ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆ ಮಾತ್ರ ನಿದ್ದೆ ಹೋಗಲಿಲ್ಲ..

ದಾದಾಪೀರ್ ಜೈಮನ್

ಅವರಿಗೆ ಬೃಹತ್ ಕಲ್ಲು ಬಂಡೆಯೊಂದರ

ತಳ್ಳುವ ಕೆಲಸ ವಹಿಸಲಾಯಿತು

ಬೆಳಗಿನಿಂದ ಬೈಗಿನವರೆಗೆ ನೂಕಿದರೂ

ಅದು ಕದಲದೆ ಉಳಿದುಕೊಂಡಿತು

ಕೈಗಳಿಗೆ ಉರಿ ಹತ್ತಿ ಬೊಬ್ಬೆ ಬಂದವು

ಭೀಕರ ಬರಗಾಲ, ಮೈಕೊರೆವ ಚಳಿ

ಕಪ್ಪು ಮೋಡ ಕರಗಿ ಜೋರು ಜಡಿವ ಮಳೆ

ಸುತ್ತಲೂ ಘಟಿಸುತ್ತ ಕಾಲಗಳುರುಳಿದವು

ಅವರ ನಿದ್ದೆ, ನೆನಪು ಮತ್ತು ಕನಸುಗಳು

ಕರಗಿ ಹೋದವಾದರೂ ಕಲ್ಲು ಕನಿಕರ ತೋರಲಿಲ್ಲ

ಕೊನೆಗೆ ಸೋತ ಕಾಲು, ಮಾಸಿದ ಬಟ್ಟೆ, ಹಸಿವ  ಹೊಟ್ಟೆ

ಜೊತೆಗೆ ಚೂರೆಂದರೆ ಚೂರೂ ಜರುಗದ ಬಂಡೆಯ ಬಿಟ್ಟು

ಬಸವಳಿದು ಪ್ರಾಣ ಕೊಟ್ಟು ಕುಸಿದರು!!!

ರಾಜಕಾರಣ ಲೊಚಗುಟ್ಟಿ ಹೋಯಿತು

ವಿಜ್ಞಾನ; ಬಂಡೆ ಅಲುಗಿಸದ ಬಲದಿಂದ

ಪ್ರಯೋಜನವಿಲ್ಲವೆಂದು ಹೊರಟಿತು

ವೈದ್ಯಕೀಯ  ಪ್ರಾಣ ಪಕ್ಷಿಯ ಹಿಡಿಯದೆ ಸೋತಿತು

ಆರಕ್ಷಣೆ ಎಂದಿನಂತೆ ತಡವಾಗಿ ಬಂದಿತು

ಕೊನೆಗೆ ಕವಿತೆಯೊಂದು ಮಾತ್ರ  ಅಲ್ಲಿಗೆ ತೆರಳಿತು


ಸತ್ತವರ ಕಣ್ಣು ಹಾಗೂ  ಕಲ್ಲುಬಂಡೆಯ ದಿಟ್ಟಿಸಿ ಕುಳಿತಾಗ;

ಕವಿತೆಗೆ ಬಂಡೆ ಪಿಸುಗುಟ್ಟುವುದು ಕೇಳಿಸಿತು

ಬಂಡೆಯ ಮೈಮುಟ್ಟಿದಾಗ ‘ಅವರ’ ಕೈಯ ಬಿಸುಪು ತಾಕಿ;

ಅಕ್ಷರಗಳು ಸಂಡಿಗೆ ಹೂವಿನ ಹಾಗೆ ಅರಳಿ ನಿಂತವು

ಇದೆ…ಇಂತಹುದೆ ಸುದ್ದಿಯನು ಜನರು ಮರುದಿನದ

ವರದಿಯಲಿ ಸರಸರನೆ ಕಣ್ಣು ಹರಿಸಿ

ಮರೆತುಬಿಟ್ಟಂತೆ ರಸ್ತೆಯೊಳಗೆ ಮುಳುಗಿ ಹೋದರು!!!

ಆದರೆ ಕವಿತೆ ಮಾತ್ರ ನಿದ್ದೆ ಹೋಗದೆ

ಬಂಡೆಯ ಜೊತೆ ಕದಲದೆ ಕೂತಿದೆ

ಈ ಹೊತ್ತಿನಲ್ಲೇ ಮತ್ತೊಂದಷ್ಟು ಮಂದಿ ಬಂಡೆಗೆ

ಕೈ ಹಚ್ಚಲು ಅದರ ಬಳಿಗೆ ಧಾವಿಸುತ್ತಿದ್ದಾರೆ.

 

‍ಲೇಖಕರು avadhi

20 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading