ಕವಿತೆಯೊಳಗೂ ಒಂದು ರಾಸಾಯನಿಕ ಕ್ರಿಯೆ..

ಜೋಗಿ

**

ನನ್ನೊಳಗಿನ ನೀರು (ಕವನ ಸಂಕಲನ)
ಪ್ರಕಾಶಕರು: ಮಾಣಿಕ್ಯ ಪ್ರಕಾಶನ, ಹಾಸನ.
ಪುಟಗಳು: ೭೬
ಬೆಲೆ: ೧೦೦ ರೂಪಾಯಿಗಳು
.

ಕವಿ ಎಂ ವಿ ಶಶಿಭೂಷಣರಾಜು ಅವರ ಹೊಸ ಕವನ ಸಂಕಲನ ಬಂದಿದೆ.

ಈ ಕೃತಿಗೆ ಪ್ರಸಿದ್ಧ ಸಾಹಿತಿ ಜೋಗಿ ಅವರು ಬರೆದ ಮುನ್ನುಡಿ ಇಲ್ಲಿದೆ.

**

ಬೆಂಕಿ ಬೆಳಕಾಗುವ ಕ್ಷಣ

ಕವಿತೆ ಕಷ್ಟ ಮತ್ತು ಸುಲಭ. ಅದು ಜ್ಞಾನೋದಯದಂತೆ, ಯಾವಾಗ ದಕ್ಕುತ್ತದೋ ಹೇಳುವುದು ಕಷ್ಟ. ಹೀಗಾಗಿ ಯಾವ ಕವಿ ಕೂಡ ನಾನೊಂದು ಒ ಳ್ಳೆಯ ಕವಿತೆ ಬರೆಯುತ್ತೇನೆ ಎಂದು ಕವಿತೆ ಬರೆಯಲು ಕುಳಿತುಕೊಳ್ಳುವ ಮೊದಲೇ ಎದೆತಟ್ಟಿ ಹೇಳಲಾರ. ಕವಿತೆಕಟ್ಟುವುದಲ್ಲ, ಹುಟ್ಟುವುದು. ಅದನ್ನು ಬಲ್ಲವರಂತೆ ಕವಿ ಎಂ ವಿ ಶಶಿಭೂಷಣ ರಾಜು ಇಲ್ಲಿಯ ಕವಿತೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ‘ನನ್ನೊಳಗಿನ ನೀರು’ ಸಂಕಲನದ 36 ಕವಿತೆಗಳಲ್ಲಿ ರಾಜು ಅವರ ಬೆವರು, ಆತಂಕ, ಉತ್ಸಾಹ, ಪ್ರಶ್ನೆ ಮತ್ತು ದುಗುಡಗಳು ನಮಗೆ ಕಾಣಿಸುತ್ತಾ ಹೋಗುತ್ತವೆ. ಕೆಲವೊಮ್ಮೆ ಕವಿತೆಗಳು ಪ್ರಶ್ನೆಗಳಾದರೆ, ಅವೇ ಕವಿತೆಗಳು ಮತ್ತೊಮ್ಮೆ ಉತ್ತರವಾಗಿ ಕಾಣುತ್ತವೆ. `ಕವಿತೆ’ ಹೆಸರಿನ ಕವಿತೆಯಲ್ಲಿ ಅವರು ಎತ್ತುವ ಪ್ರಶ್ನೆ ಕಲಿಯ ಅಗ್ನಿದಿವ್ಯಕ್ಕೆ ಸಂಬಂಧಿಸಿದ್ದು. ನಮ್ಮೆಲ್ಲರಲ್ಲೂ ಹುಟ್ಟುವ ಪ್ರಶ್ನೆಯೂ ಹೌದು.

“ಸುತ್ತಲೂ ಬೆಂಕಿ ಉರಿಯುತ್ತಿರಲು
ಅದ ಬೆಳಕ ಮಾಡಿ ನಡೆಯುವುದು ಹೇಗೆ?”

ಚಂದ್ರಶೇಖರ ಕಂಬಾರರು ಮಾವೋತ್ಸೆ ತುಂಗಾನ ಬಗ್ಗೆ ಬರೆಯುತ್ತಾ ‘ಬೆಂಕಿಯಾರಿ ಬರಿ ಬೆಳಕು ಉಳಿದಿತ್ತು’ ಎಂಬ ಸಾಲು ಬರೆಯುತ್ತಾರೆ. ಪ್ರಖರವಾಗಿ ಬದುಕಿದ ಜೀವವೊಂದರ ಕೊನೆಯನ್ನು ಸೂಚಿಸುವ ಆ ಸಾಲನ್ನು ಈ ಮೇಲಿನ ಎರಡು ಸಾಲುಗಳು ನೆನಪಿಸಿದವು. ಕವಿಯ ಕೆಲಸವೇ ಬೆಂಕಿಯನ್ನು ಬೆಳಕು ಮಾಡುವುದು. ನೋವನ್ನು ಹದಗೊಳಿಸುವುದು. ರಕ್ತದ ಹಾಡನ್ನು ಹಾಡುವಾಗಲೂ, ರಕ್ತಸಿಕ್ತವಾಗದಂತೆ ಹೇಳುವುದು. ಇಂಥ ಸಂಯಮ ಇವರ ಪದ್ಯಗಳಲ್ಲಿ ಅಲ್ಲಲ್ಲಿ ಕಾಣಿಸುತ್ತದೆ. ಉದಾಹರಣೆಗೆ, ಭಾವಗೀತೆಯ ಲಯವೂ ಅಂತರಂಗದ ತುಮುಲವೂ ಇರುವ ಈ ಕೆಳಗಿನ ಸಾಲುಗಳನ್ನು ನೋಡಿ:

“ಸಸ್ಯಶಾಮಲೆ ನಡುವೆ ಸ್ವಸ್ತವಾಗುವುದೇ ಮನಸು?
ವಿವಿಧರೂಪದ ಮೋಡಗಳಲಿ ಕರಗುವುದೇ ಮುನಿಸು?

ಗಗನಕ್ಕಂಟಿದ ಗಿರಿಗಳ ದಾಟುವುದೇ ಕನಸು?
ಅತಂತ್ರದ ನಡುವೆಯೂ ಅರಳುವುದೇ ಸೊಗಸು?”

ಇದು ಇದ್ದ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಕನಸು. ಇರುವುದೆಲ್ಲವ ಬಿಟ್ಟು ಹೋಗುವುದಲ್ಲ, ಇರುವುದನ್ನೇ ಚಂದಗಾಣಿಸುವ ಆಲೋಚನೆ. ಅತಂತ್ರದ ನಡುವೆಯೇ ಸ್ಥಿರತೆಯನ್ನು ಹುಡುಕುವ ಪ್ರಯತ್ನ. ಈ ಸಂಕಲನದ ಪ್ರತಿಯೊಂದು ಪದ್ಯವೂ ಏಕಕಾಲಕ್ಕೆ ಜೀವದ ಜಂಜಡಗಳನ್ನು ಪ್ರಶ್ನಿಸುತ್ತಲೇ, ವ್ಯವಸ್ಥೆಗೂ ವ್ಯಕ್ತಿಗೂ ಇರುವ ಸಂಬಂಧವನ್ನು ಶೋಧಿಸುತ್ತಾ ಹೋಗುತ್ತದೆ. ಗೊತ್ತಿರುವ ಸತ್ಯಗಳನ್ನು ಹೇಳುತ್ತಲೇ ಗೊತ್ತುಮಾಡಿಕೊಳ್ಳುತ್ತಾ ಸಾಗುವುದು ಕಥೆಗಾರನ ವರಸೆ. ಅದು ಕವಿತೆಯಲ್ಲೂ ಕಾಣಿಸುವುದು ಅಚ್ಚರಿ.

“ಎಲ್ಲಕ್ಕೂ ಒಂದೊಂದು ಮೌಲ್ಯವಿದೆ
ಎಲ್ಲವೂ ಒಂದೇ ದಾರಿಯಲಿ ಬಂಧಿ
ಎಲ್ಲಕ್ಕೂ ಒಂದು ನಂಟಿದೆ
ಎಲ್ಲವ ಒಳಗೊಳ್ಳುವಿಕೆಯೇ ಮಾರ್ಗ”

ಎಲ್ಲವ ಒಳಗೊಳ್ಳುವಿಕೆಯೇ ಮಾರ್ಗ ಎಂಬ ಸಾಲುಗಳಲ್ಲಿರುವ ಸೊಗಸನ್ನು ಗಮನಿಸಿ. ಇದು ಹೇಳಿಕೆಯೂ ಹೌದು, ದಾರಿಯೂ ಹೌದು,
ಉಪಕ್ರಮವೂ ಹೌದು. ಕವಿತೆ ಇಂಥ ಅಚ್ಚರಿಗಳನ್ನು ಕೊಡುತ್ತಿರಬೇಕು. ಕವಿತಾ ಸಂಕಲನದ ಶೀರ್ಷಿಕೆ ‘ನನ್ನೊಳಗಿನ ನೀರು’ ನೆತ್ತರಿನ ಕುರಿತಾದ್ದು. ರಕ್ತ ಕುದಿಯುತ್ತದೆ ಎನ್ನುವುದನ್ನು ಅವರು ಸೂಚಿಸುತ್ತಾ, ರಕ್ತಕ್ಕೆ ದುಗುಡದ ಲೇಪವೂ ಇರುವುದನ್ನು ಗುರುತಿಸುತ್ತಾರೆ. ಇದೇ ಈ ಸಂಕಲನದ ಅತ್ಯುತ್ತಮ ಪದ್ಯ. ಅದರ ಮೂರು ಸಾಲು ನೋಡಿ:

“ದೇಹವೆಲ್ಲಾ ವ್ಯಾಪಿಸಿರುವ
ಕೆಂಪು ಬಣ್ಣದ,
ದ್ರವವೊಂದು ದುಗುಡಗೊಳ್ಳುವುದು ಏಕೆ?”

ಶಶಿಭೂಷಣ ರಾಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಕವಿತೆಯೊಳಗೂ ಒಂದು ರಾಸಾಯನಿಕ ಕ್ರಿಯೆ ನಡೆದಾಗಲೇ ಮಾತು ಕವಿತೆ ಆಗುತ್ತದೆ. ಈಗಾಗಲೇ ಅವರ ಹಲವು ಕೃತಿಗಳು ಪ್ರಕಟವಾಗಿವೆ. ಈ ಕವಿತೆಗಳ ಗುಚ್ಚವೂ ಸಹೃದಯರ ಮನಸ್ಸಿನಲ್ಲಿ ಜಾಗ ಪಡೆಯಲಿ ಎಂದು ಹಾರೈಸುತ್ತೇನೆ. ಎಂ ವಿ ಶಶಿಭೂಷಣ ರಾಜು ಅವರ ಕವಿತೆಗಳನ್ನು ನನಗೆ ಪರಿಚಯಿಸಿ, ಈ ಕೃತಿಯ ಕುರಿತು ನಾಕು ಮಾತುಗಳನ್ನು ಆಡಲು ಅನುವು ಮಾಡಿಕೊಟ್ಟ ಸಹೋದ್ಯೋಗಿ ಗೆಳೆಯ ಎಸ್. ಗಿರೀಶ್ ಬಾಬು ಅವರಿಗೆ ಕೃತಜ್ಞ.

‍ಲೇಖಕರು Admin MM

April 27, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: