
ರೇಷ್ಮಾ ನಾಯ್ಕ
ಈಗೀಗ ಎಲ್ಲ ಬದಲಾಗಿದೆ;
ಸುಟ್ಟ ಕೋಳಿ,
ಬೆಂದ ಹೆಣ್ಣಿನ ದೇಹಕ್ಕೆ,
ಒಂದೇ ಕಮಟಂತೆ.
ತೊಗಲಿಗಂಟಿದ ವಸ್ತ್ರ,
ಮಗುಲಡಿಯ ತರಗೆಲೆ,
ಉರಿಸಿದಾಗ ದುರುಳರು;
ಒಂದೇ ಬೂದಿಯಂತೆ.
ತಾಯೊಡಲ ದಶಕದ ಕನಸು,
ಕ್ಷಣದಾಹಕ್ಕಿಳಿದ ಮನಸು,
ಜಿದ್ದಿಗೆ ಬಿದ್ದು ಕ್ರೂರಿಯೇ ಗೆದ್ದಾಗ;
ಕ್ಷಣಿಕ ಸುಖವಂತೆ.

ಹಸಿವಿಂಗಿಸುವ
ಶಿಬಿ ಚಕ್ರವರ್ತಿಯ ಮಾಂಸಕ್ಕೂ,
ಮೃಗೀಯ ಪ್ರವೃತ್ತಿಯಲ್ಲಿ ಮುಕ್ಕಿದ ತನುವಿಗೂ,
ರಾಕ್ಷಸರ ತಕ್ಕಡಿಯಲ್ಲಿ;
ಒಂದೇ ತೂಕವಂತೆ.
ಹೌದು..
ಈಗೀಗ ಎಲ್ಲವೂ ಬದಲಾಗಿದೆ;
ತೋಟದಲ್ಲರಳಿದ ಕೆಂಗುಲಾಬಿಗೂ,
ಅತ್ಯಾಚಾರಿಯ ರಕ್ತವೂ,
ಒಂದೇ ಕೆಂಪಂತೆ.






0 Comments