ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹತ್ತಿರಕ್ಕೆ ಬಂದರೆ ಸಂಭಾಳಿಸಿಕೊಳ್ಳಲು ಆಗತ್ತೇನೇ?

ಶಮ ನಂದಿಬೆಟ್ಟ 

ಸಮುದ್ರ ತೀರದಲ್ಲಿ ಹಾಕಿದ್ದ ಭವ್ಯ ವೇದಿಕೆ, ಅಲಂಕಾರ, ಫಳಫಳಿಸುವ ದೀಪಸಾಲು ಊಹುಂ, ಯಾವುವೂ ಅವಳಿಗೆ ಸಾಟಿಯಲ್ಲ. ಹಾಕಿದ್ದ ಲೆಹಂಗಾದ ನೀಲಿ ಸಮುದ್ರದಿಂದ ಕಡ ತಂದಂತಿದ್ದರೆ ಕೂದಲು ಅಲೆಗಳಿಗೆ ಪೈಪೋಟಿ. ಹಾಕಿದ್ದ ಚಿನ್ನದ ಬಳೆ ಅವಳ ಕೈ ಬಣ್ಣದೆದುರು ಮಂಕು. ಮುದ್ದು ಮಕ್ಕಳ ಫೋಟೋ ತೆಗೆಯುವುದರ ನಡುವೆ ಫೋಟೋಗ್ರಾಫರನ ಕ್ಯಾಮರಾ ಇವಳತ್ತ ತಿರುಗಿದ್ದು ಅದೆಷ್ಟು ಸಲವೋ?

ಸುತ್ತಲೂ ಚೌಕಾಕಾರದಲ್ಲಿ ಜೋಡಿಸಿಟ್ಟ ಖಾದ್ಯಗಳು. ರಿಸೆಪ್ಷನ್’ಗೆ ಬಂದವರೆಲ್ಲ ತಟ್ಟೆಗೆ ಏನೋ ಹಾಕಿಸಿಕೊಳ್ಳುವ ನೆಪದಲ್ಲಿ ಹೋಗಿ ಬರುವಾಗ ಸುಮ್ಮ ಸುಮ್ಮನೇ ಅವಳ ಪಕ್ಕದಿಂದಲೇ ಹಾದು ಹೋಗುತ್ತಾರೆ. “ನನ್ನ ಹುಡುಗಿಯಿವಳು, ನನ್ನವಳು ಮಾತ್ರ, ಸರೀರಿ ಅತ್ಲಾಗೆ” ಮನಸು ಚೀರುತ್ತಿದೆ. ಬುದ್ಧಿ ತಲೆ ಮೇಲೆ ಮೊಟಕಿ ಹೇಳುತ್ತದೆ “ಗಂಡನಲ್ಲದೇ ಪ್ರೀತಿಸುವವನಿಗೆ ಹೇಳುವ ಹಕ್ಕಿಲ್ಲ ಸುಮ್ಮನಿರು” ಇದ್ಯಾವುದೂ ಗೊತ್ತಾಗದವಳಲ್ಲ ಹುಡುಗಿ. ಕಣ್ಣಲ್ಲೇ ಭರವಸೆ ಕೊಡುತ್ತಾಳೆ. “ಸಾವಿರ ಹುಡುಗರು ಸುತ್ತಲಿ ಬಿಡು ಹಿಂದೆ, ನಾನು ನಿನ್ನವಳು; ನಿನ್ನವಳು ಮಾತ್ರ ದೊರೇ.”

“ಸುಳಿಮಿಂಚು ಸಿಕ್ಕಿದರೆ ಯಾರಿಗೆ ಬೇಡ ಹೇಳು, ನಿನ್ನನ್ನು ಕಂಡ್ರೆ ಮುದುಕನಿಗೂ ಆಸೆ ಬರತ್ತೆ ಕಣೇ. ನಂಗೇ ಇನ್ನೂ ಸಾಕಷ್ಟು ಸಿಕ್ಕಿಲ್ಲ. ಕೊಡಲಾರೆ ನಿನ್ನ ಯಾರಿಗೂ”.

ಪೊಸೆಸಿವ್’ನೆಸ್ ಕಂಡರಾಗದು ಎನ್ನುವವಳಿಗೂ ಇಂವ ಚೂರೇ ಚೂರು ಪೊಸೆಸಿವ್ ಆಗಿರಲೆಂಬ ಆಸೆ. ಒಳಗೊಳಗೇ ಕುಣಿವ ಹೃದಯ ಎಲ್ಲಿ ಹೊರ ಚಿಮ್ಮೀತೋ ಅಂಜಿಕೆ. ಬೇಕಂತಲೇ ಅವನ ಗೆಳೆಯನ ಪಕ್ಕ ನಿಂತು ಕಣ್ಣು ಮಿಟುಕಿಸುತ್ತಾಳೆ. ಕೈಲಿದ್ದ ತಟ್ಟೆ ಅಲ್ಲೇ ಬಿಟ್ಟು ಅವಳ ತುಟಿಯಂಚಿನ ಮೊಸರನ್ನದ ಅಗುಳಿಗೆ ತುಟಿಯಿಡಲೇ ಪಿಸುನುಡಿಯುತ್ತದೆ ಆಸೆ. ಕಣ್ಣ ನೋಟದಲ್ಲೇ ಅರಿಯುವ ಜಿಂಕೆ ಮರಿ ಕಂಡೂ ಕಾಣದಂತೆ ಕೆಳ ತುಟಿ ಕಚ್ಚಿ ಆಹ್ವಾನಿಸುತ್ತಾಳೆ. ತಾನು ಸುಮ್ಮನೊಂದು ತುಂಟ ನಗು ಬೀರಿದರೆ ಸಾಕು ಮತ್ತೇರಿ ಸೇರಿದ ಅಷ್ಟೂ ಜನರ ನಡುವೆ ತಬ್ಬಿ ಮುತ್ತಿಟ್ಟಾಳೆಂಬ ಭಯಕ್ಕೆ ತಾನೂ ಗಾಂಭೀರ್ಯದ ಮುಖವಾಡ ಹೊರದೇ ವಿಧಿಯಿಲ್ಲ.

ಬೆಟ್ಟದಷ್ಟಿದ್ದ ಕೆಲಸ ಬದಿಗೊತ್ತಿ ಇವಳಿಗೋಸ್ಕರ ಮಾತ್ರ ಬಂದರೆ ಕಣ್ಣಲ್ಲಿ ಕಣ್ಣಿಡದೇ ಪರಮ ಗಂಭೀರೆಯಂತೆ ಪೋಸ್ ಕೊಡುವವಳನ್ನು ಸೆಳೆದೊಯ್ಯುವ ಆಸೆ ಹತ್ತಿಕ್ಕುವುದು ಎಷ್ಟು ಕಷ್ಟ. ತೆಕ್ಕೆಯಲ್ಲಿರಿಸಿಕೊಂಡರೆ “ಹೀಗಲ್ಲ, ರಿಬ್ ಕ್ರಶಿಂಗ್ ಹಗ್ ಬೇಕೂ” ಎನ್ನುವವಳೇನಾ ಇಲ್ಲಿ ಇಷ್ಟು ದೂರ ನಿಂತಿದ್ದು? ನಿಮಿಷಕ್ಕೆ ಮೂರು ಸಲ “ತುಟಿ ಕಚ್ಚೋ” ಎನ್ನುವವಳಿಗಾ ಈ ಗಾಂಭೀರ್ಯ ?

ಅಲೆಗಳು ಪರಸ್ಪರ ಸ್ಫರ್ಧೆಗೆ ಬಿದ್ದಂತೆ ಒಂದರ ಬೆನ್ನೇರಿ ಇನ್ನೊಂದು ತೀರಕ್ಕೆ ಅಪ್ಪಳಿಸುತ್ತಿದ್ದರೆ ಯೋಚಿಸುತ್ತಾಳೆ – ಇವನ ಕೈ ಹಿಡಿದು ಎದುರು ನಿಲ್ಲಿಸಿ ಕೇಳಬೇಕು “ಇಂಥದ್ದೇ ಹುಚ್ಚು ಪ್ರೀತಿ ನಂದು ಸಂಭಾಳಿಸಬಲ್ಲೆಯಾ?” ಅಸಲಿಗೆ ಸಮುದ್ರ ತೀರದಂಥ ತಾಳ್ಮೆಯೇ ಅವನದು. ಎಷ್ಟು ಕ್ಯಾತೆ ತೆಗೆದರೂ ಉಹುಂ, ರೇಗಲೊಲ್ಲ. ಆ ಪುಟ್ಟ ಕಣ್ಣುಗಳಲ್ಲಿ ಇಂಥ ಅಸೀಮ ಶಾಂತಿ ಕಂಡು ಬೆರಗಾಗಿಯೇ ತಾನೇ ಚಾಚಿದ ತೋಳಿನೊಳಗೆ ಸಲೀಸಾಗಿ ನಡೆದು ಹೋಗಿದ್ದು? ಆದರೂ ಇಚ್ಟೊಂದು ಜನ ಪಕ್ಕದಲ್ಲೇ ಎಡ ತಾಕುತ್ತಿದ್ದರೆ ಹೀಗೆ ಮೌನ ಮುನಿ ಥರ ನಿಲ್ಲೋದಾ ? ಏನೋ ನೆಪ ಹಿಡಿದು ಪಕ್ಕಕ್ಕೆ ಬರಬಾರದಾ ? ಆಸೆಯಿಂದ ಕಾಯುತ್ತಾಳೆ.

“ಹತ್ತಿರಕ್ಕೆ ಬಂದರೆ ಸಂಭಾಳಿಸಿಕೊಳ್ಳಲು ಆಗತ್ತೇನೇ?” ಮನಸಿನ ಪ್ರಾಮಾಣಿಕ ಪ್ರಶ್ನೆ. ಅದು ನಿಜವೇ. ಅವನ ಕಿರು ಬೆರಳು ಸೋಕಿದರೂ ಸಾಕು ಅವಳು ಸುಳಿಗಾಳಿಗೆ ಸಿಲುಕಿದ ಚಿಗುರೆಲೆ. ನಿರೀಕ್ಷಿಸುತ್ತಾಳೆ, ಆ ಮನುಷ್ಯ ಕ್ಯಾಮರಾ ತನ್ನ ಕಡೆ ತಿರುಗಿಸಿದಾಗ ಹೇಗೋ ಬಂದು ಅಡ್ಡ ನಿಲ್ತಾನೆ, ಕಾಯುತ್ತಾನೆ ಕಣ್ರೆಪ್ಪೆಯ ಹಾಗೆ.

‍ಲೇಖಕರು avadhi

11 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading