‘ಕವಿತೆ ಬಂಚ್’ನಲ್ಲಿ ವಿಜಯಭಾಸ್ಕರ್

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ವಿಜಯಭಾಸ್ಕರ
ಕಲಬುರಗಿ ಜಿಲ್ಲೆಯ‌ ಸೇಡಂ ತಾಲೂಕಿನವರಾದ ವಿಜಯಭಾಸ್ಕರ ಅವರು ಸಾಹಿತಿಕವಾದ ವಾತಾವರಣದಲ್ಲಿ ಬೆಳೆದವರು. ಹಾಗಾಗಿ ತಮ್ಮ ಬಾಲ್ಯದಿಂದಲೂ ಸಾಹಿತ್ಯ ಎಂಬುದು ಒಲವು. ಪದವಿವರೆಗೂ ಸೇಡಂ ತಾಲೂಕಿನಲ್ಲಿ ಓದಿ, ಹಂಪಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವ್ಯಾಸಂಗ ಮಾಡಿದ್ದಾರೆ.

ಬೆಂಗಳೂರಿನ ‘ಅವಧಿ’ಯಲ್ಲಿ ಎರಡು ವರ್ಷ ಕೆಲಸ ಮಾಡಿದ್ದಾರೆ. ‘ನೆನಪಿನ ಪಡಸಾಲೆ’ ಎಂಬ ಮೊದಲ ಕವನ ಸಂಕಲನವೂ ಕೂಡ 2019 ರಲ್ಲಿ ಬಿಡುಗಡೆ ಕಂಡು 2020 ರ ಗುಲ್ಬರ್ಗ ವಿಶ್ವವಿದ್ಯಾಲಯ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ. ಫೋಟೋಗ್ರಫಿ ನೆಚ್ಚಿನ ಕ್ಷೇತ್ರ. ಓದು, ತಿರುಗಾಟ ಅಚ್ಚುಮೆಚ್ಚು. ರುಚಿ ಕಂಡ ಹೋಟೆಲಿನ ಹಾಗೂ ಊಟದ ಸ್ಥಳಗಳ ಬಗ್ಗೆ ಹೆಚ್ಚಿನ ಕಾಳಜಿ.
ಈಗ ತಾವಿದ್ದಲ್ಲಿಯೇ ಫ್ರೀಲ್ಯಾನ್ಸ್ ಕೆಲಸವೊಂದನ್ನು ಮಾಡುತ್ತಿದ್ದಾರೆ. ಮುಖಪುಟ ಹಾಗೂ ಪುಸ್ತಕ ವಿನ್ಯಾಸ ಮಾಡುವಲ್ಲಿ ಹೈ.ಕ ದಲ್ಲಿ ಕ್ರಿಯಾಶೀಲರಲ್ಲಿ ಇವರು ಒಬ್ಬರು.

1. ಯುದ್ದಗಳು ಮಾತಾಡುವುದಿಲ್ಲ

ಯುದ್ಧಗಳು ಮಾತಾಡುವುದಿಲ್ಲ
ಯಾಕೆಂದರೆ ಅವುಗಳಿಗೆ ರೌದ್ರ ಒಂದೇ ಗೊತ್ತು.
ಆರಿದ ದೀಪದ ಮುಂದೆ ಕತ್ತಲನ್ನು ವಿಜೃಂಭಿಸುವುದು ಮಾತ್ರ ಗೊತ್ತು.

ಯುದ್ಧಗಳಿಗೆ ಸಹಜವಾಗಿ ಕೌರ್ಯ, ಸೇಡು, ಪ್ರತೀಕಾರ
ಕೆಣಕುವ ಒರಸೆ, ಸದ್ದು ಮಾಡುವ ಗುಣ ಒಂದೇ ಗೊತ್ತು.
ಆದರೂ ಯುದ್ಧಗಳು ಮಾತಾಡುವುದಿಲ್ಲ.
ಮನ ಮನಗಳ ನಡುವೆ ಹೆಪ್ಪುಗಟ್ಟಿದ ಉಸಿರನ್ನು,
ದೇಶ ದೇಶಗಳ ನಡುವೆ ಇರುವ ಕಂದಕವ ಸರಿಸಿ ಎಂದಿಗೂ ಮಾತಾಡುವುದಿಲ್ಲ
ಯಾಕೆಂದರೆ ಯುದ್ಧಕ್ಕೆ ಬೇಕಾಗಿರುವುದು ಪ್ರತಿಷ್ಠೆ ಒಂದೇ..

ದ್ವೇಷದ ರಾಷ್ಟಗಳು ಬಯಸುವುದು ಯುದ್ಧವಾದರೆ
ದ್ಚೇಷದ ಭಾವನೆ ಬಿತ್ತರಿಸುವ ಬಾಂಬ್, ಗ್ರೇನೆಡ್ ಸದ್ದಾಡುತ್ತಾ ಜೀವ ನುಂಗುತ್ತವೆ.
ಯೋಧನ ತಾಯಿಯ ಕರಳು, ಪತ್ನಿಯ ಕುಂಕುಮ,
ಗಾಜಿನ ಬಳೆ ಹೊಸುಕಿ ಹಾಕಲು ಯುದ್ದಗಳಿಂದ ಮಾತ್ರ ಸಾಧ್ಯ.
ಯುದ್ಧದಗಳು ಏನನ್ನೂ‌ ಮಾತಾಡುವುದಿಲ್ಲ
ಯಾಕೆಂದರೆ ಅವುಗಳು ತಿಳಿದಿಲ್ಲ ಪ್ರೀತಿ, ಮಮತೆ, ಸಂಬಂಧ..

ನಮಗೆ ಯುದ್ದಬೇಕು, ಅವರಿಗೂ ಯುದ್ದಬೇಕು
ಆದರೆ, ತನ್ನದೆಯಲ್ಲಿ ಬಿಗಿಯಾಗಿ ಹಿಡಿದ ಸಾಥಿಗೆ ಗಂಡಬೇಕು.
ಪುಟ್ಟ ಕಣ್ಣಗಳು ಕೂಸಿಗೆ ಅಪ್ಪಬೇಕು.
ಮನೆಗೆ ಮಗಬೇಕು, ತಂಗಿಗೆ ಅಣ್ಣಬೇಕು.
ದೇಶಕ್ಕೆ ಹುತಾತ್ಮಬೇಕು.
ಆದರೂ, ಯುದ್ದಗಳು ಮಾತೇ ಆಡುವುದಿಲ್ಲ
ಒಮ್ಮೊಮ್ಮೆ ಯುದ್ದಗಳೂ ಅಮೂರ್ತು ಮೌನ ತಾಳುತ್ತವೆ…

2. ನಿನ್ನ ಧ್ಯಾನದಲ್ಲಿ ನನಗೆ ಪರಿವರೆ ಇಲ್ಲ

ಬಿಟ್ಟು ಬಿಡದೆ
ಚಳಿಯ ಗುಳ್ಳಿಗಳು
ಮೈ ಎಲ್ಲಾ ತುಂಬಿಕೊಳ್ಳುತ್ತಿವೆ
ಕಾಠಿಣ್ಯದ ಒಲವಿಗೆ

ನಿನ್ನ ಧ್ಯಾನದಲ್ಲಿ
ನನಗೆ ಪರಿವೆ ಇಲ್ಲದಂತಾಗಿದೆ
ಹೋಶ್ ಅಂತಾರಲ್ಲ
ಹಾ. ಅದೇ ಇಲ್ಲ.

ಹಗಲಲ್ಲಿ ಕಳೆದ ಎಲ್ಲಾ ಏಕಾಂತವು
ರಾತ್ರಿಯ ಚುಕ್ಕಿಗಳ ಹಾಗೇ
ಕಳೆದು ದೀರ್ಷವಾದ ನೆನಪಿಗೇನು
ಉಳಿಯುವುದಿಲ್ಲ.
ಒಂದೊಂದು ಮಬ್ಬು ಕನಸಿನಲ್ಲಿಯೇ
ಉಳಿದುಬಿಡುತ್ತವೆ.

ಸ್ಪಷ್ಟ ಧ್ವನಿ
ನಿನ್ನ ಮುಂಗುರುಳು
ಮತ್ತು ನನ್ನ‌ ಮುಖ ಚಹರೆ
ನೋಡ ನೋಡುತಾ
ಘಾಡವಾದ ನಿದ್ದೆಯ
ಅಮಲಿಗೆ ಜಾರುವೆ
ಅದು ಈಗಗ.

ಸ್ವಲ್ಪ ವಾಸಿಯಾದೇತು ಗಾಯ
ತನ್ನಿಂತಾನೆ ಬುಗಿಲೆದ್ದ ಅನುಮಾನಕ್ಕೊ ಏನೊ
ನಟ್ಟ ನಡುವೆ ಇರುವ ಒಲವೀಗ
ಕೆಳ ಸ್ಥರಕ್ಕೆ ಬಂದು ತಲುಪಿದೆ

ನಾನೀಗ ಬೆಂಡು ಬತಾಸು
ಮಾರುತ್ತಾ ತಿರು ತಿರುಗಿ ನಿನ್ನ
ಪ್ರೇಮದ ಮಹಲಿನ
ಮುಂದೆ ಅಲೆಯುವೆ
ಸಾದಾ‌ ಮನುಷ್ಯ.

3. ನೆನಪಿನ‌ ಪಡಸಾಲೆ

ಅಪ್ಪನ ಬಿರುಕು ಪಾದ
ಬೆಳಕು ಹಾದು ಹೋಗುವ ಅಮ್ಮನ ಸೀರೆ
ಅಜ್ಜನ ಕನ್ನಡಕ, ಅಜ್ಜಿಯ ತಲೆದಿಂಬು
ಖಾಲಿಯಾದ ನೆನಪಿನ ಪಡಸಾಲೆ
ಎದೆ ಜಲ್ಲನೆ ಎಲ್ಲವನ್ನೂ ನೆನಪಿಸಿ
ಕಣ್ಣೀರು ರುಜು ಮಾಡುತ್ತದೆ.

ಈಗಲು‌ ಸಮಯ‌ ಹಿಂದಕ್ಕೆ ಹೋಗಬಾರದೆ
ಥೇಟ್ ಶಾಲೆಯ ಹುಡಗನಂತೆ ಬ್ಯಾಗ್ ಹಿಡಿದು ಹೋಗುವ
ಬಾಡಿಗೆ ಸೈಕಲ್ ಹಿಡಿದು ನಡೆಸುವೆ
ಈರು ಮಾಮನ ಬನ್, ಬಿಸ್ಕತ್ ಸವಿಯುವೆ
ಛೆ ಯಾಕೆ ಈ ಸಮಯ ಮತ್ತೆ ಹಿಂದೆ ಹೊಗಲ್ಲ.

ಒಡೆದಿಟ್ಟ ಶೇಂಗಾ ಬೀಜವನ್ನು
ಮಾಡಿಟ್ಟ ರವೆಯ ಉಂಡೆ ಕದ್ದು, ಬಿದ್ದು ತಿಂದ
ಬಚ್ಚಿಟ್ಟ ಸಂಡಿಗೆ ಎಳೆದು, ಜಗೆದು ಸವಿದ ಆ ಪುಂಡಾಟಿಕೆಗಳು ಮತ್ತೆ ಬಾರದೆ,
ಸ್ವಲ್ಪ ಸಮಯ ಹಿಂದೆ ಹೋಗಬೇಕು.

ಹೊಲದ ತೊಗರಿ ಕಾಯಿ, ಕಡ್ಲಿ ತಿನ್ನುವ ಸಡಗರ
ಹೊಳಿ ಹುಣ್ಣಿಮೆಗೆ ಗಲ್ಲಿಯ ಗೊಡೆಗಳಲ್ಲಿ
ನಮ್ಮದೇ ಹೆಸರು ಬಣ್ಣದಲ್ಲಿ
ದಸರಾಗೆ ದೀಪದ ಜಾಗರಣೆ, ಎಳ್ಳಮವಾಸೆಗೆ ರೊಟ್ಟಿಯ ಸುಗ್ಗಿ
ಎಲ್ಲವೂ ಸವಿದ ಆ ಘಳಿಗೆಯನ್ನು ಮತ್ತೆ ಅನುಭವಿಸಲು
ಈ ಸಮಯ ಮತ್ತೆ ಹಿಂದೆ ಹೋಗಬೇಕು.

4. ಉಳಿದ ರಾತ್ರಿ

ಹಸಿ ಮಾತು, ಹಸಿ ರಾತ್ರಿ
ರಾತ್ರಿಗಳಲ್ಲಿ ಕೆಣಕಲು ಇನ್ನೇನು ಉಳಿದಿದೆ,
ಚೂರು ವಿರಹ ಇರಬಹುದು
ನಲುಮೆಯಂತೂ ಮೊದಲೇ ಇಲ್ಲ.

ಉಳಿದ ರಾತ್ರಿಗಳಲ್ಲಿ ಹೊಳೆವ ಚುಕ್ಕಿಗಳನ್ನು ಕಟ್ಟಿ
ನಿನ್ನ ಕಾಲ್ಬೆರಳ ತುದಿಗೆ ನಿಟ್ಟುಸಿರನ ಮುತ್ತು
ಬಾಗಿಲಾಚೆಗಿನ ಬೆಳಕು, ನಿನ್ನ ಕತ್ತಿನಿಂದಿಳಿದು ಜಾರುವ
ಮುನ್ನ ನಾ ಅದನ್ನು ಸವರಿ ಸರಿಸುವೆ

ಗಾಢ ಮೋಹ ಒಂದು ಉಳಿದಿದೆ ನಿನ್ನ ಬಿಗಿದಪ್ಪಲು
ಪ್ರತಿ ಕ್ಷಣಗಳು ನೀನಿರದೆ ಸುಡುತ್ತಿವೆ
ಪಲ್ಲಂಗದಲ್ಲಿದ್ದ ಪಕಳೆಗಳು ಮಾತನಾಡುವ ಮುನ್ನ
ಸೇರುವ ಬೆಳಕನ್ನು ಹೊದ್ದು ಮೋಹಿಸೋಣ
ನಾನು ಊಹಿಸಲಾರೆ ನಿನ್ನ ತಾಕಲಾಟವನ್ನು
ಉಸಿರು ನಿಶ್ಯಬ್ದದ ಸ್ನೇಹಕ್ಕೆ ಜೋತುಬಿದ್ದ ಬಕಪಕ್ಷಿಯಾಗಿದೆ..

ಒಲವನ್ನು ಸಂಜೆಯಾದರೆ ನೆನಪಿಸಬೇಡ ಮತ್ತು ಜಾಸ್ತಿಯಾದೀತು
ಸವಿದ ಕ್ಷಣ ಮಾಸದೆ, ಉಳಿದ ರಾತ್ರಿಗಳಲ್ಲಿ ನೆನಪಿಸುವ ಅಘೋರ
ಕನಸುಗಳು ಈಗಲೇ ಬಂದು ಎಚ್ಚರಿಸುತ್ತಿವೆ.

5. ಮಡಿಲ ಬೆಚ್ಚನೆಯ ನೆನಪು

ಮನೆಯ ಫೋನಲ್ಲಿ ಮಾತಾಡುತ್ತಾ ಇದ್ದೆ
ಮೊನ್ನೆ ಚೂರು ಹೀರಿಟ್ಟಿದ್ದ ವೈನ್ ಮಿಕ್ಕಿತ್ತು,
ಅಲುಗಾಡಿಸಿದರೆ ಬೆಳಕು ನಿರ್ಗಮಿಸುವ ಬಲ್ಬ್
ದಾರಿಯ ನಾಯಿಮರಿ ಮತ್ತು ತನ್ನ ಜ್ಯೂಲಿ ಪ್ರೇಯಸಿ
ಟುಸ್ ಎಂದು ಹೊಗೆ ಎಳೆಯುವ ಸಿಗರೇಟು
ಒಮ್ಮೆಲೆ ನೆನಪಾಗುವ ಪ್ರಿನ್ಸಿಪಾಲ್ ಹುಡುಗಿ,
‘ಊಬರ್ ಕ್ಯಾಬ್‌ನಲ್ಲಿದ್ದ ಎಸಿ ಕೊರೆಯುತ್ತಿದೆ
ಮೈಯನ್ನು’ ಎಂದು ಮುಂದೆ ಕುಳಿತವಳು ಹೇಳಿದಳು.

ಗೊತ್ತಿಲ್ಲ ಆವತ್ತು ತುಂಬಾ ಅತ್ತೆ
ಟ್ರಾಫಿಕ್ ಸಿಗ್ನಲ್ ಸಾಥ್ ನೀಡಿತು ನನ್ನ ಕಣ್ಣೀರಿಗೆ,
ಉಸಿರು ಬಿಡದಂತೆ ಅತ್ತೆ.. ಎದುರಿದ್ದವಳು ಎಸಿಯ ಚಳಿಯಲ್ಲಿ ಮಿಂದಿದ್ದಳು.
ನನ್ನ ಕಣ್ಣೀರ ಕಾವು ಅವಳಿಗೆ ಗೋಚರಿಸಲಿಲ್ಲ
ಎಚ್ಚರದಿಂದ ನೋಡಿದೆ, ನಾನಿರುವುದು ಬೆಚ್ಚನೆಯ ಮಡಿಲಲ್ಲಿ..
ಫೋನಿನಲ್ಲಿ ಅಮ್ಮನ ಧ್ವನಿ ಕೇಳುತ್ತಿದ್ದೆ.
ಜಾರಿದೆ ಮಡಿಲಿನ ಬೆಚ್ಚನೆಯ ನೆನಪಿಗೆ
ಆಕಳಿಸುತ್ತಾ ಹಠಾತ್ತನೆ ಫೋನಿಟ್ಟು ಮತ್ತೆ ಅತ್ತೆ..
ಇಳಿಯುವ ಜಾಗ ಬಂತು, ಭಾರ ಹೆಜ್ಜೆಯನ್ನಿಟ್ಟು ಇಳಿದೆ.

6. ಮಲ್ಲೇಶ್ವರಂ ವೆಸ್ಟ್ ಪಾರ್ಕ್ನ ತಲ್ಲಣಗಳು

ಮೆಲ್ಲನೆ ರಕ್ತ ಹೀರುವ ಸೊಳ್ಳೆ
ತಳ್ಳಿದರೂ ಕಾಲ ಬುಡದಲ್ಲಿ
ಬಂದು ಕೂಡೊ ನಾಯಿ
ಅಲ್ಲೆಲ್ಲೋ ಪಾರ್ಕಿನ ಬೆಂಚಿಗೆ ಒರಗಿ ಕೂತ ವಿರಹಿಗಳು
ಸೊಸೆ ಕಾಟಕ್ಕೆ ಬೇಸತ್ತು, ಟೀಚರ್ ಟಾರ್ಚರ್‌ಗೆ ಸೋತು
ಆಫೀಸಿನ ಬಾಸ್‌ನ ಬೈಗುಳಕ್ಕೆ ರೊಸೋಗಿ
ಕೂತ ಜನರ ನಡುವೆ
ನಾನು ಅಕ್ಷರಶಃ ಒಂಟಿಗ.

ಅದು ಮಲ್ಲೇಶ್ವರಂ ವೆಸ್ಟ್ ಪಾರ್ಕ್
ಎಂಟು ಬೆಂಚು, ಅದರಲ್ಲಿ ನಾಲ್ಕು ಬೆಂಚು
ಎರಡು ಜೋಡಿಗಳಿಗೆ ಫಿಕ್ಸು
ಇನ್ನುಳಿದವು ಜನರಲ್ ಕೋಟಾ
ಕೈ ಹಿಡಿದು ನಡೆಯುವ ವಾಕಿಂಗ್‌ಗೆ ಜೋಡಿ ದಂಪತಿಗಳ
ಮಾತು, ಪಾರ್ಕಿನ ಸುತ್ತಮುತ್ತ ಸುಳಿದಾಡುತ್ತವೆ
ಅಲ್ಲೆ ಇದ್ದ ಪ್ರೇಮಿಗಳ ಕೈ ಜಾರಿ,
ಬೆರಳ ತುದಿ ಹಿಡಿದು ವಾಲಾಡುವ ಗಾಢ ಒಲವು

ಚಿಲ್ಲರೆಗೆ ಪೇಟಿಎಂ ಮಾಡುವ, ಗಟ್ಟಿಗಿತ್ತಿ
ಬಂದು ಪಾರ್ಕಿನಲ್ಲಿ ನಿರಾಳವಾಗಿ ಕೂರುವಳು.
ತಕರಾರು ಮಾಡುತ್ತಲೆ ಚಿಲ್ಲರೆಗೆ
ಒಂದೆರೆಡು ರೂಪಾಯಿ ಜಾಸ್ತಿ
ಕೀಳುವ ಊಬರ್ ಡ್ರೈವರ್.

ಮುಂದೆ ಹೋಟಲ್ ಉಂಟಲ್ಲ
ಹೋಗುವಾಗ ಕಾಫಿ ಕುಡಿಯುವ
ಮತ್ತೆ ಸಿಗರೇಟು ಗೋಜಿಗೆ ಹೋಗುವುದಿಲ್ಲ
ಎನ್ನುವ ಪಾರ್ಕಿನ ದಿನದ ಸಂಚಾರಿ
ನಡೆಯುತ್ತ ಮಂಡಿ ಹಿಡಿದು ಕೂತ ಅಜ್ಜಿ
ಅವಳ ಹಿಂಬಾಲಿಸಿ ನಿಂತ ಅಜ್ಜ

ಪಾರ್ಕಿನ ದಿನದ ತಲ್ಲಣಗಳಿವು..

7. ಏಕಾಂತ ವೈನ್ ಕರಗಿ ಆವಿಯಾದವು

ಮಿಕ್ಕ ಕನಸುಗಳನ್ನು ಕಟ್ಟಿ
ಮಿಕ್ಕ ವೈನ್ ಮೂಲೆಗೆಸೆದು
ಸಿಗರೇಟು ಫಿಲ್ಟರ್ ಹೀರುತ್ತಾ
ಮತ್ತಾದ ಹಸಿ ನಿದ್ರೆಯಲ್ಲಿ
ಕಳೆಯುವ ರಾತ್ರಿಗಳು ಮರುಗುತ್ತಿವೆ..

ಕರಗುವ ಒಂದು ಹಿಡಿ ಆಸೆ
ಮಧ್ಯರಾತ್ರಿಯ ಪ್ರಶ್ನೆಗಳು,
ಆಚಾರವನ್ನು ಗಂಟು ಕಟ್ಟಿದ ಗಳಿಗೆ
ವ್ಯಸನದ ಪಾಯಸವನ್ನು ಮತ್ತು
ಕಬಾಬ್‌ನ ಮಿಕ್ಕ ಚೂರನ್ನು ಅಗೆಯುತ್ತಾ
ಕಳೆದುಕೊಂಡ ಹುಡುಗಿಯ ನೆನಪಲ್ಲಿ
ಕಾಯ್ದ ಎದೆಗೆ ಒತ್ತಿ ಕಣ್ಣೀರಾದ ದಿನಗಳು
ಮತ್ತೆ ಹುಟ್ಟಿದ ಒಲವಿಗೆ ಚೂರು ವೈನ್ ಜಾಸ್ತಿ
ಕರಗಿದ ಕನಸಿಗೆ ಬೇರೆ ಫ್ಲೇವರ್ ಸಿಗರೇಟು
ತೊಯ್ದ ತುಟಿಗಳು ಬೆಚ್ಚಗಾಗುವುದು ನಿನ್ನಿಂದ ಮಾತ್ರ
ಹಗಲಾಗುವ ಹೊತ್ತಿಗೆ ಚೂರು ಮಿಕ್ಕ ನಿದ್ರೆಗೆ
ಏಕಾಂತ ಮತ್ತು ವೈನ್ ಕರಗಿ ಆವಿಯಾದವು..

8. ಬದಲಾಗಿದೆ, ಮೊದಲಿನಂತಿಲ್ಲ

ಆವತ್ತು ಚುಚ್ಚಿದ್ದು
ಕಣ್ಣು ರೆಪ್ಪೆ,
ಜಾರಿ ಹೋದ ಹನಿ..
ಮಾಗಿದ ಹೃದಯ
ನಕಲು ಪ್ರೀತಿ.
ಬಿಂಬ ನೋಟ
ಆವತ್ತು ಅತ್ತಿದ್ದೆ..
ನೀ ಬಿಟ್ಟೆ ಎಂದು ಅಲ್ಲ,
ಒಲವು ಸತ್ತೋಯಿತು ಅಂತ. !

ಮತ್ತೆ.. ಮತ್ತೆ..
ಸರಿದಿದೆ ಸಮಯ
ಮೊದಲಿನ ಹಾಗೆ ಅಲ್ಲ.
ಬೆಸುಗೆ, ಕಾರ್ಮೋಡ, ಝಳ ಬಿಸಿಲು
ಎಲ್ಲವೂ ಬದಲಾಗಿದೆ..
ಮೊದಲಿನ ಹಾಗೆ ಅಲ್ಲ,
ಕನಸು ಕಾಣುವ ಪರಿ
ಅವಳು ಚೀರುವ ಶಬ್ದ
ಬದಲಾಗಿದೆ..
ಮತ್ತೆ,
ಬದಲಾದೀತು ಎಲ್ಲವೂ
ನಾ ಅರಿಯೆ..

9. ಗಟ್ಟಿ ಮನಸ್ಸು ಮಾಡಿದೆ

ಗಟ್ಟಿ ಮನಸು ಮಾಡಿದೆ
ನೀ ಕಿರುಚಿದ್ದು ಕೇಳಲಿಲ್ಲ,
ಯಾಕೆಂದರೆ, ನಾನು ಗಟ್ಟಿ ಮನಸು ಮಾಡಿದ್ದೇನೆ..
ದುಂಬಾಲು ಪ್ರೀತಿ ಇದ್ದರೂ ತಕರಾರಿಲ್ಲ,
ಮುತ್ತಿನ ಝೇಂಕಾರವಿದ್ದರೂ ಪರವಾಗಿಲ್ಲ
ನಾ ಮರೆತು ಗಟ್ಟಿ ಮನಸು ಮಾಡಿದ್ದಾಗಿದೆ..
ತಡವಾಯಿತು ಈಗ…ಕೋಪ ಚೂರು ನೆತ್ತಿಗೆ ಜಾಸ್ತಿ ನನಗೆ.

ನಾಲ್ಕು ತಂತಿ ಮಿಡಿಯುವ
ರಾಗ ಮೀರಿದ ನಾದ ಹೊಮ್ಮುವ
ಕಡಲಾಚೆಗಿನ ಅಳಲು ನನ್ನದು,
ತೋರುವ ಪ್ರೀತಿಗಿಂದು ಘಾಸಿ ನೆನಪುಗಳು
ಆಡದ ಮಾತುಗಳ ಸಾಲಿನಲ್ಲಿ
ನಿನ್ನ ಕನವರಿಕೆ ಅಗಾಧ.

ಓಡಿದ
ಪಯಣಕ್ಕೀಗ ಸುಸ್ತು
ಯಾಕೀ ಮೃದು ಮೌನ,
ನಲಿದಾಡಿದ ಮನವೀಗ
ಅತೃಪ್ತ ಆತ್ಮದಂತಾಗಿದೆ.

10. ಮಣ್ಣಿನ ಘಮಲು

ನಿಂತ ಮಳೆಯ ರುಜು
ಯಾವುದಕ್ಕೂ ಲೆಕ್ಕಿಸದೆ
ಮಣ್ಣಿನ ಘಮಲನ್ನು ಬಡೆದೆಬ್ಬಿಸುತ್ತದೆ.

ಮೋಡದಿಂದಿಳಿದ
ಮಳೆಹನಿಯ ಚಾಳಿ
ಎಲೆಯ ಮೇಲೆ ಹೊಯ್ದಾಡುವಾಸೆ,
ರಾಶಿಯಾಗಿ ಬಿದ್ದ
ಹೂವಿನ ಪಕಳೆಗಳ ಹಸಿ
ವಾಸನೆಗೆ ಮೈಯೊಡ್ಡಿನಿಂತ ಇನ್ನೊಂದು
ಹನಿಯು ಧರೆಗೆ ಇಳಿಯುತ್ತದೆ
ಜೋಪಾನವಾಗಿ..

ಬೆಂದ ಟಾರು ರಸ್ತೆಗಳ
ಮೇಲೆ ಸಂಪಿಗೆಯ ಸಾಲು
ಥೇಟ್ ಸಿಂಧೂರದಂತೆ ಭಾಸವಾಗುತ್ತದೆ,
ಮಳೆಗೆ ತೊಯ್ದ ಮಣ್ಣು ಮಾತಾಡುತ್ತಾ
ತನ್ನ ಘಮಲನ್ನು ಸೂಸುತ್ತಾ
ಇರುವುದು ಸಾಮಾನ್ಯ..
ಮತ್ತೆ ಮಳೆಯ ರುಜು ಹಂಗಿಲ್ಲದೆ
ಮಣ್ಣಿನ ಘಮಲನ್ನು ಬಡಿದೆಬ್ಬಿಸಿತು.

‍ಲೇಖಕರು Admin

August 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Jyoti devanagaav

    ಎಲ್ಲ ಕವಿತೆಗಳು ತಾ ಚೆನ್ನಾಗಿವೆ ಅಭಿನಂದನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: