ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದರು.
34
‘ರಾಣೆಬೆನ್ನೂರು ತಂಡದ ಆಟ ಅಂದ್ರ ಮಸ್ತ ಇರ್ತದ. ನೀವು ನೋಡ್ತೀರೇನೂ.’ ಹಿಂದಿನಿಂದ ಬಂದ ಮೀರಸಾಬಿ ಕೇಳಿದ, ‘ನೀವು ಟಿಕೆಟ್ ತಗದು ಹೋಗ್ರಿ. ನಾ ದೊಡ್ಡ ಅಪ್ಪಾರವರಿಗೆ ಹೇಳಿ ನಾಟಕ ಮುಗೀತ್ಲೂ ಮತ್ತ ಗಾಡಿ ತರ್ತೀನಿ’.
ಗೌರಿಗೆ ಹಾಡು ಕೇಳುವಾಸೆ. ನಾಣಿಗೆ ಗೆಜ್ಜೆ ಕಟ್ಟಿ ಕುಣಿಯುವುದನ್ನು ನೋಡುವ ಆಸೆ. ಆದರೆ ಅದು ಮುಗಿಯುವಾಗ ಮಧ್ಯರಾತ್ರೆ ಆದೀತಲ್ಲವೇ? ಅಷ್ಟು ರಾತ್ರೆವರೆಗೆ ಆಯಿ ನಿದ್ದೆ ಮಾಡದೆ ಕಾಯಬೇಕು ತಮಗಾಗಿ. ಮತ್ತೆ ನಾಳೆ ನಸುಕಿನ ಬಸ್ಸಿಗೆ ಹೆಣ್ಣಿನ ದಿಬ್ಬಣದವರು, ನಾಣಿಯೂ ಹೊಳೆಬಾಗಿಲಿಗೆ ಮತ್ತು ಗೌರಿ ಸುಶೀಲ ಚಿಕ್ಕಿಯ ಜೊತೆ ಸಿರ್ಸಿಗೆ ಹೊರಡಲೇಬೇಕು. ಗೃಹಪ್ರವೇಶದಿಂದ ಹಿಂದಿರುಗುವಾಗ ಗೌರಿಯನ್ನು ಕರೆದೊಯ್ಯುವ ವಿಚಾರ ಇಟ್ಟುಕೊಂಡೇ ಚಿಕ್ಕಿ ಹುಬ್ಬಳ್ಳಿಗೆ ಬಂದಿದ್ದಾಳೆ.
ಆಯಿ ಅವಳ ಬಟ್ಟೆಗಳ ಚೀಲ ಬೇರೆಯೇ ತಂದಿದ್ದಾಳೆ. ಜೊತೆಗೆ ಅವಳಿಗಿಷ್ಟದ ತಿಂಡಿ, ಹಪ್ಪಳ, ಸಂಡಿಗೆ, ಹುರಿದ ಹುಣಿಸೆ ಬೀಜ ಇನ್ನೂ ಏನೇನೋ ಕಟ್ಟಿದ್ದಾಳೆ. ಗೌರಿಯೋ ಹೊಸ ಊರಿನಲ್ಲಿ ಹೊಸ ಭವಿಷ್ಯದ ದಿನಗಳಿಗೆ ತನ್ನ ಕನಸು ಸೇರಿಸಲು ಹೊರಟಿದ್ದಾಳೆ. ತಮ್ಮನನ್ನು ಅಗಲುವುದು ಅನಿವಾರ್ಯವೇ. ಅವನನ್ನು ಜೊತೆಗೆ ಕರೆದೊಯ್ಯುವ ಎಂದರೆ ಸೇವಾಶ್ರಮದ ಟ್ರಸ್ಟಿಗಳು ಗೌರಿಯ ವಾಸ್ತವ್ಯಕ್ಕೆ ಒಪ್ಪಿಗೆ ಕೊಟ್ಟದ್ದೇ ದೊಡ್ಡ ಸಂಗತಿ. ಅದನ್ನೇ ನೆನಪಿಸಿ ಗಂಟಲು ಕಟ್ಟಿದಂತೆ, ನಾಣಿಗೆ ಅಕ್ಕನ ಮುಖ ನೋಡಲಾಗಲಿಲ್ಲ. ನಾಳೆ ಅಕ್ಕನನ್ನು ಬಿಟ್ಟು ತಾನೊಬ್ಬನೇ ಹೊಳೆಬಾಗಿಲಿಗೆ ಹೋಗಬೇಕು. ತನ್ನೊಡನೆ ಅವಳಿಲ್ಲ. ಅದೇ ನೋವಿನ ಸಂಗತಿ.
ಈ ಯೋಚನೆಯಲ್ಲೇ, ‘ಅಕ್ಕ, ನೀನು ನಿಜವಾಗ್ಲೂ ಸಿರ್ಸಿಗೆ ಹೋಗ್ತಿಯಾ? ನೀನಿಲ್ಲದೆ ನಾನೊಬ್ಬನೇ ಎಂತ ಮಾಡ್ಲಿ? ನೀನಿಲ್ಲದೆ ಅಪ್ಪಯ್ಯ ಬಂದಾಗ ನಾನೊಬ್ಬನೇ ಪರದೆ ಆಚೆ ಹ್ಯಾಗೆ ಮಲಗಲಿ? ನೀನಿಲ್ಲದೆ ಹಾಡಿ ಆಚೆ, ಹೊಳೆಬದಿ ಯಾರ ಜತಿ ಹೋಗ್ಲಿ?’ ಕಣ್ಣೀರಾದ.
ಇಬ್ಬರೂ ಭಾರವಾದ ಹೆಜ್ಜೆ ಇಟ್ಟು ಮೀರಸಾಬಿಯ ಕುದುರೆ ಗಾಡಿ ಹತ್ತಿದರು. ಹೋಗುತ್ತ ಗೌರಿಗೆ ತಾನು ಊರಲ್ಲೇ ಇಟ್ಟು ಬಂದ ಪಿಳಿ ಪಿಳಿ ಗೊಂಬೆ ಪೆಟ್ಟಿಗೆ ನೆನಪಾಯಿತು. ಹೊರಡುವ ಅವಸರದಲ್ಲಿ ಮರೆತು ಹೋಗಿತ್ತು. ಗೌರಿ ತಾನಾಗಿಯೇ ಮರೆತಳೋ, ಬೇಡವೆಂದು ಬಿಟ್ಟು ಬಂದಳೋ,ನಾಣಿಯ ಕಿವಿಯಲ್ಲಿ ಗುಟ್ಟಾಗಿ, ‘ನನ್ನ ಗೊಂಬೆ ಪೆಟ್ಟಿಗೆ ತೆಗೆದು ಅಜ್ಜಮ್ಮನ ಮಂಚದ ಕೆಳಗೆ ಹುಗ್ಗಿಸಿ ಇಡು ನಾಣಿ. ನಾ ಊರಿಗೆ ಬಂದಾಗ ಆಡ್ಲಿಕ್ಕೆ ಗೊಂಬೆ ಬೇಕು.’ ಎಂದು ತಾನೂ ಕಣ್ಣೀರಾದಳು.
೧೨೭ಮರುದಿನ ನಸುಕಿನಲ್ಲೇ ಹೊಳೆಬಾಗಿಲಿನವರು ಗಂಗೊಳ್ಳಿ ಹೊಳೆಯ ತಮ್ಮ ಕುದ್ರುವಿಗೆ, ಅಮ್ಮಮ್ಮ ಅವಳ ಒಬ್ಬಳು ಸೊಸೆ, ಮೊಮ್ಮಕ್ಕಳು ಚಕ್ರಿ ಮನೆಗೆ, ಸೀತು ದೊಡ್ಡಪರ ಸಂಸಾರ ಗೋವಾಕ್ಕೆ, ಹಾಗೂ ರಘು ದೊಡ್ಡಪ್ಪನ ಸಂಸಾರದ ಜೊತೆಗೆ ಗೌರಿ, ಸುಶೀಲ ಚಿಕ್ಕಿ ಸಿರ್ಸಿಗೆ ಹೊರಟು ಸಿದ್ಧರಾದರು. ಐದು ಗಂಟೆಗೇ ಎಲ್ಲರಿಗೂ ಚಹ, ಕಾಫಿ ತಿಂಡಿ ಆಯಿತು. ಅವರಿಗೆಲ್ಲ ಪ್ರತ್ಯೇಕವಾಗಿ ಮದುವೆಯ ಸಿಹಿ ಖಾರದ ತಿಂಡಿಗಳನ್ನು, ದಾರಿ ಪ್ರಯಾಣದಲ್ಲಿ ಉದರ ಸೇವನೆಗೆ ಬೇಕಾದುದನ್ನೂ ಚೆಂದದ ಚೀಲದಲ್ಲಿ ಕಟ್ಟಿಕೊಟ್ಟರು ಅದಿತಿ ದೇವಿ.
‘ಮಗಳನ್ನು ನೋಡಲು ಆಗಾಗ ಬರ್ತಾ ಇರಿ’ ಎಂದರು ಶರ್ಮರು ಸುಬ್ಬಪ್ಪಯ್ಯರಿಗೆ. ವೃದ್ಧಾಪ್ಯದ ಅಂಚಿನಲ್ಲಿ ತಮ್ಮ ಕೊನೆ ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ ಧನ್ಯತೆಯ ಭಾವ ಅವರಲ್ಲಿತ್ತು. ಅಜ್ಜಮ್ಮ ಎಷ್ಟು ಬಾರಿ ಕೊಲ್ಲೂರು ಮೂಕಾಂಬಿಕೆಯನ್ನು ಸ್ಮರಿಸಿದರೋ. ಮಕ್ಕಳನ್ನು ಹುಟ್ಟಿಸಿದ ಮೇಲೆ ತಮ್ಮ ಜವಾಬ್ದಾರಿ ಇನ್ನೊಬ್ಬರ ಹೆಗಲಿಗೆ ಹೇರಿಸಬಾರದಲ್ಲ. ಇನ್ನು ಗಂಗೊಳ್ಳಿ ಹೊಳೆ ಯಾವಾಗ ತಮ್ಮನ್ನು ಕರೆದರೂ ಹೋಪಕೆ ಸಿದ್ದವಂತೆ!
ವಿದಾಯದ ಗಳಿಗೆ. ಎಲ್ಲರ ಕಣ್ಣುಗಳಲ್ಲೂ ನೀರು. ಮದುಮಗಳು ಶಾರದೆಯನ್ನು ಬಿಟ್ಟು ಹೋಗುವುದು ದುಃಖವೇ. ಅದಕ್ಕಿಂತ ಮಿಗಿಲಾಗಿ ಗೌರಿಯನ್ನು ಕಳಿಸುವ ನೋವು ಅಧಿಕವಾಗಿತ್ತು ಹೊಳೆಬಾಗಿಲಿನವರಿಗೆ. ಮುದ್ದಿನ ಮನೆಮಗಳು. ಹಿರಿಯರನ್ನು ಬಿಟ್ಟು ಇದ್ದವಳಲ್ಲ. ಸುಶೀಲ ಚಿಕ್ಕಿಯ ಸುಪರ್ದಿಯಲ್ಲಿ ಮುಂದಿನ ಜೀವನ ಪಯಣ ಅವಳದು.
ಅಜ್ಜಮ್ಮನಿಂದ ನೂರು ಉಪದೇಶ. ಮದುವೆ ವಯಸ್ಸಿನ ಮೊಮ್ಮಗಳು ಕಾಣದ ಊರಲ್ಲಿ ಇರುವುದನ್ನು ಊಹಿಸಿ ಅತ್ತದ್ದೇ ಜಾಸ್ತಿ. ಚಕ್ರಿ ಅಮ್ಮಮ್ಮ ಅವಳ ಒಂದು ಕೈ ಬಿಡದೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಆಯಿ, ಅಪ್ಪಯ್ಯ ಬಿಮ್ಮಗಿದ್ದರೂ ಈಗಲೇ ಎನ್ನುವಂತೆ ಧುಮ್ಮಿಕ್ಕಲು ಸಿದ್ಧವಾಗಿತ್ತು ಕಣ್ಣೀರ ಧಾರೆ. ಅದೋ, ನಾಣಿಯ ಕಣ್ಣುಗಳು ಕೆಂಪಾಗಿ ಅಳು ಮುಂದುವರಿದು ಅಕ್ಕನನ್ನು ಅಂಟಿದ್ದ ಮೇಣದಂತೆ. ನನ್ನನ್ನೂ ಕರ್ಕೊಂಡು ಹೋಗು, ಇಲ್ಲಾ, ನೀ ಬಾ ನಮ್ಮೊಟ್ಟಿಗೆ ಎರಡೇ ಮಾತು.
ಯಾರು ಯಾರನ್ನು ಸುಮಾಧಾನಿಸುವುದು ತಿಳಿಯದ ಗಳಿಗೆ. ಶಾರದತ್ತೆ ಮದುವೆ ಮೊದಲೇ ಸುಶೀಲ ಚಿಕ್ಕಿಯ ಪತ್ರ ಬಂದ ಲಾಗಾಯ್ತು ಗೌರಿಗೆ ಕಲಿಯುವ ಆಸೆಗಿಂತ ಹೆಚ್ಚು ಅವಳ ಸಂಗಡ ಹೊಸ ವಾತಾವರಣಕ್ಕೆ ಹೋಗುವ ಸಂಭ್ರಮ ತುಂಬಿದೆ. ಚಕ್ರಿ ಅಮ್ಮಮ್ಮ ಬೇರೆ ಸಿರ್ಸಿ ಆಶ್ರಮದ ಬಗ್ಗೆ ಎಷ್ಟೆಲ್ಲ ಹೇಳಿದಳಲ್ಲ. ಅವಳಿಗೂ ಮೊಮ್ಮಗಳು ಕಲಿಯಲಿ ಎಂಬ ಆಸೆ. ಅವಳ ಜೀವನೋತ್ಸಾಹ ಅಪರೂಪದ್ದು.
ಹುಬ್ಬಳ್ಳಿಯಿಂದ ಹೊರಡುವಾಗ ಆಯಿ, ‘ಗೌರಿಗೆ ಬೇಜಾರು ಬಂದ್ರೆ ಒಂದು ಕಾಗ್ದ ಗೀಚಿ ಹಾಕು. ಅವಳ ಅಪ್ಪಯ್ಯ ಬಂದು ಕರೊಂಡು ಹೋಗ್ತವು’ ಎಂದಳು ಸುಶೀಲಚಿಕ್ಕಿಗೆ.ಕೂಡಲೆ ಚಕ್ರಿಅಮ್ಮಮ್ಮ ಗೌರಿಯ ನೆತ್ತಿಗೆ ಮುದ್ದಿಟ್ಟು, ‘ಬ್ಯಾಸ್ರ, ದುಃಖ ಹೇಳಿ ಶಾಲೆಗೆ ಹೋಗ್ದೆ ಸೋಮಾರಿ ಆದಿಯೋ ಗೌರಿ, ನಿನ್ನ ಕಾಲಿಗೆ ನೀನೇ ಚಪ್ಪಡಿಕಲ್ಲು ಎಳ್ಕತ್ತೆ. ಕಲಿತು ದೊಡ್ಡವಳಾಗ್ಬೇಕು ನನ್ನ ಮೊಮ್ಮಗಳು, ನೆನಪಿಟ್ಕಾ’
ಗೌರಿಗಿಂತ ಅವಳಿಗೇ ಸಂಭ್ರಮ ಜಾಸ್ತಿ. ಸಿರ್ಸಿ ಸೇವಾಶ್ರಮವೆಂದರೆ ಮಹಾತ್ಮ ಗಾಂಧೀಜಿಯ ಹೆಜ್ಜೆಯನ್ನು ಅನುಸರಿಸುವ ಆಶ್ರಮ. ಅದರ ಆದರ್ಶದ ಬಗ್ಗೆ ಕೇಳಿ ತಿಳಿದಿದ್ದ ಅಮ್ಮಮ್ಮ ಗೌರಿಗೆ ಸರಿಯಾದ ಕಡೆ ಕಲಿಯುವ ಅವಕಾಶ ಬಂತೆಂದು ಎಷ್ಟು ಬಾರಿ ದೇವರನ್ನು ಸ್ಮರಿಸಿದಳೋ. ಒಂದಕ್ಷರದ ಅರಿವು ಇಲ್ಲದಿದ್ದರೂ ಕಟ್ಟಾ ವ್ಯವಹಾರಸ್ಥೆ. ತನ್ನ ಸೀರೆಯ ಒಳಗಿಟ್ಟು ತಂದಿದ್ದ ಸಣ್ಣ ಚೀಲವನ್ನು ಅವಳ ಕೈಗಿತ್ತು ‘ಮನೆ ಬಿಟ್ಟು ದೂರ ಇರ್ತೆ, ಇಕಾ, ನಿನ್ನ ಧೈರ್ಯಕ್ಕೆ ಇರಲಿ.’ ಬಿಡಿಸಿದರೆ ಅದರ ತುಂಬ ಒಂದು ರೂಪಾಯಿಗಳ ಚಿಲ್ಲರೆ ನಾಣ್ಯಗಳು, ಒಂದಷ್ಟು ನೋಟಿನ ಕಟ್ಟುಗಳು. ‘ಇಷ್ಟು ದುಡ್ಡು! ಅಪ್ಪಯ್ಯ ಕೊಟ್ಟಿದ್ದೇ ಹೆಚ್ಚಿದ್ದು’ ಗೌರಿ ಹೇಳಿದರೆ ‘ಸುಮ್ಮನಿರು. ಕೊಟ್ಟದ್ದು ಹೆಚ್ಚಾಗ. ಪರಸ್ಥಳ. ಯಾರ ಹತ್ರಾನೂ ಹಲ್ಲು ಗಿಂಜೂಕಾಗ. ನಮ್ಮ ಸ್ವಾಭಿಮಾನ ಬಿಡೂಕಾಗ.’ ಅಂದಳಲ್ಲದೆ, ‘ನೀ ನಿನ್ನೆ ಕುರುಡನ ಪರ ನಿಂತು ಹಿಂಸೆ ನಿಲ್ಲಿಸಿ ಸತ್ಯದ ನಡೆ, ಸಹೃದಯದ ನಡೆ ತೋರ್ಸಕೊಟ್ಟೆ. ನಿನ್ನ ಅನುಕಂಪದ ಅಂತಃಕರಣ ಆ ಹುಡುಗನಲ್ಲಿ ಏನು ಮೋಡಿ ಮಾಡಿತೋ! ಹೀಂಗೆ ಎಲ್ಲಿರ್ತಿಯೋ ಅಲ್ಲಿ ನಿನ್ನತನ ಬಿಡ್ಬೇಡ ಗೌರಿ.’ ಅಮ್ಮಮ್ಮನ ಕಣ್ಣು ತುಂಬಿತ್ತು.
ನಿನ್ನೆ ಅವಳಿಗೆ ಹೊಡೆದ ಹುಡುಗನ ಜೊತೆ ಇನ್ನೂ ಕೆಲವರು ಹುಡುಗರು ನಿದ್ದೆ ಗಣ್ಣನ್ನು ಉಜ್ಜುತ್ತ ಮಾಳಿಗೆಯಿಂದ ಇಳಿದು ಅವಳನ್ನು ಬೀಳ್ಕೊಡಲು ಬಂದರು. ನಿನ್ನೆ ಪ್ರಸಂಗ ಮರೆತು ತಾವು ತಂದ ಕೆಲವು ವಸ್ತು ಅವಳಿಗೆ ಕೊಟ್ಟು ಸ್ವಲ್ಪ ಹೊತ್ತು ಮಾತನಾಡಿದ್ದು ಹಿರಿಯರಿಗೂ ಸಮಾಧಾನ ತಂದಿತು.
ಮಕ್ಕಳ ಜಗಳ ಕೆಲವೇ ಕ್ಷಣಗಳದ್ದು ಎನ್ನುವುದು ಇದಕ್ಕಾಗಿಯೇ! ಹೊತ್ತು ಯಾರ ಸುಖ ದುಃಖ ವಿಚಾರಿಸದೆ ತನ್ನ ಪಾಡಿಗೆ ಸರಿಯುತ್ತದೆ. ಮೂಡಲ ಮನೆ ಕೆಂಪಾಗುವ ಹೊತ್ತಿಗೆ ಒಬ್ಬೊಬ್ಬರೆ ಹಿರಿಯರ ಕಾಲಿಗೆರಗುತ್ತ, ಕಿರಿಯರಿಗೆ ಆಶೀರ್ವದಿಸುತ್ತ ವಿದಾಯ ಮಾತಿನೊಂದಿಗೆ ಬೇರೆ ಬೇರೆ ಕುದುರೆಗಾಡಿ ಹತ್ತಿದರು. ಬಿಗಿಯಾಗಿ ಅಕ್ಕನ ಕೈಹಿಡಿದಿದ್ದ ನಾಣಿಯನ್ನು ಅಪ್ಪಯ್ಯ ಮೈದಡವಿ ಎಳೆದುಕೊಳ್ಳುತ್ತ ತನ್ನ ಕುದುರೆ ಗಾಡಿಯಲ್ಲಿ ಹತ್ತಿಸಿಕೊಂಡ. ‘ಅಕ್ಕಾ, ಅಕ್ಕಾ’ ನಾಣಿಯ ಬಿಕ್ಕಳಿಕೆ ಗಾಡಿಯ ಚಕ್ರದ ಸದ್ದನ್ನೂ ಮೀರಿಸಿತ್ತು.
ಕಮಾನು ಆಕೃತಿಯ ದೊಡ್ಡ ಗೇಟಿನ ಮೇಲೆ ಬರೆದ ಫಲಕ ‘ಸಹಕಾರಿ ಸೇವಾಶ್ರಮ, ಮಾನಾಪುರ, ಸಿರ್ಸಿ’ ಗೇಟು ದಾಟಿ ಒಳಗೆ ಕಾಲಿಟ್ಟರೆ ಅಗಲದ ಸಿಮೆಂಟ್‌ನ ದಾರಿ. ಇಕ್ಕೆಲಗಳಲ್ಲಿ ಅಶೋಕ ವೃಕ್ಷದ ಸಾಲು ಮರಗಳು. ಚೂಪಾಗಿ ತೇರಿನಂತೆ ಆಗಸದತ್ತ ಮುಖ ಮಾಡಿವೆ. ಮುಂದೆ ಅಗಲದ ಕಿರು ಗೋಡೆಯ ಪಾಗಾರ. ಅಲ್ಲಿಯೂ ಸೇವಾಶ್ರಮದ ಇನ್ನೊಂದು ಫಲಕ. ಇದರ ಬಲಭಾಗದಲ್ಲಿ ಆಳೆತ್ತರದ ಗಣೇಶನ ವಿಗ್ರಹ, ಎಡಭಾಗದಲ್ಲಿ ಮಹಾತ್ಮಾ ಗಾಂಧೀಜಿಯ ಪ್ರತಿಮೆ. ಅಲ್ಲಿಂದ ಮುಂದೆ ವೃತ್ತಾಕಾರದ ಹಸಿರು ಹುಲ್ಲಿನ ಖಾಲಿಜಾಗ. ಅದರ ಮಧ್ಯೆ ಉದ್ದದ ಕಂಭವಿರುವ ಸಿಮೆಂಟಿನ ಒಂದು ಕಟ್ಟೆ.
ಪ್ರತಿದಿನ ಬೆಳಿಗ್ಗೆ, ಸಂಜೆ ಸಾಮೂಹಿಕ ಪ್ರಾರ್ಥನೆ, ಕವಾಯತು ಮಾಡುವುದು ಅಲ್ಲಿಯೇ. ಎದುರು ಕೆಂಪು ಬಣ್ಣ ಹೊದ್ದ ಸೇವಾಶ್ರಮದ ಎರಡು ಮಹಡಿಯ ದೊಡ್ಡಕಟ್ಟಡ. ಹಿಂಭಾಗದಲ್ಲಿ ಮರದ ಸಣ್ಣ ಗೇಟು ದಾಟಿದರೆ ವಸತಿ ಗೃಹಗಳು, ಅಡಿಗೆ ಮನೆ, ಊಟದ ಕೋಣೆ, ಸಾಮಾನು ಶೇಖರಣೆಯ ಕೋಣೆ, ಉರುವಲಿಗೆ ವ್ಯವಸ್ಥೆ ಇತ್ಯಾದಿ. ಇದರಾಚೆ ಕಾಣುತ್ತದೆ ಹಸಿರು ವೃಕ್ಷಗಳು.ಸಾಗುವಾನಿ, ತೇಗ, ಗೇರು, ಮಾವು ಹಲಸಿನ ಮರಗಳ ತೋಪು. ಸವೆದು ಹೋದ ಕಿರುದಾರಿಯಲ್ಲಿ ನಡೆದರೆ ವೃಕ್ಷ ಸಂಪತ್ತಿನ, ಬಳ್ಳಿ ಲತೆಗಳ, ಕಿರು ಹೂವು ಕಾಡು ಪುಷ್ಪಗಳ ಸಮೃದ್ಧ ತಂಪು ನೆರಳಿನ ಹಾಸಿಗೆ.
ಕೇದಗೆ, ಸಂಪಿಗೆ, ಪಾರಿಜಾತಗಳ ಕಮನೀಯ ಸುವಾಸನೆ ಬೆರೆತ ಮಂದಮಾರುತ, ಹಕ್ಕಿಗಳ ಇಂಪಾದ ಗುಂಜಾವರ, ಬಿಸಿಲು ಬೆಳದಿಂಗಳ ನೋಟದಲ್ಲಿ ಪ್ರಕೃತಿಯೇ ಸೌಂದರ್ಯದ ಖನಿ. ನೋಡುತ್ತಿದ್ದರೆ ಇದೇನಿದು ಗಂಗೊಳ್ಳಿಯ ಹೊಳೆಬಾಗಿಲು ಇಲ್ಲೇ ಇದೆ ಎನ್ನುವಂತೆ. ದಿಟ, ಪ್ರಕೃತಿ ತನ್ನ ಸೌಂದರ್ಯವನ್ನು ಬೇಧಭಾವವಿಲ್ಲದೆ ಭುವಿಯಲ್ಲಿ ಎಲ್ಲರಿಗೂ ಉಣಬಡಿಸುತ್ತದೆ. ಗೌರಿ ಸುಶೀಲ ಚಿಕ್ಕಿಯ ಜೊತೆ ಈ ಜಾಗಕ್ಕೆ ಬಂದಿಳಿದಾಗ ಕಣ್ಣಿಗೆ ಕಂಡದ್ದು ಕಲ್ಲು ಸಿಮೆಂಟಿನ ಕಟ್ಟಡವಲ್ಲ, ಅದೋ ಆ ದಟ್ಟ ಕಾಡು! ಅದರ ಅನುಭೂತಿ ಅವಳ ಎದೆಯಾಳದಲ್ಲಿ ಹೊಸ ಭಾವ ಚಿಮ್ಮಿಸಿ ಎಲ್ಲಿ ನೋಡಿದರಲ್ಲಿ ಆನಂದದ ಕೋಲಾಹಲ.
| ಇನ್ನು ನಾಳೆಗೆ |
A P ಮಲತೀಯವರು ಬರೆದ ಕಂತು ಕಂತುವಿನಲ್ಲಿ ಬರೆದ ಲೇಖನ ನಮ್ಮನ್ನು ಮಕ್ಕಳ ಲೋಖಕ್ಕೆ ಕರೆದು ಕೊಂಡು ಹೋಗುತ್ತದೆ ನಾಣಿ ಹಾಗೂ ಗೌರಿ ಹುಬ್ಬಳ್ಳಿ ಪ್ರಯಾಣ ಹೊಳೇ ದಂಡೆಯಿಂದ ಹೊರಗೆ ಬಿದ್ದದ್ದು ಅಲ್ಲಿ ಗೌರಿ ಒಬ್ಬ ಕುರುಡು ಹುಡುಗನಿಗೇ ಕೊಡುವ ಮಕ್ಕಳ ಕುಶೆಷ್ಟೇ ಅದನ್ನು ಕಂಡು ಅವಳು ಆ ಮಕ್ಕಳಿಗೆ ಜೋರು ಮಾಡುವದು ಹಾಗೂ ಅವರು ಅವಳನ್ನು ತಳಿಸುವದು ಕಡೆಗೆ ಹಿರಿಯರ ಪ್ರವೇಶ ಮಕ್ಕಳು ಕಡೆಗೆ ಪ್ರೀತಿಸುವದು ಮುಂದುವರೆಯಲಿ ತಮ್ಮ ಪ್ರಿಯ ಕೃಷ್ಣ ವಸಂತಿ