ಹೋರಾಟ
ಫಕ್ಕಿರೇಶ್ ಜಾಡರ್
ರೇಖೆ: ಬಾದಲ್ ನಂಜುಂಡಸ್ವಾಮಿ
ಬಡತನದಿ ಬೆಂದ ಬದುಕನು
ಬೆವರ ಹನಿಗಳಿಂದ ನಂದಿಸಲು
ಹೊರಟೆ ದುಡಿಯಲು ಬೇರೂರಿಗೆ,
ಸಂಸಾರವೆಂಬ ಸಾಗರವಿಜಲು
ಸಂಗಾತಿಯನು ಮರೆತು ಸಾಗಿದೆ
ಸುಳಿವೇ ಸಿಗದ ಊರಿನೆಡೆಗೆ
ಕಷ್ಟಗಳು ನನ್ನ ಕನಸಿನೆದುರು
ಮಣಿದು ಮೂಲೆ ಸೇರಿರಲು,
ಗಳಿಸುತಿರುವೆ ಅಲ್ಪ ಸ್ವಲ್ಪ
ಹಣವ ಎನ್ನ ದುಡಿಮೆಯಲಿ,
ನನ್ನ ಸಂಸಾರದ ಸುಖವ
ಈ ಕಣ್ಣಿಗೆ ಕಾಣಿಸಲು,
ಕಣ್ಮುಚ್ಚದಂತೆ ದುಡಿಯುತಿರುವೆ
ಮಧ್ಯರಾತ್ರಿಯಲಿ

ಸಾಗುತಿದೆ ಜೀವನವೀಗ ಜರೂರಿಲ್ಲದೆ ಮೆಲ್ಲಗೆ
ಕಾಣುತಿದೆ ಕಣ್ಣಿಗೆ ನನ್ನದೇ ನವಜೀವನ,
ಆದರೇನೋ ತಲ್ಲಣ ಮನದೊಳಗೆ
ಬೇಸರವೆನಿಸಿದೆ ಪ್ರೀತಿ-ನೆಮ್ಮದಿಯಿಲ್ಲದ ಪಯಣ
ಹಣದ ಹುಚ್ಚಲಿ ಹೃದಯ ಮಿಡಿತ ನಿಂತಂತಿದೆ
ಭಾವನೆಗಳೇಕೋ ಬೇರೆಲ್ಲೋ ಸರಿದಂತಿದೆ,
ಬೇಕೆನಿಸುತಿದೆ ಕಷ್ಟವಾದರೂ ಆ ನೆಮ್ಮದಿಯ ಬದುಕು
ಆ ನೆಮ್ಮದಿಯೊಂದೇ ಈ ಜೀವಕೆ ಸಾಕು
ಮೊದಮೊದಲು ಹಣಕ್ಕಾಗಿ ಹೋರಾಟ
ಹಣ ದೊರೆತಾಗ ನೆಮ್ಮದಿಗಾಗಿ ಹೋರಾಟ,
ಆ ಹೊರಟದಿ ನಿರತವಾಗಿರಲು
ಕಾಲವೇ ಕೈಯಲಿಲ್ಲ ಬೇಕೆಂದಿದ್ದನು ಪಡೆಯಲು






0 Comments