ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರಗಿ ನೀರಾದರೂ ಹರಿಯದ ಕರುಣರಸ – ಅಪ್ಪ

ಅಪ್ಪ

– ನಾ ದಿವಾಕರ್

 

ಮೂರು ದಶಕಗಳಾದವೇ

ಇಹವ ತೊರೆದು

ಮರೆತಿಲ್ಲ ಬಿಡು

ನೆನಪಿನಂಗಳದಲಿ

ಹಸಿರಾಗಿಯೇ ಇದೆ

ಆ ಗಂಭೀರ ನಗೆ

ರಾಜಠೀವಿಯ ನಡಿಗೆ !

 

ಹಿಂದಿರುಗಿ ನೋಡಲೇ

ಇಲ್ಲ ಬದುಕಿದ್ದಾಗಲೂ ;

ಛಲದಂಕನಲ್ಲವೇ !

ಭವಿಷ್ಯದಲಿ ನೆಟ್ಟ ನಿಸ್ಪೃಹ

ದೃಷ್ಟಿ ಕೈಗೂಡಲಿಲ್ಲ

ಧೃತಿಗೆಡಲೂ ಇಲ್ಲ !

 

ಕರಗಿ ನೀರಾದರೂ ಹರಿಯದ

ಕರುಣರಸ ಹೃದಯ

ಕತ್ತಿಯಲುಗಿನ ನಡೆಯೂ

ಮಂದಹಾಸದೊಡನೆಯೇ ?

ಬಂಡೆಗಳಲ್ಲವೇ ಕರುಳಬಳ್ಳಿಗಳು

ಕೈಪಿಡಿಯದಿರೇನು

ನಡೆದೆಯಲ್ಲವೇ ಕೈ ಬೀಸಿ !

 

ಬದುಕಿನ ಹೆಜ್ಜೆಗಳು

ಓಯಸಿಸ್ನಂತೆ

ಕೈಗೆಟುಕಲಿಲ್ಲ

ಮನ ತಣಿಸಲಿಲ್ಲ

ಬೆನ್ನ ಹಿಂದಿನ

ಚಿಲುಮೆ ಕಂಗಳಿಗೆ ದೂರ ;

ಬೆನ್ನೆಲುಬಿಗೆ ಭಾರ

ಸಂಬಂಧಗಳ ಚಿತ್ತಾರ !

 

ಎತ್ತ ಸಾಗಿದರೇನು

ಸುತ್ತ ಕಂದಕಗಳ ಸಂತೆ

ಸಪ್ತಪದಿಯ ನೆನಪುಗಳು

ಅಗ್ನಿಯಂತೆ !

ಗಂಡಗಳನೆದುರಿಸಲು

ಭಂಡೆದೆಯೂ ಬೇಕು

ನಿನ್ನದೇ ಹೆಜ್ಜೆ

ಪಿಂಡದಾನವದೇಕೆ !

 

ಚಿತಾಸ್ಪರ್ಶವೆ ನಿನ್ನಡಿಗೆ

ಸಲ್ಲಿಸಿದ ಸೇವೆ

ಚಿಂತೆಯಿಲ್ಲ ಬಿಡು !

ಮರೆವು ಮನುಜನ ವರ

ಹೇಗೆ ಮರೆವುದು

ನೀ ಅಜರಾಮರ !

ಜೀವತುಂಬಿದ ನೋಟ

ತುಂಬಿದೆ ತನುಮನಗಳ

ಇಂದಿಗೂ

ಎಂದೆಂದಿಗೂ !

 

(ಮೂರು ದಶಕಗಳ ಹಿಂದೆ 17/12/1977ರಂದುಅಗಲಿದ ತಂದೆಯ ನೆನಪಿನಲ್ಲಿ)

 ]]>

‍ಲೇಖಕರು G

17 June, 2012

3 Comments

  1. Manjula Narayanarao

    Heart touching –

  2. Shar

    ಸಪ್ತಪದಿಯ ನೆನಪುಗಳು
    ಅಗ್ನಿಯಂತೆ !
    ಗಂಡಗಳನೆದುರಿಸಲು
    ಭಂಡೆದೆಯೂ ಬೇಕು ” These transcend the frame of the poem and appeal ubiquitiously and eternally.

  3. D.RAVI VARMA

    ಚಿತಾಸ್ಪರ್ಶವೆ ನಿನ್ನಡಿಗೆ
    ಸಲ್ಲಿಸಿದ ಸೇವೆ
    ಚಿಂತೆಯಿಲ್ಲ ಬಿಡು !
    ಮರೆವು ಮನುಜನ ವರ
    ಹೇಗೆ ಮರೆವುದು
    ನೀ ಅಜರಾಮರ !
    ಜೀವತುಂಬಿದ ನೋಟ
    ತುಂಬಿದೆ ತನುಮನಗಳ
    ಇಂದಿಗೂ
    ಎಂದೆಂದಿಗೂ ಸರ್ ತುಂಬಾ ಅರ್ಥಪೂರ್ಣವಾಗಿದೆ. ಪ್ರತಿಯೊಬ್ಬ ಮಗನು ಒಮ್ಮೆ ತಂದೆ ಯಾಗುವಂತೆ,ಮಗಳು ಒಮ್ಮೆ ತಾಯಿಯಾಗುತ್ತಾಳೆ ,.ಆದರೆ ನಾನು ನನ್ನ ಮಕ್ಕಳಿಗೆ ಅಪ್ಪನಾದದ್ದಕ್ಕು ,ನಮಗೆ ನನ್ನ ಅಪ್ಪ ಅಪ್ಪನಾ ಗಿದ್ದಕ್ಕು ತುಂಬಾ ಅಂತರವಿದೆ. ಈಗ ಇಲ್ಲಿ ಎಲ್ಲವು ಇದೆ,ಆದರೆ ಏನು ಇಲ್ಲವೆನಿಸುತ್ತಿದೆ, ಅಂದು ಏನು ಇರಲಿಲ್ಲ, ಆದರೆ ಅಪ್ಪನಿದ್ದಾನೆ ಎನ್ನುವ ನಿರ್ಭಯ, ಆತ್ಮವಿಸ್ವಾಸ ,ಅನನ್ಯ ಪ್ರೀತಿ, ಒಂದು ಸಣ್ಣ ಭಯ ,ಅನಂತಾನಂತ ಆನಂದ ಎಲ್ಲವು ಇತ್ತು ಅನಿಸುತ್ತಿದೆ. ಆತನನ್ನು, ಆತನ ತ್ಯಾಗವನ್ನು,ಆತನ ಎದೆಗಾರಿಕೆಯನ್ನು ,ಎಲ್ಲರೊಂದಿಗೆ ಬೆರೆತು ಬದುಕಿದ, ಬದುಕು ನನ್ನನ್ನು ನಿರಂತರವಾಗಿ ಕಾಡುತ್ತಲೇ ಇದೆ.
    ರವಿ ವರ್ಮ ಹೊಸಪೇಟೆ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading