ಕವಿತೆಯಂದರೆ ಏನು? ಏನಲ್ಲ?
ವಿದ್ಯಾಶಂಕರ ಹರಪನಹಳ್ಳಿ
~೧~
ಕವಿತೆ ನಿನ್ನೆದೆಯ
ತಿವಿಯುವ ಆತ್ಮಸಾಕ್ಷಿ
ನಿನ್ನನರಿಯಲು
~
ಕವಿತೆ ಪುಟ್ಟಹಣತೆ
ಯಾರು ಹಿಡಿಯದ ದಾರಿ
ನಡೆವವಗೆ
~
ಕವಿತೆ ಒಂದು ಸಾಕ್ಷಿ
ಯಾರು ನಂಬದ ನಿಜವ
ನುಡಿದವಗೆ
~
ಕವಿತೆ ಜೊತೆಗಾತಿ
ತಣ್ಣಗೆ ಎಕಾಂತದಿ
ಸಂಭ್ರಮಿಸುವಗೆ
~
ಕವಿತೆ ಕಣ್ಣೀರು
ದುಃಖದಿ ಸ್ತಬ್ಧಗೊಂಡು
ಅವುಡುಗಚ್ಚಿದವಗೆ
~
ಕವಿತೆ ಮುಗಳ್ನಗೆ
ವಿನಾಕಾರಣ ಪ್ರೀತಿಸಿ
ಏನೂ ಬೇಡದವಗೆ
~
ಕವಿತೆ ಸೂಕ್ಷ್ಮ ಸದ್ದು
ಎದೆಬಿರಿದು ಕಿವುಡಾದ
ಸ್ತಬ್ಧ ಗಳಿಗೆ
~
ಕವಿತೆ ಒಂದು ಬೆಸುಗೆ
ಅನಾಮಿಕ ನಾನು ನೀನು
ಮಿಡಿದ ದಿವ್ಯ ಗಳಿಗೆ
~
ಕವಿತೆ ಮಾತು
ಅವನು ಅವಳು ಮೌನ
ಅವಿರ್ಭವಿಸಿದ ಗಳಿಗೆ
~
ಕವಿತೆ ಸಂವಹನ
ಸಂಕೋಚದ ಪ್ರೇಮಿಯ
ಮೂಗರ್ಜಿ

~೨~
ಕವಿತೆ ಆಯುಧವಲ್ಲ
ಹಿಡಿದು ಹೊಡೆದಾಡಲು,
ಗಾಯಮಾಡಲು…
~
ಕವಿತೆ ಜಪಮಣಿಯಲ್ಲ
ಬಿಡಿಬಿಡಿ ಎಣಿಸಲು,
ಪಿಟಿಪಿಟಿ ಓದಲು…
~
ಕವಿತೆ ವಾಹನವಲ್ಲ
ಕುಳಿತು ಪರಾರಿಯಾಗಲು
ಮುಜುಗರದಿಂದ…
~
ಕವಿತೆ ಗುರಾಣಿಯಲ್ಲ
ಅದರ ಹಿಂದೆ ಅವಿತು
ಬಚಾವಾಗಲು…







Sikkapatte ishta aaythu
ಕವಿತೆ ತಣ್ಣಗೆ ಸುಳಿವ
ಒಲವ ತಂಗಾಳಿ ಕೂಡಾ…..
ಚೆನಾಗಿದೆ. ಇಷ್ಟ ಆಯ್ತು.
ಈ ಬಗ್ಗೆ ಕೆ.ಎಸ್.ನ ನೋಟಸಾಲು ಹೀಗಿದೆ..
ಮೂಲವರು ಬದುಕು;
ಉತ್ಸವಮೂರ್ತಿ ಕವಿತೆ.
………………………………..
ಕಂಬನಿ ಬದುಕು;
ಕರವಸ್ತ್ರ ಕವಿತೆ!
nice..very nice..!