ಬುದ್ಧ ಕಾಣೆಯಾಗಿದ್ದಾನೆ..

ಕಾಣೆಯಾದ ಬುದ್ಧ

ತಿಲಕ್ ಸೋಮಯಾಜಿ

“ಸಿದ್ಧಾರ್ಥ” ಹೆಸರಿನ ಅರ್ಥ ‘ತನ್ನ ಗುರಿ ಸಾಧಿಸುವವನು’. ಬುದ್ಧ, ಬುದ್ಧನಾಗುವ ಮೊದಲಿನ ಹೆಸರು. ಅಂದು ಆತನ ತಂದೆ ತಾಯಿಗಿದ್ದ ಆಸೆಯೂ ಅದೇ. ತಮ್ಮ ಪುತ್ರ ಆತನ ಗುರಿ ಸಾಧಿಸಲಿ ಎಂದು. ರಾಜ ಆರೈಕೆಯಲ್ಲಿ ಬೆಳೆದ ಬಾಲಕ ಒಂದು ದಿನ ದಾರಿಯಲ್ಲಿ ಒಬ್ಬ ವೃದ್ಧ, ಒಬ್ಬ ರೋಗಿ ಮತ್ತೊಂದು ಶವವನ್ನು ನೋಡುತ್ತಾನೆ. ವೃದ್ಧಾಪ್ಯ, ರೋಗ, ಮತ್ತು ಸಾವು ಬಾಲಕನನ್ನು ಆತಂಕಕ್ಕೀಡು ಮಾಡಿದರೂ, ತದನಂತರ ನೋಡುವ ಯೋಗಿಯ ಜೀವನ ಆತನನ್ನು ಆಕರ್ಷಿಸುತ್ತದೆ. ಸಿದ್ಧಾರ್ಥನು ಬುದ್ಧನಾಗುವ ಪ್ರಕ್ರಿಯೆಗೆ ಇದು ನಾಂದಿ ಹಾಡುತ್ತದೆ.

“ಸಿದ್ಧಾರ್ಥ” ಹೆಸರು ಇಂದಿಗೂ ಚಾಲನೆಯಲ್ಲಿದೆ. ಈಗಲೂ ತಂದೆ ತಾಯಿಯರು ಮಕ್ಕಳಿಗೆ ಇದೇ ಹೆಸರಿಡಲು ಇಷ್ಟಪಡುತ್ತಾರೆ. ಆದರೆ ಹೆಸರಿನ ಅರ್ಥ ಮಾತ್ರ ಅರ್ಥ ಕಳೆದುಕೊಂಡಿದೆ. ಇಂದಿನ ಸಿದ್ಧಾರ್ಥ ಪೋಷಕರ ಗುರಿ ಸಾಧಿಸಬೇಕು. ಆತನ ಮೇಲೆ ನಿರೀಕ್ಷೆ ಅತಿಯಾಗಿದೆ. ಪೋಷಣೆಯ ಖರ್ಚು ವೆಚ್ಚಗಳು ಜಾಸ್ತಿಯಾಗಿವೆ. ನಗರದ ದೊಡ್ಡ ಆಸ್ಪತ್ರೆಯಲ್ಲಿನ ಹೆರಿಗೆಯಿಂದ ಹಿಡಿದು ಮಗು ತೊಟ್ಟಿಲು ಸೇರುವ ತನಕದ ಖರ್ಚುಗಳೇ ತಂದೆ ತಾಯಿಯರಿಗೆ ಮಗುವಿನ ಭವಿಷ್ಯದ ವೆಚ್ಚದ ತುಣುಕು ಚಿತ್ರವನ್ನು ಕಣ್ಮುಂದೆ ತರುತ್ತದೆ. ಮಗು ತೊಟ್ಟಿಲಿನಲ್ಲಿ ಮಗುವಿನಂತಿರುವುದು ಬರೀ ಒಂದೆರಡು ವರ್ಷಗಳಿಗೆ ಮಾತ್ರ. ಆಮೇಲೆ ಅದರ ಬೇಡಿಕೆಗಳು ಒಂದೊಂದಾಗಿ ಹೆಚ್ಚುತ್ತವೆ. ಊಟ ಮಾಡಲು ಮಗುವಿನ ಕೈಗೆ ಅಪ್ಪನ ಮೊಬೈಲ್, ಅಪ್ಪನ ಕೈಗೆ ಮಗುವಿನ ಚಾನೆಲ್ ಹಾಕಲು ಟಿವಿ ರಿಮೋಟ್ ಬಂದು ಸೇರುತ್ತದೆ. ಮಗು ನಡೆಯಲು ಕಲಿತಂತೆ, ಗಲ್ಲಿ ಗಲ್ಲಿಗಳಲ್ಲಿ ನಾಯಿ ಕೊಡೆಗಳಂತೆ ಎದ್ದು ನಿಂತಿರುವ ನರ್ಸರಿ ಸ್ಕೂಲ್ ಗಳಿಗೆ ನಡೆಸಲಾಗುತ್ತದೆ. ಮನೆಯಲ್ಲಿ ಮಾತಾಡುವ ಮಾತೃ ಭಾಷೆ ಹಾಗೂ ಶಾಲೆಯಲ್ಲಿ ಕಲಿಸುವ ಆಂಗ್ಲ ಭಾಷೆಗಳ ನಡುವೆ ಗೊಂದಲಕ್ಕೀಡಾಗಿ ಮಗು ಮಾತಾಡುವ ತ್ರಿಶಂಕು ಭಾಷೆ ಪೋಷಕರನ್ನು ಮುದಗೊಳಿಸುತ್ತದೆ. ಮಗು ಬೆಳೆದಂತೆ ಶಾಲೆಗೆ ಹೊರುವ ಚೀಲದ ಗಾತ್ರ ದೊಡ್ಡದಾಗುತ್ತದೆ, ಮಗುವಿನ ಬೇಡಿಕೆಗಳು ಬೆಳೆಯುತ್ತವೆ, ಸೇರಿದ ಖಾಸಗಿ ಶಾಲೆಗಳು ಇನ್ನೂ ಜಾಸ್ತಿ ಬೇಡುತ್ತವೆ. ಇಷ್ಟರಲ್ಲೇ ಹೈರಾಣಾದ ಪೋಷಕರ, ಮಗುವಿನ ಮೇಲಿನ ನಿರೀಕ್ಷೆಯ ಶಿಖರ ಕೂಡ ಬೆಳೆಯುತ್ತದೆ. ಮಗು ಬೆಳೆದು ಮಗನಾಗುತ್ತಾನೆ. ಮಗನಾದವನು ಒಳ್ಳೆಯ ನೌಕರಿ ಗಿಟ್ಟಿಸಿಕೊಂಡು ತನ್ನ ಮೇಲೆ ಇಲ್ಲಿಯ ತನಕ ಮಾಡಿದ ಖರ್ಚನ್ನು ತೀರಿಸಬೇಕು. ಹೊಸ ಖರ್ಚಿಗೆ ದಾರಿ ರೂಪಿಸಿಕೊಳ್ಳಲೆಂಬಂತೆ ಮದುವೆಯಾಗಬೇಕು, ಆಮೇಲೆ ಮಗುವಾಗಬೇಕು. ಮತ್ತೆ ಅದೇ ಚಕ್ರ. ಆದರೆ ಹೊಸ ಖರ್ಚು ಹೊಸ ರೂಪದಲ್ಲಿ, ಇನ್ನೂ ಭರ್ಜರಿಯಾಗಿ ಆತನನ್ನು ಹೊಡೆಯುತ್ತದೆ. ಆದಾಯ ಬೆಳೆದಂತೆ ಐಶಾರಾಮಗಳು ಆತನ ಅಗತ್ಯಗಳಾಗಿ ಬದಲಾಗುತ್ತವೆ. ಆತನ ಇಂತಹ ಅಗತ್ಯಗಳನ್ನೇ ಆದಾಯದ ಮೂಲವಾಗಿಸಿಕೊಳ್ಳುವ ಸಂಸ್ಥೆಗಳು ಆತನ ಸುತ್ತ ತಲೆಯೆತ್ತುತ್ತವೆ. ಕೊಡ ದೊಡ್ದದಾದಷ್ಟು ಕೊಡದ ತೂತು ಕೂಡ ಬೆಳೆಯುತ್ತದೆ. ಒಳಗಿರುವ ನೀರಿನ ಮಟ್ಟ ಅಷ್ಟಕ್ಕಷ್ಟೇ. ತಾನೇ ಸೃಷ್ಟಿಸಿಕೊಂಡ ಕೊರತೆ ನೀಗಿಸಲು ಆತ ಪರದೇಶದಲ್ಲಿ ನೌಕರಿ ಹುಡುಕಬೇಕು. ತನ್ನ ಹೆಂಡತಿ, ಮಗುವಿನ ಚಿಕ್ಕ ಚೊಕ್ಕ ಸಂಸಾರದೊಂದಿಗೆ ತನ್ನವರನ್ನು ಬಿಟ್ಟು, ತನ್ನವರಿಗಾಗಿ ಹಂಬಲಿಸುತ್ತಾ, ತನ್ನದಲ್ಲದ ಊರಿನಲ್ಲಿ, ತನ್ನ ಮಗುವಿನ ಭವಿಷ್ಯದ ಭದ್ರತೆಗೆ ತನಗಿಷ್ಟವಿಲ್ಲದೆ ದುಡಿಯಬೇಕು.
ಜೀವನದ ಇಳಿಸಂಜೆಯಲ್ಲಿರುವ ತಂದೆ ತಾಯಿಯರು, ಮಗ ಮೊಮ್ಮಗುವನ್ನು ನೋಡಲು ಹಪ ಹಪಿಸುತ್ತಾ, ವೈರಾಗ್ಯದ ಮಾತುಗಳ ಮಧ್ಯೆ ತಾವು ಕಷ್ಟ ಪಟ್ಟು ಕಲಿತ ಮಗನಿರುವ ದೂರದ ಊರಿನ ಹೆಸರನ್ನು ಒಣ ಪ್ರತಿಷ್ಠೆಯಿಂದ ಹೇಳಿಕೊಳ್ಳುತ್ತಾ, ಆತ ಮರಳಿ ಊರಿಗೆ ಮರಳುವ ನಿರೀಕ್ಷೆಯಲ್ಲೇ ಕಾಲ ಸವೆಸುತ್ತಾರೆ, ತಾವೂ ಸವೆಯುತ್ತಾರೆ. ಸವೆತದ ಭಯ ತಡೆಯಲು ಕಾಲ ಕಾಲಕ್ಕೆ ಆಸ್ಪತ್ರೆಗೆ ಹೋಗುತ್ತಾರೆ. ಆಸ್ಪತ್ರೆ ಅವರ ಮಿಕ್ಕಿರುವ ಹಣವನ್ನು ಸವೆಸುತ್ತದೆ. ದೂರದ ಊರಲ್ಲಿರುವ ಮಗನ ಮನಸ್ಸು ತನ್ನ ಮುಪ್ಪಿನ ಬಗ್ಗೆ ಯೋಚಿಸಿ ಯೋಚಿಸಿಯೇ ಇನ್ನಷ್ಟು ಧನ ದಾಹಿಯಾಗುತ್ತದೆ. ದಾಹಕ್ಕೆ ಮುಂದಾಲೋಚನೆಯ ಹೆಸರು ಕೊಡುತ್ತದೆ. ಇಂದಿನ ದಿನದ ಸಂತೋಷ ಕಳೆದುಕೊಳ್ಳುತ್ತದೆ.
ಇಂದಿನ ಸಿದ್ಧಾರ್ಥ ಕೂಡ ಅಂದಿನ ಸಿದ್ಧಾರ್ಥನಂತೆಯೇ ರೋಗ, ಮುಪ್ಪು, ಸಾವಿಗೆ ಹೆದರಿದ್ದಾನೆ. ಆದರೆ ಪರಿಣಾಮ ಮಾತ್ರ ಬೇರೆಯಾಗಿದೆ. ಹೆದರಿಕೆಯ ಶಮನದ ದಾರಿಯಾಗಿ, ಗುರಿ ಕಳೆದುಕೊಂಡಿರುವ ಸಿದ್ಧಾರ್ಥ ಬದುಕುವುದನ್ನು ಮರೆತು, ಬರಿ ಜೀವಿಸುವುದನ್ನೇ ತೃಪ್ತಿ ಎಂದುಕೊಂಡಿದ್ದಾನೆ. ಆತನ ಮನಸ್ಸಿಗೆ ತಾತ್ಕಾಲಿಕ ಶಮನ ಕೊಡುವ ಮೌಖಿಕ ಸಂತರು ಬೀದಿ ಬೀದಿಯಲ್ಲಿ ಹುಟ್ಟಿಕೊಂಡಿದ್ದಾರೆ. ಲೌಕಿಕ ಆಸೆಗಳಿಂದ, ಗೊಂದಲಗಳಿಂದ ಮುಕ್ತನಾದ ಸಂತ ಮಹಾನಗರದ ಜನ ಜಂಗುಳಿಯ ಮಧ್ಯೆ ಹುಡುಕಲಾಗದ ಹಾಗೆ ಕಳೆದು ಹೋಗಿದ್ದಾನೆ. ಸಿದ್ಧಾರ್ಥನ ಯೋಚನೆಗಳಿಂದ ಬುದ್ಧ ಕಾಣೆಯಾಗಿದ್ದಾನೆ. ಹುಡುಕುವ ಗೋಜಿಗೂ ಕೂಡ ಯಾರೂ ಹೋದಂತಿಲ್ಲ.
 

‍ಲೇಖಕರು G

April 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Hema Sadanand Amin

    bravo……..nanu Mumbai inda. nimma lekhana bahala ista vaaithu. mundheyu nimminda intha lekhana odalu sigali emba apeksheyalli.
    Hema.

    ಪ್ರತಿಕ್ರಿಯೆ
  2. Vinay

    ಅಂಥದೇ ಸನ್ನಿವೇಶ ಇದೀಗ ನನ್ನ ಜೀವನದಲ್ಲಿ…
    ಯಾವ ಬುದ್ಧನ ಅನುಸರಿಸಲಿ??

    ಪ್ರತಿಕ್ರಿಯೆ
    • ತಿಲಕ್ ರಾಜ್ ಸೋಮಯಾಜಿ

      ವಿನಯ್, ಅಂದಿನ ಬುದ್ಧನ ದಾರಿಯನ್ನು ಅನುಸರಿಸಲು ಯತ್ನಿಸುತ್ತಾ, ಇಂದಿನ ಸಿದ್ದಾರ್ಥನಷ್ಟು ಮನಸ್ಸನ್ನು ಗೋಜಲು ಮಾಡಿಕೊಳ್ಳದಂತೆ ನಿಗಾ ವಹಿಸಿದರೆ ಅಷ್ಟೇ ಸಾಕೆನ್ನಿಸುತ್ತದೆ.

      ಪ್ರತಿಕ್ರಿಯೆ
  3. ಲಲಿತಾ ಸಿದ್ಧಬಸವಯ್ಯ

    ತಿಲಕ್, ಲೇಖನ ನಮ್ಮೊಳಗಿನ ಅನೇಕ ತಳಮಳಗಳಿಗೆ ಬಾಯಾಗಿದೆ. ಇದೇ ರೀತಿ ನಾನೂ ಅನೇಕ ಸಾರಿ ಯೋಚಿಸಿದ್ದಿದೆ.ಇದರೊಂದಿಗಿರುವ ಬಾಲಬುದ್ಧನ ಚಿತ್ರ ಎಷ್ಟು ಚೆನ್ನಾಗಿದೆ,ಇಂಥದನ್ನು ನಾನಿಲ್ಲೆ ಮೊದಲಸಲ ನೋಡಿದ್ದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: