ಕಲ್ಲೇಶ್ ಕುಂಬಾರರ ‘ನಿಂದ ನಿಲುವಿನ ಘನ’

ಸಿ ಎಸ್ ಭೀಮರಾಯ

ಕಲ್ಲೇಶ್ ಕುಂಬಾರ್ ನಮ್ಮ ನಡುವಿನ ಪ್ರಮುಖ ಲೇಖಕ. ಈಗಾಗಲೇ ಎರಡು ಕಥಾಸಂಕಲನ ಮತ್ತು ಎರಡು ಕವನಸಂಕಲನಗಳನ್ನು ಪ್ರಕಟಿಸಿ ಗಂಭೀರ ಸಾಹಿತ್ಯಾಸಕ್ತರ ಗಮನ ಸೆಳೆದ ಪ್ರತಿಭಾವಂತ ಕಥೆಗಾರ ಮತ್ತು ಕವಿ ಕಲ್ಲೇಶ್ ಕುಂಬಾರ್‌ ಪ್ರಸ್ತುತ ‘ನಿಂದ ನಿಲುವಿನ ಘನ’ ಕಲ್ಲೇಶ್ ಕುಂಬಾರರ ಮೂರನೆಯ ಕಥಾಸಂಕಲನ. ಈ ಸಂಕಲನ ಒಂಬತ್ತು ಕಥೆಗಳನ್ನು ಒಳಗೊಂಡಿದೆ.

ಈ ಸಂಕಲನದಲ್ಲಿ ಕಲ್ಲೇಶ್ ಕುಂಬಾರರ ಕಥನ ಕೌಶಲ ಇನ್ನಷ್ಟು ಪಳಗಿದೆ. ಜೀವನದೃಷ್ಟಿ ಹೆಚ್ಚು ಖಚಿತವಾಗಿದೆ. ವರ್ತಮಾನದ ಗ್ರಾಮೀಣ ಸಮಾಜದಲ್ಲಿ ನಡೆಯುವ ಹಿಂಸೆ, ಕಾಣುವ ಅಸಮಾನತೆ, ಬಲಿಷ್ಠರಿಂದ ದುರ್ಬಲರ ಶೋಷಣೆ, ಸಾಮಾಜಿಕ ವ್ಯಕ್ತಿಗಳ ಡಾಂಭಿಕತೆ, ಮೋಸ, ವಂಚನೆ ಮೊದಲಾದ ಸಂಗತಿಗಳೆಲ್ಲ ಕಥಾ ಹಂದರಗಳಲ್ಲಿ ರೂಪುಗೊಳ್ಳುವುದು ಈ ಕಥೆಗಳಲ್ಲಿ ಕಾಣುವ ವೈಶಿಷ್ಟ್ಯ.

ಕಲ್ಲೇಶ್ ಕುಂಬಾರರ ಕಥೆಗಳಲ್ಲಿ ಇವಷ್ಟೇ ಅಲ್ಲದೆ, ಜೀತಪದ್ಧತಿ, ಜಾತಿಪದ್ಧತಿ, ಮತಾಂತರ, ಕೋಮುವಾದ, ರಾಜಕಾರಣದ ವಿಕಾರ ಸ್ವರೂಪಗಳು ಕೂಡ ಚಿಕಿತ್ಸಕ ನೋಟಕ್ಕೆ ಒಳಗಾಗಿವೆ. ದಟ್ಟವಾದ ವಿವರ, ರೂಪಕ, ಪ್ರತಿಮೆ, ಸನ್ನಿವೇಶ, ಪಾತ್ರಗಳನ್ನು ಅಧಿಕೃತಿವಾಗಿ ಚಿತ್ರಿಸುವ ಕಲ್ಲೇಶ್ ತಾವು ಕಟ್ಟಿಕೊಡುವ ಜೀವನಸಂದರ್ಭಗಳ ಮೂಲಕ ಸಮಕಾಲೀನ ನಾಗರೀಕತೆಯ ಸ್ವರೂಪವನ್ನೂ, ಅದರ ವೈವಿಧ್ಯಮಯ ಪರಿಣಾಮಗಳನ್ನೂ ಸ್ಪರ್ಶಿಸಿಬಿಡುವ ಮಹತ್ವಾಕಾಂಕ್ಷೆಯಲ್ಲಿ ತಮ್ಮ ಕಥೆಗಳನ್ನು ರಚಿಸಿದ್ದಾರೆ.

ಕಲ್ಲೇಶ್ ಕುಂಬಾರ್ ಅವರ ಕಥೆಗಳ ಮುಖ್ಯ ಕೇಂದ್ರ ‘ಹಾರೂಗೇರಿ’. ಅವರ ಎಲ್ಲ ಕಥನಾಯಕ-ನಾಯಕಿಯರು ಇಲ್ಲಿಂದ ಎದ್ದು ಬರುತ್ತಾರೆ. ಹಾರೂಗೇರಿಯ ಜೀವನ ವ್ಯಾಪಾರವನ್ನು ಕಡೆದಿರಿಸುವ ಶ್ರದ್ಧೆ ಮತ್ತು ಕುಸುರಿತನದೊಂದಿಗೆ ಅಷ್ಟೇ ತನ್ಮಯತೆಯಿಂದ ಚಿತ್ರಿಸುತ್ತಿರುವ ಕಲ್ಲೇಶ್ ಕುಂಬಾರರು, ಕಥೆಗಾರಿಕೆಯ ಉತ್ತಮ ಪರಂಪರೆಯೊಂದನ್ನು ಸೃಷ್ಟಿಸುತ್ತಿದ್ದಾರೆ. ವರ್ತಮಾನದಲ್ಲಿ ಕಾಣಸಿಗುವ ವಸ್ತುವಿವರಗಳೇ ಇಲ್ಲಿನ ಹಲವು ಕಥೆಗಳ ವಾತಾವರಣ.

ಮನುಷ್ಯನ ದುಷ್ಟತನಕ್ಕೆ, ಮನುಷ್ಯರ ನಡುವಿನ ಅಸಮಾನತೆಗೆ ಒಂದು ಮಿತಿ ಎಂಬುದನ್ನು ಇಲ್ಲಿನ ಕಥೆಗಳು ಹೇಳಲು ಪ್ರಯತ್ನಿಸಿವೆ. ಆದ್ದರಿಂದಲೇ ಇವು ಒಂದೇ ವಸ್ತುವಿನ ಬೇರೆ ಬೇರೆ ರೂಪಗಳಂತೆ ಕಾಣುತ್ತವೆ. ಅವನ್ನು ಅಧಿಕ ಜಾಗರೂಕತೆ ಮತ್ತು ಕುಶಲತೆಯಿಂದ ಒಂದು ಊರಿನ ಬೇರೆ ಬೇರೆ ಕಥೆಗಳಿವು ಎಂಬಂತೆ ಇವುಗಳನ್ನು ಲೇಖಕರು ಹೆಣೆದಿದ್ದಾರೆ.

ವಸ್ತು, ನಿರೂಪಣೆಯಲ್ಲಿ ವೈವಿಧ್ಯವನ್ನು ಹೊಂದಿರುವ ಕಲ್ಲೇಶ್ ಕುಂಬಾರರ ಕಥೆಗಳು ಸಮಕಾಲೀನ ಬದುಕಿಗೆ ಸ್ಪಂದಿಸಿದ್ದರ ಫಲವಾಗಿವೆ. ಅಸಮಾನ ಮತ್ತು ದಾರುಣ ಎನ್ನಬಹುದಾದ ಬದುಕಿನ ಹಲವು ರೂಪಗಳು, ಸಮಸ್ಯೆಗಳು ಇಲ್ಲಿ ಚಿತ್ರಿತವಾಗಿವೆ. ಕಲ್ಲೇಶ್ ಅವರ ಕಥೆಗಳಲ್ಲಿ ಹುಡುಕಾಟ, ಶೋಧನೆ ಸ್ಥಾಯಿಯಾಗಿದೆ. ಅದು ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾಗುತ್ತಲೇ ಹೋಗುತ್ತದೆ.

‘ಗಾಳಿಯ ಸೊಡರು’ ಕಥೆಯಲ್ಲಿ  ನಾಗವ್ವ ಎಂಬ ಗೃಹಿಣಿಯ ಕೆಳವರ್ಗದ ದಾಂಪತ್ಯದ ಸ್ವರೂಪವನ್ನು ಶೋಧಿಸುವ ಮಹತ್ವಾಕಾಂಕ್ಷೆ ಇದೆ. ಸ್ತ್ರೀ ಕೇಂದ್ರಿತ ನೆಲೆಯಲ್ಲಿ ಕೌಟುಂಬಿಕ ಹಾಗೂ ಸಾಮಾಜಿಕ ಶಕ್ತಿಯನ್ನು ಕಾಣುವ ಹಂಬಲ ಈ ಕಥೆಯಲ್ಲಿ ಕಂಡುಬರುತ್ತದೆ. ಭಾಂಡೆ ಸಾಮಾನುಗಳನ್ನು ತಲೆಯ ಮೇಲೆ ಹೊತ್ತು ವ್ಯಾಪಾರ ಮಾಡುತ್ತ ಅಂಗಡಿ ತೆರೆದ ಪರಪ್ಪನ ಶ್ರೀಮಂತಿಕೆ ಅವನ ಮಗ ಯಲ್ಲಪ್ಪನ ವಿಲಾಸಿತನದಿಂದಾಗಿ ನಾಶವಾಗುತ್ತದೆ.

ಕಥಾನಾಯಕಿ ನಾಗವ್ವ ವಿರಸ ದಾಂಪತ್ಯದ ಎಲ್ಲ ಕಹಿಯನ್ನು ಉಂಡವಳು. ನಾಗವ್ವಳ ಗಂಡ ಯಲ್ಲಪ್ಪ ದುರ್ಬಲ ವ್ಯಕ್ತಿತ್ವದವನು. ಕುಡುಕ ಗಂಡನಿಂದ ಅವಳ ಬದುಕು ದಾರಿ ತಪ್ಪುತ್ತದೆ. ವಂಶದ ಕುಡಿಯನ್ನು ಜೋಪಾನ ಮಾಡುವ ಅದಮ್ಯ ತಾಯ್ತನ ನಾಗವ್ವಳಲ್ಲಿ ಪ್ರಕಟವಾಗಿ ಜೀವನಪ್ರೀತಿಯ ಅವಳ ಛಲ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅಪರಿಮಿತ ಜೀವನೋತ್ಸಾಹವನ್ನು ಒಳಗೊಂಡ ನಾಗವ್ವಳ ಹೋರಾಟದ ಬದುಕು ಸೀಮಾತೀತವಾದ ಮಾತೃ ಹೃದಯದಿಂದ ಕೂಡಿದೆ. ನಾಗವ್ವ ಈ ಕಥೆಯುದ್ದಕ್ಕೂ ಸ್ವತಂತ್ರ ವ್ಯಕ್ತಿತ್ವವಿರುವ ಹೆಣ್ಣಾಗಿ ಕಾಣಿಸಿಕೊಳ್ಳುತ್ತಾಳೆ. ಈ ಕಥೆ ತನ್ನ ಕಥಾತಂತ್ರದ ಕೌಶಲದಿಂದ ಮತ್ತು ತೋರುವ ಜೀವನಾಸಕ್ತಿಯಿಂದ ಮುಖ್ಯವಾದದ್ದಾಗುತ್ತದೆ.

ಕಥೆಯ ಆಸ್ತಿಭಾರವೆ ಇಲ್ಲವಾಗಿ ‘ಹೂ ಹುಡುಗಿ’ ಕಥೆ ಕಾಲ್ಪನಿಕವಾದುದು ಎನಿಸುತ್ತದೆ. ಆದರೆ ಕಥೆಯ ನಿರೂಪಣೆಯಲ್ಲಿ ಹೊಸ ಬಗೆಯ ಅಭಿವ್ಯಕ್ತಿಯ ಪ್ರಯತ್ನವಿರುವುದು ಕಂಡುಬರುತ್ತದೆ.

‘ಇದಿರ ಹರಿದು’ ಕಥೆ ತತ್ವದ ಮಾತನ್ನು ಮಾತಿಗಷ್ಟೇ ಉದಾಹರಣೆ ನೀಡುತ್ತ ವ್ಯಾವಹಾರಿಕವಾಗಿ ಅದನ್ನು ಅವಜ್ಞೆಗೈಯುವ ಮೇಲ್ವರ್ಗದ ಮತ್ತು ಮಧ್ಯಮವರ್ಗದ ವ್ಯಕ್ತಿಗಳಿಬ್ಬರ ಸ್ವಭಾವವನ್ನು ಚೆನ್ನಾಗಿ ಚಿತ್ರಿಸುತ್ತದೆ. ಮನುಷ್ಯನ ನಿಜ ವ್ಯಕ್ತಿತ್ವದ, ಚಹರೆಯ ಅರಸುವಿಕೆ, ನ್ಯಾಯ- ಅನ್ಯಾಯ, ಉಳ್ಳವರು-ಮಧ್ಯಮ ವರ್ಗದವರ ನಡುವಿನ ಅಂತರ ಇವೆಲ್ಲವೂ ಈ ಕಥೆಯ ಹಂದರವನ್ನು ರೂಪಿಸಿವೆ.

ದೈವಭಕ್ತನಾದ ರಾಚಪ್ಪಗೌಡ, ಪೂಜಾರಿ ಸಂಗಪ್ಪ ಮತ್ತು ಅವರ ಪ್ರೀತಿಪಾತ್ರ ಗೌರಿ ಆಕಳ ಕರು ಕಪಿಲೆಗೂ ಇದ್ದ ಮಾನವೀಯ ಸಂಬಂಧ ‘ಕಪಿಲೆ’ ಕಥೆಯಲ್ಲಿ ಚಿತ್ರಿತವಾಗಿದೆ. ಪೂಜಾರಿ ಸಂಗಪ್ಪ ಮತ್ತು ಕಪಿಲೆಯರ ಮರಣ  ಓದುಗರ ಕರುಳನ್ನು ಮಿಡಿಯುತ್ತದೆ. ಈ ಸಂಕಲನದ ಉಳಿದ ಕಥೆಗಳೊಂದಿಗೆ ಹೊಂದಿಕೊಳ್ಳದೆ, ಈ ಕಥೆ, ಹೊರತಾಗಿಯೇ ನಿಲ್ಲುತ್ತದೆ. ಕಾಲದ ದೃಷ್ಟಿಯಿಂದಲೂ, ತಂತ್ರ ಮತ್ತು ನಿರೂಪಣಾ ದೃಷ್ಟಿಯಿಂದಲೂ ‘ಕಪಿಲೆ’ ಕಥೆ ತೇಜಸ್ವಿಯವರ ‘ಹುಲಿಯೂರಿನ ಸರಹದ್ದು’ ಕಥಾಸಂಕಲನದ ‘ಊರ್ವಶಿ’ ಕಥೆಯನ್ನು ನೆನಪಿಸುತ್ತದೆ.

‘ನೆಲ ತಳವಾರನಾದಡೆ’ ಹಾರಿಗೇರಿಯ ರಾಜಕೀಯವನ್ನು ಚಿತ್ರಿಸುವ ಕಥೆ. ಮಾನಿಂಗಪ್ಪ  ಸಾಹುಕಾರನ ಕುಟಿಲತನ, ಬಿಸಿಯೂಟದ ಗೀತವ್ವನ ಮೋಸ, ಕೆಳಗೇರಿಯ ತುಕಾರಾಮನ ಸ್ವಾಭಿಮಾನ ಮತ್ತು ಶಾಲಾ ಶಿಕ್ಷಕಿ ಸಾವಿತ್ರಿಯ ಸಾಮಾಜಿಕ, ಶೈಕ್ಷಣಿಕ ಮತ್ತು ಸಮಾನತೆಯ ವಿಚಾರಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿವೆ. ಕೆಳಗೇರಿಯವನಾದರೂ ತುಕಾರಾಮನ ನಿಯತ್ತು ಮೆಚ್ಚುವಂಥದು. ಹಳ್ಳಿಯ ಜೀವನ ರಾಜಕೀಯದಿಂದಾಗಿ ಹೇಗೆ ಕಲುಷಿತವಾಗುತ್ತದೆ ಎಂಬುದು ಈ ಕಥೆಯಿಂದ ತಿಳಿದು ಬರುತ್ತದೆ. ಪಾತ್ರಗಳ ಅಂತರಂಗವನ್ನು ಸಮರ್ಥವಾಗಿ ಹಿಡಿದಿಡುವ ಲೇಖಕರ ಕಥನ ಸಾಮರ್ಥ್ಯ ಮತ್ತು ಪ್ರಬುದ್ಧವಾದ ನಿರೂಪಣೆಗೆ ಈ ಕಥೆ ನಿದರ್ಶನವಾಗಿದೆ.

‘ನಿಂದ ನಿಲುವಿನ ಘನ’ ಈ ಸಂಕಲನದ ಅತ್ಯುತ್ತಮ ಕಥೆ. ಊರು, ಜಾತಿ, ಧರ್ಮ, ನ್ಯಾಯ ಮತ್ತು ಲಿಂಗ ಭೇದ ತಾರತಮ್ಯದ ಮೂಲಕ ಸಮಾಜದ ಕೆಳವರ್ಗದ ಸ್ತ್ರೀಯರನ್ನು ಶೋಷಣೆಗೆ ಒಳಪಡಿಸುವ ಕ್ರೌರ್ಯವನ್ನು ಪೋಷಿಸಿಕೊಂಡು ಹೋಗುವುದನ್ನು ‘ನಿಂದ ನಿಲುವಿನ ಘನ’ ಕಥೆ ದಾಖಲಿಸುತ್ತದೆ. ಪರಂಪರಾಗತವಾಗಿ ಬದುಕಿನೊಂದಿಗೆ ಬೆಸೆದುಕೊಂಡು ಬರುತ್ತಿರುವ ಶೋಷಣೆ, ಮೂಢನಂಬಿಕೆ, ಅಸ್ಪೃಶ್ಯತಾ ಭಾವನೆ ಮೊದಲಾದ ಸಾಮಾಜಿಕ ಪಿಡುಗಗಳಿಂದ ತಳವರ್ಗದವರು ಬಾಹಿರವಾಗಿ ಬದುಕಲು ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳಿಂದ ಜಯಗಳಿಸುವುದು ಅನಿವಾರ್ಯ. ಗ್ರಾಮೀಣ ಬದುಕು ತನ್ನ ಚೈತನ್ಯವನ್ನು ಕಳೆದುಕೊಂಡು ಅವಸಾನದತ್ತ ತುಡಿಯುವುದನ್ನು ಕಥೆ ನಿರೂಪಿಸುತ್ತಲೇ ಜೀವಂತಿಕೆಯ ನೆಲೆಗಳನ್ನು ಸೂಚಿಸುತ್ತದೆ. ದಲಿತ ಸಂವೇದನೆಯ ವಿಶೇಷ ಅಭಿವ್ಯಕ್ತಿಯನ್ನು ಕಲ್ಲೇಶ್ ಅವರ ಈ ಕಥೆಯಲ್ಲಿ ಕಾಣುತ್ತೇವೆ.

‘ಒಳಗಣ ಜ್ಯೋತಿ’ ಕಥೆಯೊಂದು ಉಳಿದೆಲ್ಲ ಕಥೆಗಳಿಗಿಂತ ವಸ್ತು, ಬಂಧ, ಶೈಲಿ ಮತ್ತು ನಿರೂಪಣೆಯ ದೃಷ್ಟಿಯಿಂದ ಹೆಚ್ಚು ಮಹತ್ವವಾಗಿದೆ. ಕಥೆಯಲ್ಲಿ ಬರುವ ಊರು, ವ್ಯಕ್ತಿಗಳ ಹೆಸರು ಕಥೆಗೆ ನೈಜತೆಯನ್ನು ತಂದುಕೊಟ್ಟಿದೆ. ಇಂದು ರೈತನ ಬದುಕು ಏನಾಗಿದೆ ಎಂಬುದನ್ನು ತಿಳಿಯಲು ನಿರೂಪಕನ ಈ ಕೆಳಗಿನ ಮಾತುಗಳನ್ನು ಗಮನಿಸಿ:

‘ಸಂಗಪ್ಪನಿಗೆ ಇತ್ತಿತ್ತಲಾಗಿ ರೈತಕಿ ಕೆಲ್ಸ ಮಾಡೂದನ ಬ್ಯಾಡಾಗಿ ಬಂದಿತ್ತು! ಅದಕ್ಕೆ ಕಾರಣವೂ ಇತ್ತು. ಈಗಿನ ತುಟ್ಟಿ ದಿನಮಾನದಾಗ ಭೂಮ್ಯಾಗ ಬೆಳೆ ತೆಗ್ಯೂದಂದ್ರ ಅಷ್ಟು ಸುಲಭದ ಮಾತಾಗಿರಲಿಲ್ಲ. ಭರಪೂರ ಕಬ್ಬಿನ ಬೆಳೆ ತೆಗಿಬೇಕಂದ್ರ ಸಾಕಷ್ಟು ರೊಕ್ಕ ಖರ್ಚು ಮಾಡಬೇಕಿತ್ತು. ಹಂಗ ಮನಿ ಮಂದಿ ಎಲ್ಲ ಆ ಭೂಮಿ ಸಂಗಡ ಗುದ್ದಾಡಬೇಕಿತ್ತು. ಅಂಥದರಲ್ಲಿ ಈಗೀಗಂತೂ ಭೂಮ್ಯಾಗ ಕಸ ತೆಗೆಯೋ ಕೂಲಿ ಕೆಲಸದವರ ಪಗಾರ, ಸರಕಾರಿ ಗೊಬ್ಬರದ ಧಾರಣೆ ಮತ್ತು ಸಕ್ಕರಿ ಫ್ಯಾಕ್ಟ್ರಿಗೆ ಕಬ್ಬು ಸಾಗಣೆ ಮಾಡಲು ಬಳಸೋ ಟ್ರ್ಯಾಕ್ಟರ ಬಾಡಿಗೆ ದರ-ಇವೆಲ್ಲ ಗಗನಕ್ಕೇರಿ ಬಿಟ್ಟಿದ್ದವು. ಹಿಂಗಾಗಿ ಸಣ್ಣ ರೈತನಾಗಿದ್ದ ಸಂಗಪ್ಪ, ತನ್ನ ಜಮೀನಿನಲ್ಲಿ ಕಬ್ಬಿನ ಬೆಳೆಯನ್ನೇ ತೆಗೆಯುತ್ತಿದ್ದನಾದರೂ ಸಹ ಆತನಿಗೆ ರೊಕ್ಕದ ಅಡಚಣೆ ಅನ್ನೋದು ಇದುವರೆಗೂ ತಪ್ಪಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಇದು ಆತನನ್ನು ಆತಂಕಕ್ಕೀಡು ಮಾಡಿತ್ತು’ (ಪುಟ-೬೮).

ಈಗ ರೈತರ ಸಾಂಪ್ರದಾಯಿಕ ದೇಶಿ ಕೃಷಿ ಜೀವನ ಬದಲಾಗಿದೆ. ಅವರು ಅದನ್ನು ಉತ್ಪದನಾ ಸಾಧನವನ್ನಾಗಿ ಪರಿವರ್ತಿಸಿಕೊಂಡು ಆಧುನಿಕ ನೆಲೆಯತ್ತ ನಡೆಯುತ್ತಿದ್ದಾರೆ. ಸ್ವಾಲಂಬನೆಯ ಕೃಷಿ ಯಾಂತ್ರೀಕರಣಗೊಳ್ಳುತ್ತಿರುವ ಕಾಲವಿದು. ಕೃಷಿಯನ್ನು ಕೈಗಾರಿಕೆಯನ್ನಾಗಿಸಿದ ಸರಕಾರ ಹಣವಂತ ಮಾಲೀಕರ ಪರ ನಿಲ್ಲುತ್ತದೆ. ಇದರಿಂದಾಗಿ ರೈತ ಸಂಗಪ್ಪ ವಿಷ ಸೇವಿಸಿ ಸಾವಿಗೆ ಶರಣಾಗಲು ನಿರ್ಧರಿಸುತ್ತಾನೆ. ಆದರೆ ಸಂಗಪ್ಪನ ಹೆಂಡತಿ ಶಾನವ್ವ ಭೂಮ್ತಾಯಿಯ ರೂಪದಲ್ಲಿ ಪ್ರತ್ಯಕ್ಷಳಾಗಿ ಸಂಗಪ್ಪ ಬದುಕಿಗೆ ಮರಳುವ ನಾಟಕೀಯ ಪ್ರಸಂಗ ಜರುಗುತ್ತದೆ.

ಜೀವನದ ನಿರ್ಣಾಯಕ ಸಂದರ್ಭದಲ್ಲಿ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಬದುಕಬೇಕೆಂಬ ದನಿಯನ್ನು ನಿರೂಪಿಸುವಲ್ಲಿ ಕಲ್ಲೇಶ್ ಕುಂಬಾರರ ಹೆಚ್ಚಾಗಾರಿಕೆ ಇದೆ. ನಾಲ್ಕನೆಯ ಭಾಗದಲ್ಲಿ  ಚಿತ್ರಿತವಾಗಿರುವ ರೈತ ಸಂಗಪ್ಪನ ಜೀವನದ ಸ್ಥಿತ್ಯಂತರಗಳು ಓದುಗರ ಮನಸ್ಸಿಗೆ ನಾಟುತ್ತವೆ. ಇಂತಹ ಕಥೆಗಳಲ್ಲಿ ಬದುಕಿನ ವಾಸ್ತವ ಮತ್ತು ಅವಾಸ್ತವ ಮುಖಗಳನ್ನು ಸಹಜವೆಂಬಂತೆ ಲೇಖಕರು ಚಿತ್ರಿಸುತ್ತಾರೆ. ಕಥೆಗಾರರ ಮೂಲ ಸಾಮರ್ಥ್ಯವಿರುವುದು ಕೂಡ ಈ ರೀತಿಯ ಕಥೆಗಳಲ್ಲೆ.

ಸಮಾಜದಲ್ಲಿ ಅಪರೂಪವಾಗುತ್ತಿರುವ ಹಿಂದೂ-ಮುಸ್ಲಿಮರ ನಡುವಿನ ಸಾಮಾಜಿಕ ಸಂಬಂಧವನ್ನು ಚಿತ್ರಿಸುವ ‘ರಜಿಯಾ’ ಯಶಸ್ವಿ ಕಥೆಯಾಗಿದೆ. ಇದು ಹಿಂದೂ-ಮುಸ್ಲಿಮ್ ಸಖ್ಯ ಹೇಗೆ ಹಾಳಾಗುತ್ತದೆಂಬುದನ್ನು ಚಿತ್ರಿಸುತ್ತದೆ. ಕೋಮುವಾದ, ಜಾತೀಯತೆ, ಲೈಂಗಿಕತೆ, ರಾಜಕೀಯ ಹುನ್ನಾರಗಳು -ಹೀಗೆ ಕಾದಂಬರಿಯಾಗಬಹುದಾದ ವಸ್ತುವೊಂದು ಕಥೆಯ ಸಣ್ಣ ವ್ಯಾಪ್ತಿಯಲ್ಲಿಯೇ ಸ್ವಚ್ಛಂದವಾಗಿ ವಿಹರಿಸಿದೆ. ಜಟಿಲ ಸಂದರ್ಭಗಳನ್ನು ಸಹನೆಯಿಂದ ಅತಿರೇಕಕ್ಕೆ ವಶವಾಗದಂತೆ ಲೇಖಕ ನಿರ್ವಹಿಸಿರುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ.

ಮಗನ ಕಣ್ಣಲ್ಲಿ ತಮ್ಮ ಬದುಕಿನ ಅರ್ಥಪೂರ್ಣತೆಯನ್ನು ಕಾಣಲು ಹಂಬಲಿಸುವ ತಂದೆ-ತಾಯಿಯರು ಒಂದೆಡೆ, ಹರೆಯದ ಉಮೇದಿನಲ್ಲಿ ತಂದೆ-ತಾಯಿಯರ ಕಾಳಜಿಯನ್ನು ನಿರ್ಲಕ್ಷಿಸಿ ಬೆಂಗಳೂರಿನಲ್ಲಿ ಹುಡುಗಿಯೊಂದಿಗೆ ಕಾಲಕಳೆಯುವ ಮಗನ ವಿಚಾರ ಇನ್ನೊಂದೆಡೆ- ಬದುಕಿನ ಬಹು ಆಯಾಮಗಳನ್ನು ‘ಉತ್ಪಾತ’ ಕಥೆ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಹೊಸ ತಲೆಮಾರಿನ ಯುವಕ-ಯುವತಿಯರ ಲೋಕದೊಂದಿಗೆ, ಇಳಿವಯಸ್ಸಿನ ತಂದೆ-ತಾಯಿಯರ ಆರ್ದ್ರ ಚಿತ್ರಣವಿದೆ. ಹಳ್ಳಿಯಿಂದ ನಗರಕ್ಕೆ ಬಂದ ಯುವಕ ಸಂಜೀವನ ಸುತ್ತ ಬೆಳೆಯುವ ಈ ಕಥೆ ಸ್ವಲ್ಪ ಸಂಕೀರ್ಣವಾಗಿದೆ.

ಕಥಾನಾಯಕ ಸಂಜೀವ ಮತ್ತು ನಾಯಕಿ ಪ್ರಿಯಾರ ಮೈ ಮನಸುಗಳ ಸಂಬಂಧಗಳನ್ನು ಸಹಜ ವರ್ತನೆಗಳೆನ್ನುವಂತೆ ಕಥೆ ಚಿತ್ರಿಸುತ್ತದೆ. ಇವರಿಬ್ಬರ ಬದುಕು ವಿಕ್ಷಿಪ್ತ. ಇಬ್ಬರಿಗೂ ಬದುಕಿನ ವಾಸ್ತವದ ಅನುಭವವಿಲ್ಲ, ಲೋಕಜ್ಞಾನವಿಲ್ಲ. ಈ ಕಥೆಯಲ್ಲಿ ತನ್ನ ಮಗನಿಗೆ ಹೇಗಾದರೂ ಮಾಡಿ ಮದುವೆ ಮಾಡಬೇಕೆಂಬ ತಂದೆ-ತಾಯಿಯರ ಕಳಕಳಿಯನ್ನು ನೋಡುತ್ತೇವೆ. ಕಥೆಯಲ್ಲಿ ಕಥೆಗಾರರು ತೋರಿರುವ ಸಂಯಮ ಅಪೂರ್ವವಾದುದು. ಸಾಧಾರಣ ಕಥೆಗಾರರ ಕೈಯಲ್ಲಿ ಅಶ್ಲೀಲವಾಗಬಹುದಾದ ವಸ್ತು ಇಲ್ಲಿ ಹಾಗಗದೆ ಉಳಿದಿದೆ. ತೂಕ ಮಾಡಿದಂತಹ ಬರವಣಿಗೆ ಕಥೆಯಲ್ಲಿದೆ.

ಕಲ್ಲೇಶ್ ಕುಂಬಾರರ ಈ ಸಂಕಲನದ ‘ಗಾಳಿಯ ಸೊಡರು’, ‘ಇದಿರ ಹರಿದು’, ‘ನೆಲ ತಳವಾರನಾದಡೆ’, ‘ಒಳಗಣ ಜ್ಯೋತಿ’, ‘ನಿಂದ ನಿಲುವಿನ ಘನ’, ‘ರಜಿಯಾ’ -ಮೊದಲಾದ ಕಥೆಗಳಲ್ಲಿ ಜನಸಾಮಾನ್ಯರ ನೋವು ನಿರಾಸೆಯ ಚಿತ್ರಣದ ಜೊತೆಗೆ ಶತಮಾನಗಳ ಕಾಲದ ಶೋಷಣೆಯನ್ನು ಪ್ರತಿಭಟಿಸಿ ನಿಲ್ಲುವ ಧ್ವನಿಯಿದೆ, ಹೋರಾಟಕ್ಕಾಗಿ ಹಾತೊರೆಯುವ ಮನಸ್ಸಿದೆ, ಸಮಾನತೆಗಾಗಿ ಹಂಬಲಿಸುವ ಆಶಯವಿದೆ. ಇಲ್ಲಿನ ಕಥೆಗಳ ಶೀರ್ಷಿಕೆಗಳೇ ಓದುವ ಆಸೆ ಹುಟ್ಟಿಸುವಷ್ಟು ಚೆಲುವಾಗಿವೆ.

ಗ್ರಾಮೀಣ ಬದುಕಿನ ಹಿನ್ನೆಲೆಯಲ್ಲಿ ಬರೆದ ಈ ಕಥೆಗಳಲ್ಲಿ ನೇರ ನಿರೂಪಣೆ, ದಟ್ಟವಾದ ವಿವರ, ಬದುಕಿನ ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸುವ ತವಕಗಳನ್ನು ಕಾಣುತ್ತೇವೆ. ಕಲ್ಲೇಶ್ ಅವರು ತಮ್ಮ ಕಥೆಗಳಲ್ಲಿ ತೋರುವ ಉತ್ಸಾಹ, ಲವಲವಿಕೆ, ಊಹಾತೀತ ನಡವಳಿಕೆಯ ಪಾತ್ರಗಳ ಚಿತ್ರಣ, ಸನ್ನಿವೇಶ ವೈವಿಧ್ಯಗಳಿಂದ ಓದುಗರ ಗಮನ ಸೆಳೆಯುತ್ತಾರೆ. ಕುಂಬಾರರಿಗೆ ಅವರದೇ ಒಂದು ವಿಶಿಷ್ಟ ಚಿತ್ರಕ ಶಕ್ತಿಯಿದೆ. ಆದ್ದರಿಂದ ಅವರು ಯಾವುದೇ ವಿಚಾರವನ್ನು ಕಥೆಯ ಮೂಲಕ ಓದುಗನಿಗೆ ಸಮರ್ಥವಾಗಿ ದಾಟಿಸಬಲ್ಲರು. ಕಲ್ಲೇಶ್ ಕುಂಬಾರರ ಕಥೆಗಳು ಉತ್ತರ ಕರ್ನಾಟಕದ ಭಾಷೆಯಲ್ಲಿ ಮೈತಳೆದು ಹೆಚ್ಚಿನ ಧ್ವನಿಶಕ್ತಿಯನ್ನು ಪಡೆದುಕೊಂಡಿವೆ.

‍ಲೇಖಕರು Avadhi

June 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: