ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಕಲವ್ಯನ ಅಬ್ಬೆಯಂತೆ..

ಏಕಲವ್ಯನ ಅವ್ವ..
 ವಸುಂಧರಾ ಕದಲೂರು

ಆದರೆ, ಆಗುವುದಾದರೆ ಏಕಲವ್ಯನ
ಅವ್ವನಂತಾಗಿಬಿಡಬೇಕು. ಮಗನ ಬೆರಳ್ಗೆ
ಕೊರಳ ಬೇಡಿದ ಛಲಗಾತಿಯಂತೆ
ಸಡ್ಡು ಹೊಡೆದು ಪರಮ ಸಾಮ್ರಾಜ್ಯದ
ಗುರುವರ್ಯನನ್ನೂ ಕಡೆಗಣಿಸಿದ
ಹಠಯೋಗಿನಿಯಾಗಿ.

ಕುಂತಿ ಹೆತ್ತ ಕೂಸು; ಕುಸುಮಬಾಲೆಯ
ಮಡಿಲಲ್ಲಿ ಮತ್ತೆ ಅನಾಥವಾಗುವುದು
ಬೇಡ. ಯಾವ ಕಾಲಕ್ಕೂ ಅಮೃತ
ಕಳಶದಲಿ ಮಮತೆ ತುಂಬಿ ಒಸರುತಿರಲಿ

ಜಗದ ಅವ್ವಂದಿರು ಸತ್ಯ ಶರಣೆಯರು;
ನಿಮಿತ್ತ ಮಾತ್ರರಾದ ಅಪ್ಪಂದಿರು ಮಾತ್ರ
ಪರಾರಿಯಾಗುವ ಪರಮಯೋಗಿಗಳಾಗಲಿ
ಅವ್ವನೆಂಬ ನೆರಳು ಸದಾ ನೆತ್ತಿ ಕಾಯುತಿರಲಿ.


ಅವ್ವಂದಿರು ಕರುಳು ಬಳ್ಳಿಯಲಿ ಹೂವರಳಿಸುವ
ಗುಲಾಬಿಗಿಡವೇ, ಕೊಯ್ದುಕೊಳ್ಳುವರಿಗೆ ನೆರವಾಗುವ
ಹಬ್ಬಿ ಹರಡುವ ಗಂಧದ ಮಲ್ಲಿಗೆ ಬಳ್ಳಿಯೇ..
ರೆಂಬೆಕೊಂಬೆಗಳಲೂ ಬೇರು ಇಳಿಬಿಟ್ಟು ನಿಂತ
ಆಶ್ರಯದ ಆಲದಮರ; ತುಸುಗಟ್ಟಿ ಬಹುವಿಸ್ತಾರ..

ಅವ್ವನಾಗುವುದು ಸುಖವೆಂದದ್ದು ದಿಟ;
ಒಳಗೊಳಗೇ ಗರ್ಭೀಕರಿಸಿದ ಮುಖಗಾಣದ ಮಗು
ಒದ್ದು ಹೊರಳಿದಾಗ, ಹಾಲೂಡಿ ಪಕ್ಕೆಗೆ
ಒತ್ತಿಕೊಂಡ ಪುಟ್ಟಮೈಯನು ಆವರಿಸಿಕೊಂಡ
ಒಲವು; ಅದೆಷ್ಟೋ ಅಮೃತಘಳಿಗೆಗಳ
ಸಂಗಾತಿಯಾಗುವುದೇ ಅವ್ವನೆಂದರೆ..

ಏನಾದರೂ ಆಗಲಿ ಜಗಕೆ. ನಾವು ಮಾತ್ರ
ಆಗಿಬಿಡಬೇಕು ಏಕಲವ್ಯನ ಅಬ್ಬೆಯಂತೊಮ್ಮೆ..
ಸರ್ವಕ್ಕೂ ಮಿಗಿಲು ನನ್ನ ಮಗುವೆಂದು
ಮೊರೆವ ಕಡಲಂತೆ; ಏಕಲವ್ಯನ ಅಬ್ಬೆಯಂತೆ…

‍ಲೇಖಕರು nalike

22 May, 2020

1 Comment

  1. SmithaAmrithraj.

    ಬಹಳ ಇಷ್ಟವಾಯಿತು ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading