ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದೇ ತಾಯ್ಮಕ್ಳು, ಈ ಭಾಷೆ ಕೊಟ್ಟ ಮಳೆಗಳು

ಸೂರ್ಯಕೀರ್ತಿ

ಹಿರೇಪುಸ್ಯ ಮತ್ತು ಚಿಕ್ಕಪುಸ್ಯ ಮಳೆಗಳು  ಒಂದೇ ತಾಯಿಯ ಮಕ್ಳು. ಒಕ್ಕಲಿಗನಿಗೆ ಭಾಷೆ ಕೊಟ್ಟ ಮಳೆಗಳಿವು, ಆದ್ರೆ ಈ ನಡುವೆ ಏಕೆ ಮರೆತು ಬಿಟ್ಟವು?

ಹೆತ್ತ ತಾಯಿಯ ಮೇಲೆ ಪ್ರಮಾಣ ಮಾಡಿದ ಮಳೆಗಳೆಂದು ಒಕ್ಕಲಿಗ ನಂಬಿ ಕುಂತಿರುವಾಗ ಮೋಸ ಮಾಡಲು ಇವಕ್ಕೆ ಅದೇಗೆ ಮನಸ್ಸಾಯಿತು? ಸರಿಯಾದ ಕಾಲಕ್ಕೆ ಮಳೆಯಾಗದೆ ರೈತನ ಬೆಳೆಯ ಕನಸು ಕೂಡಾ ಬೀದಿ ಪಾಲಾಯಿತು. ಹೀಗಾದ್ರೆ ರೈತನ ಬದುಕು ಚಿಂತನೀಯ!

ಜೂನ್ – ಜುಲೈ-ಆಗಸ್ಟ್ ತಿಂಗಳಲ್ಲಿ ಬರುವ ಈ  ಮುಂಗಾರು ಮಳೆಗಳು ಕಾಲ ತಪ್ಪಿವೆ. ನಮ್ಮ ಮನೆಯಲ್ಲಿ ಹೊಲಕ್ಕೆ ರಾಗಿ, ಗದ್ದೆಯಲ್ಲಿ ಭತ್ತದ ಒಟ್ಲು ಬಿತ್ತನೆ ಮಾಡಿರುತ್ತೇವೆ. ಬಿಳಿಕಲ್ಲು, ಕೆಂಪುಕಲ್ಲು, ಕರಿಕಲ್ಲು ಹೊಲಗಳಲ್ಲಿ ತೊಗರಿ, ಅವರೆ, ಕಾರಮಣಿ, ಹರಳು, ಎಳ್ಳು, ಹುಚ್ಚೇಳು ಮುಂತಾದ ದ್ವಿದಳ ಧ್ಯಾನಗಳ ಬಿತ್ತುತ್ತೇವೆ.

ಮಗೆ ಮಳೆಗೆ ಮುಖ ತೋರಿ ನಿಲ್ಲುವ ಈ  ಬೆಳೆಗಳು ಮಳೆಯ ಅಭಾವದಿಂದ ಬಿತ್ತನೆಯಲ್ಲಿ ಏರುಪೇರಾಗಿವೆ. ಭರಣಿಗೆ ಬಿತ್ತಿದ್ರೆ ಭಂಗವಿಲ್ಲದಷ್ಟು ಕಾಳು ಎನ್ನುವ ಮಳೆ ಗಾದೆಯ ಮಾತು ಇಂದಿಗೆ ಸುಳ್ಳಾಗಿದೆ! ರೈತನಿಗೆ ಮೋಸ ಮಾಡಿವೆ.

ನಮ್ಮಜ್ಜಿ ಮೂಟೆಕಟ್ಟಿ ಅಲ್ಲಲ್ಲಿ ಬಿತ್ತನೆಯ ರಾಗಿ, ಭತ್ತ, ಕಾಳುಗಳ ಚೀಲಗಳಿಗೆ, ಗುಡಾಣಗಳಿಗೆ ಹುಳು ಬಾರದಿರಲೆಂದು ರಾಗಿ ಉಬ್ಲು, ತೊಪ್ರೆ ಕಡ್ಡಿಯ ಬೂದಿ, ಕೆಂಮಣ್ಣು ಹಾಕಿ ಇಟ್ಟಿರುತ್ತಾರೆ. ಒಂದೊಂದು ಸಲ ಹವಾಗುಣಕ್ಕೆ ಬದಲಾಗಿ ಹುಳಾಡಿ (ಹುಳು ಹಿಡಿದ ಬೀಜಗಳು) ಬಿತ್ತನೆಗೆ ಯೋಗ್ಯವಾದ ಬೀಜಗಳಾಗಿರುವುದಿಲ್ಲ. ಇದರಿಂದ ಕೋಪಿಸಿಕೊಂಡ ತಾತನಿಗೆ ವಿಪರೀತ ಜಗಳ ಮತ್ತು ಹಿಟ್ಟು ಬಿಟ್ಟು ಮುನಿಸು ಕೂಡಾ ಅವನಿಗೆ. ಒಂದು ವಾರವಾದ್ರೂ ಊಟ ಮಾಡಕ್ಕಿಲ್ಲ. ಅಜ್ಜಿ ನೋಡಿ ನೋಡಿ ನಮಗೆ ಹೇಳೋರು.

“ಹೋಗ್ರಲಾ ಅವ್ನ ಹಿಟ್ಟಡ್ಗ ಮುನಿಸ್ಕೊಂಡು ಕುಂತಾವ್ನೆ, ವಾರಾಯಿತು ಮನೇಲಿ ಇಟ್ಟು ಉಂಡೀಲಾ, ಹಿಟ್ಬಡ್ಗ” ಅಂತಾ ಹಾಗೆ ಹೀಗೆ ಅಂತಾ ಬೈಯೋರು.
ತಾತನಿಗೆ ಬೀಡಿಯಂದ್ರೆ ಇಷ್ಟ ಅಮೃತೂರಿನ ಬುಬ್ಬಮ್ಮನ ಅಂಗಡಿಯಿಂದ ಒಂದು ಹತ್ತು ಕಟ್ಟು ತಂದು.

“ಅವ್ನು ಯಾರ್ಲ ಬೆಂಕಿ ಕೊಡ್ರಲಾ, ಹೇಳೋದು ಕೇಳಿಸಲ್ವೇ? ಥೂ….! ಅಯೋಗ್ಯರಾ..!” ಎಂದೆಲ್ಲಾ ಬೈದು. ಸರಕಾರದಿಂದ ಬರುತ್ತಿದ್ದ ಹತ್ತು ರೂಪಾಯಿಯ ಪ್ಯಾಕೆಟ್ ಸಾರಾಯಿಯ ಕುಡ್ದು ರಾತ್ರಿಯೆಲ್ಲ ಅಜ್ಜಿಯ ಬಗ್ಗೆ ನ್ಯಾಯ ಪಂಚಾಯ್ತಿ ಮಾಡೋರು.

ತಾತನ ನ್ಯಾಯದ ನಾಯಿ ಹೀಗಿರೋದು:-

“ಆ ಮುಂಡೇಮಗಾ ನಮ್ ಮಾವ ಎಮ್ಮೆ ಜೋಗಿ ಇವ್ಳನಾ ಗಂಟಾಕಿ ಬಿಟ್ಟಾ, ನಂಗೆ ಕಪಾ ಕೊಡಲಿಲ್ಲ, ಉಂಗುರ ಕೊಡಲಿಲ್ಲ, ಒಂಟೊಲೆ ಕೊಡಲಿಲ್ಲ, ಕಂಠಹಾರ ಮಾಡಿಸಲಿಲ್ಲ, ಎರಡೆತ್ತು, ನಗ ಗಾಡಿ ಏನೇನು ಕೊಡಲಿಲ್ಲ. ಸೊಂಡೆಕೊಪ್ಪದಿಂದ ಕಟ್ಟೆಬಸವಿನ ತಂದು ಸಾಕಿದಂಗೆ ಆಯ್ತು” ಎಂದೆಲ್ಲಾ ಹಿಂದಿನ ಪುರಾಣಗಳೆಲ್ಲ ಹಾಡುತ್ತಾ ಮನೆ ಹೊರಗಿನ ಪಡಸಾಲೆಯ ಮೇಲೆ ಕುಂತು ಚಡ್ಡಿಯಲ್ಲಿಯೇ ಉಚ್ಚೆ ಉಯ್ದು ರಾತ್ರಿಯೆಲ್ಲಾ ಕೆಂಪಿ, ಕೆಂಪಿ ಲೇ ಕೆಂಪಿ ಅಂತಾಲೇ ಕನವರಿಸಿಕೊಂಡು ಮಲಗಿರುವ ತಾತನ ಹತ್ತಿರ ನಾವ್ಯಾರು ಹೋಗ್ತಾ ಇರಲಿಲ್ಲ.

ಬೆಳಗ್ಗೆ ಕರುವಿನ ಹಸುವಿಗೆ ಕಾಲುಕಟ್ಟಿ ಹಾಲು ಕರೆಯುವ ಪಂಕ್ತಿ ಬರೋದು. ಅಜ್ಜ ಯಾರಿಗೂ ತಿಳಿಯದ ಹಾಗೇ ಚಡ್ಡಿ ಬದಲಾಯಿಸಿಕೊಂಡು ಕೆರೆಕಡೆ ಹೋಗೋರು. ಹಾಲು ಕೊಡೋ ಹಸು ಬೇರೆ ಒದ್ದಾಡಿ ಕೆದರಾಡಿ ನಮ್ಮ ಮೈಯನೆಲ್ಲ ಗಾಸಿ ಮಾಡೋದು.

ಹಸುವಿನ ಮುಂದೆ ಕಲಗಜ್ಜು ಇಟ್ರು ಇಲ್ಲ, ಹಸಿಹುಲ್ಲು ಹಾಕಿದ್ರೂ ಇಲ್ಲ ಏನ್ಕೂ ಜಪ್ಪಾಯ ಅನ್ನೋ ವಲ್ದು, ಸರಿ ಮಾಡ್ತೀನಿ ಅಂತಾ ಅಜ್ಜಿ ಮದ್ದೂರಿನ ಹಸೆಹಗ್ಗವ ತಂದು ಅದರ ಎರಡು ಕಾಲುಗಳ ಕಟ್ಟಿ ಕರ ಬಿಡೋರು. ಮುಂಡೇದನ ತನ್ನ ಕರುವಿಗೆ ಜಾಡ್ಸಿಜಾಡ್ಸಿ ಒದಿತದೆ! ಅಜ್ಜಿಗೆ ರೋಸೋಯ್ತು.

ರಾತ್ರಿಯೆಲ್ಲಾ ತಾತ ಹರಿಕತೆ ಕೇಳಿದ ಅಜ್ಜಿಗೆ ದೇವ್ರು ಮೈಮೇಲೆ ಬಂದು. ” ಎಲ್ಲಿ ಹೋದ್ನ ನಿಮ್ ತಾತ, ಕರಕೊಂಡು ಬರೋಗ್ರಲಾ, ಈ ಮುಂಡೇದನಿಗೆ ಐತೆ ಹಬ್ಬ” ಅಂದಾಗ ತಾತನ ಹುಡ್ಕೊಂಡು ಬಂದು ” ತಾತೋ ,ಅಜ್ಜಿ ಕರಿತಾದೆ ಬಾ, ಅದೇನೋ ಅರಜೆಂಟ್ ಅಂತಾ ಹೇಳ್ತಾ ಇವ್ನಿ ” ಅಂದಾಗ.
“ಅವ್ಳಗೆ ಬೇರೆ ಕೆಲ್ಸ ಇಲ್ವೆ, ನಿಮ್ಗೆ ಸಂಸಾರ ಕೊಟ್ಟಿವ್ನಿ ಅದೇನು ಬೇಕೋ ಮಾಡ್ಕೋಳ್ಳಿ ನಂದೇನು ಇಲ್ಲ, ಹೋಗ್ಲ ನೀನು ” ಎಂದು ಗದರಿದಾಗ ಮನೆಕಡೆ ಬರ್ತಿದ್ದೆ.

ಮಳೆ ಬೇರೆ ಜಿಯ್ಯೋ ಅಂತಾ ಬರೋದು, ಮಾಳಿಗೆಮನೆ ಅಲ್ಲಲ್ಲಿ ಸೋರೋದು ನಾನು ನಿಧಾನವಾಗಿ ಅಲ್ಲಲ್ಲಿ ಬಟ್ಲು, ಚಂಬು, ಮಡಿಕೆ, ಕುಡಿಕೆ, ಬಾಂಡ್ಲಿ, ತಟ್ಟೆ ಇವೆಲ್ಲಾ ಸೋರೋ ಹತ್ರ ಇಟ್ಟು ಅಜ್ಜಿಯ ಎರಡು ತೋಳುಗಳು ಸೇದಿಕೊಂಡು ಆನೆಮರಿ ತರ ಮಲಗ್ತಾ ಇದ್ದೆ. ರಾತ್ರಿಯೆಲ್ಲಾ ಮಳೆಯೋ ಮಳೆ ಮಳೆನಾಡಿನ ಮಳೆ ನಮ್ಮ ಬಯಲುಸೀಮೆಗೆ ಬರುತ್ತಿದ್ದನ್ನು ಕಂಡು ಈಗ ಆಶ್ಚರ್ಯ ಮತ್ತು ಕುತೂಹಲ!

ತಾತನಿಗೆ ಮಳೆ ಬಗ್ಗೆ ಗೊತ್ತು, ಬಿತ್ತನೆಯ ಬಗ್ಗೆ ಗೊತ್ತು ಪುರಾಣ ಶಾಸ್ತ್ರ ಉಪನಿಷತ್, ಮಹಾಕಾವ್ಯಗಳೂ ಕೂಡಾ ಗೊತ್ತು. ತಗಳ್ರೋ! ಅದೇಗೆ ಗೊತ್ತು ಅಂತಾ ಕೇಳಿ, ಒಂದನೆ ಕ್ಲಾಸು ಮುಗಿಸಿದ ತಾತನಿಗೆ ಎರಡನೇಯ ಕ್ಲಾಸ್ ಓದೋಕೆ ಮನೆಯಲ್ಲಿ ಬಡ್ತನ ಹಾಗೂ ಹಿಂಜರಿಕೆ. ತಾತನ ತಂದೆ ಸಾಸಲೇಗೌಡ ಹೆಣ್ಣಿನ ಜೂಜಿಗೆ ಹಲವಾರು ಗದ್ದೆ ತೋಟಗಳ ಮಾರಿ ಸಾರಾಯಿ ಕುಡ್ದು ಸತ್ತಿದ್ದ. ಅಜ್ಜನ ತಾಯಿ ಸಂಬಳಿಸಿಕೊಂಡು ಮಕ್ಕಳನ್ನೆಲ್ಲ ಸಾಕಿದ್ದು ಅಂತಾ ತಾತನೇ ನಂಗೆ ಹೇಳೋನು.

ನಮ್ಮೂರಿನ ಲಕ್ಷ್ಮೀನರಸಿಂಹನ ದೇವಾಲಯದ ಮುಂದೆ ನಡೆಸುತ್ತಿದ್ದ ಕಾವ್ಯ ಪ್ರವಚನ ಮತ್ತು ಹರಿಕತೆಗಳ ಪ್ರಭಾವದಿಂದ ನೂರಾರು ಬಯಲು ರಂಗಭೂಮಿಯಲ್ಲಿ ಭೀಮನಾಗಿ, ರಾವಣನಾಗಿ ಬಣ್ಣಬಳಿದುಕೊಂಡು ನಾಟ್ಕ ಆಡಿದ್ದ!

ಮಾತ್ತೆತ್ತಿದ್ರೆ ಭೀಮನ ಪೌರುಷದ ಮಾತುಗಳೇ ಬರೋವು ಅಜ್ಜಿ ಇವನ್ನೆಲ್ಲವನ್ನು ಕೇಳಿ ಕೇಳಿ ಸಾಕಾಗಿ ರೂಢಿ ಆಗಿತ್ತು ನನಗಂತೂ  ನಗುವೋ ನಗು. ಬೀದಿಲೆಲ್ಲಾ ತಾತನ ಹುಚ್ಚಾಟ ನೋಡಿ ಗಫ್ ನೇ ಕಲ್ಸ ಬಿಟ್ಟು ನೋಡೋರು ಇಲ್ಲ “ಅದೇನು ಆಡ್ತೀಯಾ ನರಸಿಂಹ ನೀನು “!ಅಂತ ಶಹಬ್ಬಾಸ್ ಕೂಡಾ ಮಾಡೋರು. ದ್ರೌಪದಿ, ದ್ರೌಪದಿ ಎಂದು ಜೋರಾಗಿ  ಕೂಗುವಾಗ ” ಹೋಗ್ಲ ಥೂ ಮುಂಡೇಮಗ್ನೆ ನಾಗಮಂಗಲ ನಾಟ್ಕ ಕಂಪೆನಿಯಲ್ಲಿ ಅವ್ಳೆ ಆ ಮಿಡ್ಕುಲಾಡಿ, ಆ ಚಂಬೇಲಿನೇ ಬೇಕೆ ನಿಂಗೆ” ಅಂತೆಲ್ಲ ಪಾಪ ದ್ರೌಪದಿ ಪಾತ್ರಧಾರಿಗೂ ಕೂಡಾ ಪೂಜೆ ಆಗೋದು!

ಇವೆಲ್ಲದರ ನಡುವೆ ನಾನು ಕಂಡ ಅತಿಹೆಚ್ಚು ದೃಶ್ಯವೆಂದರೆ ಮಳೆಯ ಸೊಬಗು! ಎಲ್ಲಿ ನೋಡಿದರೂ ನೀರೋ ನೀರು! ಭತ್ತದ ಗದ್ದೆಗಳು, ಕಬ್ಬಿನ ತೋಟಗಳು, ತೆಂಗಿನ ಗೊಂಚಲು ಕಾಯಿಗಳು, ಬಾಳೆ, ಶ್ರೀಗಂಧದ ಸಾಲುಗಳು, ಕೊಕ್ಕರೆಯ ಮೌನದ ಶಿಲೆಗಳು.

ಹೀಗೆಲ್ಲ ಇದ್ದ ನನ್ನೂರು ಕಾಂಕ್ರೆಟ್ ರೋಡ್, ಒಣಗಿದ ಕೆರೆಕಟ್ಟೆಗಳು, ಹತ್ತು ವರ್ಷದಿಂದ ಮಳೆ ಸರಿಯಾಗಿ ಬಾರದೆ ನಿರಾಶೆಯಾಗಿ ರೈತ ಕುಟುಂಬಗಳು ನಗರಗಳತ್ತ ಸುಳಿಯುತ್ತಿರುವುದು ಶೋಚನೀಯ. ಮನುಷ್ಯನಿಗೆ ಅಗತ್ಯವಾದ ಊಟ, ನಿದ್ದೆ, ಬಟ್ಟೆ, ಔಷಧಿ, ಶಿಕ್ಷಣ ಇವೆಲ್ಲವನ್ನು ಬಿಟ್ಟು ದುಡ್ಡಿಗಾಗಿ ಪರಿಸರವನ್ನೇ ನಾಶ ಮಾಡಿ ಅಳಿವಿನ ಅಂಚಿನಲ್ಲಿ ಮನುಷ್ಯ, ಪ್ರಾಣಿ ಹೋಗುತ್ತಿರುವುದು ಒಂದು ದುರ್ದೈವವೇ ಸರಿ!

ನಮ್ಮ ಮನೆಯಲ್ಲಿ ಸಂಸಾರದ ಹೋರಾಟದ ಜೊತೆಗೆ ಪ್ರೀತಿ, ವಾತ್ಸಲ್ಯ, ಮಮತೆ, ಸಂಬಂಧಗಳು ಅಳಿಸಿ ಹೋಗಿರಲಿಲ್ಲ. ಸದಾ ತುಂಬಿದ ಮನೆ- ಮನಗಳೆಲ್ಲವೂ ಇಂದು ಖಾಲಿ ಖಾಲಿಯಾಗಿವೆ ಈ ಮಳೆಯಂತೆ!

ಇವೆರಡು ಮಳೆಗಳು ಮಾತನಾಡಿಕೊಂಡು ಬರುವಂತಹ ಮಳೆಗಳು. “ನೀನು ಬಾ ಇಲ್ಲಂದ್ರೆ ನಾನು ಬರ್ತೀನಿ” ಅಂತಾ ಹೇಳಿದ ಮಳೆಗಳು ಇಂದು  ಮೈಮರೆತು ನಿಂತವೋ ಅಥವಾ ಮನುಷ್ಯನ ದುರಾಸೆಗೆ ಹೀಗೆ ಮಾಡ್ತಾ ಇದಾವೋ ನನಗಂತೂ ತಿಳಿಯಲಿಲ್ಲ ಆದರೆ ರೈತನ ಜೀವನವೇ ಒಂದು ಹೋರಾಟವೇ ಸರಿ.

‍ಲೇಖಕರು avadhi

7 September, 2019

3 Comments

  1. T S SHRAVANA KUMARI

    ಮಣ್ಣಿನ ವಾಸನೆಯ ಸೊಗಡಿನ ಬರಹ

  2. Lalitha Siddabasavaiah

    ಲೇಖನ ಸ್ವಾರಸ್ಯಕರ.

  3. ಅಭಿ ತೀರ್ಥಹಳ್ಳಿ

    ತುಂಬಾ ಚೆನ್ನಾಗಿದೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading