ಹಿರಿಯ ಚಿಂತಕ ಜಿ ಆರ್ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯ ಬಾಗಿನ ನೀಡಿದೆ
ಈ ಸಂದರ್ಭದಲ್ಲಿ ಜಿ ಆರ್ ನಮ್ಮನ್ನು ಕಾಡಿದ ಬಗೆ ಇಲ್ಲಿದೆ

ಪ್ರಶ್ನಿಸಿ, ಎಲ್ಲವನ್ನೂ..
ಎಂದರು.
ಹಾಗೆ ಹೇಳುವಾಗ ಅವರು ‘ನನ್ನನ್ನೂ..’ ಎಂದು ಹೇಳಬೇಕಾದ ಅಗತ್ಯವೇ ಇರಲಿಲ್ಲ.
ಏಕೆಂದರೆ ಅವರು- ಜಿ ಆರ್
ಜಿ ರಾಮಕೃಷ್ಣ
ಪ್ರಶ್ನೆಯನ್ನೇ ಒಂದು ಧ್ಯೇಯ ಚಿಹ್ನೆಯಾಗಿಸಿಕೊಂಡಿದ್ದ ಕಾಲೇಜಿನಲ್ಲಿದ್ದವರು
ಪ್ರಶ್ನಿಸುವುದನ್ನೇ ಗುರಿಯಾಗಿಸಿಕೊಂಡಿದ್ದ ಎಚ್ ನರಸಿಂಹಯ್ಯನವರ ಒಡನಾಟದಲ್ಲಿದ್ದವರು
ಜಿ ಆರ್ ಗೆ ಪ್ರಶ್ನಿಸು ಎನ್ನುವುದನ್ನು ಯಾರೂ ಹೇಳಿಕೊಡಬೇಕಾಗಿರಲಿಲ್ಲ
ಪ್ರಶ್ನಿಸುವುದರಿಂದಲೇ ಸಮಾಜ ಬದಲಾವಣೆಯಾಗಲು ಸಾಧ್ಯ ಎಂದು ನಂಬಿದ ಸಿದ್ಧಾಂತದ ಕ್ಯಾನ್ವಾಸ್ ನಲ್ಲಿ ಅರಳಿದವರು ಅವರು
ಜಿ ಆರ್ ಪ್ರಶ್ನಿಸು ಎನ್ನುವಾಗ ಬೇರೆಯವರನ್ನು ಎಂದು ಮಾತ್ರ ಅಂದುಕೊಂಡಿರಲಿಲ್ಲ, ಆ ಪ್ರಶ್ನಿಸುವಿಕೆ ಮೊದಲು ನಮ್ಮಿಂದಲೇ ಆರಂಭವಾಗಬೇಕು ಎಂದು ನಂಬಿದ್ದವರು
‘ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ’ ಎಂದ ಬ್ರೆಕ್ಟ್ ನನ್ನು ನಮ್ಮ ಅಂಗೈ ಅಂಗಳಕ್ಕೆ ತಂದು ಕೂರಿಸಿದವರು
ಒಂದು ಪ್ರಶ್ನೆ, ಹಲವು ಪ್ರಶ್ನೆ, ಹಲ ಹಲವು ಪ್ರಶ್ನೆಗಳು.. ಎನ್ನುವ ಪ್ರತಿಯೊಂದರ ಜೊತೆಗಿದ್ದವರು
ಅದು ಕಾಲೇಜಾಗಲಿ, ರಾಜಕೀಯವಾಗಲಿ, ಸಾಹಿತ್ಯ ಸಂಸ್ಕೃತಿಯಾಗಲಿ ಜಿ ಆರ್ ಇದ್ದದ್ದು, ನಂಬಿದ್ದು ಪ್ರಶ್ನಿಸುವುದನ್ನು, ವಿಮರ್ಶಿಸುವುದನ್ನು
ಘಾಸಿಗೊಂಡಿದ್ದೇವೆ.
ಜಿ ಆರ್ ಅವರ ಮೇಲೆ ದಂಡೆತ್ತಿ ಬಂದವರನ್ನು ಕಂಡು
ಪ್ರಶ್ನಿಸು ಎಂದವರು ಉತ್ತರಿಸಲು ಅಂಜಿಯಾರೆ? ಅಥವಾ ಉತ್ತರಿಸಿದ್ದು ತಪ್ಪು ಎಂದಾದರೆ ತಮ್ಮನ್ನು ಬದಲಾವಣೆಗೆ ಒಡ್ಡಿಕೊಳ್ಳಲು ಇಲ್ಲ ಎನ್ನುವವರೇ?
ಇವತ್ತು ನಮ್ಮೊಳಗೇ ಒಂದು ಪ್ರಶ್ನಿಸಿಕೊಳ್ಳುವ ಮನಸ್ಸಿದೆ, ಪ್ರಶ್ನಿಸಿಕೊಳ್ಳುವ ನ್ಯಾಯಾಧೀಶ ಇದ್ದಾನೆ ಎಂದರೆ ಅದು ಜಿ ಆರ್ ಅವರಿಂದ. ಜಿ ಆರ್ ಅಂತಹವರಿಂದ
ಓದುಗರ ಕೈಗೆ ಲೇಖನಿ ಎನ್ನುವುದನ್ನು ಬಲವಾಗಿ ಪ್ರತಿಪಾದಿಸಿದವರು ಜಿ ಆರ್
ಪ್ರತಿಯೊಬ್ಬರ ಅಭಿಪ್ರಾಯವೂ ದಾಖಲಾಗಬೇಕು ಎಂದು ಬಯಸಿದ ಅವರನ್ನು ಪ್ರಶ್ನಿಸಲು ಅವಕಾಶ ಖಂಡಿತಾ ಇತ್ತು
ಆದರೆ ದಾಳಿ ಮಾಡಿಯೇ ಸಿದ್ಧ ಎನ್ನುವವರಿಗೆ ಉತ್ತರಗಳು ಬೇಕಾಗಿಲ್ಲ
‘ಆಟಿ ಆಡ ಆಡ, ಸೋಣ ಓಡ ಓಡ’ ಎನ್ನುತ್ತಾರೆ ತುಳುವಿನಲ್ಲಿ
ಕ್ರಿಮಿಗಳು ಹೆಚ್ಚಾಗುವ ಆಷಾಡ ನಿಧಾನವಾಗಿ ಹೆಜ್ಜೆಯಿಡುತ್ತದೆ. ಹೋಗು ಎಂದರೂ ಹೋಗುವುದಿಲ್ಲ. ಆದರೆ ಮನಸ್ಸಿಗೆ ಮುದ ನೀಡುವ ಶ್ರಾವಣ ಬೇಗ ಬೇಗ ಕಳೆದು ಹೋಗುತ್ತದೆ
ಹಾಗೆ ಬಾಳಿಗೊಂದು ನಂಬಿಕೆ ಕೊಟ್ಟವರು ಜಿ ಆರ್ ಎನ್ನುವ ವಸಂತ.
ಆ ವಸಂತ ಸದಾ ಪಲ್ಲವಿಸುತ್ತಲೇ ಇರುತ್ತದೆ





Academy award to G R has made me immensely happy. I am fond of his oratory, discussions and debates. He was my senior in Maharaja’s College some sixty years back. He has shown me love and affection all these years. I have seen in him harmony between words and actions. I take this opportunity to Congratulate him and wish him well. H. S. Eswara.