ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕದ ತಿನ್ನೋರ ಮನೆಗೆ ಹಪ್ಪಳಕ್ಕೆ ಹೋದರು'

ನನ್ನ ಬ್ಯಾಂಕ್ ಕೆಲಸದ ಮೊದಲ ದಿನ
ರೇಣುಕಾ ಮಂಜುನಾಥ್
ಭಾರತೀಯ ಸ್ಟೇಟ್ ಬ್ಯಾಂಕಿನಿಂದ ಸ್ವಯಂ ನಿವೃತ್ತಿ ಪಡೆದು ಎರಡು ದಶಕವೇ ಸರಿದಿದೆ…
ಅಲ್ಲಿ ವೃತ್ತಿಗೆ ಸೇರಿ ನಾಲ್ಕು ದಶಕಗಳು ದಾಟಿವೆ… ಆದರೆ ನಾನು ಬ್ಯಾಂಕ್ ಸೇರಿದ ಮೊದಲ ದಿನ ಮಾತ್ರ ಹಚ್ಚಹಸುರಾಗಿದೆ…
ತಂದೆಯ ಉದ್ಯೋಗದಿಂದಾಗಿ ಹಳ್ಳಿಗಾಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತಿದ್ದ ನಾನು ಬೆಂಗಳೂರಿನ ಸಾವಿರಾರು ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸಿ, ಹದಿನಾಲ್ಕನೆಯವಳಾಗಿ ಬ್ಯಾಂಕಿಗೆ ಆಯ್ಕೆಯಾಗಿದ್ದು ಮತ್ತು ಎಪ್ಪತ್ತರ ದಶಕದ ಆಗಿನ ಸಂದರ್ಭಕ್ಕೆ ಅತ್ಯುತ್ತಮ ಉದ್ಯೋಗವೆಂದು ಪರಿಗಣಿಸಲಾಗಿದ್ದ ‘ಬ್ಯಾಂಕ್ ಉದ್ಯೋಗಿ’ಯಾಗಿದ್ದು ಎಲ್ಲವೂ ಇಂದಿಗೂ ಅತ್ಯಂತ ಖುಷಿ ತರುವ ವಿಷಯ.
ಕೊನೆಗೆ, 1978ರ ಮೇ ತಿಂಗಳು 3ರಂದು ಆಯ್ಕೆ ಪತ್ರ ಹಿಡಿದು ರಾಜಾಜಿನಗರದ ಕೈಗಾರಿಕಾ ಶಾಖೆಗೆ ಹೋಗಿ ಮ್ಯಾನೇಜರ್ ಮುಂದೆ ಕುಳಿತೆ.
ಅವರು ನನ್ನ ಬಗ್ಗೆ ಕೆಲ ಪ್ರಾಥಮಿಕ ವಿಷಯಗಳನ್ನು ವಿಚಾರಿಸಿಕೊಂಡು, ಶಾಖೆಯಲ್ಲಿ ಪ್ರತಿಯೊಬ್ಬರ ಬಳಿ ಕರೆದೊಯ್ದು ಪರಿಚಯಿಸಿದರು. ನಂತರ ತಮ್ಮಕೋಣೆಗೆ ಮರಳಿ, ಅವರ ಮುಂದಿದ್ದ ಬೆಲ್ ಒತ್ತಿ ಮೆಸೆಂಜರ್ ಕರೆದರು. ಅವನು ಬಂದೊಡನೆ ‘ಇವರನ್ನು ಇಂತಹಾ ಸೀಟ್ ಗೆ ಕರೆದುಕೊಂಡು ಹೋಗು’ ಎಂದರು.
ನನ್ನನ್ನು ಅವನು ಅಲ್ಲಿಗೆ ಒಯ್ದಾಗ, ಅದಾಗಲೇ ಆ ಸೀಟಿನಲ್ಲಿದ್ದಾಕೆ ನನ್ನನ್ನು ನೋಡಿ ಒಂದು ಮುಗುಳ್ನಗೆ ಬೀರುವುದಿರಲಿ, ಮುಖವನ್ನು ಧುಮಗುಡಿಸುತ್ತಾ ಆಕೆಯ ಮೇಲಧಿಕಾರಿ ಬಳಿ ಗೊಣಗಲು ಶುರುವಿಟ್ಟುಕೊಂಡರು. ನನ್ನನ್ನು ಕರೆದು ತಂದವನು ನನ್ನನ್ನು ಪುನಃ ಮ್ಯಾನೇಜರ್ ಬಳಿಗೆ ಕರೆದೊಯ್ದು ಕೂರಿಸಿ ವರದಿ ಒಪ್ಪಿಸಿದ.
ಅದಾಗಿ ಕೆಲವೇ ಕ್ಷಣಗಳಲ್ಲಿ ಅಲ್ಲಿನ ಶಾಖೆಯ ಸ್ಟಾಫ್ ಯೂನಿಯನ್ ಲೀಡರ್ (ನನಗೆ ನಂತರ ತಿಳಿದದ್ದು) ರೂಮಿನ ಬಾಗಿಲನ್ನು ರಭಸವಾಗಿ ನೂಕುತ್ತಾ ಒಳಗೆ ನುಗ್ಗಿದವನೇ ಒರಟೊರಟಾಗಿ “ನೀವು ಆಕೆಯನ್ನು ಆ ಸೀಟಿನಿಂದ ಕದಲಿಸುವಂತಿಲ್ಲ. ಆಫೀಸ್ ಆರ್ಡರ್ ಆರು ತಿಂಗಳಿಗೊಮ್ಮೆ ಎಂಬುದು ಗೊತ್ತಿಲ್ಲವೇ” ಎಂದು ಅರಚಾಡಿದ.
ಅದಕ್ಕೆ ಮ್ಯಾನೇಜರ್ “ಇವರು ಹೊಸಬರಲ್ಲವೇ. ಅವರಿಗೆ ಅಂಚೆ ವಿಲೆವಾರಿ ಬಿಟ್ಟು ಮತ್ಯಾವ ಕೆಲಸ ಮಾಡಿಸಲು ಸಾಧ್ಯ?” ಎಂದರು. ಅದಕ್ಕೆ ಆ ಲೀಡರ್ “ಅದು ನಿಮ್ಮ ತಲೆ ನೋವು, ಏನಾದರೂ ಮಾಡಿಕೊಳ್ಳಿ” ಎಂದನು. ಕೊನೆಗೆ ಮ್ಯಾನೇಜರ್ ತಾವೇ ಎದ್ದು ನನ್ನನ್ನು ಜೊತೆಗೆ ಕರೆದೊಯ್ದು ಶಾಖೆಯ ಮುಖ್ಯ ಹಾಲ್ ಗೆ ಕರೆತಂದು, ಅಲ್ಲಿನ ಅಕೌಂಟೆಂಟ್ ಬಳಿ ಅದೇನೋ ಮಾತಾಡಿದರು. ಅವರೆಲ್ಲಾ ಅಧಿಕಾರಿ ವರ್ಗವಾದ್ದರಿಂದ, ತಮ್ಮ ಸಮಸ್ಯೆಗೆ ಪರಿಹಾರವಾಗಿ ಅಂದಿನ ದಿನದ ಮಟ್ಟಿಗೆ ನನ್ನನ್ನು ಒಂದು ಸೀಟಲ್ಲಿ ಕೂರಿಸಿದರು.
ನಾನು ಅಲ್ಲಿ ಕುಂತೊಡನೆ ಇಡೀ ಹಾಲ್ ನಲ್ಲಿದ್ದ ಎಲ್ಲ ಬ್ಯಾಂಕ್ ಸಹೋದ್ಯೋಗಿಗಳು ಮುಸಿಮುಸಿ ನಗುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ ಎಂಬ ಅರಿವು ನನಗಾಯಿತು. ಅದಾಗಲೇ, ಒಬ್ಬ ಸಹೋದ್ಯೋಗಿ ಮೊದಲು ನನಗೆ ಸೀಟು ಬಿಟ್ಟುಕೊಡದೆ ಧುಮುಗುಟ್ಟಿದ್ದು ಮತ್ತು ಅದರಿಂದಾಗಿ ಆ ಯೂನಿಯನ್ ಲೀಡರ್ ಮ್ಯಾನೇಜರ್ ಮುಂದೆ ಕೂಗಾಡಿದ್ದು ಶಾಖೆಯಲ್ಲಿ ಸುದ್ದಿಯಾಗಿತ್ತು, ಹಾಗಾಗಿ, ನನಗೆ ಅದ್ಯಾವ ಸೀಟು ಸಿಗುತ್ತದೆಂಬ ಕುತೂಹಲ ಎಲ್ಲರಿಗಿತ್ತು. ಇದನ್ನು ಪರಿಹರಿಸಬೇಕಾದ ಮ್ಯಾನೇಜರ್ ಮತ್ತು ಅಕೌಂಟೆಂಟ್ ಕಂಡುಕೊಂಡ ಈ ಪರಿಹಾರ ಮಾತ್ರ ಎಲ್ಲರಿಗೂ ದೊಡ್ಡ ಮಟ್ಟದ ಮನರಂಜನೆಗೆ ದಾರಿ ಮಾಡಿತ್ತು.
ನನ್ನನ್ನಲ್ಲಿ ಕೂರಿಸಿದ ಅಕೌಂಟೆಂಟ್ “ನೀವು ಇಲ್ಲಿರುವ ಕಡತ, ಪುಸ್ತಕಗಳನ್ನು ಗಮನಿಸುತ್ತಿರಿ. ನಂತರ ಏನು ಮಾಡಬೇಕೆಂದು ತಿಳಿಸುವೆ” ಎಂದು ಹೇಳಿ ಅವರ ಸೀಟಿನಲ್ಲಿದ್ದ ತಲೆ ಎತ್ತಲಾರದಷ್ಟು ಕೆಲಸದಲ್ಲಿ ಮುಳುಗಿದರು.
ನಂತರ ಡೆಬಿಟ್ ಕ್ರೆಡಿಟ್ ಎಂದರೇನೆಂದೇ ತಿಳಿಯದಿದ್ದ, ಯಾರೂ ಪರಿಚಯವಿಲ್ಲದ, ಅದರಲ್ಲೂ ಗ್ರಾಹಕರು ತುಂಬಿದ ಮುಖ್ಯ ಹಾಲ್ ನ ಬಹುಮುಖ್ಯ ಆಯಕಟ್ಟಿನ ಜಾಗದಲ್ಲಿ ನನ್ನನ್ನು ಕೂರಿಸಿದರೆ ನನ್ನ ಪರಿಸ್ಥಿತಿ ಏನಾಗಬೇಡ?
ತಲೆ ಎತ್ತಿದರೆ ಯಾರೂ ಪರಿಚಯವಿಲ್ಲ. ತಲೆತಗ್ಗಿಸಿದರೆ ಅಲ್ಲಿನ ಕಡತಗಳ ತಲೆ ಬುಡ ಅರ್ಥವಾಗದು. ಎಲ್ಲರ ಮುಖಭಾವದಲ್ಲಿದ್ದ ಮುಸಿಮುಸಿ ನಗು ನನ್ನನ್ನು ಆ ಕ್ಷಣ ‘ಎದ್ದು ಮನೆಗೆ ಹೊರಟು ಬಿಡಲೇ’ ಅನ್ನುವಂತೆ ಮಾಡಿತ್ತು. ನಂತರ ನನಗೆ ತಿಳಿದು ಬಂದದ್ದು ಆ ಸೀಟು ಕಡಿಮೆಯೆಂದರೂ ಹತ್ತು ವರ್ಷ ಅನುಭವವಿದ್ದವರು ಮಾಡುವ ಕೆಲಸ. ಅಂದು ಅವರು ರಜೆ ಹಾಕಿದ್ದರಿಂದ, ಆ ಕೆಲಸ ಎಲ್ಲರೂ ಮಾಡಲು ಸಾಧ್ಯವಾಗದ್ದರಿಂದ ಅಂದಿಗೆ ಆ ಸೀಟನ್ನೇ ಮುಚ್ಚಿದ್ದರು. ಖಾಲಿ ಇದ್ದ ಆ ಜಾಗದಲ್ಲಿ ಅಂದಿಗೆ ನನ್ನನ್ನು ತುಂಬಿಸಿದ್ದರು.
ನಾನು ಸ್ವಲ್ಪ ಕಾಲ ಸುಮ್ಮನೆ ಕುಳಿತೆ. ಎಪ್ಪತ್ತರ ದಶಕವೆಂದರೆ ಅದು ಮೊಬೈಲ್, ಫೇಸ್ ಬುಕ್, ಮೆಸೇಜ್ ಯುಗವಲ್ಲ..
ಸುಮ್ಮನೆ ಅಪರಿಚಿತ ವಾತಾವರಣದಲ್ಲಿ ಕೂರುವುದು ಸುಲಭವಲ್ಲ. ಅದರಲ್ಲೂ ಕೆಲಸಕ್ಕೆ ಸೇರಿದ ಮೊದಲ ದಿನ. ಕೊನೆಗೆ ಅಲ್ಲೇ , ಇದ್ದುದರಲ್ಲಿ ಸ್ವಲ್ಪ ಸ್ನೇಹಮಯಿಯಂತೆ ಕಾಣುತ್ತಿದ್ದವನ ಮುಖ ನೋಡಿ ಒಂದು ಸ್ನೇಹದ ಮುಗುಳ್ನಗೆ ಹಾಯಿಸಿದೆ. ಅವನು “ಇಂದು ಸೇರಿಕೊಂಡ್ರಾ? ಎಲ್ಲಿ ನಿಮ್ಮನೆ? ಹೇಗೆ ಬಂದ್ರಿ?” ಎನ್ನುತ್ತಾ ಮಾತನಾಡಿಸಿದ…

ಜೀವ ಹಗುರಾಯಿತು. ನಂತರ ತಿಳಿದು ಬಂದದ್ದೇನೆಂದರೆ, ಡಿ ಗ್ರೂಪ್ ನೌಕರನಾಗಿದ್ದ ಆತನಿಗೆ ಆಗ ತಾನೆ ಕ್ಲರ್ಕ್ ಆಗಿ ಬಡ್ತಿ ಸಿಕ್ಕಿತ್ತು. ಹಾಗಾಗಿ ಅವನನ್ನು ಕೌಂಟರಿನಲ್ಲಿ ಕೂರಿಸಿದ್ದರು. ಕೆಲ ಸಮಯದ ನಂತರ ನಾನು ಅವನನ್ನು “ನಾನು ಇಲ್ಲಿ ಏನು ಮಾಡಬೇಕು ಅಂತ ಹೇಳಿಕೊಡಿ. ನನಗೆ ಏನು ಮಾಡುವುದೆಂದೇ ತಿಳಿಯುತ್ತಿಲ್ಲ. ಸುಮ್ಮನೆ ಕೂರಲು ಕಷ್ಟವಾಗ್ತಿದೆ” ಎಂದು ಕೇಳಿದೆ.
ಅವನು ಜೋರು ಧ್ವನಿಯಲ್ಲಿ ನಗುತ್ತಾ ಇಡೀ ಹಾಲ್ ಗೆ ಕೇಳಿಸುವಂತೆ ಅವನದ್ದೇ ಭಾಷೆಯಲ್ಲಿ ಹೇಳಿದ ಮಾತು ಮತ್ತು ಗಾದೆ ನನ್ನನ್ನು ನಲವತ್ತೈದು ವರ್ಷವಾದರೂ ಹಿಂಬಾಲಿಸುತ್ತಲೇ ಇದೆ!
ಅವನು ಹೇಳಿದ್ದು..”ಅಯ್ಯೊ, ತಕ್ಕೊಳಪ್ಪಾ. ಅಲ್ಲಿ ನಾನು ನಿಮಗೇನು ಹೇಳ್ಕೊಡ್ಲಿ? ಅದೇನೋ ಗಾದೆ ಹೇಳ್ತಾರಲ್ಲಾ ‘ಕದ ತಿನ್ನೋರ ಮನೆಗೆ ಹಪ್ಪಳಕ್ಕೆ ಹೋದರು’ ಅಂತ, ಹಂಗಾಯ್ತು. ನಾನೇ ಇಲ್ಲಿ ಕಣ್ ಕಣ್ ಬಿಡ್ತಿದೀನಿ ಕೆಲ್ಸ ಕಲ್ಯೋಕೆ . ಹೋಗಿಹೋಗಿ ಆ ಕೆಲಸ ಹೇಳ್ಕೊಡೋಕಾಗುತ್ತಾ..?” ಅಂತ ಎಲ್ಲರ ಕಡೆ ನೋಡಿ ನಗೋಕೆ ಶುರು ಮಾಡಿದ.
ಅವನು ತನ್ನ ಮಾತು, ಗಾದೆ ಮತ್ತು ಹೇಳುವ ರೀತಿಯ ಮೂಲಕ ಅಲ್ಲಿದ್ದವರಿಗೆಲ್ಲಾ ತನ್ನ ಪರಿಸ್ಥಿತಿಯನ್ನು ಸಮರ್ಥವಾಗಿ ಮುಟ್ಟಿಸಿದ್ದ. ನನಗೆ ಮಾತ್ರ ಆ ಸಂದರ್ಭದಲ್ಲಿ ಆ ಗಾದೆ ಬ್ಯಾಂಕ್ ಉದ್ಯೋಗದ ಮೊದಲ ದಿನದ, ಮೊದಲ ಪಾಠವಾಗಿ ನಿಂತು ಬಿಟ್ಟಿತು.
ಹಾಗೇ ಆ ಗಾದೆ ನನ್ನ ಬದುಕಿನ ಬೇರೆಬೇರೆ ಸಂದರ್ಭಗಳಲ್ಲಿ ಪದೇಪದೇ ಪ್ರವೇಶ ಮಾಡಿ ತನ್ನ ಅರ್ಥವ್ಯಾಪ್ತಿಯನ್ನು ಕಾಣಿಸುತ್ತಿತ್ತು. ಮುಂದೆ ನನ್ನ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಬದುಕಿಗೆ ಔನ್ನತ್ಯ ಒದಗಿಸಿದ ಈ ವೃತ್ತಿ ನನ್ನ ಆತ್ಮವಿಶ್ವಾಸಕ್ಕೆ ಆಧಾರವಾಗಿದ್ದು ಸುಳ್ಳಲ್ಲ. ಆದರೆ ಅದೇ ವೃತ್ತಿಯಲ್ಲಿದ್ದ ಏಕತಾನತೆಯಿಂದಾಗಿ ನನಗೆ ಸ್ವಯಂ ನಿವೃತ್ತಿ ಪಡೆಯಬೇಕಂಬ ಬಲವಾದ ಅನಿಸಿಕೆಗೆ ಪೂರಕವಾಗಿ, ಅದೃಷ್ಟವೆಂಬಂತೆ ಸ್ವಯಂ ನಿವೃತ್ತಿ ಯೋಜನೆಯೂ ಜಾರಿಗೆ ಬಂತು. ಇನ್ನೂ ಹದಿನೈದು ವರ್ಷ ಸೇವಾವಕಾಶವಿದ್ದರೂ , ಸ್ವಯಂ ಇಚ್ಛೆಯಿಂದ ಹೊರ ಬಂದೆ. ನಂತರ ಪತ್ರಿಕೋದ್ಯಮ ಕಾಲೇಜಿಗೆ ಸೇರಿ ಪತ್ರಿಕೋದ್ಯಮ ಪದವಿ ಪಡೆದು ನಿಯತಕಾಲಿಕೆ, ಪತ್ರಿಕೆಗಳಿಗೆ ಬರೆಯತೊಡಗಿದೆ.
ಹಾಗೆ ಬರೆಯುವಾಗ ‘ಸುಧಾ’ ನಿಯತಕಾಲಿಕೆಗೆ ಮೂರು ಕಂತುಗಳ ಲೇಖನವಾಗಿ ‘ತೆರೆದಿದೆ ಅಡುಗೆಮನೆ ಹೊಸ ಬೆಳಕಿಗೆ’ಯೆಂಬ ಲೇಖನ ಬರೆಯತೊಡಗಿದೆ. ಹಾಗೆ ಬರೆಯುವಾಗ, ದಶಕಗಳ ಹಿಂದೆ ಕೇಳಿದ್ದ ಈ ಕದ-ಹಪ್ಪಳದ ಗಾದೆ ನನ್ನ ಮನಸ್ಸಿನ ಮುಂದೆ ಬಂದು ನಿಂತಿತು!
ಈ ಹಪ್ಪಳವೆನ್ನುವುದು ಸಮೃದ್ಧಿಯ ಸಂಕೇತ.
ಒಬ್ಬ ಗೃಹಿಣಿ ಈ ಹಪ್ಪಳ ಮಾಡಲು ಮನಸ್ಸು ಮಾಡಿದ್ದಾಳೆಂದರೆ, ನಾವು ಯೋಚಿಸಬೇಕಿದೆ. ಹಪ್ಪಳವೆಂಬುದು ಊಟಕ್ಕೆ ಬೇಕಾಗುವ ಕಟ್ಟಕಡೆಯ ಮತ್ತು ಬಹಳ ಇಷ್ಟ ಪಡುವ ಖಾದ್ಯ. ಅದು ಗೃಹಿಣಿ ತಾನೇ ಕೈಯ್ಯಾರೆ ಮಾಡುವ ಮನಸ್ಸು ಮಾಡಿದ್ದಾಳೆಂದರೆ, ಆ ಮನೆಯಲ್ಲಿ ಮತ್ತೆಲ್ಲವೂ ಸಮೃದ್ಧಿಯಾಗಿದೆ ಎಂದೇ ಅರ್ಥ. ಜೊತೆಗೆ ಯಾವ ಮನೆಯಲ್ಲಿ ನೆಮ್ಮದಿ, ಸಮಾಧಾನ, ಸುಧಾರಿತ ಆರ್ಥಿಕ ಮಟ್ಟದ ಜೊತೆಗೆ ಹಪ್ಪಳ ಮಾಡಲು, ಅದನ್ನು ಒಣಗಿಸಲು ಸಾಕಷ್ಟು ಜಾಗವೂ ಇರಬೇಕಾಗುತ್ತದೆಯೋ ಅಲ್ಲಷ್ಟೇ ಹಪ್ಪಳ ಲಭ್ಯ.

ಹಾಗಾಗಿ ‘ಕದ ತಿನ್ನುವವರ ಮನೆಗೆ ಹಪ್ಪಳಕ್ಕೆ ಹೋದರಂತೆ’ ಎಂಬ ಈ ಗಾದೆಯ ಅರ್ಥ ನೋಡಿ. ಇಡೀ ಮನೆಯೇ ಅವನತಿಯ ಸ್ಥಿತಿ ತಲುಪಿ, ಅಲ್ಲೇನೂ ಇರದೆ, ಬರಿಯ ಕಿಟಕಿ ಬಾಗಿಲುಗಳಷ್ಟೇ ಉಳಿದುಕೊಂಡಿದ್ದರೆ , ಅಲ್ಲಿ ತಿನ್ನಲು ಸಿಗುವುದು ಕದವಷ್ಟೇ. ಅಲ್ಲಿ ಹಪ್ಪಳಕ್ಕೆ ಹೋಗುವುದೆಂದರೆ ದರಿದ್ರವೇ ಮೈವೆತ್ತ ಮನೆಯಲ್ಲಿ ಸಮೃದ್ಧಿಯನ್ನು ನಿರೀಕ್ಷಿಸುವುದು ಎಂದರ್ಥ.
ಹಾಗಾಗಿ ಅಂದು, ಬ್ಯಾಂಕಿನಲ್ಲಿ ಮೊದಲ ದಿನ ನನ್ನನ್ನು ಕೂರಿಸಿದ್ದ ಸೀಟ್ ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ ಮಾಡಲು ಸಾಧ್ಯವಾಗುವ ಕೆಲಸ. ಅದನ್ನು ನಾನು, ಆಗ ತಾನೆ ಬಡ್ತಿ ಹೊಂದಿದ್ದು ಕೆಲಸ ಕಲಿಯುತ್ತಿದ್ದವರನ್ನು ಕೇಳಿದಾಗ ಅವರಿಂದ ಆ ಕ್ಣಣಕ್ಕೆ ಬಂದ ಈ ಗಾದೆ ಅದೆಷ್ಟು ಅರ್ಥಪೂರ್ಣವಾಗಿತ್ತಲ್ಲವೇ?
ಹಾಗೆ ಈ ಲೇಖನ ಬರೆಯುವಾಗ ನನ್ನ ಮುಂದೆ ಬಂದ ಈ ಗಾದೆ ಮತ್ತೊಮ್ಮೆ ನನ್ನನ್ನು ತಾಕಿದ್ದು ಬಿಳಿಗಿರಿರಂಗನ ಬೆಟ್ಟದಲ್ಲಿ.  ಒಮ್ಮೆ ಬಿಳಿಗಿರಿ ರಂಗನ ಬೆಟ್ಟದ ಡಾ. ಆರ್ ಸುದರ್ಶನ್ ಅವರ ಸೋಲಿಗರ ಶಾಲೆ ಮತ್ತು ಸೋಲಿಗರ ಪೋಡಿನ ಬದುಕಿನ ಬಗ್ಗೆ ಲೇಖನ ಮಾಡಲು ಇಬ್ಬರು ಪತ್ರಕರ್ತೆಯರೊಂದಿಗೆ ಕಾಡಿನ ಮಧ್ಯೆ ಹೋಗಿ, ನಮ್ಮ ಜೀಪ್ ನ ಚಕ್ರಗಳು ಮಳೆಯಲ್ಲಿ ಹೂತುಹೋಗಿ, ನಿರ್ವಾಹವಿಲ್ಲದೆ ಮಳೆಯಲ್ಲಿ ಕಾಡಿನಲ್ಲಿ ನಡೆದುಕೊಂಡು ನಮ್ಮ ಕೊಠಡಿ ಸೇರಿದ್ದೊಂದು ರೋಚಕ ಅನುಭವ.
ಹಾಗೆ ಸೋಲಿಗರ ಪೋಡುಗಳಿಗೆ ಹೋಗಿ ಆ ಕಾಡಿನ ಮಧ್ಯೆ , ನಾವು ಮೂವರು ಪತ್ರಕರ್ತೆಯರು ಸಿಲುಕಿಕೊಂಡು, ಪಾರಾಗಿ, ಪಾರುಮಾಡಿದವರೊಡನೆ ಮಾತಿಗೆ ಕುಳಿತಿದ್ದೆವು. ಅಲ್ಲಿ ಆಗ ತಾನೇ ನಡೆದುಹೋಗಿದ್ದ ಹುಲಿಯ ಹೆಜ್ಜೆ ಬಗ್ಗೆ ವಿಷಯ ಬಂತು.
ಆಗ , ಕಾಡಿನ ಬಗ್ಗೆ ವಿಶೇಷ ಜ್ಞಾನವುಳ್ಳ , ಅಲ್ಲಿಯೇ ಡಾ. ಆರ್ ಸುದರ್ಶನ್ ಅವರ ಕಛೇರಿಯಲ್ಲಿದ್ದ ಶ್ರೀ ರಾಮಾಚಾರಿ ಅವರ ಮಾತು ಕೇಳುವಾಗ ಮತ್ತೆ ನನಗೆ ಅದೇಕೊ ಈ ಗಾದೆ ನೆನಪಾಯಿತು.
ಮಾತಿನ ಮಧ್ಯೆ ಅವರು ಹೇಳಿದ್ದು….
“ನೋಡಿ, ನಮ್ಮ ರಾಷ್ಟ್ರೀಯ ಪ್ರಾಣಿಯನ್ನಾಗಿ ಹುಲಿಯನ್ನೇಕೆ ಆರಿಸಿದ್ದಾರೆ ಗೊತ್ತೆ? ಹುಲಿ ನಿಸರ್ಗದ ಸಮೃದ್ಧಿಯ ಸಂಕೇತ. ಒಂದು ಕಾಡಿನಲ್ಲಿ ಹುಲಿಯೊಂದು ಸ್ವಚ್ಛಂದವಾಗಿ, ರಾಜಾರೋಷದಿಂದ ಬದುಕುತ್ತಿದೆಯೆಂದರೆ, ಆ ಕಾಡೇ ಸಮೃದ್ಧಿಯಾಗಿದೆಯೆಂದರ್ಥ.

ಒಂದು ಹುಲಿ ಕಾಡಿನಲ್ಲಿ ಇದೆಯೆಂದಾದರೆ ಅದರ ಆಹಾರ ಪೂರೈಕೆಯಾಗಬೇಕಾದರೆ ಆ ಕಾಡಿನಲ್ಲಿ ಆಹಾರ ಸರಣಿಯಾಗಿ ಇನ್ನೂರಕ್ಕೂ ಹೆಚ್ಚು ಜೀವ ಸಂಕುಲಗಳು , ಸಸ್ಯಗಳು ಬದುಕಿರಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ಹುಲಿಯೊಂದು ಕಾಡಿನಲ್ಲಿ ಬದುಕುಳಿಯಲು ಸಾಧ್ಯ. ಅದಕ್ಕಾಗೇ ನಾವು ಹುಲಿಯನ್ನು ನಮ್ಮ ರಾಷ್ಟ್ರೀಯ ಪ್ರಾಣಿ ಯನ್ನಾಗಿ ಪರಿಗಣಿಸಿದ್ದೇವೆ” ಎಂದರು !
ನನಗೆ ಆ ವಿಷಯ ಕೇಳುವಾಗ ಆದ ರೋಮಾಂಚನ ಅಷ್ಟಿಷ್ಟಲ್ಲ. ಮತ್ತು ಆ ಕ್ಷಣಕ್ಕೆ ಈ ಹಪ್ಪಳದ ಗಾದೆ ನೆನಪಾಗಿದ್ದು ನಗು ಬಂದಿತ್ತು. ಈ ಹಪ್ಪಳ ನನಗೆ ಬ್ಯಾಂಕಿನಲ್ಲಿ ಜ್ಞಾನದ ಬಿಂಬವಾಗಿ, ಕುಟುಂಬದಲ್ಲಿ ಸಮೃದ್ಧಿಯ ಸಂಕೇತವಾಗಿ, ಕಾಡಿನಲ್ಲಿ ಹುಲಿಗೆ ಸಮಾನವಾಗಿ ಗಾದೆಯ ರೂಪದಲ್ಲಿ ನನ್ನನ್ನು ತಾಕಿದ ಬಗೆಗೆ ನಾನೇ ಬೆರಗಾಗಿದ್ದೇನೆ.

‍ಲೇಖಕರು AdminS

23 August, 2019

4 Comments

  1. T S SHRAVANA KUMARI

    ಆಪ್ತವಾದ ಬರಹ

  2. Sarayu

    Sundaravada baraha .

  3. ರಾಜೋ

    ಒಬ್ಬ ಗೃಹಿಣಿ ಈ ಹಪ್ಪಳ ಮಾಡಲು ಮನಸ್ಸು ಮಾಡಿದ್ದಾಳೆಂದರೆ, ನಾವು ಯೋಚಿಸಬೇಕಿದೆ. ಹಪ್ಪಳವೆಂಬುದು ಊಟಕ್ಕೆ ಬೇಕಾಗುವ ಕಟ್ಟಕಡೆಯ ಮತ್ತು ಬಹಳ ಇಷ್ಟ ಪಡುವ ಖಾದ್ಯ. ಅದು ಗೃಹಿಣಿ ತಾನೇ ಕೈಯ್ಯಾರೆ ಮಾಡುವ ಮನಸ್ಸು ಮಾಡಿದ್ದಾಳೆಂದರೆ, ಆ ಮನೆಯಲ್ಲಿ ಮತ್ತೆಲ್ಲವೂ ಸಮೃದ್ಧಿಯಾಗಿದೆ ಎಂದೇ ಅರ್ಥ. ಜೊತೆಗೆ ಯಾವ ಮನೆಯಲ್ಲಿ ನೆಮ್ಮದಿ, ಸಮಾಧಾನ, ಸುಧಾರಿತ ಆರ್ಥಿಕ ಮಟ್ಟದ ಜೊತೆಗೆ ಹಪ್ಪಳ ಮಾಡಲು, ಅದನ್ನು ಒಣಗಿಸಲು ಸಾಕಷ್ಟು ಜಾಗವೂ ಇರಬೇಕಾಗುತ್ತದೆಯೋ ಅಲ್ಲಷ್ಟೇ ಹಪ್ಪಳ ಲಭ್ಯ.

    ಎಷ್ಟು ಅದ್ಭುತವಾಗಿ ಬರೆದಿದ್ದೀರಿ ಮ್ಯಾಡಂ. ಅನೇಕ ಒಳನೋಟಗಳಿಂದ ಕೂಡಿರುವ ಸೊಗಸಾದ ಲೇಖನ. ಧನ್ಯವಾದಗಳು.
    -ರಾಜೋ

  4. Kotresh T A M Kotri

    ಬರಹ ತುಂಬಾ ಆಪ್ತವಾಗಿ ಬಿಟ್ಟಿತು.ಹೊಸ ಹೊಳವುಗಳನ್ನು ಹೇಳಿಕೊಟ್ಟಿತು.ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading