ಒಂಟಿ ಹೆಣ್ಣು ಅಂದರೆ Easy Target ಆಗಿರುತ್ತಾಳೆ ಅಂತ ಅರಿವಾದದ್ದೇ ಅಲ್ಲಿ.

ಮಾನಸ ಮುಸ್ತಾಫ
ಲೇಖನವನ್ನು ಪ್ರಕಟಣೆಗಾಗಿ ಕಳಿಸಿದ ಮಾನಸಾಗೆ ವಂದನೆಗಳು
ಒಂದು ಫೋನ್ ಕಾಲ್…
ನನ್ನ ಬದುಕಿನ ದಿಕ್ಕನ್ನೇ ಬದಲಿಸಿತ್ತು… ಮುಸ್ಥಾಫ ಹೋಗಿ ಬಿಟ್ಟ… ತೊಡೆಯ ಮೇಲೆ 2 ತಿಂಗಳಿನ ಮಗು…
ಮಗಳ ನಾಮಕರಣ ಮುಗಿಸಿ ನನ್ನ ತಾಯಿ, ಅವರ ಸ್ನೇಹಿತ ಮತ್ತು ಮುಸ್ತಫ ಬೆಂಗಳೂರಿನ ಕಡೆ ಹೊರಟಿದ್ದರು ಮಧ್ಯೆ ತಿಪಟೂರಿನಲ್ಲಿ ಅಪಘಾತವಾಗಿತ್ತು.
ನನ್ನ ತಾಯಿ ಸೀರಿಯಸ್ ಆಗಿದ್ದರು… ಮುಸ್ತಫನ ಸ್ನೇಹಿತ ಸತೀಶ್ ಕೈ ಮುರಿದುಕೊಂಡಿದ್ದ ಮುಸ್ತಫಾ ಪ್ರಾಣವನ್ನೆ ಬಿಟ್ಟಿದ್ದ… ಬದುಕಿನ ಗಾಡಿ ಹಳಿ ತಪ್ಪಿತ್ತು…
ಮೊದಲೇ ಅಂತರ್ಧರ್ಮೀಯ ವಿವಾಹ. ಅದಕ್ಕೆ ಅವರ ಮನೆಯಲ್ಲಾಗಲೀ ನಮ್ಮ ಮನೆಯಲ್ಲಾಗಲಿ ಯಾವ ಮನ್ನಣೆಯೂ ಇರಲಿಲ್ಲ. ಬೆರಳೆಣಿಕೆಯ ಸ್ನೇಹಿತರಷ್ಟೇ ಬೆನ್ನಿಗೆ ನಿಂತದ್ದು ನಂತರದ ನಾಲ್ಕು ವರ್ಷಗಳು ಇಬ್ಬರು ಸೇರಿ ಒಂದೊಂದೇ ಇಟ್ಟಿಗೆ ಜೋಡಿಸುತ್ತಾ ಬಂದಿದ್ದೆವು. ನಾನು ಗರ್ಭಿಣಿಯಾದಾಗ ಮುಸ್ತಫಾ ನಾನು ಮಾಡುತ್ತಿದ್ದ ವ್ಯವಹಾರ ಕೂಡಾ ಬೇಡ, ಮನೆಯಲ್ಲಿ ಆರಾಮಾಗಿರು ಮಗು ಜೊತೆ ಮನೆಯ ಜವಾಬ್ದಾರಿ ನೋಡಿಕೊಳ್ಳುವೆ ಎಂದಾಗ ಅಂತೂ ಇಂತು ಬೆಂಗಳೂರಲ್ಲಿ ಒಂದು ಭದ್ರತೆ ಕಂಡಂಗಾಗಿತ್ತು…
ಅವನನ್ನು ಕಳೆದುಕೊಂಡು ಒಂಟಿಯಾಗಿ ನಿಂತಿದ್ದೆ… ಮತ್ತೆ ಅಲ್ಲಿಂದ ಶುರುವಾಗಿತ್ತು ಒಂದ ಮಹಾ ಯಾನದ ಮುನ್ನುಡಿ.
ಯಾರು ನನ್ನ ಕೈ ಬಿಡುವುದಿಲ್ಲ ನನ್ನ ಪರಿಸ್ಥಿತಿಯ ಅರಿವಿರುತ್ತದೆ ನನ್ನ ಬೆನ್ನಿಗೆ ನಿಲ್ಲುತ್ತಾರೆ ಅಂದುಕೊಂಡೆ ಆದರೆ ಆದದ್ದೇ ಬೇರೆ. ಮೊದಲ ನಿಂದನೆಯ ಸರಮಾಲೆ ಅವನ ಮನೆಯ ಕಡೆಯವರಿಂದಲೇ ಶುರುವಾಗಿತ್ತು. ‘ನಿನ್ನ ಮದುವೆಯಾದ್ದರಿಂದಲೇ ಅವನು ಸತ್ತಿದ್ದು, ನಿನ್ನ ಕಾಲ್ಗುಣ. ನೀನು convert ಆಗದೇ ಇದ್ದದ್ದು ನಮ್ಮ ದೇವರಿಗೆ ಇಷ್ಟ ಆಗಲಿಲ್ಲ ಅದಕ್ಕೆ ಹೀಗಾಯ್ತು. ಇತ್ತ ನನ್ನ ಸಂಭಂದಿಕರದ್ದು ಅದೇ ಕತೆ. ಕಾರಿನ ಇನ್ ಸೂರೆನ್ಸ್ ದುಡ್ಡು, ಅದು,ಇದು ಅಂತ ಬಂದ ದುಡ್ಡನ್ನು ಅದುಇದು ಕಷ್ಟ ತೋರಿಸಿ ಇನ್ನುಮುಂದೆ ನಾವೇ ಅಲ್ವಾ ನಿನಗೆ ಎಂಬ ದರ್ಪ ತೋರಿಸಿ ಕಿತ್ತುಕೊಂಡರು. ಕೊನೆಗೆ ದುಡ್ಡು ಮತ್ತು ಸಂಬಂಧ ಎರಡೂ ಇಲ್ಲದಂಗಾಯಿತು ಮತ್ತು ಜೀವನ ಅಲ್ಲೇ ಒಂದು ನಿಂತಿತ್ತು.
ಕ್ಯಾನ್ಸರ್ ಸಾಳದೂಂತ ಬಲಗೈ ಮತ್ತು ಬಲಗಾಲು ಮುರಿದುಕೊಂಡಿದ್ದರು ಅಮ್ಮ. ಪಕ್ಕದಲ್ಲಿ 6 ತಿಂಗಳ ಮಗು ಎಷ್ಟೋಸಲ ಇಬ್ಬರಿಗೂ ಒಂದೇ ಸಲ ಹಸಿವಾಗಿದೆ. ಒಮ್ಮೊಮ್ಮೆ ಕಕ್ಕನೂ… ಬಾಣಂತನ ಮಾಡಿಸಿಕೋಬೇಕಿದ್ದ ನಾನು ಅವರಿಬ್ಬರ ಹಾರೈಕೆಗೆ ನಿಂತಿದ್ದೆ…
ಅಮ್ಮ ಬೆಳಗ್ಗೆ ಎದ್ದಿರೋವ್ರು, ಮಗು ರಾತ್ರಿಯೆಲ್ಲ, ನಂಗೆ ನಿದ್ದೆ ಇರ್ತಿರಲಿಲ್ಲ (ನಿದ್ದೆ ಬರ್ತಾನೂ ಇರ್ಲಿಲ್ಲ) ಊಟ ಸರಿಯಾಗಿ ಸೇರ್ತಾ ಇರಲಿಲ್ಲ, ಥೈರಾಯ್ಡ್, ಪಿಸಿಓಡಿ, ಬಿಪಿ, ಶುಗರ್ ಎಲ್ಲಾ ಏರುಪೇರಾಗಿ ತೂಕ ಕ್ವಿಂಟಾಲ್ ಗೆ ಹತ್ತಿರವಾಗಿತ್ತು.
ಹೀಗಿರುವಾಗೆಲ್ಲ Facebook ಸೇರಿಬಿಡುತ್ತಿದ್ದೆ. Facebook ನಲ್ಲಿದ್ದ ಸ್ನೇಹಿತರು ಇನ್ ಬಾಕ್ಸ್ ನಲ್ಲಿ ನಾಲ್ಕು ಸಮಾಧಾನದ ಮಾತಾದ್ರೂ ಆಡುತ್ತಾರೆ ಅಂತ. ಆದರೆ ಅಲ್ಲೂ ಆದದ್ದೇ ಬೇರೆ. ಒಂಟಿ ಹೆಣ್ಣು ಅಂದರೆ Easy Target ಆಗಿರುತ್ತಾಳೆ ಅಂತ ಅರಿವಾದದ್ದೇ ಅಲ್ಲಿ. ಇನ್ನೂ ಇಷ್ಟೊತ್ತಾದರೂ ನಿದ್ದೆ ಬಂದಿಲ್ವಾ ? ಏನನ್ನು ನೆನಸ್ಕೋತಾ ಇದ್ರಾ ? ನಾನು ಮನೆಗೆ ಬರಬಹುದಾ ? ಕನಸಲ್ಲಿ ನೀವು ಬಂದಿದ್ರಿ ಇಂತವೆಲ್ಲಾ
ಇನ್ನು ನಾನು ಮನೆಯಿಂದ ಹೊರಗಡೆ ಹೊರಡಬೇಕೆಂದರೆ, ಮಗೂನ ಎತ್ಕೊಂಡು ಯಾರನ್ನಾದರು ಕರೆಯಲೇ ಬೇಕಿತ್ತು, ಒಬ್ಬಳಿಗೆ ಕಷ್ಟ ಗುತ್ತಿತ್ತು. ಆದರೆ ಹಾಗೆ ಕರೆದದ್ದು ಕೂಡಾ ತಪ್ಪಾಗಿತ್ತು. ಅವಳಿಗೇನು ದಿನಕ್ಕೆ ಒಬ್ಬ ಬರ್ತಾನೆ ಅಂತನ್ನಿಸಿ
ಒಮ್ಮೆ ವಾಕಿಂಗ್ ಮುಗಿಸಿ ಬೆಳಗ್ಗೆ ಮನೆಗೆ ವಾಪಾಸ್ಸಾಗುತ್ತಿದ್ದೆ ಅಪಾರ್ಟ್ ಮೆಂಟಿನ ಯಾವುದೋ ಒಂದು ಮನೆಯವರು ಊರಿಗೆ ಹೊರಟಿದ್ದರು. ಎದುರಿಗೆ ನನ್ನ ನೋಡಿದ ತಕ್ಷಣ ರೀ ಮನೆಗೆ ಹೋಗಿ ಒಂದೈದು ನಿಮಿಷ ಬಿಟ್ಟು ಹೊರಡೋಣ ಎಂದು ವಾಪಸು ಹೋದರು.
ಇನ್ನೊಮ್ಮೆ ಎದುರು ಮನೆಯಲ್ಲಿ ಮದುವೆ, ನಿಮ್ಮ ಮಗಳಿಗೆ ಹೇಳಿ ಮನೆಯ ಒಳಗಡೆಯೇ ಇರಲು ಎಂದು ಯಾರೋ ಬಂದು ಅಮ್ಮನಿಗೆ ಹೇಳಿ ಹೋಗಿದ್ದರು. ಪ್ರತೀ ವರ್ಷ ನನ್ನನ್ನು ಕೆಲವು ಹಬ್ಬಗಳಿಗೆ ಮನೆಗೆ ಕರೆಯುತ್ತಿದ್ದ ನನ್ನ ಸ್ನೇಹಿತರು ನನ್ನ ಜೀವನದಿಂದಲೇ ಕಾಣೆಯಾಗಿದ್ದರು.
ಒಂಟಿತನ ಮತ್ತು ವೈಧವ್ಯ ಎಂಬ ಸಮತೂಕದ ಎರಡು ನೋವುಗಳನ್ನು ನಾನು ಒಟ್ಟಿಗೆ ಅನುಭವಿಸಬೇಕಾಗಿ ಬಂದಿತ್ತು. ಹೀಗಿರುವಾಗ ಒಮ್ಮೆ ಮನೆಯಲ್ಲಿ ಮಗಳು ತೆವಳುತ್ತ ತೆವಳುತ್ತಾ ಹೊಸ್ತಿಲು ದಾಟಿದಳು ಅಮ್ಮ ನಾನು ಇಬ್ಬರೆ ಹಾಗೆ ಸಂಭ್ರಮ ಪಟ್ವಿ. ಹಾಗೇ ಮಾತು ಮಾತಲ್ಲಿ, ನೋಡು ನೀನು ತಾಯಿ ದುಃಖದಲ್ಲಿದ್ದೀಯಾ, ಮನಸ್ಸು ಸರಿಯಾಗಿಲ್ಲ ಇಂತ ಯಾವುದನ್ನು ಮಗು ನೋಡೊಲ್ಲ, ಕಾಲ ನಿಲ್ಲಲ್ಲ. ನೀನು ಮಗುವಿನ ಚಿಕ್ಕ ಪುಟ್ಟ ಬೆಳವಣಿಗೆಯನ್ನು ನೋಡಿ ಸಂತೋಷಪಟ್ಟರೆ ಅದೇ ಲಾಭ. ಆಮೇಲೆ ಆ ಸಮಯ ಸಿಗೂಲ್ಲ ಯೋಚಿಸಿನೋಡು ಅಂದರು. ಅವತ್ತು ಇಡೀ ರಾತ್ರಿ ನಿದ್ದೆ ಬರಲಿಲ್ಲ ಬೆಳಗಾಗುವ ಹೊತ್ತಿಗೆ ಒಂದು ನಿರ್ಧಾರಕ್ಕೆ ಬಂದಿದ್ದೆ ನಾನು ಮತ್ತು ನನ್ನ ಮಗಳು ಮತ್ತು ಅವಳಿಗೆ ಯಾವ ಕೊರತೆಯೂ ಆಗಬಾರದು ಅದು ನನ್ನ ಜವಾಬ್ದಾರಿ.
ಮತ್ತೆ ಕೈಬಿಟ್ಟೋಗಿದ್ದ ನನ್ನ ವ್ಯವಹಾರ ಕೈಗೆತ್ತಿಕೊಂಡೆ. ಮೊದಲು ಆರ್ಥಿಕವಾಗಿ ಭದ್ರವಾಗಿದ್ರೆ ಮುಂದೆ ಏನು ಎಲ್ಲವೂ ಸರಿಹೋಗುತ್ತೆ ಅಂತ. ಒಳಗಡೆಯಿಂದ ತುಂಭ ಅಭದ್ರತೆ ಕಾಡುತ್ತಿತ್ತು ಎಲ್ಲರು ಅದನ್ನು ಇನ್ನೊಂದು ಮದುವೆ ಮಾಡ್ಕೋ ಸರಿ ಹೋಗತ್ತೆ ಅಂದರು… ನನಗೆ ಅದೂ ಸರಿ ಅನ್ನಿಸಲಿಲ್ಲ ಅದೊಂದು ಮಾನಸಿಕ ಖಿನ್ನತೆಯ ಸ್ಥಿತಿ ಅಂತ ಗೊತ್ತಾದ ತಕ್ಷಣ Psychologist ಹತ್ರ counselling ಗೆ ಹೋದೆ ಸುಮಾರು 8 session ಅನ್ಸುತ್ತೆ ನಾನು ಸುಧಾರಿಸುತ್ತಾ ಬಂದೆ. ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ ಅದಕ್ಕೆ ನಾನು Treat ment ಎಂದುಹೇಳಿಕೊಳ್ಳೋಕೆ ನನಗೆ ಯಾವುದೇ ನಾಚಿಕೆ ಇಲ್ಲ. Im Fact I Feel More content than before…
ನಾನು ಮಗಳಿಗೆ ಮತ್ತು ಅಮ್ಮನಿಗೆ ಇಬ್ಬರಿಗೂ ಟೈಂ ಕೊಡಬೇಕು, ಮತ್ತು ನನ್ನ ದುಡುಮೆ ನನ್ನ entertainment ಮಾನಸಿಕ ಸ್ವಾಸ್ಥ್ಯ, ಆರೋಗ್ಯ ಎಲ್ಲವನ್ನೂ ನಿಭಾಯಿಸಿಕೊಳ್ಳಬೇಕಿತ್ತು. ಒಂದೇ ಮಾತಲ್ಲಿ ಹೇಳಬೇಕೆಂದರೆ ನಾನು ಆಲದ ಮರವಾಗಬೇಕಿತ್ತು.
ಮಾನಸಿಕವಾಗಿ ನಾನು ಪ್ರಪಂಚವನ್ನು ಎದುರಿಸಬೇಕಿತ್ತು. ಅದಕ್ಕೆ ಸಿದ್ಧಲಾಗುತ್ತಾ ಹೋದೆ. ನಾನು ಸಂತೋಷವಾಗಿದ್ದರೆ ಅದು ಕೂಡ ತಪ್ಪಾಗಿ ಕಾಣಬಹುದು ಅನ್ನೋ ತರಹ ಆಗೋಗಿತ್ತು, ಆದರೆ ಯಾವಾಗ ಇದನ್ನೆಲ್ಲ ಮೀರಿ ನಿಲ್ಲಬೇಕು ,ಬದುಕು ಕಟ್ಟಿಕೊಳ್ಳಬೇಕು ಅಂತ ನಿರ್ಧಾರ ಮಾಡಿದೆನೋ ಅದಕ್ಕೆ ಪೂರಕವಾದ ವ್ಯವಸ್ಥೆಗಳು ಆಗುತ್ತಾ ಹೋದವು.
Child psychology ಮಾಡಿಕೊಂಡೆ ಮಗು ಬಗ್ಗೆ ತಿಳಕೊಳ್ಳೋಕೆ ಸರಿಯಾದದ್ದು ಮಾತ್ರ ನನ್ನ psychology. ದೈಹಿಕವಾಗಿ ಫಿಟ್ ಇದ್ದರೆ ಮಾನಸಿಕವಾಗಿಯೂ ಫಿಟ್ ಆಗಬಹುದು ಎಂದು ಗೊತ್ತಾದ ತಕ್ಷಣ ಯೋಗ ಮತ್ತು ಜಿಮ್ ಶುರು ಮಾಡಿದೆ ಅದಕ್ಕೆ ಪೂ ಪೂರಕವಾಗಿ Nutrition Cours ಮಾಡಿಕೊಂಡೆ ಬಹಳಷ್ಟು ಖಾಯಿಲೆಗಳಿಗೆ ಆಹಾರದಲ್ಲೇ ಸರಿ ಮಾಡಬಹುದು ಎಂಬುದು ಗೊತ್ತಾಯಿತು . ಬೆಳಗ್ಗೆ ೫ ಕ್ಕೆ ಎದ್ದರೆ ಒಂದು ಕ್ಷಣವೂ ಬಿಡುವಿಲ್ಲದಂತೆ ನನ್ನ ದಿನವನ್ನು Plan ಮಾಡಿಕೊಂಡಿರುತ್ತೇನೆ. ಬೆಳಗ್ಗೆ ಅಡುಗೆ ಎಲ್ಲ ಮುಗಿಸಿ ಮಗೂನ ಸ್ಕೂಲಿಗೆ ಬಿಟ್ಟು ಹೊರಟರೆ ಇನ್ನು ರಾತ್ರಿ ೮ ಕ್ಕೆ ಮನೆ ಸ್ಕೂಲಿಂದ ಬರುವ ಮಗಳು ನನ್ನ ಜೊತೆನೆ ಇರ್ತಾಳೆ . ರಾತ್ರಿ ೧೦ ; ೩೦ ಗೆಲ್ಲ ನಿದ್ದೆ , ಮಲಗಿಬಿಡುತ್ತಾಳೆ. ಮತ್ತೆ ಮುಂದಿನ ಮುಂಜಾನೆ ಎಚ್ಚರ .
ಸದ್ಯಕ್ಕೆ ಸಂಸ್ಕೃತ ಮತ್ತು ಸಂಗೀತ ಕಲಿಯುತ್ತಿದ್ದೇನೆ. ಮುಂದೆ ಜಪಾನೀಸ್ ಕಲೀಬೇಕು . ಪಟ್ಟಿ ದೊಡ್ಡದಿದೆ ಬೇಡದ ಯೋಚನೆಗಳು ಸುಲಿಯಲೂ ಸಮಯವಿಲ್ಲ. ಜೀವನ ಒಂದು ಹಂತಕ್ಕೆ ಬಂದಿದೆ . ಸರಿ ಈಗಲಾದರೂ ನಿನಗೆ ಅಂತ ಒಬ್ಬರು ಬೇಡ್ವಾ ಅಂತ ಕೆಲೋವ್ರಿಗೆ…
ನಕ್ಕು ಹೇಳ್ತೀನಿ ನನಗೆಂತ ಮಗಳು ಇದ್ದಾಳೆ ಸಧ್ಯಕ್ಕೆ ಹಾಂ … ಇನ್ನೊಂದು ಹದಿನೈದು ವರ್ಷಕ್ಕೆ ಮಗಳಿಗೆ ರೆಕ್ಕೆ ಬಲಿತು ಹಾರುವಂತಾದಾಗ. ನಾನು ಮನೆಯಲ್ಲಿ ಒಬ್ಬಳೇ ಆಗೋಗ್ತಿನಲ್ಲ ಆಗ ನನ್ನ ಜೊತೆ ಮಾತಾಡ್ತಾ ಕಾಫಿ , ತಿಂಡಿ ತಿನ್ನೋಕೆ ಒಬ್ಬರು ಬೇಕಾಗಬಹು ಸಧ್ಯಕ್ಕೆ ಬೇಕಿಲ್ಲ ಎಂದು …






ಹೀಗೆ ಬಿಜಿಯಾಗಿರಿ.. ಆಗೋದೆಲ್ಲಾ ಆಗ್ತಿರ್ಲಿ. ಕಲಿಯೋದನ್ನೆಲ್ಲಾ ಕಲಿತುಬಿಡಿ.. ಬದುಕಿನೆಡೆಗಿನ ವ್ಯಾಮೋಹ ಕಡಿಮೆಯಾಗದಿರಲಿ ಅಷ್ಟೇ! ಆಲ್ ದಿ ಬೆಸ್ಟ್ ಫಾರ್ ಎವೆರಿಥಿಂಗ್..
Manasa good luck. Nimma jeevana preeti heege irali
Keep yourself going forward. You are a strong woman.