`ಮೌನೇಶ’ ನೊಂದಿಗೆ ವಾಕಿಂಗ್
ಎಂ ಆರ್ ಕಮಲಾ
ಈ `ಮೌನೇಶ’ ನನ್ನ ವಾಕಿಂಗ್ ಗೆಳೆಯ.
ವಯಸ್ಸು, ಇಪ್ಪತ್ತರ ಆಸುಪಾಸಿನಲ್ಲಿರಬಹುದು.
ದಿನವೂ ಪಾರ್ಕಿನಲ್ಲಿ, ಅದೇ ಜಾಗದಲ್ಲಿ ಕೂರುತ್ತಾನೆ
ಆಚೀಚೆ ನೋಡದ ಮಹಾನ್ ಸಭ್ಯಸ್ಥ !
ಏನಿದ್ದರೂ ಮೊಬೈಲ್ ನೊಂದಿಗೆ ಮಾತ್ರ ಮಾತು
ಕೀಲಿಮಣೆಯ ಕೀಲಿ ತೆರೆದರೆ ಸಾಕು
ಬೆರಳಿನಷ್ಟೇ ವೇಗವಾಗಿ ಭಾವ, ಮುಖಭಾವ
ಬದಲಾಗುತ್ತಲೇ ಹೋಗುತ್ತದೆ
ಕಣ್ಣುಗಳು ಕಿಲ ಕಿಲಿಸಿ, ಒಳಗೊಳಗೆ ನಕ್ಕರೆ..
(ಸಿಕ್ಕಿರಬಹುದೇನೋ ಸಕ್ಕರೆಯಂಥ ಹುಡುಗಿ)
ಆಕಾಶದತ್ತ ನೋಡಿ ನಿಡು ಸುಯ್ದರೆ…
(ಇರಬಹುದೇನೋ ಯಕ್ಷನಂಥ ಚಿರವಿರಹಿ?)
ಕೂದಲು ಕಿತ್ತು ಕಿತ್ತು ಹಾಕುತ್ತಿದ್ದರೆ….
(ನಿಂತಿರಬಹುದೇನೋ ಚಿಂತೆ ಸಂತೆಯಲ್ಲಿ?)
ಮನದಲ್ಲೇ ಮಾತು ಕಟ್ಟುತ್ತ ಹೋಗುತ್ತೇನೆ
ಪ್ರತೀ ಸುತ್ತಿನಲ್ಲೂ ಇವನತ್ತ ಹೆಜ್ಜೆ ಹಾಕುವಾಗ
ಒಳಗಿನ ಒಳಗಲ್ಲಿ ಮಮತೆಯ ಮೌನ ಸಂವಾದ ..
ದಪ್ ಎಂದು ಹೆಜ್ಜೆ ಇಟ್ಟರೂ, ಕೆಮ್ಮಿದರು
ತಿರುಗಿ ನೋಡದ ಈ ಹುಡುಗನ ಕೋಪ- ತಾಪ,
ಮಾತು- ಗೀತು, ಸ್ನೇಹ-ಗೀಹ ಕೊನೆಗೆ ಜಗಳವೂ
ಕಣ್ಣು ಕೀಲಿಸಿದ ಕೀಲಿಮಣೆಯಲ್ಲೇ.!!!

2
ಈಗೀಗ ಪ್ರತೀ ಮನೆಯ ಮೂಲೆಯಲ್ಲಿ, ಕೋಣೆಯಲ್ಲಿ
ಫುಟ್ ಪಾತಿನಲ್ಲಿ, ಕಾಲೇಜಿನ ಕಾರಿಡಾರಿನಲ್ಲಿ
ತುಂಬಿ ತುಳುಕುತ್ತಿದ್ದಾರೆ ಇಂಥ `ಮೌನೇಶ’ರು!
ಡಿಕ್ಕಿ ಹೊಡೆದರೂ, ಎಡವಿ ಬಿದ್ದರೂ ಕತ್ತೆತ್ತದ
ಕೀಲಿಮಣೆಯಲ್ಲೇ ಕೀಲಿಸಿದ ಕೀಲು ಗೊಂಬೆಗಳು!
ಶಬ್ದ, ಸ್ಪರ್ಶ, ರೂಪ, ರಸ, ಗಂಧಕ್ಕೆ
ಮೊಗದಿರುಹಿದ `ಜಂತರ್ ಮಂತರ್’ ಗಳು!
೩
ಒಂಟಿತನದಲ್ಲಿ ದಿಕ್ಕೆಟ್ಟು `ಪ್ರೀತಿ ಕಣ್ಣುಗಳ’
ಅರಸುವ ನಾನು, ನನ್ನಂಥ ಮರುಳರು
ಕೊನೆಗೆ `ಕೀಲಿ ಮಣೆ’ಯಲ್ಲಿ `ಮುಂಜಾನೆ ಸಂದೇಶ’
ಒತ್ತಿ, ಕಳಿಸಿ ಕೃತ ಕೃತ್ಯರಾಗುತ್ತೇವೆ!






ವಾಹ್! ನಮ್ಮಂತಹವರ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ದೀರಿ ಮೇಡಂ. ಪದ್ಯ ತುಂಬಾ ಚೆನ್ನಾಗಿದೆ.
Beautiful!
ಕಮಲಾ, ನಿಮ್ಮ ಅನಿಸಿಕೆ ನನ್ನದೂ ಕೂಡಾ. ಒಂದು ಸಮಾಧಾನವೆಂದರೆ ಇತ್ತೀಚೆಗೆ ನನಗೆ ತಿಳಿದು ಬಂದದ್ದು, ಈ ಮೌನೇಶ ಮೌನೇಶಿಯರಿಗೂ ಒಂದು ಹಂತದಲ್ಲಿ ಮೊಬೈಲ್ ಬೇಜಾರಾಗಿ ಜೀವ ಇರೊ ಮನುಷ್ಯರು ಬೇಕೂ ಅನ್ನಿಸುತ್ತೆ, ಪುಣ್ಯ ಅಲ್ಲವಾ?
good relavant poetry.jyothi.
nice..