ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
28
ಸುಶೀಲಚಿಕ್ಕಿ ತಮ್ಮನ್ನು ಬಿಟ್ಟು ರಘು ದೊಡ್ಡಪ್ಪನ ಊರಿಗೆ ಹೋದಮೇಲೆ ಗೌರಿ, ನಾಣಿಗೆ ಹೊತ್ತು ಹೋಗದಷ್ಟು ಉದಾಸೀನ. ಓದುವ ಬರೆಯುವ ಚಿತ್ರಬಿಡಿಸುವ ಆಸಕ್ತಿ ತಗ್ಗಿತು. ಎರಡು ದಿನ ಅಟ್ಟ ಹತ್ತಿ ಇಳಿದು, ಇಂಗ್ಲೀಷ ಅಕ್ಷರ ಬರೆದು ಅಳಿಸಿ, ಕನ್ನಡ ಮಕ್ಕಳ ಕಥೆ ಪುಸ್ತಕ ಓದಿ ಇಟ್ಟು ಊಹೂಂ ಉತ್ಸಾಹ ಎಲ್ಲೋ ನಾಪತ್ತೆ. ಚಿಕ್ಕಿ ಮತ್ತೆ ತಮ್ಮಲ್ಲೇ ಇರುವಂತೆ ಆಗಲೆಂದುದೇವರಿಗೆ ಕೈ ಮುಗಿದರು. ಎರಡು ದಿನ ಹೊಳೆಬದಿ, ಹಾಡಿ, ಗದ್ದೆ ತಿರುಗಿದರೂ ಸಮಾಧಾನವಿಲ್ಲ. ಕೊನೆಗೆ ಗೌರಿಗೆ ತಡೆಯಲಾಗದೆ ‘ನಡಿಯೋ ನಾಣಿ, ಕೂತು ಕೂತು ಕುಂಡೆ ಬಿಸಿ ಆತು. ಚೂರು ಹೊಳೆಹತ್ರ ಹೋಗಿ ಬರುವ’ ಎಂದು ಹೊರಟೇಬಿಟ್ಟಳು.
ಆದರೆ ಹೊಳೆ ಹತ್ರ ಹೋಗುವ ಬದಲು ತಾವು ತಪಸ್ಸಿಗೆ ಅರಸಿ ಹೋದ ಜಾಗ, ಕುಳಿತ ಸ್ಥಳ, ಹೆದರಿದ ಕತ್ತಲು ನೆನಪಾಗಿ, ‘ತಟ್ಟಿರಾಯನ ಹಾಂಗೆ ಎಂತದೋ ನಿಂತಿತ್ತಲ್ಲ ಆ ಸಂಜೆ, ಮತ್ತೆ ನಿನ್ನ ಕಣ್ಣಿಗೆ ಕಂಡ ಕಣ್ಣುಗಳು? ನಡಿ ಬಿಸಿಲಲ್ಲಿ ನಾವು ಆ ದೆವ್ವಗಳು ಹ್ಯಾಗಿರುತ್ತವೆ? ಕಂಡು ಬರೋಣ’ ಗೌರಿಯ ಹೆದರಿಕೆ ಕಮ್ಮಿಯಾಗಿದೆ. ಏನೆಂದು ತಿಳಿವ ಕುತೂಹಲ ಹೆಚ್ಚಿದೆ.
‘ನಮ್ಮನ್ನು ಬೆರೆಸಿಕೊಂಡು ಬಂದ್ರೆ?’
‘ಹಗಲು ಸೂರ್ಯನ ಬೆಳಕಿಗೆ ದೆವ್ವಗಳು ಹೆದರ್ತಾವಂತೆ. ನಮಗೂ ಹೆದರಿಕೆ ಎಂತದ್ದು? ನಡಿ’
ಗೌರಿ ತಮ್ಮನನ್ನು ಹೊರಡಿಸಿದಳು. ಬಿಸಿಲು ಅದಾಗಲೆ ಏರಿತ್ತು. ಅಂಗಳದಲ್ಲಿ ಬಿಸಿಲು ಕಾಯಿಸುತ್ತಿದ್ದ ಮೋತಿ ಇವರು ಹೊರಟದ್ದು ಕಂಡು ಚಂಗನೆ ಎದ್ದು ತಾನೂ ಬಾಲ ಅಲ್ಲಾಡಿಸುತ್ತ ಹೊರಟಿತು ಇವರ ಮುಂದಿನಿಂದ. ಅದೇ ದೊಡ್ಡ ಮರ, ಸುತ್ತಲೂ ಪೊದೆಗಳು, ಒಣಗಿದ ತರಗೆಲೆ ರಾಶಿ, ಬಾಯ್ದೆರೆದ ಹೊಂಡ, ಬಿಸಿಲ ಮೆರಗಿತ್ತು.
ಗೌರಿ ಜಾಗ್ರತೆಯಲ್ಲಿ ಬಗ್ಗಿ ಎದ್ದು ಕೋಲಿನಿಂದ ತರಗೆಲೆ, ಪೊದೆಗಳನ್ನು ಸವರಿ ಪರಿಶೀಲಿಸಿದಳು. ದೊಡ್ಡವರಂತೆ ನಾಣಿಯೂ ನೋಡುತ್ತ, ‘ಎಂತದೂ ಇಲ್ಲೆ ಅಕ್ಕ. ಆದರೂ ಆ ರಾತ್ರೆ ನಮ್ಮ ಕಣ್ಣಿಗೆ ಬಿದ್ದ ಕಣ್ಣು ಎಂತರದ್ದು?’ ‘ಗಾಳಿದೆವ್ವದ ಕಿತಾಪತಿಯಾ? ನಮ್ಮ ಮನಸ್ಸಿನ ಭ್ರಮೆಯಾ? ಆವತ್ತು ಚಕ್ರಿ ಊರಲ್ಲಿ ಬಯಲಾಟಕ್ಕೆ ಹೋಗಿದ್ದು, ರಾವಣ ಸಂಹಾರ ಪ್ರಸಂಗ, ಮಧ್ಯರಾತ್ರೆ ನಾವಿಬ್ಬರೇ ಬಂದದ್ದು ನೆನಪಿದೆಯಾ? ಆ ರಾತ್ರೆ ನಮಗೆಂತ ಆಯ್ತು?’
‘ಹೂಂ, ಚೂರು ಚೂರು. ಎಂತಾ ಆಯ್ತು?’ ಬಾಲ ಮನಸ್ಸು ಮರೆತು ಬಿಟ್ಟಿತ್ತು. ಗೌರಿಯೇ ನೆನಪಿಸಿದಳು. ಚಕ್ರಿ ಊರಿನಲ್ಲಿ ನಡೆದ ಯಕ್ಷಗಾನ ಬಯಲಾಟ ಪ್ರಸಂಗ. ರಂಗಸ್ಥಳದಲ್ಲಿ ಒಂದೋಂದೇ ರಾಕ್ಷಸ ಬಣ್ಣದ ವೇಷಗಳು ಬರುತ್ತಿದ್ದವು. ತಟ್ಟೀರಾಯನಂತೆ ಒಂದು ರಾಕ್ಷಸ ವೇಷ ಗಧೆ ತಿರುಗಿಸುತ್ತ, ಅರ್ಧಚಂದ್ರಾಕೃತಿಯ ರಂಗಸ್ಥಳದಲ್ಲಿ ತಿರುಗಿ ತಿರುಗಿ ಹೂಂಕಾರ ಹಾಕುತ್ತ ಕುಣಿಯುವದನ್ನು ನೋಡಿದರೆ ದೊಡ್ಡವರ ಎದೆಯಲ್ಲೂ ಝಲ್, ಝಲ್. ಕುಂಬಕರ್ಣ, ಮಹಿಷಾಸುರ, ಇಂದ್ರಜಿತ್ತು ಒಬ್ಬೊಬ್ಬರನ್ನೇ ಶ್ರೀರಾಮ, ಲಕ್ಷ್ಮಣರು ಸಂಹಾರ ಮಾಡುತ್ತಿದ್ದರು. ಎಲ್ಲಾ ಆದಮೇಲೆ ರಾವಣ ಬರಬೇಕಷ್ಟೇ. ದೊಂದಿ ಬೆಳಕು, ದಟ್ಟ ಹೊಗೆ, ಚೆಂಡೆ ಅಬ್ಬರ, ಭಾಗವತರ ಏರುಧ್ವನಿಯ ಹಾಡುಗಾರಿಕೆಗೆ ಪಾಪ ನಾಣಿ ಹೆದರಿ ಅಕ್ಕನ ಕೈ ಬಿಗಿಯಾಗಿ ಹಿಡಿದಿದ್ದ. ‘ಹೆದರಬೇಡ್ವೋ ಪುಟ್ಟಾ, ಅಪ್ಪೂ ಮಾವ, ಅಮ್ಮಮ್ಮ ಬದಿಗೇ ಇದ್ದವು.’ ಗೌರಿ ಧೈರ್ಯ ಹೇಳಿದರೂ ಅವನು ಮನೆಗೆ ಹೋಗಲು ರೆಚ್ಚೆ ಹಿಡಿದಿದ್ದ. ಅಮ್ಮಮ್ಮ ತಮ್ಮ ಹಿಂದೆ ಕುಳಿತಿದ್ದ ಕೆಲಸದವನಿಗೆ ‘ಇಬ್ಬರನ್ನೂ ಮನೆಗೆ ಬಿಟ್ಟು ಬಾ’ ಎಂದಳು. ಮನೆ ಅಂದ್ರೆ ಅದೇನೂ ದೂರ ಇಲ್ಲ.
ರಂಗಸ್ಥಳದ ಒಂದು ಕೊಡಿ ಮನೆಗೆ ಕಾಣುವಷ್ಟೇ ಹತ್ತಿರ. ಕೆಲಸದವ ನಾಲ್ಕು ಮಾರು ಹೋದವ, ‘ಆಟ ರೈಸ್ತಾ ಇಪ್ಪತ್ತಿಗೆ ನಿಮಗೆ ಮನೆ ಹೋಪ ಗ್ಯಾನ. ಎಷ್ಟು ಲಾಯ್ಕ ಇದ್ದು ಕುಣಿತ, ಭಾಗವತಿಕೆ.’ ಮೂದಲಿಸಿದ. ‘ನೀ ಹ್ವಾಗು ನಿನ್ನಷ್ಟಕ್ಕೆ. ನಮಗೆ ಇಲ್ಲಿಂದಲೇ ಕಾಣ್ತು ಮನೆ. ಬಾ ನಾಣಿ,’
ಕೆಲಸವನಿಗೆ ಅದೇ ಬೇಕಿತ್ತು, ಅವ ಹಿಂದಿರುಗಿದ. ತಮ್ಮನ ಕೈ ಹಿಡಿದು ಬಿರಬಿರನೆ ಹೆಜ್ಜೆ ಹಾಕಿದ ಗೌರಿ ಮನೆಗೆ ತಿರುಗುವ ಕೂಡು ದಾರಿಯ ಬದಿಗೆ ಆಲದ ಮರದ ಸಮೀಪ ಬಂದವಳು ಗಕ್ಕನೆ ನಿಂತುಬಿಟ್ಟಳು.
ನಾರ್ಣಜ್ಜಯ್ಯ ಯಾವಾಗಲೂ ಹೇಳುವ ಮಾತು ನೆನಪು ಬಂತು. ಈ ಆಲದ ಮರದಲ್ಲಿ ಅದೆಷ್ಟೋ ಕಾಲದಿಂದ ಬ್ರಹ್ಮರಾಕ್ಷಸನಿದ್ದ. ಮಧ್ಯರಾತ್ರೆ ದಾರಿಹೋಕರಿಗೆ ಉಪದ್ರ ಕೊಡುತ್ತಿದ್ದನಂತೆ. ಅವನ ಬಗ್ಗೆ ಜನ ಹೇಳುವ ಕಥೆಗಳು ಹಲವಾರು. ನಾರ್ಣಜ್ಜಯ್ಯನಿಗೆ ಎರಡು ಸಲ ಬ್ರಹ್ಮರಾಕ್ಷನ ಸುಳಿವು ಸಿಕ್ಕಿದೆಯಂತೆ. ಒಮ್ಮೆ ಅವನ ಮುಂದೆ ಕಲ್ಲುಗಳ ಮಳೆ ಸುರಿದಂತೆ. ಇನ್ನೊಮ್ಮೆ ಹಿಂದಿರುಗಿ ನೋಡದೆ ನಡೆದ ಅಜ್ಜಯ್ಯನನ್ನು ಸುಮಾರು ದೂರ ಹಿಂಬಾಲಿಸಿ ಬಂದಿತ್ತಂತೆ.
ಅಜ್ಜಯ್ಯನ ಕಾಲದಲ್ಲೇ ಚಕ್ರೀ ಊರಿಗೆ ಬಂದ ಓರ್ವ ಸಿದ್ಧಪುರುಷರು ಬ್ರಹ್ಮರಾಕ್ಷಸನ ಉಚ್ಚಾಟನೆ ಮಾಡಿದರಂತೆ. ಅವರು ಆ ಸಮಯ ಆಲದ ಕಟ್ಟೆಗೆ ಎರೆದ ಮಂತ್ರಿಸಿದ ಪವಿತ್ರ ನೀರು ಈಗಲೂ ಒಸರಿಕೊಂಡೇ ಇದೆ! ಅದರಾಚೆ ಮಾಸ್ತಿ ಕಟ್ಟೆ. ಅದರದ್ದು ಇನ್ನೊಂದು ಕಥೆ. ರಾತ್ರೆ ಒಬ್ಬರೇ ಆ ಕಟ್ಟೆ ಎದುರು ಹಾದು ಹೋಗುವ ಎದೆಗಾರಿಕೆ ಯಾರಿಗೂ ಇಲ್ಲ. ಬೇರೆ ಬೇರೆ ಸ್ತ್ರೀರೂಪದಲ್ಲಿ ಮಾಸ್ತಿದೇವಿ ಕಟ್ಟೆ ಬಳಿ ಇರುತ್ತಾಳೆ, ಅಪರೂಪಕ್ಕೆ ಮಾತು ಆಡುತ್ತಾಳೆಂದು ಪ್ರತೀತಿ. ಮುಸ್ಸಂಜೆ ನಂತರ ಯಾರೂ ತಮ್ಮ ಮಕ್ಕಳನ್ನು ಅತ್ತ ಕಳಿಸುವುದಿಲ್ಲ. ಅಷ್ಟು ಹೆದರಿಕೆ. ಅಕಸ್ಮಾತ್ ಹೋದವರೂ ಕಾಹಿಲೆ ಬೀಳುತ್ತಾರಂತೆ. ಇವತ್ತು ಮಧ್ಯರಾತ್ರೆಯಲ್ಲಿ ಇವರಿಬ್ಬರೇ ಬರುತ್ತಿದ್ದಾರೆ. ಮರದ ಕೆಳಗೆ, ಮಾಸ್ತಿಕಟ್ಟೆ ಎದುರು ನೋಡುವ ಧೈರ್ಯವಿಲ್ಲದೆ ಹೇಗೆ ಇಬ್ಬರೂ ದಾಟಿದರೋ. ಯಾವ ಅಗೋಚರ ಶಕ್ತಿಯೂ ಅವರನ್ನು ತಡೆಯಲೇ ಇಲ್ಲವಲ್ಲ.
ಆ ಹಿಂದಿನ ನೆನಪಿನಲ್ಲಿ ಮತ್ತು ಕೆಲವು ದಿನಗಳ ಮೊದಲು ಹುಚ್ಚು ಆವೇಶದಲ್ಲಿ ಧ್ರುವಕುಮಾರನ ಅನುಕರಣೆಗೆ ಹೊರಟು ಏನೆಲ್ಲ ಕಲ್ಪಿಸಿ ಹೆದರಿ ಓಡಿದ ನೆನಪು ಥಳಕು ಹಾಕಿ ನಗುಬಂತು. ಅಷ್ಟರಲ್ಲಿ ನಾಣಿ ದಟ್ಟ ಪೊದೆಯೊಳಗೆ ಏನೋ ಅದ್ಭುತ ಕಂಡವನಂತೆ, ‘ಅಕ್ಕಾ, ಅದಾ ಅಲ್ನೋಡು! ಬಿಳಿಯದು’ ಕಿರುಚಿದ. ನೋಡಿದರೆ ಬಿಳಿ ಮೊಲ! ಸ್ವಲ್ಪ ದೊಡ್ಡದೇ, ಒಂದೇ ಇದೆ, ಮುದುರಿ ಕುಳಿತಿದೆ! ಇವರನ್ನು ಕಂಡು ಮೂತಿ ತಿರುಗಿಸಿ ಪಿಳಿಪಿಳಿ ಕಣ್ಣು ಬಿಡುತ್ತಿದೆ. ದಿಟವೇ! ಇದೇ ಕಣ್ಣುಗಳಲ್ಲವೇ ಅಂದು ಆ ನಸುಗತ್ತಲಲ್ಲಿ ತಮಗೆ ಕಂಡದ್ದು? ಸುಳ್ಳು ಸುಳ್ಳೇ. ಆ ಕಣ್ಣುಗಳು ಇನ್ನೂ ಪ್ರಖರವಾಗಿದ್ದವು. ಇಬ್ಬರೂ ಮುಖ ನೋಡಿಕೊಂಡರು.
ಮೊಲದ ಕಣ್ಣುಗಳನ್ನು ಕಂಡು ಬೇಡಾದ್ದು ಭೃಮಿಸಿ ಹೆದರಿದೆವಲ್ಲ ಎಂದು ತಮಾಶೆ ಮಾಡುತ್ತ ಅದನ್ನು ಹಿಡಿಯಲು ನಾಣಿ ಕೈ ಚಾಚಿದ. ಏನಾಶ್ಚರ್ಯ, ಅದು ಸಾಕಿದ ಮರಿಯಂತೆ ಅನಾಯಾಸ ಅವನ ಕೈಗೆ ಬಂದು ಬೆಚ್ಚಗೆ ಕುಳಿತುಬಿಟ್ಟಿತು. ರೇಶ್ಮೆಯಂತೆ ಮೃದು ತುಪ್ಪಳದ ಮೈ ನುಣುಪಾಗಿ ಜಾರುತ್ತಿದೆ. ನಾಣಿ ಎದೆಗವಚಿಕೊಂಡ. ಇಬ್ಬರೂ ಅದನ್ನು ಮನೆಗೆ ಕರೆದೊಯ್ಯಲು ನಿಶ್ಚಯ ಮಾಡಿಬಿಟ್ಟರು. ಇತ್ತ ಮೋತಿಗೆ ತನ್ನ ಪ್ರೀತಿ ಪಾತ್ರರ ಗಮನ ಇನ್ನಾವುದೋ ಪ್ರಾಣಿ ಮೇಲೆ ಬಿದ್ದದ್ದು ಸಹನೆಯಾಗದೆ ಒಂದೇ ಸಮ ನಾಣಿಯ ಹಿಂದೆ ಮುಂದೆ, ಗೌರಿಯ ಪರಕಾರ ಹಿಡಿದೆಳೆದು ಬೊಗಳಾಟ. ಗೌರಿಯಿಂದ ಎರಡು ಪೆಟ್ಟು ಸಿಕ್ಕಿದ ಮೇಲೆ ಕುಂಯ್‌ಗುಡುತ್ತ ಹಿಂದೆ ಸರಿಯಿತು.
ಮನೆಗೆ ಬಂದ ಮೇಲೆ ಎಲ್ಲರ ಕಣ್ಣುಗಳು ಮೊಲದ ಮೇಲೆಯೇ. ಸಾಕಷ್ಟು ದೊಡ್ಡದಾಗಿದೆ. ಈ ಆಸುಪಾಸಲ್ಲಿ ಕೆಲವು ಮೊಲಗಳು ಇದ್ದರೂ ಹೀಗೆ ಕೈಗೆ ಸಿಕ್ಕ ಉದಾಹರಣೆ ಇಲ್ಲ. ಇದು ಎಲ್ಲಿಂದ ಬಂದಿತೋ? ಸಲೀಸಾಗಿ ನಾಣಿ ಹಿಡಿದ ಎಂದರೆ ಅದು ಸಾಕು ಮೊಲವೇ ಹೌದು. ಆದರೆ ಗೌರಿ, ನಾಣಿಗೆ ಹೆದರಿಕೆ ಹುಟ್ಟಿಸಿದ ಕಣ್ಣುಗಳು ಇವಲ್ಲ. ಆವತ್ತು ನೋಡಿದ್ದು ಕಾಡುಬೆಕ್ಕಿನ ಅಥವಾ ಕಾಟು ನಾಯಿಯ ಕಣ್ಣುಗಳಿರಬೇಕು. ‘ನಮಗೆ ತಿಳಿಸದೆ ತನಿಖೆ ಮಾಡಲು ಹೋಗಿದ್ದಾವೆ. ಇವತ್ತೂ ಹೆದರಿದ್ದರೆ ಮತ್ತೆ ನಾಲ್ಕು ದಿನ ಹಾಸಿಗೆ ಹಿಡೀತಿದ್ರಿ’ ಬುದ್ಧಿ ಹೇಳಿದರು ಅಜ್ಜಮ್ಮ. ಆಯಿಗೆ ಸಹನೆಯಾಗದೆ, ‘ಇದೆಲ್ಲಿತ್ತೋ ಅಲ್ಲೇ ಬಿಟ್ಟು ಬನ್ನಿ. ಇಲ್ಲಿದ್ದರೆ ನಮ್ಮ ಮೋತಿ ಒಂದೇ ಗುಕ್ಕಿಗೆ ಬಾಯಿ ಹಾಕುಗೂ. ಅದು ಸತ್ತ ಪಾಪ ನಮಗೆ ಬ್ಯಾಡ’ ಎಂದಳು.
‘ಮೋತಿಗೆ ನಾ ಕಲಿಸ್ತೆ ಬುದ್ಧಿ’ ಎಂದವನೆ ನಾಣಿ ಹೊರಜಗಲಿಯ ಮಾಡಿನಲ್ಲಿ ಸಿಕ್ಕಿಸಿ ಇಟ್ಟಿದ್ದ ಚಾಟಿ ತಂದ. ಸಪೂರ ಬಿದಿರಿನ ಉದ್ದ ಕೋಲಿಗೆ ಹಗ್ಗ ಕಟ್ಟಿದ ಚಾಟಿ. ಮೋತಿಗೆ ಹೊಡೆಯಲು ಕೆಲಸದವ ಮಾಡಿಕೊಟ್ಟದ್ದು. ಅದನ್ನು ಗಾಳಿಯಲ್ಲಿ ಬೀಸಿದರೆ ಚಚ್ಚ್, ಚುಬಕ್ ಸದ್ದು. ನಾಣಿಯ ಬಾಲ ಲೀಲೆಗಳಲ್ಲಿ ಮೋತಿಗೆ ಕೊಡುತ್ತಿದ್ದ ಚಾಟಿ ಸೇವೆಯೂ ಒಂದು. ಮೋತಿ ಸುಮ್ಮನೆ ಮಲಗಿದ್ದರೆ, ಆಟ ಆಡುತ್ತಿದ್ದರೆ, ಅವನನ್ನು ನೋಡುತ್ತಿದ್ದರೆ ಚಾಟಿ ಎರಗುತ್ತಿತ್ತು ಅದರ ಮೇಲೆ.
ಒಂದು ದಿನ ಸುಬ್ಬಪ್ಪಯ್ಯ, ‘ಯಾವ ಪ್ರಾಣಿಗೂ ಹಿಂಸೆ ಮಾಡ್ಬಾರದು ಮಗೂ. ನಿನ್ನಂತೆ ಅದೂ ಸಣ್ಣದು. ಬಾಯಿ ಬಾರದ ಜೀವಿ’ ಚಾಟಿ ಕಸಿದು ಇಟ್ಟಿದ್ದರು. ನಾಣಿ ಹೊಡೆಯುವುದು ತಮಾಶೆಗೆ. ಆದರೆ ಅಷ್ಟೇ ಮುದ್ದು ಪ್ರೀತಿ ಅದರ ಮೇಲೆ. ಹೊಡೆದಷ್ಟೂ ಬಾಲ ಅಲ್ಲಾಡಿಸುತ್ತ ಮೋತಿ ಅವನನ್ನೇ ಅಂಟಿಕೊಳ್ಳುವ ವಿಧೇಯ ಪ್ರಾಣಿ. ಆವತ್ತು ತೆಪ್ಪ ಮಗುಚಿ ಗೌರಿ ಮುಳುಗುವಾಗ ರಕ್ಷಿಸಿದ್ದು ಇದೇ ನಾಯಿ ಅಲ್ಲವೇ? ‘ನನ್ನ ಕೈಲಿದ್ದ ಮೊಲಕ್ಕೆ ತಂಟೆ ಮಾಡಿ ಕಚ್ಚಿದರೆ ಏನ್ಮಾಡ್ತೇನೆ ನೋಡು?’ ದಾರಿಯಲ್ಲೇ ಗದರಿದ್ದ.
ಆಯಿ ಅಲ್ಲೇ ಬಿಟ್ಟು ಬನ್ನಿ ಎಂದರೂ ಅವನು ಗೌರಿ ಕೇಳದೆ ಒಳಜಗಲಿಗೆ ತಂದಿಟ್ಟುಕೊಂಡರು. ಕಾಯಿ, ಬೇಳೆ, ಬಾಳೆಹಣ್ಣು ತಟ್ಟೆಯಲ್ಲಿಟ್ಟರು, ಹಾಲು ಹಾಕಿದರು. ಮೂತಿ ಉದ್ದ ಮಾಡಿದ ಮೊಲ ಏನನ್ನೂ ಮುಟ್ಟಲಿಲ್ಲ. ಹೊಸ ಪರಿಸರದ ಅಭ್ಯಾಸ ಆಗಬೇಕು. ಪಾಪ! ಇದಕ್ಕೊಂದು ಗೂಡು ಮಾಡಿದರೆ ಮತ್ತೆ ಮೋತಿಯ ಹೆದರಿಕೆ ಇಲ್ಲ. ಹೊರಗೆ ಬಿಡುವಾಗ ಮೋತಿಯನ್ನು ಕಟ್ಟಿದರಾಯ್ತು. ‘ನೀನೇ ಅಜ್ಜಯ್ಯನಿಗೆ ಹೇಳು ನಾಣಿ, ನಿನ್ನ ಮಾತು ಅಜ್ಜಯ್ಯ ಕೇಳುಗು’ ಗೌರಿ ತಮ್ಮನಿಗೆ ಗಾಳಿ ಹಾಕಿದಳು.
ಸುಬ್ಬಪ್ಪಯ್ಯರಿಗೆ ಮೊಲ ಸಾಕುವ ಇಷ್ಟವಿಲ್ಲ. ಹಾಗೆಂದು ಮೊಮ್ಮಕ್ಕಳನ್ನು ನೋಯಿಸಲಾರರು. ಮೋತಿ ಚಿಕ್ಕದಿರುವಾಗ ಬಿದಿರು ಅಡ್ಡ ಪಟ್ಟಿಗಳಿಂದ ಮಾಡಿದ ಒಂದು ಹಳೆ ಗೂಡು ಇತ್ತು. ಅದರ ಕೆಲವು ಪಟ್ಟಿಗಳು ಕಿತ್ತು ಹೋಗಿದ್ದವು. ‘ನಾಳೆ ಸರಿ ಮಾಡಿಸಿ ಕೊಡ್ತೇನೆ. ಇವತ್ತು ರಾತ್ರೆ ಅದು ಓಡಿ ಹೋಗದಂತೆ ಬೆತ್ತದ ಬುಟ್ಟಿಯಲ್ಲಿ ಮುಚ್ಚಿದರೆ ಸಾಕು.’ ಎಂದರು ಸುಬ್ಬಪ್ಪಯ್ಯ.
ಇಷ್ಟರಲ್ಲಿ ಮೊಲ ಸಿಕ್ಕಿದ ಸುದ್ದಿ ಕೆಲಸದವರ ಮೂಲಕ ಊರಲ್ಲಿ ಹಲವು ಮನೆಗಳಿಗೆ ತಲುಪಿ, ಅದು ಗುಡಿಗಾರ ದೇವಣ್ಣನ ಮನೆಯದು ಎಂಬ ಸತ್ಯ ಸಂಗತಿಯೂ ಹೊರಬಿದ್ದಿತು. ದೇವಣ್ಣ ತಿಂಗಳ ಮೊದಲು ಮಂಕಿಕೇರಿಗೆ ಹೋದವನು ತನ್ನ ಸ್ನೇಹಿತನಿಂದ ಒಂದು ಸಾಕಿದ ಮೊಲ ತಂದಿದ್ದ. ಕೆಲವು ದಿನಗಳ ಹಿಂದೆ ಅದು ಕಾಣೆಯಾಗಿ ದೇವಣ್ಣ ಬಹಳ ಕಡೆ ಹುಡುಕಿದ್ದನಂತೆ. ಸಧ್ಯ ಬೇರೆ ಕಾಟು ನಾಯಿಗೆ ಬಲಿಯಾಗದೆ ಈ ಮಕ್ಕಳ ಕೈಗೆ ಸಿಕ್ಕಿದ್ದು ಪುಣ್ಯ. ಅವನು ಸಂಜೆ ಮೊದಲೇ ಹೊಳೆಬಾಗಿಲು ಮನೆಗೆ ಬಂದು ಇದ್ದ ವಿಷಯ ಹೇಳಿ ಮೊಲವನ್ನು ಎದೆಗಪ್ಪಿ ಹೊರಡುವಾಗ ಗೌರಿ, ನಾಣಿಯ ಕಣ್ಣುಗಳಲ್ಲಿ ಗಂಗೆ ಪ್ರತ್ಯಕ್ಷ.
ನಾಣಿ ತನಗೆ ಮೊಲ ಬೇಕೇ ಬೇಕು ಎಂಬ ಹಠದಲ್ಲಿ ದೇವಣ್ಣನ ಕೈಯ್ಯಿಂದ ಎಳೆದುಕೊಳ್ಳಲು ನೋಡಿದ. ಆದರೆ ಆಯಿಗೆ ಸರಿ ಬರಲಿಲ್ಲ ಈ ಹಠ. ದೇವಣ್ಣ ಪರಮ ದಯಾಳು. ಹುಡುಗನ ಮನಸ್ಸಿಗೆ ನೋವಾಗದಂತೆ, ‘ಮೊಲ ನಿಮ್ಮ ಬಳಿ ಇದ್ದರೂ ಒಂದೇ. ನನ್ನಲ್ಲಿ ಇದ್ದರೂ ಒಂದೇ. ನೀವೇ ಸಾಕಿ ಕೊಳ್ಳಿ’ ಎಂದ. ಬಾಯಿ ಮಾತು ಬೇರೆ, ಕೊಡುವ ಹೃದಯ ಬೇರೆ. ಅವನ ಮಾತು ಹೃದಯದಿಂದ ಬಂದಿಲ್ಲ ಎಂದು ಆಯಿಗೆ ತಿಳಿದುಹೋಯಿತು. ನಾಣಿಯ ಆಸೆಗೂ ಮಿತಿಬೇಕು. ಇವತ್ತು ಮೊಲ, ನಾಳೆ ಇನ್ನೊಂದು, ಆಮೇಲೆ ಮತ್ತೊಂದು. ಕಂಡದ್ದೆಲ್ಲ ಬೇಕು.
‘ನಿನ್ನ ಮೊಲ ಸಿಕ್ಕಿತಲ್ಲ. ಇನ್ಮೇಲೆ ಹೊರಗೆ ಬಿಡಬೇಡ. ಚೆನ್ನಾಗಿ ಸಾಕು. ಅದು ಮರಿ ಇಟ್ಟ ಕಾಲಕ್ಕೆ ಒಂದನ್ನು ನಾಣಿ, ಗೌರಿಗೆ ತಂದು ಕೊಡು.’ ದೇವಣ್ಣನಿಗೆ ಹೇಳಿದ ಆಯಿ ನಾಣಿಗೆ, ‘ಹಠ ನಿಲ್ಲಿಸು. ಇನ್ನೊಬ್ಬರ ವಸ್ತು ಬಗ್ಗೆ ಆಸೆಬುರುಕರಾದರೆ ಕಷ್ಟ ನಿಮಗೇ ಮಕ್ಕಳೇ.’ ಎಂದಳು.
ಹಠಾತ್ತನೆ ಗೌರಿಗೆ ಒಂದು ವಿಷಯ ಸ್ಪಷ್ಟವಾಗಲಿಲ್ಲ. ಈ ಊರಿನ ಕೆಲವು ಹೆಂಗಸರು ಹಿಂದಿನಿಂದಲೂ ತಮ್ಮ ಮನೆಯ ಮದುವೆ, ಮುಂಜಿಗೆ ಅಜ್ಜಮ್ಮನ ಚಿನ್ನದ ಸರ, ಬಳೆ ಇತ್ಯಾದಿ ಒಯ್ಯುವ ಪರಿಪಾಠವಿದೆ.
ಮದುಮಗಳ ಶೃಂಗಾರಕ್ಕೂ ಅಜ್ಜಮ್ಮನ ಒಡವೆಗಳು ಬೇಕು. ದೇವಣ್ಣನ ಮಗಳಂದಿರ ಮದುವೆಗಳಲ್ಲಿ ನಾಲ್ಕಾರು ದಿನ ಒಡವೆಗಳು ಅವನ ಹೆಂಡತಿ ಮಕ್ಕಳ ದೇಹವನ್ನು ಅಲಂಕರಿಸಿದ್ದು ಗೌರಿಯೂ ಗಮನಿಸಿದ್ದಾಳೆ. ಆಗ ಅಜ್ಜಮ್ಮನನ್ನು ಕೇಳಿದ್ದಳು, ‘ಅವರು ನಿನ್ನ ಒಡವೆ ತಕ್ಕೊಂಡು ಹೋಗಿ ಮತ್ತೆ ನಿಂಗೆ ವಾಪಸ್ಸು ಮಾಡದಿದ್ರೆ ಎಂತ ಮಾಡ್ತಿ? ಕಳೆದುಹೋಯ್ತು ಅಂತ ಸುಳ್ಳು ಹೇಳಿದ್ರೆ?’
‘ಏನೋ ಇಲ್ಲದವರು ಒಡವೆ ಹಾಕುವ ಆಸೆಯಲ್ಲಿ ಕೇಳ್ತಾರೆ. ಹೇಳಿದ ದಿನಕ್ಕೆ ವಾಪಸ್ಸು ತರ್ತಾರೆ. ಇಲ್ಲಿ ನಂಬಿಕೆ, ವಿಶ್ವಾಸ ಮುಖ್ಯ ಗೌರಿ. ಅದಿಲ್ಲದಿದ್ದರೆ ಒಡವೆ ಒಂದೇ ಅಲ್ಲ ಜೀವನದಲ್ಲಿ ಇನ್ನೆಂತದಕ್ಕೂ ಬೆಲೆ ಇಲ್ಲ.’ ಆದರೂ ಆಯಿ ಹೇಳಿದ್ದೇನು? ಇನ್ನೊಬ್ಬರ ವಸ್ತು ಕೇಳುವುದು ಆಸೆಬುರುಕತನ? ನಾಣಿ ಆಸೆಗೆ ದೇವಣ್ಣ ಎರಡು ದಿನಕ್ಕೆ ಪುಟ್ಟ ಮೊಲವನ್ನು ಬಿಟ್ಟು ಹೋಗಿದ್ದರೆ? ಅವನೂ ಖುಷಿಯಲ್ಲಿ ಆಡಿಕೊಳ್ತಿದ್ದ. ಅಜ್ಜಮ್ಮನ ಒಡವೆಗಿಂತ ಮೊಲ ಕೇಳಿ ಆಶಿಸಿದ್ದು ತಪ್ಪಾಯಿತೇ? ಆಯಿ ಹೀಗೇಕೆ ಕಠಿಣಳು?
ಸಣ್ಣ ಮಳೆ ಬಂದು ನಿಂತ ನಂತರ ಆಕಾಶದಲ್ಲಿ ಚೆಂದಕ್ಕೆ ಮೂಡಿದ ಬಣ್ಣ ಬಣ್ಣದ ಕಾಮನಬಿಲ್ಲು ಹಾಗೇ ಮರೆಯಾದಂತೆ. ಬಾನು ಬಯಲು ಖಾಲಿ ಖಾಲಿ.
| ಇನ್ನು ನಾಳೆಗೆ |
ಈ ಕಂತಿನಲ್ಲಿ ಮಕ್ಕಳು ಅಂದರೆ ಗೌರಿ ಹಾಗೂ ನಾಣಿ ಯಕ್ಷಗಾನದಿಂದ ಬರುವಾಗ ಗಿಡಗಂಟೆಗಳ ಮಧ್ಯೆ ಪಿಳಿಪಿಳಿ ಕಣ್ಣುಗಳನ್ನು ಬಿಡುವ ಮೊಲವನ್ನು ಅದನ್ನು ತಂದು ಸಾಕುವುದು ಕಡೆಗೆ ಅದು ದೇವಣ್ಣ ಅಂದರೆ ದೇವಾಡಿಗ ದೇವಣ್ಣನ ಅಂತ ಗೊತ್ತಾಗಿ ಬಹಳ ಬೇಸರದಿಂದ ತಿರುಗಿ ಕೊಡುವುದು ಬಹಳ ಚೆನ್ನಾಗಿ ಬರೆದಿದ್ದಾರೆ ತಮ್ಮ ಪ್ರಿಯ ಕೃಷ್ಣ ವಸಂತಿ