ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ನೋಡೇ ಅಕ್ಕ, ಗಂಗೊಳ್ಳಿ ಹೊಳೆ ಕಾಣ್ತಿದೆ

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

6

ಶಾರದತ್ತೆಗೆ ಸಂಪಿಗೆಯ ಕಡು ವಾಸನೆ ಆಗದು. ಸುಶೀಲಚಿಕ್ಕಿ ಅದನ್ನೇ ಮುಡಿ ಎನ್ನುತ್ತಿದ್ದಾಳೆ. ‘ನೀನೇ ಕಟ್ಟಿ ಮುಡಿ ಗೌರಿ. ಕಳೆದಬಾರಿ ಹುಡುಗ ನೋಡಲು ಬಂದಾಗ ಅದರ ವಾಸನೆಗೆ ಹುಡುಗನಿಗೆ ತಲೆನೋವು, ವಾಂತಿ ಬಂತಂತೆ’ ನೆನಪಿಸಿದಳು.

‘ಎಂತ ತಲೆನೋವಾ?”ಗುಡುಗಿದಳು ಕಮಲತ್ತೆ, ‘ಕಳ್ಳನಿಗೊಂದು ಪಿಳ್ಳೆ ನೆವ. ನೀನು ಬೇಡ ಅನ್ನಲು ಅವಂಗೆ ಈ ಕಾರಣವೇ? ಇವತ್ತು ಸಂಪಿಗೆ ಹೂವಿನದೇ ದಂಡೆ ಮುಡಿ. ಈ ಹುಡುಗ ಮೂಗು ಮುಚ್ಚಿ ಕೊಳ್ತಾನೋ ಕಾಂಬ’

ಪಾಪ ಕಮಲತ್ತೆ. ಹೂವು ಮುಡಿಯುವ ಭಾಗ್ಯ ಇಲ್ಲೆ. ಅಲಂಕಾರವೂ ಇಲ್ಲೆ. ‘ಬಂದವರ ಎದುರು ನಿನ್ನ ನೆರಳು ಬೀಳದಂತೆ ಒಳಗಿರೆಕ್ಕು’ ಅಜ್ಜಯ್ಯ ಬೆಳಿಗ್ಗೆ ತಿಂಡಿ ಹೊತ್ತಲ್ಲಿ ಹೇಳಿಯಾಗಿತ್ತು.

‘ಕಮಲತ್ತೆ ನೆರಳು ಬಿದ್ದರೆ ಎಂತಾ ಆಗ್ತು ಆಯಿ?’ ಗೌರಿ ಅಮಾಯಕಳು.

‘ನಂಗೊತ್ತಿಲ್ಲ. ಹಳೆನಂಬಿಕೆ. ನಾವು ಮುಟ್ಟೂಲಾಗ, ಕೇಳೂಲಾಗ. ನಿಂಗೆಂತಕ್ಕೆ ಹೋಗು ಹೊರಗೆ’

ಯಾರೂ ಮುಡಿಯದ ಸಂಪಿಗೆ. ಗೌರಿ ಅವನ್ನು ತಮ್ಮ ಕೋಣೆಗೆ ತಂದಿಡುವಾಗ ನೋಡುತ್ತಾಳೆ, ನಾಣಿಯ ಸೊಂಟದ ಸಣ್ಣ ತುಂಡು ಬಟ್ಟೆ ನೆಲದಲ್ಲಿದೆ. ಅವನು ಆಗಲೇ ಚಡ್ಡಿ ಅಂಗಿ ಹಾಕಿ ತಲೆಬಾಚಿ ನೆಲದ ಮೇಲೆ ಕರ್ನಾಟಕ ಭೂಪಟ ಬಿಡಿಸಿ ಕುಳಿತಾಗಿತ್ತು. ಗೌರಿ ಕಾಲಬೆರಳಿನಿಂದ ಅವನ ತುಂಡು ಬಟ್ಟೆಯನ್ನು ಮೂಲೆಗೆ ಒತ್ತಿ, ‘ಮದುಮಗ ಸಿದ್ಧವೋ?ಬನ್ನಿ ಮಹಾರಾಜರೇ ಹೊರಗೆ!’ ನಕ್ಕಳು.

‘ನೋಡೇ ಅಕ್ಕ, ಗಂಗೊಳ್ಳಿ ಹೊಳೆ ಕಾಣ್ತಿದೆ ಇಲ್ಲಿ. ಇದಾ ಸೌಪರ್ಣಿಕಾ ನದಿ. ಇದಾ ಚಕ್ರಿ ಅಮ್ಮಮ್ಮನ ಊರು ಚಕ್ರೀ ಹೊಳೆ. ಇಕಾ ಇದು ವಾರಾಹಿ ನದಿ. ಇನ್ನೂ ಎಷ್ಟೋ ಸಣ್ಣ ದೊಡ್ಡ ಹೊಳೆಗಳು. ನಾವಿನ್ನೂ ನೋಡ್ಲೇ ಇಲ್ಲವಲ್ಲೇ?’

‘ನಮ್ಮ ಹೊಳೆಬಾಗಿಲು ಮನೆ ಕಂಡ್ಯಾ?’

‘ಇಲ್ಲ ಅಕ್ಕಾ. ಅದೆಂತಕ್ಕೆ ಭೂಪಟದಲ್ಲಿ ಇಲ್ಲೆ?’

‘ಸುಶೀಲ ಚಿಕ್ಕಿ ಇದರಲ್ಲಿ ಜ್ಞಾತಿ ಇದ್ದವಳು. ಹೇಳಿದಳಲ್ಲ ನಮ್ಮದು ಹೆಸರು ಪಡೆದ ಊರುಕೇರಿ ಅಲ್ಲ. ಒಂದು ಕೂಪ. ಸುತ್ತ ಹೊಳೆನೀರು ಇದ್ದ ನಡುಗಡ್ಡೆ. ಸಾಕು ಬಿಡು. ಭೂಪಟ ಆಚೆಗಿಟ್ಟು ಹೊರಗೆ ಬಾ. ಅಕಾ, ಮೋತಿ ಕೊರೀತಾ ಇದ್ದು. ಹೋ, ಅವರೆಲ್ಲ  ಬಂದವು.’

ಬಂದವರು ಮೂರೇ ಮಂದಿ. ಒಬ್ಬರು ಕಮ್ತಿಯವರು. ಮತ್ತಿಬ್ಬರು ಇಂದು ನೋಡಲು ಬಂದ ಯುವಕ, ಮತ್ತು ಅವನ ತಂದೆ. ಕಮ್ತಿಯವರಿಗೆ ಸುಮಾರು ಅರ್ವತ್ತರ ಆಸುಪಾಸು. ಅಪ್ಪಯ್ಯನ ಸ್ನೇಹಿತರು. ಈ ಮನೆಯವರಲ್ಲಿ ಸಂಪರ್ಕ ಜಾಸ್ತಿ. ಕಮ್ತಿಯವರ ಅಂಗಡಿ ಎಂದರೆ ಸಾಸ್ತಾನದಲ್ಲಿ ಪ್ರಸಿದ್ಧವೇ. ಲೆಕ್ಕಕ್ಕೆ ಕಿರಾಣಿ ಅಂಗಡಿ. ಮಕ್ಕಳ ಶಾಲಾ ಪುಸ್ತಕ, ಬೈರಾಸು, ಬಟ್ಟೆ ಬರೆ, ಕಬ್ಬಿಣದ ಸಾಮಾನುಗಳು, ಬೆತ್ತದ ಬಟ್ಟಿಗಳು, ಓಲೆಗರಿಯ ಕೊಡೆಗಳು, ಆಯುರ್ವೇದ ಔಷಧಿ, ನಾರು ಬೇರು, ಬೀಡಿ, ನಸ್ಯ, ಪೂಜಾ ಸಾಮಗ್ರಿಗಳು ಯಾವ ವಸ್ತು ಬೇಕು ಹೇಳಿ ಅಲ್ಲಿದೆ.

ಊರ ಹಜಾಮನ ಅಂಗಡಿ ಎದುರಲ್ಲಿದೆ. ಅಲ್ಲಿ ತಲೆಗೆಗೂದಲು ತೆಗೆಯಿಸಲು ಬಂದವರ ಪೈಕಿ ಹೆಚ್ಚು ಮಂದಿ ಇತ್ತ ಬಾರದೆ ಇರುವವರಲ್ಲ. ರಾಮಪ್ಪಯ್ಯ ಕೆಲಸಕ್ಕಿರುವ ಕಾಮತ ವಕೀಲರ ಆಫೀಸು ಮಗ್ಗುಲಲ್ಲೆ ಇದೆ. ಕಕ್ಷಿಗಾರರು, ಪಿರ್ಯಾದಿಗಳು, ಬೇರೆ ವಕೀಲರು ಬಂದು ಹೋಗುವ ಜಾಗ. ಕಮ್ತಿಯವರ ವ್ಯಾಪಾರವೂ ಭರ್ಜರಿಯೇ. ಶಾರದೆಗೆ ಮೊದಲ ಎರಡು ಸಂಬಂಧ ತಂದದ್ದು ಅವರೇ. ಅದು ಆಗದೆ ಈಗ ಬಂದದ್ದು ಅವರ ಹೇಳಿಕೆಯಿಂದಲೇ.

‘ಪ್ರಯತ್ನ ನಮ್ಮದು. ಎಲ್ಲ ದೇವರ ಇಚ್ಚೆ’ ಎನ್ನುವ ಕಮ್ತಿಯವರ ಮಾತಿಗೆ ಎಲ್ಲರೂ ಸೈ. ಗೌರಿಗೆ ಕುತೂಹಲ. ಕಾಲುಗಳು ಒಳ ನಿಲ್ಲುವುದೇ ಇಲ್ಲ. ಒಳಬಾಗಿಲಿನಿಂದ ಹೊರಬಿದ್ದು ಮುಖಮಂಟಪದಲ್ಲಿ ಇಣುಕಿ ಅಪ್ಪಯ್ಯನ ಕಣ್ಣ ಕೊಡಿಯಲ್ಲಿ ಅಸಮಾಧಾನ ಕಂಡು ನಾಣಿಯನ್ನು ಎಳೆದುಕೊಂಡು ಹಿಂಬದಿಯ ಅಂಗಳಕ್ಕೆ ಹಾರಿದಳು. ‘ನಡಿ ನಾಣಿ, ದೊಡ್ಡವರ ಮಾತಿಗೆ ನಾವು ಮೂಗು ತುರುಕೂಕಾಗ. ಬಾ, ಎಂತಾದರೂ ಆಡ್ವ. ಕುಂಟಲಪಿ ಆಗ್ದಾ? ಬಿಸಿಲು ಹೆಚ್ಚಿಲ್ಲೆ’

ಸೆಗಣಿ ಸಾರಿಸಿ ಹದ ಮಾಡಿದ ಹಿಂಬದಿ ಅಂಗಳದ ಖಾಲಿ ಜಾಗದಲ್ಲಿ ಗೌರಿ ಮಸಿಕೆಂಡದಿಂದ ಕುಂಟಲಪಿಯ ಮನೆ, ಅದರ ಒಳಗೆ ಗೆರೆ ಎಳೆದಳು. ಚಪ್ಪಟೆ ಕಲ್ಲಿನಲ್ಲಿ ಶುರುವಾದ ಆಟದಲ್ಲಿ ಮೊದಲು ಆಡಿದ್ದು ನಾಣಿ. ಬಿಲ್ಲೆಯನ್ನು ಒಂಟಿ ಕಾಲಿನಿಂದ ಮನೆಯಿಂದ ಮನೆಗೆ ದೂಡಬೇಕು. ದೂಡಿದಷ್ಟು ದೂರಕ್ಕೆ ಒಂಟಿ ಕಾಲಲ್ಲಿ ಹಾರಿ ಮೆಟ್ಟಿ ಮುಂದಿನ ಮನೆಗೆ ದೂಡಬೇಕು. ಕಾಲು ಬಿಟ್ಟರೆ ಅಥವಾ ಮನೆಗಳ ಗೆರೆ ಮೇಲೆ ಬಿಲ್ಲೆ ಬಿದ್ದರೆ ಮುಂದೆ ಅವರು ಔಟ್. ನಾಣಿ ದೂಡಿದ ಬಿಲ್ಲೆ ಒಂದನೆ ಮನೆಯಿಂದ ಮುಂದೆ ಹೋಗಲೇ ಇಲ್ಲ. ‘ಅಕ್ಕ, ನೀ ದೊಡ್ಡ ಮನೆ ಬಿಡಿಸಿ ನಂಗೆ ಒಂದು ಕಾಲಲ್ಲಿ ಹಾರೂಕೆ ಆತಿಲ್ಲೆ. ಸಣ್ಣ ಮನೆ ಹಾಕು’ ಗೋಗರೆದ.

‘ಮಂಗಾ! ಸರಿಯಾಗಿ ಬಿಲ್ಲೆ ದೂಡಿ ಹಾಕು’ ಅವಳು ತೂರಿದ ಬಿಲ್ಲೆ ಮೂರನೇ ಮನೆಯ ಗೆರೆ ಮೇಲೆ ಬಿದ್ದು ಅವಳು ಔಟ್. ನಾಣಿಯ ಮುಂದಿನ ಸರದಿಯಲ್ಲಿ ಬಿಲ್ಲೆ ಮನೆ ಹೊರಗೆ. ಗೌರಿಯ ಸರದಿ ಬಂದಾಗ ಅದು ಇನ್ನೆಲ್ಲೋ. ಆಟದ ಮನಸ್ಸು ಇಲ್ಲದೆ ನಾಣಿ ಕಾಲಿನಿಂದ ಮಸಿಗೆರೆ ಅಳಸಿ, ‘ಕಮಲತ್ತೆ ಹೇಳ್ತಾಳೆ ಇದು ಹುಡುಗೀರ ಆಟವಂತೆ. ನಾನು ಹುಡುಗಿಯಲ್ಲ. ನಂಗೆ ಬೇಡ.’

ಅದು ಹುಡುಗಿಯರ ಆಟವೆಂದು ಯಾರು ಅವನ ತಲೆಗೆ ಹುಳು ಬಿಟ್ಟದ್ದೋ? ಕರೆದರೆ ನಾಣಿ ಈಗೆಲ್ಲ ಬರುವುದೇ ಇಲ್ಲ. ಆ ಕುದ್ರುವಿನಲ್ಲಿ ಇರುವುದು ಕೆಲವೇ ಕೆಲವು ಮನೆಗಳು.ಮಕ್ಕಳ ಸಂಖ್ಯೆ ಹೆಚ್ಚಿಗೆ ಇದ್ದರೂ ಎಲ್ಲರೂ ನಾಣಿ ವಯಸ್ಸಿನವರು. ಅವಳದೇ ವಯಸ್ಸಿನ ಬಾಯಮ್ಮನ ಮಗಳು ಸಿಸಿಲಾ, ಲಿಂಗಣ್ಣನ ಮೊಮ್ಮಗಳು ನಿಂಗಿ ಇಬ್ಬರೇ. ವಿದ್ಯೆಯ ಗಂಧಗಾಳಿಯಿಲ್ಲದೆ ತಾಯಂದಿರ ಸೆರಗಿನ ಹಿಂದೆ ಅವರ ಪಡಿಯಚ್ಚುಗಳು. ಬಾಯಮ್ಮನ ಅಂಗಳದ ತುಂಬ ಮಲ್ಲಿಗೆ ಕೃಷಿ, ಸೇವಂತಿಗೆ ಬೆಳೆ. ಅಬ್ಬಲಿಗೆ, ಗೋರಟೆ ಅಲಾಯಿದ. ಗಂಡ ತರಕಾರಿ ಬೆಳೆಯುವವ.

ಪ್ರತಿದಿನ ಇವರು ಬೆಳೆದದ್ದು ಮೊದಲ ದೋಣಿಯಲ್ಲಿ ಸಾಸ್ತಾನ ಪೇಟೆಗೆ, ಅಲ್ಲಿಂದಾಚೆ ಮೋಟಾರು ಬಂಡಿಯಲ್ಲಿ ಐರೋಡಿ ತನಕ ಹೋಗುತ್ತದೆ. ತಾಜಾ ಹೂವಿಗೆ ಬೇಡಿಕೆ ಜಾಸ್ತಿ. ಕೊಟೇಶ್ವರದ ಅಮೃತೇಶ್ವರಿ ದೇವಸ್ಥಾನಕ್ಕೆ ಇವಳು ಬೆಳೆದ ಹೂವುಗಳಿಗೆ ಹೆಚ್ಚಿನ ಆದ್ಯತೆ. ಸಿಸಿಲಾ ಅವಳ ಇಬ್ಬರು ತಂಗಿಯರೂ ತಾಯಿಗೆ ಜೊತೆಗೂಡುತ್ತಾರೆ. ನಿಂಗಿ ಗೌರಿಗಿಂತ ಎರಡು ವರ್ಷ ದೊಡ್ಡವಳು. ಅಪ್ಪನ ಜೊತೆ ಈ ಮನೆಗೆ ಕೂಲಿ ಕೆಲಸಕ್ಕೆ ಬರುತ್ತಾಳೆ. ಸಂಜೆ ಗೌರಿ, ನಾಣಿ ಆಟಕ್ಕೆ ಕರೆದರೆ ಹೆಚ್ಚಿನ ಮಕ್ಕಳು ಅವರ ಮನೆ ಬಳಿ ಬರುವುದುಂಟು. ಕುಂಟಲಪಿ, ಮನೆಯಾಟ, ಮರಮಂಗನಾಟ, ಕಣ್ಣಾಮುಚ್ಚಾಲೆ, ಗೋಲಿಯಾಟ. ಗೌರಿ ಮುಕ್ರಿ ಇವರಿಗೆಲ್ಲ.

‘ಮೆಣಸಿನ ಕಾಯಿ ಅಷ್ಟು ದೊಡ್ಡ ಇದ್ದಿ, ಹುಡುಗೀರ ಆಟ ಅಂತ ಸಸ್ಸಾರ ನಿನಗೆ. ಹೋಗ್ಲಿ ಬಿಡು. ಸಂಜೆ ಎಲ್ಲರೂ ಮರಮಂಗನಾಟ ಆಡೋಣ್ವಾ?’

‘ಅದಿನ್ನೂ ಮಜ. ಹೇಳಿ ಬರ್ಲಾ ಎಲ್ಲರಿಗೂ?’

ಅವನ ತಲೆಮೇಲೆ ಮೊಟಕಿದಳು, ‘ಮನೇಲಿ ಜನ ಇದ್ದೋ ಗೊತ್ತಿಲ್ಯಾ?. ಈಗೆಲ್ಲಿಗೆ ಸವಾರಿ?’ ಮುಖ ಸಣ್ಣದು ಮಾಡಿ ಜಾರುತ್ತಿರುವ ಚಡ್ಡಿ ಮೇಲಕ್ಕೆಳೆದು ಒಳಗೆ ಓಡಿದ. ದೊಡ್ಡದಾಗಿ ಆಕಳಿಸಿದಳು ಗೌರಿ. ಬೇರೆ ದಿನಗಳಲ್ಲಿ ಹೀಗೆ ಆಕಳಿಕೆ ಇಲ್ಲದೆ ಅಕ್ಕ ತಮ್ಮ ದೊಡ್ಡ ಸ್ವರದಲ್ಲಿ ಹಾಡುತ್ತ, ನಗೆ ಮಾಡುತ್ತ ತಮ್ಮದೇ ಸಾಮ್ರಾಜ್ಯದಲ್ಲಿ. ಹಾಂ, ಇವತ್ತು ಬಂದವರ ಮುಂದೆ ಬಿಗುಮಾನ! ಖಿಲ್ಲನೆ ನಕ್ಕಳು.

| ಇನ್ನು ನಾಳೆಗೆ |

‍ಲೇಖಕರು Admin

July 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. ಜಯಲಕ್ಷ್ಮಿ

  ಬಾಲ್ಯದಲ್ಲಿ ಆಡಿದ ಕುಂಟುಬಿಲ್ಲೆ ಆಟದ ನೆನಪು ಮರುಕಳಿಸಿತು

  ಪ್ರತಿಕ್ರಿಯೆ
  • ಲಲಿತ ಎ.ಪಿ.

   ಬಾಲ್ಯ ಮತ್ತು ವಾಸ್ತವದ ನಡುವೆ ಜೋಕಾಲಿ ಆಡಿದಂತಹ ಅನುಭವ.
   ಸಂಚಿಕೆ ಚೆನ್ನಾಗಿದೆ.

   ಪ್ರತಿಕ್ರಿಯೆ
 2. ಲಲಿತ ಎ.ಪಿ.

  ಬಾಲ್ಯ ಮತ್ತು ವಾಸ್ತವದ ನಡುವೆ ಜೋಕಾಲಿ ಆಡಿದಂತಹ ಅನುಭವ.
  ಚೆನ್ನಾಗಿದೆ ಸಂಚಿಕೆ.

  ಪ್ರತಿಕ್ರಿಯೆ
 3. ಲಲಿತ ಎ.ಪಿ.

  ಬಾಲ್ಯ ಮತ್ತು ವಾಸ್ತವದ ನಡುವೆ ಜೋಕಾಲಿ ಆಡಿದಂತಹ ಅನುಭವ.
  ಸೊಗಸಾದ ಚಿತ್ರಣ…
  ಚೆನ್ನಾಗಿದೆ ಸಂಚಿಕೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: