ಅಮೃತಾ ಹೆಗಡೆ ಅಂಕಣ- ಆ ಮಗುವಿಗೆ ನೀನೇ ಕಿವಿ!

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

8

ನನ್ನ ಅಪ್ಪನೊಂದಿಗೆ ರವೀಂದ್ರ ಭಟ್ಟರ ಮನೆಗೆ ನಮ್ಮ ಸವಾರಿ ಹೊರಟಿತ್ತು.  ಬೆಂಗಳೂರಿನ ಎಲ್ಲ ಒತ್ತಡಗಳಿಂದ ದೂರವಿರುವ ಪ್ರದೇಶವದು. ಬೆಂಗಳೂರಿನಲ್ಲಿಯೇ ಇದ್ದರೂ, ಇದು ಬೆಂಗಳೂರೇ ಅಲ್ಲ ಅನ್ನಿಸುವಮಥ ಪ್ರದೇಶ.  ಸುಮಾರು ಮುಕ್ಕಾಲು ಗಂಟೆಗಳ ಪ್ರಯಾಣದ ನಂತರ ಅವರ ಕೊಟ್ಟ ಲೊಕೇಶನ್​ಗೆ ನಾವು ತಲುಪಿದ್ದೆವು. ಗೇಟ್​ನ ಬಳಿಯೇ ಕ್ಯಾಬ್​ಇಳಿದು ವೀಕ್ಷಿಸಿದರೆ,  ಮಲೆನಾಡ ಯಾವುದೋ ಹಳ್ಳಿಯಂತಿದೆ ಈ ತಾಣ..!  ಆ ಲೇಔಟ್​ ಒಳ ಪ್ರವೇಶಿಸಲು ಒಂದು ದೊಡ್ಡ ಗೇಟ್​ಕಾಲಿಡುತ್ತಿದ್ದಂತೆ ಲೇಔಟ್​ನೊಳಗೆ ನೇರವಾಗಿ ಹಬ್ಬಿರುವ ಮಣ್ಣುರಸ್ತೆ.

ಅಕ್ಕಪಕ್ಕದ ಹಸಿರುಗಳ ಮಧ್ಯ, ಅಲ್ಲಲ್ಲಿ ನಿಂತಿರುವ ಚೆಂದದ ಮನೆಗಳು. ನಾಲ್ಕೈದು ಮನೆಗಳು ದಾಟುತ್ತಿದ್ದಂತೆ,  ನಮಗಾಗಿಯೇ ಕಾಯುತ್ತ ದಾರಿಯಲ್ಲಿ ನಿಂತಿದ್ದರು ರವೀಂದ್ರ ಭಟ್ಟರು!  ನಗುವಿನೊಂದಿಗೆ ನಮ್ಮನ್ನೆಲ್ಲ ಸ್ವಾಗತಿಸಿ, ತಮ್ಮ ಮನೆಯ ಬಳಿ ಕರೆದೊಯ್ದರು. ವಿಶಾಲವಾದ ಅಂಗಳ. ಅಂಗಳದ ಮಧ್ಯ ಚೆಂದದ ಮನೆ! ಮನೆಯ ವರಾಂಡದಲ್ಲಿ ಸೀರೆ ಉಟ್ಟಿದ್ದ ಇಬ್ಬರು ಹೆಂಗಳೆಯರು ನಸು ನಗುವಿನೊಂದಿಗೆ ನಮ್ಮ ಬರವಿಗೇ ಕಾಯುತ್ತಿದ್ದಂತೆ ಕಾಣಿಸಿತು. ಅಪ್ಪ ನನ್ನ ಕಿವಿಯಲ್ಲಿ ಪಿಸುಗುಟ್ಟಿದರು.  ‘ಕುಳಿತಿದ್ದಾರಲ್ಲ.. ಅವರು ರವೀಂದ್ರರ ತಾಯಿ.  ನಿಂತಿದ್ದಾರಲ್ಲ ಅವರು ರವೀಂದ್ರರ ಹೆಂಡತಿ ದೀಪಾ’ ನಾನು ದೀಪಾ ಅವರನ್ನೇ ನೋಡುತ್ತಿದ್ದೆ. ಮನೆಯವರೆಲ್ಲ ಸೇರಿ ಪ್ರೀತಿಯಿಂದ ನಮ್ಮನ್ನೆಲ್ಲ ಬರಮಾಡಿಕೊಂಡರು. 

ಅದಾಗಲೇ ಅಪ್ಪ ರವೀಂದ್ರ ಭಟ್ಟರ ಜತೆ ಫೋನ್​ನಲ್ಲಿಯೇ ಅಥರ್ವನ ಬಗ್ಗೆ ಎಲ್ಲವನ್ನೂ ಹೇಳಿದ್ದರಿಂದ, ಅವರ ಮನೆಯವರಿಗೆಲ್ಲ ನಾವು ಅವರ ಮನೆಗೆ ಏಕೆ ಬಂದಿದ್ದೇವೆ ಎಂಬುದು ಗೊತ್ತಿತ್ತು.  ಹೊಸದಾಗಿ ಅವರ ಮನೆಗೆ ಹೋಗಿದ್ದೇವೆ ಎಂಬ ಹಿಂಜರಿಕೆ ಅಥರ್ವನಿಗಿರಲಿಲ್ಲ. ನಗುತ್ತಾ, ಬಾಯಲ್ಲೇನೋ ಹೇಳುತ್ತಾ, ವಿಶಾಲವಾದ ಅವರ ಮನೆಯ ಉದ್ದ ಅಗಲ ಅಳೆಯುತ್ತಿದ್ದ ಪುಟ್ಟ ಅಥರ್ವನನ್ನು ದೀಪಕ್ಕಾ ಖುಷಿಯಿಂದ ಎತ್ತಿಕೊಳ್ಳುತ್ತಾ ‘ನೀನೇನಾ ಅಥರ್ವ..?’ ಎಂದರು. ಅಥರ್ವ ಅವರ ಮುಖವನ್ನೇ ನೋಡುತ್ತಾ, ಅವರಂತೆಯೇ ಬಾಯಿ ಕುಣಿಸಿದ. ಶಬ್ಧರಹಿತವಾಗಿ! ಇನ್ನೂ ಸ್ವಲ್ಪ ಹೊತ್ತು ಅವನನ್ನ ತಮ್ಮ ಮಡಿಲ ಮೇಲೆ ಕೂರಿಸಿಕೊಂಡು ಮಾತನಾಡಿಸಿದರು.  ಅವರ ಮಾತಿಗೆ ಉತ್ತರಿಸುವವನಂತೆ, ಮುಖಭಾವ ಮಾಡುತ್ತಾ ಅವರಂತೆಯೇ ಅನುಕರಿಸುತ್ತಿದ್ದ ಅಥರ್ವ.  ಮಗುವಿನ ಜತೆ ಮಾತನಾಡುತ್ತಲೇ ನನ್ನ ನೋಡಿದ ಅವರು ಅರ್ಥಪೂರ್ಣವಾಗಿ ನಕ್ಕರು.  

ನಮಗೆಲ್ಲ ಚಹ, ತಿಂಡಿ ಎಲ್ಲ ಪೂರೈಸಿದ ನಂತರ ದೀಪಕ್ಕಾ ನನ್ನನ್ನು ಒಳ ಕರೆದರು. ಆಗ ಅಥರ್ವ ನನ್ನ ಕಂಕುಳಲ್ಲೇ ಇದ್ದ. ಅವರ ಅಡುಗೆಮನೆಯ ಬಾಗಿಲಿನಲ್ಲಿಯೇ ಇರುವ ದೇವರ ಮನೆಯ ಪಕ್ಕದಲ್ಲಿ ನಮ್ಮನ್ನ ಕೂರಿಸಿ, ತಾವೂ ಜತೆಯಲ್ಲಿಯೇ ಕುಳಿತು ಮಾತು ಆರಂಭಿಸಿದರು. ಕುಶಲೋಪರಿಯ ಮಾತುಗಳಿಂದ ಶುರುವಾದ ನಮ್ಮ ಮಾತುಕತೆ,  ಕಿವುಡು ಮಕ್ಕಳ ಬಗ್ಗೆ ನಿಧಾನವಾಗಿ ಹೊರಳಿತು. ಅಥರ್ವನಿಗೆ ನಡೆದ ಎಲ್ಲ ಪರೀಕ್ಷೆಗಳ ಬಗ್ಗೆ ಮತ್ತು ರಿಪೋರ್ಟ್​​ಗಳ ಬಗ್ಗೆ ನಾನಾಗಲೇ ಅವರಿಗೆ ತಿಳಿಸುತ್ತಾ ಕಣ್ಣೀರಾದೆ. ‘ಅಳುತ್ತಾ ಕೂತರೆ, ಬೇಜಾರು ಮಾಡಿಕೊಂಡರೆ ಈ ಸಮಸ್ಯೆಗೆ ಉತ್ತರ ಸಿಕ್ಕೋದಿಲ್ಲ ಅಮೃತಾ, ನಾವು ಗಟ್ಟಿಯಾಗಬೇಕು. 

ಇವತ್ತಿನಿಂದ ಆ ಮಗುವಿಗೆ ನೀನೇ ಕಿವಿ!  ನೀನೇ  ಅವನ ಕಿವಿಯಾಗಬೇಕು’ ಅಂದರು. ನನಗೆ ಅರ್ಥವಾಗಲಿಲ್ಲ ಎಂಬುದನ್ನ ಗೊತ್ತುಮಾಡಿಕೊಂಡ ಅವರು ಮನ ಮುಟ್ಟುವಂತೆ ಮಾತನಾಡಿದರು. ‘ದೇವರು ನಮಗೇ ಯಾಕೆ ಈ ಶಿಕ್ಷೆ ಕೊಟ್ಟ..? ಅಂತ ಅನ್ನಿಸುತ್ತದಲ್ಲ.. ನಿನಗೇ..?’ ‘ಹಾಂ ಹೌದು’ಅಂದೆ. ‘ಎದುರಿಸುವ ಸಾಮರ್ಥ್ಯ ಇರುವವರನ್ನ ಹುಡುಕಿಯೇ ದೇವರು ಸಮಸ್ಯೆ ಕೊಡುತ್ತಾನೆ ಅನ್ನೋದು ನನ್ನ ನಂಬಿಕೆ. ನಾನು ಗೆದ್ದದ್ದನ್ನ ನೀನೂ ಗೆಲ್ಲುತ್ತೀಯಾ ಅಂತ ನನಗೆ ಅನ್ನಿಸ್ತಿದೆ’ ಅಂದರು.  ಅವರ ಆ ಮಾತು ಏನೋ ನನ್ನಲ್ಲಿ ಸಂಚಲನ ಮೂಡಿಸಿದ ಹಾಗಾಯಿತು. ಕಣ್ಣೀರು ವರೆಸಿಕೊಂಡು, ಮನಸ್ಸು ಗಟ್ಟಿಯಾಗಿಸಿಕೊಂಡು ಅವರನ್ನೇ ನೋಡುತ್ತಾ ಕುಳಿತೆ. 

‘ಅಥರ್ವನಿಗೆ ‘ಸೀವಿಯರ್​ಟು ಪ್ರೊಫೌಂಡ್​’ ಶ್ರವಣ ದೋಷವಿದೆ ಅಂತಾಯ್ತು. ಇಂಥ ಮಕ್ಕಳಿಗೆ ಅತೀ ದೊಡ್ಡ ಶಬ್ಧಗಳನ್ನ ಬಿಟ್ಟರೆ, ಮತ್ಯಾವ ಶಬ್ದಗಳೂ ಕೇಳೋದಿಲ್ಲ. ಈ ಜಗತ್ತಿನಲ್ಲಿ ಶಬ್ಧಗಳು ಇವೆ ಅನ್ನೋದೇ ಅವನಿಗೆ ಗೊತ್ತಿಲ್ಲ ಅಮೃತಾ, ಶಬ್ಧಗಳನ್ನ ನೀನವನಿಗೆ ಪರಿಚಯ ಮಾಡಿಸಬೇಕು.’ ‘ಆದರೆ, ಹಿಯರಿಂಗ್​ಏಡ್​ಇನ್ನೂ ಬಂದಿಲ್ಲವಲ್ಲ ದೀಪಕ್ಕಾ’ ಅಂದೆ ಮಧ್ಯದಲ್ಲಿ. ‘ಹಿಯರಿಂಗ್​ಏಡ್​ ಯಾವಾಗ ಬೇಕಾದರೂ ಬರಲಿ. ಹಿಯರಿಂಗ್​ಏಡ್​ಬರುವ ತನಕ ನೀನು ಸಮಯ ಹಾಳು ಮಾಡಬೇಡ. ‘ಸಮ್​ಥಿಂಗ್​ಇಸ್ ಬೆಟರ್​ದೆನ್​ನಥಿಂಗ್​’ ಅಲ್ವಾ..?  ಇವತ್ತಿನಿಂದಲೇ ನಿನ್ನ ಪ್ರಯತ್ನ ಶುರು ಮಾಡಬೇಕು. ಹಿಯರಿಂಗ್​ ಏಡ್​ ಬರುವ ತನಕ ನಿನಗೆ ಕಲಿಸುವುದು ಅಭ್ಯಾಸವಾಗಿರುತ್ತೆ’ ಅನ್ನುತ್ತಾ, ಶಬ್ಧಗಳ ಪರಿಚಯವನ್ನ ಮಕ್ಕಳಿಗೆ ಹೇಗೆ ಮಾಡಿಸಬೇಕು ಎಂಬುದನ್ನ ತೋರಿಸಿಕೊಟ್ಟರು. 

ಅಥರ್ವನ ಕೈ ಹಿಡಿದು ನಡೆಸುತ್ತಾ ಬಾಗಿಲು ಬಡಿದು,  ಧಪ್​ ಧಪ್​ ಧಪ್​ ಇದು ಬಾಗಿಲ ಶಬ್ಧ ಎಂದರು.  ಅಲ್ಲೇ ಅಡುಗೆ ಕಟ್ಟೆಯ ಮೇಲಿದ್ದ ಎರಡು ಸ್ಟೀಲ್​ ತಟ್ಟೆಗಳನ್ನು ಒಂದಕ್ಕೊಂದು ಬಡಿದು ‘ಟಣ್​ ಟಣ್​ ಟಣ್​ ಇದು ತಟ್ಟೆ ಶಬ್ಧ’ ಎಂದರು. ದೇವರ ಮುಂದಿದ್ದ ಗಂಟೆ ತೆಗೆದುಕೊಂಡು ಅಲುಗಾಡಿಸುತ್ತಾ ‘ಢಣ್​ ಢಣ್​ ಢಣ್​ ಇದು ಗಂಟೆ ಶಬ್ಧ’ ಅಂದರು. ಅಥರ್ವನಿಗಂತೂ ಖುಷಿಯೋ ಖುಷಿ.  ಇದೇನೋ ಹೊಸ ಆಟ ಎಂಬತೆ ಅವನೂ ಅವರಂತೆಯೇ ಮಾಡಿದ. ಆದರೆ ಬಾಯಲ್ಲೇನೂ ಶಬ್ಧ ಹೊರಡಿಸದೇ..!. 

ಈಗ ಅಥರ್ವನನ್ನ ಅವರ ಮುಂದೆಯೇ ಕೂರಿಸಿಕೊಂಡರು. ದೀಪಕ್ಕಾ ಮತ್ತು ಅಥರ್ವ ಎದುರುಬದುರಾಗಿ ಕುಳಿತಿದ್ದರು.  ಅಥರ್ವನ ಕೈಗಳನ್ನು ತನ್ನ ಗಂಟಲಿನ ಮೇಲಿಟ್ಟುಕೊಂಡು ‘ಆ…’ ಅಂದರು ದೀರ್ಘವಾಗಿ. ಅಥರ್ವ ಕೂಡ ರಾಗವಾಗಿ ‘ಆ….’ ಅಂದುಬಿಟ್ಟ. ನನಗೋ ಆಶ್ಚರ್ಯವೋ ಆಶ್ಚರ್ಯ. ಅವನ ಎರಡೂ ಕೈಗಳನ್ನೂ ತಮ್ಮ ಕೆನ್ನೆಯ ಮೇಲೆ ಇಟ್ಟುಕೊಂಡು ಅವರು ‘ಊ….’ ಅಂದರು. ಆಗಲೂ ಅಥರ್ವ ಸುಂಡಿ (ಬಾಯಿ) ಉದ್ದ ಮಾಡಿ ಊ.. ಅಂದ. ತಾನೂ ಏನೋ ತಿನ್ನುವಂತೆ ನಟಿಸುತ್ತಾ ಆ ಆ ಆ ‘ಅಂ’ ಅಂದರು. ಅದಕ್ಕೂ ಅಥರ್ವ ತನ್ನ ಕೈಯನ್ನ ಬಾಯಿಗೆ ಒಯ್ಯುತ್ತಾ ‘ಅಂ’ ಹೇಳಿದ.

ದಿನವೂ ಊಟ ಮಾಡಿಸುವಾಗ ಅವನದನ್ನ ಹೇಳುತ್ತಿದ್ದುದರಿಂದ ಅದವನಿಗೆ ಕಷ್ಟವಾಗಲಿಲ್ಲ. ನಂತರ ಅವರು ಅ, ಆ ದಿಂದ ಅಂ, ಅಃ ತನಕ ಸ್ವರಗಳನ್ನೆಲ್ಲವನ್ನೂ ಹೇಳಿಕೊಟ್ಟರು. ಅಥರ್ವ ನಮ್ಮಿಬ್ಬರ ಬಾಯಿಯನ್ನೇ ನೋಡುತ್ತಾ ಅ, ಊ, ಅಂ ಅನ್ನುತ್ತಿದ್ದನೇ ಹೊರತು ಬೇರೆ ಯಾವ ಸ್ವರವನ್ನೂ ಹೇಳೇಲೇ ಇಲ್ಲ. ವೈಬ್ರೇಶನ್​ನಿಂದಲೇ ಅಥರ್ವನ ಬಾಯಲ್ಲಿ ಸ್ವರಗಳು ಬಂದವು ಎಂಬುದು ನನಗೆ ಅರ್ಥವಾಗಲು ಸಮಯ ಬೇಕಾಯ್ತು. 

‘ಹಿಯರಿಂಗ್​ ಏಡ್​ ಹಾಕಿದರೆ, ಎಲ್ಲ ಸ್ವರಗಳನ್ನೂ ಅವನು ಹೇಳುತ್ತಾನೆ ಅಲ್ವಾ..?’  ಕೇಳಿದ್ದೆ ಕುತೂಹಲದಿಂದ.  ‘ನೋಡು, ತೀವ್ರ ಶ್ರವಣ ದೋಷವಿರುವ ಮಕ್ಕಳಿಗೆ, ಶ್ರವಣ ಸಾಧನ ಹಾಕಿದರೂ ಕೂಡ ಸ್ಪಷ್ಟವಾಗಿ ಎಲ್ಲವೂ ಕೇಳಿಸೋದಿಲ್ಲ’ ಎಂದು ದೀಪಕ್ಕಾ ಸಹಜವಾಗಿ ಹೇಳಿದರೂ ನನಗೆ ಆತಂಕವಾಗಿತ್ತು. ‘ಅಲ್ಲಲ್ಲ.. ಹದಿನೈದು ದಿನಗಳ ತರಬೇತಿಯ ನಂತರವೂ ಅವನು ಕೇಳಿಸ್ಕೊಳ್ಳೋದಿಲ್ವಾ..? ಮಾತನಾಡೋದಿಲ್ವಾ..?’ ಮುಗ್ಧವಾಗಿ ಪ್ರಶ್ನಿಸಿದ್ದೆ. ‘ಇಲ್ಲ ಅಮೃತಾ.. ಬರೀ ಹದಿನೈದು ದಿನಗಳಲ್ಲಿ ಅವನು ಕೇಳಿಸಿಕೊಳ್ಳೋದನ್ನ, ಮಾತನಾಡೋದನ್ನ ಕಲಿಯಲಾರ.  ಅದಕ್ಕಾಗಿ ನಾವು ವರ್ಷ ವರ್ಷ ಕಷ್ಟಪಡಬೇಕು.’ ಇವರ ಈ ಉತ್ತರ ಕೂಡ ಸಮಾಧಾನದ ಧ್ವನಿಯಲ್ಲೇ ಇತ್ತು. ಆದರೆ ನನ್ನ ಮುಖ ಮಾತ್ರ ಕಪ್ಪಿಟ್ಟಿತ್ತು. ಏಕೆಂದರೆ ಅಲ್ಲಿಗೆ ‘ಆಯಿಶ್​’ನಲ್ಲಿ ನೀಡುವ ಹದಿನೈದು ದಿನಗಳ ತರಬೇತಿ ಪಡೆದುಕೊಂಡುಬಿಟ್ಟರೆ ಅಥರ್ವ ಮಾತನಾಡಲು ಆರಂಭಿಸಿಬಿಡುತ್ತಾನೆ ಎಂಬ ನನ್ನ ನಿರೀಕ್ಷೆ ಸುಳ್ಳಾಗಿತ್ತು. 

ದೀಪಕ್ಕಾ ಮುಂದುವರಿಸಿದರು. ‘ಮೊದಲ ಹಂತದಲ್ಲಿ ನೀನು ಸ್ವರಗಳನ್ನ ಹೇಳಿಕೊಡುವಾಗ, ಅವನ ಕೈ  ನಿನ್ನ ಗಂಟಲಿನ ಮೇಲಿರಲಿ. ನಂತರ ಅವನು ಸ್ವರಗಳನ್ನ ಹೇಳುವಾಗ ಅವನ ಕೈಗಳನ್ನ ಅವನ ಗಂಟಲಿಗೇ ಇಟ್ಟು ಸ್ವರಗಳನ್ನ ಹೇಳಿಸಬೇಕು. ಹೀಗೆ ಮಾಡೋದ್ರಿಂದ ಸ್ವರಗಳ ವೈಬ್ರೇಶನ್​ಅವನಿಗೆ ಅರ್ಥವಾಗುತ್ತೆ. ಇದು ಅವನಿಂದ ಸ್ವರಗಳನ್ನ ಹೊರಡಿಸೋಕೆ ಸಹಾಯವಾಗುತ್ತೆ. ನಾವು ದಿನ ನಿತ್ಯ ಅವರಿಗೆ ಹೀಗೆ ಸ್ವರಗಳ ಅಭ್ಯಾಸ ಮಾಡಿಸಬೇಕು.  ಅ, ಆ ದಿಂದ ಅಂ ಅಃ ತನಕ ಪ್ರತಿ ದಿನ ಎಂಟರಿಂದ ಹತ್ತು ಬಾರಿ ನೀನು ಹೇಳಿಸಬೇಕು. ಇದು ನಾನು ನಿನಗೆ ಕೊಡುತ್ತಿರುವ ಹೋಂ ವರ್ಕ’ ಅಂದು ನಕ್ಕರು. ಅಥರ್ವ ನನ್ನ ಮಡಿಲಿನಿಂದ ಎದ್ದು ಹೋಗಿದ್ದ. ಅವನಿಗೆ ಕುಳಿತಲ್ಲೇ ಕುಳಿತು ಅದಾಗಲೇ ಬೇಜಾರಾಗಿ, ಅವನಪ್ಪನನ್ನು ಹುಡುಕುತ್ತಿದ್ದಾನೆ ಅನ್ನೋದು ನಮಗೆ ಗೊತ್ತಾಗಿತ್ತು. ದೀಪಕ್ಕಾ ನಮ್ಮನ್ನು ಮಹಡಿಗೆ ಕರೆದೊಯ್ದರು. ಅಲ್ಲಿಯೂ ರವೀಂದ್ರ ಭಟ್ಟರು ವಿನಯ್​ಗೆ ಇದರ ಬಗ್ಗೆಯೇ ಹೇಳುತ್ತಿದ್ದರು. ಅಥರ್ವ ಅಪ್ಪನನ್ನು ಕಂಡಿದ್ದೇ ಓಡಿಹೋದ. ನಾವು ಮಹಡಿಯಿಂದ ಕೆಳಗಿಳಿದೆವು. 

‘ಶ್ರವಣದೋಷವಿರುವ ಮಕ್ಕಳ ಹತ್ತಿರ ನಾವು ಜಾಸ್ತಿ ಮಾತನಾಡಬೇಕು, ನಾವು ಮಾತನಾಡಿದಷ್ಟೂ ಒಳ್ಳೇದು ಅಂತ ನನ್ನ ಗೆಳತಿಯೊಬ್ಬಳು ಹೇಳಿದ್ದಾಳೆ ದೀಪಕ್ಕಾ.. ಜಾಸ್ತಿ ಮಾತನಾಡೋದು ಅಂದ್ರೆ ಏನು..?  ಏನೇನು ಮಾತನಾಡಬೇಕು ನಾವು?’ ಮೆಟ್ಟಿಲುಗಳನ್ನಿಳಿಯುತ್ತಾ ಕೇಳಿದೆ.   

ನಾನು ಕೇಳಿದ ಪ್ರಶ್ನೆಯಿಂದ ದೀಪಕ್ಕಂಗೆ ಖುಷಿಯಾಗಿತ್ತು. ‘ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದೀಯಾ ಅಮೃತಾ,   ದಿನದಲ್ಲಿ ಮಗು ಎಷ್ಟು ಹೊತ್ತು ಎಚ್ಚರವಾಗಿರುತ್ತದೋ ಅಷ್ಟೂ ಹೊತ್ತು ನೀನು ಮಗುವಿನ ಜತೆಯಲ್ಲಿಯೇ ಇರುಬೇಕು. ಮಗುವಿನ ಕಣ್ಣುಗಳು ಏನೇನು ನೋಡುತ್ತವೋ ಅದೆಲ್ಲವನ್ನೂ ನೀನು ಅದಕ್ಕೆ ವಿವರಿಸುತ್ತಲೇ ಇರಬೇಕು’ ಎನ್ನುತ್ತಾ ನನ್ನ ಮುಖ ನೋಡಿದರು. ನಾನು ಇನ್ನೂ ಗೊಂದಲದಲ್ಲಿಯೇ ಇದ್ದಿದ್ದು ಅವರಿಗೆ ಗೊತ್ತಾಗಿತ್ತು. ‘ಈಗ ನಾನು ತಾಯಿ, ನೀನು ಮಗು ಅಂದುಕೊ, ನೀನು ನನ್ನನ್ನೇ ನೋಡುತ್ತಿದ್ದೀಯ ಅಲ್ವಾ..? ನಾನು ನಿನಗೆ ವಿವರಿಸ್ತೀನಿ ಕೇಳಿಸಿಕೊ. ಅಮೃತಾ ಅಮ್ಮನನ್ನು ನೋಡುತ್ತಾ ಇದ್ದಾಳೆ. ಅಮ್ಮ ಅಮೃತಾಳನ್ನು ನೋಡುತ್ತಾ ಇದ್ದಾರೆ. ಅಮೃತಾ ಒಬ್ಬಳು ಹುಡುಗಿ. ಅಮ್ಮ ಒಬ್ಬರು ಹೆಂಗಸು. ಅಮ್ಮನಿಗೆ ಒಂದು ಮುಖವಿದೆ, ಎರಡು ಕಣ್ಣುಗಳಿವೆ, ಒಂದು ಮೂಗು ಇದೆ, ಒಂದು ಬಾಯಿ ಇದೆ, ಎರಡು ಕಿವಿಗಳು ಇವೆ, ಎರಡು ಕಾಲುಗಳು ಇವೆ, ಎರಡು ಕೈಗಳು ಇವೆ. ಅಮ್ಮ ನಗುತ್ತಾ ಇದ್ದಾರೆ’ ಎನ್ನುತ್ತಾ ಅಭಿನಯಿಸಿ ಮಾತನಾಡಿದರು.

ನಾನು ಏನನ್ನೂ ಹೇಳದೇ ಅವರನ್ನೇ ನೋಡುತ್ತಾ ದಂಗಾಗಿದ್ದೆ. ‘ಅಮೃತಾ, ಕಿವುಡು ಮಗುವಿನೊಂದಿಗೆ ಮಾತನಾಡುವುದೇ ಹೀಗೆ. ಆ ಮಗು ಏನನ್ನೇ ಮಾಡುತ್ತಿರಲಿ ಅದರೊಂದಿಗೆ ನೀನು ಇರಬೇಕು ಮತ್ತು ಅದು ಮಾಡುತ್ತಿರುವುದನ್ನೆಲ್ಲ ಅದರ ಮುಂದೆ ನೀನು ಕುಳಿತು ವಿವರಿಸುತ್ತಾ ಇರಬೇಕು ‘ಶ್ರವಣ ಸಾಧನಗಳಿಂದ ಕೇಳಿಸಿಕೊಳ್ಳುವ ಮಗುವಾದರೆ ಅದು ಕೇಳಿಸಿಕೊಳ್ಳುತ್ತಾ ಇರುತ್ತದೆ. ಒಂದುವೇಳೆ ಶ್ರವಣ ಸಾಧನಗಳಿಂದಲೂ ಅದು ಕೇಳಿಸಿಕೊಂಡಿಲ್ಲವೆಂದಾದರೆ, ಆ ಮಗು ತುಟಿ ಚಲನೆಯನ್ನ ಗಮನಿಸಿ ಮಾತು ಕಲಿಯಬೇಕಾಕುತ್ತದೆ. ಆಗ ನೀನು ಅವನು ನಿನ್ನ ತುಟಿಯನ್ನೇ ನೋಡಿ ಗಮನಿಸಿ ತಾನೂ ಮಾತನಾಡಲು ಅಭ್ಯಾಸ ಮಾಡಿಸಬೇಕಾಗುತ್ತದೆ. ನಾನು ನನ್ನ ಮಗನಿಗೆ ಕಲಿಸಿದ್ದೇ ಹಾಗೆ’ ಅವರ ಒಂದೊಂದೂ ಮಾತಿಗೂ ಆತ್ಮವಿಶ್ವಾಸದ ಘಮವಿತ್ತು.

ತಾವು ನಿರಂಜನನಿಗೆ ಮಾತು ಕಲಿಸಿದ ಬಗ್ಗೆ ನಿರರ್ಗಳವಾಗಿ ಹೇಳಿದರು. ಹತ್ತನೇ ತರಗತಿಯಲ್ಲಿ ಓದುತ್ತಿರುವ ಅವನ ಸ್ಕೂಲ್​ನಲ್ಲಿ ನಾಳೆ ಟೆಸ್ಟ್​ ಇದೆ ಮಹಡಿಯ ಮೇಲೆ ಓದಿಕೊಳ್ಳುತ್ತಿದ್ದಾನೆ ಎಂದು ಹೇಳುತ್ತಿರುವಾಗಲೇ, ಶುಭ್ರ ಮಡಿ ಉಟ್ಟಿದ್ದ ನಿರಂಜನ ನಮ್ಮ ಮುಂದೆ ಬಂದು ನಿಂತಿದ್ದ. ಅದಾಗಲೇ ಆರಡಿ ಎತ್ತರ ಬೆಳೆದಿದ್ದ ಆತನ ಮುಖದಲ್ಲಿ ನಾನು ಭವಿಷ್ಯದ ಅಥರ್ವನನ್ನೇ ಕಂಡಿದ್ದೆ. 

ನನ್ನ ಮುಖ ನೋಡಿ ಹಾಯ್​ಎನ್ನುತ್ತಾ, ಅವನಮ್ಮನ ಬಳಿ ಸ್ವಲ್ಪ ಹೊತ್ತು ಮಾತನಾಡಿದ. ಎಷ್ಟು ಚೆಂದವಾಗಿ ಮಾತನಾಡುತ್ತಾನೆ..! ಅನ್ನಿಸಿತು ನನಗೆ.  ಸಂಜೆಯ ಹೊತ್ತಿನ ಸಂಧ್ಯಾವಂದನೆ ಮಾಡಲು ದೇವರ ಮನೆಗೆ ಬಂದಿದ್ದ ಅವನಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ನಾವು ಅಲ್ಲಿಂದ ಎದ್ದು ಮನೆಯ ವರಾಂಡಕ್ಕೆ ಬಂದು ಕುಳಿತೆವು. ಅಥರ್ವ ಅವನಪ್ಪನ ಬಳಿಯೇ ಇದ್ದ.  

ನಾನು ಅವರ ಮನೆಯ ಮೆಟ್ಟಿಲುಗಳನ್ನೇ ನೋಡುತ್ತಾ ಏನನ್ನೋ ಯೋಚಿಸುತ್ತಿದ್ದೆ. ‘ಅಮೃತಾ ನೀನೀಗ ಏನು ನೋಡುತ್ತಿದ್ದೀಯಾ’ ದೀಪಕ್ಕಾ ಕೇಳಿದರು. ನಾನು ನಗುತ್ತಾ ‘ಮೆಟ್ಟಿಲು’ ಅಂದೆ. ‘ಇವು ಮೆಟ್ಟಿಲುಗಳು. ಇವುಗಳನ್ನು ನಾವು ಹತ್ತಲು ಮತ್ತು ಇಳಿಯಲು ಉಪಯೋಗಿಸುತ್ತೇವೆ. ನಾವು ಈಗ ಮೆಟ್ಟಿಲ ಮೇಲೆಯೇ ಕುಳಿತಿದ್ದೇವೆ. ಒಂದು, ಎರಡು, ಮೂರು, ನಾಲ್ಕು ಮೆಟ್ಟಿಲುಗಳು ಇವೆ. ಸಿಮೆಂಟ್​ನಿಂದ ಈ ಮೆಟ್ಟಿಲುಗಳನ್ನು ಮಾಡಿದ್ದಾರೆ. ಎಲ್ಲರ ಮನೆಯಲ್ಲಿಯೂ ಮೆಟ್ಟಿಲುಗಳು ಇರುತ್ತವೆ. ದೊಡ್ಡ ಮೆಟ್ಟಿಲುಗಳೂ ಇರುತ್ತವೆ, ಚಿಕ್ಕ ಮೆಟ್ಟಿಲುಗಳೂ ಇರುತ್ತವೆ….’ ಎಂದು ಒಮ್ಮೆ ಸುಮ್ಮನಾದರು. ನಾನು ನನಗೆ ಅರ್ಥವಾಯಿತು ಎಂಬಂತೆ ತಲೆ ಅಲ್ಲಾಡಿಸಿದೆ. ‘ಹೀಗೆ ಪ್ರತಿಯೊಂದನ್ನೂ ಬಿಡದೆ, ಮಗುವಿನ ಬಳಿ ಮಾತನಾಡಬೇಕು ನೀನು. ಮಗು ಚಿಕ್ಕದು, ಅದಕ್ಕೆ ಅರ್ಥವಾಗಲ್ಲ ಅಂತ ಯೋಚಿಸಬೇಡ. ಎಲ್ಲವನ್ನೂ ವಿವರಿಸು, ನೀನು ವಿವರಿಸಿದ್ದನ್ನ ತೋರಿಸು, ಅರ್ಥ ಮಾಡಿಸು’ ಅಂದರು. 

‘ಹಾಗಾದರೆ, ಶ್ರವಣ ಸಾಧನಗಳು ಬಂದಮೇಲೆ ವಾರಕ್ಕೊಮ್ಮೆ ನಿಮ್ಮ ಮನೆಗೇ ಬರ್ಲಾ ನಾನು..? ನನಗೆ ನಿಮ್ಮಿಂದ ಟ್ರೈನಿಂಗ್​ಬೇಕು ದೀಪಕ್ಕಾ’ ಹೇಳಿದೆ ನಾನು. ‘ಬೇಡ ಬೇಡ. ನೀನು ಇದಕ್ಕೋಸ್ಕರ ನಮ್ಮ ಮನೆಗೆ ಬರುವುದು ಬೇಡ.  ಮೈಸೂರಿನಲ್ಲೊಂದು ಶಾಲೆಯಿದೆ. ನಾನು ನಿರಂಜನನಿಗೆ ಮಾತು ಕಲಿಸಿದ ಶಾಲೆ ಅದು. ಆ ಶಾಲೆಯ ಹೆಸರು ’ರೋಟರಿ ವೆಸ್ಟ್​ ಅಂಡ್​ ಪೇರೆಂಟ್ಸ್​  ಅಸೋಸಿಯೇಶನ್​  ಆಫ್​  ಡೆಫ್​  ಚಿಲ್ಡ್ರನ್​’ ಅಂತ. ಅಲ್ಲಿಗೇ ನೀನು ಹೋಗಬೇಕು. ಎಲ್ಲ ಶಾಲೆಗಳಂತೆ ಬರೀ ಮಕ್ಕಳನ್ನ ಮಾತ್ರ ಕಳುಹಿಸುವ ಶಾಲೆಯಲ್ಲ, ಅದು ತಾಯಂದಿರ ಮತ್ತು ಮಕ್ಕಳ ಶಾಲೆ. ಕಿವುಡು ಮಗುವಿಗೆ ಹೇಗೆ ಮಾತು ಕಲಿಸಬೇಕು ಅನ್ನೋದನ್ನ ತಾಯಿಗೇ ಕಲಿಸುವ ದೇಗುಲ ಅದು’  ಖುಷಿಯಿಂದ ಹೇಳಿದರು. ‘ಆಗಲಿ ನಾನು ಅಲ್ಲಿಗೇ ಹೋಗುತ್ತೇನೆ. ನೀವು ಶಾಲೆಯ ವಿಳಾಸ ಕೊಡಿ ಒಮ್ಮೆ ಹೋಗಿಬರುತ್ತೇವೆ’ ಎಂದೆ ನಾನು.  

ಯಾಕೋ ನನ್ನ ಮಾತುಗಳಲ್ಲಿ ಅವರಿಗೆ ನಂಬಿಕೆ ಇದ್ದಂತೆ ಕಾಣಿಸಲಿಲ್ಲವೋ ಏನೋ, ‘ನೀವು ಎಷ್ಟು ಬೇಗ ಅಲ್ಲಿಗೆ ಹೋಗುತ್ತೀರೋ ಅಷ್ಟು ಒಳ್ಳೆಯದು. ಕಿವುಡು ಮಗುವಿನ ಪಾಲಿಗೆ ಒಂದೊಂದು ದಿನವೂ ಅತಿ ಮುಖ್ಯ. ಸಮಯ ಹಾಳು ಮಾಡೋದು ಒಳ್ಳೇದಲ್ಲ. ಆದಷ್ಟು ಬೇಗ  ಹೋಗೋಣ. ನಾನೇ ನಿನ್ನ ಕರೆದುಕೊಂಡು ಹೋಗ್ತೀನಿ. ನೀನು ವಿನಯ್​ ಆಫೀಸ್​ನ ರಜಕ್ಕಾಗಿ ಕಾಯೋದೇ ಬೇಡ. ಯಾವಾಗ ಹೋಗೋದು..? ನೀನು ನಾಳೆಯೇ ಬರ್ತೀಯಾ ಅಂದ್ರೆ, ನಾಳೆ ಬೆಳಗ್ಗೆನೇ ನಾನಂತೂ ರೆಡಿ.’ ಅಂದುಬಿಟ್ಟಿದ್ದರು ದೀಪಕ್ಕಾ. ಕಿವುಡು ಮಗುವಿನ ವಿಷಯದಲ್ಲಿ ಅಷ್ಟು ಛಲವಾದಿ ಅವರು. ಅಬ್ಬಾ..! ಅನ್ನಿಸಿತು ನನಗೆ. ತಕ್ಷಣಕ್ಕೆ ಏನು ಹೇಳಬೇಕೋ ತಿಳಿಯದೇ, ವಿನಯ್​ ಕೇಳಿ ಹೇಳ್ತೀನಿ ದೀಪಕ್ಕಾ ಅಂದೆ. ‘ಆಯ್ತು ಕೇಳು. ಆದರೆ, ಈಗ ನೀನು ಕಿವುಡು ಮಗುವಿನ ತಾಯಿ ಮಾತ್ರ. ಇನ್ನೂ ಮೂರು ವರ್ಷ ನೀನು ಹೆಂಡತಿಯಲ್ಲ, ಮಗಳಲ್ಲ, ಸೊಸೆಯಲ್ಲ, ಅಕ್ಕ ತಂಗಿ ಗೆಳತಿ ಯಾರೂ ಅಲ್ಲ. ಆ ಎಲ್ಲವನ್ನೂ ಪಕ್ಕಕ್ಕಿಟ್ಟು ಅಥರ್ವನಿಗೆ ಸಂಪೂರ್ಣವಾಗಿ ಶಿಕ್ಷಕಿಯಾಗಬೇಕು ನೀನು’ ಕಡ್ಡಿ ತುಂಡುಮಾಡಿದಂತೆ ಹೇಳಿದ್ದರು ದೀಪಕ್ಕಾ. ನಾನು ಎವೆಯಿಕ್ಕದೇ ಅವರನ್ನೇ ನೋಡುತ್ತಿದ್ದೆ. ಮಹಡಿಯ ಮೇಲೆ ಮಾತನಾಡುತ್ತಿದ್ದ ಗಂಡಸರು ಕೆಳಗೆ ಇಳಿದು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. 

ದೀಪಕ್ಕಾ ಎದ್ದು ಹೋಗಿ ವಿನಯ್​ನ್ನ ಕರೆದುಕೊಂಡು ಬಂದು ನನ್ನ ಪಕ್ಕದಲ್ಲಿ ನಿಲ್ಲಿಸಿ’ ವಿನಯ್​ ಇವತ್ತಿನಿಂದ ಅಮೃತಾಳನ್ನ ಬಿಟ್ಟುಬಿಡು’ ಅಂದರು.  ಇವರೇಕೆ ಹೀಗೆ ಹೇಳುತ್ತಿದ್ದಾರೆ ಎಂಬುದು ಗೊತ್ತಾಗದೇ,  ವಿನಯ್​ ಗೊಂದಲದಲ್ಲಿಯೇ ನಕ್ಕ. ‘ನನ್ನ ಮಾತಿನ ಅರ್ಥವೇನೆಂದರೆ, ಅಮೃತಾ ಈಗ ಸಂಪೂರ್ಣವಾಗಿ ಅಥರ್ವನ ತಾಯಿ, ಶಿಕ್ಷಕಿಯಾಗಬೇಕು. ಹೀಗಾಗಿ ಅವಳು ಎರಡು ಮೂರು ವರ್ಷಗಳ ಮಟ್ಟಿಗೆ ಮೈಸೂರಿನಲ್ಲಿಯೇ ಇರಬೇಕಾಗುತ್ತೆ’ ನೀನು ಅಡ್ಡಿ ಮಾಡುವಂತಿಲ್ಲ. ನಗುತ್ತಲೇ ಮಾತನಾಡಿದರೂ ದೀಪಾ ಅವರ ಮಾತು ನಮ್ಮಿಬ್ಬರ ಮನಸ್ಸಿಗೆ ನಾಟಿತ್ತು. ಕಿವುಡು ಸಮಸ್ಯೆಯ ಆಳ, ಗಂಭೀರತೆ ಅರಿವಿಗೆ ಬರುತ್ತಿತ್ತು.    

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಜಯಲಕ್ಷ್ಮಿ ಪಾಟೀಲ್

    ತುಂಬಾ ವಿಶೇಷ ಅಂಕಣ ನಿಮ್ಮದು ಅಮೃತಾ. ತುಂಬಾ ಜನರಿಗೆ ಇದರಿಂದ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: