ಜಿ ಎನ್ ನಾಗರಾಜ್ ಅಂಕಣ: ಬುದ್ಧ ಧರ್ಮಕ್ಕೂ ಕೆರೆಗಳ ನಿರ್ಮಾಣಕ್ಕೂ ಏನು ಸಂಬಂಧ?!

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಒಬ್ಬ ಬೌದ್ಧ ಭಿಕ್ಷು ರೈತನೊಬ್ಬನ ಮನೆಯ ಹೊರಗೆ ಕುಳಿತಿದ್ದಾನೆ, ನಾಲ್ಕು ದಿನಗಳಿಂದ.‌ ಅಲ್ಲಿಯೇ ನಿದ್ದೆ, ಅಲ್ಲಿಯೇ ಉಣಿಸು. ಅವನಿಗೆ ಬೇಕಾದ್ದು ಆ ರೈತನ ಒಪ್ಪಿಗೆ. ಏತಕ್ಕೆ? ಅದೇ ಕುತೂಹಲಕರವಾದ್ದು.

ಆ ಪ್ರದೇಶದಲ್ಲಿ ಬಹಳ ತೀವ್ರ ಬರಗಾಲ ಕಾಡಿತ್ತು. ಜನ ಹಸಿವಿನಿಂದ ವಿಲವಿಲ ಒದ್ದಾಡಿದ್ದರು. ಹಲವರು ಊರೂ ಬಿಟ್ಟಿದ್ದರು. ಮತ್ತೆ ಮರಳಿ ಬರಲಾರಂಭಿಸಿದ್ದರು.‌ ಆ ಬರಗಾಲಪೀಡಿತ ಜನರ ಸಂಕಟವನ್ನು ಬುದ್ಧ ಕರುಣೆಯ ಮೂರ್ತಿರೂಪವಾಗಿದ್ದ ಈ ಭಿಕ್ಷುವಿಗೆ ನೋಡಿ ಸಹಿಸಲಾಗಲಿಲ್ಲ.‌ ಅದರ ಬಗ್ಗೆ ಬಹಳ ಯೋಚನೆ ಮಾಡಿದರು. ನಿದ್ದೆಗೆಟ್ಟು ಯೋಚನೆ ಮಾಡಿದರು. ಆ ಪ್ರದೇಶ ಆಗಾಗ್ಗೆ ಬರಗಾಲಕ್ಕೆ ಈಡಾಗುತ್ತಿತ್ತು. ಇದಕ್ಕೆ ಪರಿಹಾರವೆಂದರೆ ಖಾಯಂ ನೀರಿನ ಆಸರೆ ಹುಡುಕಬೇಕು. ಅಲ್ಲಿಂದ ಹಲವು ಮೈಲಿ ದೂರದಲ್ಲಿ ಎರಡು ನದಿಗಳು ಹರಿಯುತ್ತಿದ್ದವು. ಎರಡೂ ಕೂಡಾ ಭೂಮಿಯ ಮಟ್ಟದದಿಂದ ಗಣನೀಯವಾಗಿ ಕೆಳಗೆ ಹರಿಯುತ್ತಿದ್ದವು. ಅದಕ್ಕೆ ಅಡ್ಡಗಟ್ಟೆ ಕಟ್ಟುವುದು, ಕಾಲುವೆ ತೋಡುವುದು ಮಾತ್ರ ಇದಕ್ಕೆ ಪರಿಹಾರ ಎಂದು ತೀರ್ಮಾನಿಸಿದರು.

ಅದಕ್ಕಾಗಿ ಇಡೀ ಪ್ರದೇಶದ ಸಮೀಕ್ಷೆ ಕೈಗೊಂಡರು. ಎಲ್ಲಿ ಅಣೆ ಕಟ್ಟುವುದು?, ಎಷ್ಟು ಪ್ರದೇಶ ನೀರಿನಲ್ಲಿ ಮುಳುಗುತ್ತದೆ?, ಎಷ್ಟು ದೂರ ಕಾಲುವೆ ತೋಡಬೇಕಾಗುತ್ತದೆ?, ಇದಕ್ಕೆಲ್ಲ ಎಷ್ಟು ಭೂಮಿ ಬೇಕು?, ಆ ಭೂಮಿ ಯಾರೆಲ್ಲ ರೈತರಿಗೆ ಸೇರಿದೆ ಎಂಬುದನ್ನು ಲೆಕ್ಕಿಸಿದರು. ‌ಈ ಯೋಜನೆಯಿಂದ ಎಷ್ಟು ಜನರಿಗೆ ನೀರಾವರಿ ಒದಗಿಸಬಹುದು ಎಂಬುದನ್ನೂ ಗುರುತಿಸಿದರು. ಇಡೀ ಯೋಜನೆಯ ತಾಂತ್ರಿಕ ರೂಪುರೇಷೆಯ ವಿವರಗಳನ್ನೂ ಸಿದ್ಧಪಡಿಸಿದರು.

ಈ ಎಲ್ಲ ರೈತರನ್ನು ನೀರಾವರಿ ಯೋಜನೆಯ ನಿರ್ಮಾಣದಲ್ಲಿ ಭಾಗವಹಿಸಲು ಮನವಿ ಮಾಡಲು ನಿರ್ಧರಿಸಿದರು. ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋದರು.‌ ಭೂಮಿ ಅವಶ್ಯವಾದ ರೈತರಿಂದ ಭೂಮಿ, ಉಳಿದವರಿಂದ ಶ್ರಮ ಮತ್ತು ಹಾರೆ, ಗುದ್ದಲಿ, ಸನಿಕೆ ಮೊದಲಾದ ಉಪಕರಣಗಳನ್ನು ಬೇಡಿದರು.

ರೈತರು ಭೂಮಿ ಕೊಡಲು ಹಿಂದೆಮುಂದೆ ನೋಡಿದಾಗ, ಯೋಜನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಭಾಗವಹಿಸಲು ಹಿಂಜರಿದಾಗ, ಅವರ ಮನೆಬಾಗಿಲಿನಲ್ಲಿ ಕುಳಿತೇ ಬಿಟ್ಟರು. ಕೊನೆಗೆ ಈ ಹಠಕ್ಕೆ ಎಲ್ಲ ರೈತರೂ ಮಣಿಯಲೇ ಬೇಕಾಯ್ತು. ಸ್ಥಳೀಯ ಆಡಳಿತಗಾರರ ಸಹಕಾರವನ್ನೂ ಪಡೆದುಕೊಂಡರು.

ರೈತರ ಸ್ವಯಂ ಶ್ರಮದಿಂದ ಆರೇಳು ತಿಂಗಳು ಹಗಲೂ – ರಾತ್ರಿ ಕೆಲಸ ನಡೆದು ಅಣೆಕಟ್ಟು ಸಿದ್ಧವಾಯಿತು. ನೀರಾವರಿ ಕಾಲುವೆಗಳನ್ನೂ ತೆಗೆದರು. ಮೂರು ಕೌಂಟಿಗಳ ಹತ್ತು ಸಾವಿರ ಎಕರೆ ನೀರಾವರಿಯಾಯಿತು. 350 ವರ್ಷಗಳ ಕಾಲ ಈ ನೀರಾವರಿ ಯೋಜನೆ ರೈತರ ಜಮೀನುಗಳಿಗೆ ನೀರುಣಿಸುತ್ತಾ ಇಲ್ಲಿಯವರೆಗೂ ಅಸ್ತಿತ್ವದಲ್ಲಿದೆ. ಮೂರು ಬಾರಿ ದುರಸ್ತಿಗೊಂಡಿದೆ. ಮತ್ತಷ್ಟು ವಿಸ್ತರಿಸಲ್ಪಟ್ಟಿದೆ. ಈಗ ಹತ್ತು ಸಾವಿರ ಎಕರೆ ನೀರಾವರಿ ನೀರಾವರಿಯಾಗುತ್ತಿದೆ.

ಈ ಅಣೆಯ ನಿರ್ಮಾಣವಾದದ್ದು ಚೀನಾದ ಬಾಷು ಎಂಬ ಸೆಷುವಾನ್ ಪ್ರಾಂತ್ಯದ ಚೆಂಗ್ಡು ಮೈದಾನ ಪ್ರದೇಶದಲ್ಲಿ. ನಿರ್ಮಾಣ ಮಾಡಲು ಪ್ರೇರಣೆ, ಯೋಜನೆ, ನೇತೃತ್ವ ನೀಡಿದ ಬೌದ್ಧ ಸಂತನ ಹೆಸರು ದಲಾಂಗ್ ಎಂದು. ಚಾನ್ ಎಂಬ, ಝೆನ್ ಬೌದ್ಧ ಪಂಥದ ಮೂಲವಾದ ಬೌದ್ಧ ಸಂಘಕ್ಕೆ ಸೇರಿದವರು.

ಈ ಸಂತ ಅಣೆಯ ಕೆಲಸ ಮುಗಿದ ಮೇಲೆ ಒಂದು ಗುಡಿಸಿಲಿನಲ್ಲಿ ವಾಸ ಮಾಡುತ್ತಾ ಮೂರು ವರ್ಷಗಳ ಕಾಲ ಅಲ್ಲಿ ವಿಶೇಷ ಹುಲ್ಲಿನಿಂದ ಮಾಡುವ ಚಪ್ಪಲಿಗಳನ್ನು ತಯಾರಿಸುತ್ತಿದ್ದರು. ಅವುಗಳನ್ನು ಪ್ರಯಾಣಿಕರಿಗೆ ದಾನ ಮಾಡುತ್ತಿದ್ದರು.

ಕ್ಷಾಮದಿಂದ ತಮ್ಮನ್ನು ಮುಕ್ತ ಮಾಡಿದ ಈ ಬೌದ್ಧ ಸಂತನ ಶ್ರಮ ಹಾಗೂ ಸೇವೆಗೆ ಸಾಮ್ರಾಜ್ಯದ ದೊಡ್ಡ ಪ್ರಶಸ್ತಿ ನೀಡಬೇಕೆಂದು ಆ ಪ್ರದೇಶದ ರೈತರು ಸಾಮ್ರಾಟರಿಗೆ ಮನವಿ ಮಾಡಿದರು. ಸಾಮ್ರಾಟನಿಂದ ಪಡೆದುಕೊಂಡರು.

ಚೀನಾದಲ್ಲಿ ಮಂಗೋಲರ ಆಡಳಿತದಲ್ಲಂತೂ ಬೌದ್ಧ ಧರ್ಮದ ಬೆಳವಣಿಗೆಗೆ ಬಹಳ ಪ್ರೋತ್ಸಾಹ ದೊರೆಯಿತು.‌ ಇದರಿಂದ ಹೆಚ್ಚಾದ ಬೌದ್ಧವಿಹಾರಗಳ ಜೊತೆ ಜೊತೆಯಲ್ಲಿಯೇ ನೀರಾವರಿಯೂ ವಿಸ್ತರಿಸಿತು.‌ ಚೀನಾದ ಶಾಂಷಿ ಪ್ರದೇಶದ ನೀರಾವರಿ ಅಭಿವೃದ್ಧಿಯನ್ನು ಅನ್ವೇಷಿಸಿದ ಸಂಶೋಧಕರು, ಅಲ್ಲಿ 13-14ನೇ ಶತಮಾನಗಳಲ್ಲಿ ಯುದ್ಧ, ಬರಗಾಲಗಳ ಸಂದರ್ಭಗಳಲ್ಲಿ ಬೌದ್ಧ ಧರ್ಮದ ಹಾಗೂ ಚೀನಾ ಮೂಲದ ತಾವೋ ಧರ್ಮದ ಸಂಸ್ಥೆಗಳು ಜನರ ಸಂಕಟಗಳ ಪರಿಹಾರಕ್ಕಾಗಿ ಕೆಲಸ ಮಾಡಿದರು. ಮುಖ್ಯವಾಗಿ ಜನರನ್ನು ನೀರಾವರಿ ಯೋಜನೆಗಳ ನಿರ್ಮಾಣಕ್ಕಾಗಿ ಪ್ರೇರೇಪಿಸಿ ಸಂಘಟಿಸಿದರು. ಇದರಿಂದಾಗಿ ಈ ಎರಡೂ ಧರ್ಮಗಳ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಿಗೆ ಅಲ್ಲಿಯ ನೀರಾವರಿ ನಿರ್ವಹಣೆಯ ಸಂಘಗಳಲ್ಲಿ ಮುಖ್ಯ ಪಾತ್ರ ದೊರೆಯಿತು. ನೀರಾವರಿ ಯೋಜನೆಗಳ  ನೀರಿನ ಹಂಚಿಕೆ ಬಹಳ ಮಹತ್ವದ್ದಾಗಿತ್ತು. ‌ಅದರಲ್ಲಿ ಈ  ಧಾರ್ಮಿಕ ಮುಖಂಡರು ಪ್ರಧಾನ ಪಾತ್ರ ವಹಿಸುತ್ತಿದ್ದರು. ಹಂಚಿಕೆಯ ಸೂತ್ರಗಳು, ನಿಯಮಗಳನ್ನು ನಿರ್ಧರಿಸುವ ಪಾತ್ರ ಅವರಿಗೆ ದೊರಕಿತ್ತು. ಅವರು ತಂತಮ್ಮ ಧರ್ಮದ ಅನುಯಾಯಿಗಳಿಗೆ ಅನುಕೂಲವಾಗುವಂತೆ ಈ ನಿಯಮಗಳನ್ನು ರೂಪಿಸುತ್ತಿದ್ದುದೂ ಉಂಟು ಎಂದು ಈ ಅನ್ವೇಷಕರು ಹೇಳುತ್ತಾರೆ. ಹೀಗೆ ಚೀನಾದ ಹಲವು ಪ್ರಾಂತ್ಯಗಳ ನೀರಾವರಿಯಲ್ಲಿ ಬೌದ್ಧ ಶ್ರಮಣರ ಸಂಘಗಳು ಪಾತ್ರ ವಹಿಸಿವೆ.

ಜಪಾನಿನಲ್ಲಿ:
ಈಗ ಮತ್ತೊಬ್ಬ ಬಹುಪ್ರಸಿದ್ಧ ಬೌದ್ಧ ಭಿಕ್ಷುವಿನ ನೀರಾವರಿ ಪರಿಣತಿ ನೋಡಿ. ಕುಕೈ ಎಂಬ ಇವರು ಬೌದ್ಧ ಧರ್ಮದ ತಾಂತ್ರಿಕ ಪಂಥವಾದ ವಜ್ರಯಾನದ ಜಪಾನಿ ಶಾಖೆಯ ಪ್ರಸಿದ್ಧ ಗುರು.‌ ಒಂಬತ್ತನೆಯ ಶತಮಾನದಲ್ಲಿ ಕ್ರಿಯಾಶೀಲರಾಗಿದ್ದವರು. ಅಮೋಘವಜ್ರನೆಂಬ ಚೀನಿ ವಜ್ರಯಾನದ ಗುರುವಿನ ಪರಂಪರೆಯವರು.‌
ಜಪಾನಿನಲ್ಲಿ ಒಂದು ದೊಡ್ಡ ನೀರಾವರಿ ಅಣೆಕಟ್ಟು ಒಡೆದು ಹೋದಾಗ ಅದನ್ನು ಪುನರ್‌ನಿರ್ಮಿಸಲು ಆ ಪ್ರದೇಶದ ಆಡಳಿತಗಾರ ಜಪಾನಿನ ಸಾಮ್ರಾಟನಿಗೆ ಕುಕೈಯವರೇ ಇದನ್ನು ಮಾಡಲು ಸಾಧ್ಯ ಎಂದು, ಅವರನ್ನು ಕಳಿಸಿಕೊಡಿ ಎಂದು  ವಿನಂತಿಸಿದ.‌ ಕುಕೈಯವರು ಈ ಅಣೆಕಟ್ಟಿನ ಮೇಲೆ ಬೀಳುತ್ತಿದ್ದ ಪ್ರವಾಹದ ಒತ್ತಡವನ್ನು ನಿಭಾಯಿಸುವ ಹೊಸ ತಂತ್ರಜ್ಞಾನವನ್ನು ರೂಪಿಸಿ ಅಣೆಯನ್ನು ನಿರ್ಮಿಸಿದರು.‌ ಜಪಾನಿನ ಆ ಒಣ ಪ್ರದೇಶದಲ್ಲಿ 16,300 ಕೆರೆಗಳಿದ್ದವಂತೆ. ಕುಕೈಯವರಿಗೂ ಮೊದಲು ಕೊರಿಯಾ ಮೂಲದ ಬೌದ್ಧ ಸಂತನೊಬ್ಬ ಹಲವು ಕೆರೆ, ಅಣೆಕಟ್ಟುಗಳನ್ನು ಕಟ್ಟಿದ್ದ.

ಈ ತಂತ್ರಜ್ಞಾನದ ಬಗ್ಗೆ ಅವರು ಚೀನೀ ವಜ್ರಯಾನ ಪಂಥದ ಗುರುವಿನ ಬಳಿ ತರಬೇತಿ ಪಡೆಕೊಂಡಿದ್ದರು ಎಂದು ಹೇಳಲಾಗುತ್ತದೆ. ಇದು ಅಮೋಘವಜ್ರನ ಪರಂಪರೆಯ ಭಾಗ. ಅಮೋಘವಜ್ರ ಇದನ್ನು ಅವರು ಬಹುಕಾಲ ಬೌದ್ಧ ಧರ್ಮವನ್ನು ಕಲಿಯಲು ನೆಲೆಸಿದ್ದ ಶ್ರೀಲಂಕಾದ ಅಥವಾ ಭಾರತದ ಬೌದ್ಧವಿಹಾರಗಳಿಂದ ಪಡೆದುಕೊಂಡಿರಬಹುದು ಎಂದು ಹೇಳಲಾಗಿದೆ.

ಕುಕೈಯವರು ಒಂದು ಸಾಮಾನ್ಯ ಜನರಿಗಾಗಿ ಒಂದು ವಿದ್ಯಾಪೀಠವನ್ನೂ ಸ್ಥಾಪಿಸಿದರು. ಈ ವಿದ್ಯಾಪೀಠದಲ್ಲಿ ಧಾರ್ಮಿಕ ವಿಷಯಗಳ ಜೊತೆಗೆ ವಿಜ್ಞಾನ, ನಿರ್ಮಾಣ ತಂತ್ರಜ್ಞಾನವನ್ನೂ ಕಲಿಸಲಾಗುತ್ತಿತ್ತು.‌

ಬೌದ್ಧ ಧರ್ಮಕ್ಕೂ ನೀರಾವರಿಗೂ ಏನು ಸಂಬಂಧ ಎನಿಸಬಹುದು. ಆದರೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹೊರತಂದ ಧಾರ್ಮಿಕ ವಿಶ್ವಕೋಶದಲ್ಲಿ ಪ್ರಸಿದ್ಧ ವಿದ್ವಾಂಸ ಎಡೆಲ್‌ ಗ್ಲಾಸ್‌ರವರು ಬರೆದಂತೆ, ʻಸರಿಸುಮಾರು ಬೌದ್ಧ ಧರ್ಮ ಸ್ಥಾಪನೆಯಾದಲ್ಲೆಲ್ಲಾ ನೀರಾವರಿ ಇದ್ದೇ ಇರುತ್ತದೆ. ಬೌದ್ಧ ಸಂತರು ನಿರಾವರಿಯನ್ನು ಆ ಪ್ರದೇಶಗಳಿಗೆ ತಂದಿದ್ದಾರೆʼ.

ಬೌದ್ಧ ಧರ್ಮ ಚೀನಾ, ಜಪಾನ್‌ನಲ್ಲಿ ಮಾತ್ರವಲ್ಲ ಅದು ಹಬ್ಬಿದೆ‌ಡೆಗಳಲ್ಲೆಲ್ಲಾ ನೀರಾವರಿ ಯೋಜನೆಗಳ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಿತು. ಬುದ್ಧ ಧರ್ಮ ಇಂದೂ ಅಸ್ತಿತ್ವದಲ್ಲಿರುವ ಆಗ್ನೇಯ ಏಷ್ಯಾದ ಥಾಯ್ಲೆಂಡ್‌, ಲಾವೋಸ್, ಬರ್ಮಾಗಳಲ್ಲಿ ಬೌದ್ಧವಿಹಾರಗಳಿದ್ದ ಕಡೆಗಳಲ್ಲಿ ಕೆರೆಗಳಿವೆ. ಈಗ ಅಸ್ತಿತ್ವದಲ್ಲಿಲ್ಲದಿರುವ ಇಂಡೋನೇಷ್ಯಾ, ಇರಾನ್, ಮಧ್ಯ ಏಷಿಯಾದ ದೇಶಗಳಲ್ಲಿಯೂ ಕೆರೆ ಮೊದಲಾದ ನೀರಾವರಿ ಯೋಜನೆಗಳಿವೆ.

ಇರಾನಿನಲ್ಲೂ:
ಅವುಗಳಲ್ಲಿ ಇರಾನ್‌ನ ಉದಾಹರಣೆ ಗಮನಾರ್ಹ. ಇರಾನಿನಲ್ಲಿ ಒಂಬತ್ತನೆಯ ಶತಮಾನದಲ್ಲಿ ಹತ್ತಿಯ ಉತ್ಪಾದನೆ ಬಹಳ ಎತ್ತರಕ್ಕೇರಿತು. ಅದಕ್ಕೆ ಕಾರಣ, ಅಷ್ಟರಲ್ಲಿ ಅಲ್ಲಿಗೆ ವಿಸ್ತರಿಸಿದ್ದ ಬೌದ್ಧ ಧರ್ಮ ನಿರ್ಮಿಸಿದ್ದ ನೀರಾವರಿ ಯೋಜನೆಗಳು ಎನ್ನುತ್ತಾರೆ ಸಂಶೋಧಕರು.‌ ಅಲ್ಲಿ ಬೌದ್ಧ ಧರ್ಮದ ಬೆಳವಣಿಗೆಗೆ ಬೌದ್ಧ ಧರ್ಮೀಯರು ಅಲ್ಲಿಗೆ ತಂದ ತಂತ್ರಜ್ಞಾನಗಳ, ಅದರಲ್ಲೂ ವಿಶೇಷವಾಗಿ ಜಲತಂತ್ರಜ್ಞಾನದ ಸಾಮರ್ಥ್ಯ ಬಹಳ ಕೊಡುಗೆ ನೀಡಿತು ಎನ್ನುತ್ತಾರೆ. ವಿಶೇಷವೆಂದರೆ ಮುಂದೆ ಅಲ್ಲಿ ಇಸ್ಲಾಂ ಧರ್ಮ ಪ್ರವರ್ಧಮಾನಕ್ಕೆ ಬಂದಾಗ ಈ ಹತ್ತಿಯ ವಿಶ್ವ ವ್ಯಾಪಾರದ ಮೇಲೆ ಹಿಡಿತ ಸಾಧಿಸಲು ಮುಸ್ಲಿಂ ವ್ಯಾಪಾರಿಗಳಿಗೆ ಬಹಳ ಸಹಾಯಕವಾಯಿತು.

ಶ್ರೀಲಂಕಾದಲ್ಲಿ ಕೆರೆ ನೀರಾವರಿಯ ಉತ್ತುಂಗ:
ಚೀನಾ, ಕೊರಿಯಾ, ಜಪಾನ್, ಆಗ್ನೇಯ ಏಷ್ಯಾಗಳಿಗೆ ನೀರಾವರಿ ತಂತ್ರಜ್ಞಾನ ಹಬ್ಬಿಸುವುದರಲ್ಲಿ ಶ್ರೀಲಂಕಾದ ಪಾತ್ರ ಗಣನೀಯ ಎಂದು ಹೇಳಲಾಗಿದೆ. ಭಾರತಕ್ಕೆ ಬಂದಂತೆಯೇ ಹಲವು ಚೀನಿ, ಜಪಾನಿ ಬೌದ್ಧ ಸಂತರು ಶ್ರೀಲಂಕಾದ ಬೌದ್ಧ ವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ವರ್ಷಗಟ್ಟಲೆ ತಂಗುತ್ತಿದ್ದರು. ಆ ವಿದ್ಯಾಲಯಗಳಲ್ಲಿ ಧಾರ್ಮಿಕ, ತತ್ವಶಾಸ್ತ್ರದ ವಿಷಯಗಳಲ್ಲದೆ ಖಗೋಳವಿಜ್ಞಾನ, ಗಣಿತ, ಅರ್ಥಶಾಸ್ತ್ರ, ವಾಸ್ತುಶಿಲ್ಪ, ಮೂರ್ತಿಶಿಲ್ಪ, ಸೌಂದರ್ಯಶಾಸ್ತ್ರ, ಇತಿಹಾಸ, ಕಾನೂನು ಇತ್ಯಾದಿಗಳನ್ನೂ ಕಲಿಸಲಾಗುತ್ತಿತ್ತೆಂದು ಸಂಶೋಧಕರು ತಿಳಿಸಿದ್ದಾರೆ.‌ ಇದರಲ್ಲಿ ಕೆರೆ ಕಟ್ಟೋಣದ ಪ್ರಸ್ತಾಪವಿಲ್ಲ ನಿಜ. ಆದರೆ ಮುಖ್ಯ ಬೌದ್ಧ ವಿದ್ಯಾಲಯಗಳಿದ್ದ ಅನುರಾಧಪುರದ ಸುತ್ತ ಸಾವಿರಾರು ಕೆರೆಗಳು, ಹಲವು ಕಾಲುವೆಗಳೂ ಇದ್ದವು. ಕೆಲವಂತೂ ಬಹಳ ದೊಡ್ಡವು. ಏಷಿಯಾದಲ್ಲಿಯೇ ಅತ್ಯಂತ ದೊಡ್ಡ ಕೆರೆಯೂ ಅಲ್ಲಿತ್ತು.

ಹಿಂದಿನ‌ ಲೇಖನದಲ್ಲಿ ವಿವರಿಸಿದಂತೆ ಶ್ರೀಲಂಕಾದ ನೀರಾವರಿ ಬೆಳವಣಿಗೆ ವಿಶ್ವಮಾನ್ಯವಾಗಿದೆ. ವಿಶ್ವಪರಂಪರೆಯ ಕ್ಷೇತ್ರ ಎಂದು ಗುರುತಿಸಲಾಗಿದೆ. ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿಯೇ ಅಲ್ಲಿ ಕೆರೆಗಳ ನಿರ್ಮಾಣ ಆರಂಭವಾಗಿದೆ.‌ ದಕ್ಷಿಣ ಭಾರತದಲ್ಲಿ ಕೆರೆ ನೀರಾವರಿ ವ್ಯಾಪಿಸಿದುದಕ್ಕಿಂತ ಮೊದಲೇ ಅಲ್ಲಿ ಕೆರೆಗಳ ನಿರ್ಮಾಣ ಗಣನೀಯವಾಗಿತ್ತು.

ಬೌದ್ಧ ಗ್ರಂಥಗಳಾದ ದೀಪವಂಶ, ಮಹಾವಂಶಗಳು ಮೊದಲೇ ಇದ್ದ ಕೆರೆಗಳ ಬಗ್ಗೆ ವಿವರವಾಗಿ ದಾಖಲಿಸಿವೆ ಎಂಬ ಅಂಶವೇ ಅಲ್ಲಿ ಬೌದ್ಧ ಸಂಘಗಳು ಕೆರೆಗಳ ನಿರ್ಮಾಣದ ಬಗ್ಗೆ ವಹಿಸಿದ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ.‌ ಶ್ರೀಲಂಕಾದ ಒಣಪ್ರದೇಶಗಳಲ್ಲಿ ಸಾಮಾನ್ಯ ಕೃಷಿಕರು ತಮ್ಮದೇ ಸಾಮುದಾಯಿಕ ಪ್ರಯತ್ನಗಳಿಂದ ಸಣ್ಣ ಕೆರೆಗಳನ್ನು ಕಟ್ಟಿಕೊಳ್ಳುವುದು ಸಾಮಾನ್ಯವಾಗಿತ್ತು.‌ ಇಂತಹ ನೂರೈವತ್ತು ಕೆರೆಗಳು ಬೌದ್ಧ ಗ್ರಂಥಗಳಲ್ಲಿ ನಮೂದಾಗಿಲ್ಲದಿದ್ದರೂ ಈ ಕೆರೆಗಳ ಅಡಿಯಲ್ಲಿನ ಆದಾಯದ ಕೆಲ ಭಾಗವನ್ನು ಬೌದ್ಧ ಸಂಘಗಳಿಗೆ ನೀಡಿದ ಬಗ್ಗೆ ಸಣ್ಣ ‌ಶಾಸನಗಳು ದಾಖಲಿಸಿವೆ.

ಮಹಾವಂಶ ಗ್ರಂಥ ಆರನೆಯ ಶತಮಾನಕ್ಕೆ ಸೇರಿದ್ದು. ಕ್ರಿಸ್ತಪೂರ್ವದಲ್ಲಿ ಕೆರೆಗಳನ್ನು ಕಟ್ಟಿಸಿದ ಕೆಲವರ ಬಗ್ಗೆ ಈ ಕೃತಿಯ ನಮೂದುಗಳ ಜೊತೆಗೆ, ಮೊತ್ತ ಮೊದಲ ಐತಿಹಾಸಿಕ ದಾಖಲೆ ಇರುವುದು ದೊಡ್ಡ ಕೆರೆಯನ್ನು ಕಟ್ಟಿಸಿದ ದೇವನಾಂಪಿಯ ತಿಸ್ಸನ ಮತ್ತು ಅವನ ಸಹೋದರನ ಬಗ್ಗೆ ಎಂಬುದು ಗಮನಾರ್ಹ. ಅಶೋಕನ ಪ್ರಿಯ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿರುವುದು ಅವನ ಬೌದ್ಧಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.

ಮುಂದೆ ಮೂರನೇ ಶತಮಾನದಲ್ಲಿ ಆಳಿದ ಮಹಾಸೇನ, ಐದನೇ ಶತಮಾನದ ಧಾತುಸೇನ ಹಲವು ದೊಡ್ಡ ಕೆರೆಗಳನ್ನು ಕಟ್ಟಿಸಿದರು. ಸಾರ್ವಕಾಲಿಕ ನದಿಯೊಂದಕ್ಕೆ ಅಣೆ ಕಟ್ಟುವ ಸಾಹಸವನ್ನೂ ಮಾಡಿದರು.‌ ಹತ್ತಾರು ಮೈಲಿ ಕಾಲುವೆಗಳನ್ನು ತೆಗೆದರು. ಹಾಸೇನನ ಕಾಲಕ್ಕೆ ಮೊದಲು ಅತ್ಯಂತ ಭೀಕರ ಕ್ಷಾಮಡಾಮರಗಳಿಗೆ ತುತ್ತಾಗುತ್ತಿದ್ದ ಪ್ರದೇಶ ಗಣನೀಯವಾಗಿ ಬಿಡುಗಡೆ ಪಡೆದುದರಿಂದ ಈ ರಾಜನನ್ನು ಜನರು ನೀರ‌ದೇವರಾಗಿ ಪೂಜಿಸತೊಡಗಿದರಂತೆ.

ಹೀಗೆ ಬೌದ್ಧ ರಾಜರು ದೊಡ್ಡ ಕೆರೆಗಳನ್ನು ಕಟ್ಟಿಸಿ ಸರ್ಕಾರದಿಂದಲೇ ಅವುಗಳ ನಿರ್ವಹಣೆ ಕೈಗೊಂಡರು.‌ ಇಂಜನಿಯರ್ ರೀತಿಯ ಅಧಿಕಾರಿಗಳು, ಕಾಲುವೆಗಳ ಉಸ್ತುವಾರಿಗೆ ಅಧೀನ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರು. ಈ ಕೆರೆಗಳ ಅಚ್ಚುಕಟ್ಟಿನ ಕೆಲ ಭೂಮಿಯನ್ನು ಬೌದ್ಧವಿಹಾರಗಳಿಗೆ ದಾನ‌ಮಾಡಿದರು. ಅಷ್ಟೇ ಅಲ್ಲ, ಇಡೀ ಕೆರೆಗಳನ್ನೇ ಬೌದ್ಧವಿಹಾರಗಳ ನಿರ್ವಹಣೆಗೆ ದಾನ ಮಾಡಿದ್ದಾರೆ. ಮಹಾವಿಹಾರ ಎಂಬ ದೊಡ್ಡ ವಿಹಾರ ಹಲವು ಸಾವಿರ ಎಕರೆ ಭೂಮಿಯ ಒಡೆಯನಾಗಿತ್ತು. ಅದು ತನ್ನ ಅಧೀನದ ಕೆರೆಗಳು, ಕಾಲುವೆಗಳ ನಿರ್ವಹಣೆಗೆ ಇಂಜನಿಯರ್ ರೀತಿಯ ಅಧಿಕಾರಿಗಳನ್ನು ಹೊಂದಿತ್ತು.

ಹೀಗೆ ಕರ್ನಾಟಕದಲ್ಲಿ ಕದಂಬರು, ಗಂಗರು ಮೊದಲಾದ ರಾಜ್ಯಗಳು ಉದಿಸುವ ವೇಳೆಗಾಗಲೇ ಶ್ರೀಲಂಕಾ ನೀರಾವರಿ ಅಭಿವೃದ್ಧಿಯಲ್ಲಿ ಬಹಳ ಮುಂದಾಗಿತ್ತು. ಹೊಸ ತಂತ್ರಜ್ಞಾನಗಳನ್ನು ಶೋಧಿಸಿದ್ದರು ಅಥವಾ ಅಳವಡಿಸಿಕೊಂಡಿದ್ದರು. ಬೆಟ್ಟ ಪ್ರದೇಶದಲ್ಲಿ ದೊಡ್ಡ ಕೆರೆ ಕಟ್ಟಿ 47 ಮೈಲಿ ಉದ್ದದ ಕಾಲುವೆ ಮೂಲಕ ಇತರ ಕೆರೆಗಳಿಗೆ ನೀರು ಸರಬರಾಜು ಮಾಡುವ ಸಾಹಸ ಮಾಡಿದ್ದಾರೆ.

ಮುಂದೆ ಕೆರೆಗಳ ನಿರ್ಮಾಣದಲ್ಲಿ ಆಸಕ್ತಿ ತೋರಿದ ರಾಜರುಗಳ ಹೆಸರು ಅಗ್ಗಬೋಧಿ, ಮೊಗ್ಗಲಾಯನ ಎಂಬುದೂ ಕೂಡಾ ಗಮನಿಸತಕ್ಕ ಅಂಶ.

ಶ್ರೀಲಂಕಾದ ಚರಿತ್ರೆಯಲ್ಲಿ ಕೆರೆ ಮತ್ತು ಇತರ ನೀರಾವರಿ ನಿರ್ಮಾಣಗಳಲ್ಲಿ ಅತಿದೊಡ್ಡ ಪಾತ್ರ ವಹಿಸಿದ್ದು ಪರಾಕ್ರಮ ಬಾಹು ಎಂಬ ರಾಜ. ಭೂಮಿಯ ಮೇಲೆ ಬಿದ್ದ ಪ್ರತಿಯೊಂದು ತೊಟ್ಟು ನೀರೂ ನೀರಾವರಿ ಯೋಜನೆಗಳ ಮೂಲಕ ಬಳಕೆಯಾಗಬೇಕು ಎಂಬ ನಿರ್ಧಾರ ಆತನದು. ಹಲವು ಬೃಹತ್ ಕೆರೆ, ಮುಖ್ಯ ನದಿಗೆ ಅಣೆಕಟ್ಟು ಕಟ್ಟಿಸುವ ಸಾಹಸ ಮಾಡಿದ ರಾಜ.

ಶ್ರೀಲಂಕಾದ ನೀರಾವರಿ ಬೆಳವಣಿಗೆ ಕರ್ನಾಟಕಕ್ಕೆ ಹೋಲಿಸಿದರೆ ಮೂರು ನಾಲ್ಕು ಶತಮಾನ ಮುಂದಿದೆ. ಅಲ್ಲದೆ ಕರ್ನಾಟಕದಲ್ಲಿ ಸ್ಥಳೀಯ ಗಾವುಂಡರು, ಡಣಾಯಕರು, ಪಾಳೆಯಗಾರರೇ ಕೆರೆ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದ್ದರೆ, ಶ್ರೀಲಂಕಾದಲ್ಲಿ ಸ್ಥಳೀಯರ ಜೊತೆಗೆ ರಾಜರುಗಳ ನೇರ ಆಸಕ್ತಿ, ಪಾತ್ರ ಎದ್ದು ಕಾಣುತ್ತದೆ. ಅದರಿಂದಾಗಿ ಆ ಕಾಲದ ದೊಡ್ಡ ಸಾಹಸಗಳನ್ನು ಮಾಡುವುದರ ಜೊತೆಗೆ ಹೊಸ ತಂತ್ರಜ್ಞಾನವನ್ನು ರೂಪಿಸಲು ಸಾಧ್ಯವಾಗಿದೆ. ಇವರಲ್ಲಿ ಬಹಳ ಜನ ಬೌದ್ಧ ಧರ್ಮವನ್ನು ಅವಲಂಬಿಸಿದವರಾಗಿದ್ದರು. ಅಲ್ಲಿಯ ಬೌದ್ಧವಿಹಾರಗಳೂ ಕೂಡಾ ನೀರಾವರಿ ನಿರ್ವಹಣೆಯಲ್ಲಿ ಮುಖ್ಯಪಾತ್ರ ವಹಿಸಿವೆ. ಕರ್ನಾಟಕದ ದೇವಾಲಯಗಳು ನೀರಾವರಿ ಜಮೀನಿನ ಆದಾಯವನ್ನು ಸಂಗ್ರಹಿಸಿ ದೇವಾಲಯ ನಿರ್ವಹಿಸುವುದರಲ್ಲಿ ಹೆಚ್ಚು ಆಸಕ್ತಿ ತೋರಿವೆ. ಅಗ್ರಹಾರಗಳ ಮಹಾಜನರು, ದೇವಾಲಯಗಳು ಕೆರೆ ನಿರ್ಮಾಣದಲ್ಲಿ ಪಾತ್ರ ವಹಿಸಿದ ಎರಡು ಮೂರು ಉದಾಹರಣೆ ಮಾತ್ರ ಕಾಣುತ್ತವೆ.

ಶ್ರೀಲಂಕಾದ ಈ ನಿರ್ಮಾಣ ಸಾಹಸದಲ್ಲಿ ಭಾಗಿಯಾದ ತಂತ್ರಜ್ಞರು ಕೇವಲ ಕೆರೆ ನಿರ್ಮಾಣದ ಕೂಲಿಕಾರರಾದ ವಡ್ಡರು, ಅವರ ಮೇಸ್ತ್ರಿಗಳು ಮಾತ್ರವೇ ಆಗಿರದೆ ಹೆಚ್ಚಿನ ವಿದ್ಯಾಭ್ಯಾಸ ಪಡೆದವರೂ ತೊಡಗಿಕೊಂಡಿದ್ದರು. ಬೌದ್ಧ ಶ್ರಮಣರ, ನೇರವಾಗಿ ರಾಜರ ಪಾತ್ರವೂ ಕೂಡಾ ಈ ತಂತ್ರಜ್ಞಾನದ ಬೆಳವಣಿಗೆಗೆ ಕಾರಣವಾಗಿದೆ. ಶ್ರೀಲಂಕಾದ ಈ ಪ್ರಸಿದ್ಧಿಯಿಂದಾಗಿ ಕಾಶ್ಮೀರದ ರಾಜನೊಬ್ಬ ಅಲ್ಲಿನ ಕೆರೆ ನಿರ್ಮಾಣದ ತಂಡವನ್ನು ಆಹ್ವಾನಿಸಿದ್ದನಂತೆ. ಈ ನೀರಾವರಿ ನಿರ್ಮಾಣಗಳು ಆಗ್ನೇಯ ಏಷ್ಯಾ, ಚೀನಾ, ಜಪಾನ್, ಕೊರಿಯಾಗಳ ನೀರಾವರಿ ತಂತ್ರಜ್ಞಾನದ ಮೇಲೂ ಪ್ರಭಾವ ಬೀರಿವೆ.

ಭಾರತದಲ್ಲಿ ಬೌದ್ಧ ಸಂಘಗಳು ನೀರಾವರಿಯಲ್ಲಿ ಆಸಕ್ತಿ ತೋರಲಿಲ್ಲವೇ?
ಈ ಬಗ್ಗೆ ಚೀನಾ, ಜಪಾನ್ ಮತ್ತು ಶ್ರೀಲಂಕಾದ ಸಾಹಿತ್ಯ, ಸರ್ಕಾರದ ದಾಖಲೆಗಳಲ್ಲಿ ಸಿಗುವ ಮಾಹಿತಿ ಭಾರತದಲ್ಲಿ ದೊರಕಿಲ್ಲ. ಇಲ್ಲಿನ ಬೌದ್ಧ ಸಾಹಿತ್ಯದಲ್ಲಿಯೂ ಕೂಡಾ. ಆದರೆ ಇತ್ತೀಚಿಗೆ ಶ್ರೀಲಂಕಾದ ಶೋಧಗಳ ಸ್ಫೂರ್ತಿಯಿಂದ ಕೆಲ ಸಂಶೋಧಕರು ಸಾಂಚಿ ಮತ್ತು ಅದರ ಸುತ್ತಮುತ್ತ ಕೈಗೊಂಡ ಸಮೀಕ್ಷೆ, ಆಧುನಿಕ ಸಂಶೋಧನಾ ವಿಧಾನಗಳನ್ನು ಬಳಸಿ ಅಧ್ಯಯನ ಕೈಗೊಂಡಿದ್ದಾರೆ. ಇಲ್ಲಿಯೂ ಬೌದ್ಧವಿಹಾರಗಳು‌ ಸ್ಥಾಪನೆಗೊಂಡ ಕೆಲವೆಡೆಗಳಲ್ಲಿ ಕೆರೆ ನಿರ್ಮಾಣ ಕಂಡು ಬಂದಿರುವುದನ್ನು ಈ ಪ್ರಬಂಧಗಳು ದಾಖಲಿಸಿವೆ. ವಿದಿಶಾ ನಗರದ ಬಳಿಯ ಗುಡ್ಡವೊಂದರ ಮೇಲೆ ಕಟ್ಟಲ್ಪಟ್ಟ ಬೌದ್ಧ ಸ್ಮಾರಕಗಳು, ವಿಹಾರಗಳ ಜೊತೆ ಜೊತೆಗೇ ಕ್ರಿಪೂ ಮೂರನೆಯ ಮತ್ತು ಎರಡನೆಯ ಶತಮಾನದ ನಡುವೆ ಕಟ್ಟಲ್ಪಟ್ಟ ಕೆರೆಯ ಅವಶೇಷಗಳನ್ನು ಗುರುತಿಸಲಾಗಿದೆ. ನಂತರ ಐದನೆಯ ಶತಮಾನದವರೆಗಿನ ಕಾಲದಲ್ಲಿ ಈ ಪ್ರದೇಶದಲ್ಲಿ 17 ಕೆರೆಗಳನ್ನು ಕಟ್ಟಲಾಗಿದೆ. ಅವುಗಳಲ್ಲಿ ಎರಡು ಕೆರೆಗಳು ಗಣನೀಯ ಗಾತ್ರದವು ಮತ್ತು ಅವುಗಳಲ್ಲಿ ಕೋಡಿ ಮತ್ತು ತೂಬಿನ ತಂತ್ರಜ್ಞಾನ ಬಳಸಿರುವುದನ್ನು ಗುರುತಿಸಬಹುದು.

ಇದೇ ರೀತಿ ಮಹಾರಾಷ್ಟ್ರ, ಗುಜರಾತುಗಳ ಒಂದೆರೆಡು ಸ್ಥಳಗಳಲ್ಲಿನ ವಿಹಾರಗಳ ಬಳಿಯೂ ಕೆರೆ ನಿರ್ಮಾಣವಾಗಿರುವುದನ್ನು ಗುರುತಿಸಲಾಗಿದೆ.

ಕರ್ನಾಟಕದಲ್ಲಿಯೂ ಅಶೋಕನ ಕಾಲದಿಂದ ಆರಂಭವಾದ ಬೌದ್ಧ ಧರ್ಮದ ಪ್ರಭಾವದಿಂದ ಇಲ್ಲಿ ಕೆರೆ ನಿರ್ಮಾಣದ ಮೇಲೆ ಪ್ರಭಾವ ಬೀರಿತ್ತೇ ಎಂಬುದಕ್ಕೆ‌ ಪುರಾವೆಗಳು ಲಭ್ಯವಾಗಿಲ್ಲ‌. ಸನ್ನತಿಯ ಬಳಿಯ ಕನಗನಹಳ್ಳಿಯ ಬೌದ್ಧ ಸ್ಮಾರಕಗಳು, ಬನವಾಸಿಯಲ್ಲಿ ಸಾವಿರಾರು ಸಂಖ್ಯೆಯ ಶ್ರಮಣರನ್ನು ಒಳಗೊಂಡ ಥೇರವಾದಿ ಬೌದ್ಧ ಸಂಘಗಳ ದಾಖಲೆಗಳು ಇಲ್ಲಿ ಗಣನೀಯ ಪ್ರಮಾಣದ ಬೌದ್ಧ ಸಂಸ್ಥೆಗಳ ಇರವನ್ನು ಸೂಚಿಸುತ್ತವೆ. ಬನವಾಸಿಯ ಸಂಘಗಳಿಂದ ಸಾವಿರಾರು ಮಂದಿ ಶ್ರಮಣರು ಶ್ರೀಲಂಕಾಕ್ಕೆ ಭೇಟಿ ಕೊಡುತ್ತಿದ್ದರು. ರಾಜ್ಯ ಸ್ಥಾಪನೆಯ ಮೊದಲು ಕದಂಬರಿಗೂ ಕೂಡಾ ಶ್ರೀಲಂಕಾದ ಜೊತೆಗೆ ಕಡಲ ವ್ಯಾಪಾರದ ಸಂಪರ್ಕವಿತ್ತು ಎಂದು ಎಸ್. ಶೆಟ್ಟರ್ ಗುರುತಿಸಿದ್ದಾರೆ. ಇವುಗಳ ಪ್ರಭಾವ ಇಲ್ಲಿಯ ಚುಟುಗಳು, ಶಾತವಾಹನರು, ಕದಂಬರ ಮೇಲಾಗಿದೆಯೇ ಎಂಬುದನ್ನು ಶೋಧಿಸಬೇಕಾಗಿದೆ. ಆದರೆ ಇಲ್ಲಿಯವರೆಗೆ ದೊರೆತ ಪುರಾವೆಗಳಿಂದ ಬಹಳ ದೊಡ್ಡಮಟ್ಟದ ಪ್ರಭಾವವೇನೂ ಆಗಿಲ್ಲ ಎಂದು  ತಿಳಿದುಬರುತ್ತದೆ.

ಒಟ್ಟಿನಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಬೌದ್ಧ ಸಂತರು ನೀರಾವರಿ ನಿರ್ಮಾಣದಲ್ಲಿ ಭಾಗವಹಿಸುವುದು, ಬರಗಾಲದ ಸಂಕಟವನ್ನು ನಿವಾರಿಸುವುದು ಬುದ್ಧಕರುಣೆಯ ತತ್ವವನ್ನು ಕಾರ್ಯರೂಪಕ್ಕೆ ತರುವ ಒಂದು ಮುಖ್ಯ ವಿಧಾನ ಎಂದು ಭಾವಿಸಿದಂತೆ ಕಾಣುತ್ತದೆ. ಈ ಸಂತರು ನೀರಾವರಿ ತಂತ್ರಜ್ಞಾನದ ಪರಿಣತರು ಎಂದೂ ಕೂಡಾ ಭಾವಿಸಿರುವುದನ್ನು ನೋಡುತ್ತೇವೆ. ಅದರಲ್ಲಿಯೂ ತಾಂತ್ರಿಕ ವಜ್ರಯಾನ ಪಂಥದವರ ಕ್ರಿಯಾಶೀಲತೆಯನ್ನು ಗುರುತಿಸಲಾಗಿದೆ. ಇದೊಂದು ಮಹತ್ವದ ವಿಷಯವಾಗಿದೆ.

‍ಲೇಖಕರು admin j

July 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: