ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲು ಶಾಂತವಾಗಿದೆ… – ಜಯಶ್ರೀ ದೇಶಪಾಂಡೆ ಕವಿತೆ

ಎಂ ಎಚ್ 370…..

ಜಯಶ್ರೀ ದೇಶಪಾಂಡೆ

ಎಲ್ಲ ನುಂಗಿ ಮಲಗಿ ಕಡಲು
ಶಾಂತವಾಗಿದೆ…ಪ್ರಶಾಂತವಾಗಿದೆ!
 
ಕಣ್ಣಿನೊಳಗೆ ನೂರು ಕನಸು
ಇನಿಯನ ತೋಳಿಗೆ ತೋಳಿಟ್ಟು..
ನಗೆಗೂಡಿಗೆ ಉಕ್ಕು ತರಿಸಿ ನಕ್ಕ
ಹುಡುಗಿಯ ನುಂಗಿ ಕೂತಿದೆ!
ಕಡಲು ಶಾಂತವಾಗಿದೆ … ನಿದ್ದೆ ಹೋಗಿದೆ.
 
ಛೀ ಕಳ್ಳ! ತಗಿ ಕೈ ನನ್ನ ಬ್ಲೌಸಿಂದ..
ನಕ್ಕು ತೋರಿ ಹುಸಿಗೋಪ ಮತ್ತೆ ಮುದ್ದು,
ತೊಡೆಯ ಮೇಲೆ ಕಾಲು ಬಡಿದು ಅಮ್ಮಿ
ಕೇಳಿದ ಕ೦ದನ ಬಾಯಿಗಿಳಿದ ಬಿಳಿಹಾಲಿನ
ಬಾಟಲಿಯ ನುಂಗಿ ನೊಣೆದ ಅದೇ ಕಡಲು ..
ಶಾಂತವಾಗಿದೆ… ಗಾಢ ನಿದ್ರೆಹೋಗಿದೆ!

ಜೋಕೆ ಮಗ..ಅಲ್ಲಿ ನಿನ್ನ ಹೊಟ್ಟೆ ನೆತ್ತಿ …
ಮಾತು ಒಸರದೆ ಬಿಕ್ಕಿ ಅಮ್ಮ ಬಾಯಿಗಿಟ್ಟ ಸೆರಗು…
ದು:ಖ ನು೦ಗಿ ಕೈಯ ಬೀಸಿ ಸರಿದ ಚಿತ್ರ,
ನುಂಗಿ ಮಲಗಿದೆ… ಕಡಲು ಶಾಂತವಾಗಿದೆ…
ಮೂಕವಾಗಿದೆ!
 
ಇನ್ನು ಮತ್ತೆ ನಿನ್ನ ಭೇಟಿ
ಅವಳ ದು:ಖ ಅವನ ಅಳಲು…
ಅರಿಷಿಣದ ಒದ್ದೆ ಸೆರಗು
ಬಾಡಲಿಲ್ಲದ ಮುಡಿಮಲ್ಲಿಗೆ..
ನುಂಗಿ ತೇಗಿ ಮುಗಿಸಿ ಕಡಲು …
ಬಲು ಶಾಂತವಾಗಿದೆ…
ಕದ್ದು ನಕ್ಕಿದೆ!
 
ಆಗಸಕ್ಕೆ ಲೋಹವಕ್ಕಿ ರೆಕ್ಕೆ ಕಟ್ಟಿ
ನೆಗೆದು ಒಡಲ ಜೀವಗಳ
ಹೊತ್ತು ಹೊಣೆಯ ಮುಗಿಲ ಸೀಳಿ
ತೇಲಿ ಬಾನು ಭೂಮಿ ಎಲ್ಲಿ ಕಾಣೆಯಾಯಿತೋ?
 
ಕ್ಷುದ್ರ ಗಳಿಗೆ ಕಣ್ಣ ಭ್ರಾಂತಿ
ಸುಳಿಯ ತಿರುವು ಸೆಳೆಯಿತೇ…
ದುಷ್ಟ ಕ್ಷಣವು ಬಡಿಯಿತೇ…?
ಎಲ್ಲ ಸೆಳೆದು ನುಂಗಿ ಕಡಲು ಮತ್ತೆ ಮರಳಿ
ಮುನ್ನಿನಂತೆ ಶಾಂತವಾಗಿದೆ… ಅರಿಯದ೦ತೆ ಮಲಗಿದೆ !
 
ಕಡಲ ಒಡಲು ..ಗೂಢ, ಗಹನ
ಶಾಂತವಾಗಿದೆ.. ದಿವ್ಯ ಮೌನ ತಳೆದಿದೆ!!
 

‍ಲೇಖಕರು G

18 April, 2015

5 Comments

  1. mmshaik

    nice poem..

  2. ತಿರುಪತಿ ಭಂಗಿ

    ಪದ್ಯ ಚಂದಿದೆ

  3. bidaloti Ranganath

    ಕವಿತೆಯ. ಭಾವ ಚಂದದಿದೆ

  4. Varsha

    Very nice and meaningful 🙂

  5. anand zunjarwad

    medam ;nimma kavite bahala aalavaada bhaava jagattannu olagittukondide . higaagi adu matte matte odisikolluttade nanaguu e kavite ruchisitu
    anand zunjarwad

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading