ಹಿಂದಿ ಮೂಲ : ಬಚ್ಚಾ ಲಾಲ್ ‘ಉನ್ಮೇಶ್’
ಕನ್ನಡಕ್ಕೆ : ಸಿಕಂದರ್ ಅಲಿ, ತೋರಣಗಲ್ಲು
ಯಾವ ಜಾತಿಯೋ ತಮ್ಮ?
“ನಾನು ದಲಿತ, ಸಾಹೇಬ್ರೆ!”
ಅಲ್ಲಾ… ಅಂದರೆ, ನೀನು ಯಾವುದರಲ್ಲಿ ಬರುತ್ತೀಯಾ ?
ನಾನು ನಿಮ್ಮ ಬೈಗಳಲ್ಲಿ, ನಿಂದನೆಗಳಲ್ಲಿ ಬರುವವನು.
ನಾನು ಕೊಳಕು ಚರಂಡಿಗಳಲ್ಲಿ ಬರುವವನು
ಜೊತೆಗೆ ಪ್ರತ್ಯೇಕವಾಗಿಟ್ಟ ಊಟದ ತಟ್ಟೆಗಳಲ್ಲಿ ಬರುವವನು ಸಾಹೇಬ್ರೆ
ನೀನು ಹಿಂದೂಗಳಲ್ಲಿ ಬರುತ್ತೀಯಾ ಅಂದುಕೊಂಡಿದ್ದೆ ?
ಬರುತ್ತೀನಲ್ಲಾ ಸಾಹೇಬ್ರೆ… ಆದರೆ ನಿಮ್ಮ ಚುನಾವಣೆಗಳು ಬಂದಾಗ.
ಏನು ಉಣ್ಣುತ್ತೀಯಾ ?
ಒಬ್ಬ ದಲಿತ ಉಣ್ಣುವುದನ್ನೆ ಉಣ್ಣುತ್ತೇನೆ ಸಾಹೇಬ್ರೆ
ಅಲ್ಲಾ… ನನ್ನ ಅರ್ಥ ಏನು ತಿನ್ನುತ್ತೀಯಾ ಅಂತ ?
ನಿಮ್ಮಿಂದ ಒದೆಗಳು ತಿನ್ನುತ್ತೇನೆ
ಸಾಲಗಳ ಭಾರ ತಿನ್ನುತ್ತೇನೆ
ಹಾಗೆ ಹಣದ ಬಿಕ್ಕಟ್ಟಿನಲ್ಲಿದ್ದಾಗ ಉಪ್ಪು ಒಮ್ಮೊಮ್ಮೆ ಉಪ್ಪಿನಕಾಯಿ ತಿನ್ನುತ್ತೇನೆ ಸಾಹೇಬ್ರೆ
ನಾನು ಕೋಳಿ ಮಾಂಸ ತಿನ್ನುತ್ತೀಯಾ ಅಂದುಕೊಂಡಿದ್ದೆ
ತಿನ್ನುತ್ತೇನಲ್ಲಾ ಸಾಹೇಬ್ರೆ… ಆದರೆ ಚುನಾವಣೆಗಳು ಬಂದಾಗ.
ಏನು ಕುಡಿಯುತ್ತೀಯಾ ?
ಒಬ್ಬ ದಲಿತ ಕುಡಿಯುದನ್ನೇ ಕುಡಿಯುತ್ತೇನೆ ಸಾಹೇಬ್ರೆ
ಅಲ್ಲಾ.. ನನ್ನರ್ಥ ಏನೇನು ಕುಡಿಯುತ್ತೀಯಾ ?
ಅಸ್ಪೃಶ್ಯತೆಯ ದುಃಖ
ಒಡೆದುಹೋದ ಕನಸುಗಳ ಉಸಿರು
ಹಾಗೆ ಬೆತ್ತಲ ಕಣ್ಣುಗಳಿಂದ ನೋಡಬಹುದಾದ ಭ್ರಮೆ ಸಾಹೇಬ್ರೆ
ನಾನಂದುಕೊಂಡೆ ಶರಾಬು ಕುಡಿಯುತ್ತೀಯಾ ಎಂದು ?
ಕುಡಿಯುತ್ತೇನಲ್ಲಾ ಸಾಹೇಬ್ರೆ.., ಆದರೆ ನಿಮ್ಮ ಚುನಾವಣೆಗಳಲ್ಲಿ
ಏನು ಸಿಕ್ಕಿತೋ ತಮ್ಮ ?
ದಲಿತರಿಗೆ ಸಿಕ್ಕಿದ್ದು ಸಾಹೇಬ್ರೆ
ಅಲ್ಲಾ… ನನ್ನರ್ಥ ಏನೇನು ಸಿಕ್ಕೀತು ?
ಅವಮಾನದಿಂದ ಕೂಡಿದ ಜೀವನ
ನೀವು ಬಿಟ್ಟು ಹೋಗುವ ಕೊಳಕು
ಇದಲ್ಲದೆಯೂ… ನಿಮ್ಮಂತಹ ಪರಾವಲಂಬಿಗಳ ಗಲಾಮಿತನ ಸಾಹೇಬ್ರೆ.
ನನಗನಿಸಿತು ಭರವಸೆಗಳು ಸಿಕ್ಕಿವೆಯೆಂದು ?
ಸಿಗುತ್ತವಲ್ಲಾ ಸಾಹೇಬ್ರೇ.. ಆದರೆ ನಿಮ್ಮ ಚುನಾವಣೆಗಳಲ್ಲಿ
ಏನು ಮಾಡಿದೆಯೋ ತಮ್ಮ ?
ಒಬ್ಬ ದಲಿತ ಮಾಡುವುದು ಸಾಹೇಬ್ರೆ
ಅಲಾ.. ನನ್ನರ್ಥ ಏನೇನು ಮಾಡಿದ್ದೀಯಾ ?
ನೂರು ದಿನಗಳ ಕಾಲ ಕೆರೆಯಲ್ಲಿ ಕೆಲಸ ಮಾಡಿದೆ
ಬೆಳಿಗ್ಗೆ ಮತ್ತು ಸಂಜೆ ಬೆವರಿನಿಂದ ತೋಯ್ದು ಕಳೆದೆ
ಮತ್ತು ಹೋಗುತ್ತಾ ಬರುತ್ತಾ ಗೌಡರಿಗೆ ಸಲಾಮು ಹೊಡೆಯುವುದು ಸಾಹೇಬ್ರೆ
ನಾನೇನೋ ದೊಡ್ಡ ಕೆಲಸ ಮಾಡಿದ್ದೀಯಾ ಎಂದು ಭಾವಿಸಿದೆ.
ಮಾಡಿದ್ದೇನಲ್ಲಾ ಸಾಹೇಬ್ರೆ.. ನಿಮ್ಮ ಚುನಾವಣೆಗಳ ಪ್ರಚಾರ






ಕವನ ಮತ್ತು ಅನುವಾದ ಎರಡೂ ಚೆನ್ನಾಗಿದೆ. ನಿಮ್ಮ ಅನುವಾದಗಳನ್ನು ಗಮನಿಸುತ್ತಿದ್ದೇನೆ.
ಪ್ರತಿಭಾ ನಂದಕುಮಾರ್