ಆರ್ ಜಿ ಹಳ್ಳಿ ನಾಗರಾಜ ಹೊಸ ಕವಿತೆ- ‘ಅಚ್ಛೇ ದಿನ’ದ ನಕ್ಷತ್ರಗಳ ಹುಡುಕಿ

ಆರ್ ಜಿ ಹಳ್ಳಿ ನಾಗರಾಜ

ನೂರು, ಮತ್ತಿಪ್ಪತ್ತು ಕೋಟಿ ಕೋಟಿ ಭಾರತೀಯರು
ಇದ್ದೇವೆ! ನೆಲದ ತುಂಬ ಹರಡಿ – ಗರಿಕೆ ಹುಲ್ಲಂತೆ!

ಸನಾತನ ಧರ್ಮದ ಹೆಸರಲ್ಲಿ
ಹಿಂದುತ್ವದ ಅಮಲಿನಲ್ಲಿ
ಪುರೋಹಿತ, ಜ್ಯೋತಿಷಿಗಳ ಆಲಾಪನೆಯಲ್ಲಿ
ಸಾಧನೆಯ ಹಾದಿಗೆ ಕಂದಕ ತೋಡಿದ್ದೇವೆ.

ಎತ್ತರೆತ್ತರಕ್ಕೇರುವ ಕನಸಿಗೆ ಮೂಗುದಾರ ಪೋಣಿಸಿಕೊಂಡು
ಚೀನಾ, ಜಪಾನಿಯರ ಸಾಧನೆಯ ಮಹಲುಗಳಲ್ಲಿ
ಅವರ ಹೆಜ್ಜೆಯ ಮಜಲುಗಳ ಕನಸಲ್ಲಿ
ತಡಕಾಡಿ ಮೈದಡವುತ್ತ
ಬಿಟ್ಟಕಣ್ಣುಬಿಟ್ಟು ನೋಡುತ್ತ
ಹೆಜ್ಜೆ ಮೂಡದ ನಮ್ಮೀ ಹಾದಿಗೆ
ತಿರುಕನ ಕನಸಿನ ಆನೆಯನೇರಿ
ಅಚ್ಛೇದಿನದ ನಕ್ಷತ್ರಗಳ ಎಣಿಸುತ್ತ
ನವಿಲುಗರಿಗಳ ಸಿಕ್ಕಿಸಿಕೊಂಡು ಕೆಂಭೂತವಾಗಿ
ಸುಟ್ಟುಕೊಂಡು ಬೂದಿಯಾಗಿದ್ದೇವೆ!

‘ಫೀನಿಕ್ಸ್’ ಪಕ್ಷಿಯಂತಾದರೂ
ಮರು ಹುಟ್ಟು ಪಡೆದು
ಜಗದೆದುರು, ಜನರೆದುರು ನಿಂತು ನಾನೂ
‘ಮನುಷ್ಯ’ನಾಗಬಹುದೆ….
ಕಾಯುತ್ತಿದ್ದೇನೆ!

ಕಾಯಕ ಮಾಡುವ ದಿನದ ಸೂರ್ಯ
ಜಗವ ಬೆಳಗಿ ಮತ್ತೆ ಮುಳುಗೇಳುತ್ತಾನೆ
ಹುಣ್ಣಿಮೆಯ ಚಂದಿರ ಕಪ್ಪಿಟ್ಟು
ಸುಟ್ಟ ಕಣ್ಣಿನ ಕಾಡಿಗೆಯಂತಾಗಿದ್ದಾನೆ!

ಕಾಣದ ಕಾಯಿಲೆ ಕರೋನಾಗೆ
ಚುಚ್ಚುಮದ್ದು ಪಡೆಯದ ನಾವು
ಕಲ್ಲುದೇವರ ಮರದೇವರ ಮೊರೆ ಹೋಗಿದ್ದೇವೆ
ದಂಡಪಿಂಡ ಜ್ಯೋತಿಷಿಗಳ ಮಾತು ಕೇಳಿ
ಕುರಿ ಕೋಳಿ ಕೋಣ ಬಲಿ ಕೊಟ್ಟಿದ್ದೇವೆ
ಮನುಷ್ಯ, ಪ್ರಾಣಿಪಕ್ಷಿ ತಿನ್ನುವ ಅನ್ನ ಆಹಾರ
ಬಂಡಿಬಂಡಿ ತುಂಬಿ ಚರಂಡಿಗೆ ನೈವೇದ್ಯ ಮಾಡಿದ್ದೇವೆ!

ಲಾಕ್ ಡೌನ್ ನೆಪದಲ್ಲಿ ದುಡಿವ ಕೈಗಳ
ತಿನ್ನುವ ಅನ್ನಕ್ಕೂ ಕುತ್ತಾಗಿ
ನಾಳೆ ಬದುಕುಳಿವ ಜೀವಗಳೂ
ಉರುಳಿಗೆ ಕೊರಳೊಡ್ಡಿ ಬಲಿಯಾಗಿವೆ
ಕಟುಕ ಕೈಗಳು ಜಗದೆದುರು ಕತ್ತು ಹಿಸುಕಿವೆ!

ನಾನಲ್ಲದ ಅವಳು
ಅವಳಲ್ಲದ ಅವನು
ಅದಲು ಬದಲಾಗಿ ಮತ್ತೆ
ಮೂಡುವ ಸೂರ್ಯನಿಗೆ
ಮುಖಮಾಡಿ ಕಾಯುತ್ತಿದ್ದೇವೆ; ಜ್ಞಾನ,
ವಿಜ್ಞಾನ – ತಂತ್ರಜ್ಞಾನದ ಜ್ಯೋತಿ ಹೊತ್ತಿಸಲು…

‍ಲೇಖಕರು Admin

July 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Dr.Pushpavati Shalavadimath

    ಕವಿ ಆರ್.ಜಿ.ಹಳ್ಳಿ ಯವರ ಕವಿತೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ.
    “ಮರೆಯಾದ ಆ ಅಚ್ಛೇ ದಿನಗಳು
    ಮತ್ತೆ ಮರಳಿ ಬಂದೇ ಬರುತ್ತವೆ.ಬರುವವರೆಗೂ ಸೂರ್ಯನಿಗೆ ಮುಖ ಮಾಡಿ ಕಾಯಬೇಕು. ಕಾಲದೊಂದಿಗೆ ನಡೆಯಬೇಕು. ಫೀನಿಕ್ಸ್ ಪಕ್ಷಿಯಂತೆ ಜಗದ ಹೊಟ್ಟ ತೂರಿ, ಬೂದಿಯಿಂದ ಮೈ ಕೊಡವಿ ಎದ್ದೇಳಬೇಕು. ಕವಿತೆಯ ಬಂಧ, ಆಶಯಕ್ಕೆ ಪೂರಕವಾಗಿದೆ. ಕವಿಗೆ ಅಭಿನಂದನೆಗಳು.”

    ಡಾ.ಪುಷ್ಪಾವತಿ ಶಲವಡಿಮಠ

    ಪ್ರತಿಕ್ರಿಯೆ
  2. Dr.Pushpavati Shalavadimath

    ಕವಿತೆಯ ಅಂತರಾಳ ಇಂದಿನ ಕರಾಳ ದಿನಗಳಿಗೆ ಕನ್ನಡಿ ಹಿಡಿದಿದೆ.ಅಚ್ಛೆ ದಿನಗಳ ನಕ್ಷತ್ರ ಹುಡುಕುತ್ತ,ನೆಲದ ಅನೇಕ ನಕ್ಷತ್ರಗಳನ್ನು ಕಳೆದುಕೊಂಡಿದ್ದೇವೆ. ಬೆಳಕಿಗಾಗಿ ಸೂರ್ಯನ ಕಡೆ ಮುಖ ಹೊರಳಿಸಬೇಕಿದೆ. ಆಷಾಡಭೂತಿತನ,ಅಜ್ಞಾನದ ಹೊಟ್ಟ ತೂರಿ
    ಮುಚ್ಚಿದ ಬದಿಯ ಗುಡ್ಡೆಯಿಂದ ಫಿನೀಕ್ಸ್ ಪಕ್ಷಿಯಂತೆ ಎದ್ದು ಬರಬೇಕಿದೆ. ಚೀನಾ,ಜಪಾನಿ ದೇಶಗಳ ಮಾರುಕಟ್ಟೆಗೆ ನಮ್ಮ ದೇಶಿಯತೆಯ ಶ್ರಮ ಅಡವಿಡುತ್ತಾ ಅಚ್ಛೆ ದಿನ ಹುಡಬೇಕಿದೆ….. ವಿಷಾದ ಛಾಯೆಯೊಂದಿಗೆ ಕವಿತೆಯ ಬಂಧ ಮನ ಕಲಕಿದೆ, ಕವಿಗೆ ಧನ್ಯವಾದಗಳು.

    ಪ್ರತಿಕ್ರಿಯೆ
  3. ಕ.ಮಹಾಂತೇಶ

    ಎತ್ತರೆತ್ತರಕೆ ಹಾರುತ್ತಿದೆ ದೇಶ ಪೈಪೋಟಿಗೆ ಬಿದ್ದು ಕರೋನಾದ ಜೊತೆ.
    ಪಾತಾಳಕೆ ಕುಸಿದಿದೆ ಜನತೆಯ ಬಾಳು
    ನೆಲಕಚ್ಚಿದ ಆರ್ಥಿಕತೆಯ ಜೊತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: