ಪ್ರಣಾಮ ಚಂದ್ರಶೇಖರ್
ಕನ್ನಡಕ್ಕೆ : ಚೈತ್ರ ಶಿವಯೋಗಿಮಠ
ಕಾಲ ಚಕ್ರ!!!
ಒಂದು ವೈಶಾಖದ ಮಧ್ಯಾಹ್ನ
ಹಾಗೇ ಹೆಣೆಯಲು ಕುಳಿತಳು
ಕಾಲಾಂತರಾಳದ ಸೋಜಿಗಮಯ, ಚತುರ ಕಥೆಗಳನ್ನ.
ಹೊರಡುವ ಅವಸರ, ಸಮಯ ಬಹು ಕಡಿಮೆ ಇನ್ನ!!
ನವಿರಾಗಿ ದಾರವ ಹೆಣೆದಿರಲು
ಸುಕ್ಕುಗಟ್ಟಿದ ಆ ಕೈಗಳು ತುಸು ನೋಯ್ದವು.
ಕಂಡ ವಸಂತಗಳು ಅದೆಷ್ಟೋ!!ಗತಿ ನಿಧಾನ.
ಆದರೂ ಆ ಬೆರಳುಗಳು ಮಾಗಿ ನುರಿತವು!
ಚಿನ್ನದ ಎಳೆಗಳ ಸುತ್ತ ಕರಿ ಮತ್ತೆ ಕಪ್ಪಿನ ಸುತ್ತ ಬಿಳಿ.
ಥೇಟ್ ಕಾರ್ಮೋಡಗಳ ಸುತ್ತಣ ಬೆಳ್ಳಿಗೆರೆಯಂತೆ!
ಇದು ಕೇವಲ ಬಣ್ಣದ ಹೆಣಿಕೆಯ ಚಿತ್ರವಲ್ಲ, ..
ಅವಳ ಜೀವನದ ಸುಂದರ ಚಿತ್ರ ಪಟದಂತೆ..
ಒಂದೊಮ್ಮೆ ಜಗತ್ತಿನೆಲ್ಲ ಸಮಯವೂ ಅವಳ ತೆಕ್ಕೆಯಲ್ಲೆ.
ಹಾಡಿದಳು, ಕುಣಿದು-ಕುಪ್ಪಳಿಸಿದಳು,ನಲಿದಳು.
ಕಾಲ ಚಕ್ರವದು ನಿಲ್ಲದು, ಸಮಯ ಸರಿದು
ಕಾಲನ ಛಾಯೆ ಕಣ್ಣಾ-ಮುಚ್ಚೆ ಆಟದಲಿ ಗೆಲ್ಲುವುದರಲ್ಲಿದೆ!
ಆಗ ಕಂಡ, ಮತ್ತೀಗ
ಗತಿಸಿದ ಸೂರ್ಯರನ್ನರಸಿದಳು.
ಆ ಮಾಗಿದ, ದಣಿದ ಮುಖದಲ್ಲೀಗ ಬಿಸುಪಿಲ್ಲ
ಇನ್ನೇನು ಎಲ್ಲವೂ ಮುಗಿಯುವುದಲ್ಲ!!!

ಆಸ್ವಾದಿಸುತ್ತಿದ್ದಾಳೆ ಮಳೆಯ ಘಮಲು,
ಹೊಲದಲ್ಲಿ ಪೈರಿನ ಬಳುಕುವ ಕಮಾಲು.
ಬಿಸಿಲಿಗೆ ಮುಖವೊಡ್ಡಿ ಮೈಮರೆತು ಮೆಲುಕಿದ್ದಾಳೆ
ಕಳೆದ ಆ ಹರೆಯದ ದಿನಗಳ ಅಮಲು..
ಮತ್ತೆ ಆ ದಿನಗಳು ಮರಳುವವು,
ಮತ್ತದೇ ಸೂರ್ಯ ರಶ್ಮಿ, ಮತ್ತದೇ ಗದ್ದೆ
ಮತ್ತೆ ನಲಿಯುವಳು ತಾರೆಗಳ ಅಂಗಳದಿ
ಬದುಕು ಮತ್ತೆ ಸಂಪೂರ್ಣಗೊಳುವುದು!!!
ತಂಬೆಲರ ಪಿಸು ಮಾತು,
ಜೀರುಂಡೆಯ ಝೇಂಕಾರ
ಎಲ್ಲವೂ ನೀರವತೆಯಲಿ ಕರಗಲಿವೆ.
ದಿವ್ಯ ನಿದ್ದೆಯಲವಳು ಜಾರಲು ಅಣಿಯಾಗಿದ್ದಾಳೆ.
ಅಸ್ತಂಗತವಾಯಿತು, ಆದರೆ ಮತ್ತೆ ಬೆಳಕಾಗುವುದು!
ಪ್ರತಿ ಇರುಳ ನಂತರ ಒಂದು ಸುಂದರ ಮುಂಜಾವು, ಕಾಲಚಕ್ರ ನಿಲ್ಲದೆ ತಿರುಗುವುದು!!






0 Comments