ಕಮಲಾಕರ ಕಡವೆ ಓದಿದ – ‘ಇಂಗ್ಲಿಶ್ ಸಂಕಥನ’

ಕಣ್ಕಟ್ಟುಗಳ ನಿವಾರಿಸುವ ತರ್ಕಗಳ ‘ಇಂಗ್ಲಿಶ್ ಸಂಕಥನ

ಕಮಲಾಕರ ಕಡವೆ

ಮನುಷ್ಯನ ಅತ್ಯಂತ ಆಪ್ತ ಸ್ವತ್ತು ಅಂದರೆ ಭಾಷೆಯೇ ಇರಬೇಕು. ಭಾಷೆಯೇ ಜಗತ್ತಿನೊಂದಿಗೆ ನಮಗಿರುವ ಸೇತು; ತನ್ಮೂಲಕವೇ ಜಗದೊಳಗೆ ನಮ್ಮ ಪ್ರವೇಶ; ಇದನ್ನೇ, ನಾಟಕೀಯವಾಗಿ ಹೇಳಬೇಕೆಂದರೆ, ಭಾಷೆಯೇ ನಮ್ಮ ಜಗತ್ತು. ಭಾಷೆ ನಮ್ಮನ್ನು ಆವರಿಸಿರುವ ಪರಿ ಹೇಗೆಂದರೆ ನಮ್ಮ ಅಸ್ತಿತ್ವದ ಪ್ರತಿಯೊಂದು ಅಂಶವೂ ಭಾಷಿಕ ನಿರ್ಮಿತಿಯಾಗಿರುತ್ತದೆ ಅಂದರೆ ಅತಿಶಯೋಕ್ತಿಯಲ್ಲ.

ನಮ್ಮ ಭಾವ-ಭಕುತಿ, ವಿಚಾರ-ವಿಧಾನ, ಕಲ್ಪನೆ-ಚಿಂತನೆ, ಗ್ರಹಿಕೆ-ಅರಿವು, ಒಟ್ಟಾರೆ ನಮ್ಮ ಪ್ರಜ್ನೆಯ ಒಟ್ಟಂದವು ಭಾಷಾಪ್ರಜ್ನೆಯೇ ಆಗಿರುತ್ತದೆ, ಭಾಷೆಯ ಅಧೀನದಲ್ಲಿಯೇ ಇರುತ್ತದೆ. ಹೀಗೆ ಹೇಳಿದಾಗ, ನಮ್ಮ ಅಸ್ತಿತ್ವನ್ನು ರೂಪಿಸುವಲ್ಲಿ ಭಾಷೆಯ ಪಾತ್ರದ ಕುರಿತಾಗಿ ಹೇಳಿದಂತಾಗುತ್ತದೆ. ಆದರೂ, ಭಾಷೆಯೆನ್ನುವುದು ನಮ್ಮಿಂದಲೇ ಸೃಷ್ಟಿಸಲ್ಪಟ್ಟ ಸಂಗತಿ ಎನ್ನುವುದೂ ಸತ್ಯವೇ. ಆದರೆ, ಈ ಸೃಷ್ಟಿ ಮಾತ್ರ ಒಂದು ಸಾಮಾಜಿಕ-ಸಾಮೂಹಿಕ ಮಾನವ ಸೃಜನಸಾಧ್ಯತೆಯಾಗಿರುತ್ತದೆ. ಭಾಷೆಗಿರುವ ಈ ಸಾಮಾಜಿಕ-ಸಾಮೂಹಿಕ ವ್ಯಾಪ್ತಿಯನ್ನು ವಿಶೇಷವಾಗಿ ಅಧ್ಯಯನ ಮಾಡುವ ಜ್ನಾನಶಿಸ್ತು ಎಂದರೆ ಸಾಮಾಜಿಕಭಾಷಾಶಾಸ್ತ್ರ. 

ಕನ್ನಡದಲ್ಲಿ ಸಾಮಾಜಿಕಭಾಷಾಶಾಸ್ತ್ರೀಯ ಅಧ್ಯಯನಗಳು ತುಂಬಾ ವಿರಳ. ಆದುದರಿಂದಲೇ, ಹೆಚ್ಚಿನ ಚರ್ಚೆಗಳು ಭಾವನಾತ್ಮಕ ನೆಲೆಯಲ್ಲಿ, ಅಭಿಮಾನವನ್ನವಲಂಬಿಸಿದ ಅಭಿಪ್ರಾಯಗಳ, ವಾದಗಳ ಅಭಿವ್ಯಕ್ತಿಯಾಗಿರುತ್ತವೆ. ಕನ್ನಡವೆಂದರೆ ಕುಣಿದಾಡುವ ಎದೆ, ನಿಮಿರುವ ಕಿವಿ ಕರ್ನಾಟಕದುದ್ದಕ್ಕೂ ನಮಗೆ ದಂಡಿಯಾಗಿ ಸಿಗುತ್ತವೆ. ಆದರೆ, ಸಾಮಾಜಿಕ-ಆರ್ಥಿಕ-ರಾಜಕೀಯ ಚೌಕಟ್ಟುಗಳಲ್ಲಿ ಕನ್ನಡ ನುಡಿಯ ರೂಪವಿನ್ಯಾಸವನ್ನು ವಸ್ತುನಿಷ್ಠವಾಗಿ ಅಭ್ಯಾಸ ಮಾಡುವ, ಕ್ರಮಬದ್ಧವಾಗಿ ವಿಶ್ಲೇಷಿಸುವ, ತಾತ್ವಿಕ ವಿವೇಕದೊಂದಿಗೆ ಪ್ರಸ್ತುತಪಡಿಸುವ ಗಂಭೀರ ಅಭ್ಯಾಸಕರು ಅಪರೂಪ.

ಕನ್ನಡದಲ್ಲಿ ಭಾವಿಸುವ ಜನರ ನಡುವಿನ ಸಾಮಾಜಿಕ ಹಾಗೂ ಅಧಿಕಾರ ಸಂಬಂಧಗಳು, ಆರ್ಥಿಕತೆಯ ರೂಪುರೇಷೆಗಳು, ಕರ್ನಾಟಕದಲ್ಲಿ ನಡೆದಿರುವ ಔದ್ಯೋಗಿಕ ಬದಲಾವಣೆಗಳು ಕನ್ನಡ ನುಡಿಯನ್ನು, ಕನ್ನಡಿಗರನ್ನು ಆವರಿಸಿರುವ ಬಗೆಗಳು ಯಾವವು, ಅವುಗಳಲ್ಲಿರುವ ತೊಡಕುಗಳಿಗೆ ಸಮಾಧಾನ ಯಾವ ದಿಕ್ಕಿನಲ್ಲಿ ಲಭ್ಯವಾದೀತು, ಭಾಷಾಸಮುದಾಯವಾಗಿ ಕರ್ನಾಟಕವನ್ನು ಕಟ್ಟುವ ನಿಟ್ಟಿನಲ್ಲಿ ಯಾವ ಪ್ರಕಾರದ ಚಿಂತನೆಗಳು ಆಗಬೇಕಿದೆ ಇವೇ ಮುಂತಾದ ಪ್ರಶ್ನೆಗಳನ್ನಿಟ್ಟುಕೊಂಡು ಜನಜೀವಿ-ಕೇಂದ್ರಿತ ಸಮಾಜಪ್ರೇಮಿ ನೆಲೆಯಲ್ಲಿ ಭಾಷೆಯ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ. 

ಹೀಗೆ ಆಗಲೇಬೇಕಿರುವ ಅನುಸಂಧಾನಗಳಲ್ಲಿ ಒಂದು ಅಂದರೆ ಕನ್ನಡ ಭಾಷೆಯ ಅಸ್ತಿತ್ವ-ಅವಸ್ಥೆಯ ಮೇಲೆ ಇಂಗ್ಲೀಶು ಯಾವ ಪರಿಣಾಮ ಬೀರುತ್ತಿದೆ ಎನ್ನುವ ಅಧ್ಯಯನ. ನಮ್ಮ ಸಮಾಜದಲ್ಲಿ ಇಂಗ್ಲೀಶು ಕೇವಲ ಭಾಷೆಯಾಗಿರದೇ, ಹಲವಾರು ಸಾಮಾಜಿಕ-ಸಾಂಕೇತಿಕ ಉದ್ದೇಶಗಳ ಗುರುತಾಗಿದೆ. ಈ ಕುರಿತು ಪಂಡಿತ-ಪಾಮರರಾದಿ ಎಲ್ಲರೂ ತಂತಮ್ಮ ಅಭಿಪ್ರಾಯ ಹೊಂದಿರುತ್ತಾರಾದರೂ, ಅವು ಸಾಮಾನ್ಯವಾಗಿ ಕೆಲವೇ ಕೆಲವು ವಿಷಯಗಳನ್ನು ಮತ್ತೆ ಮತ್ತೆ ಎತ್ತುತ್ತಿರುತ್ತವೆ. ಇಂಗ್ಲೀಶಿನ ವ್ಯಾಮೋಹದಿಂದಾಗಿ ಭಾರತೀಯ ಭಾಷೆಗಳಿಗಿರುವ ಕುತ್ತು ಈ ಅಭಿಪ್ರಾಯಗಳ ಕೇಂದ್ರಬಿಂದು. ಈ ಅಪಾಯ ನಿಜವೇ ಆಗಿದ್ದರೂ ಕೂಡ, ಇದರ ಪ್ರಾಧಾನ್ಯ ಇನ್ನಿತರ ರೀತಿಗಳಲ್ಲಿ ಇಂಗ್ಲೀಶು ನಮ್ಮ ಭಾಷೆಗಳನ್ನು ಪ್ರಭಾವಿಸಿರುವ ರೀತಿಗಳನ್ನು ಚರ್ಚೆಗೆ ಬರದಂತಾಗಿಸಿರುವುದು ದುರಂತ ವ್ಯಂಗ್ಯ. 

ಯಾವ ಯಾವ ರೀತಿಗಳಲ್ಲಿ ಭಾಷೆಗಳು ಸಮಾಜವೊಂದನ್ನು ನಿರ್ಮಿಸುವ-ಪುನರ್ರೂಪಿಸುವ ಕೆಲಸ ಮಾಡುತ್ತಿರುತ್ತವೆ ಎನ್ನುವುದನ್ನು ನಾವಿನ್ನೂ ಸಂಪೂರ್ಣವಾಗಿ ಅರಿತುಕೊಂಡಿಲ್ಲವೆನ್ನಿಸುತ್ತದೆ. ಈ ಕುರಿತಾಗಿ ಹಲವು ದೇಶಗಳ, ಹಲವು ಕಾಲಗಳ ಭಾಷಾತಜ್ನರು ಹಲವು ಪ್ರಮೇಯಗಳನ್ನು ಸೂಚಿಸಿದ್ದರೂ ಸಹ, ನಿರ್ಧಿಷ್ಟ ಸಮಾಜವೊಂದು ತನ್ನ ಪ್ರದೇಶದ ಭಾಷೆಗಳಿಂದ ಪ್ರಭಾವಿಸಲ್ಪಟ್ಟಿರುವ ಮೂರ್ತರೂಪಗಳ ಅಧ್ಯಯನ ಇನ್ನೂ ಆಗಬೇಕಿದೆ. ಕನ್ನಡದ ಕುರಿತಾಗಿಯೂ ಈ ಬಗೆಯ ಅಧ್ಯಯನಗಳು ಅತ್ಯಂತ ಅಪರೂಪ. ಈ ಹಿನ್ನೆಲೆಯಲ್ಲಿ, ಕನ್ನಡ ಭಾಷಾ ಸಂಧರ್ಭದಲ್ಲಿ ಇಂಗ್ಲೀಶು ನುಡಿಯ ಕುರಿತಾದ ಜಿಜ್ನಾಸೆಗಳನ್ನು ಪ್ರಸ್ತುತಪಡಿಸುತ್ತಿರುವ ಮೇಟಿ ಮಲ್ಲಿಕಾರ್ಜುನ ಅವರ “ಇಂಗ್ಲೀಷ್ ಸಂಕಥನ” ಅತ್ಯಂತ ಮೌಲಿಕವೂ, ಸಕಾಲಿಕವೂ ಆಗಿದೆ. ಒಟ್ಟಾರೆ ಹನ್ನೊಂದು ಪ್ರಭಂಧಗಳಲ್ಲಿ ಲೇಖಕರು ಕರ್ನಾಟಕದ ಸಾಮಾಜಿಕ ಬದುಕಿನಲ್ಲಿ ಕನ್ನಡ ಭಾಷೆ ಸ್ವಾಯತ್ತ ರೀತಿಯಲ್ಲಿ ಜನರ ಬಾಳನ್ನು ರೂಪಿಸುವುದಕ್ಕಿರುವ ತೊಡಕುಗಳಲ್ಲಿ ಇಂಗ್ಲೀಶಿನ ಪಾತ್ರದ ಕುರಿತು ಹಲವಾರು ಮಹತ್ವದ ಪ್ರಮೇಯಗಳ ಮೂಲಕ ಚರ್ಚಿಸಿದ್ದಾರೆ.

ಭಾಷೆಯ ಕುರಿತಾಗಿ ನಡೆಯುವ ಬಹುಪಾಲು ಚರ್ಚೆಗಳು ಭಾವನಾತ್ಮಕ ಒತ್ತು ಹೊಂದಿರುತ್ತವೆ. ಅಕೆಡೆಮಿಕ್ ತಜ್ನರು ಬರೆದಾಗ ಅಲಿಪ್ತ ಪಾಂಡಿತ್ಯ ಕಾಣಬರುತ್ತದೆ. ಆದರೆ, ಭಾವನಾತ್ಮಕ ಸ್ಫೂರ್ತಿಯನ್ನು ಕ್ರಮಬದ್ಧ ಪಾಂಡಿತ್ಯದೊಂದಿಗೆ ಮಿತವಾಗಿ ಬೆರೆಸಿ, ಓದುಗರನ್ನು ಚಿಂತನೆಗೆ ಬರಮಾಡಿಕೊಳ್ಳುವ ಬರವಣಿಗೆ ಇಂದಿನ ಅಗತ್ಯವಾಗಿದೆ. ಮೇಟಿ ಮಲ್ಲಿಕಾರ್ಜುನ ಅವರ ಈ ಹೊತ್ತಿಗೆಯಲ್ಲಿ ನಮಗೆ ಕಾಣಸಿಗುವ ಶೈಲಿಯೂ ಇದೇ ಆಗಿದೆ. 

ಭಾಷೆಗಳ ಒಡಲಲ್ಲಿ ಹುದುಗಿರುವ “ಹಿಂಸೆ, ಕ್ರೌರ್ಯ, ತಾರತಮ್ಯದ ನೆಲೆಗಳು” (ಪು.3) ಸಮಾಜವೊಂದರ ಸಂರಚನೆಯನ್ನು ನಿರ್ಧರಿಸುತ್ತವೆ ಎಂಬ ಹೊಳಹಿನೊಂದಿಗೆ ವಿಶ್ಲೇಷಣೆಗೆ ತೊಡಗುವ ಮೇಟಿ ಮಲ್ಲಿಕಾರ್ಜುನ ಅವರ ಈ ಪುಸ್ತಕದ ಹಿಂದಿರುವ ಪ್ರಧಾನ ಪ್ರೇರಣೆ ಕನ್ನಡ ನುಡಿಯ ಕುರಿತಾಗಿ ಅವರಿಗಿರುವ ಅಭಿಮಾನ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಈ ಅಭಿಮಾನ ಅವರಲ್ಲಿ ಭರವಸೆಯ ಸೆಲೆಯಾಗಿದ್ದರೂ ಸಹ, ಕುರುಡು ನಂಬಿಕೆಯಾಗಿಲ್ಲ. ಪದ ಮತ್ತು ಅರ್ಥಗಳ ನೆಲೆಯಲ್ಲಿ ಭಾಷೆಯೊಂದು ಪ್ರಸ್ಥಾಪಿತ ಸಾಮಾಜಿಕ ಶ್ರೇಣೀಕರಣ, ಜಾತಿಯ ತಾರತಮ್ಯ, ಲಿಂಗ ಬೇಧಗಳನ್ನು ನವೀಕರಿಸುತ್ತ ಸಾಗುವುದರ ಕುರಿತು ಈ ಬರಹಗಳಲ್ಲಿ ಕಡುಟೀಕೆಗಳಿವೆ. ಅವು ದರ್ಶಿಸುವಂತೆ, ಕನ್ನಡ ನುಡಿಯ ಕುರಿತು ಅಭಿಮಾನದೊಂದಿಗೆ ಬರೆವಾಗಲೂ ಲೇಖಕರು ತಮ್ಮ ನ್ಯಾಯ ಮತ್ತು ನೈತಿಕ ನಿಲುವುಗಳನ್ನು ಸಡಿಲಿಸುವುದಿಲ್ಲ.

ಕನ್ನಡದ ಮೂಲಕವೇ ನಾವು ಕರ್ನಾಟಕದ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವುದು ಈ ಪುಸ್ತಕದಲ್ಲಿ ಅವರು ಪ್ರಸ್ತುತಪಡಿಸುತ್ತಿರುವ ಮುಖ್ಯವಾದ ವಾದವಾಗಿದೆ. ಕನ್ನಡಿಗರ ಬದುಕಲ್ಲಿ ಸಂಸ್ಕೃತ, ಇಂಗ್ಲೀಶು, ಹಿಂದಿಯಂತಹ ಶಕ್ತಿನುಡಿಗಳು ಪಡೆದಿರುವ ಪ್ರಾಮುಖ್ಯವನ್ನು ಇಲ್ಲಿ ತೀಕ್ಷ್ಣವಾಗಿ ಟೀಕಿಸಲಾಗಿದೆ. ಲೇಖಕರು ಇಂಗ್ಲೀಶು ಭಾಷೆಯ ಅನಿವಾರ್ಯತೆಯ ಕುರಿತಾಗಿ ಭಾರತದಲ್ಲಿರುವ ಹಲಹತ್ತು ರೀತಿಯ “ಕಣ್ಕಟ್ಟು”ಗಳನ್ನು ಬಿಡಿಸಿ ಬಿಡಿಸಿ ತೋರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯಂತೂ ಇಂಗ್ಲೀಶಿಗೆ ಪರ್ಯಾಯವೇ ಇಲ್ಲವೆಂದು ಬಿಂಬಿಸಲಾಗಿದ್ದು, ಜ್ನಾನನಿರ್ಮಿತಿ ಮತ್ತು ಜ್ನಾನಾಭಿವೃದ್ಧಿಯ ದೃಷ್ಟಿಯಲ್ಲಿ ಕನ್ನಡ ಸಾಲದು ಎಂಬ ಸುಳ್ಳುಕತೆಗಳನ್ನು ಪ್ರಚುರಪಡಿಸಲಾಗಿದೆ. ಇದನ್ನು ಅಧಿಕಾರ-ರಾಜಕಾರಣದ ಹಿನ್ನೆಲೆಯಲ್ಲಿ ಚರ್ಚಿಸುವ ಮೇಟಿ ಮಲ್ಲಿಕಾರ್ಜುನ ಅವರು, ಈ ಎಲ್ಲ ಕಪಟನಾಟಕಗಳ ಮೂಲಕ ಇಂಗ್ಲೀಶು ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಪ್ರಯತ್ನಿಸುವುದನ್ನು, ಕೆ ಎಸ್ ನರಸಿಂಹಸ್ವಾಮಿಯವರ “ಗುಣವಿರದ ಕವಿತೆ ಸಿಂಹಾಸನದಿ ಮೆರೆಯುತಿದೆ” ಎಂಬ ರೂಪಕದ ಮೂಲಕ ವಿಶ್ಲೇಷಿಸುತ್ತಾರೆ.  

ಪ್ರಜಾಸತ್ತಾತ್ಮಕವಾದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸರವನ್ನು ನಿರ್ಮಿಸುವಲ್ಲಿ ಭಾರತೀಯ ಭಾಷೆಗಳ ಕೊಡುಗೆ ಏನು ಎಂಬ ಪ್ರಶ್ನೆ ಕೇಳಲು ಸಾಧ್ಯ ಎನ್ನುವುದು ಈ ಕೃತಿ  ಓದಿದ ಮೇಲೆಯೇ ನನಗೆ ಹೊಳೆಯಿತು. ನೋಡಿ, ಭಾಷೆಯೊಂದರ ಕುರಿತಾದ ಪ್ರೀತಿ ಮತ್ತು ಹೆಮ್ಮೆ ನಮ್ಮಲ್ಲಿ ಮೂಡಿಸಬಹುದಾದ ವಿಚಾರ ಸರಣಿ ಹೀಗಿರಬೇಕೆನಿಸುತ್ತದೆ! ಜನರ ಸರ್ವಾಂಗೀಣ ಹಿತಾಸಕ್ತಿ, ಜ್ನಾನನಿರ್ವಹಣೆಯ ಸವಾಲುಗಳನ್ನು ಎದುರಿಸಲು ಭಾರತೀಯ ಭಾಷೆಗಳನ್ನು ಸಜ್ಜುಗೊಳಿಸುವ ಕೆಲಸ ಯಾಕೆ ಆಗಿಲ್ಲ, ಆಗುತ್ತಿಲ್ಲ ಎಂಬ ಪ್ರಶ್ನೆಯನ್ನು ಮೇಟಿ ಮಲ್ಲಿಕಾರ್ಜುನ ಎತ್ತುತ್ತಾರೆ. ಶಿಕ್ಷಣದಲ್ಲಿ ಇಂಗ್ಲೀಶು ನುಡಿಗಿರುವ ಪ್ರಾಧಾನ್ಯತೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಪಟ್ಟಭದ್ರ ಹಿತಾಸಕ್ತಿಯಿಂದಾಗಿ ಬಂದದ್ದು ಎನ್ನುವ ಲೇಖಕರು, ಶಿಕ್ಷಣ ಯಾವ ಮಾಧ್ಯಮದಲ್ಲಿರಬೇಕು ಎಂಬ ಹಳೆಯ ಪ್ರಶ್ನೆಯನ್ನು ಈ ಹಿನ್ನೆಲೆಯಲ್ಲಿ ಎತ್ತುವ ಮೂಲಕ ಹೊಸ ಹೊಳಹುಗಳ ದಾರಿಸೂಚಿಸಿದ್ದಾರೆ. 

ಕನ್ನಡದ ಸಾರ್ವಜನಿಕ ವಲಯದಲ್ಲಿ ಕನ್ನಡದ ಕುರಿತಾದ ಸಂಕಥನಗಳು ಸಾಮಾನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರೆಯಬೇಕು ಎನ್ನುವ ಬೇಡಿಕೆಯ ಸುತ್ತ ಸುತ್ತುಹೊಡೆಯುತ್ತಿರುತ್ತವೆ. ಹಾಗಾದಮಾತ್ರಕ್ಕೆ ಕನ್ನಡ ನುಡಿಯ ಸಮಸ್ಯೆಗಳು ದೂರ ಆಗುವುದಿಲ್ಲ ಎಂಬ ತುಂಬ ಸರಳ, ಆದರೆ ಅತ್ಯಂತ ಗಂಭೀರ ಪ್ರಮೇಯವನ್ನು ಮಂಡಿಸುವ ಮೂಲಕ ಮೇಟಿ ಮಲ್ಲಿಕಾರ್ಜುನ ಅವರು ಕರ್ನಾಟಕದಲ್ಲಿ ಕನ್ನಡದ ಕುರಿತಾಗಿ ನಡೆಯುತ್ತಿರುವ ಚರ್ಚೆಗಳಿಗೆ ಭಿನ್ನ ಆಯಾಮಗಳನ್ನು ಸೂಚಿಸುತ್ತಾರೆ. ಕನ್ನಡ ನುಡಿಯ ಮೂಲಕವೇ ಲೋಕಗ್ರಹಿಕೆ, ಆಲೋಚನಾಕ್ರಮ ಮತ್ತು ಜ್ನಾನನಿರ್ಮಿತಿಗಳಾಗುವ ಅವಶ್ಯಕತೆಯಿದೆಯೆಂಬ ಅವರ ವಾದ ನನ್ನ ಕಣ್ಣು ತೆರೆಸಿದ್ದಂತೂ ನಿಜ. ಕನ್ನಡದಲ್ಲಿ ಜ್ನಾನಶಿಸ್ತುಗಳು ಬೆಳೆಯಬೇಕು ಎಂಬ ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ, ಲೇಖಕರ ನೋಟ ವಿಶಿಷ್ಟವಾಗಿದೆ. ಕನ್ನಡ ನುಡಿಸಮುದಾಯದ ಅಗತ್ಯಗಳಿಗನುಗುಣವಾದ ಜ್ನಾನನಿರ್ಮಿತಿಯ ಅವಶ್ಯಕತೆ, ಮತ್ತು ಅಂತಹ ಜ್ನಾನನಿರ್ಮಿತಿಯ ಮಾರ್ಗಗಳನ್ನು ಶೋಧಿಸುವ ಅಗತ್ಯಕ್ಕೆ ಅವರು ಒತ್ತು ಕೊಡುತ್ತಾರೆ. ಕನ್ನಡವನ್ನು ಕೇವಲ ಪಡೆಯುವ ಭಾಷೆಯಾಗಿಸದೇ, ಜ್ನಾನವನ್ನು ಒದಗಿಸುವ ನುಡಿಯಾಗಿ ಬೆಳೆಸಬೇಕು ಎನ್ನುವ ಕ್ರಾಂತಿಕಾರಿ ಯೋಚನೆಗೆ ಲೇಖಕರು ಒತ್ತು ಕೊಟ್ಟಿದ್ದಾರೆ.   

ಭಾಷೆಯ ಕುರಿತಾದ ಸಂಕಥನಗಳಲ್ಲಿ ಭಾವುಕತೆ, ರಮಣೀಯತೆ, ಭಕ್ತಿ ಅತಿಯಾಗಿ, ಸಾಮಾಜಿಕ ವಾಸ್ತವಗಳ ಕಡೆಗಿನ ಲಕ್ಷ್ಯ ಕಮ್ಮಿಯಾದರೆ ಕಷ್ಟ. ಭಾಷೆಯೆನ್ನುವುದು ಮೌಲ್ಯನಿರಪೇಕ್ಷವಾದ ಅಮಾಯಕ ಸಂಗತಿಯಲ್ಲ, ಅಸ್ಮಿತೆಯನ್ನು ಮೆರೆಯುವ ತೋರುಬಟ್ಟೆಯಲ್ಲ. ಪಾರಂಪರಿಕ ಭಾಷಾ ಪಾಂಡಿತ್ಯವು ಭಾಷೆಯ ಸಾಮಾಜಿಕ-ರಾಜಕೀಯ ಸಂಧರ್ಭವನ್ನು ಉಪೇಕ್ಷಿಸಿ, ಭಾಷೆಯೂ ಹೇಗೆ ದಮನಕಾರಿ ನಡವಳಿಕೆಯ, ದಬ್ಬಾಳಿಕೆಯ ಸಾಧನವಾಗಿರುತ್ತದೆ ಎನ್ನುವುದನ್ನು ಮರೆಮಾಚಿದೆ. ವಾಸ್ತವವನ್ನು ಗ್ರಹಿಸುವ, ಅರಿಯುವ ಮೂಲಭೂತ ಚೌಕಟ್ಟು ನಮಗೆ ಭಾಷೆಯಿಂದಲೇ ದೊರಕಿರುತ್ತದೆ; ಮರೆಯಬಾರದ ಅಂಶವೆಂದರೆ, ಇದೇ ಪ್ರಕ್ರಿಯೆಯಲ್ಲಿ ಭಾಷೆ ಲಿಂಗಜಾತಿವರ್ಗಾಸಕ್ತಿಗಳನ್ನು ಗುಪ್ತವಾಗಿ ಪ್ರಸಾರ ಮಾಡುತ್ತಿರುತ್ತದೆ. ಯಜಮಾನ್ಯದ ಅಧಿಕಾರ ಮತ್ತು ಸಿದ್ಧಾಂತಗಳನ್ನು ರೂಪಿಸುವ, ನಿರ್ವಹಿಸುವ, ಮತ್ತು ಪುನರುತ್ಪಾದಿಸುವ ಸಲಕರಣೆಯೂ ಆಗಿರುತ್ತದೆ. ಸಾಮಾಜಿಕ ಸಂಬಂಧಗಳ ಏರ್ಪಾಡಿನಲ್ಲಿ, ಮತ್ತವುಗಳನ್ನು ನವೀಕರಿಸುವ ಪ್ರಕ್ರಿಯೆಗಳಲ್ಲಿಯೂ ಭಾಷೆಯ ಕೊಡುಗೆ ಇರುತ್ತದೆ. ಸಾಂಸ್ಕೃತಿಕ ಮಾಹಿತಿ ಮತ್ತು ತಿಳುವಳಿಕೆ ಸಮಾಜದಲ್ಲಿ ಪ್ರಸ್ತುತಗೊಳ್ಳುವ ವಿಧಾನದಲ್ಲಿ, ಯಾವ ಭಾಷೆಯ ಮುಖಾಂತರ ಆಗುತ್ತಿದೆಯೆನ್ನುವುದೂ ಕೂಡ ಮಹತ್ವದ್ದಾಗುತ್ತದೆ. ಭಾರತೀಯ ಸಂಧರ್ಭದಲ್ಲಿ ಇದಕ್ಕೆ ಸಾಕ್ಷಿ ಎಂದರೆ, ಮೇಟಿ ಮಲ್ಲಿಕಾರ್ಜುನ ಅವರು ಹೇಳಿರುವಂತೆ, ಒಳಯಜಮಾನ್ಯದ ಸಂಸ್ಕೃತ ಮತ್ತು ಹೊರಯಜಮಾನ್ಯದ ಇಂಗ್ಲೀಶು ನುಡಿಗಳಿಗಿರುವ ಅಧಿಕಾರ. ಉದಾಹರಣೆಗೆ, ಇಂಗ್ಲೀಷನ್ನು ಅಂತರರಾಷ್ಟ್ರೀಯ ಭಾಷೆಯೆಂದು ಪ್ರಚುರ ಪಡಿಸುವುದು ವ್ಯಾಪಾರ-ವಹಿವಾಟಿನ ಸಂಗತಿಯೇ ಆಗಿದ್ದು, ಇಂಗ್ಲೀಷನ್ನು ವಿಶ್ವ ಭಾಷೆಯಾಗಿಸುವುದರ ಹಿಂದೆ ಆರ್ಥಿಕ ಹಿತಾಸಕ್ತಿ ಕೆಲಸ ಮಾಡುತ್ತಿದೆ. 

ಭಾರತದ ಭಾಷಾ ಪರಿಸರದ ಮುಖ್ಯ ಗುರುತಾದ ಬಹುಭಾಷಿಕತೆಯನ್ನು ಚರ್ಚಿಸುತ್ತ, ಮೇಟಿ ಮಲ್ಲಿಕಾರ್ಜುನ ಒಂದು ಮಾತು ಹೇಳುತ್ತಾರೆ: “ಭಾರತದ ತಿಳಿವಿನ, ಭಾಷಿಕ ಹಾಗೂ ಸಾಂಸ್ಕೃತಿಕ ಏಕರೂಪೀಕರಣದ ಹುನ್ನಾರಗಳು… ದೇಶೀ ನುಡಿಗಳ ಕಸುವನ್ನು ಅಲ್ಲಗೆಳೆಯುವ ಮತ್ತು ಆಯಾ ಸಮೂಹಗಳ ಬೌದ್ಧಿಕ ವಿನ್ಯಾಸಗಳನ್ನು ನಿರಾಕರಿಸುವ ತಂತ್ರಗಳನ್ನು ಒಳಯಜಮಾನ್ಯ (ಸಂಸ್ಕೃತ) ಹಾಗೂ ಹೊರಯಜಮಾನ್ಯ (ಇಂಗ್ಲೀಶು) ನುಡಿಗಳಿಂದ ರೂಪಿಸುತ್ತಲೇ ಬರಲಾಗಿದೆ” (ಪು.60). ಆದುದರಿಂದಲೇ, ಲೇಖಕರ ದೃಷ್ಟಿಯಲ್ಲಿ ಸಮಕಾಲೀನ ಭಾರತದ ಹಲವು ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಇಂಗ್ಲೀಶು ಮೂಲ ಕಾರಣವಾಗಿದೆ (ಪು.68).

ಲಿಂಗಜಾತಿವರ್ಗಸಂಬಂಧೀ ಸಾಮಾಜಿಕ ಒಡಕುಗಳ ಹಿನ್ನೆಲೆಯು ಇಂಗ್ಲೀಶು ಭಾಷೆಗೆ ಯಾಕೆ ಒತ್ತಾಸೆಯಾಗಿ ದೊರಕಿದೆಯೆಂಬ ಪ್ರಶ್ನೆಯೂ ಮುಖ್ಯವೇ. ಸಾಮಾಜಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಭಾರತೀಯ ಭಾಷೆಗಳಿಗೆ ಪರ್ಯಾಯವಾಗಿ ಇಂಗ್ಲೀಶು ಬಳಕೆಯ ಪ್ರಯೋಗಗಳ ಕುರಿತು ಚರ್ಚೆ ನಡೆಸುವ ಲೇಖಕರು, ತುಂಬ ಸ್ಪಷ್ಟವಾಗಿ “ಇಂಗ್ಲೀಶು ವಿಮೋಚನೆಯ ದಾರಿಯಾಗಲಾರದು” ಎನ್ನುತ್ತಾರೆ. (ಪು. 41). ಸಾಮಾಜಿಕ-ಆರ್ಥಿಕ ಮೇಲ್ನಡಿಗೆಗೆ ಇಂಗ್ಲೀಶು ನುಡಿಯೊಂದು ಅಸ್ತ್ರವೆನ್ನುವುದು ಮಾರುಕಟ್ಟೆಯ ಸೈದ್ಧಾಂತಿಕತೆಯ ಭಾಗವೆಂದು ಲೇಖಕರು ತಳ್ಳಿಹಾಕುತ್ತಾರೆ. ಒಟ್ಟಾರೆ, ಶಿಕ್ಷಣ ಮಾಧ್ಯಮವಾಗಿ, ಸಾಮಾಜಿಕ ವಿಮೋಚನೆಯ ಅಸ್ತ್ರವಾಗಿ, ಸಂಪರ್ಕ ಭಾಷೆಯಾಗಿ, ಜ್ನಾನಮಾಹಿತಿಗಳಿಗೆ ಆಕರವಾಗಿ, ಅಂತರರಾಷ್ಟೀಯ ಆರ್ಥಿಕತೆಯ ಭಾಷೆಯಾಗಿ – ಹೀಗೆ ಎಲ್ಲ ಸ್ತರಗಳಲ್ಲಿಯೂ ಇಂಗ್ಲೀಶಿನ ಅನಿವಾರ್ಯತೆಯ ಕುರಿತಾಗಿ ಕಟ್ಟಿರುವ ಸಂಕಥನಗಳನ್ನೇ “ಇಂಗ್ಲೀಷ ಸಂಕಥನ” ಎನ್ನುವ ಮೇಟಿ ಮಲ್ಲಿಕಾರ್ಜುನ ಅವರು, ತಮ್ಮ  ಪ್ರಭಂಧಗಳಲ್ಲಿ ಅನಿವಾರ್ಯತೆಯ ಈ ತರ್ಕವನ್ನು ತೀಕ್ಷ್ಣವಾಗಿ ಟೀಕಿಸಿ ತಿರಸ್ಕರಿಸುವುದು ನನ್ನನ್ನು ಬಹುವಾಗಿ ಪ್ರಭಾವಿಸಿದೆ.    

ಮೇಟಿ ಮಲ್ಲಿಕಾರ್ಜುನ ಅವರ “ಇಂಗ್ಲೀಷ ಸಂಕಥನ” ಹಾಗಾಗಿಯೇ ತುಂಬ ಸತರ್ಕ ವಾದಗಳನ್ನು ಮಂಡಿಸುವ ಕೃತಿಯಾಗಿದೆ. ಅವರೇ ಹೇಳಿರುವಂತೆ, “ಈ ಬರಹದ ಆಸಕ್ತಿ ಕೇವಲ ಇಂಗ್ಲೀಶಿನ ಯಜಮಾನಿಕೆಯನ್ನು ಅರಿಯುವುದಲ್ಲ. ಹೊರತಾಗಿ, ಈ ನುಡಿಯ ಬಳಕೆ, ಆಯ್ಕೆ, ಆಚರಣೆಯ ಪರಿಣಾಮವಾಗಿ ಕನ್ನಡ ಇಲ್ಲವೇ ಇಂತಹ ದೇಶೀ ನುಡಿಗಳ ವ್ಯಕ್ತಿತ್ವದಲ್ಲಿ ಏನೆಲ್ಲ ಬದಲಾವಣೆಗಳು ಏರ್ಪಡುತ್ತವೆ, ಈ ಬದಲಾವಣೆಗಳು ಉಂಟುಮಾಡುವ ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಪರಿಣಾಮಗಳು ಎಂತಹವು ಎಂಬುದನ್ನು ವಿಶ್ಲೇಷಿಸುವುದು ಒಂದು ಆಯಾಮವಾದರೆ, ಈ ಪ್ರಭಾವ ಮತ್ತು ಪರಿಣಾಮಗಳಿಗೆ ಕನ್ನಡವು ಹೇಗೆ ಪ್ರತಿಕ್ರಿಯೆ ತೋರಿಸಿದೆ ಇಲ್ಲವೇ ಇದು ರೂಪಿಸಿಕೊಂಡ ಪ್ರತಿರೋಧದ ವಿನ್ಯಾಸಗಳೆಂತಹವು ಎಂಬುದನ್ನು ಬಿಡಿಸಿ ನೋಡುವುದು ಈ ಬರಹದ ಮತ್ತೊಂದು ಆಯಾಮವಾಗಿರುತ್ತದೆ” (ಪು.74). ಕನ್ನಡ ಮತ್ತು ಭಾರತೀಯ ಭಾಷೆಗಳ ಸಂಧರ್ಭದಲ್ಲಿ ಇದಕ್ಕಿಂತ ತುರ್ತು ಅಧ್ಯಯನದ ಸಂಗತಿ ಬೇರೆ ಇರಲಾರದು ಎಂದೇ ನಾನು ಭಾವಿಸಿದ್ದೇನೆ.   

ಇನ್ನೂ ಒಂದು ಕಾರಣಕ್ಕೆ ಮೇಟಿ ಮಲ್ಲಿಕಾರ್ಜುನ ಅವರ “ಇಂಗ್ಲೀಷ ಸಂಕಥನ” ತುಂಬ ಮುಖ್ಯವೆಂದು ನನಗನಿಸಿದೆ. ಅದೆಂದರೆ, ಕನ್ನಡ ನುಡಿಯ ಕುರಿತಾಗಿ ಸಾಮಾಜಿಕ ಬದ್ಧತೆಯೊಂದಿಗೆ, ಸಮಾನತೆಯ ಆಶಯದೊಂದಿಗೆ, ಭಾವನಾತ್ಮಕ ಪ್ರೀತಿಯಿಂದ, ಕ್ರಮಬದ್ಧ ರೀತಿಯಿಂದ ನಿಖರವಾದ, ವೈಜ್ನಾನಿಕವಾದ ತರ್ಕಗಳನ್ನು ಇಲ್ಲಿ ಮಂಡಿಸಲಾಗಿದೆ. ಹಾಗಾಗಿಯೇ ಈ ಕೃತಿ, ಕನ್ನಡ ನಾಡುನುಡಿ ಕುರಿತಾದ ಅತಿ ಉತ್ಸಾಹದ ಕನಸಿನ ಮಂಡಕ್ಕಿಯಾಗಿರದೇ, ಕನ್ನಡ ಭಾಷಿಕ ಸಮುದಾಯ ಆಯ್ದುಕೊಳ್ಳಬೇಕಾಗಿರುವ ದಾರಿ, ಜಾರಿಗೆ ತರಬೇಕಿರುವ ಪಾಲಿಸಿಗಳನ್ನು ಸ್ಪಷ್ಟವಾಗಿ ಸೂಚಿಸುವ ಕಾರ್ಯಯೋಜನೆಯ ರೂಪದಲ್ಲಿದೆ. 

ಸಮಾನತೆ ಹಾಗೂ ನ್ಯಾಯಸಹಿತ ಪ್ರಜಾಸತ್ತಾತ್ಮಕ ಮೌಲ್ಯಗಳನ್ನಾಧರಿಸಿದ, ವೈಚಾರಿಕ ಸ್ಪಷ್ಟತೆಯುಳ್ಳ ಸಾಮಾಜಿಕಭಾಷಾಶಾಸ್ತ್ರೀಯ ಅಧ್ಯಯನ ವಿಧಾನವೊಂದು ಕನ್ನಡ ನುಡಿಯ ಅಭ್ಯಾಸಕರಿಗೆ, ವಿಧ್ಯಾರ್ಥಿಗಳಿಗೆ ಈ ಕೃತಿಯ ಮೂಲಕ ಒದಗುತ್ತಿರುವುದು ಸಂತೋಷದ ಸಂಗತಿಯಾಗಿದೆ.

‍ಲೇಖಕರು Admin

January 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: