ಗೊರೂರು ಶಿವೇಶ್ ನೋಡಿದ ’12th ಫೇಲ್’


ಬಾಳ ದಾರಿಯಲ್ಲಿನ ಕೈಮರಗಳ ಕುರಿತ ಕಥನದ “12th ಪೇಲ್”

ಗೊರೂರು ಶಿವೇಶ್

**

 ಮುನ್ನಾಬಾಯಿ ಎಂಬಿಬಿಎಸ್, ಲಗೆ ರಹೊ ಮುನ್ನ ಬಾಯಿ, ತ್ರೀ ಈಡಿಯಟ್ಸ್  ಮುಂತಾದ  ಹಾಸ್ಯ ಲೇಪಿತ ಸಾಮಾಜಿಕ ಸಂದೇಶವುಳ್ಳ ಚಿತ್ರಗಳ   ಚಿತ್ರಗಳ ಕಥೆ ಹಾಗೂ ನಿರ್ಮಾಣ 1942 ಎ  ಲವ್ ಸ್ಟೋರಿ ಮತ್ತು ಮಿಷನ್ ಕಾಶ್ಮೀರ್ ಚಿತ್ರದ ನಿರ್ದೇಶನಕ್ಕೆ  ಹೆಸರಾದ ವಿದು ವಿನೋದ್ ಚೋಪ್ರಾ ಮತ್ತೊಂದು ಚಿತ್ರದೊಂದಿಗೆ ನಮ್ಮ ಎದುರಿಗೆ ಬಂದಿದ್ದಾರೆ. ಈ ಹಿಂದಿನ ಚಿತ್ರಗಳ ಯಶಸ್ಸಿಗೆ ಕಥೆಯ ಜೊತೆಗೆ ಅಮೀರ್ ಖಾನ್, ಸಂಜಯ್ ದತ್, ರಣಬೀರ್ ಕಪೂರ್ ರಂತಹ ನಟರ ಸ್ಟಾರ್ ವ್ಯಾಲ್ಯು ಇದ್ದರೆ ಈ ಚಿತ್ರಕ್ಕೆ ಕಥೆಯೇ ನಾಯಕನಾಗಿದ್ದು ಇದು ಔಟ್ ಅಂಡ್ ಔಟ್  ವಿದು ವಿನೋದ್ ಚೋಪ್ರಾ ಚಿತ್ರ. ವಿಶೇಷವೆಂದರೆ ಯಾವುದೇ ಜನಪ್ರಿಯ ನಾಯಕರಿಲ್ಲದ ಹೆಚ್ಚು ಪ್ರಚಾರ ಮಾಡದೆ ಥಿಯೇಟರ್ ಗೆ ಬಂದ ಈ ಚಿತ್ರ ಬಂಡವಾಳದ ನಾಲ್ಕೈದು ಪಟ್ಟು ದುಡಿದು “ಸ್ಲೀಪರ್ ಹಿಟ್” ಖ್ಯಾತಿಗೆ ಪಾತ್ರವಾಗಿದೆ. ಅಷ್ಟೇ ಏಕೆ ? ಕಳೆದ ವಾರ ಡಿಸ್ನಿ- ಹಾಟ್ ಸ್ಟಾರ್ ಓಟಿಟಿ ಯಲ್ಲಿ ಬಿಡುಗಡೆಯಾದ ಈ ಚಿತ್ರ   ಅತಿ ಹೆಚ್ಚು ಜನರು ನೋಡಿದ  ಚಿತ್ರಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರತಿ ವರ್ಷ ಲಕ್ಷಗಟ್ಟಲೆ ಜನ ಯುಪಿಎಸ್ಸಿ ನಡೆಸುವ  ಐಎಎಸ್, ಐಪಿಎಸ್ , ಐ ಆರ್ ಎಸ್,  ಜೊತೆಗೆ ರೈಲ್ವೆ, ಬ್ಯಾಂಕಿಂಗ್ ಪರೀಕ್ಷೆಗಳು ಮತ್ತು ಆಯಾ ರಾಜ್ಯಗಳು ನಡೆಸುವ ಕೆ ಎಎಸ್ , ಕೆ ಇಎಸ್, ಎಸ್ ಐ… ಮುಂತಾಗಿ ವಿವಿಧ ರೀತಿಯ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುತ್ತಾರೆ . ಸರಾಸರಿ ಲೆಕ್ಕಾಚಾರ ಮಾಡಿದರೆ ಒಂದು ಹುದ್ದೆಗೆ ಒಂದು ಸಾವಿರಕ್ಕೂ  ಹೆಚ್ಚು ಮಂದಿ ಅರ್ಜಿಗಳನ್ನು ಹಾಕುತ್ತಾರೆ. ಇದೇ ಚಿತ್ರದಲ್ಲಿ ಪಾತ್ರವೊಂದು ಹೇಳುವಂತೆ ‘ಎರಡು ಲಕ್ಷ ಮಂದಿ ಪರೀಕ್ಷೆ ತೆಗೆದುಕೊಂಡರೆ ಅದರಲ್ಲಿ ಪ್ರಿಲಿಮ್ಸ್ ನಲ್ಲಿ ಆಯ್ಕೆ ಆಗುವವರು 2,000 ,ಅಂತಿಮ ಸುತ್ತಿಗೆ ಆಯ್ಕೆಯಾಗಿ ನಾಗರಿಕ ಸೇವೆಗೆ ಸೇರುವವರ ಸಂಖ್ಯೆ 150 ರಿಂದ 200.ಸರಿಸುಮಾರು ಸಾವಿರಕ್ಕೆ ಒಂದು. ಈ ರೀತಿ ಸಾವಿರಕ್ಕೆ ಒಂದು ಆಗುವವರ ಸಾಧನೆಯ  ಹಿಂದೆ ಒಂದು ಕಥೆ ಇದ್ದರೆ ,ಅಲ್ಲಿ ಆಯ್ಕೆ ಆಗುವವರು ಬಹುತೇಕ ಇಂಜಿನಿಯರಿಂಗ್ ,ಮೆಡಿಕಲ್ ಓದಿದ ಇಲ್ಲವೇ ಎಲ್ಲ ಸವಲತ್ತು ಹೊಂದಿದ ಇಂಗ್ಲಿಷ್  ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ ಹತ್ತಕ್ಕೆ  ಒಂಬತ್ತು. 

 ಯಾರೋ ಒಬ್ಬಿಬ್ಬರು ಮಾತೃಭಾಷೆಯಲ್ಲಿ ಓದಿ ಆ ಸಾಧನೆ ಮಾಡಿರುತ್ತಾರೆ. ಇಂತಹ  ಸಾಧನೆ ಮಾಡಿದ   ಹತ್ತೋ, ಇಪ್ಪತ್ತೋ ಮಂದಿಯನ್ನು ಹುಡುಕಿದರೆ ಅವರಲ್ಲೊಬ್ಬ ಎಸ್ ಎಸ್ ಎಲ್ ಸಿ ಇಲ್ಲವೆ ಪಿಯುಸಿಯಲ್ಲಿ ಫೇಲ್ ಆಗಿ  ಡಿಗ್ರಿಯಲ್ಲಿ ಮೂರನೇ ತರಗತಿಯಲ್ಲಿ ಪಾಸಾದರೂ ಕಠಿಣ ಪರಿಶ್ರಮ ಮತ್ತು ಅರ್ಪಣಾ ಭಾವ, ದೃಢ ನಿರ್ಧಾರಗಳ ಮೂಲಕ ತಮ್ಮ ಗುರಿಯನ್ನು ಸಾಧಿಸಿರುತ್ತಾರೆ. ಅಂತಹ ಲಕ್ಷಕೊಬ್ಬರ ಕಥೆ ಇಲ್ಲಿದೆ. ಚಿತ್ರವು ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಅವರ ಪತ್ನಿ ಐ ಆರ್ ಎಸ್ ಅಧಿಕಾರಿ ಶ್ರದ್ಧಾ ಜೋಶಿ ಅವರ ಜೀವನ ಕಥೆಯಿಂದ ಪ್ರೇರಿತವಾಗಿದೆ.

 ಕುಖ್ಯಾತ ಚಂಬಲ್ ಕಣಿವೆಯ  ಸಣ್ಣ ಹಳ್ಳಿಯಿಂದ ಬಂದ 2005 ರ  ಬ್ಯಾಚ್ ನ  ಐಪಿಎಸ್ ಅಧಿಕಾರಿ ಮನೋಜ್  ಕುಮಾರ್ ಶರ್ಮಾರವರ  ನಿಜ ಜೀವನದ ಕಥೆಯನ್ನಾದರಿಸಿ 12 th ಫೇಲ್ ಚಿತ್ರವನ್ನು ಮಾಡಲಾಗಿದೆ. ಅಜ್ಜ ಮಿಲಿಟರಿಯಿಂದ ಬಂದವನಾದ್ದರಿಂದ ಶಿಸ್ತು, ಪ್ರಾಮಾಣಿಕತೆ, ತಂದೆಗೂ  ಹರಿದಿದೆ .ಆದರೆ ಇದೇ ಪ್ರಾಮಾಣಿಕತೆ ತಂದೊಡ್ಡಿದ ಪರಿಣಾಮದಿಂದಾಗಿ ಊರಿನ ಸರಪಂಚನಿಗೆ ಹೊಡೆದು   ತಂದೆ ಸಸ್ಪೆಂಡ್ ಆಗಿದ್ದಾನೆ. ಇತ್ತ  ಅದೇ ದಿನ ಮನೋಜ್   12ನೇ ತರಗತಿ (ನಮ್ಮಲ್ಲಿ ಪಿಯುಸಿ) ಪರೀಕ್ಷೆಗೆ ಚೀಟಿ ಬರೆದುಕೊಂಡು ತಯಾರಾಗುತ್ತಿದ್ದಾನೆ . ಇಡೀ ಪ್ರಾಂತ್ಯಕ್ಕೆ ಪ್ರಾಂತ್ಯವೇ  ನಕಲು ಮಾಡಿ ಪಾಸಾಗಲು ಪ್ರಯತ್ನಿಸುತ್ತಿದ್ದ ಸಂದರ್ಭ. ವಿನೋದವೆಂದರೆ ಸಾಕಷ್ಟು ಚೀಟಿ ಬರೆದುಕೊಂಡು ಹೋದ ಆತನಿಗೆ ಅವರ ಮಾಸ್ಟರ್ “ಕಳೆದ ಬಾರಿ ನಿಮಗೆ ಚೀಟಿಯನ್ನು ಬರೆಯಲು ಕೊಟ್ಟರೂ ಸರಿಯಾಗಿ ಬರೆಯದೆ 200ಕ್ಕೆ 175 ಮಂದಿ ಫೇಲಾಗಿದ್ದೀರಿ.ಆದ್ದರಿಂದ ಉತ್ತರವನ್ನು ನೇರವಾಗಿ ಹೇಳುತ್ತೇನೆ , ಬರೆದುಕೊಳ್ಳಿ” ಎಂದು ಬೋರ್ಡ್ ಮೇಲೆ ಬರೆಯಲಾರಂಬಿಸುತ್ತಾರೆ ವಿದ್ಯಾರ್ಥಿಗಳೆಲ್ಲಾ ಖುಷಿಯಾಗಿ ಉತ್ತರ ಬರೆಯುವ ಸಮಯಕ್ಕೆ ಹಾಜರಾಗುವ ಡಿಎಸ್ಪಿ ದುಶ್ಶಂತ್ ಸಿಂಗ್ ,ಮುಕ್ತವಾಗಿ ಕಾಪಿ ಮಾಡುತ್ತಿದ್ದ ಕೇಂದ್ರಕ್ಕೆ  ಸಾಮೂಹಿಕ ಕಾಫಿಗೆ ದಿಗ್ಬಂದನ ಹಾಕುತ್ತಾರೆ.ಇದರಿಂದಾಗಿ ಆ ವರ್ಷ  ಇತರೆ ವಿದ್ಯಾರ್ಥಿಗಳ ಜೊತೆಗೆ ಆತನು 12ನೇ ತರಗತಿ ಪರೀಕ್ಷೆಯಲ್ಲಿ ಫೇಲಾಗುತ್ತಾನೆ. ಮುಂದಿನ ವರ್ಷ ಬೇರೆ ವಿದ್ಯಾರ್ಥಿಗಳು ಕಾಫಿ ಒಡೆದು ಪಾಸಾದರೆ ದುಶಾಂತ್ ಸಿಂಗ್ ಮಾತುಗಳಿಂದ ಪ್ರೇರಿತನಾಗಿದ್ದ ಈತ ಮಾತ್ರ ಸ್ವತಃ  ಬರೆದು ಪಾಸಾಗುತ್ತಾನೆ.ಮುಂದೆ ಸಾಹಿತ್ಯ ಮತ್ತು ಇತಿಹಾಸವನ್ನು ಅಭ್ಯಾಸ ಮಾಡಿ ಬಿಎಯಲ್ಲಿ ಮೂರನೇ ದರ್ಜೆಯಲ್ಲಿ ಪಾಸ್ ಆಗುತ್ತಾನೆ . 

ದುಶ್ಯಂತ್ ಸಿಂಗರಂತೆ ಪೊಲೀಸ ಅಧಿಕಾರಿಯಾಗಲು ಬಯಸುವ ಆತ ಪರೀಕ್ಷೆ ಬರೆಯಲು  ಕೋಚಿಂಗ್ ಪಡೆಯಲು ಗ್ವಾಲಿಯರ್ ಗೆ ಬರುವಾಗ ಅಲ್ಲಿ ನಡೆಯುವ ಘಟನೆಗಳು ಆತನನ್ನು ದೆಹಲಿಗೆ ಕರೆದೊಯ್ಯುತ್ತವೆ ಮುಂದೆ ಆತ ಐಪಿಎಸ್ ಪರೀಕ್ಷೆ ಬರೆಯಲು ಎದುರಿಸುವ ಸಂಕಷ್ಟಗಳು ,ಏಳು- ಬೀಳಿನ, ಹಾವು -ಏಣಿ ಆಟದ( ಚಿತ್ರದಲ್ಲಿ ನಾಗರಿಕ ಸೇವಾ ಪರೀಕ್ಷೆ ಕುರಿತಾಗಿ  ಇದನ್ನು ಉದಾಹರಣೆಯಾಗಿ ಬಳಸಿಕೊಂಡ ಪ್ರಾಸಂಗಿಕ ದೃಶ್ಯವಿದೆ) ಘಟನೆಗಳನ್ನು ಕುತೂಹಲಕಾರಿಯಾಗಿ ಹೇಳುತ್ತಾ ಚಿತ್ರ ಸಾಗುತ್ತದೆ. ನಿಜ ಜೀವನದ ಊರಣಕ್ಕೆ ಹಾಸ್ಯದ ಲೇಪನ ನೀಡಿ ಹುಡುಗರನ್ನು ರಂಜಿಸುತ್ತಲೇ ಯುವಕರಿಗೆ    ಸಂದೇಶ ,  ಪ್ರೇರಣೆ ನೀಡುವ ಕೃತಿಯಾಗಿ ಚಿತ್ರ ಮೂಡಿಬಂದಿದೆ.

ಚಿತ್ರದ ಪ್ರಮುಖ ವೈಶಿಷ್ಟವೆಂದರೆ ಇಲ್ಲಿನ ಪ್ರತಿ   ಸನ್ನಿವೇಶಗಳು  ಕುತೂಹಲ  ಕೆರಳಿಸುತ್ತಾ ಪ್ರತಿ ಘಟನೆಗಳು ಚಿತ್ರದ ಕಥೆಗೆ ತಿರುವು ನೀಡುತ್ತಾ ಸಾಗುವುದು. ನೈಜ ಘಟನೆಗಳಿಂದ ಈ ಕಥೆಯು ಪ್ರೇರೇಪಿತವಾಗಿರುವುದರಿಂದ ಸಹಜವಾಗಿ ನಮ್ಮ ನಿರೀಕ್ಷೆಗೂ ಮೀರಿ ಕಥೆ ತಿರುವು ಪಡೆದುಕೊಳ್ಳುತ್ತ ಸಾಗುತ್ತದೆ. ಉದಾಹರಣೆಗೆ ಪರೀಕ್ಷೆ ಬರೆದು “ಟೆರರಿಸಂ ಇನ್ ಇಂಡಿಯಾ “ಪ್ರಬಂಧವನ್ನು ಅತ್ಯುತ್ತಮವಾಗಿ ಬರೆದಿದ್ದೇನೆ ಆದ್ದರಿಂದ ಈ ಬಾರಿ ಆಯ್ಕೆ ಖಚಿತ ಎಂದು ಖುಷಿಯಿಂದ ಬೀಗುತ್ತಿದ್ದ ನಾಯಕನಿಗೆ ಅವನ ಗೆಳೆಯ  ಅದು *ಟೂರಿಸಂ ಇನ್ ಇಂಡಿಯಾ” ಎಂದು ತಿಳಿಸಿದಾಗ ಅವನು ಮಾಡಿದ ಎಡವಟ್ಟು ಅರ್ಥವಾಗಿ ಉತ್ಸಾಹ ಜರ್ರನೇ  ಇಳಿಯುತ್ತದೆ. ಇಂಥ ದೃಶ್ಯಗಳು ಅನೇಕ ಇವೆ. 

ಹೇಳಿ ಕೇಳಿ ಇದು ಬಯೋಪಿಕ್ ಗಳ ಕಾಲ . ಕ್ರಿಕೆಟ್ ಆಟಗಾರ ಧೋನಿಯವರ ಜೀವನವನ್ನಾಧರಿಸಿದ” ಎಂ ಎಸ್ ಧೋನಿ -ಅನ್ ಟೋಲ್ಡ್ ಸ್ಟೋರಿ “ಹಾಗೂ ಹಿಂದಿ ಚಿತ್ರನಟ ಸಂಜಯ್ ದತ್ ರವರ ಜೀವನವನಾದರಿಸಿದ “ಸಂಜು” ಹರಿಯಾಣದ ಕುಸ್ತಿಪಟುಗಳ ಜೀವನ ಆದರಿಸಿದ “ದಂಗಲ್” ಸೇರಿದಂತೆ ಕೆಲ ಚಿತ್ರಗಳು ಯಶಸ್ಸಿನ ಹಾದಿಯನ್ನು ಹಿಡಿದಿದ್ದರೆ ಬಹುತೇಕ ಚಿತ್ರಗಳು  ಬಿಗಿಯಾದ ಚಿತ್ರಕಥೆ ಇಲ್ಲದೆ ಸರಿಯಾದ ನಿರೂಪಣೆಯ ಕೊರತೆಯಿಂದ ವೈಫಲ್ಯವನ್ನು ಹೊಂದಿವೆ .ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆಯಾದ ಪ್ರಖ್ಯಾತ ಕ್ರಿಕೆಟರ್ ಮುತ್ತಯ್ಯ ಮರಳಿದರನ್ ಜೀವನವನ್ನಾಧರಿಸಿದ “800” ಇದಕ್ಕೊಂದು ಸ್ಪಷ್ಟ ಉದಾಹರಣೆ. 

ಆದರೆ ಈ ಚಿತ್ರದಲ್ಲಿ  ಎದ್ದು ಕಾಣುವುದು ವಿದು ವಿನೋದ್ ಚೋಪ್ರಾ ರವರ ಛಾಪು  . ಬಹುತೇಕ ಎಲ್ಲಾ ಹೊಸ ನಟರ ಕೈಯಲ್ಲಿ ಸಹಜ ಎನ್ನುವ ರೀತಿಯಲ್ಲಿ ಅಭಿನಯವನ್ನು ಹೊರ ತೆಗಿದಿರುವುದು ಒಂದು ವೈಶಿಷ್ಟವಾದರೆ ಪ್ರೇಮ ಕಥೆ ಇದ್ದರೂ ಪ್ರೇಮಗೀತೆಯನಿಡದೆ ಚಿತ್ರವನ್ನು ಗೆಲ್ಲಿಸಿರುವುದು ಅವರ ನೈಪುಣ್ಯಕ್ಕೆ ಸಾಕ್ಷಿ. ಮನೋಜ್ ಕುಮಾರ್ ಶರ್ಮಾ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸೆ,ಶ್ರದ್ಧಾ ಜೋಶಿ ಪಾತ್ರದಲ್ಲಿ ಮೇಧಾ ಶಂಕ ರ್ ,ಪ್ರೀತಮ್ ಪಾಂಡೆಯಾಗಿ ಅನಂತ್ ವಿ ಜೋಶಿ, ಗೌರಿ ಭಯ್ಯಾ ಪಾತ್ರದಲ್ಲಿ ಅಂಶುಮಾನ್ ಪುಷ್ಕರ್ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಚಿತ್ರ ಭಾರತೀಯ ವಿವಿಧ ರೀತಿಯ ಪರೀಕ್ಷಾ ಪದ್ಧತಿಗಳ ಕುರಿತಾಗಿ ಕ್ಷ ಕಿರಣ ಬೀರುವುದಷ್ಟೇ ಅಲ್ಲದೆ ರಾಜಸ್ಥಾನದ ಕೋಟಾಗೆ ಮುಗಿಬೀಳುವ ,ಜೆಇಇ ಹಾಗೂ ನೀಟ್ ಪರೀಕ್ಷಾರ್ಥಿಗಳ ರೀತಿ ನಾಗರಿಕ ಸೇವಾ ಪರೀಕ್ಷೆ ತಯಾರಿಗಾಗಿ ದೆಹಲಿಗೆ ಮುಗಿ ಬೀಳುವ ವಿದ್ಯಾರ್ಥಿಗಳು, ಅವರ ತಯಾರಿ ,ಅಲ್ಲಿನ ಕೋಚಿಂಗ್ ಸೆಂಟರ್ ಗಳು, ವಿದ್ಯಾರ್ಥಿಗಳನ್ನು ಸೆಳೆಯಲು  ಅವು ಹೂಡುವ ಹುನ್ನಾರಗಳನ್ನು ಕಣ್ಣೆದುರಿಗೆ ತರುತ್ತವೆ. 

ಇವೆಲ್ಲಕ್ಕಿಂತಲೂ ಮಿಗಿಲಾಗಿ ಚಿತ್ರದಲ್ಲಿ ಅಂತರ್ಗತವಾಗಿ ಹರಿದು ಹೋಗುವ ಮತ್ತೊಂದು ವಾಹಿನಿ ಇದೆ .ಅದುವೇ ಮನೋಜ್ ಕುಮಾರ್ ರವರ ಶೈಕ್ಷಣಿಕ ಜೀವನದ ಆರಂಭದಿಂದ ಐಪಿಎಸ್ ಅಧಿಕಾರಿ ಯಾಗುವವರೆಗಿನ ನಡುವೆ ಹಾದು ಹೋಗುವ ಅನೇಕರು ಅವರ ಜೀವನಕ್ಕೆ ಕೈ ದೀವಿಗೆ ಆಗುವುದರ ಜೊತೆಗೆ  ತಾವೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ತಮ್ಮ ಕೈಲಾದ ಮಟ್ಟಿಗೆ ನೆರವಾಗುವುದರ ಜೊತೆಗೆ ಹತಾಶ ಸ್ಥಿತಿಯಲ್ಲಿ ಧೈರ್ಯ ತುಂಬುತ್ತವೆ .ಅವರೆಲ್ಲರ ಬಗೆಗಿನ  ಮನೋಜರ ಕೃತಜ್ಞತೆಯು ನನಗೆ ಕವಿ ಸಿದ್ದಲಿಂಗಯ್ಯನವರ ಜೀವನ ಕಥೆಯನ್ನಾದರಿಸಿದ ಊರು-ಕೇರಿ ನಾಟಕವನ್ನು ನೆನಪಿಸಿತು. ಅಲ್ಲಿಯೂ ಕೂಡ ಶಾಲೆಗೆ ಹೋಗಲು  ಒಲ್ಲೆ ಎನ್ನುವ ಹುಡುಗನನ್ನು ಒತ್ತಾಯಪೂರ್ವಕವಾಗಿ ಶಾಲೆಗೆ ತಂದು ಕೂರಿಸುವ ದೊಡ್ಡಪ್ಪನಿಂದ ಹಿಡಿದು ಬೆಂಗಳೂರು ವಿಶ್ವವಿದ್ಯಾನಿಲಯದ ರೀಡರ್ ಸ್ಥಾನಕ್ಕೆ ಅಲ್ಲಿಯೇ ಅರ್ಜಿಯನ್ನು ಬರಸಿ ಕೊಂಡುಲ ಉದ್ಯೋಗ ನೀಡಿದ ಜಿಎಸ್ ಶಿವರುದ್ರಪ್ಪನವರ ವರಗೆ ಅನೇಕರನ್ನು ಧನ್ಯತಾಭಾವದಿಂದ ನೆನೆಸಿಕೊಳ್ಳುವುದು ನೆನಪಿಗೆ ಬಂತು. ಅವರು ನೆನಪಿಸಿಕೊಂಡ  ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಪದ್ಯದ ಸಾಲುಗಳಿವು, 

“ಎನಿತು ಜನ್ಮದಲಿ ಎನಿತು ಜೀವರಿಗೆ, ಎನಿತು ನಾವು ಋಣಿಯೊ, ತಿಳಿದು ನೋಡಿದರೆ ಬಾಳು ಎಂಬುದಿದು, ಋಣದ ರತ್ನಗಣಿಯೊ”

‍ಲೇಖಕರು avadhi

January 8, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: