ಓದಲೇಬೇಕಾದ ‘ಕನ್ನಮರಿ’

ಪಾರ್ವತಿ ಜಿ ಐತಾಳ್ 

**

‘ಕನ್ನಮರಿ’ ಪ್ರಸಿದ್ಧ ಲೇಖಕ ಕೃಷ್ಣಮೂರ್ತಿ ಹನೂರು ಅವರ ಐದನೆಯ ಕಾದಂಬರಿ. ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ಈ  ಕಾದಂಬರಿ  ಕಳ್ಳತನವನ್ನು ಕುಲ ಕಸುಬನ್ನಾಗಿಸಿದ  ಕನ್ನಮಾರಿ ಜನಾಂಗಕ್ಕೆ ಸೇರಿದ ಒಂದು ಕುಟುಂಬದಿಂದ ಬಂದ ಒಬ್ಬ ಹುಡುಗನ (ಕಥಾನಾಯಕ) ಕಥೆಯನ್ನು ಹೇಳುತ್ತದೆ. ಇಲ್ಲಿ ಕಳ್ಳತನವೆನ್ನುವುದು ನಿರುದ್ವೇಗದಿಂದ, ಅತ್ಯಂತ ಸಹಜವಾಗಿ ಬಳಸುವ ಪದ. ಶರಣಯುಗದ  ಬಸವಣ್ಣನವರ ಕಾಲದಲ್ಲಿ  ಕನ್ನದ ಮಾರಯ್ಯ ಎಂಬ ಒಬ್ಬ ಶರಣನ ಅನುಯಾಯಿಗಳು ಎಂದು ಹೇಳಲಾಗುವ ಕನ್ನಮಾರಿ ಎಂಬ ಒಂದು ಜನಾಂಗದವರು ಜೀವನೋಪಾಯಕ್ಕಾಗಿ ಅತ್ಯಂತ ಸರಳವಾದ ರೀತಿಯಲ್ಲಿ ಕಳ್ಳತನವನ್ನು ಅವಲಂಬಿಸಿದ್ದರು  ಮತ್ತು ಅನಂತರ ಮುಂದಿನ ತಲೆಮಾರಿನ ಎಲ್ಲಾ ಕುಟುಂಬಗಳೂ  ಆ ವೃತ್ತಿಯನ್ನು ಭಯಭಕ್ತಿಯಿಂದ ಮುಂದುವರೆಸಿಕೊಂಡು ಬಂದವು ಅನ್ನುವುದು ಐತಿಹ್ಯ. ಹನೂರರು  ಈ ಐತಿಹ್ಯದ ಆಧಾರದ ಮೇಲೆ ಈ ಕಾದಂಬರಿಯ ಚೌಕಟ್ಟನ್ನು ರೂಪಿಸಿದ್ದಾರೆ..

ಆಧುನಿಕ ಕಾಲಕ್ಕೆ ಬಂದ ನಂತರವೂ  ಈ ಜನಾಂಗದವರು ಮೂಲ ವೃತ್ತಿಗೆ ನಿಷ್ಠರಾಗಿ ಉಳಿದಿರುವುದು  ಒಂದು ವಿಶೇಷ. ಅವರ ಕಳ್ಳತನದ ವಿವರಗಳನ್ನು ಕೇಳಿದರೆ ನಾವು ದಂಗಾಗಿ ಬಿಡುತ್ತೇವೆ. ಇವತ್ತು ನಾವು ತಿಳಿದಿರುವ ಕಳ್ಳತನ ಎಂಬ ಪದದೊಳಗೆ ಅಡಗಿರುವ ಹಲ್ಲೆ-ದೌರ್ಜನ್ಯ- ಕ್ರೌರ್ಯಗಳ ಕಲ್ಪನೆಗೂ ಅದಕ್ಕೂ ಇರುವ ಅಜಗಜಾಂತರ ವ್ಯತ್ಯಾಸ ನೋಡಿ ‘ಹೀಗೂ ಉಂಟೆ? ‘ ಎಂದು ಮೂಗಿಗೆ  ಬೆರಳೇರಿಸುತ್ತೇವೆ. ಇಲ್ಲಿನ ಕಳ್ಳರ ಕುಟುಂಬವು ಮಾಡುತ್ತಾ ಬಂದ ಕಳ್ಳತನ ದೈನಂದಿನ ಅಗತ್ಯಗಳಿಗಷ್ಟೇ ಸೀಮಿತವಾದ ‘ಪುಡಿಗಳ್ಳತನ’.  ಅದು ವಸ್ತುಗಳನ್ನು ಕಳೆದುಕೊಂಡವರಿಗೆ ಸ್ವಲ್ಪವೂ ಗೊತ್ತಾಗದ ಹಾಗೆ ನೈಪುಣ್ಯದಿಂದ ಎಗರಿಸಿಕೊಂಡು ಹೋಗುವ ಕಳ್ಳತನ.  ಶುದ್ಧ ಮನಸ್ಸಿನ  ಸಂನ್ಯಾಸಿಗಳಂತೆ  ಅಂದಂದಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಮಾತ್ರ ಅವರ ಉದ್ದೇಶ. ನಾಳೆಗೆ ಎಂದು ಕೂಡಿಟ್ಟು ಐಷಾರಾಮದ ಜೀವನ ನಡೆಸುವುದು ಅಂದರೆ ಏನೆಂದೇ ತಿಳಿಯದ ಮುಗ್ಧರು ಅವರು. ಕನ್ನಮಾರಿ ತಂದೆ  ಅವರ ಕುಲದೇವತೆ. ಒಂದೇ ಒಂದು ದಿನ ತಮ್ಮ ‘ಕಾಯಕ’ವನ್ನು ಮಾಡದಿರುವುದು ಎಂದರೆ ಕುಲದೇವತೆಗೆ ಮಾಡುವ ದ್ರೋಹವೆಂದೂ ಅದು ಶಿಕ್ಷಾರ್ಹವೆಂದೂ ಭಾವಿಸುವ ಕಾಯಕ ನಿಷ್ಠೆಯನ್ನು ಕಾಪಾಡಿಕೊಂಡು ಬಂದ ಕುಲ ಅವರದ್ದು. 

ಅವರ ನಿರ್ಮೋಹದ ಬಗ್ಗೆ ಕಾದಂಬರಿಯ ಆರಂಭದಲ್ಲಿ ಒಂದು ಪಾತ್ರ ಹೀಗೆ ಹೇಳುತ್ತದೆ: 

‘ಈಗೀಗ ಈ ಕನ್ನಮಾರಿ ಗುಂಪಿನವುರು ಇಲ್ಲ ಅನ್ಕಳಿ.ಅವರ ಗಲಾಟೆ ಕಡಿಮೆ ಆಗಿ ಇತ್ತಿತ್ಲಾಗೆ ಹತ್ತಿಪ್ಪತ್ತು ವರ್ಷ ಆಯ್ತು. ಕಾಡಿನಿಂದ ಆಚೆ ಇರೋ ಊರ ಮೇಲೆಲ್ಲ ಕುರಿ, ಕೋಳಿ ಕಳ್ತನ ಮಾಡಿ, ಯಾವ್ದಾದ್ರೂ ಜಾತ್ರೆಲಿ ಕಾಸು, ಕರಿಮಣಿ ಹೊಡ್ಕಂಡು ಇಲ್ಲಿ ಬಂದು ವಾಸ ಇರುತ್ತಿದ್ದರು. ಅವುರು ಯಾವತ್ತು ಯಾರ್ಗೂ ಜಾಸ್ತಿ ತೊಂದರೆ ಕೊಟ್ಟವುರಲ್ಲ. ನಾನೇ ಇಪ್ಪತ್ತು ಮೂವತ್ತು ವರ್ಷದಿಂದ ಈ ಏರಿಯಾದಲ್ಲಿ ಟೈಲರಿಂಗು, ಬಟ್ಟೆ ಬಿಜಿನೆಸ್ಸು ಮಾಡ್ಕೊಂಡು ತಿರುಗ್ತಾ ಇದ್ದೇನಲ್ಲ? ಯಾವತ್ತು ನನ್ನ ಒಂದು ಸರ್ಟು ಕೊಡು, ಪಂಚೆ ಕೊಡು, ಚೆಡ್ಡಿ ತತ್ತ ಅಂತ ಕೇಳಿದವರಲ್ಲ. . ಅವರಿಗೆ ಹೊಸಬಟ್ಟೆ ಇಕ್ಕಂಡ್ರೆ ಆಗಿ ಬರೊಲ್ವಂತೆ !  ಲಕ್ಷ್ಮಿ ದೇವಿಗಂತೂ ಆ ಕುಲಕಂಪಳದವರನ್ನ ಕಂಡ್ರೆ ಬಿಲ್ ಕುಲ್ ಆಗಲ್ವಂತೆ.  ಸರಸ್ವತಮ್ಮನಿಗೂ ಅಷ್ಟೇ. ಇವರು ವಿದ್ಯೆ ಬುದ್ದಿ ಕಲಿಯುವುದಿಲ್ಲ. ಹಂಗಾಗಿ ಅವರು ದುಡ್ಡು ಕಾಸು ಅಕ್ಷರದವರಲ್ಲ. ಇನ್ನು ವ್ಯಾಪಾರ ಏನು ಬಂತು? ಅವ್ರು ಇವ್ರು ಕೊಟ್ಟ ಹಳೆಬಟ್ಟೆನೆ ಆಗಬೇಕು. ಹೊಸಬಟ್ಟೆ ಮೈಮೇಲಿದ್ರೆ ಕಳ್ಳಾಮೆ ಮಾಡಕೆ ಬರಲ್ಲ ಅಂತಿದ್ರು.'(ಪು.೧೫)

ಇಲ್ಲಿ ಕಥಾನಾಯಕ ಆಧುನಿಕ ಕಾಲದವನು. ಆದರೂ ತನ್ನ ಪರಿಸರದಿಂದ ಪ್ರಭಾವಿತನಾದವನಲ್ಲ. ತನ್ನ ಅಪ್ಪ, ತಾತ, ಮುತ್ತಾತಂದಿರು ಬಾಳಿ ಬದುಕಿದ್ದು ಹೇಗೆ ಅನ್ನುವುದರ ಅರಿವು ಅವನಿಗಿದೆ.‌ಅವನ ಹಿರಿಯರು ಇನ್ನೂ ಅದೇ ಕಾಡುಮಡುವು ಎಂಬ ಜಾಗದ ಕೊಂಪೆಯ ಗುಡಿಸಲಲ್ಲಿ  ಕಡು ಬಡತನದ ಮಧ್ಯೆ ಕಷ್ಟ ಪಟ್ಟು ಜೀವಿಸುತ್ತಿದ್ದಾರೆ. ಊರ ಹೊರಗೆ ಅವರು ಬರುವುದು ಅವರ ಪುಡಿಗಳ್ಳತನದ ಕೆಲಸಕ್ಕಾಗಿ ಮಾತ್ರ.‌ ಅಲ್ಲಿ ಜಗತ್ತು ಬದಲಾಗಿದೆ. ಜನರು ಪೂರ್ತಿಯಾಗಿ ಬದಲಾಗಿದ್ದಾರೆ. ರಸ್ತೆಗಳಿವೆ. ವಾಹನಗಳಿವೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಎಲ್ಲರೂ ಹಣ ಸಂಪಾದನೆ ಮಾಡಿ ಆರಾಮದ ಬದುಕನ್ನು ಸಾಗಿಸುತ್ತಿದ್ದಾರೆ. ಇದನ್ನು ನೋಡಿ ಕಥಾನಾಯಕನ ತಾಯಿಗೆ ಮಗನನ್ನು ಶಾಲೆಗೆ ಕಳುಹಿಸುವ ಆಲೋಚನೆ ಬರುತ್ತದೆ. ತಂದೆಯ ವಿರೋಧದ ನಡುವೆಯೇ ಮಗನನ್ನು ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಹೆಸರು ನೋಂದಾಯಿಸುವ ಸಂದರ್ಭದಲ್ಲಿ ಹೆಸರೇ ಇಡದ ಹುಡುಗನಿಗೆ ಏನು ಹೆಸರು ಬರೆಸುವುದೆಂದು ಗೊತ್ತಾಗದೆ ‘ಕನ್ನಮಾರಿ’ಎಂದು ಬರೆದುಕೊಳ್ಳಿ ಅನ್ನುತ್ತಾಳೆ. ಮೇಷ್ಟ್ರು ಕನ್ನಮರಿ ಎಂದು ಬರೆಯುತ್ತಾರೆ. ಹೀಗೆ ಕಥಾನಾಯಕ ಕನ್ನಮರಿಯಾಗುತ್ತಾನೆ.  ಸಹೃದಯಿ ಮೇಷ್ಟ್ರ ಒತ್ತಾಸೆಯಿಂದ ಅವನು ವಿದ್ಯಾಭ್ಯಾಸ ಮುಂದುವರೆಸಿ ವಿಶ್ವವಿದ್ಯಾಲಯದಲ್ಲಿ ಎಂ.ಎ.ಮಾಡುವ ಮಟ್ಟಕ್ಕೆ ಏರುತ್ತಾನೆ.  ವಿಶ್ವವಿದ್ಯಾಲಯದ ಬದುಕಿನ ಕೊನೆಯ ದಿನಗಳಲ್ಲಿ ಅವನಿಗೆ ಸಿಕ್ಕಿದ ಸಂಗಾತಿ ಚಂಪಾಳ ಮೂಲಕ ಕಲ್ಲುಕೋರೆಯ ಉದ್ಯಮಿಯಾದ ಅವಳ ತಂದೆಯ ಸ್ವಾರ್ಥ -ಕ್ರೌರ್ಯಗಳ ಬಗ್ಗೆ  ಅವನು ತಿಳಿದುಕೊಳ್ಳುತ್ತಾನೆ. ಮುಗ್ಧ ಸ್ವಭಾವ, ಪರೋಪಕಾರಿ ಬುದ್ಧಿಗಳ ಜೊತೆಗೆ ಕಾವ್ಯ ರಚನಾ ಸಾಮರ್ಥ್ಯವನ್ನೂ ಹೊಂದಿದ  ಕನ್ನಮರಿಯನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಮುಂದೆ ಚುನಾವಣಾ ರಾಜಕೀಯದಲ್ಲಿ ಮತಗಳಿಕೆಗಾಗಿ ರಾಜಕಾರಣಿಗಳು ಮತ್ತು ರಾಜಕಾರಣದಲ್ಲಿ ತಮ್ಮ ಯಶಸ್ಸಿಗಾಗಿ ಧರ್ಮವನ್ನೂ ಸೇರಿಸಿಕೊಳ್ಳುವ ಕುತಂತ್ರಿಗಳು  ಶ್ರೀ ಶ್ರೀ ಶ್ರೀ ಕಪಿಲಸಿದ್ಧ ಮಲ್ಲಿಕಾರ್ಜುನನನ್ನಾಗಿಸಿ ಕಾವಿ ತೊಡಿಸುವ ಮಟ್ಟಕ್ಕೆ ಹೋಗುತ್ತಾರೆ.  ಎಲ್ಲೆಡೆ ನಡೆಯುವ ಕಳ್ಳತನದ ವಿವಿಧ ಮುಖಗಳನ್ನು ನೋಡಿ ಅವನ ಮನಸ್ಸಿನಲ್ಲಿ ನಾಗರಿಕ ಜೀವನದ ಬಗ್ಗೆ ಗೊಂದಲ ಮೂಡುತ್ತದೆ.‌  ಎಲ್ಲವನ್ನೂ  ಗ್ರಹಿಸುವ ಸಾಮರ್ಥ್ಯ ಅವನಲ್ಲಿ ಇದ್ದರೂ ತನ್ನ ಮುಗ್ಧತೆಯನ್ನು ಕಳೆದುಕೊಳ್ಳದ ಅವನು ಎಲ್ಲೂ ಸೋಲುವುದಿಲ್ಲ. ಕೊನೆಗೂ ಅವನು  ತನ್ನ ಆತ್ಮಸಾಕ್ಷಿಗೆ ನಿಷ್ಠನಾಗಿ ನಡೆದುಕೊಂಡು ಆ ಜಾಲದಿಂದ ಹೊರಗೆ ಬಂದು ತನ್ನ ಮೂಲಸ್ಥಾನಕ್ಕೆ ಹಿಂದಿರುಗಿ ನಿಟ್ಟುಸಿರು ಬಿಡುತ್ತಾನೆ. ಹೀಗೆ ಮನುಷ್ಯನ ಜೀವನದ ಯಶಸ್ಸಿಗೆ ಕಾರಣವಾಗುವ ಧರ್ಮ-ಅರ್ಥ-ಕಾಮ-ಮೋಕ್ಷಗಳನ್ನು ಸ್ಥೂಲವಾಗಿ ನೋಡುವ ಕನ್ನಮರಿಗೆ ಪ್ರಾಯಶಃ ಅವನು ಮರುಪ್ರವೇಶ ಮಾಡುವ ಪ್ರಕೃತಿಯ ಮಡಿಲಿನಲ್ಲಿ ಅವುಗಳ ನಿಜವಾದ ಅರ್ಥವೂ ಆಗಬಹುದಾದ ಸಾಧ್ಯತೆಯನ್ನು ಓದುಗರ ಮುಂದಿಟ್ಟು ಕಾದಂಬರಿ ಕೊನೆಗೊಳ್ಳುತ್ತದೆ.

ಕನ್ನಮರಿಯ ಯಾತ್ರೆಯ ಮೂಲಕ ಕಥೆಗಾರರು ಇಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಅವ್ಯವಹಾರಗಳು, ಹಣ ಮತ್ತು ಅಧಿಕಾರಗಳಿಗಾಗಿ ನಡೆಯುವ ಕಿತ್ತಾಟ ಗಳು,  ಸಂಶೋಧನೆ-ವಿಚಾರ ಸಂಕಿರಣಗಳು, ಹೆಣ್ಣು ಮಕ್ಕಳನ್ನು ಮರುಳು ಮಾಡುವ ನಾಟಕಗಳ ಬಗ್ಗೆ ನೂರಾರು ವಿವರಗಳನ್ನು ದಾಖಲಿಸಿದ್ದಾರೆ. ಹಾಗೆಯೇ ಧಾರ್ಮಿಕ ಮತ್ತು ರಾಜಕೀಯ ಮುಖಂಡರ ಆಷಾಢಭೂತಿತನವನನ್ನೂ ಬಯಲಿಗೆಳೆದಿದ್ದಾರೆ. ಪರಿಸರವನ್ನು ಹಾಳುಗೆಡವಿ ಹಣ ಮಾಡಿ ತಮ್ಮ ಸುಖ ಭೋಗಗಳ ಅಮಲಿನಲ್ಲಿ ಕೌಟುಂಬಿಕ ಸಂಬಂಧಗಳನ್ನು ನಿರ್ಲಕ್ಷ್ಯ ಮಾಡುವ ಉದ್ಯಮಿಗಳ ಸ್ವಾರ್ಥಪೂರಿತ ಬದುಕನ್ನೂ ಚಿತ್ರಿಸಿದ್ದಾರೆ.‌

ಇಲ್ಲಿ ಕಥೆಯು ಕನ್ನಮರಿಯ ಅಧ್ಯಾಪಕರಾದ ಗುರುನಾಥ ಉಪಾಧ್ಯರ ಅನುಭವದ  ರೂಪದಲ್ಲಿ ಅಜ್ಞಾತ ನಿರೂಪಕನಿಂದ ಆರಂಭವಾಗುತ್ತದೆಯಾದರೂ ಮುಂದೆ ಕನ್ನಮರಿಯ ಡೈರಿಯ ಮೂಲಕ ಉತ್ತಮ ಪುರುಷ ನಿರೂಪಣೆಯಲ್ಲಿ ಸಾಗುತ್ತದೆ. ಈ ತಂತ್ರವನ್ನು ಹನೂರು ಅವರು ಕನ್ನಮರಿ ಮತ್ತು ಅವರ ವಂಶದವರ ಬಗ್ಗೆ ಇತರರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಉದ್ದೇಶಪೂರ್ವಕವಾಗಿ ಬಳಸಿರಬಹುದು. ಡೈರಿಯ ಮೂಲಕ ಕನ್ನಮರಿಯ ಮನೋ ವ್ಯಾಪಾರಗಳನ್ನು ನೇರವಾಗಿ ತಿಳಿಯುವ ಅವಕಾಶವೂ ಸಿಗುತ್ತದೆ. ಬಯಲುಸೀಮೆಯ ಆಡುಭಾಷೆಯ ಸೊಗಸು ಕೃತಿಯ ಸಹಜತೆಗೆ ಮೆರುಗನ್ನಿತ್ತಿದೆ. 

 ‘ಕನ್ನಮರಿ’  ೧೮ ನೆಯ  ಶತಮಾನದಲ್ಲಿ ಪಾಶ್ಚಾತ್ಯ  ಸಾಹಿತ್ಯದಲ್ಲಿ ಜನಪ್ರಿಯವಾಗಿದ್ದ  ‘ಪಿಕಾರೆಸ್ಕ್’ ಕಾದಂಬರಿಗಳ ಲಕ್ಷಣಗಳನ್ನು ಹೊಂದಿದ ಕಾದಂಬರಿ ಅನ್ನಬಹುದು.‌  ಕಥಾನಾಯಕನಾಗಿ ಒಬ್ಬ  ಇಷ್ಟವಾಗುವ ಗುಣಗಳಿರುವ ಕಳ್ಳ ಮತ್ತು ಅನ್ಯಾಯ – ಅವ್ಯವಹಾರಗಳಿಂದ ತುಂಬಿರುವ ಸಮಾಜದಲ್ಲಿ  ಅವನ ಅನೇಕ ಸಾಹಸಗಳನ್ನು  ಹಾಸ್ಯ-ವಿಡಂಬನೆಗಳೊಂದಿಗೆ ವರ್ಣಿಸುವುದು ಪಿಕಾರೆಸ್ಕ್ ಕಾದಂಬರಿಯ ಲಕ್ಷಣ.  ಆದರೆ  ಇಲ್ಲಿ ಈ ಕಾದಂಬರಿಯಲ್ಲಿ ಕಳ್ಳತನಕ್ಕೆ ಒಂದು ದೀರ್ಘ ಇತಿಹಾಸವೂ ಇದೆ.‌ ಆಧುನಿಕ ಸಮಾಜದಲ್ಲಿ ಸದ್ದಿಲ್ಲದೆ ಕನ್ನ ಕೊರೆಯುವ ಹೆಗ್ಗಣಗಳಿಗಿಂತ  ಇಂಥವರು ಮಾಡುವ ನಿರಪಾಯದ ಕಳ್ಳತನವೇ ಮೇಲು ಎಂದು ಓದುಗರಿಗೆ ಅನ್ನಿಸುವಂತಹ ಸನ್ನಿವೇಶಗಳನ್ನು ಕಥೆಗಾರರು ಇಲ್ಲಿ ಸೃಷ್ಟಿಸಿದ್ದಾರೆ.ಇಂಥಾ ಕಾದಂಬರಿ ಇದುವರೆಗೆ ಕನ್ನಡದಲ್ಲಿ ಬಹುಶಃ ಬಂದಿಲ್ಲ.

‍ಲೇಖಕರು avadhi

January 12, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: