ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸು ಕಾಣುವ ಹೊತ್ತಲ್ಲ..

ವಿಶಾಲ್ ಕುಮಾರ್ 

ಕನಸು ಕಾಣುವ ಹೊತ್ತಲ್ಲ ಸಖಿ,
ವಾಸ್ತವತೆ ಬೆನ್ನಟ್ಟಿ ಬರುತಿದೆ ನನ್ನನ್ನು
ಬರಿ ನನ್ನನ್ನೇ ಅಲ್ಲ ನಿನ್ನನ್ನು, ಅವನನ್ನು, ಇವಳನ್ನು
ಅಷ್ಟೆ ಏಕೆ ಇಡೀ ದೇಶವನ್ನು.

ಕಡ್ಡಿಯ ಮೇಲೆ ಕಡ್ಡಿ ಉರಿಸಿದರು,
ಬೂದಿಯ ಮೇಲೆ ಬೂದಿ ಮುಚ್ಚಿದರು,
ಮಣಗಟ್ಟಲೆ ಹಾಳೆಯ ಮೇಲೆ ಮಸಿಯ ಓಕುಳಿ ಆಡಿದರು,
ಗೋಡೆಗಳ ಮೇಲೆ ಎಷ್ಟೇ ಗೀಚಿದರೂ
ನಿಲ್ಲುವುದೇನು ಈ ರಕ್ತ ಹಪಾಹಪಿ.
ದೊರೆ, ದೊರೆಮಕ್ಕಳ ಮತ್ತವರ ಮಂತ್ರಿಗಳ ದುರಾಸೆಯ ಸೆರಗು,
ಚಾಚಿದಷ್ಟು ಚಾಚುವಷ್ಟು ಚಟ ಅವರಿಗೆ.

ಮಾತೆ ಮಾತೆ ಎಂದು ಅವಳ ಗರ್ಭಪಾತ ಮಾಡುವ ತಾಯ್ಗಳ್ಳರು,
ತಾನು ತಿಂದುದ್ದ ಮೇಕೆಗೆ ಸವರುವ ಕೋತಿಯ ಹಿಂಬಾಲಕರು,
ಉಣ್ಣುವ ಅನ್ನಕ್ಕೆ, ಬಿತ್ತುವ ನೇಗಿಲಿಗೆ, 
ದುಡಿಯುವ ಕೈಗಳಿಗೆ ದಾಖಲೆಯ ಕೇಳುವ ದೊರೆ.
ಬೆನ್ನೆಲುಬ ಎದೆಯಲ್ಲಿ ಕಿಚ್ಚು ಹತ್ತಿದರೆ ನೀರೆರೆಚುವ,
ಕೇಳದಿರೆ ನೆತ್ತಿಗೆ ಮೊಳೆ ಹೊಡೆಯುವ ಮೂಕರು.
ಬೆಡ್ಡಲ್ಲಿ, ಬ್ರೆಡ್ಡಲ್ಲಿ, ಪ್ರಾಣವಾಯುವಿನಲ್ಲೂ ಕೂಡ ಕದಿಯುವ ಖದೀಮರು.
ಕೇಳಿದರೆ ಬರೀ ದೇವರ ತೋರಿಸುವವರ 
ಕೈಗೆ ದೇಶ ಕೊಟ್ಟು ಕುಂತಿದ್ದೇವೆ ಸಖಿ.

ಇದು ಕನಸ ಕಾಣುವ ಹೊತ್ತಲ್ಲ,
ಕನಸೇನು ನಿದ್ರೆ ಕೂಡ ಬರುತ್ತಿಲ್ಲ.
ಇನ್ನು ಜಾಗೃತ ಆಗಬೇಕು.
ಕನಸು ಕನಸಿನ ಮಾತು…

‍ಲೇಖಕರು Admin

6 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading