ ಬಗ್ಗೆ, ತಾನು ಮಾಡಿಲ್ಲ ಎನ್ನುವುದನ್ನು
ಸಾಬೀತು ಮಾಡಲು ಯತ್ನಿಸುತ್ತಿದ್ದ ಸಂಗತಿಗಳನ್ನು ಮಾಡಿದ ಬಗ್ಗೆ.

**** 

* ಪೇಟ್ರನ್ ಒಂದು ಟೆಕಿಲಾ ಬ್ರಾಂಡ್ 

‍ಲೇಖಕರು admin j

15 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading