ರಹಮತ್ ತರೀಕೆರೆ ನೆನಪಿನಲ್ಲಿ ಎಂ ಎಂ ಕಲಬುರ್ಗಿ

ರಹಮತ್ ತರೀಕೆರೆ

ಎಂ.ಎಂ. ಕಲಬುರ್ಗಿಯವರು ಶ್ರೇಷ್ಠ ಪ್ರಾಧ್ಯಾಪಕರೆಂದು ಅವರ ಶಿಷ್ಯರ ಮೂಲಕ ಕೇಳಿದ್ದೆ. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತು ಇರುವುದು ತಿಳಿದಿತ್ತು. ಅವರು ನನ್ನ ಪಿಎಚ್.ಡಿ ಪ್ರಬಂಧದ ಪರೀಕ್ಷಕರಾಗಿ ಬಂದಾಗ ಅವರ ಮೊದಲ ಮುಲಾಖತ್ತು ಆಯಿತು. ಮುಂದೆ ಮಾರ್ಗ-೨ ಸಂಪುಟದ ವಿಷಯದಲ್ಲಿ ಅವರು ಕಷ್ಟದಲ್ಲಿರುವಾಗ ಬೆಂಬಲಿಸಿ ಪತ್ರ ಬರೆದಿದ್ದೆ. ಇಷ್ಟು ಬಿಟ್ಟರೆ ಅವರೊಡನೆ ನನ್ನ ವೈಯಕ್ತಿಕ ಒಡನಾಟ ಹೆಚ್ಚಿನದಾಗಿರಲಿಲ್ಲ.

ನಿಜವಾದ ಒಡನಾಟವು ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಬಂದ ಬಳಿಕ ಒದಗಿತು. ಅವರು ಕುಲಪತಿಗಳಾಗಿ ಕಾಲಿಡುವಾಗಲೇ ಕೆಲವು ಗ್ರಹಿಕೆಗಳನ್ನು ಹೊತ್ತುತಂದಿದ್ದರು. ಅವೆಂದರೆ-ಸಾರ್ವಜನಿಕ ಹಣದಲ್ಲಿ ನಡೆಯುವ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಆಸಕ್ತಿ ಇಲ್ಲದವರೇ ಸೇರಿಕೊಂಡಿದ್ದಾರೆ; ಅವು ಕಲ್ಲಿನರಥಗಳಾಗಿವೆ; ಅವನ್ನು ಚಲನಶೀಲಗೊಳಿಸಬೇಕು; ಕನ್ನಡ ವಿಶ್ವವಿದ್ಯಾಲಯದಲ್ಲಿ ಹಳಗನ್ನಡ ಶಾಸ್ತ್ರಸಾಹಿತ್ಯ ಪರಿಚಯವಿಲ್ಲದ, ಪಂಪನನ್ನು ಓದಲು ಬಾರದ ಆಧುನಿಕ ಸಾಹಿತ್ಯದಲ್ಲಿ ಮಾತ್ರ ಆಸಕ್ತಿಯಿರುವ ವಿಚಾರವಾದಿಗಳೇ ತುಂಬಿಕೊಂಡಿದ್ದಾರೆ; ಅವರಿಗೆಲ್ಲ ಪ್ರಾಚೀನ ಸಾಹಿತ್ಯ- ಶಾಸನ ಸಾಹಿತ್ಯಗಳ ದೀಕ್ಷೆ ಕೊಟ್ಟು ಕೆಲಸ ಮಾಡಿಸಬೇಕು ಇತ್ಯಾದಿ. ನಮಗೊ ವೈಚಾರಿಕ ಹಿಂದುಳಿಯುವಿಕೆ ಇರುವ ಅವರ ಸಂಶೋಧನ ನಿಲುವಿನ ಜತೆ ಮುಖಾಮುಖಿ ಮಾಡಿ ಅವರನ್ನೇ ಪರಿವರ್ತಿಸಬೇಕೆಂಬ ಛಲ.

ಈ ತಾತ್ವಿಕ ಸಂಘರ್ಷ ಅವರು ನಮ್ಮನ್ನುದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಿಂದಲೇ ಶುರುವಾಯಿತು. ಆದರೆ ಮೂರು ವರ್ಷಗಳ ಗುದಮುರಿಗೆಯಲ್ಲಿ ನಮಗರಿಯದಂತೆ ಅವರೂ ಅವರಿಗರಿಯದಂತೆ ನಾವೂ ಪರಸ್ಪರ ಕಲಿತೆವು ಮತ್ತು ಬದಲಾದೆವು. ಅವರು ತಾವೂ ದುಡಿದು ನಮ್ಮನ್ನೂ ದುಡಿಸಿದರು. ಈಗ ಹಿಂತಿರುಗಿ ನೋಡುವಾಗ, ಅವರೊಟ್ಟಿಗೆ ಕೆಲಸ ಮಾಡಿದ ಮೂರು ವರ್ಷಗಳು ಹೆಮ್ಮೆಯ ಗಳಿಗೆಗಳು ಅನಿಸುತ್ತಿವೆ. ವಿಶ್ವವಿದ್ಯಾಲಯಕ್ಕೆ, ದೇಶೀಪ್ರತಿಭೆಯ ಸೃಜನಶೀಲ ಮನಸ್ಸಿನ ಕವಿ ಕಂಬಾರರು ಬುನಾದಿ ಹಾಕಿದರೆ, ಕ್ಲಾಸಿಕಲ್ ಅಭಿರುಚಿ ಮತ್ತು ಮಾರ್ಗ ಮನೋಧರ್ಮದ ಕಲಬುರ್ಗಿ, ತಮ್ಮ ವಿದ್ವತ್ಬಲದಿಂದ ಇಮಾರತು ಕಟ್ಟಿದರು.

ಕಲಬುರ್ಗಿಯವರ-ನಮ್ಮ ವಿದ್ವತ್ಸಂಬಂಧ ಅವರು ನಿವೃತ್ತರಾಗಿ ತೆರಳಿದ ಬಳಿಕವೂ ಮುಂದುವರೆದವು. ಅವರನ್ನು ಅನಧಿಕೃತ ಕುಲಪತಿ ಎನ್ನುತ್ತಿದ್ದೆವು. ನಮ್ಮ ಸಂಶೋಧನೆಯನ್ನು ಪ್ರಕಟಿಸುವ ಮುಂಚೆ ಅವರಿಗೆ ಕೊಟ್ಟು ಕಾಮೆಂಟ್ಸ್ ಪಡೆಯುವುದನ್ನು ರೂಢಿಸಿಕೊಂಡೆವು. ಅವರ ಎಲ್ಲ ಸಲಹೆಗಳನ್ನು ಪಾಲಿಸದಿದ್ದರೂ ಅವರೀಯುತ್ತಿದ್ದ ಹೊಳಹುಗಳನ್ನು ಹೆಕ್ಕಿಕೊಂಡು ಬೆಳೆಸುತ್ತಿದ್ದೆವು. ಯಾವ್ಯಾವುದೊ ಕಾಲೇಜುಗಳಲ್ಲಿ ಸಂಶೋಧನಾಸಕ್ತ ಅಧ್ಯಾಪಕರನ್ನು ಗುರುತಿಸಿ ಅವರಿಂದ ಕೆಲಸ ತೆಗೆಸುವ ಕಾರ್ಯವನ್ನು ಅವರು ಕಡೆತನಕ ಮಾಡಿದರು. ಕರ್ನಾಟಕ ಭಾಷೆ ಚರಿತ್ರೆ ಸಂಸ್ಕೃತಿ ಸಾಹಿತ್ಯಗಳ ಮೇಲಿನ ಅವರ ಬದ್ಧತೆ ಅಪರೂಪದ್ದು.

ಲಿಂಗಾಯತ ಸಮುದಾಯ ಮತ್ತು ಧರ್ಮಗಳಿಗೆ ಹೆಚ್ಚು ಒತ್ತುಕೊಟ್ಟು ಸಂಶೋಧನೆ ಮಾಡಿ, ವೈಚಾರಿಕವಾಗಿ ಸ್ಥಗಿತಗೊಂಡಂತೆ ಕಾಣುತ್ತಿದ್ದ ಕಲಬುರ್ಗಿಯವರು, ನಿಧಾನವಾಗಿ ಕರ್ನಾಟಕ ಸಂಸ್ಕೃತಿಯನ್ನು ಹಲವು ಧರ್ಮ ಭಾಷೆ ಸಂಸ್ಕೃತಿಗಳ ಮೂಲಕ ನೋಡುವ ಬಹುತ್ವದ ನೋಟಕ್ರಮಕ್ಕೆ ಹೊರಳಿಕೊಂಡರು. ಹಂಪಿಯಲ್ಲಿದ್ದಾಗ ಕರ್ನಾಟಕದ ಫಾರಸಿ-ಅರಬಿ ಶಾಸನಗಳನ್ನು ಪ್ರಕಟಿಸಿದರು; ನಿವೃತ್ತಿ ನಂತರ ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆಯಲ್ಲಿ ತೊಡಗಿಕೊಂಡರು. ಅವರಿಗೆ ಕನ್ನಡದ ಕೆಲಸ ಮಾಡಲು ವಿಶ್ವವಿದ್ಯಾಲಯಗಳೇ ಬೇಕಿರಲಿಲ್ಲ. ಮಠಗಳು ಶಿಕ್ಷಣಸಂಸ್ಥೆಗಳು ಸಾಕಾಗಿದ್ದವು. ಅವರಂತೆ ಸಾಂಸ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರೈಸಿದ ವಿದ್ವಾಂಸರೇ ಇಲ್ಲ.

ಅವರ ಅಮಾನುಷ ಕೊಲೆ, ಸಂಶೋಧನ ಕರ್ನಾಟಕದ ಇಂತಹ ಎಷ್ಟೊ ಕನಸುಗಳನ್ನು ಹೊಸಕಿಹಾಕಿತು. ಲಂಕೇಶ್ ತೇಜಸ್ವಿ ಅನಂತಮೂರ್ತಿ ತೀರಿಕೊಂಡಾಗ ವೈಚಾರಿಕ ತಬ್ಬಲಿತನ ಕಾಡಿತ್ತು. ಕಲಬುರ್ಗಿಯವರ ಕೊಲೆ ವಿದ್ವತ್ ತಬ್ಬಲಿತನ ಹುಟ್ಟಿಸಿತು. ಅವರ ಜತೆ ತಾತ್ವಿಕ ಭಿನ್ನಮತಗಳು ನನ್ನ ತಲೆಮಾರಿನವರಿಗಿದ್ದವು. ಅವರ ನಿರ್ಣಯಗಳು ಅವಸರದವು ಅನಿಸುತ್ತಿದ್ದವು.

‘ಸಂಗ್ಯಾಬಾಳ್ಯಾ’ ಕುರಿತ ಅವರ ವಿಚಾರಗಳು ಸಮ್ಮತವೆನಿಸಿರಲಿಲ್ಲ; ಪಂಪ ರನ್ನ ಕುಮಾರವ್ಯಾಸರು ಉತ್ತರ ಭಾರತದ ಆರ್ಯಜನಾಂಗದ ಕಥನವನ್ನು ವಸ್ತುವಾಗಿಟ್ಟುಕೊಂಡು ಕಾವ್ಯ ಬರೆದರು; ತಮಿಳು ಕವಿಗಳಂತೆ ದೇಸೀ ಕಥನವನ್ನು ಮುಟ್ಟದೆ ತಪ್ಪು ಹಾದಿ ಹಾಕಿಕೊಟ್ಟರು' ಎಂಬ ಅವರ ಹೇಳಿಕೆಯಲ್ಲಿ ತುಸು ನಿಜವಿದ್ದರೂ, ಕನ್ನಡಕಾವ್ಯ ಪರಂಪರೆಯನ್ನು ನೋಡುವ ರೀತಿಯಿದಲ್ಲ ಅನಿಸುತ್ತಿತ್ತು;ಗುಲ್ವಾಡಿ ವೆಂಕಟರಾವ್, ಪಂಜೆ, ಮಾಸ್ತಿ, ಕೈಲಾಸಂ, ಬೇಂದ್ರೆ, ಆರ್.ನರಸಿಂಹಾಚಾರ್ ಮುಂತಾದ ಕನ್ನಡೇತರ ಲೇಖಕರಿಂದ ಆಧುನಿಕ ಕನ್ನಡ ಸಾಹಿತ್ಯ ಶುರುವಾಗಿದ್ದರಿಂದ ಅದಕ್ಕೆ ಬರಬೇಕಾದ ಕಸುವು ಒದಗಲಿಲ್ಲ’ ಎಂಬರ್ಥವಿದ್ದ ಅವರ ಹೇಳಿಕೆ ಒಪ್ಪುವುದು ಕಷ್ಟವಾಗುತ್ತಿತ್ತು. ಅನಂತಮೂರ್ತಿಯವರಿಗೆ ಬಸವಶ್ರೀ ಪ್ರಶಸ್ತಿ ಬಂದಾಗ ಹೊರಹಾಕಿದ ವಿಚಾರಗಳಂತೂ ಸಂಕುಚಿತವಾಗಿದ್ದವು.

ಆದರೆ ಕಲಬುರ್ಗಿಯವರ ಜತೆ ವೈಚಾರಿಕ ಅಸಮ್ಮತಿ ಇಟ್ಟುಕೊಂಡೂ ನನ್ನ ತಲೆಮಾರಿನವರು ಬೆರೆಯುತ್ತಿದ್ದೆವು; ಸಂಶೋಧನೆಯಲ್ಲಿ ಕೈಜೋಡಿಸುತ್ತಿದ್ದೆವು. ಅವರು ಪ್ರಾಚೀನ ಸಾಹಿತ್ಯ ಅರ್ಥಮಾಡಿಕೊಳ್ಳುವಲ್ಲಿ ಕೆಲವು ಅಪೂರ್ವ ಕೀಲಿಕೈ ಗೊಂಚಲು ಇಟ್ಟುಕೊಂಡ ವಿದ್ವಾಂಸರಲ್ಲಿ ಒಬ್ಬರಾಗಿದ್ದರು. ಶಾಸನ ಹಳಗನ್ನಡ ಹಸ್ತಪ್ರತಿ ವಚನಸಾಹಿತ್ಯಗಳಲ್ಲಿ ತಮಗಿದ್ದ ತಿಳುವಳಿಕೆಯಿಂದ ಅವರು ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ತಮ್ಮ ವಿಚಾರಗಳನ್ನು ಹೊಸ ತಲೆಮಾರಿನವರು ಪೂರ್ಣವಾಗಿ ಒಪ್ಪುವುದಿಲ್ಲ ಎಂದು ಗೊತ್ತಿದ್ದರೂ, ಕರ್ನಾಟಕದ ಸಾಂಸ್ಕೃತಿಕ ಹುಡುಕಾಟ ಬಂದಾಗ ಭಿನ್ನಮತ ಬದಿಗಿಟ್ಟು ಒಡನಾಡಬಲ್ಲವರಾಗಿದ್ದರು.

ದಿಟ್ಟವಾಗಿ ಭಿನ್ನಮತ ವ್ಯಕ್ತಪಡಿಸುವ ಮೂಲಕ ಸಂಶೋಧನ ಪರಿಸರವನ್ನು ಜೀವಂತವಿಟ್ಟಿದ್ದ ಕಲಬುರ್ಗಿಯವರಿಗೆ, ಭಿನ್ನಮತ- ವಿವಾದ ಹೊಸವಲ್ಲ. ಅವರು ೮೦ರ ದಶಕದಲ್ಲೇ ಚನ್ನಬಸವಣ್ಣ ಕುರಿತ ಲೇಖನ ಸಂಬಂಧವಾಗಿ ಸ್ವಜಾತಿ ಬಾಂಧವರಿಂದ ಕೆಟ್ಟವಿರೋಧ ಎದುರಿಸಿದ್ದರು; ಪಂಚಪೀಠಗಳು ಬಸವತತ್ವಕ್ಕೆ ವಿರುದ್ಧ ಎಂದು ಹೇಳುತ್ತ ಕಣ್ಕಿಚ್ಚಿಗೆ ಗುರಿಯಾಗಿದ್ದರು; ಬಸವತತ್ವದ ಸಮರ್ಥಕರಾಗಿ ಲಿಂಗಾಯತವು ಸಿಖ್ ಜೈನ ಬೌದ್ಧಗಳ ಹಾಗೆ ಭಾರತದ ಸ್ವತಂತ್ರ ಧರ್ಮವೆಂಬ ಪ್ರತಿಪಾದನೆಯಿಂದ ಹಿಂದುತ್ವವಾದಿಗಳ ಹಗೆತನ ಕಟ್ಟಿಕೊಂಡಿದ್ದರು; ಕೊನೆಯ ದಿನಗಳಲ್ಲಿ ತಮ್ಮ ಅವಸರದ ಹೇಳಿಕೆಗಳಿಗೆ ದ್ವೇಷದಾಯಕ ಪ್ರತಿಕ್ರಿಯೆ ಎದುರಿಸಿದ್ದರು.

ಸಂಶೋಧಕ ಸತ್ಯ ಹೇಳಿದಕ್ಕೆ ಶಿಲುಬೆ ಏರಬೇಕಾಗುವುದು ಎಂದು ಸದಾ ಹೇಳುತ್ತಿದ್ದರು. ಅವರ ಬದುಕಿನ ಕೊನೆ ಹೀಗೆ ದಾರುಣವಾಗುತ್ತದೆ ಎಂದು ಯಾರುತಾನೇ ಊಹಿಸಿದ್ದರು? ೧೨ನೇ ಶತಮಾನದ ‘ಕಲ್ಯಾಣ’ ಕರ್ನಾಟಕ ಸಂಸ್ಕೃತಿಯಲ್ಲಿ ಮಹತ್ವದ ಸ್ಥಳ. ಹೆಸರು ಕಲ್ಯಾಣವಾದರೂ ಅದು ಶರಣರ ಪಾಲಿಗೆ ದುರಂತ ತಾಣವೂ ಹೌದು. ಈ ವಸ್ತುವನ್ನಿಟ್ಟುಕೊಂಡು ಕಲಬುರ್ಗಿ ‘ಕೆಟ್ಟಿತ್ತು ಕಲ್ಯಾಣ’ ನಾಟಕವನ್ನೂ ಬರೆದರು. ಆಕಸ್ಮಿಕ ಎಂಬಂತೆ ಅವರು ವಾಸವಾಗಿದ್ದು ಧಾರವಾಡದ ಕಲ್ಯಾಣನಗರದಲ್ಲಿ. ಕಲ್ಯಾಣನಗರವು ಅವರ ಬಾಳಿನಲ್ಲಿ ದುರಂತ ತಾಣವಾಗಿತು. ಈ ನೆನಪೇ ದುಗುಡದಾಯಕ.

ಕಲಬುರ್ಗಿಯವರ ಕೊಲೆಯ ಕಾರಣ ಖಚಿತಗೊಂಡಿಲ್ಲ. ಆದರೆ ಅವರ ಕೊಲೆಯನ್ನು ಕೆಲವರು ಸಂಭ್ರಮಿಸಿದ್ದು ಮಾತ್ರ ಅಮಾನುಷ. ಗಾಂಧಿಯ ಕೊಲೆಯಾದಾಗಲೂ ಸನಾತನವಾದಿಗಳು ಸಿಹಿ ಹಂಚಿದ್ದರು. ಸೈದ್ಧಾಂತಿಕವಾಗಿ ಸಮ್ಮತವಲ್ಲದ ಚಿಂತಕರ ಸಾವನ್ನು ಸಂಭ್ರಮಿಸುವ ಘಟನೆ, ಅನಂತಮೂರ್ತಿ ನಿಧನದ ಬಳಿಕ ಕರ್ನಾಟಕದಲ್ಲಿ ಕಾಣಿಸಿಕೊಂಡಿತು. ಲೇಖಕರ ಸಾವು-ಕೊಲೆಗಳಿಗೆ ಮಾಡುವ ಸಂಭಮ್ರಾಚರಣೆ, ಕರ್ನಾಟಕ ಉಳಿಸಿಕೊಂಡು ಬಂದಿದ್ದ ಅಲ್ಪಸ್ವಲ್ಪ ಸಾಂಸ್ಕೃತಿಕ ಮತ್ತು ವೈಚಾರಿಕ ಸಹನೆಗಳು ತೀರಿರುವುದರ ಸೂಚನೆಯಾಗಿತ್ತು; ಕೊಲೆ ತಾತ್ವಿಕ ಭಿನ್ನಮತದ ಕಾರಣಕ್ಕಾಗಿಯೆ ಸಂಭವಿಸಿದ್ದರೆ, ಕರ್ನಾಟಕದ ವಾಗ್ವಾದ ಪರಂಪರೆ ಕ್ಷೀಣವಾಗುತ್ತಿದೆ ಎಂದರ್ಥ; ವಿದ್ವಾಂಸರನ್ನು ಕೊಲ್ಲುವ, ಅವರ ಸಾವಿಗೆ ಸಂತೋಷ ಪಡುವ ಸಮಾಜ ಎಂತಹ ಸಮಾಜ?

‍ಲೇಖಕರು Admin

August 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: