ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಊರಿನ ಪದ್ಯ..

 

 

 

`ಶ್ರೀ’ ತಲಗೇರಿ

 

 

 

ಆಗಾಗ ತೊಳೆವ ಬುಟ್ಟಿಯೊಂದು
ಬೆಕ್ಕ ಹಿಂಡು ಕಟ್ಟಿಕೊಂಡು
ಹಾಜರಾತಿಗೆ ಕೂಗಿದಂತೆ
ಮಾರುತಿತ್ತು ಮಧ್ಯಾಹ್ನದ ತುಂಬ
ಕಡಲಿನಲ್ಲಿ ಒಟ್ಟುಹಾಕಿದ ತಾಜಾ ಹೆಣವ..
ಬೀರ ಗೌರಿ ಮಾಸ್ತಿ ಗೋಳಿ
“ಖಾಯಂ ತಗಳುದು,ಒಂದೆರ್ಡ್ ಹೆಚ್ಗೆ ಹಾಕು”
ಅನ್ನುವಷ್ಟು ಸಲಿಗೆಯಿತ್ತು
ಸುಣ್ಣ ಬಳಿದ ಎಲೆಯ ಮಡಚುತ್ತ..

ಏದುಸಿರು ಬಿಡುವ ಬಾಲವೊಂದು
ಮತ್ತೆ ನೆಗೆಯುತ್ತಿತ್ತು ಮೂರು ಸುತ್ತು ಹಾಕಿ..
ಗದ್ದೆಯಂಚ ನಡಿಗೆಯಲ್ಲಿ
ನಾಲ್ಕು ಹೆಜ್ಜೆ ಜಾಸ್ತಿಯಿಲ್ಲಿ..
ನೆಲದ ಮೋಹಕೆ ಅಧಿಕಾರ ಚಲಾಯಿಸುತಿತ್ತು
ಮಧ್ಯ ನಿಂತ ಬೆಚ್ಚು ನೋಡಿ..
ಕಳೆಯೆಲ್ಲ ಸವರುತಿದ್ದಳು ಹಮ್ಮಿ
ಮೊಣಕಾಲ ತನಕ ಸೀರೆ ಎತ್ತರಿಸಿಕೊಂಡು..
ಊಟಕ್ಕೆ ಕೂರುವಾಗ ಖಾಲಿಯಾದ
ಬಾಳೆ ಎಲೆಗಳ ಸಂಗ್ರಹ;
ಕತ್ತಿಯೊಂದು ಹೊರಡುತ್ತಿತ್ತು ಸ್ವೀಕೃತ ಅಪರಾಧಕ್ಕೆ..

ಹಕ್ಕೆ ಹೊಳ್ಳಿಯಲ್ಲಿ ಮಧ್ಯಾಹ್ನದ ಹರಟೆ
ಆಗಾಗ ನಡೆವ ಕಂಬಳ ಮತ್ತು ಚಾ ಪಾರ್ಟಿ..
ದೃಷ್ಟಿ ತಾಕಬಾರದೆಂದು ಛಾವಣಿಗೆ
ಹಚ್ಚಿಟ್ಟ ಕಪ್ಪು ಅವಳದೇ ಕೊಡುಗೆ..
ಯಾರದೋ ಹಸಿವು ನೀಗುತ್ತದೆ
ಬೊಂಬು ಹಿಡಿದು ಊದಿದಾಗಲೆಲ್ಲಾ..
ಬಾಟಾ ಅಥವಾ ಪ್ಯಾರಾಗಾನ್ ಹವಾಯಿ
ಚಪ್ಪಲಿ ಮೆಟ್ಟಿದ ಕಾಲ್ಗಳು
ದಿನಪೂರ್ತಿ ಅಡಿಕೆ ಮರದ ಬುಡ
ಸರಿಪಡಿಸುತ್ತವೆ, ಗೊಬ್ಬರ ಮೆತ್ತಿದ ಕೈಗಳಲ್ಲಿ..

ಊರ ಬಸ್ ಸ್ಟ್ಯಾಂಡ್ ದಾಟಿಬಂದ
ಬೆನ್ನುಚೀಲ ತಿರುಗಿ ಬರುವ ಗಳಿಗೆಗಾಗಿ
ಊರುಗೋಲ ಮೇಲೆ ನಿಂತ
ಸುಕ್ಕು ಸುಕ್ಕು ಹವೆಯು..
ಬಾಗು ಬೆನ್ನು ಹಣೆಯ ಕೈ ರೆಪ್ಪೆಯಗಲ ನೋಟ
ನಿಶ್ಶಬ್ದ ತಿರುವಿನಲಿ ಕಿರುಚುವ ಕಾಗೆ ಹಿಂಡು..
ಗದ್ದೆಯಲಿ ಮರಕ್ಕೆ ಕಟ್ಟಿದ ಸೀರೆ ಜೋಕಾಲಿ
ಬಿಟ್ಟೂ ಬಿಡದೇ ಹುಡುಕುತ್ತಿದೆ ಅವಳ ಲಾಲಿ..
ನಿಮ್ಮೆದೆಯ ಬೀದಿಯಲಿ ಕಾಲು ಮುರಿದು
ಬಿದ್ದಿದ್ದರೆ ನನ್ನ ಊರಿನ ವಿಳಾಸ
ಮರೆಯಬೇಡಿ ದಯವಿಟ್ಟು;
ಬಾಯಿಗಂಟೇ ಇದೆ ಕೈತುತ್ತು…

‍ಲೇಖಕರು avadhi

21 August, 2017

3 Comments

  1. sreenivasa p n

    ಊರನ್ನೇ ಪದಗಳಲ್ಲಿ ಚಿತ್ರವತ್ತಾಗಿ ಚಿತ್ರಿಸಿದಿರಿ, ಓಟ ಚೆನ್ನಾಗಿದೆ , ಧನ್ಯವಾದಗಳು

    • Shreedhar Bhat

      ಧನ್ಯವಾದಗಳು ಜೀ 🙂 🙂 🙂

  2. pravara

    too good sir…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading