ಅಮೃತಾ ಹೆಗಡೆ ಅಂಕಣ- ಮನೆಗಾಗಿ ಹುಡುಕಾಟ

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

12

ಈಗ ಮೈಸೂರಿನಲ್ಲಿ ಮನೆ ಹುಡುಕುವ ಪರ್ವ. ಮೈಸೂರಿನಲ್ಲಿದ್ದ, ಮೈಸೂರು ಗೊತ್ತಿದ್ದ ಸ್ನೇಹಿತರಿಗೆಲ್ಲ ಹೇಳಿಯೂ ಆಗಿತ್ತು. ಇರುವುದು ಒಂದೇ ವಾರದ ಕಾಲಾವಕಾಶ ನಮಗೆ. ಭೋಗಾದಿಯಲ್ಲಿ ನಾವು ಮನೆ ಹುಡುಕಲೇಬೇಕಿತ್ತು. ‘ಹಾ.. ಪರಿಚಯದವರೊಬ್ಬರು ಭೋಗಾದಿಯಲ್ಲೇ ಇದ್ದಾರೆ ಕಣೇ.., ನಾನು ಅವರಿಗೆ ಹೇಳಿರ್ತೀನಿ. ನೀವು ವೀಕೆಂಡ್ ​ಬನ್ನಿ. ಮನೆ ಹುಡುಕೋಣ’ ಎಂದು ಮೈಸೂರಿನ ಚಾಮುಂಡೇಶ್ವರಿ ನಗರದ ನಿವಾಸಿಯಾಗಿರುವ ನನ್ನ ಮಂಗಲಾಚಿಕ್ಕಮ್ಮ ಹೇಳಿದ್ದರು. ‘ಮನೆ ಹುಡುಕುವುದಕ್ಕಾಗಿ ಹೋಗುತ್ತಿರುವುದಲ್ಲವೇ, ಎಷ್ಟು ಓಡಾಟ ವಿರುತ್ತದೆಯೋ ಗೊತ್ತಿಲ್ಲ. ಅಥರ್ವ ಮನೆಯಲ್ಲಿಯೇ ಇರಲಿ’ ಎಂದು ಮಾತಾಡಿಕೊಂಡೆವು, ಊರಿಗೆ ಹೊರಟು ನಿಂತಿದ್ದ ಅತ್ತೆ ಇನ್ನಷ್ಟು ದಿನ ಉಳಿಯಲು ಒಪ್ಪಿದರು.  ವಿನಯ್​ಗೆ ವಾರದಂತ್ಯದ ರಜೆ ಬಂದೇ ಬಿಟ್ಟಿತ್ತು. ಮಗನನ್ನ ಅತ್ತೆಯವರ ಬಳಿ ಬಿಟ್ಟು ನಾವಿಬ್ಬರೇ ಹೊರಟೆವು.  

ಶನಿವಾರ ಬೆಳ್ಳಂಬೆಳಗ್ಗೆ ಸೂರ್ಯ ಹುಟ್ಟುವುದಕ್ಕೂ ಮುಂಚೆಯೇ ಮೈಸೂರು ಬಸ್ಸು ಹತ್ತಿದೆವು. ನಮ್ಮಿಬ್ಬರಿಗೂ ಮೈಸೂರು ಹೊಸತು.  ಹಿಂದಿನವಾರ ನಾನೊಬ್ಬಳೇ ದೀಪಾ ಅಕ್ಕಾ ಜತೆಗೆ ಭೋಗಾದಿ ಎರಡನೇ ಹಂತದ ಜನತಾನಗರದಲ್ಲಿರುವ ಪಿ.ಎ.ಡಿ.ಸಿ ಶಾಲೆಗೆ ಹೋಗಿ ಬಂದಿದ್ದೆ. ಭೋಗಾದಿ ಎಂಬ ಹೆಸರು ಮಾತ್ರ ನೆನಪಿತ್ತು ನನಗೆ, ಈ ಬಗ್ಗೆ ನಾನು ಹೇಳಿದಷ್ಟು ಕೇಳಿಸಿಕೊಂಡಿದ್ದ ವಿನಯ್​ ತಲೆಯಲ್ಲಿದ್ದಿದ್ದು ನಾನು ಕೊಟ್ಟಷ್ಟೇ ಮಾಹಿತಿ. ಬಸ್ಸು ಇಳಿದಿದ್ದೇ ಚಾಮುಂಡಿಪುರಮ್​ನ ಚಿಕ್ಕಮ್ಮನ ಮನೆಗೆ ಹೋಗಿ ತಿಂಡಿ ತಿಂದು, ಚಿಕ್ಕಯ್ಯನ ಕಾರ್​ನಲ್ಲಿ ಭೋಗಾದಿಗೆ ಹೋದೆವು. ಚಿಕ್ಕಯ್ಯನೇ ನಮ್ಮನ್ನು ತಮ್ಮ ಕಾರ್​ನಲ್ಲಿ ಭೋಗಾದಿಯಲ್ಲಿರುವ ತಮ್ಮ ಪರಿಚಯಸ್ತರ ಮನೆಗೆ ಕರೆದೊಯ್ದರು. 

ಅದೊಂದು, ಬಿಡಿಬಿಡಿಯಾಗಿ ಮನೆಗಳಿರುವ, ಹೊಸ ನಿವೇಶನಗಳು ನಿರ್ಮಾಣದ ಹಂತದಲ್ಲಿರುವ ಎಕ್ಸಟೆನ್ಶನ್​ ಏರಿಯಾ. ಅಲ್ಲಿಯೇ ಚಂದದ ಮನೆಕಟ್ಟಿಕೊಂಡಿರುವ ಮೂಲತಃ ನಮ್ಮ ಜಿಲ್ಲೆಯವರೇ ಆದ ಭಟ್ಟರ ಮನೆ ಅದು. ತುಂಬಾ ಚೆನ್ನಾಗಿ ಮಾತನಾಡಿಸಿ, ಉಪಚಾರ ಮಾಡಿದರು.  ಭಟ್ಟರ ಹೆಂಡತಿ ಭಾರತಕ್ಕನಂತೂ ಮನೆ ಹುಡುಕಲು ಟೊಂಕ ಕಟ್ಟಿ ನಿಂತುಬಿಟ್ಟಿದ್ದರು.

‘ಭೋಗಾದಿಯಲ್ಲೊಂದು ಮನೆ ಬೇಕು, ಅಮ್ಮ ಮಗು ಮಾತ್ರ ಇರುತ್ತಾರೆ, ಕಿವುಡು ಮಕ್ಕಳ ಶಾಲೆಗೆ ಸೇರಲು ಅವರು ಬರುತ್ತಿದ್ದಾರೆ, ಒಂದು ಸುರಕ್ಷಿತವಾದ ಚಿಕ್ಕ ಬಾಡಿಗೆ ಮನೆ ಬೇಕು. ನಿಮ್ಮ ಮನೆ ಕಡೆ ಇದ್ದರೆ ಹುಡುಕಿಕೊಡಿ’ ಎಂದು ಚಿಕ್ಕಮ್ಮ ಭಾರತಕ್ಕಂಗೆ ಹೇಳಿದ್ದೇ, ಅವರೇ ಸುತ್ತಮುತ್ತ ವಿಚಾರಿಸಿ ಮನೆ ಹುಡುಕಿದ್ದರು ಪಾಪ. ಆದರೆ, ಅವರು ತಮ್ಮ ಮನೆ ಹತ್ತಿರದ ವಿಷೇಶ ಮಕ್ಕಳ ಶಾಲೆಗೆ ಸೇರುವುದಕ್ಕೇ ನಾವು ಬರುತ್ತಿರುವುದು ಎಂದು ಭಾವಿಸಿದ್ದರು ಎಂಬುದು ನಂತರವೇ ನಮಗೆ ಗೊತ್ತಾಗಿದ್ದು. 

ಒಂದು ಸುತ್ತು ಟೀ, ಕಾಫಿ ತಿಂಡಿಯೆಲ್ಲ ಆದ ನಂತರ, ಅವರು ಹುಡುಕಿಟ್ಟಿರುವ ಮನೆ ನೋಡಲು ಹೊರಟದ್ದಾಯಿತು. ಭಟ್ಟರ ಮನೆಯ ಪಕ್ಕದ ರಸ್ತೆಯಲ್ಲಿಯೇ ಮನೆ ಇದ್ದುದರಿಂದ ನಡೆದುಕೊಂಡೇ ಹೋಗಿ, ನೋಡಿದೆವು. ಒಂದೇ ಬೆಡ್​ರೂಮ್​ನ ಪುಟ್ಟ ಮನೆ. ನಾನು ಮತ್ತು ಅಥರ್ವ ಇಬ್ಬರೇ ಇರುವುದಕ್ಕೆ ಬೇಕಾದಹಾಗೆ ಸಾಕು. ಮನೆಯ ಮುಂದೆಲ್ಲ ಆರಾಮಾಗಿ ಅಥರ್ವ ಆಟ ಆಡುವಷ್ಟು ಜಾಗ. ಒಳ್ಳೆಯವರಂತೆ ಕಾಣುವ ಮಾಲಿಕರು. ಇದೆಲ್ಲ ಇದ್ದುದಕ್ಕೆ ನನಗೇನೋ ಆ ಮನೆ ಇಷ್ಟವಾಯ್ತು.  

ಆಶ್ಚರ್ಯವೇನೆಂದರೆ, ವಿನಯ್​ ಕಡೆಯ ದೂರದ ಸಂಬಂಧಿ ಗಂಗಕ್ಕನ ಮನೆ ಕೂಡ ಪಕ್ಕದಲ್ಲಿಯೇ ಇತ್ತು. ಸಂಬಂಧ ದೂರದ್ದೇ ಆದರೂ, ಅವರು ಮುಂದೆ ನಮಗೆ ಮಾಡಿದ ಸಹಾಯ ಮಾತ್ರ ತಂಪುಹೊತ್ತಲ್ಲಿ ನಾವು ನೆನೆಯುವಂಥದ್ದು. ಆದರೆ ತುಂಬಾ ಇಂಟೀರಿಯರ್​ ಏರಿಯಾ, ಇಲ್ಲಿನ್ನೂ ರಸ್ತೆಯೂ ಸರಿ ಇಲ್ಲ. ಮುಖ್ಯರಸ್ತೆಯ ಹತ್ತಿರವೇ ಎಲ್ಲಿಯಾದರೂ ಹುಡುಕೋಣ ಎಂಬ ಚಿಕ್ಕಯ್ಯನ ಮಾತಿಗೆ ತಲೆಯಾಡಿಸಿ ಕಾರು ಹತ್ತಿದೆವು.   

ಭೋಗಾದಿ ಮುಖ್ಯರಸ್ತೆಯಲ್ಲಿ ಭಟ್ಟರು ತಮಗೆ ಗೊತ್ತಿದ್ದ ಅಂಗಡಿಯವರನ್ನೆಲ್ಲ ಕೇಳುತ್ತಿದ್ದರು. ಬಹಳಷ್ಟು ಜನ ತಮಗೆ ಗೊತ್ತಿಲ್ಲವೆಂದರೆ, ಕೆಲವು ಜನ ದೊಡ್ಡ ದೊಡ್ಡ ಡಬಲ್​, ತ್ರಿಬ್ಬಲ್​ ಬೆಡ್​ ರೂಮ್​ಗಳ ಮನೆಗಳಿವೆ ಎಂದರು. ಅದ್ಯಾವುದೂ ಬೇಡ ಅನ್ನುತ್ತಾ ಗೋಣು ಬಗ್ಗಿಸಿ ಕಾರು ಏರಿದೆವು.  ಯಾಕೋ.. ಆ ಪ್ರದೇಶ ನನಗೆ ಅಪರಿಚಿತವಾಗಿಯೇ ಕಾಣಿಸುತ್ತಿತ್ತು. ಅಲ್ಲೆಲ್ಲ ಸುತ್ತಮುತ್ತ ಕಾರ್​ನಲ್ಲಿ ಸುತ್ತಿದರೂ ಹಿಂದಿನ ವಾರವಷ್ಟೇ ನಾನು ನೋಡಿದ ಯಾವ ರಸ್ತೆಯೂ ಅದಲ್ಲ ಎಂಬ ಭಾವ ಕಾಡುತ್ತಿತ್ತು.

ನಾನು ಚಿಕ್ಕಯ್ಯನನ್ನು ಕೇಳಿದೆ. ‘ಭೋಗಾದಿ ಎಂಬ ಹೆಸರಿನ ಎರಡು ಏರಿಯಾ ಏನಾದ್ರೂ ಮೈಸೂರಿನಲ್ಲಿ ಇದ್ಯಾ..? ಹೋದವಾರ ನೋಡಿದ ಏರಿಯಾ ಅಲ್ಲ ಇದು ಅಂತ ಅನ್ನಿಸ್ತಿದೆ ನಂಗೆ’ ಆಗ ಭಟ್ಟರು ನಿಧಾನವಾಗಿ ಕಾರ್​ ವಿಂಡೋದ ಗಾಜು ಇಳಿಸಿ, ಬಾಯಲ್ಲಿದ್ದ ಕವಳದ ರಸವನ್ನು ಉಗುಳಿ ನನ್ನೆಡೆ ತಿರುಗಿ ‘ತಂಗೀ.. ಭೋಗಾದಿ ಬಹಳ ದೊಡ್ಡ ಏರಿಯಾ. ಈಗ ನಾವು ಸುತ್ತುತ್ತಾ ಇರೋದು ಹಳ್ಳಿ ಭೋಗಾದಿಯಲ್ಲಿ. ನಿನ್ನ ಸ್ಕೂಲ್​ ಇರೋದೆಲ್ಲಿ..?’ ಎಂದರು.

ನಾನು ಯೋಚಿಸುತ್ತಾ ‘ಈ ಏರಿಯಾ ನೋಡುತ್ತಿದ್ದರೆ ಆ ಸ್ಕೂಲ್​ ಇಲ್ಲಿ ಇಲ್ಲ ಅನ್ನಿಸುತ್ತೆ ನನಗೆ. ಆ ಶಾಲೆ ಇರುವ ರಸ್ತೆಯಲ್ಲಿಯೇ ವಿಜಯ ಬ್ಯಾಂಕ್​ ಕೂಡ ಇದೆ ನೋಡಿ. ಜನತಾ ನಗರ ಅಂದ ನೆನಪು’ ಎಂದೆ. ‘ಅಯ್ಯೋ.. ಕೂಸೆ.. ಮೊದಲೇ ಹೇಳಬೇಕಿತ್ತಲ್ವೇನೇ..? ಥೋ.. ನಿನ್ನ. ನಿನ್ನ ಸ್ಕೂಲ್​ ಇರೋದೆಲ್ಲೋ.. ನಾವು ಮನೆ ಹುಡುಕ್ತಿರೋದೆಲ್ಲೋ’ ಅಂತ ನಕ್ಕುಬಿಟ್ಟರು ಅವರು. ಅವರ ಮತು ಕೇಳಿದ ಎಲ್ಲರೂ ನಕ್ಕರು. ಕಾರು ನಡೆಸುತ್ತಿದ್ದ ಚಿಕ್ಕಯ್ಯ ‘ನಡಿ ನಡಿ ಆ ಕಡೆಗೇ ಹೋಗೋಣ, ರೂಟ್ ನೀವೇ ಹೇಳಬೇಕು ಭಟ್ರೇ..’ ಅಂದರು. ಹತ್ತೇ ಹತ್ತು ನಿಮಿಷಯದಲ್ಲಿ ಅಲ್ಲಿಂದ ಪಿ.ಎ.ಡಿ.ಸಿ ಸ್ಕೂಲ್​ಹತ್ತಿರ ಕಾರು ಬಂದು ನಿಂತಿತ್ತು.  

ಸ್ಕೂಲ್​ ಅಂತೂ ಕಂಡಾಯ್ತಲ್ಲ. ಸ್ಕೂಲ್ ​ಸುತ್ತ ಮುತ್ತವೇ ಎಲ್ಲಾದರೂ ಮನೆ ಹುಡುಕಬೇಕು. ಸ್ಕೂಲ್​ನ ಸುತ್ತಮುತ್ತ, ಭೋಗಾದಿ ಎರಡನೇ ಹಂತ, ಪ್ರಶಾಂತಿ ನಗರ, ಸಾಹುಕಾರ್​ ಚೆನ್ನಯ್ಯ ರಸ್ತೆಯ ಅಕ್ಕಪಕ್ಕ, ಜನತಾ ನಗರದ ಇಕ್ಕಟ್ಟು ರಸ್ತೆಗಳನ್ನೂ ಬಿಡದೇ ಸುತ್ತಿದೆವು. ‘ಟು ಲೆಟ್​’ ಬೋರ್ಡ್​ಹಾಕಿದ್ದ ಎರಡು ಮನೆಗಳನ್ನ ನೋಡಿದೆವು. ಎರಡೂ ಮನೆಗಳೂ ಎರಡು ಬೆಡ್​ ರೂಮ್​ನ ದೊಡ್ಡ ಮನೆಗಳೇ. ಬಾಡಿಗೆಯೂ ಜಾಸ್ತಿ. ಬೇಡ ಎಂದುಬಿಟ್ಟೆವು.

ಇನ್ನೊಂದು ಕಡೆ ‘ಮನೆ ಬಾಡಿಗೆಗಿದೆ’ ಬೋರ್ಡ್​ ನೋಡಿದ್ದೇ, ವಿನಯ್​ ಗೇಟ್​ ಒಳಹೋಗಿ ಕೇಳುತ್ತಿದ್ದಂತೆ, ಮನೆಯ ಮಾಲಿಕರು ಪಾಪ ಮಧ್ಯಾಹ್ನ ಊಟ ಮಾಡುತ್ತಿದ್ದವರು, ಎದ್ದು ಬಂದು ಮನೆಯ ಕೀ ಕೊಟ್ಟು, ಖಾಲಿ ಇದೆ ನೋಡಿಕೊಂಡು ಬನ್ನಿ ಎಂದರು. ನಾವು ಹತ್ತಿರ ಹೋಗಿ ಹೊರಗಿನಿಂದಲೇ ನೋಡಿ, ಈ ಮನೆ ಬೇಡವೇ ಬೇಡ ಅಂದುಕೊಂಡುಬಿಟ್ಟೆವು. ಅಷ್ಟು ಸುಸಜ್ಜಿತ ಮನೆಯಲ್ಲಿದ್ದ ಮಾಲಿಕರು ಕಟ್ಟಿಸಿದ ಈ ಬಾಡಿಗೆ ಮನೆ ಮಾತ್ರ, ಕಾರ್​ ಶೆಡ್​ಗಿಂತ ಕಡೆಯಾಗಿತ್ತು. ಶೀಟ್​ ಮನೆ ಬೇಡ ಸರ್​ಎಂದು ಕೈ ಮುಗಿದು ಕೀ ವಾಪಾಸ್ ಕೊಟ್ಟು ಹೊರಟೆವು. 

ಅಲ್ಲೆಲ್ಲ ಇದ್ದ ಅಂಗಡಿಯವರೆಲ್ಲ ಬ್ರೋಕರ್​ಗಳೇ. ನಾವು ಮನೆ ಬಗ್ಗೆ ಕೇಳಿದ ಅಂಗಡಿಯವರೆಲ್ಲ ‘ಮನೆ ಇದೆ ತೋರಿಸ್ತೀನಿ. ಒಂದು ತಿಂಗಳ ಬಾಡಿಗೆ ಕೊಡಿ ಸಾಕು’ ಎಂದವರೇ. ಹಾಗೆಯೇ ಕಿರಾಣಿ ಅಂಗಡಿಯವನೊಬ್ಬ ತೋರಿಸಿದ ಮನೆ ಚೆನ್ನಾಗಿಯೇ ಇತ್ತು. ಬಾಡಿಗೆ ನಮ್ಮ ಬಜೆಟ್​ಗಿಂತ ಸಾವಿರ ಜಾಸ್ತಿ ಎನಿಸಿದರೂ, ಸ್ಕೂಲ್​ಗೆ ಹತ್ತಿರವೂ ಇತ್ತು, ಮನೆ ತಕ್ಕಮಟ್ಟಿಗೆ ಅನುಕೂಲಕರವಾಗಿಯೂ ಇತ್ತು. ನಾನು ಖುಷಿಯಿಂದ  ಒಪ್ಪಿಕೊಂಡು, ಅಂತೂ ಮನೆ ಸಿಕ್ಕಿತಲ್ಲ ಅಂತ ನಿಟ್ಟುಸಿರಿಟ್ಟೆ. ಮಾಲಿಕರಂತೆ ಕಾಣುವ ಮಹಿಳೆಯೊಬ್ಬರು ನಮ್ಮನ್ನು ಮಾತನಾಡಿಸಿದರು. ಪಿ.ಎ.ಡಿ.ಸಿ ಸ್ಕೂಲ್​ಗೆ ಸೇರಿಕೊಂಡಿದ್ದೇನೆ.

ನಾನು ಮತ್ತು ಮಗು ಇಬ್ಬರೇ ಮನೆಯಲ್ಲಿರುತ್ತೇವೆ ಅನ್ನುತ್ತಿದ್ದಂತೆ, ‘ಓ.. ಆ.. ಸ್ಕೂಲ್​ನವರಾ.. ಹಾಗಾದರೆ ಬೇಡ’ ಅಂದರು. ಆಶ್ಚರ್ಯವಾಯಿತು ನನಗೆ. ‘ಯಾಕೆ..? ಸ್ಕೂಲ್​ನವರಾದರೆ ಮನೆ ಕೊಡಲ್ವಾ..?’ ಅಂತ ಮರು ಪ್ರಶ್ನೆ ಇಟ್ಟೆ. ‘ಹಾಂ. ನೀವು ಇಡೀದಿನ ಪಾಠ ಮಾಡ್ತೀರಲ್ಲಾ… ನಮ್ಮನೆಯಲ್ಲಿ ವಯಸ್ಸಾದವರೆಲ್ಲ ಇದ್ದಾರೆ. ಗಲಾಟೆಯಾಗುತ್ತೆ. ಚಿಕ್ಕ ಮಗು ಅಲ್ವಾ.. ಮನೆನೂ ಗಲೀಜಾಗುತ್ತೆ. ಹೀಗಾಗಿ ಮನೆ ಕೊಡೋದಿಲ್ಲ’ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಟ್ಟರು. ‘ಆಯ್ತು ಮೇಡಮ್​, ನಿಮ್​ ಮನೆ ನಿಮ್​ ಇಷ್ಟ’ ಎನ್ನುತ್ತಾ ಗೇಟ್​ನಿಂದ ಹೊರಬಂದೆವು. ‘ಅಯ್ಯೋ ದೇವರೆ..! ಇಂಥ ಜನಗಳೂ ಇರ್ತಾರಾ..? ಏನು ದ್ವೇಷವಪ್ಪ ಈಕೆಗೆ.. ನಮ್ಮ ಮಕ್ಕಳ ಮೇಲೆ…?’ ನಮ್ಮ ನಮ್ಮಲ್ಲೇ ಮಾತನಾಡಿಕೊಂಡೆವು.  

‘ಒಂದು ನಿಮಿಷ ಕೂಡ ಸಮಯ ಹಾಳು ಮಾಡದೇ, ಮಗುವಿನ ಬಳಿ ನಾವು ಮಾತನಾಡಬೇಕು. ಮಗು ನಮ್ಮೊಂದಿಗಿದ್ದಷ್ಟೂ ಹೊತ್ತೂ ಅದಕ್ಕೆ ಪಾಠ ನಡೆಯುತ್ತಲೇ ಇರಬೇಕು’ ಎಂಬ ದೀಪಕ್ಕಾ ಅವರ ಮಾತು ನನಗಾಗ ನೆನಪಾಯ್ತು. ಪಿ.ಎ.ಡಿ.ಸಿಯ ಯಾವುದೋ ತಾಯಿ ಇಲ್ಲಿ ತನ್ನ ಮಗುವಿಗೆ ಪಾಠ ಮಾಡಿರಬಹುದು. ಈಕೆಗೆ ಅದೇ ಕಿರಿಕಿರಿಯಾಗಿರಬಹುದು.  ಇಂಥ ಮಾಲಿಕರಿರುವ ಮನೆ ನನಗೂ ಬೇಡ. ಈಗಲೇ ಇವಳ  ಸ್ವಭಾವ ಗೊತ್ತಾಗಿದ್ದು ಒಳ್ಳೇದೇ ಆಯ್ತು. ಅಂದುಕೊಂಡೆ ಮನಸ್ಸಿನಲ್ಲಿಯೇ. 

ಆನಂತರ, ಒಂದೆರಡು ಮನೆಗಳು ಕಂಡವಾದರೂ, ಅವು  ಇರುವ ಏರಿಯಾ, ಸುತ್ತಮುತ್ತಲಿನ ಪರಿಸರ ಚೆನ್ನಾಗಿಲ್ಲ, ತಾಯಿ ಮಗು ಇಬ್ಬರೇ ಇರುವುದಕ್ಕೆ ಸೂಕ್ತವಿಲ್ಲ ಅನ್ನೋ ಕಾರಣಕ್ಕೆ ವಿನಯ್​ ಮನಸ್ಸು ಮಾಡಲೇ ಇಲ್ಲ. ಮಗುವನ್ನು ಎತ್ತಿಕೊಂಡು ಅತೀ ಕಿರಿದಾದ ಮೆಟ್ಟಿಲುಗಳನ್ನು ಹತ್ತಿ ಇಳಿಯೋದು ಕಷ್ಟ ಎಂಬ ಕಾರಣಕ್ಕೆ ಮೂರು, ನಾಲ್ಕನೇ ಮಹಡಿಯ ಮೇಲಿದ್ದ ಪುಟಾಣಿ ಮನೆಗಳನ್ನ ನಾನೇ ನಿರಾಕರಿಸಿದೆ. ಮಧ್ಯಾಹ್ನ 2.30ರ ತನಕವೂ ಸುತ್ತಿದರೂ ಎಲ್ಲೆಲ್ಲೂ ನಮಗೆ ಬೇಕಾದಂಥ ಮನೆ ಸಿಕ್ಕಲೇ ಇಲ್ಲ. ಹೊತ್ತಾಯಿತು ಊಟಕ್ಕೆ ಬನ್ನಿ ಅಂತ ಕರೆಯಲು, ಚಿಕ್ಕಮ್ಮನ ಫೋನ್​ ಕರೆ ಐದನೇ ಬಾರಿ ಬಂದಿತ್ತು. ಭಟ್ಟರನ್ನು ಅವರ ಮನೆಗೆ ಬಿಟ್ಟು, ನಾವು ಹಳ್ಳಿ ಭೋಗಾದಿಯಿಂದ ಚಾಮುಂಡಿಪುರಂ​ಗೆ ಹೊರಟೆವು. ಮನೆ ಸಿಗದೇ ಇದ್ದುದರಿಂದ ತಲೆ ಗೊಂದಲದ ಗೂಡಾಗಿತ್ತು.  

ಚಿಕ್ಕಮ್ಮನ ಮನೆಯಲ್ಲಿ ನಮ್ಮ ಊಟದ ಸಮಯವದು. ಎಲ್ಲರೂ ತಮ್ಮ ತಮ್ಮ ತಾಟನ್ನೇ ನೋಡುತ್ತಾ ಅನ್ನ, ಸಾಂಬಾರು ಕಲಸುತ್ತಾ ತಲ್ಲೀನರಾಗಿದ್ದರು. ‘ನವೆಂಬರ್​ತಿಂಗಳಿಗೆ ಇನ್ನೊಂದೇ ವಾರವಿದೆ’ ಎಂದೆ ಮೆಲ್ಲಗೆ.  ‘——–‘ ವಿನಯ್ ​ಮಾತನಾಡಲಿಲ್ಲ. ‘ಈಗಾಗಲೇ ಸಾಕಷ್ಟು ತಡವಾಗಿದೆ. ಇನ್ನೂ ತಡಮಾಡದೇ, ಅಥರ್ವನಿಗೆ ಥೆರಪಿ ಕೊಡಿಸಬೇಕು.’ ಎಂದೆ ಸ್ವಲ್ಪ ಜೋರಾಗಿ. ‘ಆಗಲಿ ಅಮೃತಾ. ನಿಮಗೆ ಉಳಿಯೋಕೆ ಒಂದೊಳ್ಳೆ ಮನೆ ಸಿಗುವತನಕ ಸ್ವಲ್ಪ ಕಾಯೋಣ ಇರು ಮಗಾ’ ಚಿಕ್ಕಮ್ಮನ ಸಮಾಧಾನದ ನುಡಿ ಅಡುಗೆ ಮನೆಯಿಂದ ಕೇಳಿಸಿತು. ‘ದೀಪಕ್ಕಾ ಹೇಳಿದ್ದಾರೆ, ಕಿವುಡು ಮಕ್ಕಳ ಪಾಲಿಗೆ ಒಂದೊಂದು ದಿನವೂ ಮುಖ್ಯ ಅಂತ. ನವೆಂಬರ್​ ಮೊದಲ ವಾರದಲ್ಲಿಯೇ ನಾನು ಪಿ.ಎ.ಡಿ.ಸಿ ಶಾಲೆಗೆ ಹೋಗಲು ಶುರು ಮಾಡ್ತೀನಿ. ದಯವಿಟ್ಟು ಬೇಡ ಅನ್ನಬೇಡ’ ವಿನಯ್​ಮುಖವನ್ನೇ ನೋಡುತ್ತಾ ಹೇಳಿದೆ.

ನನ್ನ ಕಣ್ಣಲ್ಲಿ ನೀರು ಮಡುಗಟ್ಟಿತ್ತು. ‘ಅಲ್ಲ.. ಕಣೇ.. ಮನೆಯೇ ಸಿಗದೇ ಹೇಗೆ ಇಲ್ಲಿಗೆ ಶಿಫ್ಟ್​ ಆಗೋದು ಹೇಳು..? ಚಿಕ್ಕಮ್ಮನ ಮನೆಗೂ ಭೋಗಾದಿಗೂ ತುಂಬಾ ದೂರ’ ವಿನಯವಾಗಿಯೇ ಹೇಳಿದ ವಿನಯ್​ ‘ಈಗ ಸಿಕ್ಕಿದೆಯಲ್ಲ ಮನೆ. ಹಳ್ಳಿ ಭೋಗಾದಿಯಲ್ಲಿ..? ಅದನ್ನೇ ಫೈನಲ್​ ಮಾಡೋಣ.’ ನೇರವಾಗಿತ್ತು ನನ್ನ ಮಾತು. ‘ಬೇಡ ಇನ್ನೂ ಒಂದೆರಡು ವಾರ ಹುಡುಕೋಣ. ಯಾವುದಾದರೂ ಒಳ್ಳೆಯ ಬ್ರೋಕರ್​ ಮೂಲಕ ಹೋದರೆ ಸ್ಕೂಲ್​ ಹತ್ತಿರದಲ್ಲಿಯೇ ಖಂಡಿತ ಮನೆ ಸಿಗುತ್ತೆ’ ವಿನಯ್​, ಚಿಕ್ಕಯ್ಯ ಇಬ್ಬರೂ ಒಟ್ಟಿಗೇ ಹೇಳಿದರು.

‘ಇನ್ನೂ ಎರಡು ವಾರವೇ..? ಸಾಧ್ಯವೇ ಇಲ್ಲ. ಹತ್ತಿರದಲ್ಲಿ ಮನೆ ಸಿಗುವ ತನಕ ನಾನು ಆ ಮನೆಯಿಂದಲೇ ಸ್ಕೂಲ್​ಗೆ ಆಟೋದಲ್ಲಿ ಓಡಾಡ್ತೀನಿ’ ಹಟ ಮಾಡಿದೆ. ನನ್ನ ಮೊಂಡು ಹಟಕ್ಕೆ ಎಲ್ಲರೂ ಒಪ್ಪಲೇ ಬೇಕಾಯ್ತು. ಊಟವಾದ ಮೇಲೆ ಹಳ್ಳಿ ಭೋಗಾದಿಯಲ್ಲಿ ಸಿಕ್ಕ ಮನೆಯನ್ನೇ ಫೈನಲ್​ಮಾಡಿ, ಓನರ್​ಗೆ ತಿಳಿಸಲು ಭಟ್ಟರಿಗೆ ಫೋನ್​ ಮಾಡಿದರು ಚಿಕ್ಕಯ್ಯ. 

ಚಿಕ್ಕಮ್ಮನ ಮನೆಯಿಂದ ಹೊರಟ ತಕ್ಷಣ ಮತ್ತೆ ಅದೇ ವಿಷಯದ ಮೇಲೆ ನಮ್ಮಿಬ್ಬರ ನಡುವೆ ಮಾತು ಶುರುವಾಯಿತು. ‘ಆಯಿಶ್​’ನಲ್ಲಿ ಬುಕ್​ಮಾಡಿರೋ ಹಿಯರಿಂಗ್​ ಏಡ್​ ಕೂಡ ಇನ್ನೂ ಬಂದಿಲ್ವಲ್ಲ ಅಮೃತಾ, ಹಿಯರಿಂಗ್​ ಏಡ್ಸ್​ ಇಲ್ದೇನೆ.. ನೀನು ಸ್ಕೂಲ್​ಗೆ ಹೋಗಿ ಏನು ಪಾಠ ಮಾಡ್ತೀಯಾ..? ಕೇಳಿದ್ದ ವಿನಯ್​ ‘ಪರವಾಗಿಲ್ಲ. ಸ್ಕೂಲ್​ಗೆ ಹೋಗಿ ಮಗುವಿಗೆ ಪಾಠ ಮಾಡೋದ್​ ಹೇಗೆ ಅಂತ ನಾನು ಕಲಿತ್ಕೋತೀನಿ. ಇಲ್ಲಿಗೆ ಶಿಫ್ಟ್​ ಆದಮೇಲೆ, ‘ಆಯಿಶ್​’ ಕೂಡ ಹತ್ತಿರವೇ ಇರುತ್ತದಲ್ಲ. ಆಗಾಗ ಹೋಗಿ ವಿಚಾರಿಸಬಹುದು. ಹಿಯರಿಂಗ್​ ಏಡ್​ ಬಂದ ತಕ್ಷಣ ತಂದು ಮಗುವಿಗೆ ಹಾಕಬಹುದು ಅಲ್ವಾ..?’ ‘——‘ ಆ ಕಡೆಯಿಂದ ಉತ್ತರವಿಲ್ಲ.

‘ಯಾಕೋ… ನಂಗೆ ಆ ಸ್ಕೂಲ್​ಗೆ ಹೋದರೇನೇ ಮನಸ್ಸಿಗೆ ಸಮಾಧಾನವಾಗೋದು ಅನ್ಸುತ್ತೆ ಕಣೋ’ ಧ್ವನಿ ಹಿಗ್ಗಿಸಿ ಹೇಳಿದೆ. ‘ಸ್ಕೂಲ್​ ಹತ್ತಿರ ಚೆನ್ನಾಗಿರೋ ಮನೆ ಸಿಗುತ್ತೆ, ಇನ್ನೊಂದು ವಾರ ಟೈಮ್​ ಕೊಡು ಪ್ಲೀಸ್​ಟ್ರೈ ಟು ಅಂಡರ್​ಸ್ಟ್ಯಾಂಡ್​’ ಎಂಬ ಅವನ ಮೆಲು ದನಿ ನನ್ನ ಇರಿದಂತಾಗಿ ‘ವೈ ಡೋನ್ಟ್​ ಯು ಅಂಡರ್​ ಸ್ಟ್ಯಾಂಡ್​ ಮಿ’ ಅಂತ ಗಟ್ಟಿಯಾಗಿ ಕೇಳಿದ್ದೆ. ಅಲ್ಲಿಗೆ ನಾವು ಮುಂದಿನ ವಾರವೇ ಮೈಸೂರಿಗೆ ಶಿಫ್ಟ್​ ಆಗೋದು ಖಚಿತವಾಗಿತ್ತು. 

ಸ್ವಲ್ಪ ದೂರವಾದರೂ, ಅಂತೂ ಮನೆ ಸಿಕ್ಕಿತಲ್ಲ ಎಂಬ ಸಮಾಧಾನ ನನಗಾದರೆ, ರಸ್ತೆಯೂ ಸರಿಯಾಗಿರದ ಇಂಟೀರಿಯರ್​ ಏರಿಯಾ ಎಂಬ ಕಾರಣಕ್ಕೆ ವಿನಯ್​ ಅಸಮಾಧಾನದಲ್ಲಿದ್ದ. ಆದರೂ, ನಾನು ಬೆಂಗಳೂರಿಗೆ ಬಂದಿದ್ದೇ, ತಯಾರಿ ಶುರು ಮಾಡಿದ್ದೆ. ಮೈಸೂರಿನ ವಾಸಕ್ಕೆ ಬೇಕಾಗಿದ್ದ ಪಾತ್ರೆ -ಪಗಡೆ, ಹಾಸಿಗೆ ಬಟ್ಟೆ ಎಲ್ಲವನ್ನೂ ಜೋಡಿಸಿಡುವ ಕೆಲಸ ಶುರುವಿಟ್ಟುಕೊಂಡೆ. ‘ನವೆಂಬರ್​1 ನೇ ತಾರೀಖು, ಕನ್ನಡ ರಾಜ್ಯೋತ್ಸವ ಅಲ್ವಾ..? ಆಫೀಸ್​ಗೆ ರಜಾ ಇದೆ. ಆವತ್ತೇ ನಿಮ್ಮನ್ನು ಮೈಸೂರಿಗೆ ಕಳಿಸಿಕೊಡ್ತೀನಿ’ ಅಂತ ವಿನಯ್​ ಅಂದಾಗ, ನನ್ನ ಲೆಕ್ಕಾಚಾರದ ಪ್ರಕಾರ ಇನ್ನೂ ಎರಡು ದಿನಗಳು ತಡವಾಗುತ್ತಿದ್ದರಿಂದ ಮನಸ್ಸಿನಲ್ಲಿಯೇ ಚಡಪಡಿಸಿದೆ.

ಬಸ್​ನಲ್ಲಿಯೇ ಹೋಗುತ್ತಿರುವ ಕಾರಣ, ಸಧ್ಯದ ಮಟ್ಟಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಲಗೇಜ್​ಗಳನ್ನ ಜಾಗರೂಕತೆಯಿಂದ ಅಳೆದು ತೂಗಿ ಪ್ಯಾಕ್​ ಮಾಡುತ್ತಿದ್ದೆ. ಆಗಲೇ ಬಂದಿತ್ತೊಂದು ಸಮಾಧಾನದ ಸುದ್ದಿ, ನಮ್ಮ ಸಹೃದಯೀ ಸ್ನೇಹಿತ ದಂಪತಿ ರವೀಶ್​, ಅಕ್ಷತಾ ಆವತ್ತೇ ಮೈಸೂರಿಗೆ ಹೋಗುವವರಿದ್ದರು. ಅವರ ಕಾರ್​ನಲ್ಲಿಯೇ ನಾವೂ ಕೂಡ ಮೈಸೂರಿಗೆ ಪಯಣ ಬೆಳೆಸುವುದು ಎಂದು ವಿನಯ್​ಹೇಳಿದ. ಹೀಗಾಗಿ ಕಾರ್​ ಡಿಕ್ಕಿಯಲ್ಲಿ ಹಿಡಿಯುವಷ್ಟು ಲಗೇಜ್​ನ್ನ ನಾನೀಗ ಪ್ಯಾಕ್​ಮಾಡಬಹುದಿತ್ತು. 

ಮುಂದಿನ ವಾರವೇ ನಾವು ಮೈಸೂರಿಗೆ ಹೊರಡುತ್ತಿದ್ದೇವೆ ಎಂಬ ಕಾರಣಕ್ಕೆ ಅತ್ತೆ ತಾವು ಊರಿಗೆ ಹೊರಡುವ ದಿನಾಂಕವನ್ನು ಪೋಸ್ಟ್​ಫೋನ್​ ಮಾಡಿದ್ದರೆ, ನನ್ನಮ್ಮ ಊರಿಂದ ಓಡೋಡಿ ಬಂದರು. ಇಬ್ಬರೂ ಸೇರಿ ಲಗೇಜ್​ಕಟ್ಟಿ ಮುಗಿಸಿದರು. ನಾವು ಯುದ್ಧಕ್ಕೆ ಹೊರಡುತ್ತಿದ್ದೇವೇನೋ ಎಂಬ ರೀತಿಯಲ್ಲಿ ಕಣ್ಣೀರಿಡುತ್ತಾ, ಮೊಮ್ಮಗನನ್ನು ಮುದ್ದಿಸಿದರು. ಅಥರ್ವನಿಗೂ ಇಬ್ಬರು ಅಜ್ಜಿಯರೂ ಒಟ್ಟಿಗೆ ಸಿಕ್ಕಿದ್ದಕ್ಕೆ ಬಂಪರ್​ ಖುಷಿ. ಅಥರ್ವನ ಕೆಲಸಗಳನ್ನೆಲ್ಲ ಇಬ್ಬರೂ ಹಂಚಿಕೊಂಡರು.

ಒಬ್ಬರು ಸ್ನಾನ ಮಾಡಿಸಿದರೆ, ಇನ್ನೊಬ್ಬರು ಟವೆಲ್​ ಹಿಡಿದು ನಿಂತರು. ಒಬ್ಬರು ಆಟ ಆಡಿಸುತ್ತಿದ್ದರೆ ಇನ್ನೊಬ್ಬರು ಊಟ ಮಾಡಿಸಿದರು. ಪ್ರತಿ ದಿನವೂ ತಮ್ಮ ಮಗ್ಗುಲಲ್ಲೇ ಮಲಗಿಸಿ ನಿದ್ದೆ ಮಾಡಿಸುವರು. ಒಂದು ವಾರ ಅಜ್ಜಿಯರ ಜತೆ ಫುಲ್​ಮಸ್ತಿ ಮಾಡಿದ. ನಾವು ಹೊರಡುವ ದಿನದ ಹಿಂದಿನ ರಾ​ತ್ರಿಯೇ ಅಮ್ಮ ಅತ್ತೆ ಇಬ್ಬರನ್ನೂ ಊರ ಬಸ್ಸು ಹತ್ತಿಸಿದೆವು. ಇಬ್ಬರೂ ಕಣ್ಣೊರೆಸಿಕೊಳ್ಳುತ್ತಾ, ಪರಸ್ಪರ ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾ ಬಸ್​ ಹತ್ತಿ ಕಿಟಕಿಯಿಂದ ಕೈ ಬೀಸುತ್ತಲೇ ಹೊರಟು ಹೋದರು. 

2017ರ  ನವೆಂಬರ್​1. ನಾವು ಹೊರಡುವ ದಿನ ಬಂದೇಬಿಡ್ತು. ಬೆಳಗ್ಗೆ ರವೀಶ್​ ಕಾರು ಬಂದು ಮನೆಯ ಮುಂದೆ ನಿಂತಿತ್ತು. ಲಗೇಜ್​ ಗಳನ್ನೆಲ್ಲ ತುಂಬಿಸುತ್ತಿದ್ದಂತೆ, ಅವರ ವೆರ್ನಾ ಕಾರ್​ನ ವಿಶಾಲ ಡಿಕ್ಕಿಯೂ ಭರ್ತಿಯಾಯ್ತು. ಬೆಳಗ್ಗೆ ಹತ್ತು ಗಂಟೆಗೇ ಬೆಂಗಳೂರು ಬಿಟ್ಟೆವು. ನಮ್ಮ ಸಹಾಯಕ್ಕಾಗಿ ಮೈಸೂರಿಗೆ ಹೊರಟು ನಿಂತಿದ್ದ ವಿಜಯ್​ (ನನ್ನ ಗಂಡನ ತಮ್ಮ) ಬೈಕ್​ನಲ್ಲಿ ಕಾರ್​ನ್ನ ಹಿಂಬಾಲಿಸಿದರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: