ಕನ್ನಡ ಕುರಿತ ಮಗಳ ಪತ್ರ…

ಚಿತ್ರ : ಸಿದ್ದರಾಮ ಕೂಡ್ಲಿಗಿ

ನಮ್ಮ ಮಗಳು ಅಪೂರ್ವ ನಮಗೆ ಬರೆದ ಪತ್ರ. ಇದು ವೈಯಕ್ತಿಕ ಪತ್ರವಾಗಿದ್ದರೂ ಕನ್ನಡಕ್ಕೆ ಸಂಬಂಧಿಸಿದಂತೆ ಇರುವುದರಿಂದ ಇಲ್ಲಿ ಪ್ರಕಟಿಸುತ್ತಿರುವೆ.

ಪ್ರೀತಿಯ ಅಪ್ಪ, ಅಮ್ಮನಿಗೆ,
ಇಂದು ನವೆಂಬರ್ 1, ಕನ್ನಡ ರಾಜ್ಯೋತ್ಸವದ ದಿನ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಿರಲು ಬಿಡದೆ ನಿತ್ಯವೂ ಕನ್ನಡದ ದಿನ ಎನ್ನುವಂತೆ ನಮಗೆ ತಿಳಿಸಿದ್ದಕ್ಕೆ ನಾನು ಸದಾ ಋಣಿ.

ನಾವು ಶಾಲೆಗೆ ಹೋಗುವ ಸಮಯದಲ್ಲಿ ನಿಮ್ಮ ಸ್ನೇಹಿತರ ಬಳಗದವರ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿದ್ದ ವಿಷಯ ತಿಳಿದಿದ್ದರೂ ಸಹ ಯಾವುದೇ ಪೂರ್ವಾಗ್ರಹಪೀಡಿತರಾಗದೆ ನನ್ನನ್ನು ಹಾಗೂ ತಮ್ಮನನ್ನು ಕನ್ನಡ ಶಾಲೆಗೆ ಹಟಕ್ಕೆ ಬಿದ್ದು ಸೇರಿಸಿದ್ದು ನನಗಿನ್ನೂ ನೆನಪಿದೆ.

ಹಟಕ್ಕೆ ಬಿದ್ದು ಸೇರಿಸಿದ್ದು ಅಂದರೆ ಯಾರಿಗೂ ಏನನ್ನೂ ತೋರಿಸಲಿಕ್ಕೆ ಅಂತ ಅಲ್ಲ. ಕನ್ನಡದ ಮೇಲಿನ ಪ್ರೀತಿ, ಹೆಮ್ಮೆಯ ಸಲುವಾಗಿ. ಮಾತೃಭಾಷೆಯ ಬಗೆಗಿನ ಅಪಾರ ಪ್ರೀತಿಯಿಂದಲೇ ನಮಗೆ ಮನೆಯಲ್ಲಿ ಸದಾ ಕನ್ನಡದ ಭಾವಗೀತೆಯ ಹಾಡುಗಳು, ಗಾದೆಮಾತುಗಳು, ನುಡಿಗಟ್ಟುಗಳು ಕೇಳಲು ಸಿಗುತ್ತಿದ್ದವು. ಅಂದು ಕೇಳಿದ ಹಾಡುಗಳು ಇಂದಿಗೂ ನೆನಪಿವೆ.

ಕೆಲವೊಮ್ಮೆ ನಿಮ್ಮ ಸ್ನೇಹಿತರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿದರೆ ಭವಿಷ್ಯ ಉತ್ತಮವಾಗಿರುತ್ತದೆ ಇಲ್ಲದಿದ್ದರೆ ಮುಂದಿನ ತರಗತಿಗಳಲ್ಲಿ ಆಂಗ್ಲ ಭಾಷೆ ಕಬ್ಬಿಣದ ಕಡಲೆಯಾಗುತ್ತದೆ ಎಂದೆಲ್ಲ ಸಲಹೆಗಳನ್ನು ನೀಡಿದಾಗಲೂ ಸಹ ನೀವು ನಮಗೆ ತಿಳಿಹೇಳಿದ್ದು ಓದುವವರು ಎಲ್ಲಿಯಾದರೂ ಓದುತ್ತಾರೆ, ಕನ್ನಡ ಮಾಧ್ಯಮದಲ್ಲಿ ಓದಿದರೆ ಮುಂದೆ ಭವಿಷ್ಯವಿಲ್ಲ ಎನ್ನುವುದೆಲ್ಲ ತಪ್ಪು ಗ್ರಹಿಕೆ ಎಂದು ಹೇಳಿದಿರಿ. ಅಪ್ಪ, ಅಮ್ಮ ಎನ್ನುವುದರಿಂದ ಹಿಡಿದು ಪ್ರತಿ ಹಂತದಲ್ಲಿಯೂ ಕನ್ನಡ ಬಳಕೆ, ಅಗತ್ಯತೆಯ ಬಗ್ಗೆ ತಿಳಿಸಿದಿರಿ.

ನಮ್ಮ (ನನ್ನ ಹಾಗೂ ತಮ್ಮನ) ಪದವಿ ಶಿಕ್ಷಣದಲ್ಲಿ ಎಂದಿಗೂ ನಮಗೆ ಆಂಗ್ಲ ಭಾಷೆ ತೊಡಕಾಗಲಿಲ್ಲ. ಯಾಕೆಂದರೆ ಓದಬೇಕು ಎನ್ನುವ ಹಂಬಲ ಇರುವಲ್ಲಿ ಯಾವುದೂ ಕಷ್ಟವಲ್ಲ ಅಸಾಧ್ಯವಲ್ಲ ಎಂಬುದನ್ನು ನೀವು ತೋರಿಸಿಕೊಟ್ಟಿರಿ. ಕನ್ನಡ ಮಾಧ್ಯಮದಲ್ಲಿಯೇ ಕಲಿತು ನಾನು, ತಮ್ಮ ಇಬ್ಬರೂ ಪದವಿಯಲ್ಲಿ (ಆಂಗ್ಲ ಮಾಧ್ಯಮ) ಕಾಲೇಜಿಗೆ 1 ರಿಂದ 5ನೇ ಶ್ರೇಣಿಯಲ್ಲಿ ಒಂದು ಉತ್ತಮ ಶ್ರೇಣಿಯನ್ನು ಗಳಿಸಿದ್ದನ್ನು ಹೇಳಲು ಅತ್ಯಂತ ಖುಷಿ ಎನಿಸುತ್ತದೆ.

ನಾವಿಬ್ಬರೂ ಈಗ ಆಂಗ್ಲ ಮಾಧ್ಯಮದಲ್ಲಿಯೇ ವ್ಯವಹರಿಸುವ ಒಂದೊಂದು ಅನ್ಯ ರಾಷ್ಟ್ರಗಳ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದೇವೆಂದರೆ ಅದಕ್ಕೆ ಕಾರಣ ನಿಮ್ಮ ಹಾಗೂ ಕನ್ನಡದ ಪ್ರೇರಣೆ ಹಾಗೂ ಸ್ಫೂರ್ತಿ.

ತಮ್ಮನಂತೂ ಕೇವಲ 2-3 ವರ್ಷಗಳಲ್ಲಿಯೇ ತನಗೆ ಬೇಕಾದ ವಿದೇಶ ಪ್ರವಾಸವನ್ನು ತನ್ನ ಸ್ವಂತ ಖರ್ಚಿನಲ್ಲಿಯೇ (ಸಾಕಷ್ಟು ಜನ ವಿದೇಶದ ಅವಕಾಶಕ್ಕಾಗಿ ಹಲವಾರು ವರ್ಷ ಕಾಯ್ದು ಕುಳಿತಿರುತ್ತಾರೆ) ಮಾಡುವಷ್ಟು ಸ್ಥಿತಿವಂತನಾಗಿದ್ದಾನೆಂದರೆ ಅದು ಕನ್ನಡ ಮಾಧ್ಯಮದಲ್ಲಿ ಓದಿದ ಕೊಡುಗೆ.

ಈಗ ಪುಟ್ಟ ಮಕ್ಕಳಿಗೆ ಬೇಗನೆ (2-3 ವರ್ಷದವರಿಗೆ) ಆಂಗ್ಲ ಭಾಷೆಯಲ್ಲಿಯೇ ಹಾಡಲಿ, ಕಲಿಯಲಿ ಎಂದು ಒತ್ತಾಯಿಸುತ್ತಿರುವುದು, ಪೋಷಕರು ತಮ್ಮ ಮಕ್ಕಗಳಿಗೆ ಅಪ್ಪ, ಅಮ್ಮ ಎನ್ನುವುದರಿಂದ ಹಿಡಿದು ಎಲ್ಲವನ್ನೂ ಆಂಗ್ಲ ಭಾಷೆಯಲ್ಲಿಯೇ ವ್ಯವಹರಿಸಲು ಮಕ್ಕಳಿಗೆ ಹಿಂಸೆ ಕೊಡುವುದನ್ನು ನೋಡಿ ಮನಸಿಗೆ ಖೇದವೆನಿಸುತ್ತದೆ.

ನಮಗೆ ನಮ್ಮ ಭಾಷೆಯ ಬಗ್ಗೆ ಇರದ ಮೋಹ ಪರಭಾಷೆಯ ಮೇಲೆ ಯಾಕೋ ತಿಳಿಯದು. ಭಾಷೆಯ ಬಗ್ಗೆ ಹೆಮ್ಮೆ ಹೇಗಿರಬೇಕೆಂದು ತಿಳಿಯಲು ಚೀನಿಯರು, ಜಪಾನೀಯರು, ಜರ್ಮನ್ನರು ಉತ್ತಮ ಉದಾಹರಣೆ.

ನಮ್ಮ ತಾಯಿಯನ್ನು ಮೊದಲು ಪ್ರೀತಿಸುವುದನ್ನು ಕಲಿಯೋಣ ಹಾಗೆಯೇ ಬೇರೆ ಭಾಷೆಯ ಬಗ್ಗೆಯೂ ಗೌರವವಿರಲಿ ಎಂದು ನೀವು ಕಲಿಸಿದಿರಿ. ನಿಮ್ಮಂತೆ ಕನ್ನಡಿಗರೆಲ್ಲರ ಮನೆಯಲ್ಲಿಯೂ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿದ್ದಾಗ ಕರ್ನಾಟಕದಲ್ಲಿಯೇ ಕನ್ನಡವನ್ನು ರಕ್ಷಿಸಲು ಬೇರೆ ಸಂಘಟನೆಗಳ ಅಗತ್ಯವೇ ಇರುವುದಿಲ್ಲ ಎಂದು ನನಗೆ ಮನದಟ್ಟಾಗಿದೆ. ನವೆಂಬರ್ ಒಂದರಂದೇ ಕನ್ನಡವನ್ನು ನೆನೆಯುವುದಲ್ಲ, ಅದು ಪ್ರತಿ ಕ್ಷಣವೂ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ.

ಕನ್ನಡದ ಪಾಠ ಹೇಳಿಕೊಟ್ಟ ಅಜ್ಜ, ಅಜ್ಜಿ ಹಾಗೂ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
ಎಂದೆಂದಿಗೂ ಕನ್ನಡತಿ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಜೈ ಭುವನೇಶ್ವರಿ.
ನಿಮ್ಮ ಮಗಳು

ಅಪೂರ್ವ ಹಿರೇಮಠ

‍ಲೇಖಕರು Admin

November 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: